ಗುರುವಾರ, ಆಗಸ್ಟ್ 29, 2019

ಸುಪ್ತತೆಯ ಭೀತಿ

ಮುಖದಲ್ಲಿ ಅರಳದ ಗುಪ್ತ ಭಾವನೆಯೊಂದು
ಅರಳಿ ಮೊಗ್ಗಾಗಿ ಬಿಟ್ಟಿದೆ ಸುಪ್ತತೆಯಲಿ..

ವಿನಾಕಾರಣ ನೋವುಂಡು ಕೂತಿರುವಾಗ
ಸಂತೈಸುವ ಭಾವ ಕಣ್ಣಲ್ಲಿ ಕಂಡರೂ..
ಮತ್ತಾವ ಕೂಪಕೋ ಬೀಳಬೇಕೆಂಬ ಅಂಜಿಕೆಯಲಿ
ಮನದಲ್ಲಿಯೇ ಬೆಚ್ಚಗೆ ಕುಳಿತಿವುದು ಭೀತಿ

ಆ ಕಣ್ಣಲ್ಲಿ ಕಂಡ ಭಾವ ಅರ್ಥವಾಗುತ್ತಿಲ್ಲ
ಮನದ ಮಡಿಲಲ್ಲಿ ಅದೇನೋ ಕಲಕುವಿಕೆ
ಅದಾವ ಜನ್ಮದ, ಅದ್ಯಾವ ಅಂಜಿಕೆಯೋ ಕಾಣೆ
ನಿನ್ನ ನೋಡಿದೊಡನೆಯೇ ಉಕ್ಕುತಿವುದು ಭೀತಿ

ಭೀತಿ ಇನ್ನೆಂದೂ ಮತ್ತಾವ ಭಾವವೂ ಆಗದು
ಮೊಗ್ಗೊಂದು ಜಾತಿಯಾಗಿ, ಮತ್ತಾವುದೋ ಹೂವಾಗಲು..
ಪ್ರಕೃತಿಯ ನಿಯಮ ಮೀರಿ ನಡೆಯಲು..
ಯಾವುದೋ ಭಾವಕ್ಕೆ, ಮತ್ತೇನೋ ಹಣೆಪಟ್ಟಿ

ಭೀತಿಯ ಕಾರಣಗಳಿಗೆ ಬರವಿಲ್ಲ, ಹೊಸವೂ ಅಲ್ಲ
ಮತ್ತೆ ಮತ್ತದೇ ಕಳೆದುಕೊಳ್ಳುವ ಭೀತಿ
ಕಳೆದು ಹೋದರೂ ಅದೇಕೋ ನಿಲ್ಲದ ಸೆಳೆತ
ಹೊಮ್ಮುತಲಿವುದು ಸುಪ್ತತೆಯಲಿ ಭೀತಿ

ಚಿತ್ತ ಭಿತ್ತಿಯ ಕಂಗೆಡಿಸದ ನಿಶ್ಚಲತೆ ಮಾತಲ್ಲಿ
ತಾನಾರಿಗೂ ಕಮ್ಮಿಯಿಲ್ಲವೆನ್ನುವ ಹಮ್ಮು ನಡೆಯಲ್ಲಿ
ಬೀಗುತಿರಬಹುದು ನೀನೀಗ, ಬಾಗಲೇ ಬೇಕು
ಭೀತಿಯ ಭಾವ ಕಲಕಬಹುದು ನಿನ್ನನೂ..

ಅರ್ಥವೇ ಆಗದ ಕಾರಣದ ಕಂದರದಿ ಬಿದ್ದವರ
ಮೇಲೆತ್ತಿ ಸಂತೈಸುವ ಕಾಯಕದಲಿದ್ದ ದಾರಿಹೋಕ
ಅದೇಕೋ ಮನದಿ ಬಿತ್ತಿ ಹೋಗಿರುವ ಭೀತಿಯ
ಹಾದಿಯ ನೆಚ್ಚು, ಈ ಹಾದಿಹೋಕನನ್ನಲ್ಲವೆಂದು

ಅಂತರಾಳದಿ ಮೂಡಿದ ಈ ತೆರನಾದ ಭೀತಿ
ನಿಜವೇ ಆಗಿ ಬಿಡಲಿ, ಸೆಳೆತ ಸರಿದುಬಿಡಲಿ
ಭೀತಿಯ ಗಾಳದಲಿ ಸಿಲುಕಿ ಒದ್ದಾಡುವುದಕ್ಕಿಂತ
ನಿರ್ಭೀತಿ, ನಿರ್ಲಿಪ್ತತೆಯ ಭಾವವೇ ಸುಖವೆನಿಸಬಹುದು.

