ಪುಸ್ತಕದ ಶೀರ್ಷಿಕೆ : ಪ್ರಾಪ್ತಿ
ಲೇಖಕರು : ವಸುಮತಿ ಉಡುಪ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 144
ಬೆಲೆ : 150 ರೂ.
ಕೆಲವರ ಪಾಲಿಗೆ ಬದುಕು ಸುಖದ ಸುಪ್ಪತ್ತಿಗೆಯಾದರೆ ಮತ್ತೆ ಕೆಲವರ ಪಾಲಿಗೆ ಕಹಿ ಅನುಭವಗಳ ಬುತ್ತಿ. ಬದುಕು ಹೀಗೇಕೆ ಎನ್ನುವ ನಿಗೂಢ ಪ್ರಶ್ನೆಯ ಕುರಿತು ಉಲ್ಲೇಖಿಸುತ್ತಲೇ ಚೆಂದದ ಕಾದಂಬರಿಯನ್ನು ಕಟ್ಟಿಕೊಡುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್ ಹುದ್ದೆಯಲ್ಲಿದ್ದ ಚಿದಾನಂದ. ಗಂಡನ ಹುದ್ದೆಯನ್ನು ಆತನಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದ ಪತ್ನಿ ಸುನಂದಾ. ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಎನ್ನುವಂತೆ ಮಗಳು ಸತ್ಯಭಾಮ, ಮಗ ಭಾರ್ಗವ. ಚೆಂದದ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ ಎಂಬಂತೆ ಸುನಂದಾಳ ಆಗಲಿಕೆ ಕುಟುಂಬವನ್ನು ತಟ್ಟುತ್ತದೆ. ಸತ್ಯಭಾಮ ಅಮ್ಮನಂತೆ ತಮ್ಮನನ್ನು ಮಗನಾಗಿ ಪೋಷಿಸುತ್ತಾ.. ತಂದೆಗೆ ನೆರವಾಗಿ ಮುಂದಿನ ಬದುಕು ಇನ್ನೇನು ಸರಾಗವಾಯಿತು ಎನ್ನುವಾಗ ಸುನಂದಾಳ ಕಡೆಯ ನಂಟು ತಪ್ಪಿ ಹೋಗುತ್ತದೆ.
ಎಲ್ಲವನ್ನು ಪ್ರೌಢವಾಗಿ ನಿಭಾಯಿಸುತ್ತಿದ್ದ ಮಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ ಚಿದಾನಂದನ ಭರವಸೆ ಕುಸಿದಿತ್ತು. ಅಪ್ಪನ ಕುರಿತು ಹುಟ್ಟಿದ ಸಣ್ಣ ಅನುಮಾನವೊಂದು ಅದು ಹೌದೋ ಅಲ್ಲವೋ ಎಂದು ಸಾಕ್ಷ್ಯಸಮೇತ ಹೇಳಲಾಗದಿದ್ದರೂ.. ಮನಕ್ಕೆ ನಿಜದ ಅರಿವಾಗಿತ್ತು. ವೆಂಕಟೇಶನೆಡೆಗೆ ಸೆಳೆಯುವಂತೆ ಮಾಡಿದ್ದೂ ಹೌದು. ಸತ್ಯಭಾಮ ಕುಟುಂಬದಿಂದ ದೂರವಾದ ದಿನಗಳಲ್ಲಿ ಚಿದಾನಂದ ಹಾಗೂ ಭಾರ್ಗವರ ಬದುಕು ಕಾಣಸಿಗುತ್ತದೆ.
ಭಾರ್ಗವನಿಗೆ ಜಾಣೆ, ವಾಸ್ತವವಾದಿಯಾದ ಶೀಲಾ ಸಂಗಾತಿಯಾಗಿ ಮಾವನನ್ನು ಮಗಳಿಗಿಂತಲೂ ಚೆನ್ನಾಗಿಯೇ ನೋಡಿ ಕಂಡ ಸೊಸೆಯಾಗಿ ಇಷ್ಟವಾದರೂ.. ಅವಳ ಜಾಣತನದ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.
