ಭಾನುವಾರ, ಜುಲೈ 26, 2026

ಪಪ್ಪನ ಹೆಗಲು


ನನ್ನ ವಿಶ್ವವೇ ಆಗಿದ್ದ ನನ್ನಪ್ಪ ಭೌತಿಕವಾಗಿ ನನ್ನೊಡನಿಲ್ಲದೆ ಎರಡೂವರೆ ವರ್ಷ. ಹಠಾತ್ ಹೃದಯಾಘಾತದಿಂದ ನಿಧನರಾದವರ ನೆನಪು ಪ್ರತಿಕ್ಷಣವೂ ನನ್ನೊಡನಿದೆ. ಪ್ರತಿನಿತ್ಯ ಎದ್ದು ನನ್ನ ಕೆಲಸದಲ್ಲಿ ತೊಡಗಿಸಿಕೊಂಡರೂ ಬೆಳಗಿನ ಅವರ ಕರೆ ಬರದೆ ಉಲ್ಲಾಸ ಮೂಡುತ್ತಿರಲಿಲ್ಲ. ದಿನ ಸಂತೃಪ್ತಿಯೆಂದೆನಿಸುತ್ತಿದದ್ದು ಅವರ ಮತ್ತೊಂದು ಕರೆಯೊಂದಿಗೆ. ಹಾಗೆಂದು, 24*7 ವರದಿ ಅಲ್ಲಿರುತ್ತಿರಲಿಲ್ಲ. ಅವರ ಆಪ್ತತೆಯ ಒಂದೆರಡು ಮಾತು, ಕಾಳಜಿ ನನ್ನ ಧೈರ್ಯ. ಸೋತಾಗ ಹುರಿದುಂಬಿಸಿ, ನನ್ನ ಸಣ್ಣ-ಪುಟ್ಟ ಗೆಲುವಿಗೂ ಸಂಭ್ರಮಿಸುತಿದ್ದ ಪಪ್ಪನಿಗೇ ನನ್ನ ಸೋಲು-ಗೆಲುವು, ಪ್ರಯತ್ನ ಎಲ್ಲವನ್ನೂ ಮೊದಲು ಹಂಚಿಕೊಳ್ಳುತ್ತಿದ್ದದ್ದು.


ಒಬ್ಬಳೇ ಮಗಳನ್ನು ರಾಜಕುಮಾರಿಯಂತೆ ನೋಡಿಕೊಂಡರೂ.. ಸಾಕಷ್ಟು ಧೈರ್ಯದಿಂದ ಒಬ್ಬಳೇ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನೂ ತುಂಬಿದವರು. ತಾನು ಬೇರೆಯವರ ಮನೆಯಲ್ಲಿದ್ದು ಕಷ್ಟಪಟ್ಟಂತೆ ಮಗಳು ಆಗಬಾರದೆಂದು ಹಾಸ್ಟೆಲ್ ಗೆ ಸೇರಿಸಲು ಹಿಂದೆ-ಮುಂದೆ ನೋಡಿದರೂ.. ಪರಿಸ್ಥಿತಿಯ ಪ್ರಭಾವ, ವಿದ್ಯೆಯ ಮಹತ್ವದಿಂದ ಮನಸ್ಸಿಲ್ಲದ ಮನಸಲ್ಲಿ ಕಳುಹಿಸಿದವರು. ಚಿಕ್ಕಮ್ಮ, ಮಾಮನ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯ ಮಕ್ಕಳಿಗೆ ನಿಸ್ವಾರ್ಥದಿಂದ ಓದಿಸಿ, ಶಾಲೆಗೆ ಕರೆದು ಕಳುಹಿಸುವ ಜವಾಬ್ದಾರಿಯನ್ನು ತಾವಾಗಿಯೇ ತಮ್ಮ ಹೆಗಲ ಮೇಲೆ ಹೊತ್ತು ತನ್ನ ಮಕ್ಕಳಂತೆಯೇ ಜೋಪಾನ ಮಾಡಿದವರು. ಎಂದಿಗೂ ತಮ್ಮ ಕಷ್ಟದ ದಿನಗಳನ್ನು ನೆನೆದು ಕೊರಗಿದವರಲ್ಲ. ಬದಲಾಗಿ, ಮುಂದಿನ ಹಾದಿಯ ಆಲೋಚನೆ ಮಾಡುತ್ತಿದ್ದವರು.


