ಪುಸ್ತಕದ ಶೀರ್ಷಿಕೆ : ಪ್ರಹಸನತ್ರಯೀ
ಕೃತಿ ಪ್ರಕಾರ : ಪ್ರಹಸನಗಳು
ಲೇಖಕರು : ಡಿ. ವಿ. ಜಿ
ಪ್ರಕಾಶಕರು : ಸಾಹಿತ್ಯ ಪ್ರಕಾಶನ
ಪ್ರಥಮ ಮುದ್ರಣ (ಕಾವ್ಯಾಲಯ) : 1975
ಪುನರ್ ಮುದ್ರಣ : 2021
ಪುಟಗಳು : 96
ಬೆಲೆ : 100 ರೂ.
ಆಧುನಿಕ ಸರ್ವಜ್ಞ ಎಂದೇ ಖ್ಯಾತರಾಗಿರುವ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನಷ್ಟೇ ಓದಿಕೊಂಡಿದ್ದ ನನಗೆ ಇಲ್ಲಿನ ವಿಡಂಬನೆ ಹಾಗೂ ವ್ಯಂಗ್ಯ ಹೊಸದು. ಈ ಪ್ರಕಾರದ ಕೃತಿಗೆ ಮೊದಲ ಬಾರಿಗೆ ಓದಿದ್ದು.
ಮುಖಪುಟ ಸೂಚಿಸುವಂತೆ ಇಲ್ಲಿ ಮೂರು ಹಾಸ್ಯ ಪ್ರಕರಣಗಳಿವೆ. ಆದರೆ, ಇವು ಸಾಮಾನ್ಯವಾಗಿ ಓದುವ ನಗೆಗಡಲಿನಲ್ಲಿ ತೇಲಿಸುವಂತಹ ಹಾಸ್ಯಗಳಲ್ಲ. ಬದಲಾಗಿ ಪ್ರಹಸನಗಳು. ಡಿ.ವಿ.ಜಿಯವರು ಹಾಸ್ಯಕ್ಕೂ ಪ್ರಹಸನಗಳಿಗೂ ಇರುವ ವ್ಯತ್ಯಾಸಗಳನ್ನು ಹೀಗೆ ಹೇಳುತ್ತಾರೆ.
ಪ್ರಹಸನ - ಎಂದರೆ ನಗು, ಗಟ್ಟಿಯಾದ ನಗು, ಅಟ್ಟಹಾಸ - ಇಂಥ ನಗುವಿಗೆ ಕಾರಣವಾದ ಪ್ರಬಂಧ, ಇಂಥ ನಗುವನ್ನುಂಟು ಮಾಡುವಂತಹ ಪ್ರಬಂಧ.
ಹಾಸ್ಯ ಇದಕ್ಕಿಂತ ಹೇಗೆ ವ್ಯತ್ಯಾಸವುಳ್ಳದ್ದು ಎಂದರೆ :
ಒಂದು ಸನ್ನಿವೇಶ ಸಾಮಾನ್ಯವಾಗಿ ರೂಢಿಯಲ್ಲಿ ಹೇಗಿರುತ್ತದೆ ಹಾಗಿರದೆ ಹೆಚ್ಚು ಕಡಿಮೆಯಾದಾಗ ನಗು ಬರುತ್ತದೆ. ಅದು ಹಾಸ್ಯ.
ವಿನೋದಗಳು ನಾಟಕ ರೂಪದಲ್ಲಿಯೂ ಬರಬಹುದು. ಅದು ಗೇಲಿಯಾಟವಾದರೆ ಅದು ಪ್ರಹಸನ ಎನ್ನುತ್ತಾರೆ.
ಉದಾಹರಣೆಗೆ ಹೇಳುವುದಾದರೆ
ಜನಪಂ | ಕಮಲಂ | ಜಲಂ
ಹೀಗೆ ಓದುವುದನ್ನು
ಜನ | ಪಂಕ | ಮಲಂ | ಜಲಂ
ಹೀಗೆ ಓದಿದಾಗ ಬರುವ ಅರ್ಥವೇ ವಿಕಟ ಪರಿಹಾಸ.
ಈ ಕೃತಿಯಲ್ಲಿಯೂ ಇಂತಹ ಪ್ರಹಸನಗಳನ್ನು ಕಾಣಬಹುದು.