ಬದಲಾದ ಚಿದಾನಂದನ ವಯಸ್ಸು, ಆರೋಗ್ಯ, ಪರಿಸ್ಥಿತಿ, ಮನಸ್ಥಿತಿಗಳಲ್ಲಿ ಮತ್ತೆ ಬಂದ ಭಾಮಾಳನ್ನು ಹಾಗೂ ಅವಳು ಬದುಕು ಕಟ್ಟಿಕೊಂಡ ಬಗೆಯನ್ನು ನಾವಿಲ್ಲಿ ಕಾಣಬಹುದು.
ಒಂದು ಕೌಟುಂಬಿಕ ಕಥೆಯಾಗಿ ಈ ಕಾದಂಬರಿ ಕಾಡುತ್ತದಾದರೂ.. ಇದು ಮೇಲ್ನೋಟಕ್ಕೆ ಕಂಡಂತೆ ಸರಳವಾದ ಕುಟುಂಬದ ಚಿತ್ರಣವೇನಲ್ಲ. ಎಲ್ಲರ ಆಲೋಚನೆಗಳಿಗೂ ಲೇಖಕಿ ಕನ್ನಡಿ ಹಿಡಿದಿದ್ದಾರೆ.
ಈ ಕಾದಂಬರಿಯಲ್ಲಿ ಭಾವುಕತೆಗೆ ಸಾಕಷ್ಟು ಆದ್ಯತೆಯನ್ನು ನೀಡಲಾಗಿದೆ. ಇದು ಕಾದಂಬರಿಯುವುದಕ್ಕೂ ಕಥೆಯ ಪೋಷಣೆಗೆ ಹಾಗೂ ಆಶಯಕ್ಕೆ ಬಹಳಷ್ಟು ಪೂರಕವಾಗಿದೆ. ಕಾದಂಬರಿಯಲ್ಲಿ ಭಾವನೆಗಳು ಹಾಗೂ ವಾಸ್ತವ ಎರಡನ್ನೂ ನೋಡುತ್ತೇವೆ. ಇಲ್ಲಿನ ಭಾವುಕತೆ ಓದುಗರನ್ನು ಸಹಜವಾಗಿಯೇ ಸೆಳೆಯುತ್ತದೆ ಹಾಗೂ ಕಾಡುತ್ತದೆ.
ಇಲ್ಲಿ ನಾಟಕೀಯವೆಂಬ ಭಾವನೆಗಳು ಕಾಣಸಿಗುವುದಿಲ್ಲ. ಇಲ್ಲಿನ ಭಾವುಕತೆಯ ಅಂಶಗಳು ಸಹಜವಾಗಿಯೇ ಚಿತ್ರಿತವಾಗಿವೆ. ಇವು ವಿವೇಚನೆಯುಳ್ಳ ಭಾವನೆಗಳೂ ಹೌದು. ಇಲ್ಲಿ ಭಾವುಕತೆ ಪೂರಕವಾಗಿವೆ. ಅವುಗಳಲ್ಲಿ ಕೆಲವನ್ನು ನೋಡೋಣ.
#ಕುಟುಂಬದಲ್ಲಿನ_ಭಾವುಕತೆ: ತಂದೆ-ಮಕ್ಕಳ ಬಾಂಧವ್ಯ, ತಂದೆಯ ತ್ಯಾಗ, ಅಕ್ಕ-ತಮ್ಮನ ಪ್ರೀತಿ
ಚಿದಾನಂದ ತನ್ನ ಪತ್ನಿ ಸುನಂದಾಳನ್ನು ಕಳೆದುಕೊಂಡ ನಂತರ ಆಕೆಯ ತಮ್ಮ ಅವರಿಗೆ ಮತ್ತೊಂದು ವಿವಾಹದ ಪ್ರಸ್ತಾಪ ತರುವ ಸಂದರ್ಭವಿದೆ. "ತಾಯಿ ಸತ್ತರೂ ಸೋದರ ಮಾವ ಇರಬೇಕು" ಎಂಬ ಗಾದೆ ಮಾತನ್ನು ಉಲ್ಲೇಖಿಸುತ್ತಲೇ ಆತನ ಸ್ವಾರ್ಥ ಜೊತೆಗೆ ಸತ್ಯಭಾಮಳ ಮುಂದಾಲೋಚನೆಯನ್ನು ತೋರುತ್ತಾರೆ.
