ಭಾನುವಾರ, ಆಗಸ್ಟ್ 2, 2026

ಅದು ನಿಜವಲ್ಲ..! (ಪುಸ್ತಕ ಯಾನ - 477)


ಪುಸ್ತಕದ ಶೀರ್ಷಿಕೆ : ಅದು ನಿಜವಲ್ಲ..!

ಲೇಖಕರು : ಕೌಂಡಿನ್ಯ 

ಪ್ರಕಾಶಕರು : ಕಲ್ಪವೃಕ್ಷ ಪ್ರಕಾಶನ

ಪ್ರಥಮ ಮುದ್ರಣ : 2020

ಪುಟಗಳು : 352

ಬೆಲೆ : 350 ರೂ. 


ಅದು ನಿಜವಲ್ಲ..! ಕಾದಂಬರಿ ಸಾಮಾಜಿಕ ಕಾದಂಬರಿಯಾಗಿದ್ದರೂ.. ಸಾಕಷ್ಟು ನಿಗೂಢ, ಪತ್ತೇದಾರಿ ಹಾಗೂ ಹಾರರ್ ಅಂಶಗಳನ್ನು ಒಳಗೊಂಡು ರೋಚಕವಾಗಿ ಸಾಗುತ್ತದೆ. 


"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂದು ಹೇಳಿರುವ ಹಿರಿಯರ ಅನುಭವದ ಮಾತು ಎಷ್ಟು ಸತ್ಯವಲ್ಲವೇ..!? ನಾವು ಕಂಡದ್ದೇ ನಿಜ ಎಂಬ ತೀರ್ಮಾನಕ್ಕೆ ಬರುವ ಮುಂಚೆ ಅದನ್ನು ಮತ್ತೆ ಪರಿಶೀಲಿಸಬೇಕು. ಈ ಅಂಶ ಕಾದಂಬರಿಯ ಪ್ರತಿ ಘಟ್ಟದಲ್ಲಿಯೂ ನೆನಪಾಗುತ್ತದೆ. ಇಲ್ಲಿನ ಪ್ರತಿ ನಿಗೂಢದ ಹಿಂದೆಯೂ ಒಂದು ಉದ್ದೇಶವಿದೆ. ಅದೇನು ಎಂಬುದನ್ನು ನೀವೇ ಅರಿಯಬೇಕು. ವಿಶಿಷ್ಟ ಕಥಾಹಂದರ ಹೊಂದಿರುವ ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು. 


ಈ ಕಾದಂಬರಿಯ ಬಹುಭಾಗ ನಡೆಯುವುದು ಸೋನಾಪುರ ಎನ್ನುವ ಕುಗ್ರಾಮದಲ್ಲಿ. ಪ್ರಕೃತಿ ಸೌಂದರ್ಯ, ಪ್ರಪಾತ, ಗುಡ್ಡ, ಗುಹೆ, ರಾಜರ ಕಾಲದ ಕೋಟೆ, ಅರಮನೆಯ ಅವಶೇಷ ಇವೆಲ್ಲವೂ ಇದ್ದರೂ ಪ್ರವಾಸಿಗರ ಆಕರ್ಷಕ ತಾಣವೇನೂ ಆಗಿರಲಿಲ್ಲ. ಆದರೆ, ಇತಿಹಾಸ ಗೊತ್ತಿದ್ದವರಿಗೆ ಸೋನಾಪುರ ವೈಶಿಷ್ಟ್ಯವೇ..!


ಅರಣ್ಯದ ಮಧ್ಯೆ ಇರುವ ಊರು ಇದಾದರೂ.. ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ನದಿ ಪ್ರವಾಹ ಬಂದರೆ ಸೇತುವೆ ಮುಳುಗಿ ಗ್ರಾಮ ದ್ವೀಪವೇ ಆಗಿಬಿಡುತ್ತಿತ್ತು. 300 ಮನೆಗಳ ಈ ಊರಿನಲ್ಲಿ ದಾನ-ಧರ್ಮ, ಪರೋಪಕಾರ, ದೈವಭಕ್ತಿ ಎಲ್ಲದಕ್ಕೂ ಹೆಸರುವಾಸಿಯಾಗಿದ್ದವರು ಶಿವಹೋತ್ರಿ ಮನೆತನದವರು. ಊರಿನ ಹೊರಭಾಗದಲ್ಲಿ ನಿರ್ಜನ ಪ್ರದೇಶ, ಪ್ರಕೃತಿ ಸೌಂದರ್ಯದ ನಡುವೆ ಇವರ ಪ್ರಾಚೀನ ಕಾಲದ ಮನೆಯಿತ್ತು. ಇದನ್ನು ಅರಮನೆ ಮನೆ ಎಂದೇ ಕರೆಯುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾದ ಕಲಾತ್ಮಕ ಹಾಗೂ ಆಧುನಿಕ ರೂಪವೂ ಇತ್ತು. ಈ ಮನೆಯ ಹೆಸರು ಶಿವನಿಲಯ. ಇದರ ಯಜಮಾನರು ಶಿವರಾಜೇಂದ್ರಬಾಬು. 


ಆದರೆ ಈಗ ಬಂಗಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಅಂದಾನಪ್ಪ ಬ್ಯಾಡಗಿ. ಬಂಗಲೆಯ ಪ್ರತಿ ಕೋಣೆಯನ್ನು ತೊಳೆದು, ಒರೆಸಿ ಶುಚಿ ಮಾಡಿ ಗಿಡಗಳ ಆರೈಕೆ ಮಾಡಿ ಮನೆ ತನ್ನದೇ ಎನ್ನುವಂತೆ ನಿಷ್ಠೆಯಿಂದ ಕೆಲಸ ಮಾಡಿ ಸಂಜೆಗೆ ಮನೆಗೆ ಹೊರಡುತ್ತಿದ್ದ. ಅದೂ ಬಂಗಲೆಯ ಬೀಗ ಹಾಕಿಕೊಂಡು. 


ದಾರಿ ತಪ್ಪಿ ಬಂದವರು ಅಥವಾ ಕಷ್ಟದಲ್ಲಿರುವವರಿಗೆ ಈ ಮನೆಯಲ್ಲಿ ಜಾಗ ಸಿಗುತ್ತಿತ್ತು. ಅದೆಲ್ಲವೂ ಬಂದವರಿಗೆ ಪವಾಡದಂತೆ ಕಾಣುತ್ತಿತ್ತು. ಅಂತಹ ಹಲವಾರು ನಿದರ್ಶನಗಳಿವೆ ಇಲ್ಲಿ. ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಅವರನ್ನು ರಕ್ಷಿಸಿ ಅವರ ಬದುಕನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತಿದ್ದ ಆ ನಿಗೂಢ ವ್ಯಕ್ತಿ ಯಾರು..? ಬಂದವರೆಲ್ಲರಿಗೂ ಆ ನಿರ್ಜನ ಮನೆಯಲ್ಲಿ ಶಿವ ಸ್ತುತಿ ಕೇಳಿ ಬರುತ್ತಲೇ ಇತ್ತು. ಹಾಗಾಗಿ ದೈವಭಕ್ತಿಯೂ ಭಯ ಹುಟ್ಟಿಸುತ್ತಿತ್ತು.


ಆ ಊರಿನ ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ಪೆಕ್ಟರ್ ಮಾರ್ತಾಂಡ ಕಲ್ಲಂಗಡಿ. ಆತನಿಗೆ ಅಂದಾನಪ್ಪನ ಮೇಲೆ ಬಹಳ ಅನುಮಾನ. ಏಕೆಂದರೆ, ಕುಟುಂಬದ ಯಜಮಾನರು ಸತ್ತು ಆರು ತಿಂಗಳಾಗಿತ್ತು. ಆದರೂ.. ಅವನ ರಹಸ್ಯ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ಶಿವರಾಜೇಂದ್ರ ಬಾಬು ಅವರ ಹೆಂಡತಿ, ಇಬ್ಬರು ಮಕ್ಕಳು ಅಸಹಜ ರೀತಿಯಲ್ಲಿ ಸತ್ತಿದ್ದರು. ಇನ್ನೂ ತನಿಖೆ ನಡೆಯುತ್ತಲೇ ಇತ್ತು. ಅವರ ಉಳಿದಿದ್ದ ಮಗ ವಿದೇಶದಿಂದ ಬಂದಿರಲಿಲ್ಲ. ಅಂದನಪ್ಪ ನೇ ಈಗ ಸತ್ಯದ ಮನೆಯ ಉಸ್ತುವಾರಿ. ಹಾಗಾಗಿ ಅವನ ಮೇಲೆ ಅನುಮಾನ. ಅವನ ಸಂಬಳ ಜಮಾ ಆಗುತ್ತಿದ್ದದ್ದು ಹೇಗೆ..?


ಮಹೇಂದ್ರ ಬಾಬು ಹಾಗೂ ಪದ್ಮಿನಿ ದಂಪತಿಗಳಿಗೆ ಮದುವೆಯಾಗಿ 10 ವರ್ಷವಾದರೂ ಮಕ್ಕಳಿರಲಿಲ್ಲ. ಮಹೇಂದ್ರ ಬಾಬು ಅವರ ತಮ್ಮ ಜೀವನ್ ಅವರ ಜೊತೆಯಲ್ಲಿಯೇ ಇದ್ದ.  ಅವನ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದರು. ಪದ್ಮಿನಿಯ ತಂಗಿ ಚೈತ್ರಳಿಗೆ ಜೀವನ್ ಮೇಲೆ ಪ್ರೇಮವಿತ್ತು.


ಆದಿತ್ಯ ತಡಕಲ್ ಇತಿಹಾಸ ಉಪನ್ಯಾಸಕರಾಗಿದ್ದವರು ಅವರ ಪತ್ನಿ ಕಾವ್ಯ. ಇಬ್ಬರಿಗೂ ವಯಸ್ಸಿನ ಅಂತರ ಬಹಳವಿತ್ತು. ಸಮಾನಾಸಕ್ತರೂ ಆಗಿರಲಿಲ್ಲ.


ಪ್ರಭುಶಂಕರ್ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕ. ಅವನ ಕೆಲಸ ಖಾಯಂ ಆಗಿರಲಿಲ್ಲ. ಆತನ ತಂದೆ, ತಾತನ ಆಸ್ತಿ ಯಥೇಚ್ಛವಾಗಿತ್ತು. ಬೇರೆ ಮೂಲಗಳಿಂದ ಆದಾಯವೂ ಇತ್ತು. ಕೆಲಸ ಕೇವಲ ಆತ್ಮತೃಪ್ತಿಗಾಗಿ ಮಾತ್ರವಾಗಿತ್ತು. ವೃತ್ತಿಯ ಜೊತೆಗೆ ಕರಾಟೆ, ಸಾಹಸದ ಪ್ರವೃತ್ತಿಯೂ ಇತ್ತು.


ಮೈತ್ರಿ ತಂದೆ-ತಾಯಿ ಪದ್ಮಿನಿ ಕುಟುಂಬಕ್ಕೆ ಆತ್ಮೀಯರು. ಪದ್ಮಿನಿಯನ್ನು ಅಕ್ಕ ಎಂದು ಸಂಭೋಧಿಸುತ್ತಿದ್ದಳು. ಜೀವನ್ ಹಾಗೂ ಪ್ರಭುಶಂಕರ್ ಇಬ್ಬರೂ ಪದ್ಮಿನಿಯ ಮೇಲೆ ಕಣ್ಣಿಟ್ಟಿದ್ದರು. ನಿಜಕ್ಕೂ ಮೈತ್ರಿಗೆ ಯಾರ ಮೇಲೆ ಪ್ರೀತಿ ಇತ್ತು..? 


ಇವರಿಷ್ಟು ಜನರು ಎಲ್ಲಿಗಾದರೂ ಪ್ರವಾಸ ಹೋಗಬೇಕು ಎಂದಾಗ ಪ್ರಭುಶಂಕರ್ ಸೋನಾಪುರವನ್ನು ಸೂಚಿಸಿದ. ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿದ್ದ. ಆದರೆ ಉಳಿಯುವ ವ್ಯವಸ್ಥೆ ಸರಿಯಾಗಿಲ್ಲವೆಂದು ಹೇಳಿದರೂ ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯಲು ಎಲ್ಲರೂ ಅಲ್ಲಿಗೆ ಹೊರಟರು. ಹತ್ತಿರದಲ್ಲಿಯೇ ಇದ್ದ ಮೈಲಾರಿಪುರದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡರು


ಇವರೆಲ್ಲರ ಜೊತೆ ಅಡುಗೆಗೆಂದು ಪಾಂಡು ಹಾಗೂ ಆತನ ಪತ್ನಿ ಸೇರಿಕೊಂಡರು. 


ಇವರೆಲ್ಲರೂ ಊಹಿಸಿರದ ಘಟನೆಯೊಂದು ನಡೆಯಿತು. ವಿಪರೀತ ಮಳೆಯ ಕಾರಣ ಹೋಗುತ್ತಿದ್ದ ವಾಹನ ಕೆಟ್ಟು ಅವರೆಲ್ಲರೂ ಸೋನಾಪುರದ ಶಿವ ನಿಲಯದಲ್ಲಿ ಉಳಿಯುವಂತಾಯಿತು. ಇದಕ್ಕೆ ಕಾರಣ ನಿಗೂಢ ಮುದುಕ.


ಇದುವರೆಗೂ ಯಾವುದೇ ಸಾಕ್ಷಿ ಸಿಕ್ಕಿರದ ಮಾರ್ತಾಂಡ ನಿಗೆ ಇದರ ಇರುವಿಕೆ ಪುಷ್ಟಿ ನೀಡಿತು. ಮಳೆಯ ಕಾರಣದಿಂದ ಸೇತುವೆಗಳ ಸಂಪರ್ಕ ಕಡಿದು ಹೋಗಿ ಮತ್ತಷ್ಟು ಕಾಲ ಅಲ್ಲಿಯೇ ನಿಲ್ಲುವಂತಾದಾಗ ಹಲವಾರು ವಿಶೇಷ, ನಿಗೂಢ ಸಂಗತಿಗಳು ಜರುಗುತ್ತಾ ಸಾಗುತ್ತವೆ. 


ಶಿವನಿಲಯದಲ್ಲಿ ಸದಾ ಬರುತ್ತಿದ್ದ ಶಿವಸ್ತುತಿ ನಿಂತು ಹೋಗಿದ್ದಕ್ಕೆ ಕಾರಣವೇನು..? ಪ್ರಭುಶಂಕರ ರಹಸ್ಯ ಕಂಡುಹಿಡಿದದ್ದು ಹೇಗೆ..?


ಇದಲ್ಲದರ ನಡುವೆ ಪದ್ಮಿನಿ ನಿಗೂಢವಾಗಿ ಕಾಣೆಯಾಗುತ್ತಾಳೆ. ಅದಕ್ಕೆ ಕಾರಣ ಅವರಷ್ಟೂ ಜನರಲ್ಲಿಯೇ ಒಬ್ಬರು. ಏಕೆಂದರೆ, ಹೊರಗಿನಿಂದ ಬೇರೆ ಯಾರೂ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ಮಾರ್ತಾಂಡನಿಗೆ ಈ ಅವಕಾಶ ಮತ್ತೊಂದು ವಿಚಾರ ತಿಳಿಯಲು ದಾರಿ ಮಾಡಿಕೊಡುತ್ತದೆ. ಆತ ಕಾವ್ಯಳ ಬೆನ್ನು ಬೀಳಲು ಕಾರಣವೇನು..? ಪದ್ಮಿನಿ ಸಿಕ್ಕಳೇ..?


ಶಿವರಾಜೇಂದ್ರ ಬಾಬು ಅವರ ಹಾಗೂ ಕುಟುಂಬದವರ ಅಂತ್ಯ ಹೇಗಾಗಿತ್ತು..? 


ಆದಿತ್ಯ ತಡಕಲ್ ಹಾಗೂ ಕಾವ್ಯ ಅವರ ದಾಂಪತ್ಯದ ಮೇಲೆ ಈ ಪ್ರವಾಸ ಹೇಗೆ ಪರಿಣಾಮ ಬೀರಿತು..?


ಮಹೇಂದ್ರ ಬಾಬು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲು ಅಥವಾ ಜೀವನ್ ನನ್ನೇ ತಮ್ಮ ವಾರಸುದಾರ ಎಂದು ಘೋಷಿಸಲು ಹೊರಟಾಗ ಪದ್ಮಿನಿ ಒಪ್ಪದೇ ತೀವ್ರವಾಗಿ ವಿರೋಧಿಸಿದ್ದೇಕೆ..? ಈ ಪ್ರವಾಸ ಮುಗಿಯುವಷ್ಟರಲ್ಲಿ ಯಾರ ನಿರ್ಧಾರ ಬದಲಾಯಿತು..?


ಚೈತ್ರ, ಜೀವನ್ ಅನ್ನು ಪ್ರೀತಿಸುತ್ತಿದ್ದರೆ ಜೀವನ ಮೈತ್ರಿಯ ಬೆನ್ನು ಬಿದ್ದಿದ್ದ. ಮೈತ್ರಿ ಪ್ರಭುಶಂಕರನಿಗೆ ಮನಸೋತಿರುತ್ತಾಳೆ. ಯಾರು ಯಾರಿಗೆ ಜೋಡಿಯಾಗುತ್ತಾರೆ..?


ಶಿವರಾಜೇಂದ್ರ ಬಾಬು ಅವರು ತಮ್ಮ ಗುರಿ ಸಾಧಿಸಲು ಪ್ರಭುಶಂಕರನನ್ನೆ ಆಯ್ಕೆ ಮಾಡಿಕೊಂಡದ್ದು ಹೇಗೆ..? ಏಕೆ..?


ಪೊಲೀಸ್ ಆದರೂ ಮಾರ್ತಂಡ ಕಲ್ಲಂಗಡಿಯ ವ್ಯಕ್ತಿತ್ವ ಅದಕ್ಕೆ ತಕ್ಕನಾದುದಲ್ಲ. ಆತನ ಕರಾಳ ಮುಖ ಹೇಗಿತ್ತು ಅದಕ್ಕೆ ಸಹಕಾರ ನೀಡಿದವರು ಯಾರು.?


ಹಲವಾರು ರೋಚಕ, ನಿಗೂಢ ವಿಚಾರಗಳಿಂದ ಕಾದಂಬರಿ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ.


ಈ ಕಾದಂಬರಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುದರಿಂದ ಓದುಗರಿಗೆ ನೆನಪಿಸಲೇನೋ ಎಂಬಂತೆ ಹಲವಾರು ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ ಹಾಗೂ ನೆನಪಿಸುತ್ತಾರೆ. ಕಾದಂಬರಿಯ ಓದಿನ ವೇಗಕ್ಕೆ ಇದು ಕೆಲವೊಮ್ಮೆ ತಡೆಯೊಡ್ಡುತ್ತದೆ. ಒಂದೇ ಬಾರಿಗೆ ಇದನ್ನು ಓದಲು ಹೊರಟವರಿಗೆ ಈ ಮಾಹಿತಿಗಳು ಅನವಶ್ಯಕ ಎಂದೆನಿಸಬಹುದು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಓದುವುದು ಒಳ್ಳೆಯದು. 


