ಭಾನುವಾರ, ಜುಲೈ 26, 2026

ಬ್ಲಡ್ ಮನಿ (ಪುಸ್ತಕ ಯಾನ - 473)


ಪುಸ್ತಕದ ಶೀರ್ಷಿಕೆ : ಬ್ಲಡ್ ಮನಿ

ಲೇಖಕರು : ಗೀತಾ ಕುಂದಾಪುರ

ಪ್ರಕಾಶಕರು : ತೇಜು ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2025

ಪುಟಗಳು : 150

ಬೆಲೆ : 160 ರೂ.


'ಬ್ಲಡ್ ಮನಿ' ಗೀತಾ ಕುಂದಾಪುರ ಅವರ ಐದನೇ ಕಥಾ ಸಂಕಲನ ಹಾಗೂ ಒಂಬತ್ತನೇ ಕೃತಿ. ಇದರಲ್ಲಿ 18 ಚಂದದ ಕಥೆಗಳಿವೆ. ಪ್ರತಿ ಕಥೆಯಲ್ಲಿಯೂ ಒಂದಲ್ಲಾ ಒಂದು ವಿಶೇಷಗಳಿವೆ. 

'ಕಾಫಿ ಡೇಟ್' ಕತೆ ವಿಜಯ ಕರ್ನಾಟಕ-ವೀರಲೋಕದ ದೀಪಾವಳಿ ಕಥೆಯ ಟಾಪ್ 25 ಕಥೆಗಳಲ್ಲೊಂದು. 'ಮನಸ್ಸು ಮಾಯಾಂಗನೆ' ಕಥೆಗೆ ಬೃಂದಾವನ ಕನ್ನಡ ಕೂಟ ನ್ಯೂಜರ್ಸಿ ಅವರ 'ಬೃಂದಾವನ ವಿಶಂತಿ ವೈಭವ-2024' ಕಥಾಸ್ಪರ್ಧೆಯ ಬಹುಮಾನ ಸಿಕ್ಕಿದೆ. 'ಜೋಡಿ ಕಣ್ಣುಗಳು' ವಾಣಿ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದ್ದರೆ.. 'ದೇವಿಕಾ' ಕಥೆ ಗುರುಕುಲ ಕಲಾ ಪ್ರತಿಷ್ಠಾನದ ಸಣ್ಣ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಹಲವು ಕಥೆಗಳು ಮಂಗಳೂರು ಹಾಗೂ ಕುಂದಾಪುರ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.


ಕಾಫಿ ಡೇಟ್: ಇಂದಿನ ಯುವ ಜನಾಂಗದ ಪ್ರಸ್ತುತ ಚಿತ್ರಣ ಇಲ್ಲಿದೆ. ಸಂಬಂಧಗಳ ಸ್ವರೂಪವನ್ನು ನಿರ್ಧರಿಸುವಾಗ ಇಂದಿನ ದಿನಗಳಲ್ಲಿಯೂ ತಮ್ಮ ಗತದ ದಿನಗಳನ್ನು ಗಂಡು ಬಿಚ್ಚಿಡುವಷ್ಟೇ ಸಾರಾಗವಾಗಿ ಹೆಣ್ಣು ಬಿಚ್ಚಿಟ್ಟರೆ ಅದನ್ನು ಎಷ್ಟು ಸುಲಭವಾಗಿ ಒಪ್ಪಬಲ್ಲ ಆತ..? ಸಾಕ್ಷಿಗೆ ಈಶಾನ್ ನ ಇತಿಹಾಸದ ಕುರಿತು ಅಷ್ಟು ಆಸಕ್ತಿ ಇರಲಿಲ್ಲ. ಇತಿಹಾಸದ ಪೋಸ್ಟ್ ಮಾರ್ಟಂ ಮಾಡಿದ ಅವರಿಬ್ಬರ ಕಾಫಿ ಡೇಟ್ ಮುಂದೆ ಅವರಿಬ್ಬರನ್ನು ಯಾವ ನಿರ್ಧಾರ ತಳೆಯುವಂತೆ ಮಾಡಿತು..?


