ಭಾನುವಾರ, ಸೆಪ್ಟೆಂಬರ್ 20, 2026

ಸಾವನ್ನು ಕಾದು ಕುಳಿತಿದ್ದವರು

 


"ಎಲ್ಲರೂ ಮಗುವಿನ ಜನನಕ್ಕಾಗಿ ಕಾದು ಕುಳಿತಿದ್ದರೆ.. ನಾನೂ ಇದ್ದೇನೆ ಮಗುವಿನ ಸಾವಿಗೆ ಕಾದು ಕುಳಿತಿರುವವಳು.


ಪ್ರಭು, ಯಾವತ್ತೂ ಯಾವ ಶತ್ರುವಿಗೂ ಇಂತಹಾ ಪರಿಸ್ಥಿತಿ ಬಾರದಿರಲಿ. ಮಕ್ಕಳ ಹಿತ ಬಯಸುವವಳು ಮಾತ್ರ ತಾಯಿ. ನಾನ್ಯಾವ ಸೀಮೆಯ ತಾಯಿ" ಎನ್ನುತ್ತಾ ಬೇಸರದಿಂದ ತನ್ನ ಕುರಿತು ತಾನೇ ಜಿಗುಪ್ಸೆಯ ಮಾತನ್ನಾಡಿಕೊಳ್ಳುತ್ತಿದ್ದಳು ಸಂಕೀರ್ತಿ.


"ಕೀರ್ತಿ, ಯಾಕಿಷ್ಟು ಬೇಸರ ಮಾಡಿಕೊಳ್ಳುತ್ತಿದ್ದೀಯ. ಈ ಮಗು ಹುಟ್ಟುವ ಮುನ್ನವೇ ನಾವು ಈ ದಿನಕ್ಕೆ ಮನಸ್ಸನ್ನು ಸಿದ್ದ ಮಾಡಿಕೊಳ್ಳುತ್ತಿದ್ದೆವು. ಅಲ್ಲವಾ ? ಮಗುವಿನ ಇಷ್ಟು ದಿನದ ಬೆಳವಣಿಗೆ ಕಂಡು ಹರ್ಷಿಸುತ್ತಿದ್ದೆವು. ಅಷ್ಟು ಸಾಕು ಅಲ್ಲವಾ ??  ನಾವು ಪಾಪುವಿಗೆ ಎಂದೂ ಯಾವುದನ್ನೂ ಕೊರತೆ ಮಾಡಲಿಲ್ಲ ಅಲ್ಲವಾ ?? ಮುಂದೆಯೂ ಅವನು ಬದುಕಿದ್ದರೆ ಅವನನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳೋಣ. ಆದರೆ, ಅವನು ಬದುಕದಿರಲಿ ಎಂದೇ ಆಶಿಸೋಣ" ಎಂದನು ಪ್ರಭು.


"ಪ್ರಭು, ನಾನು ಪಾಪು ಹುಟ್ಟುವ ಮುನ್ನವೇ ಒಂದು ಮಾತು ಹೇಳುತ್ತಿದ್ದೆ. ಗೊತ್ತಾ..??

ನಾನು ಗರ್ಭಿಣಿಯಾಗಿದ್ದಾಗ ಪುರಾಣದ ಕತೆಗಳನ್ನು ಓದಿದರೆ ಒಳ್ಳೆಯದು ಎಂದು ಆ ಪುಸ್ತಕಗಳನ್ನು ತಂದು ಕೊಟ್ಟಾಗ ಮಾರ್ಕಾಂಡೇಯನ ಕತೆ ಓದಿದಾಗ ಹೆಚ್ಚು ಆಯುಷ್ಯ ಇರುವ ದಡ್ಡ ಮಗ ಬೇಕೋ ಅಥವಾ ಕಡಿಮೆ ಆಯುಷ್ಯ ಇರುವ ಬುದ್ಧಿವಂತ ಮಗ ಬೇಕೋ ಎಂಬ ಆಯ್ಕೆ ಎದುರಾದಾಗ ಆಕೆ ಕಡಿಮೆ ಆಯುಷ್ಯದ ಬುದ್ಧಿವಂತ ಮಗನನ್ನು ಬೇಡುತ್ತಾಳೆ.