ನಿಗೂಢ ನಡೆಯಲ್ಲಿ ಯಾವುದು ಸತ್ಯ ಹಾಗೂ ಯಾವುದು ಸುಳ್ಳು..? ಅದನ್ನು ಕಂಡುಹಿಡಿಯುವುದು ಯಾರು, ಹೇಗೆ ಎಂಬುದು ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.


ಇಡೀ ಕಾದಂಬರಿಯ ಕುರಿತು ಹೇಳಿದರೂ ಮುಖ್ಯವಾದದನ್ನು ಉಲ್ಲೇಖಿಸಲೇಬೇಕು. ಅದೆಂದರೆ ದೇಶಭಕ್ತಿ. ಯಾರ ದೇಶಭಕ್ತಿ ಯಾವ ರೀತಿಯಲ್ಲಿತ್ತು ಎಂಬುದನ್ನು ನೀವೇ ಓದಿ ಅರಿಯಿರಿ. 

~ವಿಭಾ ವಿಶ್ವನಾಥ್

ನಾಲ್ಕನೇ ಆಯಾಮ ಎಲ್ಲಿದೆ? (ಪುಸ್ತಕ ಯಾನ - 476)


ಪುಸ್ತಕದ ಶೀರ್ಷಿಕೆ : ನಾಲ್ಕನೇ ಆಯಾಮ ಎಲ್ಲಿದೆ?

ಲೇಖಕರು : ರೋಹಿತ್ ಚಕ್ರತೀರ್ಥ 

ಪ್ರಕಾಶಕರು : ವಿಕ್ರಮ್ ಪ್ರಕಾಶನ

ಪ್ರಥಮ ಮುದ್ರಣ : 2015

ಪುಟಗಳು : 160

ಬೆಲೆ : 110 ರೂ.


ಈ ಪುಸ್ತಕದಲ್ಲಿ ಇರುವ ಗಣಿತದ ಕುರಿತ ಲೇಖನಗಳು ಹೊಸದಿಗಂತ, ವಿಜಯವಾಣಿ, ಕನ್ನಡಪ್ರಭ, ಕರ್ಮವೀರ, ಬಾಲವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗಣಿತವನ್ನು ಇಷ್ಟು ಆಸಕ್ತಿಕರವಾಗಿ ಉದಾಹರಣೆಯೊಂದಿಗೆ ಬೋಧಿಸಿದರೆ ಎಷ್ಟು ಚೆಂದವಲ್ಲವೇ ಎನ್ನಿಸಿತು. ಪ್ರೈಮರಿ, ಹೈಸ್ಕೂಲು ಹಾಗೂ ಕಾಲೇಜುಳಲ್ಲಿ ಕಲಿತ ಎಷ್ಟೋ ಗಣಿತದ ವಿಚಾರಗಳು, ಪ್ರಮೇಯಗಳು ನಿಜ ಜೀವನದಲ್ಲಿ ಯಾವ ರೀತಿ ಅಳವಡಿಕೆಯಾಗುತ್ತವೆ ಎನ್ನುವುದರ ವಾಸ್ತವಿಕ ಚಿತ್ರಣದ ಜೊತೆಗೆ ಆಸಕ್ತಿಕರ ಮಾಹಿತಿಗಳು ಇಲ್ಲಿವೆ. ಈ ಪುಸ್ತಕದಲ್ಲಿ 18 ಚಂದದ ಗಣಿತದ ಕುರಿತ ಲೇಖನಗಳಿವೆ. 


ಪೈಥಾಗೊರಸ್ ಪ್ರಮೇಯಕ್ಕೆ ಪದವಿಲ್ಲದ ಸಾಧನೆ : ಅಂಕಗಣಿತದ ಮೂಲ ಪ್ರಮೇಯವನ್ನು ಬಿಟ್ಟರೆ ಪೈಥಾಗೊರಸ್ ಪ್ರಮೇಯ ಅತಿ ಹೆಚ್ಚು ಬರೆಯಲ್ಪಟ್ಟಿದೆ. ಪೈಥಾಗೊರಸ್ ಗಿಂತ 500 ವರ್ಷಗಳ ಹಿಂದೆ ಬೋಧಾಯನ ಎಂಬ ಮುನಿ ರಜ್ಜುಶಾಸ್ತ್ರದಲ್ಲಿ ಈ ಪ್ರಮೇಯವನ್ನು ಹೇಳುತ್ತಾನೆ ಎಂದು ಹೇಳುತ್ತಲೇ.. ಬೋ-ಪೈ ಪ್ರಮೇಯವನ್ನು ಸಾಧಿಸುತ್ತಲೇ ಜೇಮ್ಸ್ ಗಾರ್ಫೀಲ್ಡ್ ಎರಡೂವರೆ ಸಾವಿರ ವರ್ಷಗಳ ನಂತರ ಮತ್ತೆ ಹೊಸ ಸಾಧನೆಯೊಂದನ್ನು ಕಂಡುಹಿಡಿದ. ಇದನ್ನು ಆತ ಕಂಡುಹಿಡಿದದ್ದು ಸಂಸತ್ತಿನಲ್ಲಿ. ಏಕೆಂದರೆ, ಆತ ಅಮೆರಿಕದ ಇಪ್ಪತ್ತನೇ ಅಧ್ಯಕ್ಷನಾಗಿದ್ದವನು. 


ಮರಣವಿಲ್ಲದ ಸರಣಿಗಳು : ಫಿಬೊನಾಚಿ ಸೀರೀಸ್ ಎಂದು ಕರೆಯುವ ಈ ಸರಣಿಗಳ ಹೆಸರೇ ತಪ್ಪು ಎನ್ನುತ್ತಾರೆ. ಫಿಬೊನಾಚಿ ಎಂದರೆ ಲ್ಯಾಟಿನ್ ನಲ್ಲಿ ಬೊನಾಚಿಯೋ ಎನ್ನುವವನ ಮಗ. ಅಲ್ಲದೆ, ಇದು ಸೀರೀಸ್ ಅಲ್ಲ ಸೀಕ್ವೆನ್ಸ್ ಎಂದು ಮರಿಸರಣಿಗಳನ್ನು ಉದಾಹರಿಸಿದ್ದಾರೆ. 


ಗುಣಿಸಲು ಬೇಗ, ಹೊಡೆಯಿರಿ ಲಾಗ : ಜಗತ್ತಿನ ಎಲ್ಲರೂ ಮರಳು ಸುರಿದುಕೊಳ್ಳುವ ಆಟವಾಡಲು ಶುರು ಮಾಡಿದರೆ..! ಒಬ್ಬರು ಮೂವರಿಗೆ ಸವಾಲು ಹಾಕಿದರೆ, ಆ ಮೂವರು ತಲಾ ಮೂವರಿಗೆ ಸವಾಲು ಹಾಕಿದರೆ.. ಜಗತ್ತಿನಲ್ಲಿ 700 ಕೋಟಿ ಜನ ಈ ಸವಾಲನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವೆಷ್ಟು ಎನ್ನುವ ಪ್ರಶ್ನೆ ಹಾಕುತ್ತಲೇ ಕಂಪ್ಯೂಟರಿಗೂ ಕಷ್ಟವಾದ ಈ ಲೆಕ್ಕವನ್ನು ಲಾಗರಿದಂ ಬಳಸಿ ಬಿಡಿಸುವ ಗುಟ್ಟನ್ನು ಹೇಳುತ್ತಾರೆ. ಜಾನ್ ನೇಪಿಯರ್  ಬಳಸಿದ ಲಘು ಗಣಕದ ಕಚ್ಚಾ ವಿಧಾನವನ್ನು ಮುಂದೆ ಯಾರೆಲ್ಲಾ ಅಭಿವೃದ್ಧಿ ಪಡಿಸಿದರು ಓದಿ ಅರಿಯಿರಿ.


ಕಲಾಗ್ಯಾಲರಿಯ ಸಮಸ್ಯೆಗೊಂದು ವರ್ಣಮಯ ಪರಿಹಾರ : ಕಲಾ ಗ್ಯಾಲರಿಗಳಲ್ಲಿ ಎಲ್ಲಾ ಮೂಲೆಗಳು ಒಮ್ಮೆಗೆ ಕಾಣುವಂತಿರದೆ, ಬಹುಭುಜ ಜೊತೆಗೆ ಗೋಡೆಗಳು ಒಳ-ಹೊರಗೆ ಚಾಚಿಕೊಂಡಿದ್ದಾಗ ಗಾರ್ಡನ್ನು ನಿಯಮಿಸುವುದಾದರೆ..? ಗಾರ್ಡ್ ಓಡಾಡಲು ಇಷ್ಟಪಡುವವನಲ್ಲ. ಹಾಗೆಂದು ಹೆಚ್ಚು ಹೊಸ ಗಾರ್ಡ್ ಳನ್ನು ನೀಡಲಾಗದು. ಈ ಕ್ಲಿಷ್ಟ ಸಮಸ್ಯೆಗೆ ಪರಿಹಾರ ನೀಡಿದ್ದು ವಿಕ್ಟರ್ ಕ್ಲೀ ಎಂಬ ಗಣಿತಜ್ಞ.1973 ರಲ್ಲಿ.. ಅದೂ ವರ್ಣಮಯವಾಗಿ.! ವಿವರ ಓದಿ ನೋಡಿ.


ಅಡುಗೆ ಮನೆಯಲ್ಲಿ ಬಿಡಿಸಿದ ಒಗಟು :  ಬಜೆಟ್, ದಶಮಾಂಶಗಳಿಂದ ಶುರುವಾಗುವ ಅಂಕಿ ಅಂಶಗಳು ಭಿನ್ನರಾಶಿಯ ಒಳಹೊರಗನ್ನು ಬಿಚ್ಚಿಡುತ್ತಾ ಸಾಗುತ್ತದೆ. ಭಿನ್ನರಾಶಿಯನ್ನು ಬಿಡಿಸುವ ಈ ಸೂತ್ರದ ಹಿಂದೆ ಹೊರಟಾಗ ಸಿಕ್ಕಿದ್ದು ಇಂಡಿಯನ್ ಸ್ಟ್ರಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಅನ್ನು ಹುಟ್ಟು ಹಾಕಿದ ಮೇಧಾವಿ ಪಿ.ಸಿ.ಮಹಲನೊಬಿಸ್ ಮತ್ತು ರಾಮಾನುಜನ್. ಪಾಕ ಪ್ರವೀಣ ರಾಮಾನುಜನ್ ಅಡುಗೆ ಮನೆಯಿಂದಲೇ ಅಂಶ-ಛೇದಗಳ ಉತ್ತರ ಕೊಟ್ಟ ಬಗೆ ಹುಬ್ಬೇರಿಸುವಂತಿದೆ.


ಮಡಚಿದ ಕಾಗದದಲ್ಲಿ ಕಣ್ತೆರೆಸುವ ಕಲೆ : ಶೀರ್ಷಿಕೆ ಓದಿದಾಗ ನನಗೆ ನೆನಪಾಗಿದ್ದು ಒರಿಗಾಮಿ ಎನ್ನುವ ಜಪಾನೀಯರ ಕಲೆ. 1890ರ ಬ್ರಿಟಿಷರ ಕಾಲದಲ್ಲಿ ತಂದಲಂ ಸುಂದರರಾವ್ ಅವರನ್ನು ಆಕರ್ಷಿಸಿದ ಈ ಒರಿಗಾಮಿ ಮುಂದೆ ಅವರಿಗೆ ಪ್ರತಿ ಸೃಷ್ಟಿಯಲ್ಲಿಯೂ ಗಣಿತ ಪ್ರಮೇಯವನ್ನು ತೋರಿಸಿದಾಗ ಮೂಡಿದ ಪ್ರತಿಭಾ ಪ್ರದರ್ಶನ ಅವರಿಂದ ಹೊಸ ಪುಸ್ತಕವೊಂದನ್ನು ಬರೆಸಿತು. ಗಣಿತಾಸಕ್ತರು ಅದನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾಗ 47 ಮುದ್ರಣಗಳನ್ನು ಕಂಡಿತು. ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯವರು 70 ವರ್ಷಗಳಿಂದ ಪ್ರಕಟ ಮಾಡುತ್ತಲೇ ಇರುವ ಪುಸ್ತಕದ ಮುದ್ರಣಗಳ ಸಂಖ್ಯೆ 50 ದಾಟಿದೆ. ಈ ಪುಸ್ತಕ ಯಾವುದೆಂದು ಹಾಗೂ ಅದರ ಹೂರಣದ ಕುರಿತು ನೀವೇ ಓದಿ ನೋಡಿ.


ನಾಲ್ಕನೇ ಆಯಾಮ ಎಲ್ಲಿದೆ : ಉದ್ದ-ಅಗಲಗಳಿರುವ ರಸ್ತೆಯನ್ನು ಎರಡು ಆಯಾಮಗಳೆಂದು ತೆಗೆದುಕೊಂಡರೆ ಕಟ್ಟಡವನ್ನೇರಲು ಬಳಸುವ ಲಿಫ್ಟ್ ನೋಡಿದಾಗ ಎತ್ತರ ನೆನಪಾಗುತ್ತದೆ. ಈಗ ಮೂರು ಆಯಾಮಗಳಾಯಿತು. ಹಾಗಾದರೆ ನಾಲ್ಕನೆಯದು ಕಾಲವೇ..? ಇಲ್ಲಿ ಐದನೆಯ ಆಯಾಮವೂ ಸಿಗುತ್ತದೆಯೇ..?


ತಿಂಗಳಲ್ಲಿ ಕರಗಿದ ಬರ್ಫ : ಚದುರಂಗದಾಟದ ಪಟ್ಟುಗಳ ಮೂಲಕ ರಾಜನ ಆಸಕ್ತಿಯನ್ನು ಕೆರಳಿಸುವವನು ಹಾಗೂ ಅವನು ಕೇಳುವ ಅಕ್ಕಿಯ ಬಹುಮಾನ ಜೊತೆಗೆ ಇಂತಹ ಸಮಸ್ಯೆಗಳನ್ನು ಬಿಡಿಸಲು ಬಳಸುವ ಗುಣೋತ್ತರ ಶ್ರೇಡಿ ಇಲ್ಲಿ ಕಾಣಸಿಗುತ್ತದೆ. ಒಮ್ಮೆ ಜಗತ್ತಿನ ಜನರಿಗೆ ಬಕೆಟ್ ಹಿಡಿಸಿದ ಚಾಲೆಂಜ್ ಒಂದೇ ತಿಂಗಳಲ್ಲಿ ಐಸ್ ನಂತೆ ತಣ್ಣಗಾಗಿ ಹೋದ ಕಾರಣ ಇಲ್ಲಿ ಸಿಗುತ್ತದೆ.


ಜಂಗಮರಾಟಕ್ಕೆ ಸ್ಥಾವರಸೂತ್ರ : ಸ್ಟೀಫನ್ ಹಾಕಿಂಗ್ ಫುಟ್ಪಾಲ್ ಗೆಲುವು ಕಂಡುಹಿಡಿಯಲು ಸೂತ್ರ ಬರೆಯುತ್ತಾರೆ. ಅದಕ್ಕೆ ಕಾರಣ ಪ್ಯಾಡಿ ಪವರ್ ಎನ್ನುವ ಗುಪ್ತ ನಾಮಾಂಕಿತ ವ್ಯಕ್ತಿ. ಎತ್ತಿಂದೆತ್ತಣ ಸಂಬಂಧವೆನ್ನುತ್ತೀರಾ..!? ಹಾಗಾದರೆ ನಿಮಗೆ ಥಿಯರಿ ಆಫ್ ಪ್ರಬಾಬಿಲಿಟಿ ತಿಳಿದಿದೆಯೇ.?


ಕಿಂಚಿತ್ ಉಳಿಯದಂತೆ ಹಂಚುವುದು ಹೇಗೆ : ತಂದೆ ಮಾಡಿದ ಆಸ್ತಿಯನ್ನು ಮೂವರು ಮಕ್ಕಳಿಗೆ ಹಂಚಲು ವಿಲ್ ಮಾಡಿದ ಸಮಸ್ಯೆಯನ್ನಿಟ್ಟುಕೊಂಡು ಅದನ್ನು ಹಂಚುವುದು... ಕಿಂಚಿತ್ತೂ ಉಳಿಯದಂತೆ ಹಂಚುವುದು ಹೇಗೆ ಎನ್ನುವುದನ್ನು ಅನುಪಾತ ಹೇಗೆ ಬಿಡಿಸಬಲ್ಲದು ಎಂದು ಹೇಳುತ್ತಾರೆ.


ಎರಡು ದಡಗಳ ನಡುವೆ : ಮಕ್ಕಳ ಜಾಣ್ಮೆ ಪರೀಕ್ಷಿಸಲು ಕೇಳುತ್ತಿದ್ದ ತೋಳ-ಕುರಿ, ಹುಲ್ಲಿನ ಹೊರೆಯನ್ನು ದಾಟಿಸುವುದು, ನಾಲ್ಕು ಜನರಿಗೆ ವಿವಿಧ ಸಮಯಗಳನ್ನು ಕೊಟ್ಟು ಆಚೆ ದಡಕ್ಕೆ ದಾಟಿಸುವುದಕ್ಕೆ ತಗಲುವ ಸಮಯ.. ಇದನ್ನು ದೊಡ್ಡ ಕಂಪನಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೇಳುತ್ತಾರೆ. ಇಂತಹ ಹೆಚ್ಚುವರಿ ವಿಶೇಷಗಳ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ.. ಇಂತಹ ಸಮಸ್ಯೆಯನ್ನು ನೇಮಕಾತಿ ಪರೀಕ್ಷೆಯಲ್ಲಿ ಕೇಳಿದ್ದರ ಹಿಂದಿನ ಒಳಗುಟ್ಟನ್ನು ಬಿಚ್ಚಿಡುತ್ತಾರೆ.


ಚೆಂಡಿನಲ್ಲಿದೆ ಚಂಡಮಾರುತದ ಹುಟ್ಟಿನ ಗುಟ್ಟು! : ಖ್ಯಾತ ಗಣಿತಜ್ಞನಾಗಿದ್ದ ಹೆನ್ರಿ ಪಾಂಕ್ವಾರೆ 19ನೇ ಶತಮಾನದಲ್ಲಿ ಚಂಡಮಾರುತಗಳನ್ನು ವಿವರಿಸಲು ಟೋಪಾಲಜಿಯನ್ನು ಬಳಸಬಹುದು ಎನ್ನುತ್ತಾ ಅದರ ಅನ್ವಯದಲ್ಲಿ ವಿವರಿಸುತ್ತಾನಾದರೂ.. ಅದನ್ನು 1912ರಲ್ಲಿ ಪ್ರಮೇಯವಾಗಿ ಸಾಧಿಸಿ ತೋರಿಸಿದ್ದು ಬ್ರೌವರ್ ಎಂಬ ಗಣಿತಜ್ಞ. ಸಕೇಶಿ ಚೆಂಡಿಗೆ ಶಿಖೆ ಮೂಡಿಸಿ ಚಂಡಮಾರುತದ ಹುಟ್ಟಿನ ಗುಟ್ಟನ್ನು ಬಿಚ್ಚಿಡುತ್ತಾರೆ.