ಇಲ್ಲಿ ತ್ರಯೀ ಎಂಬುದಕ್ಕೆ ಬೇರೆ ವ್ಯಾಖ್ಯಾನವನ್ನು ಕೊಡುತ್ತಾರೆ.
ತ್ರಯೀ ಎಂದರೆ ವೇದ. ವೇದಗಳು ಬ್ರಹ್ಮನನ್ನು ಕುರಿತದ್ದು. ಈ ಪ್ರಹಸನಗಳು ತಿಮ್ಮನನ್ನು ಕುರಿತವು. ಹೀಗೆ ಬ್ರಹ್ಮ ವಿಚಾರವನ್ನು ತಿಮ್ಮನಿಗೆ ಅನ್ವಯಿಸುವುದೇ ಹೇಳನ, ಹಾಸ್ಯ ಎನ್ನುತ್ತಾರೆ. ಹಾಗೆಂದು ಇಲ್ಲಿ ತಿಮ್ಮ ಕಂಡು ಬರುವುದಿಲ್ಲ ಬದಲಾಗಿ ಹೋಲಿಕೆಗಳ ರೂಪಗಳನ್ನು ಹೀಗೆ ಹೇಳಿದ್ದಾರೆ. ಮುಖ್ಯವಾಗಿ ಇವೆಲ್ಲವೂ ರಾಜಕೀಯದ ಮೇಲೆ ಕೇಂದ್ರೀಕೃತವಾಗಿವೆ.
ಈ ಪ್ರಹಸನಗಳಿಗೆ ತಕ್ಕ ಹಲವಾರು ವ್ಯಂಗ್ಯ ಚಿತ್ರಗಳಿವೆ. ಅದನ್ನು ರಚಿಸಿರುವವರು ಮೂರ್ತಿ.
ಮಹಾ ಚುನಾವಣೆ : ಲಾವಣಿ ರೂಪದಂತಿರುವ, ಆಡು ಭಾಷೆಯ ಸಾಲುಗಳನ್ನು ಜನಸಾಮಾನ್ಯರಿಗೆ ಸಂದೇಶ ರೂಪದಂತೆ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.
ಯಾವ ರಾಜಕೀಯ ಪಕ್ಷಗಳಿಗೆ ಮತ ನೀಡಿದರೂ ಎಲ್ಲರ ಆಶ್ವಾಸನೆಗಳು ಕೇವಲ ಮಾತಿನ ಮೂಲಕ ಎಂಬುದನ್ನು ಉಲ್ಲಾಸ ೩ ರಲ್ಲಿ ಹೇಳುತ್ತಾರೆ. ಅದರ ಗದ್ಯ ರೂಪವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
ಯಾವ ಪಕ್ಷಕ್ಕೆ ಮತ ನೀಡಿದೆ ಎಂದಾಗ 'ಕಾಮಧೇನುವಿಗೆ' ಎಂದವನಿಗೆ
ಈಗ ಎಲ್ಲವೂ ಸುಖವಾಗಿರಬೇಕಲ್ಲವಾ..? ಹಾಲು-ಹಯನು ಎಲ್ಲಿ..? ಎಂದಾಗ
'ಓಲೆ-ಲಿಪಿಯಲ್ಲಿ ಮಾತ್ರ' ಎನ್ನುತ್ತಾ ಆಶ್ವಾಸನೆಯಲ್ಲಿ ಮಾತ್ರವೇ ನೀಡಿರುವ ಸೌಕರ್ಯದ ಕುರಿತಾಗಿ ಹೇಳುತ್ತಾನೆ ಮತದಾರ.
ಮತ್ತೊಬ್ಬ 'ಕಲ್ಪವೃಕ್ಷಕ್ಕೆ' ಮತ ನೀಡಿದೆ ಎಂದಾಗ
ಹಾಗಿದ್ದರೆ ಹೊಟ್ಟೆ ತುಂಬ ಅನ್ನ ಸಿಕ್ಕಿರಬೇಕು. ಕಾಳು-ಕಡ್ಡಿಗಳೆಲ್ಲವೂ ಇರಬೇಕಲ್ಲವಾ ಎಂದವರಿಗೆ
'ಅವು ಕಾಳಸಂತೆಯಲ್ಲಿ ಮಾತ್ರ ಇವೆ' ಎಂದು ಹೇಳುವುದು ರಾಜಕಾರಣಿಗಳ ಮೋಸವನ್ನು ಬಟಾಬಯಲು ಮಾಡುತ್ತದೆ.