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 25, 2019

ಜೀವನ್ಮುಖಿ

ಕಡಲಿನ ದಂಡೆಯ ಮೇಲೆ ಕುಳಿತು ನಂದಿನಿ ಯೋಚಿಸುತ್ತಲೇ ಇದ್ದಾಳೆ. ಗತ ನೆನಪುಗಳು ದಡಕ್ಕಪ್ಪಳಿಸಿ ತೆರಳುವ ಅಲೆಗಳಂತೆ ಭಾಸವಾಗುತ್ತಿದೆ. ಕಡಲ ತೀರದಲ್ಲಿ ಕೊಟ್ಟ ಭಾಷೆಯೂ ಮರಳಿನ ಮನೆಯಂತೆ ಕ್ಷಣಿಕವಾಗಿರಬಹುದಾ? ಇದೇ ಮರಳಿನ ಮೇಲೆ ಹೆಜ್ಜೆಗೆ ಹೆಜ್ಜೆ ಜೋಡಿಸಿ ನಡೆದ ದಿನಗಳು ಅವಳನ್ನು ಕಾಡುತ್ತಲಿವೆ. ಆಗೆಲ್ಲಾ ಎಷ್ಟು ಉತ್ಸಾಹವಿತ್ತು. ಕಡಲ ಅಲೆಗಳು ಹೆಜ್ಜೆಗೆಳನ್ನು ಅಳಿಸಿದಂತೆಲ್ಲಾ ಮತ್ತೆ ಮತ್ತೆ ಹೆಜ್ಜೆ ಮೂಡಿಸುವ ಹುಮ್ಮಸ್ಸಿತ್ತು. ಕೊನೆಗೆ ಸೋತು ಹೊರಟರೂ, ಜಗವನ್ನೇ ಗೆದ್ದ ಭಾವ. ಏಕೆಂದರೆ, ಎದೆಯಲ್ಲಿ ನವೀನನೊಟ್ಟಿಗೆ ಹಾಕಿದ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿರುತ್ತಿದ್ದವು. ವಾರಾಂತ್ಯದಲ್ಲಿ ಒಟ್ಟಿಗಿದ್ದ ನೆನಪುಗಳೇ ಸಾಕಿತ್ತು ವಾರವನ್ನೆಲ್ಲಾ ಕಳೆಯಲು.

ನವೀನ ನಂದಿನಿಯರ ಪ್ರೀತಿ ಎಲ್ಲರಂತಲ್ಲ. ಏಕೆಂದರೆ, ಎಲ್ಲರ ಮನೆಗಳಲ್ಲಿಯೂ ಅವರ ಪ್ರೀತಿಗೆ ಅಡ್ಡಿ, ಆತಂಕಗಳು ಇದ್ದೇ ಇರುತ್ತಿದ್ದವು. ಆದರೆ, ಇವರಿಬ್ಬರ ಪ್ರೀತಿಗೆ ಇವರಿಬ್ಬರ ಮನೆಯಲ್ಲಿ ಅಡ್ಡಗಾಲು ಹಾಕುವವರು ಯಾರೂ ಇರಲಿಲ್ಲ. ಏಕೆಂದರೆ, ಮನೆಯವರೆಂದು ಹೇಳಿಕೊಳ್ಳಲು ಇಬ್ಬರಿಗೂ ಯಾರೂ ಇರಲಿಲ್ಲ. ನಂದಿನಿ ಮತ್ತು ನವೀನ ಇಬ್ಬರೂ ಬೆಳೆದದ್ದು ಅನಾಥಾಶ್ರಮದಲ್ಲಿ. ಇಬ್ಬರಿಗೂ ಬದುಕಿನ ತುಂಬೆಲ್ಲಾ ಬಣ್ಣ ಬಣ್ಣದ ಕನಸುಗಳಿದ್ದವು. ತಾವು ಅನಾಥರೆಂಬ ಭಾವನೆಯನ್ನು ಹೊಡೆದೋಡಿಸಿಕೊಂಡು ಬೆಚ್ಚನೆಯ ಪ್ರೀತಿಯಲ್ಲಿ ಮೈಮರೆಯಬೇಕೆಂಬ ಆಸೆ ಇಬ್ಬರಿಗೂ ಅದಮ್ಯವಾಗಿತ್ತು. ತಂದೆ-ತಾಯಿಯರಿಂದ ತಾವು ವಂಚಿತರಾದ ಪ್ರೀತಿಯನ್ನು ಅನುಭವಿಸಲು ಹಾತೊರೆಯುವ ಮಕ್ಕಳಿಗೆ ನೀಡಬೇಕು ಎಂಬ ನಿರ್ಮಲ ಮನಸ್ಸಿನ ಆಸೆಯಿತ್ತು. ಕೆಲವೊಮ್ಮೆ ಕೆಲವು ಆಸೆಗಳು, ಆಸೆಗಳಾಗಿಯೇ ಉಳಿದು ಹೋಗಿಬಿಡುತ್ತವೆ ಎನ್ನುವುದೇ ವಿಪರ್ಯಾಸ.