ಗಣಕಯಂತ್ರಕ್ಕೆ ಮಾನವಯಂತ್ರದ ತಿರುಮಂತ್ರ : ಕ್ಯಾಪ್ಚ ಕೋಡ್ ಗಳನ್ನು ನಾವು ಆನ್ಲೈನ್ ನಲ್ಲಿ ಹಲವಾರು ಸಂದರ್ಭಗಳಲ್ಲಿ ಕಂಡು ಬಿಡಿಸಿರುತ್ತೇವೆ. ನೀವು ಮಾನವರಾಗಿದ್ದರೆ ಇದಕ್ಕೆ ಉತ್ತರಿಸಿ ಎನ್ನುವ ಪ್ರಶ್ನೆಗಳನ್ನು ಕಾಣುವಾಗ ಇದು ನಿಜಕ್ಕೂ ಮನುಷ್ಯನನ್ನು ಗುರುತಿಸಬಲ್ಲದಾ..? ಅದು ಹೇಗೆ ಎಂಬ ಅನುಮಾನವಿದ್ದಲ್ಲಿ ಆ ಅನುಮಾನವನ್ನು ಹೇಳ ಹೆಸರಿಲ್ಲದಂತೆ ದೂರ ಮಾಡುವ ಲೇಖನ ಇಲ್ಲಿದೆ.


ಕಾಮಿಡಿಯ ಜೋಡಿ ಗಣಿತದ ಮೋಡಿ : ಫರ್ಮನ ಕೊನೆಯ ಪ್ರಮೇಯ ಹೇಳುವುದು "ಒಂದು ವರ್ಗವನ್ನು ಎರಡು ವರ್ಗಗಳ ಮೊತ್ತವಾಗಿ ಬರೆಯಬಹುದು. ಆದರೆ, ಒಂದು ಘನವನ್ನು ಎರಡು ಘನಗಳ ಮೊತ್ತವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಘಾತವನ್ನು ಬರೆಯಲು ಸಾಧ್ಯವಿಲ್ಲ" ಎಂಬುದಾಗಿ. ಆದರೆ, ಸಿಂಪ್ಸನ್ಸ್ ಎನ್ನುವ ಕಾಮಿಡಿ ಶೋ ಈ ಸಮೀಕರಣ ಸತ್ಯವೆಂದು ಫರ್ಮಾ ಕಟ್ಟಿದ್ದ ಸಾಮ್ರಾಜ್ಯವನ್ನು ಹೊಡೆದುರುಳಿಸಿತ್ತು. ಸಿಂಪ್ಸನ್ಸ್ ಶೋನಲ್ಲಿ ಗಣಿತ ತಲೆ ಹಾಕುತ್ತಿದ್ದು ಅದೇ ಮೊದಲೇನಲ್ಲ. ಗಣಿತದಲ್ಲಿ ಹಾಸ್ಯವೇ ಇಲ್ಲ ಎನ್ನುವುದಕ್ಕೆ ಅಪವಾದವೆನ್ನುವಂತೆ ಒಂದು ಕಾಮಿಡಿ ಶೋ ನಡೆಸಲು ಸ್ಕ್ರಿಪ್ ಬರೆಯುತ್ತಿದ್ದ ಹತ್ತೂ ಜನರೂ ಗಣಿತಜ್ಞರಾಗಿದ್ದರು. ಅದಕ್ಕೂ ಗೂಗಲ್ ಗೂ ಸಂಬಂಧ ಒಂದಿದೆ. ಸಿಂಪ್ಸನ್ಸ್ ಗಣಿತ ಪಂಡಿತರನ್ನು ಬೇಸ್ತು ಬೀಳಿಸಿದವರಾರು ಓದಿ ನೋಡಿ.


ಅದೂ ಸರಿ, ಇದು ಸರಿ ಅನ್ನುತ್ತಲ್ಲ ಸರಾಸರಿ! : ಸರಾಸರಿ ಅಥವಾ ಆವರೇಜ್ ಕಂಡು ಹಿಡಿಯುವುದಕ್ಕೆ 3 ದಾರಿಗಳಿವೆ. ಆದರೆ, ಈ ಸರಾಸರಿ ಆವಾಂತರಗಳು ಒಂದೆರಡಲ್ಲ. ಯಾವ ಸರಾಸರಿಯ ಲೆಕ್ಕವನ್ನು ಯಾವಾಗ ಬಳಸಬೇಕು ಹಾಗೂ ಅದು ಹೇಗೆ ಸರಿಯಾಗುತ್ತದೆ ಎನ್ನುತ್ತಾ ಗಣಿತದ ಆಟವನ್ನೇ ಆಡಬಹುದಾದ ಅದೂ ಸರಿ, ಇದೂ ಸರಿ ಎನ್ನುವ ಸರಾಸರಿ ಇಲ್ಲಿದೆ.


1+2+3+4+5+...= -1/12! : ಸ್ವಾಭಾವಿಕ ಸಂಖ್ಯೆಗಳನ್ನು ಕೂಡುತ್ತಾ ಹೋದಾಗ ಮೊತ್ತವು ಬೆಳೆಯುತ್ತದೆ. ಹಾಗೆ ಅದಕ್ಕೊಂದು ಶ್ರೇಡಿಯ ಸೂತ್ರ ಕಂಡುಹಿಡಿದು 17ನೇ ಶತಮಾನದಲ್ಲಿಯೇ ಗೈಡೋಗ್ರಾಂಡಿ ರೂಪಿಸಿದ ಸೂತ್ರ ಹೇಗಿತ್ತು..? ಇದೇನು ಅಷ್ಟು ಸುಲಭವಾಗಿ ಒಪ್ಪಿಕೊಂಡದ್ದಲ್ಲ. ಈ ಸಿದ್ಧಾಂತ ಬಳಕೆಗೆ ಬಂದದ್ದೇಗೆ? 21ನೇ ಶತಮಾನದ ಕ್ವಾಂಟಮ್ ಭೌತಶಾಸ್ತ್ರಕ್ಕೆ, ಸ್ಪ್ರಿಂಗ್ ಸಿದ್ಧಾಂತಕ್ಕೆ ಪ್ರವೇಶ ಪಡೆದ ಈ ಸೂತ್ರದ ಕುರಿತು ಓದಿ.


ದಾರಿ ಯಾವುದಯ್ಯಾ ಮನೆ ಸೇರಲು? : ಇರುವೆಯ ಮಸ್ತಿಷ್ಕಕ್ಕೂ.. ಮನುಷ್ಯನದಕ್ಕೂ ಇರುವ ವ್ಯತ್ಯಾಸ, ಲೆಕ್ಕಾಚಾರ, ಅದು ಓಡಾಡುವ ದಾರಿ ಹೀಗೆ ಎಲ್ಲವನ್ನು ವೆಕ್ಟರ್ಸ್ ನಲ್ಲಿ ಅಳೆಯಬಹುದಾ..? ಇರುವೆಗೆ ಈ ಗಣಿತದ ಲೆಕ್ಕಾಚಾರ ಗೊತ್ತೇನು..?


ಬೆಟ್ಟದ ಮೇಲೆ ನಾ ಗಿಡಕ್ಕೆ ನೀರೆರೆದವರು ಯಾರು : ಹೆಚ್ಚು ಮಗ್ಗಿ ಗೊತ್ತಿಲ್ಲದವರು ಕ್ಯಾಲ್ಕುಲೇಟರ್ ಬಳಸದೆ ಥಟ್ ಎಂದು ಉತ್ತರಿಸುವ ಸಂದರ್ಭಗಳನ್ನು ಯಾವುದಾದರೂ ದಿನಸಿ ಅಂಗಡಿ, ಎಳನೀರು ವ್ಯಾಪಾರದಲ್ಲಿ ನೋಡಿರಬಹುದು. ಹಾಲಿಗೆ ನೀರು ಬೆರೆಸಿ ಎಷ್ಟು ಸಮ ಮಾಡಬೇಕು ಎನ್ನುವ ಅನುಪಾತದ ಲೆಕ್ಕವನ್ನು ಅದು ಗೊತ್ತಿಲ್ಲದೆಯೇ ಬಳಸುವ ಗೌಳಿಗನನ್ನು, ಬಡ್ಡಿ ವ್ಯವಹಾರದಲ್ಲಿ ಸಮಯ, ಬಡ್ಡಿ, ಹಣ ಥಟ್ಟೆಂದು ಹೇಳುವ ಸೂತ್ರ ಗೊತ್ತಿಲ್ಲದ ವ್ಯಕ್ತಿಗಳನ್ನು ಕಾಣಬಹುದು. ಅವರನ್ನು ಕೇಳಿದರೆ "ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಎತ್ಕೊಂಡಂಗಾಯ್ತು" ಎಂದು ಹೇಳಬಹುದು. ಹೀಗೆ ಅವರ ಶುದ್ಧಗಣಿತ ಹೇಗಿದೆ ಎನ್ನುವುದನ್ನು ತೋರಿಸುತ್ತಾರೆ.


ಗಣಿತದಲ್ಲಿ ಹಲವಾರು ಕ್ಲಿಷ್ಟಕರ, ಸಂಕೀರ್ಣ ಆಯಾಮಗಳಿವೆ. ಅದು ಗೊತ್ತಿಲ್ಲದೆಯೇ ಸರಳವಾಗಿ ವ್ಯವಹರಿಸುವವರೂ ಇದ್ದಾರೆ. ಗಣಿತ ಗೊತ್ತಿದೆ ಎಂದು ಹೆಮ್ಮೆಪಡುತ್ತಿರುವವರಿಗೆ ಸರಳ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮಾರ್ಗ ತಿಳಿದಿರುವುದಿಲ್ಲ. ಹಾಗೆಂದು, ರೂಪಿಸಿದ ಪ್ರಮೇಯಗಳಾವುವೂ ತಕ್ಷಣ ಒಪ್ಪಿತವಾದವಲ್ಲ. ಎಲ್ಲದಕ್ಕೂ ತಿಣುಕಾಡುವ ನಾವು ಈ ಗಣಿತದ ಲೇಖನಗಳನ್ನು ಓದಿ ಅರ್ಥೈಸಿಕೊಂಡರೆ ಗಣಿತ ಹೀಗೂ ಇದೆಯಾ ಎನ್ನುವ ಚೆಂದದ ಆಯಾಮವೊಂದು ನಮಗೆ ಸಿಗುತ್ತದೆ. ಇದು ಸಮಯ ತೆಗೆದುಕೊಂಡು, ಸವಿಯುತ್ತಾ, ಲೆಕ್ಕಾಚಾರ ಹಾಕಿ ಓದುವ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜುಲೈ 26, 2026

ಕೇವಲ ನನಗಾಗಿ


ಸಾಕಷ್ಟು ಹಂಚಿಕೊಳ್ಳಲಿಕ್ಕಿತ್ತು

ಬೇಕಾದಷ್ಟು ಚರ್ಚಿಸಲಿಕ್ಕಿತ್ತು

ಮತ್ತಾರ ಬಳಿಯೂ ನಿರೀಕ್ಷಿಸಿಲಾಗದ

ಮಮತೆಯನ್ನು ಸವಿಯಬೇಕಿತ್ತು

ನಾಳೆ ಕರೆ ಮಾಡುವೆನೆಂದ 

ಕರೆಗೆ ನಿರೀಕ್ಷಿಸುತ್ತಲೇ ಇದ್ದೇನೆ

ಅದು ಬಾರದೆನ್ನುವ ಸತ್ಯದ ಅರಿವಿದ್ದರೂ..

ಪಪ್ಪ ನಿಮ್ಮ ಅಗತ್ಯವಿದದ್ದು ನನಗಾಗಿ

ಕೇವಲ ನನಗಾಗಿ

ನಾನು ನಾನೇ ಆಗಿರುವುದಕ್ಕಾಗಿ


~ವಿಭಾ ವಿಶ್ವನಾಥ್ 

ಪಪ್ಪನ ಹೆಗಲು


ನನ್ನ ವಿಶ್ವವೇ ಆಗಿದ್ದ ನನ್ನಪ್ಪ ಭೌತಿಕವಾಗಿ ನನ್ನೊಡನಿಲ್ಲದೆ ಎರಡೂವರೆ ವರ್ಷ. ಹಠಾತ್ ಹೃದಯಾಘಾತದಿಂದ ನಿಧನರಾದವರ ನೆನಪು ಪ್ರತಿಕ್ಷಣವೂ ನನ್ನೊಡನಿದೆ. ಪ್ರತಿನಿತ್ಯ ಎದ್ದು ನನ್ನ ಕೆಲಸದಲ್ಲಿ ತೊಡಗಿಸಿಕೊಂಡರೂ ಬೆಳಗಿನ ಅವರ ಕರೆ ಬರದೆ ಉಲ್ಲಾಸ ಮೂಡುತ್ತಿರಲಿಲ್ಲ. ದಿನ ಸಂತೃಪ್ತಿಯೆಂದೆನಿಸುತ್ತಿದದ್ದು ಅವರ ಮತ್ತೊಂದು ಕರೆಯೊಂದಿಗೆ. ಹಾಗೆಂದು, 24*7 ವರದಿ ಅಲ್ಲಿರುತ್ತಿರಲಿಲ್ಲ. ಅವರ ಆಪ್ತತೆಯ ಒಂದೆರಡು ಮಾತು, ಕಾಳಜಿ ನನ್ನ ಧೈರ್ಯ. ಸೋತಾಗ ಹುರಿದುಂಬಿಸಿ, ನನ್ನ ಸಣ್ಣ-ಪುಟ್ಟ ಗೆಲುವಿಗೂ ಸಂಭ್ರಮಿಸುತಿದ್ದ ಪಪ್ಪನಿಗೇ ನನ್ನ ಸೋಲು-ಗೆಲುವು, ಪ್ರಯತ್ನ ಎಲ್ಲವನ್ನೂ ಮೊದಲು ಹಂಚಿಕೊಳ್ಳುತ್ತಿದ್ದದ್ದು.


ಒಬ್ಬಳೇ ಮಗಳನ್ನು ರಾಜಕುಮಾರಿಯಂತೆ ನೋಡಿಕೊಂಡರೂ.. ಸಾಕಷ್ಟು ಧೈರ್ಯದಿಂದ ಒಬ್ಬಳೇ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನೂ ತುಂಬಿದವರು. ತಾನು ಬೇರೆಯವರ ಮನೆಯಲ್ಲಿದ್ದು ಕಷ್ಟಪಟ್ಟಂತೆ ಮಗಳು ಆಗಬಾರದೆಂದು ಹಾಸ್ಟೆಲ್ ಗೆ ಸೇರಿಸಲು ಹಿಂದೆ-ಮುಂದೆ ನೋಡಿದರೂ.. ಪರಿಸ್ಥಿತಿಯ ಪ್ರಭಾವ, ವಿದ್ಯೆಯ ಮಹತ್ವದಿಂದ ಮನಸ್ಸಿಲ್ಲದ ಮನಸಲ್ಲಿ ಕಳುಹಿಸಿದವರು. ಚಿಕ್ಕಮ್ಮ, ಮಾಮನ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯ ಮಕ್ಕಳಿಗೆ ನಿಸ್ವಾರ್ಥದಿಂದ ಓದಿಸಿ, ಶಾಲೆಗೆ ಕರೆದು ಕಳುಹಿಸುವ ಜವಾಬ್ದಾರಿಯನ್ನು ತಾವಾಗಿಯೇ ತಮ್ಮ ಹೆಗಲ ಮೇಲೆ ಹೊತ್ತು ತನ್ನ ಮಕ್ಕಳಂತೆಯೇ ಜೋಪಾನ ಮಾಡಿದವರು. ಎಂದಿಗೂ ತಮ್ಮ ಕಷ್ಟದ ದಿನಗಳನ್ನು ನೆನೆದು ಕೊರಗಿದವರಲ್ಲ. ಬದಲಾಗಿ, ಮುಂದಿನ ಹಾದಿಯ ಆಲೋಚನೆ ಮಾಡುತ್ತಿದ್ದವರು.


ಫಾರ್ಮಸಿ ಅಧಿಕಾರಿಗಳಾಗಿದ್ದವರು ನಿವೃತ್ತಿ ನಂತರವೂ ಕೋವಿಡ್ ವಾರಿಯರ್ ಆಗಿ ದುಡಿದವರು. ದುಡ್ಡಿಲ್ಲ, ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಲಿಲ್ಲ. ರಕ್ತ ಸಂಬಂಧಕ್ಕಿಂತಲೂ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದರು ಎಷ್ಟೋ ಜನರು. 


"ತಾಯಿ, ನಿಮ್ಮಪ್ಪ ಅವತ್ತು ನನ್ನ ಆಸ್ಪತ್ರೆಗೆ ಸೇರಿಸಿ ಕಾಲು ಸರಿ ಮಾಡಿಸಿ ಇನ್ನೊಂದು ಜೀವ ಕೊಟ್ಟ ಪುಣ್ಯಾತ್ಮ" ಅನ್ನೋ ಅಜ್ಜನನ್ನು ತಂದೆಯ ಸ್ಥಾನದಲ್ಲಿಟ್ಟು, ಜಾತಿಬೇಧವಿಲ್ಲದೆ ಸಹಾಯ ಮಾಡಿದ್ದರು. ಇದು ಒಂದು ಉದಾಹರಣೆಯಷ್ಟೇ.. "ಶರಣರ ಸಾವನ್ನು ಮರಣದಲ್ಲಿ ನೋಡು" ಎಂಬಂತೆ ಅಂದು ಹರಿದು ಬಂದ ಜನಸಾಗರ ಅವರನ್ನು ನೆನಪಿಸಿಕೊಂಡ ರೀತಿ ಸಂಬಂಧಿಕರಿಗೆ.. ಮೌನಿಯಾಗಿಯೇ ಕಾಣುತ್ತಿದ್ದ ಗಟ್ಟಿ ವ್ಯಕ್ತಿತ್ವದ ನನ್ನಪ್ಪನ ಪರೋಪಕಾರಿ ಮುಖವನ್ನು ತೆರೆದಿಟ್ಟಿತ್ತು. 