ಬ್ಲಡ್ ಮನಿ: ಕೆಲ ದಿನಗಳ ಹಿಂದೆ ನರ್ಸ್ ನಿಮಿಷ ಪ್ರಿಯಳ ಸಂಗತಿ ಓದಿದ್ದಾಗ ನನಗೆ ಮೊದಲು ನೆನಪಾಗಿದ್ದು ಈ ಕಥಾ ಸಂಕಲನದ ಶೀರ್ಷಿಕೆ. ಶೀರ್ಷಿಕೆ ನನಗೆ ಬಹಳ ಕುತೂಹಲ ಮೂಡಿಸಿತು. ದಮಾಮ್ ನಲ್ಲಿದ್ದ ಪ್ರಜ್ವಲನನ್ನು ಸೇರಲು ಹೊರಟ ಶೀಲಾಳ ಕಥೆ ಮುಂದೆ ರಕ್ತಕ್ಕೆ ರಕ್ತ ಇಲ್ಲವೇ ಬ್ಲಡ್ ಮನಿ ಎನ್ನುವ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿದ್ದು ಹೇಗೆ..? ಕುತೂಹಲಕರವಾಗಿ ಹೊಸ ವಿಚಾರವೊಂದು ತೆರೆದುಕೊಳ್ಳುತ್ತದೆ. ಕಾನೂನಿನ ದುರುಪಯೋಗವನ್ನು ಹೇಗೆಲ್ಲಾ ಪಡೆಯುತ್ತಾರೆ ಎಂದು ಹೇಳುವ ಕಥೆ ಇಲ್ಲಿದೆ.


ಬ್ಯಾಂಡ್, ಬಾಜಾ, ಬಾರಾತ್: ಅವನಿ ರೆಸಾರ್ಟ್ ನಲ್ಲಿ 'ಅಲಕಾ ವೆಡ್ಸ್ ಆಕಾಶ್' ಮದುವೆಯ ಸಂಭ್ರಮದಲ್ಲಿಯೇ ಅಂದು ಮತ್ತೊಂದು ಮದುವೆಯೂ ಆಗಿತ್ತು. ಆದರೆ, ಎರಡು ವಿವಾಹಗಳೂ ವಿರುದ್ಧ ಧ್ರುವಗಳಂತೆ ಎಂದರೂ ತಪ್ಪಾಗಲಾರದು. ಅಲಕಾ ಹೇಳುವಂತೆ "ದಾಂಪತ್ಯಕ್ಕೆ ಬೇಕಾಗಿರುವುದು ಪರಸ್ಪರ ಪ್ರೀತಿ,ಗೌರವ ಜೊತೆಗೆ ...." ಮತ್ತೇನು..? 


ಸಿಹಿ-ಕಹಿ: ಪಾಂಡುರಂಗ ಕಮ್ತಿಯವರ 60 ರ ಶಾಂತಿಯ ಚಿತ್ರಣದಲ್ಲಿ ಅವರ ಸಕ್ಕರೆ ಕಾಯಿಲೆಯ ಜೊತೆಗೆ ಅವರ ಬದುಕಿನ ಸಿಹಿ -ಹಿ ಪ್ರಸಂಗಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಕೆಲವೊಮ್ಮೆ ನಾವು ಸಿಹಿಯ ವಿಚಾರದಲ್ಲಿ ತುಸು ಹೆಚ್ಚೇ ಸ್ಟ್ರಿಕ್ಟ್ ಆದೆವು ಎಂದು ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದಾ..? ಇಲ್ಲಿ ಸಿಹಿ ಹೆಚ್ಚೋ ಕಹಿ ಹೆಚ್ಚೋ ಓದಿ ನೋಡಿ.