ತನ್ನ ತಂದೆ ಮತ್ತೊಂದು ವಿವಾಹವಾದರೆ ಮುಂದಿನ ಬದುಕು ಹೇಗಿರಬಹುದು ಎಂದು ಯೋಚಿಸುತ್ತಾಳಾದರೂ ನೇರವಾಗಿ ತಂದೆಗೆ ಬೇಡ ಎಂದು ಹೇಳುವುದಿಲ್ಲ. ಆದರೆ, ತಮ್ಮನೊಡನೆ ತನ್ನ ಸ್ನೇಹಿತೆಯ ತಂದೆಯೊಬ್ಬರು ಮರು ವಿವಾಹವಾದ ಪ್ರಸಂಗವನ್ನು ಹೇಳುವಾಗ ತನ್ನ ಭವಿಷ್ಯದ ಊಹೆಯನ್ನೇ ಹೇಳುವ ಅವಳ ಮಾತನ್ನು ಅಪ್ರಯತ್ನಪೂರ್ವಕವಾಗಿ ಕೇಳಿಸಿಕೊಳ್ಳುವ ಚಿದಾನಂದ ತನ್ನ ಮರುವಿವಾಹದ ಕುರಿತ ನಿರಾಕರಣೆಯನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತಾರೆ.
ಮಕ್ಕಳಿಗಾಗಿ ತಂದೆ ತನ್ನ ಸ್ವಾರ್ಥವನ್ನು ಬದಿಗಿಟ್ಟು ಮಕ್ಕಳ ಕುರಿತು ಕಾಳಜಿ ಮಾಡುತ್ತಾ.. ಅವರ ಭವಿಷ್ಯಕ್ಕೆ ತನ್ನ ಬದುಕು ಎಂದು ಭದ್ರಮಾಡುವ ಚಿತ್ರಣವಿದೆ.
ಅಕ್ಕ-ತಮ್ಮನ ಪ್ರೀತಿ ತಾಯಿ ತೀರಿಕೊಂಡ ನಂತರ ತುಂಟಾಟಗಳೆಲ್ಲವೂ ಬದಲಾವಣೆಯಾಗಿ ಪ್ರೌಢವಾದರೂ.. ತುಂಟಾಟಗಳಿವೆ. ಈ ಭಾಂದವ್ಯ ಅಮ್ಮ ಮಗನನ್ನು ಪೋಷಿಸುವಂತಿದೆ.
#ಪ್ರೇಮದಲ್ಲಿನ_ಭಾವುಕತೆ: ಪ್ರೀತಿ, ವಿರಹ ಮತ್ತು ನಿರೀಕ್ಷೆ
ಸಹಪಾಠಿಯಾಗಿದ್ದ ವೆಂಕಟೇಶ ಭಾಮಳ ಕುರಿತು ಒಮ್ಮೆ ತೋರಿದ ಕಾಳಜಿಯ ನಂತರ ಆತನ ಕುರಿತು ಕುತೂಹಲ ತೋರಿ ಆತನ ನೋವಿನ ದಿನಗಳಲ್ಲಿ ಜೊತೆ ನಿಂತು ತಲ್ಲಣ, ಆತಂಕಗಳನ್ನು ನೀಡಲು ಸಹಕಾರಿಯಾದ ಚಿತ್ರಣಗಳು ಮುಂದೆ ಪ್ರೀತಿಯಾಗಿ ಬದಲಾಗುವ ಪರಿ ಇಲ್ಲಿದೆ.