"Empty mind is devil's workshop, ಸೋಮಾರಿಯಾಗಬಾರದು" ಎಂಬುದನ್ನು ಹೇಳಿಕೊಟ್ಟ ಪಪ್ಪ ಅಂತೆಯೇ ಬದುಕಿದವರು. ಕ್ರಿಕೆಟ್, ನ್ಯೂಸ್ ಪೇಪರ್, ರೇಡಿಯೋ ಇವುಗಳ ಜೊತೆಗೆ ಕಾಯಕಯೋಗಿಯಾಗಿದ್ದ ಪಪ್ಪ ನನ್ನ ಸದಾಕಾಲದ ದಾರಿದೀಪ. ಓದುವ, ಹಾಡುವ ಹವ್ಯಾಸವನ್ನು ಅಭ್ಯಾಸವಾಗಿಸಿದ್ದು.. "ಏನಾದರೂ ಮಾಡು, ನಿನ್ನ ಜೊತೆ ನಾನಿರುತ್ತೇನೆ", "Go and explore" ಎಂದದ್ದು ಈಗಲೂ ಕಿವಿಯಲ್ಲಿದೆ. ಸ್ವಾಭಿಮಾನ, ಸಹಾಯದ ಗುಣವನ್ನು ಬಿಡದೆ ಬೆಳೆಸಿದ ಅಪ್ಪನ ವ್ಯಕ್ತಿತ್ವವನ್ನು ಬಣ್ಣಿಸಹೊರಟರೆ ಕುರುಡ ಆನೆಯನ್ನು ಮುಟ್ಟಿದಂತಾಗಬಹುದು. ಅಪ್ಪನ ಹೆಗಲು ಕೊಟ್ಟಷ್ಟು ಧೈರ್ಯ, ವಿಸ್ತಾರತೆಯ ನೋಟ ಮತ್ತಾವುದೂ ಕೊಟ್ಟಿಲ್ಲ. ಬಹುಶಃ, ಪಪ್ಪ ನನ್ನೊಡನಿದ್ದು ಕಲಿಸುವ ಪಾಠಗಳು ಮುಗಿದಿದ್ದವೇನೋ..! ಜೊತೆಗಿಲ್ಲದೆ ಕಲಿಸುತ್ತಿದ್ದಾರಷ್ಟೇ...!


~ವಿಭಾ ವಿಶ್ವನಾಥ್

ತಿರುಗುಬಾಣ (ಬೆಳಕಿಂಡಿಯ ಕತೆಗಳು - 60)

 


ಪ್ರೀತಿಯ ನಾಟಕವಾಡಿ ಒಬ್ಬಳೇ ಮಗಳಾದ ಅವಳನ್ನು ಸೊಸೆಯಾಗಿಸಿಕೊಂಡು, ಮರುಳು ಮಾಡಿಕೊಂಡು ಅವಳ ಆಸ್ತಿಯನ್ನು ಉಪಾಯವಾಗಿ ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿದ್ದರು ಅವರು.

ಅವಳು ಮುಗ್ಧಳಾಗಿದ್ದಳು. ಆದರೆ, ದಡ್ಡಿಯಾಗಿರಲಿಲ್ಲ. ನಂಬಿದವರೇ ಬೆನ್ನಿಗೆ ಚೂರಿ ಹಾಕುವ ಉಪಾಯ ತಿಳಿದವಳ ಚಾಲಾಕಿತನ ಈಗ ಅವರ ಉಪಾಯವನ್ನು ಅವರಿಗೇ ತಿರುಗುಬಾಣವಾಗಿಸಿತ್ತು.

ಸತ್ಯ ಅರಿತ ಮಗನ ತಿರಸ್ಕಾರ ಆಸ್ತಿಗಿಂತಲೂ ಮಿಗಿಲಾದ ಸಂಬಂಧದ ಬೆಲೆಯನ್ನು ಅರಿವಾಗಿಸಿತ್ತು.

~ವಿಭಾ ವಿಶ್ವನಾಥ್

ಪುಟ್ಟಿಯ ಕಥೆಗಾರಿಕೆ (ಬೆಳಕಿಂಡಿಯ ಕತೆಗಳು - 59)

 


"ಕಥೆ ಹೇಳುವೆ. ಕೇಳಮ್ಮ" ಎಂದು ಹೋದ ಪುಟ್ಟಿಗೆ "ಆಮೇಲೆ ಹೇಳುವೆಯಂತೆ ಕಂದಾ.. ಅಮ್ಮ ಆಫೀಸಿನಿಂದ ಈಗಷ್ಟೇ ಬಂದಿದ್ದಲ್ವಾ.. ಅಡುಗೆ ಮುಗಿಸಿ ಬರ್ತೀನಿ. ಅಷ್ಟೊತ್ತಿಗೆ ಅಪ್ಪನಿಗೆ ಕಥೆ ಹೇಳು" ಎಂದು ಸಾಗ ಹಾಕಿದಳು.

"ನನಗೀಗ ಮೀಟಿಂಗ್ ಇದೆ ಪುಟ್ಟಿ. ಹೋಗಿ ಅಣ್ಣನ ಹತ್ತಿರ ಹೇಳು" ಅಲ್ಲಿಂದ ಸಾಗ ಹಾಕಿದರು ಅಪ್ಪ

"ರಾಶಿ ಹೋಂವರ್ಕ್ ಇದೆ ನನಗೆ. ತಲೆ ತಿನ್ನಬೇಡ ಹೋಗು" ಎಂದು ಬೈದ ಅಣ್ಣನೂ...

ನಿನ್ನೆ ಕಥೆ ಹೇಳುವೆನೆಂದು ಬಂದ ಪುಟ್ಟಿಯ ಕಥೆ ಕೇಳದವರು ಇಂದು ಪುಟ್ಟಿಯ ಕಥೆ ಕೇಳಲು ಕಾಯುತ್ತಿದ್ದಾರೆ. ಆಕಾಶವಾಣಿಯ ಚಿಣ್ಣರ ಚಿಲಿಪಿಲಿಯಲ್ಲಿ ಪುಟ್ಟಿಯ ಕಥೆಗಳ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಶಾಲೆಯಲ್ಲಿ ಟೀಚರ್ ಅವಳ ವಿಶೇಷ ಪ್ರತಿಭೆ ಗಮನಿಸಿ ಕಾರ್ಯಕ್ರಮ ಕೊಡಿಸಿದ್ದರು. ಈಗ ಪುಟ್ಟಿಯ ಕಥೆಗಾರಿಕೆಗೆ ಹೆಚ್ಚಿನ ಮೌಲ್ಯ ಸಿಕ್ಕಿತ್ತು.

~ವಿಭಾ ವಿಶ್ವನಾಥ್

ಅರ್ಧ ಸತ್ಯ (ಪುಸ್ತಕ ಯಾನ - 475)


ಪುಸ್ತಕದ ಶೀರ್ಷಿಕೆ : ಅರ್ಧ ಸತ್ಯ

ಲೇಖಕರು : ಮಾಕೋನಹಳ್ಳಿ ವಿನಯ್ ಮಾಧವ್

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್ 

ಪ್ರಥಮ ಮುದ್ರಣ : ನವೆಂಬರ್ 2021

ಪುಟಗಳು : 156

ಬೆಲೆ : 150 ರೂ. 


ಇಲ್ಲಿವೆ ಕ್ರೈಮ್ ರಿಪೋರ್ಟರ್ ಮಾಕೋನಹಳ್ಳಿ ವಿನಯ್ ಮಾಧವ್ ಅವರು ಬರೆದ ಆರು ಪ್ರಸಂಗಗಳು. ಆದರೆ, ಇದು ಸತ್ಯ ಘಟನೆಗಳು ಹಾಗೂ ಕಥೆಗಳು ಎರಡರ ಮಿಶ್ರಣದಂತೆ ಕಾಣಿಸುತ್ತದೆ. ಇವರ ಈ ಶೈಲಿ ನನಗೆ ಹೊಸದು ಹಾಗೂ ವಿಭಿನ್ನ ಓದಿನ ಅನುಭವ ಕೊಟ್ಟಿತು. 


ತಾನು ಮಾಡಿದ ಕ್ರೈಂ ರಿಪೋರ್ಟ್ ಗಳು ಹಾಗೂ ಸಂದರ್ಭ/ ಸುದ್ದಿಯ/ ವ್ಯಕ್ತಿಯ ವಿರುದ್ಧ ಪುಟಗಟ್ಟಲೆ ಬರೆದಿದ್ದವರೊಡನೆಯೇ ಪರೋಕ್ಷವಾಗಿ ಭಾಗಿಯಾಗಬೇಕಾದಾಗ... ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಒಳ್ಳೆಯವರಂತೆ ಬಿಂಬಿಸಿ ಕೊನೆಗೆ ಸತ್ಯ ತಿಳಿದಾಗ..? ನೊಂದವರಿಗೆ ಸಾಂತ್ವನ ಹೇಳಲು ಆಗದಿದ್ದಾಗ..? ಇಡೀ ವ್ಯವಸ್ಥೆಯಲ್ಲಿ ತಾನು ಹೀರೋ ಎಂದು ಕಾಣಿಸಿಕೊಳ್ಳುತ್ತಿರುವಾಗಲೇ ತಮಗೆ ಬೇಕಾದಂತಹ ಕಥೆಗಳನ್ನು ಬರೆಸಲು ಬಳಸಿಕೊಂಡ ಸಂದರ್ಭ ತಿಳಿದಾಗ..? 

"ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ" ಎನ್ನುತ್ತಾರೆ ಲೇಖಕರು. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್... ಈ ಸಾಲು ಎಷ್ಟೆಲ್ಲ ದ್ವನಿಸುತ್ತದೆಯಲ್ಲವಾ..?


"ಇನ್ನುಳಿದಂತೆ ನನ್ನ ಮೂರ್ಖತನದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಅವೆಲ್ಲ ಬಹಳಷ್ಟು ಪಾಠ ಕಲಿಸಿದ ಗುರುಗಳು" ಎನ್ನುತ್ತಾರೆ. ಅರ್ಧಸತ್ಯ ಹಾಗೂ ಪ್ರಮೋಶನ್ ಪ್ರಸಂಗಗಳನ್ನು ಓದಿದಾಗ ನನಗೆ ಲೇಖಕರು ಹೀಗೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ಅರಿವಾಯಿತು.


ಪಾತ್ರಗಳು, ಕಥಾಹಂದರ ಕಾಲ್ಪನಿಕ ಎಂದು ಹೇಳಬಲ್ಲೆ. ಹೋಲಿಕೆ ಇದ್ದರೆ ಅದು ಕಾಕತಾಳೀಯ ಎಂದಿದ್ದಾರೆ.


ಈ ಆರು ಪ್ರಸಂಗಗಳ ಕುರಿತು ನೋಡುವುದಾದರೆ..


ಅರ್ಧ ಸತ್ಯ: ಗುರೂಜಿ ಹಾಗೂ ಸಿನಿಮಾ ಹೀರೋಯಿನ್ ಇಬ್ಬರ ಖಾಸಗಿ ವಿಡಿಯೋ ಸಿಕ್ಕು ಅದು ನ್ಯೂಸ್ ಚಾನೆಲ್ ಗಳನ್ನು ಆವರಿಸಿದ್ದಾಗಲೇ.. ಈ ಸಂಬಂಧದ ಸುದ್ದಿ ಇಷ್ಟಕ್ಕೆ ಮುಗಿಯದೆ ವಿಷಯ ಸೀರಿಯಸ್ ಆಗುತ್ತದೆ ಎಂದು ಗೊತ್ತಿದ್ದ ಇಂಗ್ಲಿಷ್ ನ್ಯೂಸ್ ಪೇಪರ್ ರಿಪೋರ್ಟರ್ ವಿಜಿತ್ ಆಶ್ರಮದ ಹತ್ತಿರ ಹೋಗುವುದರೊಳಗಾಗಿ ಅಲ್ಲಿ ಆಗಲೇ ನ್ಯೂಸ್ ಚಾನೆಲ್ ನವರು, ಪೊಲೀಸ್, ಒಂದಿಷ್ಟು ಜನರು ಸೇರಿದ್ದರು. ಆಶ್ರಮದ ಒಳಗುಟ್ಟುಗಳನ್ನು ಬಿಚ್ಚಿಡುತ್ತಲೇ.. ಈ ಸುದ್ದಿಯ ಮೂಲಗಳು ಹಲವಾರು ಕಡೆಗಳಿಂದ ತಿಳಿಯುತ್ತಾ ಸಾಗುತ್ತವೆ. ಎಕ್ಸ್ಕ್ಲೂಸಿವ್ ಸುದ್ದಿ, ತನ್ನಲ್ಲೇ ಮೊದಲು ಎಂಬ ಹಪಾಹಪಿಗೆ ಬಿದ್ದವರು ತಿಳಿದ ಸತ್ಯ ಎಷ್ಟಿತ್ತು..? 

ತಾನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದವರು ವಿಜಿತ್ ಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ, ನಂತರ ತಿಳಿದ ಸತ್ಯ ಯಾವುದು..? ವ್ಯವಸ್ಥೆಯ ವ್ಯವಸ್ಥಿತ ಸಂಚಿನ ರಾಜಕೀಯ, ಆಧ್ಯಾತ್ಮದ ಮುಖವಾಡದ ಕೇಸ್ ಇಲ್ಲಿದೆ.


ಪ್ರಮೋಶನ್: ಎರಡನೇ ಶನಿವಾರ ಮತ್ತು ಭಾನುವಾರ ಕ್ರೈಂ ರಿಪೋರ್ಟರ್ ಗಳ ಸುದ್ದಿಯೇ ಮುಖ್ಯ ಜೀವಾಳವಾಗಿರುವ ಸಮಯದಲ್ಲಿ ಮನೀಶ್ ತೆಗೆದುಕೊಂಡು ಹೋದ ಸುದ್ದಿಯೇ ಮುಖ್ಯ ಸುದ್ದಿಯಾಗಿತ್ತು. ಅದು ಪ್ರಮೋಷನ್ ನ ವಿಚಾರ. ಆದರೆ, ಅರ್ಧ ಸತ್ಯ ಮಾತ್ರ ತಿಳಿದ ಮನೀಶ್ ಇಲ್ಲಿ ಅವಸರಿಸಿದನೇ..? ಸುದ್ದಿಲೋಕದಲ್ಲಿ ಟೆಕ್ನಿಕಲಿ ಪರ್ಫೆಕ್ಟ್ ಆಗಿರುವ ಸುದ್ದಿ ಬರೆದಿರುವಷ್ಟು ಸರಳವಾಗಿರುವುದಿಲ್ಲ. 

ರೌಡಿಯ ತಮ್ಮ ಪೊಲೀಸ್ ಆಗಬಾರದಾ..?

"ಎಲ್ಲರಿಗೂ ನ್ಯಾಯವಾಗಿ ಬದುಕೋಕೆ ಒಂದು ಚಾನ್ಸ್ ಕೊಡಬೇಕು. ಇಲ್ಲದೆ ಹೋದರೆ ನಾವು ಮನುಷ್ಯತ್ವದ ಬಗ್ಗೆ ಮಾತನಾಡಬಾರದು" ಎಂಬ ಸಾಲು ಅರ್ಥಪೂರ್ಣವೆನ್ನಿಸಿತು.


ಪರೀಕ್ಷೆ : ಇಂಜಿನಿಯರಿಂಗ್ನಲ್ಲಿ ಪ್ರತಿ ವರ್ಷ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗುತ್ತಿದ್ದ ಹುಡುಗ ಕೊನೆಯ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಎಲ್ಲದರಲ್ಲಿಯೂ ಸೊನ್ನೆ ಬಂದದ್ದು. ಹಾಗೆಂದು, ಅದು ಗೊತ್ತಿಲ್ಲದೆ ಆದ ಎಡವಟ್ಟಲ್ಲ. ವ್ಯವಸ್ಥಿತ ಸಂಚು. ಮಗನ ಕೇಸ್ ಏನಾಯಿತು ಎಂದು ತಿಳಿಯಲು ಅಲೆದಾಡುತ್ತಿದ್ದ ತಂದೆಯನ್ನು ನಾವಿಲ್ಲಿ ಕಾಣಬಹುದು.

ಕೇವಲ ನೊಂದವರಿಗೆ ಸಾಂತ್ವನ ಹೇಳಿದರೆ ಸಾಕೇ..?

ವ್ಯವಸ್ಥೆಯ ವಿರುದ್ಧ ಹೋಗಲಾಗದೆ ಸತ್ಯ ಗೊತ್ತಿದ್ದರೂ ಸುಮ್ಮನೆ ಇರಬೇಕಾದ ಪ್ರಸಂಗ. ಇಂತಹ ಪ್ರಸಂಗಗಳು ಎಷ್ಟು ಸರಿದು ಹೋಗಿರಬಹುದು..!


ಕನಿಷ್ಠ ಬಿಲ್ಲೆ : "ಮಗು ಹೆಣದ ಮೇಲೆ ನಿಂತು ಪ್ರಮೋಷನ್ ಅವಾರ್ಡ್ ತಗೊಳ್ಳೋದು ಯಾರಿಗೆ ಬೇಕು ಸರ್" ಎನ್ನುವ ಅವನ ಮಾತಂತೂ ಇಂದಿನ ಮಾಧ್ಯಮಗಳು ಕಲಿಯಬೇಕಾದದಡಮ್ಮಿ ಸ್ಪಷ್ಟವಾಗಿಸಿದೆ. ಇಲಾಖೆಯಲ್ಲಿ ಕನಿಷ್ಠ ಬಿಲ್ಲೆಯಾದರೂ ವ್ಯಕ್ತಿತ್ವದಿಂದ ಎತ್ತರಕ್ಕೇರಿದ ಮಾದೇಶ ಮಾಡಿದ ಸಾಹಸವೇನಿತ್ತು..? ಓದಿ ನೋಡಿ.


ಅತ್ಯಾಚಾರದ ಸುಳಿ : ಅತ್ಯಾಚಾರವಾದ ಹುಡುಗಿ ದೂರು ನೀಡಿದರೆ ವ್ಯವಸ್ಥೆಯೇ ಅವಳ ಪರ ನಿಲ್ಲುತ್ತದೆ ಅದರಲ್ಲಿಯೂ ದೆಹಲಿಯ ಅತ್ಯಾಚಾರದ ಪ್ರಸಂಗವಾದ ನಂತರದ ತೀರ್ಪು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. 

ಆದರೆ, ಇದನ್ನು ದುರುಪಯೋಗಪಡಿಸಿಕೊಂಡಾಗ..? 

ಅತ್ಯಾಚಾರ ಮಾಡಿಲ್ಲದಿದ್ದರೂ ಅದರ ಸುಳಿಯಲ್ಲಿ ಸಿಲುಕಿಕೊಂಡವನಿಗೆ ಸಿಕ್ಕ ತೀರ್ಪು ಏನಿತ್ತು ..? ಅಷ್ಟಕ್ಕೂ ಆತ ಈ ಸುಳಿಯೊಳಗೆ ಸಿಲುಕಿದ್ದು ಹೇಗೆ..? 


ನಕ್ಷತ್ರಗಳು : ಗೋವಾದ ಪ್ರಪಂಚ ಹಾಗೂ ಅಲ್ಲಿನ ರಾತ್ರಿಯ ಪ್ರಪಂಚ ಜೊತೆಗೆ ಅದರೊಳಗೆ ಸಿಲುಕಿಕೊಳ್ಳುವರ ಹಾಗೂ ಸಿಲುಕಿಸುವವರ ಜಾಲದ ನೋಟ ಇಲ್ಲಿದೆ.