ಮೂಗೂರಿನ ಮೂಗರು: ನನಗೆ ಬಹಳ ಇಷ್ಟವಾದ ಕಥೆ ಇದು. ಜಿಂಕೆಗಳು ಬಾರದಂತೆ ತಡೆಯಲು ಲಕ್ಷ್ಮಿಯ ನೈಲಾನ್ ಸೀರೆಯ ಪರದೆಗಳು ಹರಿದಿದ್ದವು. ಭಾಸ್ಕರನ ಕೃಷಿ ಬದುಕಿನ ಬವಣೆಯ ಜೊತೆಗೆ ಆತ ತನ್ನೊಡನಿರುವ ಜೀವಗಳಿಗೆ ಇಟ್ಟಿರುವ ಹೆಸರುಗಳು ಸೆಳೆಯುತ್ತವೆ. ಸದ್ದಾಮ, ಪುಟಿನ್, ಶ್ರೀದೇವಿ, ರಾಣಿ ಪದ್ಮಿನಿ ಹೀಗೆ. ಇದರೊಡನೆ ಜೊತೆಯಾದ ಶೇಖಾಮೌಸಾ. ಈ ಹೆಸರಿಗೆ ಕಾರಣ ಕಂಡುಹಿಡಿದ ಮಗ, ಆಟಿಸಂನ ಪುಟ್ಟಿ ಚುರುಕಾದ ಬಗೆ.. ಬ್ಯಾಂಕ್ ಮ್ಯಾನೇಜರ್ ಬಂದು ಹೋದ ನಂತರ ಹರಡಿದ ಸುದ್ದಿ.. ಕಷ್ಟಗಳಲ್ಲಿ ನೆರಳುತ್ತಿದ್ದ ಕುಟುಂಬಕ್ಕೆ ಶೇಖಾಮೌಸಾ ದಾರಿ ತೋರಿದ ಬಗೆ ಹೇಗೆ..? ನಿಮಗೆ ಶೇಖಾಮೌಸಾ ಯಾರೆಂದು ತಿಳಿಯಿತೇ..? ಇಲ್ಲವಾದಲ್ಲಿ ಕಥೆ ಓದಿ.


ಬಿಲದೊಳಗಿನ ಬದುಕು: ಸುವರ್ಣಳ ಕಣ್ಣಿಗೆ ಬಿದ್ದ ಬಾಲದಿಂದ ಅದು ಹಾವು ಇರಬಹುದೇ ಎನ್ನುವ ಊಹೆಯಲ್ಲಿ ಹುಡುಕಲು ಹೊರಟಾಗ ನಿಜಕ್ಕೂ ಸಿಕ್ಕದ್ದು ಕಾಳಿಂಗನ ದರ್ಶನ. ಮನೆಯ ಪರಿಸ್ಥಿತಿಯೇ ಬುಡಮೇಲಾಗಿ ಮುಂದೇನು ಗತಿ ಎನ್ನುವಾಗ ಬಿಲದೊಳಗೆ ಹೊಕ್ಕ ಕಾಳಿಂಗನ ದಯೆ ಹೇಗಿತ್ತು..? ಓದಿ ನೋಡಿ.


ಮನಸು ಮಾಯಾಂಗನೆ: ಮೃದುಲಾ ಹಾಗೂ ಶ್ರೀಕಾಂತ್ ಮಗಳ ಮನೆಗೆ ಹೋಗಿ ಅವಳ ಬಾಣಂತನ ಮುಗಿಸಿ ಕ್ಯಾಲಿಫೋರ್ನಿಯಾದಿಂದ ಬಂದ ನಂತರ ಮೃದುಲಾ ತರಕಾರಿ ತರಲು ಹೋಗಿ ಮಾರ್ಕೆಟ್ ನಿಂದ ಕಾಣೆಯಾಗಿದ್ದಳು. 36 ವರ್ಷಗಳ ದಾಂಪತ್ಯದಲ್ಲಿ ಅವರಿಬ್ಬರ ಅನ್ಯೋನ್ಯತೆ ಹೇಗಿತ್ತು..? ಆಸ್ಟ್ರೇಲಿಯಾದಲ್ಲಿದ್ದ ಮಗ ಹಾಗೂ ಕ್ಯಾಲಿಫೋರ್ನಿಯಾದಲ್ಲಿದ್ದ ಮಗಳು ಅಮ್ಮನ ಕಣ್ಮರೆಗೆ ಸ್ಪಂದಿಸಿದ ಬಗೆ ಹೇಗೆ..? ಮೃದುಲಾ ಸ್ಥಿತಿಗೆ ಕಾರಣರು ಯಾರು..? ಶ್ರೀಕಾಂತ್ ನಿಗೆ ಮೃದುಲ ಸಿಕ್ಕ ಮುನ್ನಿನ ಬವಣೆ ಹೇಗಿತ್ತು..? ಇಲ್ಲಿ ಪ್ರತಿಯೊಬ್ಬರ ಮನಸ್ಸಿನ ಮಾತುಗಳ ಸ್ಪಷ್ಟ ಚಿತ್ರಣವಿದೆ.


