"ಎಲ್ಲಿ ಹೋದರೂ ನೆನಪಾಗುತ್ತೀಯಲ್ಲ.. ನೀನಂತೂ ನನ್ನ ಬೆನ್ನು ಬಿಡುವುದೇ ಇಲ್ಲವಲ್ಲ. " ಎನ್ನುತ್ತಾ ಸ್ವಗತವಾಡಿಕೊಂಡಳು ಬಬಿತಾ.
"ಅರೆ..! ಮೇಡಂ ಒಬ್ಬರೇ ಮಾತನಾಡುತ್ತಿದ್ದೀರಾ..?? ಅಥವಾ ಬ್ಲೂಟೂಥ್ ಹೆಡ್ ಸೆಟ್ ಏನಾದರೂ ಹಾಕಿಕೊಂಡಿದ್ದೀರಾ ಹೇಗೆ ? " ಎನ್ನುತ್ತಾ ಮಾತನಾಡಿಸಿದಳು ಪಕ್ಕದಲ್ಲೇ ಇದ್ದ ಹರಿಣಿ.
"ಇಲ್ಲ ಹರಿಣಿ. ಬ್ಲ್ಯೂ ಟೂಥ್ ಏನೂ ಹಾಕಿಲ್ಲ. ಆದರೆ, ಒಬ್ಬಳೇ ಅಂತೂ ಮಾತನಾಡುತ್ತಿಲ್ಲ" ಎಂದ ಬಬಿತಾ ಮಾತು ಯಾಕೋ ಒಗಟಿನ ಹಾಗೆ ಭಾಸವಾಯಿತು ಹರಿಣಿಗೆ.
"ಮತ್ತೆ ಈ ಫಿಲ್ಮ್ ಗಳಲ್ಲೆಲ್ಲಾ ತೋರಿಸುತ್ತಾರಲ್ಲಾ ಹಾಗೆ ಸತ್ತು ಹೋಗಿರುವವರ ಜೊತೆಗೆ ಮಾತನಾಡುತ್ತಿದ್ದೇನೆ ಅಂತಾ ಮಾತ್ರ ಹೇಳಬೇಡಿ ಮೇಡಂ. ಮೊದಲೇ ಭೂತ ಪ್ರೇತ ಕಂಡರೆ ಭಯ ನನಗೆ " ಎಂದಳು ಹರಿಣಿ.
"ಹರಿಣಿ, ತುಂಬಾ ಚೆನ್ನಾಗಿ ಮಾತನಾಡುತ್ತೀರಿ ಪಾ ನೀವು. ಭೂತ - ಪ್ರೇತ ಅಲ್ಲ. ನಾನು ನನ್ನವನ ಜೊತೆ ಮಾತನಾಡುತ್ತಾ ಇದ್ದೀನಿ. ಅವನೀಗ ನನ್ನ ಜೊತೆಗಿಲ್ಲ. ಆದರೆ, ಅವನು ನನ್ನ ಪ್ರತಿ ಉಸಿರಲ್ಲಿಯೂ ಬೆರೆತು ಹೋಗಿದ್ದಾನೆ. ಅವನ ಜೊತೆಗೆ ಮಾತನಾಡುತ್ತಿದ್ದೇನೆ ಅಷ್ಟೇ.. " ಎಂದಳು ಬಬಿತಾ.