'ಚಿಂತಾಮಣಿಗೆ' ಮತ ನೀಡಿದೆ ಎಂದಾಗ
ಯಾವ ಮಣಿ..? ಹಾಗಿದ್ದಲ್ಲಿ ಧನ-ಕನಕ ಸಿಕ್ಕಿರಬೇಕಲ್ಲವಾ.. ಎಲ್ಲಿದೆ..? ಎಂದಾಗ ಆತ
'ವ್ಯಾಪಾರಿಯ ಕೈಸೆರೆಯಾಗಿದೆ' ಎನ್ನುವ ಮಾತು ಇನ್ನೂ ಮುಂದೆ ಹೋಗಿ ತಮ್ಮಲ್ಲಿನ ವಸ್ತುಗಳನ್ನು ಅಡವಿರುವ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ರಾಜಕೀಯ ಪರಿಸ್ಥಿತಿಯ ದುರವಸ್ಥೆಯನ್ನು ತೋರುತ್ತದೆ.
ಜನಜನವರಿಯ ಕಥೆಗಳಿಂತು ಸಾಗಿದವು;
ಜನಪದದ ಕರ್ಮಫಲವಿಂತು ಮಾಗಿದವು;
ದೇವಿ ಭಾರತಿ ಬಸುರ ಕಿವುಚಿಕೊಳುತಿರ್ದಳ್;
ದೇವತೆಗಳದನೆಲ್ಲ ನೋಡಿ ನಗುತಿರ್ದರ್
ಈ ಸಾಲುಗಳು ಜನರ ತರಹೇವಾರಿ ದುರವಸ್ಥೆಗಳು ಹಾಗೂ ಸ್ವಾತಂತ್ರ್ಯಾ ನಂತರ ಜನಪದರ ಆರ್ಥಾತ್ ರಾಜಕೀಯದ ದಾಳಗಳ ಆಟದಲ್ಲಿ ಸಾಗುತ್ತಿರುವ ದೇಶದ ವ್ಯವಸ್ಥೆಯಲ್ಲಿನ ಕರ್ಮಫಲವನ್ನು ಸೂಕ್ಷ್ಮವಾಗಿ ತೋರುತ್ತಲೇ.. ಭಾರತ ಮಾತೆ ಸಂಕಟಪಡುತ್ತಿರುವ ಪರಿಯನ್ನು ಹಾಗೂ ಬೇರೆಯವರು/ ದೇವತೆಗಳು ಅದನ್ನು ಕಂಡು ಖುಷಿ ಪಡುತ್ತಿರುವ ವಿಪರ್ಯಾಸದ ಸಂಗತಿಯನ್ನು ಕಟ್ಟಿಕೊಡುವ ಸಾಲುಗಳು ನಿಜಕ್ಕೂ ವ್ಯಥೆ ತರುತ್ತವೆ.
ಗರ್ದಭ ವಿಜಯ : ಹಾಡುಗಳು, ಲಾವಣಿಗಳಂತಹ ಸಾಲುಗಳ ಜೊತೆಗೆ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿರುವ ಪ್ರಹಸನವಿದು. ಸಾಕಷ್ಟು ಪಾತ್ರಧಾರಿಗಳಿದ್ದಾರೆ. ಇದರ ಸಂಕ್ಷಿಪ್ತ ಸಾರಾಂಶವನ್ನು ಹೇಳುವುದಾದರೆ,ಶೋಭನ ಪುರಿಯ ಒಂದು ಬೀದಿಯಲ್ಲಿ ಗದಬಣ್ಣ ಹಾಗೂ ರಸಬಣ್ಣ ಸಿಕ್ಕು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅಂದಹಾಗೆ, ಇವರಿಬ್ಬರೂ ಗಾರ್ದಭಗಳು (ಕತ್ತೆಗಳು).
ವೋಟಲ್ ಮೋಟರ್ ಬೆಳೆದೋಯ್ತು
ಮೋಟುಗೋಡೆಗಳು ಉರುಳೋಯ್ತು
ಹುಲ್ನೆಲವೆಲ್ಲ ಕಲ್ಲಾಯ್ತು
.
.
.