ಮನೆಗೆ ಬಂದ ಗುಡ್ಡ: ಪುಟ್ಟ-ಪುಟ್ಟ ಎರಡು ಕೋಡು ಮೂಡಿದ್ದ ಗುಡ್ಡ ಮನೆಗೆ ಬಂದದ್ದು ಹಾಗೂ ಮನೆಯಿಂದ ಹೊರಟದ್ದು ಎರಡು ಅನಿರೀಕ್ಷಿತವೇ. ಆದರೆ.. ಈ ನಡುವೆ ಗುಡ್ಡನ ದೆಸೆಯಿಂದ ಪವಾಡವೇ ಆಯಿತೆನ್ನಬಹುದು. ಕಾವೇರಿಯ ಮನೆಗೆ ಬಂದ ಗುಡ್ಡನ ಕಥೆ ಇಲ್ಲಿದೆ.


ಆ ಜೋಡಿ ಕಣ್ಣುಗಳು: ಜೀವನೋತ್ಸಾಹವನ್ನೇ ತುಂಬಿಕೊಂಡಿದ್ದ ಎಲ್ಲರಿಗೂ ಅರ್ಥವಾಗುತ್ತಿದ್ದ ಮಾಧುರಿ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾಗ ಮನೆಯವರು ತೆಗೆದುಕೊಂಡ ನಿರ್ಧಾರಗಳು.. ಸೊಸೆ ಅಲಕಾಳ ಕುರಿತು ಎದ್ದ ಗಾಳಿಸುದ್ದಿಗಳು, ಮಾಧುರಿಯ ಅಂಗಾಂಗ ದಾನ ಮಾಡಿದ ನಂತರ ಜೋಡಿ ಕಣ್ಣುಗಳನ್ನು ಮಾತ್ರ ಪತಿ ಶ್ರೀಕಾಂತ್ ಅರಸಿ ಹೊರಟದ್ದೇಕೆ..? ಅಂತ್ಯದಲ್ಲಿ ಅಲಕಾಳ ದಿಟ್ಟ ನಿರ್ಧಾರ ಇಲ್ಲಿ ಆಪ್ತವಾಗುತ್ತದೆ.


ಗಿರ್ಗಿಟ್ಲಿ: ವಕೀಲ ಸೋಮಣ್ಣನ ಮಗ ಅವನಂತೆ ವಕೀಲನಾಗಲಿಲ್ಲ. ಅಂತೆಯೇ ಕಾಯಿ ಕೆಡವುವ ಸೀನನ ಮಗ ಅವನಂತಾಗದೆ ವಕೀಲನಾದ. ಮೊದಮೊದಲಿಗೆ ಸೀನನ ಮಗ ಅಶೋಕನ ಕುರಿತು ಹೆಮ್ಮೆಯಾದರೆ, ಸೋಮಣ್ಣ ಅದುವರೆಗೂ ಅವರು ಹಳಿಯುತ್ತಿದ್ದ ಮಗ ಸೂರಜ್ ಕುರಿತು ಹೆಮ್ಮೆಯಾಗುವ ಕಥೆ ಇಲ್ಲಿದೆ. ಗಿರ್ಗಿಟ್ಲಿಯಂತಹ ಬದುಕಿನ ಚಿತ್ರಣ ಇಲ್ಲಿದೆ.