ಇಲ್ಲಿನ ಪ್ರಸಂಗಗಳ ಕುರಿತು ಹೆಚ್ಚು ತೆರೆದಿಡಲಾಗದು. ಅಪರಾಧದ ಹಿಂದಿನ ನಗ್ನ ಸತ್ಯ ಓದುಗರಿಗೆ ಅರಿವಾಗುತ್ತದೆ. ಆಂತೆಯೇ ವ್ಯವಸ್ಥೆಯ ಒಳಗಿರುವವರಿಗೂ ಅದರ ಅರಿವಿರುತ್ತದೆ. ಆದರೆ, ಅದನ್ನು ತೆರೆದಿಡಲಾಗದ ಅಸಹಾಯಕತೆಯೂ ಇರುತ್ತದೆ. ಹಾಗಾಗಿ ಜಗತ್ತಿನ ಕಣ್ಣಿಗೆ ಅರ್ಧ ಸತ್ಯ ಮಾತ್ರ ಕಾಣುತ್ತದೆ.


ಈ ಪುಸ್ತಕ ಓದಿದ ನಂತರ ನನಗನಿಸಿದ್ದು


ಮಾಧ್ಯಮಗಳಲ್ಲಿ ಅದು ಪ್ರಿಂಟ್ ಮೀಡಿಯಾ ಆಗಿರಲಿ ಅಥವಾ ಟಿ.ವಿ ಮಾಧ್ಯಮವೇ ಆಗಿರಲಿ ಬರುವ ಸುದ್ದಿಗಳಲ್ಲಿ ಎಷ್ಟು ಸಂಪೂರ್ಣ ಸತ್ಯ..? 

ಯಾರೋ ಹರಡುವ ಅರ್ಧ ಸತ್ಯವನ್ನು ನಂಬಿಕೊಂಡು, ಒಬ್ಬ ವ್ಯಕ್ತಿಯ ಬದುಕನ್ನೇ ನಾಶಗೊಳಿಸುವ ಹುನ್ನಾರವೂ ಇರುತ್ತದಲ್ಲವಾ..?


ಒಂದೋ ಸತ್ಯ, ಇಲ್ಲವೇ ಸುಳ್ಳು.. ಎಂದು ನಂಬಿಕೊಂಡಿರುವವರಿಗೆ ಹೀಗೂ ಒಂದಿರುತ್ತದೆ ಎಂಬ ವಿಭಿನ್ನ ಲೋಕವನ್ನು ಅರಿವಾಗಿಸುವ ಪ್ರಸಂಗಗಳು ಇಲ್ಲಿವೆ.


ಯಾರೋ ಹರಡುವ ಜಾಲದಲ್ಲಿ ನಮಗೇ ಅರಿವಿರದಂತೆ ನಾವು ಸಿಲುಕಿಕೊಂಡಾಗ ಅದರಿಂದ ಹೊರಬರುವ ಮಾರ್ಗವನ್ನಷ್ಟೇ ಕಾಣುತ್ತೇವೆ. ಅಂತಹ ಎಷ್ಟು ಜೀವಗಳು ಅಲ್ಲಿರುತ್ತವಲ್ಲವಾ..? 

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ.. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಧ್ಯೇಯ ವಾಕ್ಯ ಎಷ್ಟು ಸಂದರ್ಭಗಳಲ್ಲಿ ಹೊಂದುತ್ತದೆ..?


ಕ್ರೈಂ ರಿಪೋರ್ಟಿಂಗ್ ಮಾಡುವವರು ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗದು. ಅಂತೆಯೇ ನಿರ್ಲಿಪ್ತವಾಗಿಯೂ ತೆಗೆದುಕೊಳ್ಳಲಾಗದಲ್ಲ.


ಒಬ್ಬ ವ್ಯಕ್ತಿಯ ನಂಬಿಕೆಯನ್ನು ಆತನ ಚಾಣಾಕ್ಷತೆಯನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವಷ್ಟು ಚಾಕಚಕ್ಯತೆ ಹೊಂದಿದವರು ಇರುವಾಗ ನೈಜ ಸುದ್ದಿಗಳು ಅರ್ಧ ಸತ್ಯವಾಗಿ ತಲುಪಿದರೆ..?


ಬಹುಶಃ ಸುಳ್ಳಾದರೂ ಒಂದು ದಿನ ಸಾಬೀತಾಗಬಹುದು. ಆದರೆ, ಅರ್ಧ ಸತ್ಯ ಬಹಳಷ್ಟು ಅಪಾಯಕಾರಿ. ಸತ್ಯ ಗೊತ್ತಿರುತ್ತದೆ. ಆದರೆ, ನಿರೂಪಿಸಲು ಸಾಧ್ಯವಾಗದವರಿಗೆ ತಲುಪಿರುತ್ತದೆ. ಪ್ರಯೋಜನವಾಗದಂತೆ...

ವಿಪರ್ಯಾಸವೆಂದರೆ ಇದೇ ಅಲ್ಲವೇ..?


ಇಲ್ಲಿ ಪ್ರತಿಯೊಂದು ಘಟನೆಗಳಿಗೂ ಪ್ರವೇಶಿಕೆ ಅಥವಾ ಇಂಟ್ರೋ ಇಲ್ಲ . ಬದಲಾಗಿ ಸಂಭಾಷಣೆಗಳೇ ಎಲ್ಲವನ್ನು ಬಿಚ್ಚಿಡುತ್ತವೆ. ಮೊದಲಾರ್ಧ ಅಥವಾ ಒಂದು ಪುಟವನ್ನು ನಾವು ಅರ್ಥೈಸಿಕೊಂಡರೆ, ಹೊಂದಿಕೊಂಡರೆ ವಿಭಿನ್ನವಾದ ಓದು ನಮ್ಮದಾಗುತ್ತದೆ. ಸಂಭಾಷಣೆಗಳು ತೀರಾ ನಯ- ನಾಜೂಕಿನಿಂದೇನೂ ಸಾಗುವುದಿಲ್ಲವಾದರೂ.. ಅಶ್ಲೀಲ್ಲತೆಯೂ ಇಲ್ಲಿಲ್ಲ. ಕ್ರೈಂ ಹಾಗೂ ರಿಪೋರ್ಟಿಂಗ್ ಲೋಕದ ಸಂಭಾಷಣೆಗಳು ಕಾಣಸಿಗುತ್ತವೆ.

~ವಿಭಾ ವಿಶ್ವನಾಥ್

ಬದುಕ ಭಿತ್ತಿಯ ಚಿತ್ರಗಳು (ಪುಸ್ತಕ ಯಾನ - 474)


ಪುಸ್ತಕದ ಶೀರ್ಷಿಕೆ : ಬದುಕ ಭಿತ್ತಿಯ ಚಿತ್ರಗಳು

ಲೇಖಕರು : ಶೈಲಜಾ ಸುರೇಶ್

ಪ್ರಕಾಶಕರು : ಗೀತಾಂಜಲಿ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2019

ಪುಟಗಳು : 148

ಬೆಲೆ : 150 ರೂ.


ಈ ಕಥಾ ಸಂಕಲನದಲ್ಲಿ 2 ಪುರಾಣದ ಕಥೆಗಳು, ಸಾಮಾಜಿಕ ಕಥೆಗಳು ಒಂದು ವೈಜ್ಞಾನಿಕ ಕಥೆ ಹೀಗೆ ಎಲ್ಲವನ್ನೂ ಸುಂದರವಾಗಿ ಸಣ್ಣ ಕಥೆಗಳ ಚೌಕಟ್ಟಿನಲ್ಲಿ ಹೆಣೆಯಲಾಗಿದೆ. ಸ್ಪರ್ಧಾ ವಿಜೇತ ಹಾಗೂ ವಿವಿಧ ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳನ್ನು ನಾವಿಲ್ಲಿ ಓದಬಹುದು. ಈ ಕಥಾ ಸಂಕಲನದಲ್ಲಿ 14 ವೈವಿಧ್ಯಮಯ ಕಥೆಗಳಿವೆ. 


ಮೌಲ್ಯ : ಹಣಕ್ಕೆ ಸರ್ಕಾರದವರು ಕಾಗದದಲ್ಲಿ ಮುದ್ರಿಸಿದ ಬೆಲೆ ಮೌಲ್ಯವಾಗುತ್ತದೆ. ಇಲ್ಲವಾದಲ್ಲಿ ಅದು ಬರಿಯ ಕಾಗದವಾಗುತ್ತದೆ. ಮನುಷ್ಯನ ಜೀವನವೂ ಅಂತೆಯೇ .. ಉಸಿರು ನಿಂತ ನಂತರ ಆ ಶರೀರ ಹೆಣ ಎನಿಸಿಕೊಳ್ಳುತ್ತದೆ. ಇಂತಹ ಆಲೋಚನೆ ಹುಟ್ಟಿಸಿದ ಈ ಕಥೆಯಲ್ಲಿ ಅಪ್ಪನ ಆಪರೇಷನ್ ಗೆ ಎಂದು ಹಣ ಹೊಂದಿಸಿದ ಮಗ ಹಾಗೂ ಪತ್ನಿ, ಇನ್ಸುರೆನ್ಸ್ ಕ್ಲೈಮ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿಯೇ ನೋಟಿನ ಅಮಾನ್ಯತೆ ಹಾಗೂ ಅದಲು-ಬದಲಿನ ಕಾರ್ಯ ನಡೆಯುತ್ತಿರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ..? ಮನುಷ್ಯ ಹಾಗೂ ಹಣ ಎರಡರ ಮೌಲ್ಯವೂ ಇಲ್ಲಿದೆ.ಇದು ಕರ್ನಾಟಕ ಲೇಖಕಿಯರ ಸಂಘದ 2017ರ ನಿರೂಪಮಾ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ.


ಬದುಕ ಭಿತ್ತಿಯ ಚಿತ್ರಗಳು : ಲಾಯರ್ ಊರ್ಮಿಳಾ ಕುಲಕರ್ಣಿಯವರ ಬಳಿ ಬಂದ ಕರುಣಾ ಹಾಗೂ ವನಿತಾ ಇಬ್ಬರ ಮಾತುಕತೆಯ ಅವರಿಬ್ಬರ ಸಾಂಸಾರಿಕ ಬದುಕನ್ನು ಬಿಚ್ಚಿಡುತ್ತದೆ. ಕೆರಿಯರ್ ಮುಖ್ಯವಾಗಿ ಎರಡು ವರ್ಷದ ಮಗುವನ್ನು ಬಿಟ್ಟು ವಿದೇಶಕ್ಕೆ ಹಾರಿದ ತಾಯಿ ಮತ್ತೊಂದು ಬದುಕು ಕಟ್ಟಿಕೊಂಡು.. ಈಗ ಮಗಳಿಗಾಗಿ ಹಂಬಲಿಸುತ್ತಾ ಇದ್ದ ವನಿತಾ ಕೇಸು ಗೆದ್ದಳೆ? ಅವಳ ಬದುಕಿನ ಘಟನೆ ಕರುಣಾಳಲ್ಲಿ ಮೂಡಿಸಿದ ಭಾವವೇನು..? ಈ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.


ಶಿಕ್ಷೆ : 19ರ ಪ್ರಾಯದ ಎಳೆಯ ತರುಣಿಯ ಮೇಲೆ ದಾರುಣವಾಗಿ ಅತ್ಯಾಚಾರವಾಗಿತ್ತು. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಎಸ್.ಐಗೆ ಅವರು ಯಾರೆಂದು ತಿಳಿದಿದ್ದರೂ ಶಿಕ್ಷೆ ಕೊಡಿಸುವ ಭರವಸೆ ಇರಲಿಲ್ಲ. ಪ್ರಭಾವಿಗಳಾಗಿದ್ದವರ ಮಗನೇ ಸ್ವತಃ ತಪ್ಪೊಪ್ಪಿಗೆ ಪಡೆಯುವಂತೆ ಮಾಡಿದ ಡಾಕ್ಟರ್ ಸಮರ್ಥ ಅವರ ಸಮರ್ಥತೆ ಇಲ್ಲಿ ಕಾಣುತ್ತದೆ. ಅವರು ಹಾಗೆ ಮಾಡಿದ್ದಾದರೂ ಹೇಗೆ..? ಓದಿ ನೋಡಿ. ಮಂಗಳದಲ್ಲಿ ಪ್ರಕಟಿತ ಕಥೆ ಇದು.


ತೀರ್ಪು : ಬದುಕ ಭಿತ್ತಿಯ ಚಿತ್ರ ಕತೆಯ ಛಾಯೆ ಇಲ್ಲಿ ಕಾಣುತ್ತದಾದರೂ.. ಇಲ್ಲಿ ಮಗಳು ತಾಯಿ ಎದುರಾಗುತ್ತಾರೆ. ಮಗಳ ಭಾವಗಳು ತಾಯಿಗೆ ತಿಳಿಯುತ್ತದಾದರೂ.. ತಾಯಿಯ ಭಾವಗಳು ಮಗಳಿಗೆ ದಕ್ಕುವುದಿಲ್ಲ. ಕೋರ್ಟಿನಲ್ಲಿ ಬಂದ ತೀರ್ಪು, ತಾಯಿ ನೀಡುವ ತೀರ್ಪು ಎರಡರಲ್ಲಿ ಯಾವುದು ಸರಿ ನೀವೇ ನಿರ್ಧರಿಸಿ. ಮಯೂರದಲ್ಲಿ ಪ್ರಕಟಿತ ಕಥೆ.


ಜಾನಕಿ : ಇದು ರಾಮಾಯಣದ ಕಥೆಯೇ.. ಲಕ್ಷ್ಮಣ ಜಾನಕಿಯನ್ನು ದಟ್ಟಡವಿಯಲ್ಲಿ ಬಿಡಲು ಬಂದಾಗ ಅವರಿಬ್ಬರ ನಡುವಿನ ಮಾತುಕತೆ ಜಾನಕಿ ತಾನೇ ಮುಂದಾಗಿ ಋಷ್ಯಾಶ್ರಮದಲ್ಲಿ ಅಪರಿಚಿತ, ಪರಿತ್ಯಕ್ತೆಯಾಗಿರಲು ನಿರ್ಧರಿಸಿದ ಕುರಿತು ಹೇಳುತ್ತಾಳೆ. ಕೊಂಚ ವಿಭಿನ್ನ ನಿರೂಪಣೆಯಿಂದ ಕಾಡುವ ಕಥೆ. ಜಾನಕಿ ಹಾಗೆ ನಿರ್ಧರಿಸಿದ್ದಾದರೂ ಏಕೆ..? 


ಮಾಧವಿ : ಅನುಪಮಾ ನಿರಂಜನ ಅವರ ಮಾಧವಿಗಿಂತಲೂ ಕೊಂಚ ವಿಭಿನ್ನವಾದ ಮಾಧವಿ ಇಲ್ಲಿ ಕಾಣಿಸುತ್ತಾಳೆ. ಗಾಲವನ ಮೇಲೆ ಪ್ರೇಮ ಹೊಂದಿದ ಮಾಧವಿ ಆತನಿಗಾಗಿ ಕಾಯುತ್ತಾ ಇದ್ದಾಗ ಕೊನೆಗೂಮತ್ತೆ ಬರುತ್ತಾನೆ ಗಾಲವ. ಅರಮನೆಯ ಅಂತಃಪುರಗಳ ಬಂಗಾರದ ಪಂಜರದಿಂದ ಬಿಡಿಸಿಕೊಂಡು ಹೋದ ಅವನು ತನ್ನನ್ನು ಗುರುದಕ್ಷಿಣೆ ನೀಡಲು ಬಳಸಿಕೊಂಡರೂ ಆತನ ಮೇಲೆ ಬದಲಾಗದ ನಿರ್ಮಲ ಪ್ರೀತಿ, ಆತ ನಿರಾಕರಿಸಿದ ಮಾಧವಿ ಏನಾಗುತ್ತಾಳೆ..? ಕನ್ಯಾವಲ್ಲರಿ ಆಕೆಯ ಪಾಲಿಗೆ ಶಾಪವಾದ ಕಥೆ ಇಲ್ಲಿದೆ. ಮಯೂರದಲ್ಲಿ ಪ್ರಕಟಿತ ಕಥೆ ಇದು.


ವಿಪರ್ಯಾಸ : ನರರೂಪ ರಾಕ್ಷಸನಂತಹ ಗಂಡನ ಜೊತೆ ಅಷ್ಟು ದಿನವೂ ಬದುಕಿದ ಅವಳ ಮಗ ಅದರ ವಿರುದ್ಧವಾಗಿ ಬೆಳೆಯುತ್ತಾನೆ. ಇನ್ನೇನು ಅವಳ ಎಲ್ಲಾ ಕಷ್ಟಗಳಿಗೆ ಮುಕ್ತಿ ಎಂದುಕೊಂಡು ಮಗನ ಜೊತೆ ಆತನ ಪುಟ್ಟ ಗೂಡಿಗೆ ಹೊರಡುವ ಸಂದರ್ಭದಲ್ಲಿ ಬಂದ ಕರೆಯೊಂದು ತನ್ನದಲ್ಲದ ಮತ್ತೊಂದು ನಿರ್ಧಾರಕ್ಕೆ ಕಾರಣವಾಯಿತೇ..? ತುಷಾರದಲ್ಲಿ ಪ್ರಕಟಿತ ಕಥೆ ಇದು.


ಆಂಟೀ : ಅಮ್ಮನ ತಂಗಿಯಾಗಿದ್ದ ಆಂಟಿಯನ್ನು ವಿನಾಯಕ ಹಾಗೂ ಜಯ ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಅಕ್ಕನ ಶ್ರಾದ್ಧ ಕಾರ್ಯವನ್ನು ಯಾವ ಅಡಚಣೆಯೂ ಇಲ್ಲದೆ ಮಾಡಬೇಕೆಂಬ ಅವಳ ಆಸೆ ಹಾಗೂ ಅಕ್ಕನ ಮೇಲಿನ ಅಪರಿಮಿತ ಪ್ರೀತಿಯ ಜೊತೆಗೆ ನಂಟಿನ ನೆನಪು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಅವಳ ಏಕೈಕ ಮಗ ಪ್ರಹ್ಲಾದನಂತಾಗಬೇಕು ತನ್ನ ಮಗ ಎನ್ನುವ ಜಯಳ ಆಸೆಗೆ ಆಂಟಿ ಬೇಡವೆಂದಿದ್ದೇಕೆ..? "ಇವತ್ತಿನ ಸುಖವನ್ನು ಇವತ್ತಿನ ನೆಮ್ಮದಿಯನ್ನು ಅನುಭವಿಸು. ನಾಳೆ ಏನಾಗುತ್ತೋ ಯಾರಿಗೆ ಗೊತ್ತು" ಎನ್ನುತ್ತಲೇ ಅವರ ವರ್ತಮಾನವನ್ನು ತೆರೆದಿಡುವ ಕಥೆ ಇಲ್ಲಿದೆ.