ಬಡಕಲು ಕತ್ತೆ ಬಡವಾಯ್ತು
ಮನುಷ್ಯರ ಜೀವನಶೈಲಿ ಬದಲಾದಂತೆ ಹುಲ್ಲಿನ ನೆಲ ಕಲ್ಲಾದದ್ದು, ಮೋಟು ಗೋಡೆಗಳ ಜಾಗಕ್ಕೆ ಕಟ್ಟಡಗಳೆದ್ದದ್ದು, ಗಲ್ಲಿಗಳು ಪೇಟೆಯಾಗಿದ್ದು, ಮಡಿವಾಳರಿಗೆ ಇವುಗಳ ಅಗತ್ಯ ಇರದೇ ಹೋದದ್ದು ಹೀಗೆ..
ಇದನ್ನೆಲ್ಲ ಚರ್ಚಿಸಲು ಗಾರ್ದಭ ಸಮ್ಮೇಳನವನ್ನು ಮಾಡಿ ಹಿರಿಯ, ಕಿರಿಯ, ನಾನಾ ಜಾತಿ, ನಾನಾ ದೇಶ, ನಾನಾ ಭಾಷೆ, ನಾನಾ ಬಣ್ಣಗಳ ಸಾವಿರಾರು ಕತ್ತೆಗಳನ್ನು ಸೇರಿಸಿ ತಮ್ಮ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಬ್ರಹ್ಮಲೋಕಕ್ಕೆ ತಮ್ಮ ನಿಯೋಗವನ್ನು ಒಯ್ಯುತ್ತವೆ. ಅಲ್ಲಿ ನಾರದರ ಸಂಭಾಷಣೆ.
ಕಡೆಗೆ ಗಾರ್ದಭಗಳ ಸಂತಾನ ಹೆಚ್ಚಾಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸುತ್ತವೆ.
ಮನುಷ್ಯರ ದೃಷ್ಟಿಯಲ್ಲಿ ಕತ್ತೆಗಳ ಪರಿಸ್ಥಿತಿ ಇನ್ನೂ ಹೀನಾಯವಾಗುತ್ತದೆಯೇ ಹೊರತು ಬೇರೇನೂ ಆಗದು. ಮನುಷ್ಯರ ದೃಷ್ಟಿಕೋನ ಸಂದರ್ಭಗಳೂ ಇಲ್ಲಿವೆ.
ವಿಮರ್ಶಕರು ಇದನ್ನು ಕೇವಲ ಕತ್ತೆಯ ಪ್ರಹಸನವೆಂದು ನೋಡಿಲ್ಲ ಬದಲಾಗಿ.. ಜ್ಞಾನವಿಲ್ಲದಿದ್ದರೂ ಅಬ್ಬರ, ಆಡಂಬರ ತೋರುತ್ತಾ.. ಗುಂಪುಗಾರಿಕೆ ನಡೆಸುತ್ತಾ.. ಹಠಮಾರಿತನದಿಂದ ಯಾವ ಮಟ್ಟಕ್ಕಾದರೂ ಹೋಗಿ ತಮಗೆ ಬೇಕಾದ ಅಧಿಕಾರ ದೊರಕಿಸಿಕೊಳ್ಳಲು ಹೆಣಗಾಡುವ ವ್ಯಕ್ತಿಗಳನ್ನು, ಹಾಗೂ ಅವರ ಮೂರ್ಖತನದ ನಿರ್ಧಾರಗಳನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ. ಅರ್ಹತೆಗೆ ಬೆಲೆ ಇಲ್ಲದೆ, ಕೇವಲ ಅಬ್ಬರಕ್ಕೆ ಬೆಲೆ ಸಿಕ್ಕಾಗ ಏನಾಗುತ್ತದೆ ಎಂಬುದರ ಪರಿಣಾಮ ಇಲ್ಲಿದೆ.
ಇಲ್ಲಿ ಒಂದು ಕೋರ್ಟ್ ಮೊಕದ್ದಮೆ ಕಾಣಸಿಗುತ್ತದೆ. ಭೋಗಯ್ಯ ಶೆಟ್ಟರು ನಾಗಯ್ಯನವರ ಕತ್ತೆಯ ಕಾಲು ಮುರಿದಿರುತ್ತಾರೆ. ಅದಕ್ಕೆ ಕಾರಣ ನಾಗಯ್ಯನವರ ಕತ್ತೆ ಶೆಟ್ಟರ ತೋಟಕ್ಕೆ ಪ್ರವೇಶಿಸಿ ನಂತರ ಅವರ ಗರ್ಭಿಣಿ ಪತ್ನಿಯನ್ನು ಒದ್ದು ಕೆಡವಿದ್ದು. ಹತ್ತು ವರ್ಷದ ನಂತರ ಗರ್ಭಿಣಿಯಾಗಿದ್ದವಳ ನೋವು, ಪುತ್ರ ನಷ್ಟದ ಆಕ್ರೋಶವೂ ಇಲ್ಲಿತ್ತು.