ಸ್ವಾರ್ಥ-ನಿಸ್ವಾರ್ಥ: ಮೊದಮೊದಲು ಬಾಂಧವ್ಯದಿಂದಲೇ ಇದ್ದ ತಂಗಿ ಆಶಾ ಹಾಗೂ ತನ್ನ ಬಾಂಧವ್ಯ ದೂರಾಗುತ್ತಿರುವ ಕುರಿತು ಹುಟ್ಟಿದ ಆಲೋಚನೆಯ ಜೊತೆಯಲ್ಲೇ.. ಪಕ್ಕದಲ್ಲಿ ಶೆಡ್ಡಿನಲ್ಲಿದ್ದ ವಸಂತಳ ಬದುಕು, ನಂತರ ಅವಳ ತಂಗಿ ಜೊತೆಯಾಗಿ ಅವರ ಬದುಕಿನ ಬಂಡಿ ಸಾಗುವಾಗ ಆದ ಜ್ಞಾನೋದಯ, ಸಂಬಂಧಗಳ ಸ್ವಾರ್ಥ-ನಿಸ್ವಾರ್ಥತೆಯ ಜೊತೆಗೆ ಮನಸ್ಸು ಅವುಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎಂಬುದರ ಚಿತ್ರಣವು ಇಲ್ಲಿದೆ.


ಮುಸ್ಸಂಜೆಯಲ್ಲರಳಿದ ಪ್ರೀತಿ: ಶಾಂತಿವನದಲ್ಲಿ ಎಲ್ಲರೂ ತಮ್ಮ ಮುಸ್ಸಂಜೆಯ ಬದುಕನ್ನು ಕಳೆಯುತ್ತಿರುವಾಗ ಸದಾನಂದ ಹಾಗೂ ಮೀರಾರ ಕುರಿತಾಗಿ ಎದ್ದ ಗಾಳಿಸುದ್ದಿಯೇ ನಿಜವಾಯಿತು ಎನ್ನುವಷ್ಟರಲ್ಲಿ.. ಸದಾನಂದನ ಮನೆಯವರ ಪ್ರವೇಶವಾಗುತ್ತದೆ. ಮೀರಾಳ ಹಿಂದಿನ ಬದುಕು ಗೊತ್ತಿದ್ದ ಸದಾನಂದ ತಳೆಯುವ ನಿರ್ಧಾರವೇನು..? ಮುಸ್ಸಂಜೆಯ ಈ ಪ್ರೀತಿ ಅರಳಿದ ಬಗೆ ಇಲ್ಲಿದೆ.


ಬಾಬಕ್ಕ: ಎಲ್ಲರಿಗೂ ಬೇಕಾಗಿದ್ದ ಬಾಬಕ್ಕ, ಅವಳ ಕಾಫಿ ಪ್ರೀತಿ, ಸಾಂತಾವರದ ಜನ ಅವಳನ್ನು ಆದರಿಸಿದ ಬಗೆ ಹೀಗೆ ಕಥೆ ಸಾಗುತ್ತಿರುವಾಗಲೇ ಎಲ್ಲರೂ ಸಾಮೂಹಿಕವಾಗಿ ಅವಳನ್ನು ಬಹಿಷ್ಕರಿಸಿದಂತೆ ಒಬ್ಬಂಟಿಯಾಗಿದ್ದ ಬಾಬಕ್ಕನ ಬದುಕಿನಲ್ಲಿ ಬಂದ ಆಶಾಕಿರಣವೇನು..? ಅಷ್ಟಕ್ಕೂ ಎಲ್ಲರೂ ಆಕೆಯನ್ನು ದೂರಾಗಿಸಿದ್ದೇಕೆ..? ಎಷ್ಟೇ ಉಪಕಾರ ಮಾಡಿದರೂ ಅವಶ್ಯಕತೆ ಮುಗಿದ ನಂತರ ಮನುಷ್ಯನನ್ನು ಯಾವ ರೀತಿ ಕಾಣುತ್ತಾರೆ ಎನ್ನುವ ಕಟು ವಾಸ್ತವದ ಚಿತ್ರಣವೂ ಇಲ್ಲಿದೆ.