ಚಿದಾನಂದ ಮಗಳ ಪ್ರೀತಿಗೆ ನಕಾರ ಸೂಚಿಸಿದಾಗ, ತಡೆಯಲು ನೋಡಿದಾಗ ವಿರಹವನ್ನು ತಡೆಯಲಾಗದ ಪರಿ, ವೆಂಕಟೇಶನ ಹಾಗೂ ತನ್ನ ಓದು ಮುಗಿದು ಒಳ್ಳೆಯ ಕೆಲಸಕ್ಕೆ ಸೇರಿ ವಿವಾಹವಾಗುವ ಆಲೋಚನೆ ಇದ್ದರೂ.. ಪರಿಸ್ಥಿತಿಯ ಪ್ರಭಾವ ನಿರೀಕ್ಷೆಗಳೆಲ್ಲವನ್ನು ಮೀರಿ ಪರಿಸ್ಥಿತಿಯನ್ನು ತಲೆಕೆಳಗು ಮಾಡಿದ್ದು ಮುಂದಿನ ಭಾವುಕ ನಿರ್ಧಾರಕ್ಕೆ ಕಾರಣವಾಗುತ್ತದೆ.
ಚಿದಾನಂದನೂ ಭಾವುಕನಾದರೂ ಮಗಳ ಕುರಿತು ಅಸಡ್ಡೆ ತೋರಿದ, ಮಗನನ್ನು ತಡೆದ ಪ್ರಸಂಗವಿದೆ.
#ಕರುಣೆಯ_ಭಾವುಕತೆ: ದುಃಖ, ಅಸಹಾಯಕತೆ, ಬಡತನ ಮತ್ತು ಮಾನವೀಯ ಸಂಕಟ
ವೆಂಕಟೇಶ ಭಾಮಳಿಗೆ ಹತ್ತಿರವಾಗಿದ್ದು ತನ್ನ ಅಕ್ಕನ ಸಾವಿನ ಸಂದರ್ಭದಲ್ಲಿ. ಮೂರು ತಿಂಗಳ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಹೋಗಿದ್ದ ಅವಳಿಗೆ ಗಂಡನ ಅನುಮಾನವೇ ಮುಳುವಾಗಿ ತಾಯಿ-ಮಕ್ಕಳಿಬ್ಬರೂ ಕೊಲೆಯಾಗಿದ್ದರು. ಬಾವ ಮಾಡಿದ ಕೊಲೆಯಿಂದ ಅಕ್ಕ ಮತ್ತು ಮಗುವನ್ನು ರಕ್ಷಿಸಲಾಗದ ಅಸಹಾಯಕತೆ, ದುಃಖ ಜೊತೆಗೆ ಅಕ್ಕ ತನ್ನ ಕಷ್ಟ ಹೇಳಿಕೊಂಡಿದ್ದರೂ ಅದಕ್ಕೆ ಸ್ಪಂದಿಸಿದ ಪರಿ ಅಸಹಾಯಕತೆಯನ್ನು ಮಾತ್ರವಲ್ಲದೆ, ಮಾನವೀಯತೆಯನ್ನು ಮರೆತು ವರ್ತಿಸಿದ ಕ್ಷಣಗಳಂತೆ ವೆಂಕಟೇಶನಿಗೆ ಭಾಸವಾದ ಚಿತ್ರಣವಿದೆ.
ವೆಂಕಟೇಶನದು ಭಾಮಳಷ್ಟು ಸೆಟಲ್ ಆಗಿರುವ ಕುಟುಂಬವಾಗಿರಲಿಲ್ಲ. ಅಲ್ಲದೆ ಜಾತಿಯೂ ಬೇರೆ. ವೆಂಕಟೇಶನ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕರೂ ಜೋಪಡಿಯಂತಹ ಪುಟ್ಟ ಬೇರೆಯ ಮನೆಯಲ್ಲಿ ವಾಸ. ಕೈಯಲ್ಲಿ ಸರಿಯಾದ ಕೆಲಸವಿಲ್ಲದೆ, ಹಣವಿಲ್ಲದೆ ಹಳ್ಳಿಯ ಬದುಕಿಗೆ ಹೊಂದಿಕೊಳ್ಳುವ ಅನಿವಾರ್ಯತೆ. ಮೊದಲಿಗೆ ಹಸು ಸಾಕಲು ಹೋಗಿ ಆದ ಎಡವಟ್ಟಿನಿಂದ ಇದ್ದುದನ್ನೂ ಕಳೆದುಕೊಂಡು ಸಾಯಲು ನಿರ್ಧರಿಸಿ ಮತ್ತೆ ಬದುಕುವ ಸ್ಥೈರ್ಯ ತೋರಿದ ಭಾಮ ದಂಪತಿಗಳನ್ನು ಕಾಣಬಹುದು.