ಆಗೆಲ್ಲಾ ನಾನಾಗಿದ್ದರೆ ಹೆಚ್ಚು ಆಯುಷ್ಯದ ದಡ್ಡ ಮಗನನ್ನೇ ಬೇಡುತ್ತಿದ್ದೆ ಎನ್ನುತ್ತಿದ್ದೆ.


ಬಹುಶಃ, ದೇವರೇ ಪರೀಕ್ಷೆ ಮಾಡಲು ನಮಗೆ ಅಂತಹಾ ಮಗನನ್ನು ಕರುಣಿಸಿದನೋ ಏನೋ.. ಮಕ್ಕಳ ಆರೋಗ್ಯ, ಬುದ್ಧಿವಂತಿಕೆ ಎಲ್ಲವೂ ಇದ್ದಾಗಲೇ ಅಲ್ಲವೇ ತಂದೆ-ತಾಯಿಯರಿಗೂ ಸಂತೃಪ್ತಿ. ಆದರೆ, ಇವನು ಹುಟ್ಟುವ ಮೊದಲೇ ನಮಗೆ ತಿಳಿದಿತ್ತಲ್ಲ. ಮಗು ಹೀಗಾಗುತ್ತದೆ ಎಂದು.


ನಾವೂ ಸಿದ್ದರಾಗಿಯೇ ಇದ್ದೆವು. ದೇವರ ಮಗು ಎನ್ನುತ್ತಲೇ ಆಟಿಸಂ ಇರುವ ಮಗುವನ್ನು ತೆಕ್ಕೆಗೆಳೆದುಕೊಂಡು ಸಾಕಿದೆವು ಸಹಾ. ಆದರೆ, ಅವನು ಹಿಂಸೆ ಪಡುವಾಗ.. ಅವನು ನರಳುವಾಗ ಅವನಿಗಿಂತ ಹೆಚ್ಚು ಹಿಂಸೆ ಪಟ್ಟದ್ದು ನಾವೇ ಅಲ್ಲವಾ..

ಆಗ ಅನ್ನಿಸುತ್ತಿತ್ತು. ಮಾರ್ಕಂಡೇಯನ ತಾಯಿ ಸರಿಯಾದ ವರವನ್ನೇ ಕೇಳಿದ್ದಾಳೆ ಎಂದು. ಅವಳು ಸರಿಯಾದ ಆಯ್ಕೆ ಮಾಡಿದ್ದು.. ಕೇವಲ ಅವಳ ದೃಷ್ಟಿಯಿಂದ ಮಾತ್ರವಲ್ಲ.. ಮಗುವಿನ ದೃಷ್ಟಿಯಿಂದ ಕೂಡಾ. ಅವಳು ಬುದ್ದಿವಂತಳು. ಹಾಗಾಗಿಯೇ.. ಬುದ್ಧಿವಂತ ಮಗನನ್ನೂ ಪಡೆದದ್ದು.


ನಾನು ದಡ್ಡಿ. ನನ್ನ ಆಯ್ಕೆ ಇಲ್ಲದಿದ್ದರೂ ನನ್ನ ಪಾಪದ ಫಲ ಎಂಬಂತೆ ಆ ಮಗು ದಕ್ಕಿತ್ತು.


ಛೇ, ಅದು ಪಾಪದ ಕೂಸು.. ಏನೂ ಅರಿಯದ ಕೂಸು. " ಎನ್ನುತ್ತಾ ಮಾತನಾಡುತ್ತಲೇ ಪ್ರಜ್ಞೆ ತಪ್ಪಿದ್ದಳು. ಏನೋ ಒಂದು ರೀತಿಯ ವಿಚಿತ್ರ ನಗುವಿನಲ್ಲಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಪ್ರಭುವಿಗೆ ಭಯವಾಯಿತು.