ಮೂರು ಹೆಜ್ಜೆಗಳು: ಈ ಕಥೆಯ ಕುರಿತು ಹೆಚ್ಚು ತೆರೆದಿಡಲಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ವರ್ಗಕ್ಕೂ ಹೊಂದಿಕೆಯಾಗುವ ಈ ಕಥೆಯಲ್ಲಿ ಮೂರು ಹೆಜ್ಜೆಗಳು ಕಾಣುತ್ತವೆ.


ಬದುಕು ಬಯಲಾದಾಗ: ಮಶೀನಿಗೆ ಸಿಕ್ಕ ದಾರದ ಸಿಕ್ಕನ್ನು ಬಿಡಿಸುವಂತೆ ತನ್ನ ಸಿಕ್ಕುಗಳು ಬಿಡಿಸುವಂತಾಗಿದ್ದರೆ..! ಎಂದು ಆಲೋಚಿಸುತ್ತಿದ್ದ ಸುರೇಖಳಿಗೆ ಈಗ ತವರಿನ ಆಸರೆ ಇಲ್ಲ. ಪ್ರೀತಿಸಿದ ಗಂಡ ಮಗ ಜೊತೆಗಿಲ್ಲ. ಸಾಧಾರಣ ಬದುಕಿಗೆ ಕಷ್ಟಪಡುತ್ತಿದ್ದ ಅವಳ ಜೊತೆಗಿದ್ದದ್ದು ಯಾರದ್ದೋ ತಪ್ಪಿಗೆ ಕಣ್ಣು ಕಳೆದುಕೊಂಡ ಮಗಳು ಶ್ವೇತ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಶ್ವೇತಳ ಭವಿಷ್ಯದ ಭವ್ಯ ಬದುಕನ್ನು ಕಟ್ಟಿಕೊಡುವ ತಾಯಿ ಸುರೇಖಳ ಬದುಕನ್ನು ಕಾಣಬಹುದು. ನತದೃಷ್ಟೆ ಎಂದುಕೊಂಡಳ ಬದುಕು ಅದೃಷ್ಟದ ಹಾದಿ ಹಿಡಿದ ಕಥನ ಇಲ್ಲಿದೆ.


ಸುವರ್ಣ ರೇಖೆ: ಅನಕ್ಷರಸ್ಥಳಾದ ತಾಯಿ ಸರಸೋತಿಗೆ ವಿದೈಯ ಮಹತ್ವ ಅರಿವಿರಲಿಲ್ಲ. ಗಂಗಾ, ಗೌರಿ, ಗಾಯತ್ರಿ ಎನ್ನುವ ಮೂವರು ಹೆಣ್ಣು ಮಕ್ಕಳು. ಪೌರಕಾರ್ಮಿಕಳಾಗಿ ಕೆಲಸಕ್ಕೆ ಸೇರುವ ಗೌರಿ ಅನುಭವಿಸುವ ನೋವು, ಅದನ್ನು ಮೆಟ್ಟಿನಿಂತು ಇಡೀ ಕುಟುಂಬವನ್ನು ದಡ ಸೇರಿಸುವ ಕಥೆ ಇಲ್ಲಿದ್ದರೂ ಇದು ಹೂವಿನ ಹಾದಿಯಲ್ಲ. ಪೌರಕಾರ್ಮಿಕರ ಬದುಕನ್ನು ಉಳಿದವರು ನೋಡುವ ಬಗೆ ಹಾಗೂ ಅವರ ದೃಷ್ಟಿ ಎರಡರ ಚಿತ್ರಣವೂ ಇಲ್ಲಿ ಕಾಣುತ್ತದೆ. ಗಂಗಾಳಂತಹವರ ಕುರಿತಾಗಿ ಗೌರವ ಹೆಚ್ಚಾಗುತ್ತದೆ.