ತಾಯಮ್ಮ : ಕೆಲಸಕ್ಕೆ ಬರುತ್ತಿದ್ದ ತಾಯವ್ವನ ಸ್ವಾಭಿಮಾನ, ನಿಷ್ಠೆ ಸಮಯ ಪಾಲನೆ, ಒಬ್ಬರ ಮನೆಯ ಕುರಿತು ಮತ್ತೊಬ್ಬರ ಮನೆಯಲ್ಲಿ ಮಾತಾಡಿ ಎಂದಿಗೂ ಹರಡದ ಗಾಳಿ ಸುದ್ದಿ ಹೀಗೆ ತಾಯವ್ವನ ಕುರಿತು ಮೆಚ್ಚುಗೆಯನ್ನು ಹೇಳುತ್ತಾ ಪರಿಚಯಿಸುತ್ತಲೇ.. ನಾಲ್ಕು ವರ್ಷದ ನಂತರ ತಾಯಿ ಕರೆದರೆಂದು ತನ್ನ ತವರಿಗೆ ಹೋಗಿ ಬರುವೆನೆಂದು ಹೊರಟವಳು ಒಂದೇ ದಿನಕ್ಕೆ ವಾಪಾಸ್ ಬಂದವಳ ಮಾತುಗಳನ್ನು ಕೇಳಿ ಅವಳೊಬ್ಬ ನಿರಕ್ಷರಕುಕ್ಷಿ ಅವಳಿಗೇನು ತಿಳಿಯುತ್ತೆ ಎಂದುಕೊಂಡಿದ್ದ ತಾತ್ಸಾರ ಕರಗಿದ ಕಥೆ ನಮ್ಮನ್ನೂ ಕರಗಿಸುತ್ತದೆ. ಈ ಕಥೆ ಮಯೂರದಲ್ಲಿ ಪ್ರಕಟಿತ.


ಬಿಸಿಲುಗುದುರೆ :ಬಿಸಿಲುಗುದುರೆಯ ಬೆಂಬತ್ತಿದ್ದ, ಅದರ ಮೇಲೆಯೇ ಆಕರ್ಷಕ ಸವಾರಿ ಮಾಡುತ್ತಿದ್ದ ಲಕ್ಷ್ಮಿ ದೇಸಾಯಿಯನ್ನು ಮತ್ತೆ ಸಂಸಾರಕ್ಕೆ ಎಳೆದು ತರಲು ಪ್ರಯತ್ನಿಸುತ್ತಿದ್ದ ಕಾಂತರಾಜ ದೇಸಾಯಿ ಮಾಡದ ಪ್ರಯತ್ನಗಳಿಲ್ಲ. ಪ್ರತಿಯೊಬ್ಬರಿಂದಲೂ ಕರೆ ಮಾಡಿಸಿ, ಆಕೆಯನ್ನು ಮತ್ತೆ ಕರೆತರಲು ಪ್ರಯತ್ನಿಸುತ್ತಿದ್ದರು. ಆದರೆ, ಅವರ ಬದುಕನ್ನು ಅವರೇ ಕಟ್ಟಿಕೊಳ್ಳುವ ಬೇರೆ ಪ್ರಯತ್ನ ಮಾಡುವ ಸಲಹೆ ಬಂದಿದ್ದೇಕೆ..? ಸ್ವಚ್ಛಂದವಾಗಿ ಹಾರುವ ಲಕ್ಷ್ಮಿಯ ಬದುಕು ಇಲ್ಲಿ ಎಷ್ಟು ಸೂಕ್ತ..? ಪಂಜರದ ಪಕ್ಷಿಯಾಗಲು ಒಪ್ಪದ ಲಕ್ಷ್ಮಿ ತನ್ನ ಬದುಕನ್ನು ತೆರೆದಿಟ್ಟಿದ್ದೇಗೆ..? 


ಮನೆ : ತಾನು ಮನೆ ಕಟ್ಟಿಸಲು ಕಡಿಮೆ ಬಿದ್ದ ಹಣಕ್ಕಾಗಿ ತನ್ನ ತಂದೆ ಕಟ್ಟಿಸಿದ ಮನೆಯನ್ನು ಮಾರಲು ಸಿದ್ದನಾದ ಅಣ್ಣನಿಗೆ ತಂಗಿ ಮಾಡಿಸಿದ ಜ್ಞಾನೋದಯವೇನು..? ಅಣ್ಣ-ತಂಗಿಯರ ಬಾಂಧವ್ಯ ಹೀಗಿದ್ದರೆ ಎಷ್ಟು ಚಂದವಲ್ಲವೇ ಎನ್ನಿಸಿತು.


ಚಿಂಟೂ : ಇದು ವೈಜ್ಞಾನಿಕ ಕಥೆ. ಸುಕನ್ಯಾ ಮತ್ತು ಶಿವಾನಂದರ ಅನ್ಯೋನ್ಯ ದಾಂಪತ್ಯಕ್ಕೆ ಪುಟ್ಟಿ ಇದ್ದರೂ... ಅನಾಥನಾಗಿದ್ದ ಚಿಂಟುವೇ ತನ್ನ ಮಗನೆಂಬಷ್ಟು ಪ್ರೀತಿ ತೋರಿಸಿದಳು ಸುಕನ್ಯ. ಆದರೆ ಬದಲಾದ ಚಿಂಟುವಿನ ನಡೆ-ನುಡಿ, ಸಿಡಿಮಿಡಿಯನ್ನು ಎಷ್ಟು ಸಹನೆಯಿಂದ ತಿದ್ದಲು ಹೋದರೂ ಆಗುತ್ತಿರಲಿಲ್ಲ. ಪ್ರೊಫೆಸರ್ ಶಿವಾನಂದ್ ಹಾಗೂ ಚಿಂಟು ಇಬ್ಬರೂ ಸರಿ ರಾತ್ರಿಯಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು, ಕೆಲಸವನ್ನು ತಿಳಿಯಲು ಹೊರಟವಳು ಸಿಕ್ಕಿಬಿದ್ದದ್ದೆಲ್ಲಿ.? ರಾಜಶೇಖರ ಭೂಸನೂರು ಮಠ ಅವರ ವೈಜ್ಞಾನಿಕ ಕಥಾ ಶಿಬಿರದಲ್ಲಿ ಬರೆದ ಕಥೆ ಇದು.


ನಿರಂತರ...!? : ಹೆಣ್ಣಿನ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಲೇ ಬರುತ್ತಿರುತ್ತದೆ. ಕೆಲವರು ಸಿಡಿದು ನಿಂತರೆ ಕೆಲವರು ಅದನ್ನು ಸಹಿಸಿಕೊಂಡು ಸಾಗುತ್ತಾರೆ. ತಿದ್ದುವ ಪ್ರಯತ್ನ ಮಾಡುವವರು ಕೆಲವರು. ಮೀರಾ ಇಲ್ಲಿ ಅಂತಹ ಗುಂಪಿಗೆ ಸೇರುತ್ತಾಳೆ. ಗಂಡು ಎಂದು ಆತ ಏನೇ ಮಾಡಿದರು ಸರಿ ಎಂದು ಪರವಹಿಸುತ್ತಿದ್ದ ಅತ್ತೆ ಹಾಗೂ ಸೋಮಾರಿಯಾಗಿ ಹೆಂಡತಿಯ ದುಡಿಮೆಯ ಜೊತೆಗೆ ಸರ್ವಾಧಿಕಾರ ತೋರುತ್ತಿದ್ದ ಮುಕುಂದನನ್ನು ಆಕೆ ಯಾವ ರೀತಿ ಸರಿ ದಾರಿಗೆ ತರುತ್ತಾಳೆ..? ಇದೆಲ್ಲದರ ಜೊತೆಗೆ ಹಲವಾರು ಹೆಣ್ಣುಮಕ್ಕಳ ವಿವಿಧ ಅನುಭವಗಳನ್ನು ಕಾಣಬಹುದಾಗಿದೆ.


ಸಾಕ್ಷಿಯಾದವರು... : ಸುಬ್ರಾಯರ ಕಾದಂಬರಿ ಓದಿ, ಬದಲಾಗಿ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದ ಮಂಗಳ ಹಾಗೂ ರಾಧಾರನ್ನು ಗೆಳತಿ ವಿಜಯ ಮನೆಯ ತನ್ನ ಮನೆಯ ಗೃಹಪ್ರವೇಶದಲ್ಲಿ ಅವರಿಗೆ ಪರಿಚಯಿಸಿದ್ದಳು. ಅವರ ನಿಜ ಜೀವನಕ್ಕೂ ಬರಹಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅದರ ಬದುಕಿನ ಕಥೆ ಸುಖಾಂತ್ಯವಾದದಕ್ಕೆ ಸಾಕ್ಷಿಯಾದವರ ನೋಟವನ್ನು ನಾವಿಲ್ಲಿ ಕಾಣಬಹುದು.


ಬದುಕ ಭಿತ್ತಿಯ ಚಿತ್ರ ಕಥಾ ಸಂಕಲನದಲ್ಲಿ ಹಲವಾರು ರೀತಿಯ ಬದುಕುಗಳು ಕಾಣಸಿಗುತ್ತವೆ. ಹೆಣ್ಣು ಮಕ್ಕಳ ಬದಲಾದ ದಿನಗಳು, ಬದಲಾದ ಆಲೋಚನೆ, ನಡೆಗಳು ಅವರ ದಿಟ್ಟ ನಿಲುವುಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬಹುದು. ಹಾಗೆಂದು.. ಎಲ್ಲಾ ನಡೆಗಳನ್ನೂ ಸಮರ್ಥಿಸುವುದಿಲ್ಲ. ಹಲವಾರು ಬದುಕಿನ ಹಲವಾರು ಮಗ್ಗುಲುಗಳು ತೆರೆದುಕೊಂಡಿವೆ ಇಲ್ಲಿ. 

~ ವಿಭಾ ವಿಶ್ವನಾಥ್

ಬ್ಲಡ್ ಮನಿ (ಪುಸ್ತಕ ಯಾನ - 473)


ಪುಸ್ತಕದ ಶೀರ್ಷಿಕೆ : ಬ್ಲಡ್ ಮನಿ

ಲೇಖಕರು : ಗೀತಾ ಕುಂದಾಪುರ

ಪ್ರಕಾಶಕರು : ತೇಜು ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2025

ಪುಟಗಳು : 150

ಬೆಲೆ : 160 ರೂ.


'ಬ್ಲಡ್ ಮನಿ' ಗೀತಾ ಕುಂದಾಪುರ ಅವರ ಐದನೇ ಕಥಾ ಸಂಕಲನ ಹಾಗೂ ಒಂಬತ್ತನೇ ಕೃತಿ. ಇದರಲ್ಲಿ 18 ಚಂದದ ಕಥೆಗಳಿವೆ. ಪ್ರತಿ ಕಥೆಯಲ್ಲಿಯೂ ಒಂದಲ್ಲಾ ಒಂದು ವಿಶೇಷಗಳಿವೆ. 

'ಕಾಫಿ ಡೇಟ್' ಕತೆ ವಿಜಯ ಕರ್ನಾಟಕ-ವೀರಲೋಕದ ದೀಪಾವಳಿ ಕಥೆಯ ಟಾಪ್ 25 ಕಥೆಗಳಲ್ಲೊಂದು. 'ಮನಸ್ಸು ಮಾಯಾಂಗನೆ' ಕಥೆಗೆ ಬೃಂದಾವನ ಕನ್ನಡ ಕೂಟ ನ್ಯೂಜರ್ಸಿ ಅವರ 'ಬೃಂದಾವನ ವಿಶಂತಿ ವೈಭವ-2024' ಕಥಾಸ್ಪರ್ಧೆಯ ಬಹುಮಾನ ಸಿಕ್ಕಿದೆ. 'ಜೋಡಿ ಕಣ್ಣುಗಳು' ವಾಣಿ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದ್ದರೆ.. 'ದೇವಿಕಾ' ಕಥೆ ಗುರುಕುಲ ಕಲಾ ಪ್ರತಿಷ್ಠಾನದ ಸಣ್ಣ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಹಲವು ಕಥೆಗಳು ಮಂಗಳೂರು ಹಾಗೂ ಕುಂದಾಪುರ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.


ಕಾಫಿ ಡೇಟ್: ಇಂದಿನ ಯುವ ಜನಾಂಗದ ಪ್ರಸ್ತುತ ಚಿತ್ರಣ ಇಲ್ಲಿದೆ. ಸಂಬಂಧಗಳ ಸ್ವರೂಪವನ್ನು ನಿರ್ಧರಿಸುವಾಗ ಇಂದಿನ ದಿನಗಳಲ್ಲಿಯೂ ತಮ್ಮ ಗತದ ದಿನಗಳನ್ನು ಗಂಡು ಬಿಚ್ಚಿಡುವಷ್ಟೇ ಸಾರಾಗವಾಗಿ ಹೆಣ್ಣು ಬಿಚ್ಚಿಟ್ಟರೆ ಅದನ್ನು ಎಷ್ಟು ಸುಲಭವಾಗಿ ಒಪ್ಪಬಲ್ಲ ಆತ..? ಸಾಕ್ಷಿಗೆ ಈಶಾನ್ ನ ಇತಿಹಾಸದ ಕುರಿತು ಅಷ್ಟು ಆಸಕ್ತಿ ಇರಲಿಲ್ಲ. ಇತಿಹಾಸದ ಪೋಸ್ಟ್ ಮಾರ್ಟಂ ಮಾಡಿದ ಅವರಿಬ್ಬರ ಕಾಫಿ ಡೇಟ್ ಮುಂದೆ ಅವರಿಬ್ಬರನ್ನು ಯಾವ ನಿರ್ಧಾರ ತಳೆಯುವಂತೆ ಮಾಡಿತು..?


ಬ್ಲಡ್ ಮನಿ: ಕೆಲ ದಿನಗಳ ಹಿಂದೆ ನರ್ಸ್ ನಿಮಿಷ ಪ್ರಿಯಳ ಸಂಗತಿ ಓದಿದ್ದಾಗ ನನಗೆ ಮೊದಲು ನೆನಪಾಗಿದ್ದು ಈ ಕಥಾ ಸಂಕಲನದ ಶೀರ್ಷಿಕೆ. ಶೀರ್ಷಿಕೆ ನನಗೆ ಬಹಳ ಕುತೂಹಲ ಮೂಡಿಸಿತು. ದಮಾಮ್ ನಲ್ಲಿದ್ದ ಪ್ರಜ್ವಲನನ್ನು ಸೇರಲು ಹೊರಟ ಶೀಲಾಳ ಕಥೆ ಮುಂದೆ ರಕ್ತಕ್ಕೆ ರಕ್ತ ಇಲ್ಲವೇ ಬ್ಲಡ್ ಮನಿ ಎನ್ನುವ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿದ್ದು ಹೇಗೆ..? ಕುತೂಹಲಕರವಾಗಿ ಹೊಸ ವಿಚಾರವೊಂದು ತೆರೆದುಕೊಳ್ಳುತ್ತದೆ. ಕಾನೂನಿನ ದುರುಪಯೋಗವನ್ನು ಹೇಗೆಲ್ಲಾ ಪಡೆಯುತ್ತಾರೆ ಎಂದು ಹೇಳುವ ಕಥೆ ಇಲ್ಲಿದೆ.


ಬ್ಯಾಂಡ್, ಬಾಜಾ, ಬಾರಾತ್: ಅವನಿ ರೆಸಾರ್ಟ್ ನಲ್ಲಿ 'ಅಲಕಾ ವೆಡ್ಸ್ ಆಕಾಶ್' ಮದುವೆಯ ಸಂಭ್ರಮದಲ್ಲಿಯೇ ಅಂದು ಮತ್ತೊಂದು ಮದುವೆಯೂ ಆಗಿತ್ತು. ಆದರೆ, ಎರಡು ವಿವಾಹಗಳೂ ವಿರುದ್ಧ ಧ್ರುವಗಳಂತೆ ಎಂದರೂ ತಪ್ಪಾಗಲಾರದು. ಅಲಕಾ ಹೇಳುವಂತೆ "ದಾಂಪತ್ಯಕ್ಕೆ ಬೇಕಾಗಿರುವುದು ಪರಸ್ಪರ ಪ್ರೀತಿ,ಗೌರವ ಜೊತೆಗೆ ...." ಮತ್ತೇನು..? 


ಸಿಹಿ-ಕಹಿ: ಪಾಂಡುರಂಗ ಕಮ್ತಿಯವರ 60 ರ ಶಾಂತಿಯ ಚಿತ್ರಣದಲ್ಲಿ ಅವರ ಸಕ್ಕರೆ ಕಾಯಿಲೆಯ ಜೊತೆಗೆ ಅವರ ಬದುಕಿನ ಸಿಹಿ -ಹಿ ಪ್ರಸಂಗಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಕೆಲವೊಮ್ಮೆ ನಾವು ಸಿಹಿಯ ವಿಚಾರದಲ್ಲಿ ತುಸು ಹೆಚ್ಚೇ ಸ್ಟ್ರಿಕ್ಟ್ ಆದೆವು ಎಂದು ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದಾ..? ಇಲ್ಲಿ ಸಿಹಿ ಹೆಚ್ಚೋ ಕಹಿ ಹೆಚ್ಚೋ ಓದಿ ನೋಡಿ.


ಮೂಗೂರಿನ ಮೂಗರು: ನನಗೆ ಬಹಳ ಇಷ್ಟವಾದ ಕಥೆ ಇದು. ಜಿಂಕೆಗಳು ಬಾರದಂತೆ ತಡೆಯಲು ಲಕ್ಷ್ಮಿಯ ನೈಲಾನ್ ಸೀರೆಯ ಪರದೆಗಳು ಹರಿದಿದ್ದವು. ಭಾಸ್ಕರನ ಕೃಷಿ ಬದುಕಿನ ಬವಣೆಯ ಜೊತೆಗೆ ಆತ ತನ್ನೊಡನಿರುವ ಜೀವಗಳಿಗೆ ಇಟ್ಟಿರುವ ಹೆಸರುಗಳು ಸೆಳೆಯುತ್ತವೆ. ಸದ್ದಾಮ, ಪುಟಿನ್, ಶ್ರೀದೇವಿ, ರಾಣಿ ಪದ್ಮಿನಿ ಹೀಗೆ. ಇದರೊಡನೆ ಜೊತೆಯಾದ ಶೇಖಾಮೌಸಾ. ಈ ಹೆಸರಿಗೆ ಕಾರಣ ಕಂಡುಹಿಡಿದ ಮಗ, ಆಟಿಸಂನ ಪುಟ್ಟಿ ಚುರುಕಾದ ಬಗೆ.. ಬ್ಯಾಂಕ್ ಮ್ಯಾನೇಜರ್ ಬಂದು ಹೋದ ನಂತರ ಹರಡಿದ ಸುದ್ದಿ.. ಕಷ್ಟಗಳಲ್ಲಿ ನೆರಳುತ್ತಿದ್ದ ಕುಟುಂಬಕ್ಕೆ ಶೇಖಾಮೌಸಾ ದಾರಿ ತೋರಿದ ಬಗೆ ಹೇಗೆ..? ನಿಮಗೆ ಶೇಖಾಮೌಸಾ ಯಾರೆಂದು ತಿಳಿಯಿತೇ..? ಇಲ್ಲವಾದಲ್ಲಿ ಕಥೆ ಓದಿ.