#ಪ್ರಕೃತಿಯೊಡನೆ_ಭಾವುಕತೆ: ಪ್ರಕೃತಿಯ ಸೌಂದರ್ಯ ಮತ್ತು ಒಡನಾಡುವ ಭಾವನಾತ್ಮಕ ಕ್ಷಣಗಳು
ಚಿದಾನಂದ ಭಾಮಾಳ ಮನೆಗೆ ಬಂದ ಸಂದರ್ಭದಲ್ಲಿ ಬದಲಾದ ಪರಿಸರ, ಹಾಲು ಕರೆಯುವಾಗ ಹೊಲಕ್ಕೆ ಹೋಗುವಾಗ ತಂದೆಯನ್ನು ಒಬ್ಬರನ್ನೇ ಬಿಡದೆ ಜೊತೆಗೆ ಕರೆದುಕೊಂಡು ಹೋಗುವ ಕ್ಷಣಗಳು ಚಿದಾನಂದ ನಿಗೆ ಹಳ್ಳಿಯ ಹೊಸ ಜಗತ್ತಿನಂತೆ ಕಂಡು ವಿಚಿತ್ರದ್ದೂ, ವಿಶೇಷದ್ದೂ ಆಗಿ ಕಾಣಿಸಬಹುದಾದ ಕ್ಷಣಗಳಿವೆ.
#ಸಾಮಾಜಿಕ_ಮತ್ತು_ಅಸ್ತಿತ್ವದ ಭಾವುಕತೆ: ಅಸಮಾನತೆ ಮತ್ತು ಸಾಮಾಜಿಕ ನೋವು, ಬದುಕಿನ ಅರ್ಥದ ಹುಡುಕಾಟ, ನೆನಪು ಮತ್ತು ಅರಿವು
ಚಿದಾನಂದನಿಗೆ ಮಗಳು ತನಗೆ ಮೋಸ ಮಾಡಿದ ನೋವು, ತಂದೆಯ ಕುರಿತು ಅನುಮಾನವಿದ್ದರೂ ಅದನ್ನು ಹೀಗೆಯೇ ಎಂದು ಹೇಳಲಾಗದ ಭಾಮ ಇಬ್ಬರು ಮುಂದೆ ಬದಲಾಗುತ್ತಾರೆ.
ಶೀಲಾಳಿಗೆ ಭಾರ್ಗವ ತರುವ ಸಂಬಳ ತಮ್ಮ ಮುಂದಿನ ಭವಿಷ್ಯಕ್ಕೆ ಸಾಲದು ಎಂಬ ಅರಿವಿದ್ದಾಗ ಜಾಣತನದಿಂದಲೇ ಮಾವನನ್ನು ಒಪ್ಪಿಸಿ ಹಣಕಾಸಿನ ವಹಿವಾಟು, ತನಗೆ ಹಾಗೂ ತನ್ನ ಗಂಡನಿಗೆ ಅನುಕೂಲವಾಗಿ ಮಾಡಿಕೊಂಡ ಸಂದರ್ಭಗಳಿವೆ. ಹಾಗೆಂದು ಮಾವನ ಜೊತೆಗಿನ ಅವಳ ನಡೆ, ತೋರಿದ ಪ್ರೀತಿ ಭಾವುಕತೆ ಯಾವುದೂ ಮೋಸವೆನ್ನಿಸದು. ಸಾಮಾಜಿಕವಾಗಿ ಮುಂದೆ ತಾನು ಯಾರಿಗೂ ಕಮ್ಮಿ ಇರಬಾರದು ಎನಿಸುವ ಅವಳ ಭಾವುಕ ಆಲೋಚನೆ ಇಲ್ಲಿದೆ.