ದೇವಿಕಾ: ಕೆಲಸವಿಲ್ಲದೆ ತಿರುಗಾಡಿಕೊಂಡಿದ್ದ ಮಗ ಕೃಷ್ಣನಿಗೆ ದಾಮು ಬುದ್ಧಿ ಹೇಳುತ್ತಿದ್ದ. ಆದರೆ ಕೃಷ್ಣನ ಆಲೋಚನೆಯೇ ಬೇರೆ ಇತ್ತು. ಸಮುದ್ರದ ಹಿತ್ತಲಿನ ಮರಳಿನಲ್ಲಿ ನಿಂತ 'ದೇವಿಕಾ ರಾಣಿ' ಕೃಷ್ಣನ ಕೈಯಲ್ಲಿ ಸಿಲುಕಿ ಏನಾದಳು? ಸತ್ಯ ತಿಳಿದ ದಾಮುವಿನ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ.


ದೊಡ್ಮನೆ: ಎಷ್ಟೋ ಬಾರಿ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅವರಂತೆಯೇ ಆಗುವ ಆಸೆಯಾಗುತ್ತದೆ. ಒಳ್ಳೆಯ ವಿಚಾರಕ್ಕೆ ಇದು ತಪ್ಪಲ್ಲವಾದರೂ.. ಮನಸ್ಥಿತಿ ಕೆಡಿಸಿಕೊಳ್ಳುವಷ್ಟು ಪರಿಸ್ಥಿತಿ ಹದಗೆಡಬಾರದು. ಗಾಯಿತ್ರಿ ಮತ್ತೆ ಮನೆಯನ್ನು ವಿಸ್ತಾರಗೊಳಿಸುವ ಪ್ರಸ್ತಾಪವಿಟ್ಟಾಗ ಬಂದ ಖಾರವಾದ ಪ್ರತಿಕ್ರಿಯೆ ಜೊತೆಗೆ ಮುಂದಿನ ಶೆಡ್ಡಿನಲ್ಲಿ ಬದುಕುತ್ತಿದ್ದ ಸುಮಿತ್ರಾಳ ಬದುಕು ಎರಡನ್ನೂ ಕಂಡ ಗಾಯತ್ರಿಯ ಪ್ರತಿಕ್ರಿಯೆ ಏನಿತ್ತು..?


ಈ ಕಥಾ ಸಂಕಲನದಲ್ಲಿ ಸಂಭಾಷಣೆಗಳು ಪ್ರಮುಖವಾಗಿ ಸೆಳೆಯುತ್ತವೆ. ಆಯಾ ಪರಿಸರ, ವಯಸ್ಸು ಹಾಗೂ ಪರಿಸ್ಥಿತಿಗೆ ತಕ್ಕಂತಹ ಸಂಭಾಷಣೆಗಳಿವೆ. ಕಥಾವಸ್ತುಗಳು ವೈವಿಧ್ಯಮಯವಾಗಿವೆ ಜೊತೆಗೆ ಕಥಾ ಪರಿಸರ ಕಣ್ಣಿಗೆ ಕಟ್ಟುವಂತೆ ನಿರೂಪಣೆಯಿದೆ. 


"ಬದುಕಿನ ಕೊನೆಯಲ್ಲಿ ಸಾವು ನಿಶ್ಚಿತವಾದರೂ ಜೀವನ ದುಃಖಾಂತ್ಯವಾಗಬೇಕೆಂದಿಲ್ಲ ತಾನೇ? ಎಷ್ಟೇ ಕತ್ತಲಿದ್ದರೂ ಸುಖದ ಕೋಲ್ಮಿಂಚು ಬರಲು ಎಷ್ಟು ಹೊತ್ತು ಬೇಕು? ಜೀವನದ ಎಳೆಗಳೇ ಕಥೆಯ ಬೆನ್ನೆಲುಬಾದರೆ ಕಥೆಯ ಕೊನೆಯಲ್ಲಿ ಆಶಾಕಿರಣವೇಕಿರಬಾರದು ?" ಎಂಬ ಸಾಲುಗಳು 'ಬಾಬಕ್ಕ' ಕಥೆಯಲ್ಲಿವೆ. 


ಈಕೆ ಕಥೆಯ ಅಂತ್ಯಗಳೆಲ್ಲವೂ ಆಶಾಕಿರಣದಿಂದ ಕೂಡಿರುವುದು ಇಷ್ಟವಾಯಿತು. ಒಳ್ಳೆಯ ಕಥಾ ಸಂಕಲನದ ಚಂದದ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