ಬಿಲದೊಳಗಿನ ಬದುಕು: ಸುವರ್ಣಳ ಕಣ್ಣಿಗೆ ಬಿದ್ದ ಬಾಲದಿಂದ ಅದು ಹಾವು ಇರಬಹುದೇ ಎನ್ನುವ ಊಹೆಯಲ್ಲಿ ಹುಡುಕಲು ಹೊರಟಾಗ ನಿಜಕ್ಕೂ ಸಿಕ್ಕದ್ದು ಕಾಳಿಂಗನ ದರ್ಶನ. ಮನೆಯ ಪರಿಸ್ಥಿತಿಯೇ ಬುಡಮೇಲಾಗಿ ಮುಂದೇನು ಗತಿ ಎನ್ನುವಾಗ ಬಿಲದೊಳಗೆ ಹೊಕ್ಕ ಕಾಳಿಂಗನ ದಯೆ ಹೇಗಿತ್ತು..? ಓದಿ ನೋಡಿ.


ಮನಸು ಮಾಯಾಂಗನೆ: ಮೃದುಲಾ ಹಾಗೂ ಶ್ರೀಕಾಂತ್ ಮಗಳ ಮನೆಗೆ ಹೋಗಿ ಅವಳ ಬಾಣಂತನ ಮುಗಿಸಿ ಕ್ಯಾಲಿಫೋರ್ನಿಯಾದಿಂದ ಬಂದ ನಂತರ ಮೃದುಲಾ ತರಕಾರಿ ತರಲು ಹೋಗಿ ಮಾರ್ಕೆಟ್ ನಿಂದ ಕಾಣೆಯಾಗಿದ್ದಳು. 36 ವರ್ಷಗಳ ದಾಂಪತ್ಯದಲ್ಲಿ ಅವರಿಬ್ಬರ ಅನ್ಯೋನ್ಯತೆ ಹೇಗಿತ್ತು..? ಆಸ್ಟ್ರೇಲಿಯಾದಲ್ಲಿದ್ದ ಮಗ ಹಾಗೂ ಕ್ಯಾಲಿಫೋರ್ನಿಯಾದಲ್ಲಿದ್ದ ಮಗಳು ಅಮ್ಮನ ಕಣ್ಮರೆಗೆ ಸ್ಪಂದಿಸಿದ ಬಗೆ ಹೇಗೆ..? ಮೃದುಲಾ ಸ್ಥಿತಿಗೆ ಕಾರಣರು ಯಾರು..? ಶ್ರೀಕಾಂತ್ ನಿಗೆ ಮೃದುಲ ಸಿಕ್ಕ ಮುನ್ನಿನ ಬವಣೆ ಹೇಗಿತ್ತು..? ಇಲ್ಲಿ ಪ್ರತಿಯೊಬ್ಬರ ಮನಸ್ಸಿನ ಮಾತುಗಳ ಸ್ಪಷ್ಟ ಚಿತ್ರಣವಿದೆ.


ಮನೆಗೆ ಬಂದ ಗುಡ್ಡ: ಪುಟ್ಟ-ಪುಟ್ಟ ಎರಡು ಕೋಡು ಮೂಡಿದ್ದ ಗುಡ್ಡ ಮನೆಗೆ ಬಂದದ್ದು ಹಾಗೂ ಮನೆಯಿಂದ ಹೊರಟದ್ದು ಎರಡು ಅನಿರೀಕ್ಷಿತವೇ. ಆದರೆ.. ಈ ನಡುವೆ ಗುಡ್ಡನ ದೆಸೆಯಿಂದ ಪವಾಡವೇ ಆಯಿತೆನ್ನಬಹುದು. ಕಾವೇರಿಯ ಮನೆಗೆ ಬಂದ ಗುಡ್ಡನ ಕಥೆ ಇಲ್ಲಿದೆ.


ಆ ಜೋಡಿ ಕಣ್ಣುಗಳು: ಜೀವನೋತ್ಸಾಹವನ್ನೇ ತುಂಬಿಕೊಂಡಿದ್ದ ಎಲ್ಲರಿಗೂ ಅರ್ಥವಾಗುತ್ತಿದ್ದ ಮಾಧುರಿ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾಗ ಮನೆಯವರು ತೆಗೆದುಕೊಂಡ ನಿರ್ಧಾರಗಳು.. ಸೊಸೆ ಅಲಕಾಳ ಕುರಿತು ಎದ್ದ ಗಾಳಿಸುದ್ದಿಗಳು, ಮಾಧುರಿಯ ಅಂಗಾಂಗ ದಾನ ಮಾಡಿದ ನಂತರ ಜೋಡಿ ಕಣ್ಣುಗಳನ್ನು ಮಾತ್ರ ಪತಿ ಶ್ರೀಕಾಂತ್ ಅರಸಿ ಹೊರಟದ್ದೇಕೆ..? ಅಂತ್ಯದಲ್ಲಿ ಅಲಕಾಳ ದಿಟ್ಟ ನಿರ್ಧಾರ ಇಲ್ಲಿ ಆಪ್ತವಾಗುತ್ತದೆ.


ಗಿರ್ಗಿಟ್ಲಿ: ವಕೀಲ ಸೋಮಣ್ಣನ ಮಗ ಅವನಂತೆ ವಕೀಲನಾಗಲಿಲ್ಲ. ಅಂತೆಯೇ ಕಾಯಿ ಕೆಡವುವ ಸೀನನ ಮಗ ಅವನಂತಾಗದೆ ವಕೀಲನಾದ. ಮೊದಮೊದಲಿಗೆ ಸೀನನ ಮಗ ಅಶೋಕನ ಕುರಿತು ಹೆಮ್ಮೆಯಾದರೆ, ಸೋಮಣ್ಣ ಅದುವರೆಗೂ ಅವರು ಹಳಿಯುತ್ತಿದ್ದ ಮಗ ಸೂರಜ್ ಕುರಿತು ಹೆಮ್ಮೆಯಾಗುವ ಕಥೆ ಇಲ್ಲಿದೆ. ಗಿರ್ಗಿಟ್ಲಿಯಂತಹ ಬದುಕಿನ ಚಿತ್ರಣ ಇಲ್ಲಿದೆ.


ಸ್ವಾರ್ಥ-ನಿಸ್ವಾರ್ಥ: ಮೊದಮೊದಲು ಬಾಂಧವ್ಯದಿಂದಲೇ ಇದ್ದ ತಂಗಿ ಆಶಾ ಹಾಗೂ ತನ್ನ ಬಾಂಧವ್ಯ ದೂರಾಗುತ್ತಿರುವ ಕುರಿತು ಹುಟ್ಟಿದ ಆಲೋಚನೆಯ ಜೊತೆಯಲ್ಲೇ.. ಪಕ್ಕದಲ್ಲಿ ಶೆಡ್ಡಿನಲ್ಲಿದ್ದ ವಸಂತಳ ಬದುಕು, ನಂತರ ಅವಳ ತಂಗಿ ಜೊತೆಯಾಗಿ ಅವರ ಬದುಕಿನ ಬಂಡಿ ಸಾಗುವಾಗ ಆದ ಜ್ಞಾನೋದಯ, ಸಂಬಂಧಗಳ ಸ್ವಾರ್ಥ-ನಿಸ್ವಾರ್ಥತೆಯ ಜೊತೆಗೆ ಮನಸ್ಸು ಅವುಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎಂಬುದರ ಚಿತ್ರಣವು ಇಲ್ಲಿದೆ.


ಮುಸ್ಸಂಜೆಯಲ್ಲರಳಿದ ಪ್ರೀತಿ: ಶಾಂತಿವನದಲ್ಲಿ ಎಲ್ಲರೂ ತಮ್ಮ ಮುಸ್ಸಂಜೆಯ ಬದುಕನ್ನು ಕಳೆಯುತ್ತಿರುವಾಗ ಸದಾನಂದ ಹಾಗೂ ಮೀರಾರ ಕುರಿತಾಗಿ ಎದ್ದ ಗಾಳಿಸುದ್ದಿಯೇ ನಿಜವಾಯಿತು ಎನ್ನುವಷ್ಟರಲ್ಲಿ.. ಸದಾನಂದನ ಮನೆಯವರ ಪ್ರವೇಶವಾಗುತ್ತದೆ. ಮೀರಾಳ ಹಿಂದಿನ ಬದುಕು ಗೊತ್ತಿದ್ದ ಸದಾನಂದ ತಳೆಯುವ ನಿರ್ಧಾರವೇನು..? ಮುಸ್ಸಂಜೆಯ ಈ ಪ್ರೀತಿ ಅರಳಿದ ಬಗೆ ಇಲ್ಲಿದೆ.


ಬಾಬಕ್ಕ: ಎಲ್ಲರಿಗೂ ಬೇಕಾಗಿದ್ದ ಬಾಬಕ್ಕ, ಅವಳ ಕಾಫಿ ಪ್ರೀತಿ, ಸಾಂತಾವರದ ಜನ ಅವಳನ್ನು ಆದರಿಸಿದ ಬಗೆ ಹೀಗೆ ಕಥೆ ಸಾಗುತ್ತಿರುವಾಗಲೇ ಎಲ್ಲರೂ ಸಾಮೂಹಿಕವಾಗಿ ಅವಳನ್ನು ಬಹಿಷ್ಕರಿಸಿದಂತೆ ಒಬ್ಬಂಟಿಯಾಗಿದ್ದ ಬಾಬಕ್ಕನ ಬದುಕಿನಲ್ಲಿ ಬಂದ ಆಶಾಕಿರಣವೇನು..? ಅಷ್ಟಕ್ಕೂ ಎಲ್ಲರೂ ಆಕೆಯನ್ನು ದೂರಾಗಿಸಿದ್ದೇಕೆ..? ಎಷ್ಟೇ ಉಪಕಾರ ಮಾಡಿದರೂ ಅವಶ್ಯಕತೆ ಮುಗಿದ ನಂತರ ಮನುಷ್ಯನನ್ನು ಯಾವ ರೀತಿ ಕಾಣುತ್ತಾರೆ ಎನ್ನುವ ಕಟು ವಾಸ್ತವದ ಚಿತ್ರಣವೂ ಇಲ್ಲಿದೆ.


ಮೂರು ಹೆಜ್ಜೆಗಳು: ಈ ಕಥೆಯ ಕುರಿತು ಹೆಚ್ಚು ತೆರೆದಿಡಲಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ವರ್ಗಕ್ಕೂ ಹೊಂದಿಕೆಯಾಗುವ ಈ ಕಥೆಯಲ್ಲಿ ಮೂರು ಹೆಜ್ಜೆಗಳು ಕಾಣುತ್ತವೆ.


ಬದುಕು ಬಯಲಾದಾಗ: ಮಶೀನಿಗೆ ಸಿಕ್ಕ ದಾರದ ಸಿಕ್ಕನ್ನು ಬಿಡಿಸುವಂತೆ ತನ್ನ ಸಿಕ್ಕುಗಳು ಬಿಡಿಸುವಂತಾಗಿದ್ದರೆ..! ಎಂದು ಆಲೋಚಿಸುತ್ತಿದ್ದ ಸುರೇಖಳಿಗೆ ಈಗ ತವರಿನ ಆಸರೆ ಇಲ್ಲ. ಪ್ರೀತಿಸಿದ ಗಂಡ ಮಗ ಜೊತೆಗಿಲ್ಲ. ಸಾಧಾರಣ ಬದುಕಿಗೆ ಕಷ್ಟಪಡುತ್ತಿದ್ದ ಅವಳ ಜೊತೆಗಿದ್ದದ್ದು ಯಾರದ್ದೋ ತಪ್ಪಿಗೆ ಕಣ್ಣು ಕಳೆದುಕೊಂಡ ಮಗಳು ಶ್ವೇತ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಶ್ವೇತಳ ಭವಿಷ್ಯದ ಭವ್ಯ ಬದುಕನ್ನು ಕಟ್ಟಿಕೊಡುವ ತಾಯಿ ಸುರೇಖಳ ಬದುಕನ್ನು ಕಾಣಬಹುದು. ನತದೃಷ್ಟೆ ಎಂದುಕೊಂಡಳ ಬದುಕು ಅದೃಷ್ಟದ ಹಾದಿ ಹಿಡಿದ ಕಥನ ಇಲ್ಲಿದೆ.


ಸುವರ್ಣ ರೇಖೆ: ಅನಕ್ಷರಸ್ಥಳಾದ ತಾಯಿ ಸರಸೋತಿಗೆ ವಿದೈಯ ಮಹತ್ವ ಅರಿವಿರಲಿಲ್ಲ. ಗಂಗಾ, ಗೌರಿ, ಗಾಯತ್ರಿ ಎನ್ನುವ ಮೂವರು ಹೆಣ್ಣು ಮಕ್ಕಳು. ಪೌರಕಾರ್ಮಿಕಳಾಗಿ ಕೆಲಸಕ್ಕೆ ಸೇರುವ ಗೌರಿ ಅನುಭವಿಸುವ ನೋವು, ಅದನ್ನು ಮೆಟ್ಟಿನಿಂತು ಇಡೀ ಕುಟುಂಬವನ್ನು ದಡ ಸೇರಿಸುವ ಕಥೆ ಇಲ್ಲಿದ್ದರೂ ಇದು ಹೂವಿನ ಹಾದಿಯಲ್ಲ. ಪೌರಕಾರ್ಮಿಕರ ಬದುಕನ್ನು ಉಳಿದವರು ನೋಡುವ ಬಗೆ ಹಾಗೂ ಅವರ ದೃಷ್ಟಿ ಎರಡರ ಚಿತ್ರಣವೂ ಇಲ್ಲಿ ಕಾಣುತ್ತದೆ. ಗಂಗಾಳಂತಹವರ ಕುರಿತಾಗಿ ಗೌರವ ಹೆಚ್ಚಾಗುತ್ತದೆ.


ದೇವಿಕಾ: ಕೆಲಸವಿಲ್ಲದೆ ತಿರುಗಾಡಿಕೊಂಡಿದ್ದ ಮಗ ಕೃಷ್ಣನಿಗೆ ದಾಮು ಬುದ್ಧಿ ಹೇಳುತ್ತಿದ್ದ. ಆದರೆ ಕೃಷ್ಣನ ಆಲೋಚನೆಯೇ ಬೇರೆ ಇತ್ತು. ಸಮುದ್ರದ ಹಿತ್ತಲಿನ ಮರಳಿನಲ್ಲಿ ನಿಂತ 'ದೇವಿಕಾ ರಾಣಿ' ಕೃಷ್ಣನ ಕೈಯಲ್ಲಿ ಸಿಲುಕಿ ಏನಾದಳು? ಸತ್ಯ ತಿಳಿದ ದಾಮುವಿನ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ.


ದೊಡ್ಮನೆ: ಎಷ್ಟೋ ಬಾರಿ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅವರಂತೆಯೇ ಆಗುವ ಆಸೆಯಾಗುತ್ತದೆ. ಒಳ್ಳೆಯ ವಿಚಾರಕ್ಕೆ ಇದು ತಪ್ಪಲ್ಲವಾದರೂ.. ಮನಸ್ಥಿತಿ ಕೆಡಿಸಿಕೊಳ್ಳುವಷ್ಟು ಪರಿಸ್ಥಿತಿ ಹದಗೆಡಬಾರದು. ಗಾಯಿತ್ರಿ ಮತ್ತೆ ಮನೆಯನ್ನು ವಿಸ್ತಾರಗೊಳಿಸುವ ಪ್ರಸ್ತಾಪವಿಟ್ಟಾಗ ಬಂದ ಖಾರವಾದ ಪ್ರತಿಕ್ರಿಯೆ ಜೊತೆಗೆ ಮುಂದಿನ ಶೆಡ್ಡಿನಲ್ಲಿ ಬದುಕುತ್ತಿದ್ದ ಸುಮಿತ್ರಾಳ ಬದುಕು ಎರಡನ್ನೂ ಕಂಡ ಗಾಯತ್ರಿಯ ಪ್ರತಿಕ್ರಿಯೆ ಏನಿತ್ತು..?


ಈ ಕಥಾ ಸಂಕಲನದಲ್ಲಿ ಸಂಭಾಷಣೆಗಳು ಪ್ರಮುಖವಾಗಿ ಸೆಳೆಯುತ್ತವೆ. ಆಯಾ ಪರಿಸರ, ವಯಸ್ಸು ಹಾಗೂ ಪರಿಸ್ಥಿತಿಗೆ ತಕ್ಕಂತಹ ಸಂಭಾಷಣೆಗಳಿವೆ. ಕಥಾವಸ್ತುಗಳು ವೈವಿಧ್ಯಮಯವಾಗಿವೆ ಜೊತೆಗೆ ಕಥಾ ಪರಿಸರ ಕಣ್ಣಿಗೆ ಕಟ್ಟುವಂತೆ ನಿರೂಪಣೆಯಿದೆ. 


"ಬದುಕಿನ ಕೊನೆಯಲ್ಲಿ ಸಾವು ನಿಶ್ಚಿತವಾದರೂ ಜೀವನ ದುಃಖಾಂತ್ಯವಾಗಬೇಕೆಂದಿಲ್ಲ ತಾನೇ? ಎಷ್ಟೇ ಕತ್ತಲಿದ್ದರೂ ಸುಖದ ಕೋಲ್ಮಿಂಚು ಬರಲು ಎಷ್ಟು ಹೊತ್ತು ಬೇಕು? ಜೀವನದ ಎಳೆಗಳೇ ಕಥೆಯ ಬೆನ್ನೆಲುಬಾದರೆ ಕಥೆಯ ಕೊನೆಯಲ್ಲಿ ಆಶಾಕಿರಣವೇಕಿರಬಾರದು ?" ಎಂಬ ಸಾಲುಗಳು 'ಬಾಬಕ್ಕ' ಕಥೆಯಲ್ಲಿವೆ. 


ಈಕೆ ಕಥೆಯ ಅಂತ್ಯಗಳೆಲ್ಲವೂ ಆಶಾಕಿರಣದಿಂದ ಕೂಡಿರುವುದು ಇಷ್ಟವಾಯಿತು. ಒಳ್ಳೆಯ ಕಥಾ ಸಂಕಲನದ ಚಂದದ ಓದು. 


