ಶುಕ್ರವಾರ, ನವೆಂಬರ್ 20, 2026

ಯವನ ಸೈರಂಧ್ರಿ (ಪುಸ್ತಕ ಯಾನ - 514)


ಪುಸ್ತಕದ ಶೀರ್ಷಿಕೆ : ಯವನ ಸೈರಂಧ್ರಿ

ಕೃತಿ ಪ್ರಕಾರ : ಐತಿಹಾಸಿಕ ಕಾದಂಬರಿ 

ಲೇಖಕರು : ಕೆರೂರು ವಾಸುದೇವಾಚಾರ್ಯ

ಪ್ರಕಾಶಕರು : ಮನೋಹರ ಗ್ರಂಥಮಾಲಾ

ಪ್ರಥಮ ಮುದ್ರಣ : 1952

ಪುಟಗಳು : 240


ಈ ಕೃತಿ ಮನೋಹರ ಗ್ರಂಥಮಾಲಯ 111ನೇ ಕೃತಿ. 1908 ರಲ್ಲಿ ಸ್ವತಂತ್ರ ಸಾಮಾಜಿಕ ಕಾದಂಬರಿ 'ಇಂದಿರಾ' ರಚಿಸಿ ಆಧ್ಯ ಕಾದಂಬರಿಕಾರರೆನಿಸಿಕೊಂಡ ಕೆರೂರು ವಾಸುದೇವಾಚಾರ್ಯರು ಹಲವಾರು ಕೃತಿಗಳನ್ನು ಬರೆದರೂ.. ಮೂರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. 'ಯದು ಮಹಾರಾಜ', 'ಔರಂಗಜೇಬ' ಮತ್ತು 'ಯವನ ಸೈರಂಧ್ರಿ'.


ಈ ಕಥೆ ಅಕಬರ ಬಾದಶಹನ ಕಾಲದ್ದು. ಕಾದಂಬರಿಯಲ್ಲಿ ಉಲ್ಲೇಖಿಸಿರುವಂತೆಯೇ ಹೆಸರುಗಳನ್ನು ಉಲ್ಲೇಖಿಸುವೆ. ಕಾದಂಬರಿಯ ಅಧ್ಯಾಯಗಳಿಗೆ ಚಂದದ ಶೀರ್ಷಿಕೆಗಳನ್ನು ನೀಡುತ್ತಾ ಅಲ್ಲಲ್ಲಿ ಭರ್ತೃಹರಿಯ ಸುಭಾಷಿತಗಳು ಹಾಗೂ ಇನ್ನಿತರ ಸೂಕ್ತಿಗಳನ್ನು ಬಳಸಿದ್ದಾರೆ. ಕೆಲವೆಡೆ ಹಿಂದಿಯಲ್ಲಿನ ಸೂಕ್ತಿಗಳನ್ನು, ಹಾಡುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಉಲ್ಲೇಖಿಸಿದ್ದಾರೆ. 


ಕಾದಂಬರಿ ಆರಂಭವಾಗುವುದು ಅಕಬರನ ಆಳ್ವಿಕೆಯ ಕಾಲದಲ್ಲಿನ ಅಪಘಾನರ ಹೆಸರೇ ಅಳಿಸಿಬಿಡಬೇಕೆಂದು ನಿಶ್ಚಯಿಸಿದ ಅಕಬರ ಪ್ರಬಲ ಸೇನೆಯನ್ನು ಕಟ್ಟಿ ಬಂಗಾಲದಿಂದ ಶೀರಶಹನ ವಂಶದವರನ್ನು ಹೊರಹಾಕಿದ್ದ ಸಂದರ್ಭ. ಒಪ್ಪಂದಗಳು, ರಾಜಕೀಯ ಸಂದರ್ಭಗಳನ್ನು ಕಾಣಬಹುದು. ಇದರ ಪರಿಣಾಮದಿಂದ ಜಮೀನುದಾರರು ಕೆಲವರು ತಮ್ಮ ಅಧಿಕಾರ ಕಳೆದುಕೊಂಡರೆ, ಅವರ ವಿರೋಧಿಗಳು ಇದರ ಲಾಭ ಪಡೆದುಕೊಂಡರು.