ನಂದಿನಿ ಮತ್ತು ನವೀನರದ್ದು ಚಿಕ್ಕಂದಿನಿಂದಲೇ ಬೆಸೆದುಕೊಂಡ ಪ್ರೇಮವೇನೂ ಅಲ್ಲ ಅಥವಾ ಹದಿಹರೆಯದ ಆಕರ್ಷಣೆಯೂ ಆಗಿರಲಿಲ್ಲ. ಅಲ್ಲಿದ್ದದ್ದು ನಿರ್ಮಲ ಪ್ರೀತಿ. ನಿಷ್ಕಲ್ಮಶವಾದ ನಿರೀಕ್ಷೆಯಿಲ್ಲದ ಪ್ರೀತಿ. ಇಬ್ಬರೂ ಕೆಲಸ ಮಾಡುತ್ತಿದ್ದದ್ದು ಒಂದೇ ಆಫೀಸಿನಲ್ಲಿ. ಮೊದಲು ಪರಿಚಯ, ನಂತರದಲ್ಲಿ ಪ್ರೀತಿಯಾಗಿ ಬದಲಾಯಿತು. ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಜೋಡಿಯಾಗಿ ಯಾನದಲ್ಲಿ ಪಯಣಿಸುವ ಇಚ್ಛೆ ಹೊಂದಿದ್ದರು. ಇಬ್ಬರಿಗೂ ಕಡಲ ತಡಿ ಒಂದರ್ಥದಲ್ಲಿ ತವರು ಮನೆಯಿದ್ದಂತೆ. ಮುಂದಿನ ಅಗಾಧ ಕಡಲನ್ನು ನೋಡುತ್ತಾ ತಮ್ಮ ವಿಶಾಲ ಬದುಕಿನ ಕನಸು ಕಟ್ಟುತ್ತಿದ್ದರು. ಅದರಲ್ಲಿರುತ್ತಿದ್ದದ್ದು ತಮ್ಮ ಜೀವನ ಮತ್ತು ಅಸಹಾಯಕರಿಗೆ, ಅನಾಥರಿಗೆ, ವೃದ್ದರಿಗೆ ನೆರವಾಗಿ ನೆರವಾಗುವುದು. ಇಬ್ಬರೂ ಅದಕ್ಕಾಗಿ ಈಗಿನಿಂದಲೇ ಹಣವನ್ನು ಒಟ್ಟು ಮಾಡುತ್ತಿದ್ದರು. ತಾವು ಅನುಭವಿಸಿದ ಬವಣೆಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಅವರಿಗೆ ದೊರಕಬೇಕಾದ ಸೌಕರ್ಯಗಳ ಬಗ್ಗೆ ಚರ್ಚಿಸುತ್ತಿದ್ದರು.

ನಂದಿನಿ ಒಮ್ಮೆ ಕೇಳಿದ್ದಳು "ನೀನು ಯಾವಾಗಲೂ ನನ್ನೊಟ್ಟಿಗೆಯೇ ಇರುವಿಯಲ್ಲವೇ?" ಅದಕ್ಕೆ ನವೀನ ಅವಳ ಕೈ ಮೇಲೆ ಕೈ ಇಟ್ಟು "ನಿನ್ನ ಕೊನೆಯ ಹೆಜ್ಜೆಯವರೆಗೂ ನಾನು ಜೊತೆಯಾಗಿಯೇ ಹೆಜ್ಜೆ ಹಾಕುವೆ" ಎಂದು ಭಾಷೆ ನೀಡಿದ್ದ.

ನಂದಿನಿಯ ಯೋಚನಾಲಹರಿ ಮುಂದುವರಿದಿತ್ತು. ಅಂದು ಭಾಷೆ ಕೊಟ್ಟು ಮುನ್ನಡೆಯುತ್ತಾ ಹೋಗುವಾಗ ಕಾಲಿಗೆ ಕಪ್ಪೆ ಚಿಪ್ಪೊಂದು ದೊರಕಿತ್ತು. ಅಮೂಲ್ಯವಾದ ಮುತ್ತಿದ್ದ ಕಪ್ಪೆ ಚಿಪ್ಪು. ಅದನ್ನು ಜತನದಿಂದ ಕೈಯ್ಯಲ್ಲಿಡಿದು ನಡೆಯುತ್ತಿದ್ದೆ, ಅವನ ಮಾತನ್ನು ನನ್ನ ಎದೆಯಲ್ಲಿ ಜತನವಾಗಿಟ್ಟುಕೊಂಡಷ್ಟೇ ಜತನದಿಂದ.

ಅಂದು ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅದೇಕೋ ಹೇಳಲಾರದ ತಳಮಳದ ಭಾವ. ಯಾಕೋ ಇಲ್ಲಿಂದ ಆದಷ್ಟು ಬೇಗ ಹೊರಟು ಬಿಡೋಣ ಎನ್ನುವ ಮನಸ್ಸು.. ಯಾವುದಾದರೂ ದೇವಸ್ಥಾನಕ್ಕೆ ಹೋಗೋಣ ಎಂದುಕೊಂಡು ಅದನ್ನು ನವೀನನೊಟ್ಟಿಗೆ ಹೇಳೋಣ ಎನ್ನುವಷ್ಟರಲ್ಲಿ ಅಪ್ಪಳಿಸಿತ್ತು ಒಂದು ದೈತ್ಯ ಅಲೆ. ನಾನು ದಡದಲ್ಲಿಯೇ ಬಿದ್ದೆ. ನವೀನ ಎದ್ದು ನನ್ನ ಹತ್ತಿರ ಬರುತ್ತಿದ್ದ. ನಮ್ಮಿಬ್ಬರ ಬೇರ್ಪಡಿಸುವಿಕೆಗೆ ಇದೊಂದು ಸುಳಿವಾಗಿತ್ತೋ ಏನೋ?