ನಿವೃತ್ತ ಬದುಕಿನ ನಂತರದ ಬದುಕು ಲವಲವಿಕೆ ಮೊಮ್ಮಗನಲ್ಲಿ ಕಂಡುಕೊಂಡ ಚಿದಾನಂದ, ಸರೋಜನ ಅನುಪಸ್ಥಿತಿಯಲ್ಲಿ ಬದಲಾದ ಅವನ ಲವಲವಿಕೆ, ಮುಂದೆ ನೆನಪುಗಳನ್ನು ಕಳೆದುಕೊಂಡಾಗ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದ ಅವನನ್ನು ಸಂಭಾಳಿಸಲು ಹೆಣಗುತ್ತಿದ್ದ ಮಗ-ಸೊಸೆ. ಶೀಲಾಳಿಗೆ ಪೀಕಲಾಟಕ್ಕೆ ಇಟ್ಟುಕೊಳ್ಳುವ ಸಂದರ್ಭಗಳು, ಸರೀಕರೆದುರಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಬಂದಂತೆ ಬಾಳಲು ಹೊರಟಾಗಲೆಲ್ಲಾ ಅಡ್ಡಿಯಾಗುತ್ತಿದ್ದ ಮಾವನ ವರ್ತನೆಗಳು, ಮತ್ತೊಬ್ಬರು ದೂರಿದಾಗ ಅಥವಾ ಸಲಹೆ ನೀಡಿದಾಗ ಹಿಡಿಯಷ್ಟಾಗುತ್ತಿದ್ದ ಅವಳ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿವೆ.
ಅಳಿಯನನ್ನು, ಮಗಳನ್ನು ಮನೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳುವ ನಿರೀಕ್ಷೆ, ಪ್ರೀತಿಗಳನ್ನು ಹೊತ್ತಿದ್ದ ಚಿದಾನಂದನ ಮನಸ್ಸನ್ನು ಛಿದ್ರಗೊಳಿಸಿದ್ದ ಭಾಮ ಭಾವುಕಳಾಗಿ ವೆಂಕಟೇಶನೊಡನೆ ಹೋಗಲು ನಿರ್ಧರಿಸಿದಳೇ..?
ಇನ್ನಷ್ಟು ತಾಳ್ಮೆ ತೆಗೆದುಕೊಂಡಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತಾ..?
"ನಾಲ್ಕು ದಿನ ಕಳೆದ್ರೆ ಎಲ್ಲಾ ಹಳಸೋಕೆ ಶುರುವಾಗುತ್ತೆ" ಅಂದಿದ್ದ ಅಪ್ಪನ ಮಾತು ತಾನು ತೆಗೆದುಕೊಂಡ ನಿರ್ಧಾರ ತಪ್ಪು ಎನ್ನಿಸದಂತೆ ಪಶ್ಚಾತ್ತಾಪ ಆಗುವುದಕ್ಕೆ ಬಿಡದ ಭಾಮಳ ಭಾವುಕತೆಯ ಮೇಲಿನ ಹಿಡಿತ ಅವಳನ್ನು ಗಟ್ಟಿಯಾಗಿಸಿತಾ..?
ಮಗಳನ್ನು ಮರೆಸುವಷ್ಟು ಪ್ರೀತಿ ತೋರಿದ ಸೊಸೆ ಬೇರೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಳಾದರೂ ಚಿದಾನಂದನ ಮರೆವಿನ ಸ್ಥಿತಿ ತಂದಿಟ್ಟ ಪೇಚಾಟಕ್ಕೆ ಭಾವಕತೆಯನ್ನು ಮೀರಿ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿ ಭಾಮಾಳನ್ನು ಕರೆಸಿದಳಾ..?
ಭಾಮಾಳ ವಿಚಾರ ತಿಳಿದಾಗ ಭಾವುಕತೆಯಿಂದಲೇ ಸ್ಪಂದಿಸಿದ್ದ ಭಾರ್ಗವ ವಾಸ್ತವಕ್ಕೆ ಹೊಂದಿಕೊಂಡನಾ..?