"ಇದೇ ನೋಡಿ ಮೇಡಂ ನಿಮ್ಮ ರೂಮ್. ಇಲ್ಲೇ ಪಕ್ಕದ ಕೋಣೆಯಲ್ಲಿಯೇ ನಾನಿರುತ್ತೇನೆ. ಏನಾದರೂ ಬೇಕು ಅಂದರೆ ನನ್ನನ್ನು ಕರೆಯಿರಿ" ಎನ್ನುತ್ತಾ ಹೊಸದಾಗಿ ಶಾಲಾ ಶಿಕ್ಷಕಿಯಾಗಿ ಸೇರಿದ್ದ ಬಬಿತಾಳಿಗೆ ಹಾಸ್ಟೆಲ್ ವಾಸ್ತವ್ಯಕ್ಕೆ ರೂಮ್ ತೋರಿಸಿ ತನ್ನ ರೂಮಿಗೆ ನಡೆಯುತ್ತಿದ್ದ ವಾರ್ಡನ್ ಹರಿಣಿಯನ್ನು ಕರೆದು
"ಹರಿಣಿ ಪ್ಲೀಸ್ ಈ ರೂಮಿಗೆ ಮತ್ತೆ ಇನ್ಯಾರನ್ನೂ ಹಾಕಬೇಡಿ ಆಯ್ತಾ.. ಸರ್ ಹತ್ತಿರ ಕೂಡಾ ಪರ್ಮಿಶನ್ ತೆಗೆದುಕೊಂಡಿದ್ದೇನೆ" ಎಂದಾಗ "ಓ.ಕೆ ಮೇಡಂ. ಆದರೆ ಒಂದೇ ಒಂದು ಪ್ರಶ್ನೆ. ನಿಮಗೆ ಒಂಟಿಯಾಗಿರುವುದಕ್ಕೆ ಇಷ್ಟವಾ ? ಕಷ್ಟ ಎನ್ನಿಸುವುದಿಲ್ಲವಾ ? " ಎಂದಳು.
"ಇಲ್ಲಾ ಹರಿಣಿ. ನಾನೆಲ್ಲಿ ಒಂಟಿ.. ಈ ರೀತಿಯ ಬದುಕು ನನಗೆ ಅಭ್ಯಾಸವಾಗಿ ಹೋಗಿದೆ
ನಾನು ಕಳೆದ ಬಾರಿ ಉಳಿದುಕೊಂಡಿದ್ದ ರೂಮಿನಲ್ಲಿ ಮತ್ತೊಬ್ಬರು ಸಹೋದ್ಯೋಗಿ ಕೂಡಾ ಉಳಿದುಕೊಂಡಿದ್ದರು. ಆದರೆ, ನನ್ನ ಈ ರೀತಿಯ ಮಾತನ್ನು ತಪ್ಪು ತಿಳಿದುಕೊಂಡು ತಪ್ಪು ಭಾವನೆಯನ್ನು ಹಂಚಿ ಎಲ್ಲರಿಗೂ ನಾನೊಬ್ಬಳು ಹುಚ್ಚಿ ಎನ್ನಿಸುವಂತೆ ಮಾಡಿಬಿಟ್ಟರು. ಹಾಗಾಗಿ, ಮತ್ತೊಮ್ಮೆ ನಾನು ಆ ರೀತಿಯ ರಿಸ್ಕ್ ತೆಗೆದುಕೊಳ್ಳಲಾರೆ. " ಎಂದ ಬಬಿತಾಳನ್ನು ಕಂಡು ಹರಿಣಿ
"ಮ್ಯಾಮ್, ಸರ್.. " ಎಂದಾಗ "ನಿಮಗೆ ಬೇಸರವಿಲ್ಲದಿದ್ದರೆ ನಾನು ಹೇಳುತ್ತೇನೆ " ಎನ್ನುತ್ತಾ ಹೇಳತೊಡಗಿದಳು.
"ಅವನು ನಾನು ಬಾಲ್ಯದಿಂದ ಒಟ್ಟಿಗೆ ಬೆಳೆದದ್ದು. ಅಕ್ಕ-ಪಕ್ಕದ ಮನೆಯೇ.. ಪ್ರತಿಯೊಂದಕ್ಕೂ ನಾನು ಅವನನ್ನು ಮತ್ತು ಅವನು ನನ್ನನ್ನು ಕೇಳಿ ಮಾಡುವುದು ಹಾಗೂ ಹಂಚಿಕೊಳ್ಳುವ ರೂಢಿ. ಹಾಗೆಯೇ, ಒಟ್ಟಿಗೆ ಓಡಾಟ. ಯಾರಾದರೂ ನೋಡಿದರೆ ನಾವು ಪ್ರೇಮಿಗಳು ಎಂದುಕೊಳ್ಳುತ್ತಿದ್ದರು. ಸ್ನೇಹ ಪ್ರೇಮವಾಗಿತ್ತು. ಇಬ್ಬರೂ ಪರಸ್ಪರ ಹೇಳಿಕೊಂಡಿರಲಿಲ್ಲ. ಅದೇ ಸಮಯಕ್ಕೆ ಮನೆಯಲ್ಲಿಯೂ ನಮ್ಮಿಬ್ಬರಿಗೂ ಮದುವೆ ಎಂದು ಎಲ್ಲರೂ ಖುಷಿಯಿಂದ ಒಪ್ಪಿದ್ದರು. ಅವನು ಇಲ್ಲಿಯೇ ಇದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಎಷ್ಟೋ ಬಾರಿ ಅವನ ಜೊತೆಗೆ ನಾನು ಇಲ್ಲಿಗೆ ಬಂದಿದ್ದೇನೆ.