ಪ್ರಜ್ಞೆ ತಿಳಿದು ಎದ್ದಾಗ "ನಾನಿನ್ನೂ ಬದುಕಿದ್ದೇನಾ..?? " ಎಂದು ಕೇಳಿದ ಸಂಕೀರ್ತಿಗೆ "ನಿನ್ನನ್ನು ಸಾಯಲು ಬಿಟ್ಟು ಬಿಡುತ್ತೇನಾ..?? ನೀನು ಯಾಕೆ ಸಾಯಲು ಹೊರಟೆ ? " ಎಂದನು ಪ್ರಭು.


"ಪಾಪುವನ್ನು ಸಾಯಿಸಿದ್ದು ನಾನೇ.. ನಾನೇ

ಅದಕ್ಕೆ ನನಗೆ ನಾನೇ ಶಿಕ್ಷೆ ಕೊಟ್ಟುಕೊಳ್ಳಬೇಕು. " ಎಂದವಳನ್ನು  ಕಂಡು ಅರ್ಥವಾಗದವನಂತೆ ನೋಡಿದ.


"ಬುದ್ಧಿ ಬೆಳೆಯದ ಮಗುವನ್ನು ನಾನು ಸರಿಯಾಗಿ ನೋಡಿಕೊಳ್ಳಬೇಕಿತ್ತು. ನನ್ನ ನಿರ್ಲಕ್ಷ್ಯದಿಂದ ತಾನೇ ಅವನು ಮಹಡಿಯಿಂದ ಬಿದ್ದದ್ದು. ಅವನು ಸತ್ತರೆ ಅವನ ಸಾವಿಗೆ ನಾನು ತಾನೇ ಹೊಣೆ. " ಎಂದವಳ ಮಾತಿಗೆ "ಅಲ್ಲಮ್ಮ, ಅವನ ಮೋಕ್ಷಕ್ಕೆ ನೀನು ಹೊಣೆ. ಅವನ ಮುಕ್ತಿಗೆ ನೀನು ಹೊಣೆ. ಇಷ್ಟು ದಿನ ನೀನು ಅವನನ್ನು ಪ್ರೀತಿಯಿಂದ ನೋಡಿಕೊಂಡಿದ್ದೀಯ. ಅವನು ಮುಂದೆ ನರಳಿ ನರಳಿ ಸಾಯುವುದನ್ನು ನೋಡುವುದಕ್ಕಿಂತ ಇದೇ ಮೇಲು ಬಿಡು" ಎಂದನು.


ಅವಳಿಗೂ ತಿಳಿಯದ ಸಂಗತಿ ಎಂದರೆ ಪಾಪುವಿನ ಕಷ್ಟ ಅರಿತಿದ್ದ ಪ್ರಭು ಮಗುವನ್ನು ತಡೆಯಬಹುದಾಗಿದ್ದರೂ ತಡೆದಿರಲಿಲ್ಲ.


"ಸ್ಸಾರಿ ಸರ್, ಸ್ಸಾರಿ ಮ್ಯಾಮ್ ಹೀ ಈಸ್ ನೋ ಮೋರ್" ಎಂದ ವೈದ್ಯರ ಕಡೆ ತಿರುಗಿದ ಇಬ್ಬರೂ ಕೈ ಮುಗಿದಿದ್ದರು.


ಪಾಪುವಿನ ಕಷ್ಟ, ನೋವು, ನರಳುವಿಕೆಗೆ ಕೊನೆ ಬಂದಿತ್ತು

ಸಾವು ಪಾಪುವಿಗೆ ಮುಕ್ತಿ ನೀಡಿತ್ತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