ಫಾರ್ಮಸಿ ಅಧಿಕಾರಿಗಳಾಗಿದ್ದವರು ನಿವೃತ್ತಿ ನಂತರವೂ ಕೋವಿಡ್ ವಾರಿಯರ್ ಆಗಿ ದುಡಿದವರು. ದುಡ್ಡಿಲ್ಲ, ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಲಿಲ್ಲ. ರಕ್ತ ಸಂಬಂಧಕ್ಕಿಂತಲೂ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದರು ಎಷ್ಟೋ ಜನರು. 


"ತಾಯಿ, ನಿಮ್ಮಪ್ಪ ಅವತ್ತು ನನ್ನ ಆಸ್ಪತ್ರೆಗೆ ಸೇರಿಸಿ ಕಾಲು ಸರಿ ಮಾಡಿಸಿ ಇನ್ನೊಂದು ಜೀವ ಕೊಟ್ಟ ಪುಣ್ಯಾತ್ಮ" ಅನ್ನೋ ಅಜ್ಜನನ್ನು ತಂದೆಯ ಸ್ಥಾನದಲ್ಲಿಟ್ಟು, ಜಾತಿಬೇಧವಿಲ್ಲದೆ ಸಹಾಯ ಮಾಡಿದ್ದರು. ಇದು ಒಂದು ಉದಾಹರಣೆಯಷ್ಟೇ.. "ಶರಣರ ಸಾವನ್ನು ಮರಣದಲ್ಲಿ ನೋಡು" ಎಂಬಂತೆ ಅಂದು ಹರಿದು ಬಂದ ಜನಸಾಗರ ಅವರನ್ನು ನೆನಪಿಸಿಕೊಂಡ ರೀತಿ ಸಂಬಂಧಿಕರಿಗೆ.. ಮೌನಿಯಾಗಿಯೇ ಕಾಣುತ್ತಿದ್ದ ಗಟ್ಟಿ ವ್ಯಕ್ತಿತ್ವದ ನನ್ನಪ್ಪನ ಪರೋಪಕಾರಿ ಮುಖವನ್ನು ತೆರೆದಿಟ್ಟಿತ್ತು. 


"Empty mind is devil's workshop, ಸೋಮಾರಿಯಾಗಬಾರದು" ಎಂಬುದನ್ನು ಹೇಳಿಕೊಟ್ಟ ಪಪ್ಪ ಅಂತೆಯೇ ಬದುಕಿದವರು. ಕ್ರಿಕೆಟ್, ನ್ಯೂಸ್ ಪೇಪರ್, ರೇಡಿಯೋ ಇವುಗಳ ಜೊತೆಗೆ ಕಾಯಕಯೋಗಿಯಾಗಿದ್ದ ಪಪ್ಪ ನನ್ನ ಸದಾಕಾಲದ ದಾರಿದೀಪ. ಓದುವ, ಹಾಡುವ ಹವ್ಯಾಸವನ್ನು ಅಭ್ಯಾಸವಾಗಿಸಿದ್ದು.. "ಏನಾದರೂ ಮಾಡು, ನಿನ್ನ ಜೊತೆ ನಾನಿರುತ್ತೇನೆ", "Go and explore" ಎಂದದ್ದು ಈಗಲೂ ಕಿವಿಯಲ್ಲಿದೆ. ಸ್ವಾಭಿಮಾನ, ಸಹಾಯದ ಗುಣವನ್ನು ಬಿಡದೆ ಬೆಳೆಸಿದ ಅಪ್ಪನ ವ್ಯಕ್ತಿತ್ವವನ್ನು ಬಣ್ಣಿಸಹೊರಟರೆ ಕುರುಡ ಆನೆಯನ್ನು ಮುಟ್ಟಿದಂತಾಗಬಹುದು. ಅಪ್ಪನ ಹೆಗಲು ಕೊಟ್ಟಷ್ಟು ಧೈರ್ಯ, ವಿಸ್ತಾರತೆಯ ನೋಟ ಮತ್ತಾವುದೂ ಕೊಟ್ಟಿಲ್ಲ. ಬಹುಶಃ, ಪಪ್ಪ ನನ್ನೊಡನಿದ್ದು ಕಲಿಸುವ ಪಾಠಗಳು ಮುಗಿದಿದ್ದವೇನೋ..! ಜೊತೆಗಿಲ್ಲದೆ ಕಲಿಸುತ್ತಿದ್ದಾರಷ್ಟೇ...!


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