ಇಲ್ಲಿ ಇಬ್ಬರು ಪ್ರಮುಖರು ಬೀರನಗರದ ಭೂಪೇಂದ್ರರಾಯರು ಹಾಗೂ ದೇವೀಪುರದ ನವಕುಮಾರ. ಆ ಸಮಯದಲ್ಲಿ ಅಕಬರನ ಪ್ರತಿನಿಧಿಯಾಗಿದ್ದದ್ದು ತೋಡರಮಲ್ಲ. 


ದೇವೀಪುರದ ಜಮೀನುದಾರನಾದ ನವಕುಮಾರನ ಆಸ್ತಿಯನ್ನು ಬಾದಶಹನ ಆಜ್ಞೆಯಾಗುವವರೆಗೆ ಬೀರನಗರದ ಭೂಪೇಂದ್ರನಾಥನು ತನ್ನಲ್ಲಿಯೇ ಇಟ್ಟುಕೊಂಡು ಅದರ ಉತ್ಪನ್ನವನ್ನು ಅವನೇ ತೆಗೆದುಕೊಳ್ಳಬೇಕೆಂದು ವಿಧಿಸಿದ್ದು ಏಕೆ..?


ನವಕುಮಾರನ ಪತ್ನಿ ಸುಶೀಲಾದೇವಿ. ಹೆಸರಿಗೆ ತಕ್ಕಂತಹ ಗುಣವಂತೆ. ಅವರಿಗಿದ್ದಡ್ಡು ಒಬ್ಬಳೇ ಮಗಳು ಹೇಮಲತಾ. ನವಕುಮಾರನ ತಮ್ಮನ ಮಗ ಶ್ರೀಶಚಂದ್ರನು ಇವರಲ್ಲಿಯೇ ಬೆಳೆಯುತ್ತಿದ್ದನು. 


ಅಲ್ಪಕಾಲದಲ್ಲಿಯೇ ಭೂಪೇಂದ್ರನಾಥನು ತೀರಿಕೊಂಡದ್ದರಿಂದ ಆತನ ವಾರಸುದಾರರಾಗಿದ್ದ ಇನ್ನೂ ಪುಟ್ಟ ಮೊಮ್ಮಕ್ಕಳಾದ ನರೇಂದ್ರನಾಥ ಮತ್ತು ಅವನ ತಂಗಿ ಜಗತ್ ಸುಂದರಿಯನ್ನು ಮತ್ತವರ ಆಸ್ತಿಯನ್ನು ತೋಡರ ಮಲ್ಲನು ನವಕುಮಾರನ ಸ್ವಾಧೀನದಲ್ಲಿರಿಸಿ ಎಲ್ಲದರ ಮೇಲ್ವಿಚಾರಣೆ ಮಾಡಬೇಕೆಂದು ಆದೇಶಿಸಿದ್ದನು. ಅರೆಮನಸ್ಸಿನಿಂದ, ವಿಧಿಯಿಲ್ಲದೆ ನವಕುಮಾರನು ಒಪ್ಪುತ್ತಾನೆ. 


ಪೂರ್ವಜರಿಂದಲೂ ಬೀರನಗರದ ದೇವಿಪುರದ ಮನೆತನಗಳಿಗೆ ಸಂಬಂಧ ಅಷ್ಟು ಸರಿ ಇರಲಿಲ್ಲ. ಸುಶೀಲಾದೇವಿ ಬೀರನಗರದ ಹೆಣ್ಣುಮಗಳೇ.. ಎರಡು ಊರುಗಳಲ್ಲಿಯೂ ವೈವಾಹಿಕ ಸಂಬಂಧಗಳಿದ್ದರೂ ಮನಸ್ಸುಗಳು ಕೂಡಿದ್ದು ಕಡಿಮೆ. ವೈರಿಗಳಿಗೆ ಎಲ್ಲದರ ಮೇಲ್ವಿಚಾರಣೆ ಕೊಟ್ಟಿದ್ದು ಎಷ್ಟು ಸರಿಯಾಯ್ತು..?