ಒಂದೊಮ್ಮೆ ಅಪ್ಪನ ಸ್ಥಿತಿಯನ್ನು ಅನುಮಾನಿಸಿದ ಮಗಳು ಇಷ್ಟಿಷ್ಟೇ ದೂರವಾಗುತ್ತಿದ್ದ ಭಾಮ ಪುನಃ ತಂದೆಯನ್ನು ಕರೆತಂದು ಆದರಿಸುವಾಗ..
"ಮಗಳು ದೊಡ್ಡವಳಾದ್ಲು ಅಂತ ಈಗ ಇನ್ನೊಂದು ಮಗುನ ಮಡಿಲಿಗೆ ಹಾಕಿದ್ದಾನೆ ಭಗವಂತನ ನಂಗೆ ಈಗ ಇಬ್ಬರು ಮಕ್ಕಳು ಕಣೋ.." ಎಂದು ಕುಶಾಲಿನಿಂದ ಗಂಡನೊಡನೆ ಹೇಳಿದರೂ ಮತ್ತೆ ಅಪ್ಪಿ ಒಪ್ಪುವ ಭಾವುಕತೆ ಏನು ಕಡಿಮೆಯದ್ದಾ..?!
"ನಿನಗೆ ಇಬ್ಬರಾದ್ರೆ ನನಗೂ ಇಬ್ಬರೇ.." ಎಂದ ವೆಂಕಟೇಶ ಕೇವಲ ಮಾತಿನಲ್ಲಲ್ಲದೆ ಕೃತಿಯಲ್ಲೂ ಮಾವನನ್ನು ಮಗುವಿನಂತೆ ಪೋಷಿಸಿದ ಭಾವುಕತೆ ಕಡಿಮೆಯದ್ದಲ್ಲ. ಅವರ ಹಣ, ಆಸ್ತಿ ಎಂದಿಗೂ ಬೇಡವೆಂದು ಮುಂಚೆಯೇ ಪತ್ನಿಗೆ ಹೇಳಿದ ಅವನ ಆಲೋಚನೆಯಂತೂ ಚಿಕ್ಕದ್ದಲ್ಲವೇ ಅಲ್ಲ, ಹಾಗೆಂದು ಯಾವುದೋ ಭಾವುಕ ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನವೂ ಅಲ್ಲ.
"ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಲು ನಾವು ಅವರಿಗೆ ಮೇಲ್ಪಂಕ್ತಿಯಾಗಬೇಕೇ ಹೊರತು ತಪ್ಪು ಮಾದರಿಯಾಗಬಾರದು." ಎನ್ನುವ ವೆಂಕಟೇಶನ ಉದಾತ್ತ ಮಾತುಗಳು ಭಾವುಕತೆಯ ಜೊತೆಗೆ ಹೃದಯ ವೈಶಾಲ್ಯವನ್ನೂ, ಔನತ್ಯವನ್ನೂ ತೋರುತ್ತವೆ.
ರಸಾನುಭವ, ವಾಸ್ತವತೆ ಜೊತೆಗೆ ಭಾವನಾತ್ಮಕತೆ, ಭಾವುಕತೆಯನ್ನು ಹದವಾಗಿ ಹೆಣೆದಿರುವ ಪರಿ ಸಾಹಿತ್ಯದಲ್ಲಿ ಭಾವುಕತೆಯ ಪಾತ್ರ ಹದವಾಗಿದ್ದಾಗ ಅದು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವ ಪರಿಯನ್ನು ನಾವಿಲ್ಲಿ ಸ್ಪಷ್ಟವಾಗಿ ಕಾಣಬಹುದು. ವಸುಮತಿ ಉಡುಪರವರ ಸಾಕಷ್ಟು ಕಥೆ-ಕಾದಂಬರಿಗಳಂತೆಯೇ ಗಾಢವಾಗಿ ತಾಕಿದ ಕಾದಂಬರಿ ಇದು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