ನವೀನನಿಂದ ಸ್ವಲ್ಪ ದೂರದಲ್ಲಿ ಮಗುವೊಂದು ಕಿರುಚಿಕೊಳ್ಳುತ್ತಿತ್ತು. ಮುಳುಗೇಳುತ್ತಿದ್ದ ಆ ಮಗುವಿನ ಸಮೀಪ ಯಾರೂ ಕಾಣಲಿಲ್ಲ. ಸ್ವಲ್ಪ ದೂರದಲ್ಲಿ ಯಾರೋ ಓಡುತ್ತಾ ಬರುತ್ತಿದ್ದರು. ನನ್ನ ಮಗು, ನನ್ನ ಕಂದ ಎಂದು ಕಿರುಚುತ್ತಾ ಬರುತ್ತಿದ್ದರು. ಆ ಕಡೆ ತಿರುಗಿ ನವೀನನನ್ನು ನೋಡುವಷ್ಟರಲ್ಲಿ ಆತ ಆಗಲೇ ಮಗುವಿನ ಬಳಿಗೆ ಸಾಗಿದ್ದ. ಅಲೆಗಳ ಹೊಡೆತದಲ್ಲಿ ಇಬ್ಬರೂ ಸಿಕ್ಕಿ ಬಿದ್ದಿದ್ದರು. ಯಾರೆಂದೇ ಗೊತ್ತಿರದ ಆ ಮಗುವನ್ನು ರಕ್ಷಿಸಲು ಹೋಗಿ ತಾನೂ ಕಷ್ಟಕ್ಕೆ ಸಿಲುಕಿದ್ದ. ಇದೇ ರೀತಿ ಅದೆಷ್ಟು ಹೊತ್ತು ಕಳೆಯಿತೋ.. ನಾನು ಎಚ್ಚರವಾಗುವಷ್ಟರಲ್ಲಿ ನವೀನ ಮತ್ತೆಂದೂ ಕಣ್ತೆರೆಯದಂತೆ ಕಣ್ಮುಚ್ಚಿ ಮಲಗಿದ್ದ.

ಸಮುದ್ರ ತೀರದಲ್ಲಿ ತುಳಿದ ಸಪ್ತಪದಿಯನು ಸಾಗರವೇ ರದ್ದು ಮಾಡಿತ್ತು. ಇದಾಗಿ ಅದೆಷ್ಟು ಬಾರಿ ಇಲ್ಲಿಗೆ ಬಂದಿದ್ದೆನೋ ಲೆಕ್ಕವಿಲ್ಲ. ಸಾಯಬೇಕೆಂದು ಹೊರಟಾಗಲೆಲ್ಲಾ ಯಾರೋ ರಕ್ಷಿಸುತ್ತಾರೆ. ನವೀನನೇ ನನ್ನನ್ನು ಬದುಕಿಸಿರಬಹುದೆಂಬ ಆಸೆಯಿಂದ ಮರಳುತ್ತೇನೆ. ವಾರ ಕಳೆಯುವಷ್ಟರಲ್ಲಿ ಮತ್ತದೇ ನೆನಪುಗಳು. ಆ ಅಲೆಗಳನ್ನು ಸೀಳಿಕೊಂಡು ನವೀನ ಬರಬಹುದೇನೋ ಎಂಬ ಆಸೆಯಿಂದ ಇನ್ನೂ ಬರುತ್ತಲೇ ಇದ್ದೇನೆ. ಇಂದಿಗೆ ಇದೆಲ್ಲಾ ನಡೆದು ಒಂದು ವರ್ಷ.

ನವೀನ ನನ್ನನ್ನು ಬಿಟ್ಟು ಹೋಗಿರುವುದು ಅವನ ಮತ್ತು ನನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕೇ ಇರಬೇಕು. ಆವತ್ತು ಅವನು ಭಾಷೆ ನೀಡುವಾಗ ನನ್ನ ಕೊನೆಯ ಹೆಜ್ಜೆಯವರೆಗೂ ನನ್ನ ಜೊತೆಗೇ ಇರುವೆನೆಂದು ಭಾಷೆ ನೀಡಿದ್ದ. ಇನ್ನಾದರೂ ಅವನನ್ನು ಬದುಕಿಸಿಕೊಳ್ಳಬೇಕು, ಜೀವಂತಗೊಳಿಸಬೇಕು. ನಮ್ಮಿಬ್ಬರ ಕನಸುಗಳೊಂದಿಗೆ ನಾನು "ಜೀವನ್ಮುಖಿ"ಯಾಗಿ ಪ್ರೀತಿಗೆ ಹೊಸ ಭಾಷ್ಯ ಬರೆಯುವೆ ಎನ್ನುತ್ತಾ ಕೆಟ್ಟ ಆಲೋಚನೆಗಳನ್ನು ಬಟ್ಟೆಗಂಟಿದ ಮರಳಿನಂತೆ ಕೊಡವುತ್ತಾ ಧೃಡ ಮನಸ್ಸಿನಿಂದ ಹೆಜ್ಜೆ ಹಾಕಿದಳು.