ಯಾವ ಮಕ್ಕಳಲ್ಲಿಯೂ ಭೇದ ಮಾಡದೆ ನಾಲ್ವರನ್ನೂ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೆಂಬಂತೆ ನೋಡಿಕೊಂಡಳು. ತನ್ನ ಮಗಳು ಹೇಮಲತಾಳನ್ನು ನರೇಂದ್ರನಿಗೂ.. ಅವನ ತಂಗಿ ಜಗತ್ಸುಂದರಿಯನ್ನು ಶ್ರೀಶಚಂದ್ರನಿಗೆ ತಂದುಕೊಂಡು ತನ್ನ ಸೊಸೆ ಮಾಡಿಕೊಳ್ಳಲು ಮೊದಲಿನಿಂದಲೂ ಕನಸು ಕಂಡು ಮಕ್ಕಳ ಮನಸ್ಸಿನಲ್ಲೂ ಅದೇ ಭಾವನೆ ಮೂಡಿತ್ತು. ಎಲ್ಲರೂ ಸದ್ಗುಣ ಸಂಪನ್ನರೇ.. ಹುಡುಗರು ಚರ್ಚೆಗಳು, ಕಾವ್ಯ, ಶೌರ್ಯ ಮುಂತಾದವುಗಳಲ್ಲಿ ಸಹಪಾಠಿಗಳಂತೆ ಬೆರೆತರು. ನಾಲ್ವರೂ ಹೊಂದಾಣಿಕೆಯಿಂದ ಇದ್ದರೂ ಎಂದಿಗೂ ಎಲ್ಲೇ ಮೀರಿದವರಲ್ಲ. ಬಾಲಲೀಲೆಯಿಂದ ಹಿಡಿದು ಯೌವ್ವನದವರೆಗೂ ಬಹಳ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು.


ನವಕುಮಾರನ ಕೈಕೆಳಗೆ ಗೋಕುಲದಾಸನೆಂಬ ಗುಮಾಸ್ತನಿದ್ದ. ಆತ ಕಪಟಿ, ವಂಚಕ, ಗೋಮುಖ ವ್ಯಾಘ್ರನಂತಿದ್ದವನು. ತನಗೆ ಸಮಯ ಸಿಕ್ಕಾಗಲೆಲ್ಲ ನವಕುಮಾರನ ಕಿವಿಗೆ ಇಲ್ಲಸಲ್ಲದ್ದು ತುಂಬುತ್ತಿದ್ದನು. ನವಕುಮಾರನಿಗೆ ಗಂಡು ಮಕ್ಕಳಿಲ್ಲದರಿಂದ ಅವನ ಮಗಳು ಹೇಮಲತಳನ್ನು ತನ್ನ ಮಗ ಘನಶ್ಯಾಮನಿಗೆ ತಂದುಕೊಂಡು ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ದುರಾಸೆಯಲ್ಲಿದ್ದವನು. ಅದಕ್ಕಾಗಿ ಮೊದಲಿಗೆ ಶ್ರೀಶನನ್ನು ಹಾಗೂ ನಂತರದಲ್ಲಿ ನರೇಂದ್ರನನ್ನು ದೂರ ಮಾಡಲು ಸಾಕಷ್ಟು ಪ್ರಯತ್ನಿಸಿದನು. ಅವನು ಅದರಲ್ಲಿ ಸಫಲನೂ ಆದನು. ಅದು ಹೇಗೆ..? ಹಾಗೆಂದು ಕೆಡುಕಿಗೆ ಗೆಲುವು ಎಂಬರ್ಥವಲ್ಲ. ಆದರೆ, ತಾತ್ಕಾಲಿಕ ಗೆಲುವು ಸಿಕ್ಕಿದಂತೂ ಹೌದು.