ಹಾಗಾದರೆ ಜಡ್ಜ್ ಕೊಟ್ಟ ತೀರ್ಪಿನ ನೀವೇ ಓದಿ ನೋಡಿ.
ಜಾಕ್ ಕೇಡ್ : ಇಂಗ್ಲೆಂಡ್ ಅನ್ನು ಆರನೆಯ ಹೆನ್ರಿ ಆಳುತ್ತಿದ್ದ ಸಂದರ್ಭದಲ್ಲಿ ಚರಿತ್ರೆಯ ಕೆಲವು ಪ್ರಕರಣಗಳನ್ನು ಆ ದೇಶದ ಮಹಾಕವಿ ಶೇಕ್ಸ್ಪಿಯರ್ ಮೂರು ಭಾಗಗಳುಳ್ಳ ಒಂದು ನಾಟಕದಲ್ಲಿ ಚಿತ್ರಿಸಿದ್ದಾನೆ. ಅದರಲ್ಲಿ ಎರಡನೆಯ ಭಾಗ ಜಾನ್ ಜಾಕ್ ಕೇಡ್. ನಿಜವಾಗಿಯೂ ಬದುಕಿದ್ದ ಕೇಡ್ ಎಂಬ ದೊಂಬಿ ಎದ್ದ ನಾಯಕನ ಸಾಹಸಗಳು ಇಲ್ಲಿವೆ.
ಕೇಡ್ ದೊಂಬಿಯೆದ್ದು ಅಲ್ಲಿನ ಶ್ರೀಮಂತರ ವಿರುದ್ಧ ಹೋರಾಡುತ್ತಾ.. ಭಯ ಹುಟ್ಟಿಸುತ್ತಾ ಬದುಕುತ್ತಾನಾದರೂ.. ಆತನ ಅಂತ್ಯ ಬೇರೆಯೇ ರೀತಿ ಆಗುತ್ತದೆ. ಆಗ ಆತ ಹೇಳುವ ಮಾತು
"ಯಾರಿಗೂ ಹೆದರದ ನಾನು ಸೋತೆ - ಕ್ಷಾಮಕ್ಕೆ, ಶೌರ್ಯಕ್ಕಲ್ಲ."
ಕೇಡನಿಂದೆಲ್ಲಿ? ನಾಡು ನಾಡಿನಲಿ
ಷೇಕ್ಸ್ಪಿಯರ ನಾಡಿಂದೆ ಜಾಕ್ ಕೇಡನೆಗರಿ
ದಿಕ್ಕುದಿಕ್ಕಿಗೆ ಹಾರಿ ನಕ್ಕು ನಲಿಯುತಿಹಂ
ಡಿ.ವಿ.ಜಿಯವರು ಇಂಗ್ಲೆಂಡಿನ ಈ ಪ್ರಸಂಗವನ್ನು ಏಕೆ ಬರೆಯುತ್ತಾರೆಂದರೆ ಅಲ್ಲಿನ ರಾಜಕೀಯ ಪರಿಸ್ಥಿತಿ ಇಲ್ಲಿನದಕ್ಕಿಂತ ವಿಭಿನ್ನವಾಗೇನಿಲ್ಲ ಎಂದು ತೋರುವ ಸಲುವಾಗಿ.
ಇಂಗ್ಲೆಂಡ್ನಲ್ಲಿ ಆರನೆಯ ಹೆನ್ರಿಯ ಕಾಲದಲ್ಲಿ ವಿಜಯನಗರದ ಮುಮ್ಮಡಿ ಬುಕ್ಕರಾಯರು ಹಾಗೂ ಅವರ ಮಕ್ಕಳ ಕಾಲ. ಬಹಮನಿಯರೊಂದಿಗೆ ಹೋರಾಟಗಳು ನಡೆದರೂ ಜನಸಾಮಾನ್ಯರಿಗೆ ರಾಜಕೀಯದ ಸೋಂಕು ಸೋಕದೆ, ಅವರ ನೆಮ್ಮದಿಗೆ ವ್ಯತ್ಯಾಸ ಬಂದಿರಲಿಲ್ಲ. ಹೀಗಾಗಿ ದಂಗೆ ಏಳುವುದು ಪ್ರಜಾಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳುವ ಸಂದರ್ಭಗಳು ಇರಲಿಲ್ಲ. ಆದರೆ ಮುಂದೆ ಕಾಲ ಬದಲಾಯಿತು.