~ವಿಭಾ ವಿಶ್ವನಾಥ್

ಗುರುವಾರ, ಆಗಸ್ಟ್ 22, 2019

ಗಾಜಿನ ಗೊಂಬೆ

"ಪುಟಾಣಿ ಎಲ್ಲಿದ್ದೀಯಾ..?" ಎಂದು ಕೂಗುತ್ತಲೇ ಬಂದರು ವೆಂಕಟರಾಯರು. ಪುಟಾಣಿ ಎಂದ ಮಾತ್ರಕ್ಕೆ ಅವಳು ಪುಟ್ಟ ಹುಡುಗಿಯಲ್ಲ. ಅವಳು ವೆಂಕಟರಾಯರ ಏಕಮಾತ್ರ ಪುತ್ರಿ ಶ್ರೀಮತಿ ಸುಜಲಾ ಸುಂದರ್. ಹೌದು, ಆಕೆಗೆ ವಿವಾಹಗಿದೆ. ವಿವಾಹವಾಗಿದ್ದರೂ, ಮಕ್ಕಳಾಗಿದ್ದರೂ ತಂದೆ-ತಾಯಿಗೆ ಮಕ್ಕಳು ಎಂದಿಗೂ ಚಿಕ್ಕವರೇ ಅಲ್ಲವೇ? ವೆಂಕಟರಾಯರು ಚಿಕ್ಕಂದಿನಲ್ಲಿ ತೋರುತ್ತಿದ್ದ ಪ್ರೀತಿ ಆಕೆ ಮದುವೆಯಾದರೂ ಮುಂದುವರಿದಿತ್ತು. ಹಾಗಾಗಿಯೇ ಆಕೆ, ಆಕೆಯ ಅಪ್ಪನಿಗಿನ್ನೂ ಪುಟಾಣಿಯೇ. 'ಪುಟಾಣಿ' ಎಂದು ಕೂಗುತ್ತಾ ಬಂದ ರಾಯರು ಗರಬಡಿದವಳಂತೆ ಕುಳಿತಿದ್ದನ್ನು ಕಂಡು ಸುಮ್ಮನೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಹೊರಟರು.

ಸುಜಲಾ.. ವೆಂಕಟರಾಯರು ಮತ್ತು ಸುಂದರಲಕ್ಷ್ಮಿ ದಂಪತಿಗಳ ಒಬ್ಬಳೇ ಮಗಳು. ಸುಜಲಾ ಹುಟ್ಟಿದಾಗಲೇ ಅವಳ ತಾಯಿ ಕಾಲವಾಗಿದ್ದರು. ಹೆಂಡತಿ ಮೇಲಿನ ಗೌರವ ಮತ್ತು ಪ್ರೀತಿ ಅವರನ್ನು ಮತ್ತೊಂದು ಮದುವೆಯ ಯೋಚನೆಯಿಂದ ವಿಮುಖರನ್ನಾಗಿಸಿತ್ತು. ಮಗಳನ್ನು ಮುಚ್ಚಟೆಯಿಂದಲೇ ಬೆಳೆಸಿದ್ದರು. ಆಗರ್ಭ ಶ್ರೀಮಂತ ವೆಂಕಟರಾಯರ ಒಬ್ಬಳೇ ಮಗಳಾದರೂ ಶ್ರೀಮಂತಿಕೆಯ ದರ್ಪ ಬಾರದಂತೆ, ಒಳ್ಳೆಯ ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದರು. ಸುಜಲಾಳೂ ಸ್ಫಟಿಕಮಣಿಯಂತೆ. ಅವಳ ಗೆಳೆಯ, ಗೆಳತಿಯರೂ ಅವಳಿಂದ ಸ್ಫೂರ್ತಿ ಹೊಂದುತ್ತಿದ್ದರು. ಅಹಂಕಾರವಿಲ್ಲದ, ಊನವಿಲ್ಲದ ಆಕೆಯಲ್ಲಿ ಒಂದು ಊನವಿತ್ತು. ದೈಹಿಕ ಊನ, ಕಾಲಿನ ಪೂರ್ಣವಾಗದ ಬೆಳವಣಿಗೆ ಅವಳ ಎಲ್ಲಾ ಒಳ್ಳೆಯ ಗುಣಗಳಿಂದ ಮುಚ್ಚಿ ಹೋಗುತ್ತಿತ್ತು. ಅವಳು ಚಿಕ್ಕಂದಿನಿಂದಲೂ ತನ್ನ ದೈಹಿಕ ಊನವನ್ನು ಸಮಸ್ಯೆ ಎಂದು ತಿಳಿಯದಂತೆಯೇ ಬೆಳೆಸಲಾಗಿತ್ತು. ಆದರೆ, ಆಕೆಯನ್ನು ಸಮಸ್ಯೆ ಎಂದು ಪರಿಗಣಿಸುವಂತೆ ಮಾಡಿದ್ದು ಆಕೆಯ ಮದುವೆ.

ಯೋಗ್ಯ ವರನ ತಲಾಶೆಯಲ್ಲಿದ್ದ ವೆಂಕಟರಾಯರಿಗೆ ಬರುಬರುತ್ತಾ ಅದರ ಕಷ್ಟ ಅರಿವಾಗಿತ್ತು. ಶ್ರೀಮಂತಿಕೆ ತುಂಬಿ ತುಳುಕುತ್ತಿದ್ದವರಿಗೆ ಅಳಿಯನ ಶ್ರೀಮಂತಿಕೆಯಿಂದೇನೂ ಆಗಬೇಕಿರಲಿಲ್ಲ. ಆದರೆ ಸುಜಲಾಳನ್ನು ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕಿದ್ದ ಅಷ್ಟೇ. ಸುಜಲಾ ಟೆಕ್ಸ್ ಟೈಲ್ಸ್ ನ ಒಡೆಯ ವೆಂಕಟರಾಯರಿಗೆ ಈ ವಿಚಾರದಲ್ಲಿ ದೈವ ಸಹಾಯವೆಂಬಂತೆ ಒಂದು ಸಂಬಂಧ ಒದಗಿ ಬಂದಿತ್ತು. ಅದು ಅವರ ಗೆಳೆಯ ಜಯರಾಮ್ ಅವರ ಕೃಪೆಯಿಂದ.