ಗೋಕುಲದಾಸನ ಕಪಟ ಜಾಲಕ್ಕೆ ಸಿಕ್ಕ ನವಕುಮಾರನಿಗೆ ಯಾರ ಬುದ್ಧಿವಾದವೂ ರುಚಿಸಲಿಲ್ಲ. ಇಬ್ಬರೂ ಗಂಡುಮಕ್ಕಳಿಗೆ ಸಂಪೂರ್ಣ ವಿದ್ಯಾಭ್ಯಾಸವನ್ನು ಕೊಡಿಸದೆ ಕೈಬಿಟ್ಟನಾದರೂ ಅಷ್ಟರಲ್ಲಾಗಲೇ ತಮಗೆ ಬೇಕಾದ ವಿದ್ಯೆಗಳನ್ನು ಕಲಿತಿದ್ದು, ಅಭ್ಯಸಿಸುತ್ತಿದ್ದ ಪರಿ ನಿಜಕ್ಕೂ ಮೆಚ್ಚುವಂಥದ್ದು.


ತೋಡರಮಲ್ಲನ ಮರಣವಾಗಿ ಅವನ ಜಾಗಕ್ಕೆ ಈಗ ಮಾನಸಿಂಹ ಬಂದಿದ್ದ. ವಸಂತೋತ್ಸವದ ಸಂದರ್ಭದಲ್ಲಿ, ರಂಗಪಂಚಮಿಯ ಆಚರಣೆಯ ಸಂದರ್ಭದಲ್ಲಿ ಕಾದು ಕುಳಿತಿದ್ದವನಂತೆ ನವಕುಮಾರ ದೇವೀಪುರದ ಆಸ್ತಿಯ ಉಸ್ತುವಾರಿಯನ್ನು ತನ್ನದಾಗಿಸಿಕೊಂಡ. ನರೇಂದ್ರ ಹಾಗೂ ಶ್ರೀಶರಿಗೆ ಮಾನಸಿಹನ ಅಭಯಹಸ್ತ ದೊರೆಯಿತು. ಮುಂದೆ ನವಕುಮಾರನ ಆಶ್ರಯ ತಪ್ಪಿದಾಗ ಇದರ ಉಪಯೋಗ ಪಡೆದರು.


ಮಾನಸಿಂಹನ ಪತ್ನಿ ಅಂಬರದ ರಾಣಿ ಹಾಗು ಆತನ ಮಗಳು ತಾರಾದೇವಿ ಬಂದಿದ್ದ ಸಂದರ್ಭದಲ್ಲಿ ತಾರಾದೇವಿಗೆ ಜೊತೆಯಾಗಿ.. ಅವಳ ಭಾಷೆ ಕಲಿತಿದ್ದ ಹೇಮಲತಾ ಜೊತೆಯಾದಳು. ಮುಂದೆ ಆ ಸ್ನೇಹ ಇನ್ನೂ ಹೆಚ್ಚಾಯಿತು. 


ನವಕುಮಾರನ ಕೋಪಕ್ಕೆ ಗುರಿಯಾಗಿ ಮನೆಬಿಟ್ಟ ಶ್ರೀಶನಿಗೆ ರಾಜಮಹಲಿನ ಆಶ್ರಯ ದೊರೆತು ಸೈನ್ಯದಲ್ಲಿ ಚಿಕ್ಕ ಅಧಿಕಾರ ದೊರೆಯಿತು. 


ಗೋಕುಲದಾಸನ ಕುಟಿಲೋಪಾಯದಿಂದ ನರೇಂದ್ರನ ಮೇಲೆ ಸುಳ್ಳು ಆರೋಪ ಹೊರಿಸಿ ಪತ್ರ ಬರೆಯಲಾಯಿತು. ರಾಜಕಾರಣಕ್ಕೆ ಸಂಬಂಧಿಸಿದ ಆರೋಪವಾದ್ದರಿಂದ ಮಾನಸಿಂಹನಿಗೆ ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವ್ಯಾಪ್ತಿ ಇರಲಿಲ್ಲವಾದ್ದರಿಂದ ಅದು ಅಕಬರನ ಬಳಿಗೆ ಹೋಯಿತು. ಆದರೆ, ನರೇಂದ್ರನಿಗೆ ಪೌಜುದಾರನಾಗುವ ಯೋಗ ಸಿಕ್ಕಿತು.