ಮದುವೆಯ ಎರಡು ದಿನ ಮುಂಚೆ ನಾನೇ ಕರೆ ಮಾಡಿ ನಮ್ಮಿಬ್ಬರ ಪ್ರೇಮವನ್ನು ಹೇಳಿಕೊಳ್ಳುವ ಸಲುವಾಗಿ ಅವನನ್ನು ತಕ್ಷಣಕ್ಕೆ ಬರಹೇಳಿದ್ದೆ. ತಕ್ಷಣವೇ.. ಅವನು ಇಲ್ಲಿಂದ ಖುಷಿಯಲ್ಲಿ ಮನೆಗೆ ಹೊರಟಿದ್ದನಂತೆ. ಆದರೆ, ಯಾರ ಶಾಪವೋ ಅವನು ಮನೆಗೆ ಬಂದದ್ದು ಹೆಣವಾಗಿ. ಅರಿಶಿನ ಹಚ್ಚಿರಲಿಲ್ಲ, ಮದರಂಗಿಯ ಬದಲು ಕೈ ಅವನ ರಕ್ತದಿಂದ ಕೆಂಪಾಗಿತ್ತು. ತಾಳಿ ಕಟ್ಟಿರಲಿಲ್ಲ ಅಷ್ಟೇ.. ಅವನು ನನ್ನ ಏಳೇಳು ಜನ್ಮದ ಸಖ. ಅದಾದ ನಂತರ ಮದುವೆ ನಡೆಯಲಿಲ್ಲ. ನನ್ನ ಬದುಕು ಪೂರ್ತಿ ಅವನೇ ಇದ್ದಾನೆ.
ನಾನು ಅವತ್ತು ಅವನನ್ನು ಬೇಗ ಬಾ ಎಂದೆ. ಆದರೆ, ಅವನನ್ನು ಯಮರಾಜ ಕರೆದುಕೊಂಡ. ಅವನ ನೆನಪುಗಳು ಕಾಡುತ್ತವೆ. ಸದಾ ಅವನ ಗುಂಗಿನಲ್ಲಿಯೇ ಬದುಕುತ್ತಿದ್ದೇನೆ. ಕೊನೆಗೂ, ಅವನು ಪಾಠ ಮಾಡುತ್ತಿದ್ದ ಕಾಲೇಜಿಗೆ ನಾನೂ ಬಂದಿದ್ದೇನೆ. ಅವನು ನೆನಪಾಗುತ್ತಾನೆ. ಕಾಡುತ್ತಾನೆ.. ಒಲವಿನಿಂದ.
ಬದುಕಿಡೀ ಪಾಪಪ್ರಜ್ಞೆ ಕಾಡುತ್ತದೆ. ಅವನ ನೆನಪು ಮಾತ್ರ ಅದನ್ನು ಕಡಿಮೆ ಮಾಡಬಲ್ಲದು. ಆದರೂ.. ಅವನ ನೆನಪು ನನ್ನ ಜನುಮಕ್ಕಂಟಿದ ಶಾಪ." ಎನ್ನುತ್ತಾ ಬಿಕ್ಕಳಿಸುತ್ತಿದ್ದ ಬಬಿತಾಳನ್ನು ಸಮಾಧಾನ ಪಡಿಸಲೂ ಸಾಧ್ಯವಾಗದಂತೆ ಅಳುತ್ತಿದ್ದಳು ಹರಿಣಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