ವೆಂಕಟರಾಯರು ಮತ್ತು ಜಯರಾಮ್ ಇಬ್ಬರೂ ಗೆಳೆಯರು. ಅಂತಹಾ ಗಾಢ ಸ್ನೇಹವೇನೂ ಇರದಿದ್ದರೂ ಇಬ್ಬರೂ ವಾಕಿಂಗ್ ನ ಮಿತ್ರರು. ಆದರೆ ಇಬ್ಬರ ಸ್ನೇಹವೂ ಸಂಬಂಧಕ್ಕೆ ತಿರುಗುವುದರಲ್ಲಿತ್ತು. ಜಯರಾಮ್ ಅವರು ವೆಂಕಟರಾಯರ ಸ್ನೇಹ ಬೆಳೆಸುವುದಕ್ಕೆ, ಸಂಬಂಧ ಬೆಳೆಸಲು ಕಾರಣವಾಗಿದ್ದು ರಾಯರ ಶ್ರೀಮಂತಿಕೆ. ಜಯರಾಮ್ ಅವರದ್ದೂ ಫ್ಯಾಕ್ಟರಿ ಇತ್ತು, ಆದರೂ ಅವರಿಗೆ ತೀರದ ಹಣದ ದಾಹ. ಇದು ಗೊತ್ತಿಲ್ಲದ ರಾಯರು ಈ ಸಂಬಂಧವನ್ನು ಒಪ್ಪಿಕೊಂಡದ್ದೂ ಆಗಿತ್ತು. ವೆಂಕಟರಾಯರ ಏಕಮಾತ್ರ ಪುತ್ರಿಯ ವಿವಾಹ ಜಯರಾಮ್ ಅವರ ಪುತ್ರ ಸುಂದರ್ ಜೊತೆಗೆ ನಡೆದು ಹೋಗಿತ್ತು.

ವೈಭವದಿಂದ ನಡೆದ ಮದುವೆ ಒಂದು ತಿಂಗಳಲ್ಲೇ ಮುರಿದು ಬಿದ್ದೂ ಆಗಿತ್ತು. ಆವತ್ತು ಬೆಳಿಗ್ಗೆ ಮೇಜಿನ ಮೇಲೆ ಒಂದು ಪತ್ರವಿತ್ತು ಜೊತೆಗೆ ಒಂದು ಗಿಫ್ಟ್ ಬಾಕ್ಸ್ ಇತ್ತು. ಪತ್ರದಲ್ಲಿದ್ದದ್ದು ಎರಡೇ ಸಾಲು.
"ನೀನು ನನ್ನ ಪಾಲಿಗೆ ಗಾಜಿನ ಗೊಂಬೆ. ಸರಿಯಾಗಿ ಮೂರು ತಿಂಗಳ ನಂತರ ಭೇಟಿಯಾಗೋಣ.
-ಇತಿ ಸುಂದರ್"
ಅದನ್ನು ನೋಡಿದ ಸುಜಲಾಳಿಗೆ ಗಾಬರಿಯಾಗಿತ್ತು. ಗಿಫ್ಟ್ ಬಾಕ್ಸ್ ತೆಗೆದು ನೋಡಿದರೆ ಅದರಲ್ಲಿ ಒಂದು ಗಾಜಿನ ಒಂಟಿ ರಾಜಕುಮಾರಿ ಇತ್ತು. ಅವಳಿಗೆ ಅದರ ಅರ್ಥ ತಿಳಿಯಲಿಲ್ಲ.

ಆ ಪತ್ರವನ್ನು ಹಿಡಿದುಕೊಂಡು ಜಯರಾಂ ಅವರ ಬಳಿಗೆ ಬಂದಾಗ ಅವರು ವ್ಯಾಖ್ಯಾನಿಸಿದ ಅರ್ಥವೇ ಬೇರೆ. ನನ್ನ ಮಗ ನನಗೂ ಹೇಳದೆ ಮನೆ ಬಿಟ್ಟು ಹೋಗಿದ್ದಾನೆಂದರೆ ಅದಕ್ಕೆ ನೀನೇ ಕಾರಣಕರ್ತಳು. ನಿನ್ನ ಕಾಲಿನಿಂದ ನನ್ನ ಮಗನ ಜೀವನವನ್ನೇ ಊನವಾಗಿಸಿದ್ದೀಯ. ನೀನೇ ಬೇಸರ ಮಾಡಿರುತ್ತೀಯ. ನೀನು ಎಷ್ಟೆಂದರೂ ನೋಡಲು ಚೆಂದವಿರುವ ಆದರೆ ಷೋಕೇಸ್ ನಲ್ಲಿ ಇಡಬಹುದಾದ ಗಾಜಿನ ಗೊಂಬೆ. ಗಾಜಿನ ಗೊಂಬೆಯ ಅಂದಕ್ಕೆ, ಐಶ್ವರ್ಯಕ್ಕೆ ಮರುಳಾಗಿ ನಾನು ನನ್ನ ಮಗನನ್ನು ದೂರ ಮಾಡಿಕೊಳ್ಳಬೇಕಾಯಿತು. ಮೊದಲು ನೀನು ಇಲ್ಲಿಂದ ನಡೆ ಎಂದು ಸುಜಲಾಳನ್ನು ಮನೆಯಿಂದ ಹೊರಗಟ್ಟಿದರು ಜಯರಾಂ.