 

ಎರಡು ಜೋಡಿಗಳ ಪ್ರೇಮವಿಯೋಗವೂ ಇಲ್ಲಿ ಚಿತ್ರಿತವಾಗಿದೆ.  ಮುಂದೆ ಶ್ರೀಶನಿಗೆ ತನ್ನ ತಂಗಿ ಜಗತ್ ಸುಂದರಿಯನ್ನು ವಿವಾಹ ಮಾಡಿಸಿ ಮೂವರೂ ಸುಖವಾಗಿ ಇರುತ್ತಾರೆನ್ನುವಷ್ಟರಲ್ಲಿ ಗಂಭೀರ ಸಮಸ್ಯೆ ಎದುರಾಗುತ್ತದೆ. 


ಅಮೀರಖಾನ ಪಠಾಣ ಬಂಡೆದ್ದುದರಿಂದ ಮಾನಸಿಂಹನ ಜೊತೆ ನರೇಂದ್ರ ಅಗ್ರಾಕ್ಕೆ ಹೋಗಬೇಕಾದ ಸಂದರ್ಭ. ತಾರಾದೇವಿಯ ಮಧ್ಯಸ್ಥಿಕೆಯಿಂದ ಆತ ಹೋಗುವಷ್ಟರಲ್ಲಿ ಅವನನ್ನು ಕಾಣಲು ಹೇಮಲತಾ ಬಂದರೂ ಅವಳಿಗೆ ನರೇಂದ್ರ ಸಿಗುವುದಿಲ್ಲ. ಮುಂದೆ ಹೇಮಲತಾಳ ಪರಿಸ್ಥಿತಿ ಏನಿತ್ತು ..?


ನರೇಂದ್ರ ಯುದ್ಧ ಮಾಡಿ ಜಯಿಸಿ ನರೂ ಗಂಭೀರ ಗಾಯಗಳಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಾನಸಿಂಹನ ದೆಸೆಯಿಂದ ಅಂಬರದ ಬಾದಶಾಹಿಣಿಯ ಅಂತಃಪುರದಲ್ಲಿ ಚಿಕಿತ್ಸೆಗಾಗಿ ನಿಲ್ಲಬೇಕಾಗುತ್ತದೆ. ಆಗ ಆತನ ಸೇವೆಗೆ ಬರುವ ಯವನ ಸುಂದರಿ ಜುಲೇಕಾ. ಮುಂದೆ ರಾಜನಿಂದ ಬಹದ್ದೂರ್ ಎನ್ನುವ ಪಟ್ಟ ಸಿಗುವುದು ನರೇಂದ್ರನ ಶೌರ್ಯಕ್ಕೆ ಸಿಕ್ಕ ಉಡುಗೊರೆ.


ಜುಲೇಕಾಳ ಜೊತೆಗಿನ ಮಾತುಕತೆ, ಸ್ನೇಹಪೂರ್ವಕ ನಡವಳಿಕೆ, ಆಗಾಗ ಬಣಚೇಷ್ಠೆಯ ಮಾತುಗಳು ಇದರಾಚೆಗೆ ಬಹುದೊಡ್ಡ ಸಾಹಸಕಾರ್ಯವೊಂದನ್ನು ಯಾರಿಗೂ ತಿಳಿಯದಂತೆ ಮಾಡಬೇಕಾಗಿ ಬರುವ ಸಂದರ್ಭ ಬರುತ್ತದೆ.


ಈಗ ಕಾದಂಬರಿಯ ಶೀರ್ಷಿಕೆಯ ಮುಖ್ಯಘಟ್ಟ. ಮಹಾಭಾರತದಲ್ಲಿ ದ್ರೌಪದಿ ಸೈರಂಧ್ರಿಯಾಗಿದ್ದಾಗ ಕೀಚಕನಿಂದ ತೊಂದರೆಗಳಾಗುತ್ತಿರುವಾಗ ಭೀಮಸೇನ ಮಾರುವೇಷದಲ್ಲಿ ಹೋಗಿ ಅವನ ವಧೆ ಮಾಡುವ ಪ್ರಸಂಗವಿದೆಯಲ್ಲವೇ