ನಮ್ಮ ದೇಶದಲ್ಲಿಯ ರಾಜಕೀಯ ಪರಿಸ್ಥಿತಿಯೂ ವಿದೇಶಗಳಂತೆಯೇ ಆಗುವಾಗ ಇಲ್ಲಿಯದ್ದನೇ ಬರೆಯಬಹುದಾದರೂ ಇಂಗ್ಲೆಂಡಿನ ಪ್ರಸಂಗವನ್ನೇ ತೆಗೆದುಕೊಂಡದ್ದೇಕೆಂದರೆ ನಮ್ಮ ದೋಷ-ದುರ್ಬಲತೆಗಳ ಪ್ರತಿಬಿಂಬವನ್ನು ನಾವು ಇನ್ನೊಬ್ಬರಲ್ಲಿ ಕಂಡಾಗ ನಮ್ಮ ಮನಸ್ಸಿಗೆ ಕೊಂಚ ತೃಪ್ತಿಯಾಗುತ್ತದೆ. ರಾಜಕೀಯದಲ್ಲಿ ನಮಗಿಂತ ಎಷ್ಟೋ ಉತ್ಕೃಷ್ಟರೆನಿಸಿಕೊಂಡಿರುವ ಇಂಗ್ಲೆಂಡಿನಲ್ಲಿ ನಡೆದ ಇಂತಹ ಪ್ರಕರಣವೊಂದು ನಮ್ಮ ರಾಜಕೀಯಸ್ತರಿಗೆ ತಿಳಿದರೆ..?! ಈ ಆಲೋಚನೆಯೂ ಲೇಖಕರಲ್ಲಿದೆ.
ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವುದು ಸುಲಭವಲ್ಲ. ಅಂತಹ ಧ್ವನಿಗಳು ಉಳಿಯುವುದೂ ಸುಲಭವಲ್ಲ. ಆರಿಸಿಕೊಳ್ಳುವ ಮಾರ್ಗಗಳು, ಅವರ ಗುರುತಿಸಿಕೊಳ್ಳುವಿಕೆ, ಉಳಿಯುವಿಕೆ, ಅಳಿಯುವಿಕೆಯ ಮೇಲೆ ಅದು ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾವಿಲ್ಲಿ ಕಾಣಬಹುದು.
ಎಚ್ಚರಿರಿ ನೀಂ, ಜನರೆ, ನಿಚ್ಚಮೆಚ್ಚರಿರಿ
ಎಚ್ಚರಿರಿ ನಚ್ಚಿನಲಿ, ಕೆಚ್ಚು ಹರಟೆಯಲಿ.
ಹೆಚ್ಚಿದಾ ನಚ್ಚಿಕೆಯೆ ಹುಚ್ಚು ಹಿಡಿಸೀತು;
ಎಂಬ ಮಾತುಗಳು ಎಷ್ಟು ಎಚ್ಚರವಿದ್ದರೂ ಸಾಲದು ಎಂಬ ಎಚ್ಚರಿಕೆಯನ್ನು ಕೊಡುತ್ತಲಿವೆ.
ಒಂದಿಷ್ಟು ಸರಳ ಓದಿನ ನಂತರ ಕಾವ್ಯಾತ್ಮಕ ಓದನ್ನು ರೂಢಿಸಿಕೊಂಡವರಿಗೆ ಹಾಗೂ ಹಾಸ್ಯ, ವಿಡಂಬನೆಗಳನ್ನು ಇಷ್ಟಪಡುವವರಿಗೆ ಸೂಕ್ತವಾದ ಓದು ಇದು. ನನಗೆ ಇದು ಸುಲಭದ ಓದು ಎನ್ನಿಸಲಿಲ್ಲ ಹಾಗೆಂದು ತೀರಾ ಕಷ್ಟವೂ ಆಗಲಿಲ್ಲ. ವಿಭಿನ್ನ ಓದಿನ ಅನುಭವವಂತೂ ದೊರಕಿತು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