ಅವತ್ತೇ ಅಲ್ಲಿಂದ ಹೊರಟ ಸುಜಲಾ ಅಪ್ಪನ ಮುಂದೆ ಆ ಪತ್ರವಿಟ್ಟು ಆ ಗಾಜಿನ ಗೊಂಬೆಯನ್ನು ತನ್ನ ರೂಂನಲ್ಲಿಟ್ಟು ಅದನ್ನೇ ನೋಡುತ್ತಾ ಕುಳಿತುಕೊಂಡಿರುತ್ತಿದ್ದಳು. ರಾಯರಿಗೂ ಇದರ ಗೂಡಾರ್ಥದ ಅರಿವಾಗಲಿಲ್ಲ. ಸುಜಲಾಳನ್ನು ಸಮಾಧಾನಿಸಲು, ಗಾಜಿನ ಗೊಂಬೆಯ ಯೋಗ್ಯತೆ ಅರಿಯದ ಮೂರ್ಖ ಅವನು. ಅವನ ಪಾಲಿನ ಗಾಜಿನ ಗೊಂಬೆಯನ್ನು ಮಣ್ಣುಪಾಲು ಮಾಡಿಕೊಂಡ. ಗಾಜಿನ ಗೊಂಬೆಯ ಬೆಲೆ ಗೊತ್ತಿಲ್ಲದ, ಗುಣ-ಯೋಗ್ಯತೆಯ ಫಲವುಣ್ಣದ ಮೂರ್ಖ ಎಂದರು.

ಸುಜಲಾಳು ಆ ಗಾಜಿನ ಗೊಂಬೆಯನ್ನು ನೋಡುತ್ತಾ, ಈ ಗಾಜಿನಷ್ಟೇ ಪಾರದರ್ಶಕವಾದ, ನಿಷ್ಕಲ್ಮಶ ಪ್ರೀತಿ ನೀಡಿದರೂ ನನ್ನ ಪಾಲಿಗೆ ಯಾಕೋ ನನ್ನ ಸಂಸಾರವೇ ಅಪಾರದರ್ಶಕವಾದಂತಾಯಿತು. ಆದರೆ, ಮೂರು ತಿಂಗಳ ನಂತರ ಆತ ನನ್ನನ್ನು ಬಂದು ಕಾಣುವುದಾದರೂ ಏತಕೆ? ಎಂದು ಯೋಚಿಸುತ್ತಲೇ ದುಃಖದಿಂದ ಕಾಲ ಕಳೆಯುತ್ತಿದ್ದಳು.

ಕಾಲಚಕ್ರ ಓಡುತ್ತಲೇ ಇತ್ತು. ಸರಿಯುತ್ತಿರುವ ಕಾಲಕ್ಕೆ ಯಾರ ಹಂಗಿದೆ ಹೇಳಿ? ಪುಟಾಣಿಯ ಜೀವನ ಹೊಸ ತಿರುವು ಪಡೆಯುವುದರಲ್ಲಿತ್ತು.

ನೋಡನೋಡುತ್ತಿದ್ದಂತೆಯೇ ಮೂರು ತಿಂಗಳು ಕಳೆಯಿತು. ಸುಂದರ್ ಬಂದು ಸುಜಲಾಳೆದುರು ನಿಂತ. ರಾಯರಿಗೆ "ನನ್ನ ಗಾಜಿನ ಗೊಂಬೆಯನ್ನು ಜೋಪಾನ ಮಾಡಿದಕ್ಕೆ ಧನ್ಯವಾದಗಳು" ಎಂದ. ಆಗ ರಾಯರು ಕೇಳಿದರು ಗಾಜಿನ ಗೊಂಬೆಯ ಅರ್ಥವೇನೆಂದು? ಅವನ ಉತ್ತರ ಹೀಗಿತ್ತು "ಅವಳು ನನ್ನ ಪಾಲಿಗೆ ದುಬಾರಿಯಾದ ಆದರೆ ಗಾಜಿನ ಗೊಂಬೆಯಷ್ಟೇ ನಾಜೂಕಾದ ಹೆಣ್ಣು. ಅವಳನ್ನು ಗಾಜಿನ ಗೊಂಬೆಯನ್ನು ಕಾಯ್ದುಕೊಂಡಷ್ಟೇ ಜತನದಲ್ಲಿ ಕಾಯ್ದುಕೊಳ್ಳುವೆ. ಅವಳ ಪಾರದರ್ಶಕವೆನಿಸುವ, ಮನಸೆಳೆಯುವ ಸಂಸ್ಕಾರಯುತ ಬದುಕನ್ನು ಮತ್ತಷ್ಟು ಹೊಳಪುಗೊಳಿಸುವೆ. ಕೀಳು ಯೋಚನೆಯವರು ಮುಟ್ಟಲಾಗದ, ಷೋಕೇಸಿನಲ್ಲಿಟ್ಟು ರಕ್ಷಿಸಿ ಅಲ್ಲಿಂದಲೇ ಅವರ ಕೆಟ್ಟ ಮನಸ್ಸುಗಳನ್ನು ಸರಿ ಮಾಡುವಂತೆ ಪ್ರಭಾವ ಬೀರುವ ಗಾಜಿನ ಗೊಂಬೆ. ಜೋಪಾನ ಮಾಡದಿದ್ದರೆ ಮತ್ತೆಂದೂ ಸಿಗದ ಅಮೂಲ್ಯ ರತ್ನ. ಕೆಟ್ಟತನದಿಂದ ಮುಟ್ಟಿದರೆ ಚೂಪಾಗಿ ಚುಚ್ಚುವ, ವಜ್ರದಿಂದಷ್ಟೇ ಆಕಾರ ಪಡೆಯಬಲ್ಲ ಶ್ರೇಷ್ಠ ಗಾಜಿನ ಗೊಂಬೆ ನನ್ನ ಸುಜಲಾ.