ಅಂತಹದ್ದೇ ಸ್ವಾರಸ್ಯಕರವಾದ ಪ್ರಸಂಗ ಇಲ್ಲಿದೆ. ಇಲ್ಲಿ ಯಾರದ್ದೂ ವಧೆಯಾಗುವುದಿಲ್ಲ. ಆದರೆ, ತೇಜೋವಧೆಯಂತೂ ಆಗುತ್ತದೆ. ಹೆಣ್ಣುಮಕ್ಕಳನ್ನು ಕಾಯುವ ನರೇಂದ್ರನ ಗುಣವೇ ಆತನಿಗೆ ಸಹಾಯಕವೂ ಹಾಗೆಯೇ ಶಿಕ್ಷೆಯೂ ಆಗುತ್ತದೆ. 


ಅಕಬರ ಬಾದಶಹನ ಅಂತಪುರದ ಪ್ರಸಂಗಗಳು, ಆತನ ದರ್ಬಾರು, ಕಾರ್ಯಭಾರ ಹೇಗಿತ್ತು..? ಆತನ ಮಗ ಸಲೀಮನ ನಡೆ ಏನಿತ್ತು..? ಅಷ್ಟಕ್ಕೂ ನರೇಂದ್ರ ಕಾಪಾಡಿದ್ದು ಯಾರನ್ನು ಓದಿ ನೋಡಿ.


ಪೃಥ್ವಿರಾಜ ಹಾಗೂ ನರೇಂದ್ರ ಇಬ್ಬರನ್ನು ಆಗ್ರಾದಿಂದ ಹೊರಗಿಡುವ ಪ್ರಸಂಗಕ್ಕೆ ಕೊಟ್ಟ ಕಾರಣವೇನು..? ಸ್ವಲ್ಪ ಯಾಮಾರಿದ್ದರೂ ನರೇಂದ್ರ ಕುತಂತ್ರಕ್ಕೆ ಬಲಿಯಾಗುತ್ತಿದ್ದ ಎನ್ನುವ ಸಂದರ್ಭದಲ್ಲಿ ಆತನನ್ನು ಕಾಪಾಡಿದವರು ಯಾರು..? ಪೃಥ್ವಿರಾಜ ತಾನು ಅಕಬರನಿಗಾಗಿಯೇ ಕೆಲಸ ಮಾಡುತ್ತಿದ್ದರೂ ಆಡಳಿತದ ಬಗ್ಗೆ ಹೊಂದಿದ್ದ ಮನಸ್ಸಿನ ಮಾತುಗಳು ವ್ಯಕ್ತವಾಗಿದ್ದು ಹೇಗೆ..?


ಗೋಕುಲದಾಸನ ದುರ್ನಡತೆಗಳು ಬಯಲಾಗಿ ಆತ ನವಕುಮಾರನಿಗೆ ಮೋಸ ಸಾಕಷ್ಟು ದೋಚಿಕೊಂಡು ಹೋದಾಗ ನವಕುಮಾರನಿಗೆ ಬುದ್ಧಿ ಬಂದರೂ.. ಶ್ರೀಶನ ಎದುರಲ್ಲಿ ತಗ್ಗಲು ಸಿದ್ಧವಿರಲಿಲ್ಲ. ಮತ್ತೆ ಈಗ ದೇವೀಪುರ ಹಾಗೂ ಬೀರನಗರಗಳ ಜಮೀನುದಾರಿಕೆಯ ಜವಾಬ್ದಾರಿ ಶ್ರೀಶನ ಹೆಗಲೇರುತ್ತದೆ. ಅದಕ್ಕೆ ನವಕುಮಾರ ಪ್ರತಿಕ್ರಿಯಿಸಿದ ಬಗೆ ಹೇಗೆ..? ನರೇಂದ್ರ ಮನೆ ಬಿಡುವ ಮುಂಚೆ ನವಕುಮಾರನ ವಿಷಯದಲ್ಲಿ ಹೇಳಿದ್ದ ಭವಿಷ್ಯ ನಿಜವಾಗುತ್ತದೆ. ತನ್ನ ಮಗಳು ಹೇಮಲತಾಳನ್ನು ನರೇಂದ್ರನಿಗೆ ಕೊಡಲಾರೆ ಎನ್ನುವ ನವಕುಮಾರ ಬದಲಾಗುವುದಕ್ಕೆ ಕಾರಣವೇನು..? ಜುಲೇಕಾ ನರೇಂದ್ರನ ವಿವಾಹದ ಸಂದರ್ಭದಲ್ಲಿ ಉಪಸ್ಥಿತಳಿರುವುದು ಕಾದಂಬರಿಯ ಮತ್ತೊಂದು ಅಚ್ಚರಿ. ಆ ಯವನ ಸುಂದರಿ ಯಾರು..? ಯವನ ಸೈರಂಧ್ರಿಯ ಪ್ರಸಂಗದ ಸೂತ್ರಧಾರಿಯೇ ಇವಳಾ ಓದಿ ನೋಡಿ.