~ವಿಭಾ ವಿಶ್ವನಾಥ್

ನಂದಾದೀಪ ನಗುತ್ತಿತ್ತು (ಪುಸ್ತಕ ಯಾನ - 472)


ಪುಸ್ತಕದ ಶೀರ್ಷಿಕೆ : ನಂದಾದೀಪ ನಗುತ್ತಿತ್ತು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2004

ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)


ಎಂದಿಗೂ ನಮ್ಮ ಬದುಕಿನ ರೀತಿ ನಮ್ಮದು. ಅದರಲ್ಲಿ ಸುಖ-ದುಃಖ, ನೋವು-ನಲಿವು ಏನೇ ಇದ್ದರೂ ಅದನ್ನು ನಾವೇ ಅನುಭವಿಸಬೇಕು. ಅದರ ಬದಲಾಗಿ ಬೇರೆಯವರ ಮೇಲೆ ಪೈಪೋಟಿಗಿಳಿದರೆ ನಮ್ಮ ಬದುಕಿನ ಸುಖ ಯಾವುದಕ್ಕೂ ಸಾಲದು ಎಂಬಂತೆ ಹಪಾಹಪಿಯಿಂದ ಅವರಂತಾಗಬೇಕು ಎನ್ನುವ ಓಟದಲ್ಲಿ ಇರುವುದನ್ನು ಕಳೆದುಕೊಳ್ಳುತ್ತಾ.. ನೆಮ್ಮದಿಯಿಲ್ಲದ ಬದುಕಿನತ್ತ ಸಾಗುತ್ತೇವೆ. ಇಲ್ಲಿ ಎರಡು ಸುಂದರ ಸಂಸಾರಗಳು ಹೀಗೆ ಪೈಪೋಟಿಗಿಳಿದು ತಮ್ಮ ರಕ್ತಸಂಬಂಧವನ್ನು ಮರೆತು ಒಬ್ಬರ ನಾಶಕ್ಕೆ ಒಬ್ಬರು ಪಣತೊಟ್ಟು ನಿಂತಂತೆ ಪೈಪೋಟಿಗಿಳಿದಾಗ ಮಕ್ಕಳ ಬದುಕು ಏನಾಗುತ್ತದೆ ಎಂಬ ಚಿತ್ರಣವಿದೆ. 


ಗೋಪಿನಾಥ ಹಾಗೂ ಶ್ರೀಪತಿ ಅಣ್ಣ-ತಮ್ಮಂದಿರು. ಗೋಪಿನಾಥ ಹಾಗೂ ಸರಸ್ವತಿಯ ಮಗಳು ಪುಣ್ಯಶ್ರೀ. ಶ್ರೀಪತಿ ಹಾಗೂ ಪಾರ್ವತಿಯ ಮಗಳು ಚಿನ್ಮಯಿ. ಇಬ್ಬರು ಮಕ್ಕಳು ಒಂದೇ ಓರಿಗೆಯವರು. 


ಶ್ರೀಪತಿ ಲೆಕ್ಚರರ್. ಪಾಠ ಹೇಳುವ ರೀತಿ ಚೆನ್ನಾಗಿತ್ತು. ಮಗಳು ಚಿನ್ಮಯಿ ಸಹ ಎರಡು ವರ್ಷದಿಂದ ಟ್ಯೂಷನ್ ಹೇಳಿ ಸಂಪಾದಿಸುತ್ತಿದ್ದಳು. ರೂಪವತಿ ಸಹ. ತಂದೆ-ತಾಯಿಗೆ ಹೆಮ್ಮೆಯ ಮಗಳು. 17 ವರ್ಷಗಳ ಹಿಂದೆ ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯಲ್ಲಿಯೇ ಅವರ ಬದುಕು ನೆಮ್ಮದಿಯಾಗಿಯೇ ಸಾಗುತ್ತಿತ್ತು. ಒಂದು ಪತ್ರ ಬರುವವರೆಗೂ...


ಸರಸ್ವತಿಯ ಮನೆಯಲ್ಲಿ ಶ್ರೀಮಂತಿಕೆಯಿತ್ತು. ತಂದೆ-ತಾಯಿಯಿಂದ ಬಂದ ಆಸ್ತಿಯಿಂದಾಗಿ ಅದರೊಡನೆ ಅಹಂಕಾರವೂ ಬೆರೆತಿತ್ತು. ಮಗಳು ಪುಣ್ಯಶ್ರೀ ಸಹ ಅಂತಹದ್ದೇ ನಡವಳಿಕೆಯನ್ನು ರೂಪಿಸಿಕೊಂಡಿದ್ದಳು. ಅಷ್ಟೇನೂ ರೂಪವತಿಯೂ ಅಲ್ಲದ, ನವನವೀನ ರೀತಿಯ ಹುಡುಗಿ ಅಲಂಕಾರಕ್ಕೆ ಅಪ್ಪಿಕೊಂಡಿದ್ದವಳು.


ಶ್ರೀಪತಿ ಗೋಪಿನಾಥರ ಮೂರು ಅಕ್ಕಂದಿರಲ್ಲಿ ಮೂರನೇ ಅಕ್ಕನಿಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಮೊದಲನೆಯ ಅವನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶ್ರೀಕಾಂತ್. ಪಾರ್ವತಿಗೆ ಆತನಿಗೆ ತನ್ನ ಮಗಳನ್ನು ಕೊಡುವ ಆಸೆ. ಆದರೆ, ಕಾವೇರಮ್ಮನಿಗೆ ಪುಣ್ಯಶ್ರೀಯನ್ನು ತಂದುಕೊಳ್ಳುವ ಆಸೆ. ಹಾಗೆಂದು ಬಾಯಿಬಿಟ್ಟು ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರು. 


ಪುಣ್ಯಶ್ರೀ (ಪುನ್ನಿ) ಹಾಗೂ ಶ್ರೀಕಾಂತನ ಲಗ್ನ ಪತ್ರಿಕೆಗೆ ಬರಬೇಕೆಂದು.. ಜೊತೆಗೆ ಚಿನ್ನಿಯನ್ನು ಕಾವೇರಮ್ಮನ ಎರಡನೇ ಮಗನಿಗೆ ಗಂಟು ಹಾಕಲು ಮಾಡಿದ ಪ್ರಸ್ತಾಪವನ್ನು ನೋಡಿ ಪಾರ್ವತಿ ಕುದಿದು ಹೋದಳು. ತನ್ನ ನಾಲ್ಕನೇ ತಂಗಿ ಸಾವಿತ್ರಿ ಮನೆಗೆ ಹೋಗಿ ಬರುವಾಗ ಡಾಕ್ಟರ್ ವರನ ಪ್ರಸ್ತಾಪ ತಂದಿದ್ದಳು. 


ದೊಡ್ಡಮ್ಮನ ಮೇಲಿನ ಹಠಕ್ಕೆ ಹಿಂದೆ-ಮುಂದೆ ವಿಚಾರಿಸದೆ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡವೆಂದು ಚಿನ್ನಿ ಹೇಳಿದರೂ.. ಡಾಕ್ಟರ್ ವರನ ರೂಪ, ಅಂತಸ್ತು ದಂಪತಿಗಳಿಬ್ಬರನ್ನೂ ಕನಸು ಕಾಣುವಂತೆ ಮಾಡಿತ್ತು. ಹತ್ತು ವರ್ಷಗಳ ಅಂತರವಿದ್ದರೂ ಆತನ ಜೊತೆ ಮಾತನಾಡಿದ ಚಿನ್ಮಯಿ ಡಾಕ್ಟರ್ ಭಾಸ್ಕರ್ ಜೊತೆಗೆ ಮಾತನಾಡಿದ ನಂತರ ಪರಸ್ಪರ ಒಪ್ಪಿ ವಿಜೃಂಭಣೆಯಿಂದ ಲಗ್ನಪತ್ರಿಕೆಯೂ ಆಯಿತು. 


ಕಾವೇರಮ್ಮ ಹಾಗೂ ಸರಸ್ವತಿ ಇಬ್ಬರೂ ಪಾರ್ವತಿಯನ್ನು ತಾವು ಸೋಲಿಸಿದ್ದೇವೆ ಎನ್ನುವ ಅಹಂಕಾರದಲ್ಲಿರುವಾಗ ಪಾರ್ವತಿ ಬಂದಿದ್ದಾಯ್ತು. ಆದರೆ, ಅಷ್ಟರಲ್ಲಾಗಲಿ ಶ್ರೀಕಾಂತ್ ಹಾಗೂ ಪುಣ್ಯಶ್ರೀಯರಲ್ಲಿ ಮನಸ್ತಾಪವಾಗಿತ್ತು. ಅವರಿರಲು ಬಾಡಿಗೆ ಮನೆಯ ಅಡ್ವಾನ್ಸ್, ಕಂಪನಿ ಹೊಡಲು ಕೊಟ್ಟ 20 ಲಕ್ಷ ಹಣ, ಅತ್ತೆಗೆ ಹಣ ಕೊಡುತ್ತಿದ್ದ ವಿಚಾರ ತಿಳಿದು ಪುಣ್ಯಶ್ರೀ ತಗ್ಗಿ-ಬಗ್ಗಿ ನಡೆಯಲು ಸಿದ್ಧವಿರಲಿಲ್ಲ. ಅದರ ಜೊತೆಗೆ ಪಾರ್ವತಿ ತನ್ನ ಮಗಳ, ಡಾಕ್ಟರ್ ಅಳಿಯನ ಲಗ್ನ ಪತ್ರಿಕೆಯ ವಿಡಿಯೋ ತೋರಿಸಿದ್ದು ಮತ್ತಷ್ಟು ಮನಸ್ಸು ಕೆರಳಿಸಿತು. ಅಲ್ಲಿ ಸಂತಸ ಪಟ್ಟವರು ಗೋಪಿನಾಥ್ ಒಬ್ಬರೇ.. ಪಾರ್ವತಿ ಹೇಳಿದ ಯಾವುದೋ ಮಾತಿಗೆ ಕೆರಳಿದ ಪುಣ್ಯಶ್ರೀ ಶ್ರೀಕಾಂತನ ಮೇಲೆ ಸಾಕಷ್ಟು ಕೋಪ ತೋರಿದಳು. ಅಲ್ಲಿಗೆ ಅವನ ಅವಳ ಲಗ್ನಪತ್ರಿಕೆ ಮುರಿದುಬಿದ್ದು.. ಅವನ ತಮ್ಮ ಟೀಚರ್ ಆಗಿದ್ದ, ಕಪ್ಪಗಿದ್ದ, ಕುಳ್ಳ ಶ್ರೀವತ್ಸನ ಜೊತೆಗೆ ಆಯಿತು. ಅದಕ್ಕೆ ಕಾರಣವೂ ಇತ್ತು. ಸರಸ್ವತಿಗೆ ತನ್ನ ಮಗಳ ಮೇಲಿದ್ದ ಅಪನಂಬಿಕೆ. ಹೀಗಾಗಿ ತರಾತುರಿಯಲ್ಲಿಯೇ ಲಗ್ನಪತ್ರಿಕೆ ನಿಶ್ಚಯವಾದರೂ.. ಮತ್ತೆ ಪುಣ್ಯಶ್ರೀ ಅವನಿಗೆ ಮನಸೋಲದೆ ಶ್ರೀಕಾಂತನಿಗೆ ಪತ್ರ ಬರೆದರೂ ಸಂಧಾನ ಫಲಿಸಲಿಲ್ಲ. 


ಈ ನಡುವೆ ಪುಣ್ಯಶ್ರೀ ತನ್ನ ದುರ್ಬುದ್ಧಿಯಿಂದ ಚಿನ್ನಿಯ ಮದುವೆ ಕೆಡಿಸಲು ಪ್ರಯತ್ನ ಮಾಡುತ್ತಾಳೆ. ಆ ಪ್ರಯತ್ನವೇನು..? ಅದು ಫಲ ಕೊಟ್ಟಿತೇ..? 


ಶ್ರೀಕಾಂತ್ ತಾನು ಮನಸಾರೆ ಪ್ರೀತಿಸಿರುವ ತನ್ನ ಗೆಳತಿ ಮನೋಹರಿಯನ್ನು ವಿವಾಹವಾಗಿರುವುದಾಗಿ ಪತ್ರ ಬರೆಯುತ್ತಾನೆ. 


ಚಿನ್ನಿ ಡಾಕ್ಟರ್ ಇವರನೊಂದಿಗೆ ಮದುವೆ ತಪ್ಪಿ ಹೋಯಿತೆಂದು, ಬೇರೆಯವನನ್ನು ವಿವಾಹವಾಗುತ್ತಿರುವ ವಿಚಾರ ಕೇಳಿ ಸಂತಸ ಪಟ್ಟ ಪುಣ್ಯಶ್ರೀ ಶ್ರೀವತ್ಸನನ್ನೇ ಮದುವೆಯಾಗುವುದಾಗಿ ಒಪ್ಪುತ್ತಾಳೆ. ಆದರೆ, ಅದು ಸಂತಸದಿಂದಲ್ಲ. 


ಪುಣ್ಯಶ್ರೀ ಹಾಗೂ ಶ್ರೀವತ್ಸರ ವಿವಾಹ ನಡೆದ ನಂತರ ಚಿನ್ನಿಯ ವಿವಾಹ ಮೊದಲು ನಿಶ್ಚಯವಾಗಿದ್ದ ಡಾಕ್ಟರ್ ವರನೊಂದಿಗೆ ನಡೆಯುವುದು ಪುನ್ನಿಗೆ ಆಘಾತ ತರುತ್ತದೆ. ಪುನ್ನಿ ಹಾಗೂ ಶ್ರೀವತ್ಸನ ವಿವಾಹ ಮುರಿದು ಬಿದ್ದದ್ದೇಕೆ..? 


ಇಲ್ಲಿಂದ ಕಾದಂಬರಿಯ ಮತ್ತೊಂದು ರೂಪ ಕಣ್ಣೆದುರಿಗೆ ಬರುತ್ತದೆ. 


ಮನುಷ್ಯನ ಗುಣ-ಸ್ವಭಾವಗಳು ಯಾವಾಗ ಬೇಕಾದರೂ ಬದಲಾಗಬಹುದು. ಹಾಗೆ ಬದಲಾದ ಪಾರ್ವತಿ ಹಾಗೂ ಪುಣ್ಯಶ್ರೀಯರನ್ನು ಕಾಣಬಹುದು. 


ಪುಣ್ಯಶ್ರೀ ಓದಿನಲ್ಲಿ ಆಸಕ್ತಿಯೇ ಇರದೆ ಸುಖದ ಜೀವನ ನಡೆಸುತ್ತಿದ್ದವಳು. ಬದುಕಿನಲ್ಲಿ ನಡೆದ ದುರಂತದಿಂದ ಮತ್ತೆ ಓದಿನತ್ತ ಗಮನಹರಿಸುತ್ತಾಳೆ. ಛಲದಿಂದ ಓದುತ್ತಾಳೆ. ಎಷ್ಟೆಂದರೆ, ಅವಳು ಡಾಕ್ಟರ್ ಆಗಿ ಹೆಸರುವಾಸಿಯಾಗುತ್ತಾಳೆ. ಚಿನ್ನಿ ಡಾಕ್ಟರ್ ವರನನ್ನು ವಿವಾಹವಾದರೆ, ಪುನ್ನಿ ಸ್ವತಃ ಡಾಕ್ಟರ್ ಆಗುತ್ತಾಳೆ. 


ಪ್ರತಿಯೊಂದು ವಿಚಾರದಲ್ಲಿಯೂ ತಮ್ಮ, ತಮ್ಮನ ಹೆಂಡತಿಯನ್ನು ಬಿಟ್ಟು ಕೊಡದಿದ್ದ ಗೋಪಿನಾಥ್ ಸಹ ಪಾರ್ವತಿಯ ಮೇಲೆ ಸಿಡಿಮಿಡಿಯಾಗುವುದೇಕೆ..? 


ಶ್ರೀಕಾಂತ ಹಾಗೂ ಆತನ ಆತನ ತಾಯಿ ಹೆಣೆದ ಜಾಲಕ್ಕೆ ಬಲಿಯಾಗದೆ ಪುಣ್ಯಶ್ರೀ ತಪ್ಪಿಸಿಕೊಂಡ ಬಗೆ ಹೇಗೆ..? ಶ್ರೀಕಾಂತನ ವಿವಾಹದ ಬದುಕು ಹೇಗಿತ್ತು..?


ಡಾಕ್ಟರ್ ಆದ ಪುಣ್ಯಶ್ರೀಯ ವಿವಾಹದ ಕುರಿತು, ಅದರಲ್ಲಿಯೂ ಎರಡನೆಯ ವಿವಾಹದ ಕುರಿತು ಪ್ರಸ್ತಾಪಿಸಿದವರು ಯಾರೆಲ್ಲ..? ಅವಳಿಗೆ ಯಾರೆಲ್ಲ ವರನನ್ನು ತೋರುತ್ತಾರೆ ಹಾಗೂ ಅವರು ಹೇಗಿದ್ದರು..?


ಕೆಲವೊಮ್ಮೆ ಹರೆಯದ ಎಡವಟ್ಟುಗಳಿಂದ ಅಥವಾ ಬುದ್ಧಿ ಸಾಲದ ವಯಸ್ಸಿನಿಂದ ಇಲ್ಲವೇ ಮನೆಯಲ್ಲಿ ತಿದ್ದಿ ಬುದ್ದಿ ಹೇಳದ ತಂದೆ-ತಾಯಿಯಿಂದ, ಅಹಂಕಾರದಿಂದ ಹೀಗೆ ಯಾವುದೋ ಒಂದು ಪ್ರಭಾವದಿಂದ ಹೇಗೋ ಇದ್ದರೂ.. ತನ್ನನ್ನು ತಿದ್ದಿಕೊಂಡು ಬದುಕಿದ ಪುಣ್ಯಶ್ರೀ ಮಾದರಿಯಾಗುತ್ತಾಳೆ. 


ಕಾದಂಬರಿಯ ಮೊದಲಲ್ಲಿ ಇಷ್ಟವಾಗಿದ್ದ ಚಿನ್ನಿ ಕಾದಂಬರಿಯ ಕೊನೆಯಲ್ಲಿ ಹೇಗನಿಸುತ್ತಾಳೆ..?


ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅದರ ಪ್ರಭಾವವು ಒಳ್ಳೆಯದೇ ಆಗಿರುತ್ತದೆ ಎನ್ನುವಂತೆ ಪುಣ್ಯಶ್ರೀ ಬದುಕಲ್ಲಿ ಯಾವ ವ್ಯಕ್ತಿಯಿಂದ ಒಳ್ಳೆಯ ಹಾದಿ ತೆರೆಯುತ್ತದೆ..?


ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ನಂದಾದೀಪ ನಗುತ್ತಿತ್ತು' ಕಾದಂಬರಿಯನ್ನು. 


ಒಬ್ಬರಿಗೆ ಬದುಕಿನ ಒಂದೊಂದು ಹಂತದಲ್ಲಿ ಜ್ಞಾನೋದಯವಾಗುತ್ತದೆ. ಒಬ್ಬರ ಅನುಭವ ಮತ್ತೊಬ್ಬರದಲ್ಲ. ಅಂತೆಯೇ ಒಬ್ಬರ ನಾಶ ಮತ್ತೊಬ್ಬರ ಸಂತೋಷವಾಗಲಾರದು. "ಒಳಿತಿಗೆ ಜಯ"ವಿದೆ ಎನ್ನುವ ರಾಧಾದೇವಿಯವರ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್