ಕಾದಂಬರಿ ಸುಖಾಂತ್ಯವೇ ಆಗುತ್ತದೆ. ಸಾಕಷ್ಟು ತಿರುವುಗಳೊಂದಿಗೆ ಹಾಗೂ ಸೊಗಸಾದ ನಿರೂಪಣೆಯೊಂದಿಗೆ ಮನಸ್ಸಿಗೆ ಮುದ ನೀಡುತ್ತದೆ. ಐತಿಹಾಸಿಕ ಕಾದಂಬರಿ ಎಂದು ಓದಲು ಹಿಂದೆ ಮುಂದೆ ನೋಡುವವರು ಸಹ ಓದಬಹುದಾದದಂತಹ ರಸವತ್ತಾದ ಕಾದಂಬರಿ ಇದು. ಐತಿಹಾಸಿಕ ವಿಚಾರಗಳು ಮಿಳಿತವಾಗಿದ್ದರೂ.. ಹೆಚ್ಚಿನಂಶ ಕೌಟುಂಬಿಕ ಹಾಗೂ ಸಾಮಾಜಿಕ ಅಂಶಗಳೊಡನೆ ಸಾಗುತ್ತಾ ಮನೋರಂಜನೆಗೂ ಆದ್ಯತೆ ನೀಡಲಾಗಿರುವುದು ಕಾದಂಬರಿಯ ಓದನ್ನು ಮತ್ತಷ್ಟು ಆಪ್ತವಾಗಿಸುತ್ತದೆ.


ವಿವಿದ ರೀತಿಯ ಹಬ್ಬಗಳು, ಆಚರಣೆಗಳು, ಬೇರೆ ಬೇರೆ ಪ್ರಾಂತ್ಯದಲ್ಲಿರುವ ರೀತಿ-ನೀತಿ, ನಡೆಗಳು ಇವೆಲ್ಲವನ್ನು ನಾವಿಲ್ಲಿ ಕಾಣಬಹುದು. ಆರೋಗ್ಯ ಹಾಗೂ ಚಿಕಿತ್ಸೆಯ ವಿಚಾರದಲ್ಲಿಯೂ ಮುದ್ದಿಗಿಂತಲೂ ವಿಶ್ರಾಂತಿ, ಮಾನಸಿಕ ಆರೋಗ್ಯ, ಸಂಗೀತ ಹಾಗೂ ಓದಿಗೆ ಪ್ರಾಮುಖ್ಯತೆ ನೀಡಿರುವುದು ವಿಶೇಷವೆನಿಸಿತು. ಲೇಖಕರು ವಾಕ್ಯರಚನೆಯಲ್ಲಿ ಬಳಸಿರುವ ಉಪಮೆಗಳು ಹಾಗೂ ಸೊಗಸಾದ ಶೈಲಿ ಬಹಳವೇ ಹಿಡಿಸಿತು. ಇವರ ಬೇರೆ ಕೃತಿಗಳನ್ನು ಓದಬೇಕಿದೆ. ಓದದೇ ಇದ್ದವರು ತಪ್ಪದೇ ಓದಿ ನೋಡಿ. ಒಂದೊಳ್ಳೆ ಕೃತಿಯ ರಸಮಯ ಓದು ಬಹಳ ಇಷ್ಟವಾಯಿತು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