ಅಪ್ಪನ ಹಣದ ದುರಾಸೆಯ ಫಲವಾಗಿ ಸುಜಲಾಳನ್ನು ಮದುವೆಯಾದೆ. ಆದರೆ, ಅವಳ ಯೋಚನೆಗಳಿಂದ, ಅವಳ ಪ್ರಭಾವದಿಂದ ನಾನು ಬದಲಾದೆ. ಅಪ್ಪನ ಆಸೆಯ ಜಾಲದಿಂದ ಹೊರಬಂದು ಈ ಮೂರು ತಿಂಗಳಲ್ಲಿ ನನ್ನದೇ ಪ್ರಾಮಾಣಿಕ ಬದುಕು ಕಟ್ಟಿಕೊಂಡಿದ್ದೇನೆ. ನನ್ನದೇ ದಿನಸಿ ಅಂಗಡಿ ಈಗ ಲಾಭ ಗಳಿಸುತ್ತಿದೆ. ಗಾಜಿನ ಗೊಂಬೆಯನ್ನು ಜೋಪಾನ ಮಾಡುವಷ್ಟು ಬಲಿಷ್ಟವಾಗಿದ್ದೇನೆ. ನನ್ನ ಗಾಜಿನ ಗೊಂಬೆಯನ್ನು ನಾನು ಕರೆದುಕೊಂಡು ಹೋಗಲೇ?" ಎಂದನು ಸುಂದರ್.

ಅದಕ್ಕೆ ವೆಂಕಟರಾಯರೆಂದರು "ನನ್ನ ಮನೆ ಜೋಡಿ ಗಾಜಿನ ಗೊಂಬೆಗಳು ಮತ್ತು ಅವರ ಪರಿವಾರವಿರುವ ಷೋಕೇಸ್ ಆಗಲಿ." ಪುಟಾಣಿಯ ಮುಖದ ಮೇಲಿನ ಮಂದಹಾಸ ಇಡೀ ಮನೆಯನ್ನೇ ಪಸರಿಸಿತು.

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 18, 2019

ಅಪಶೃತಿಯ ಹಾಡು

ಇಷ್ಟು ದಿನ ನಾನೇ ಅವನನ್ನು ಅವಾಯ್ಡ್ ಮಾಡ್ತಾ ಇದ್ದೆ, ಕಾರಣ ನನಗೆ ಅವನನ್ನು ಎದುರಿಸುವ ಸ್ಥೈರ್ಯ ಇಲ್ಲಾ ಎಂದಲ್ಲ ಅಥವಾ ನನಗೆ ಭಯ ಅಂತಲೂ ಅಲ್ಲ. ಮತ್ತೆ ಆ ಬೆಣ್ಣೆಯಂತಹಾ ನಯವಂಚಕ ಮಾತುಗಳಿಗೆ ಮತ್ತೆಲ್ಲಿ ಮರುಳಾಗಿ ಮತ್ತೆ ಅಲ್ಲಿಗೇ ಹೋಗಿ ಬಿಡುತ್ತೇನೋ ಎಂಬ ಭಯದಿಂದ.. ಮತ್ತೆ ಆ ನರಕಕ್ಕೆ ಹೋಗಿ ಬಾಳ್ವೆ ಮಾಡಬೇಕಲ್ಲ ಎಂಬ ಯೋಚನೆಯಿಂದಲೇ ನನಗೆ ಮೈಮೇಲೆ ಮುಳ್ಳೆದ್ದಂತಾಗುತ್ತಿತ್ತು. 20 ವರ್ಷ ಜೊತೆಯಲ್ಲಿಯೇ ಬದುಕಿದ್ದೆವು. ಅದು ಪ್ರೇಮದಿಂದಲ್ಲ ಬದಲಿಗೆ ಗುರು-ಹಿರಿಯರು ನಿಶ್ಚಯಿಸಿ ಮಾಡಿದ ಮದುವೆಯ ಬಂಧದಿಂದಾಗಿ.. ಮದುವೆ ಎಂಬ ಪದಕ್ಕೆ ಬೆಲೆ ಕೊಟ್ಟು ಗೋಮುಖ ವ್ಯಾಘ್ರನ ಜೊತೆ ಬದುಕಬೇಕಾಯಿತು. ಇದೆಲ್ಲವನ್ನೂ ನೆನಪಿಸಿಕೊಂಡರೆ ನನಗೇ ಅಸಹ್ಯ ಎನ್ನಿಸುತ್ತಿದೆ.

ಸಂಗೀತದ ಗಂಧವನ್ನೇ ಕಣಕಣದಲ್ಲೂ ಉಸಿರಾಡಿಕೊಂಡಿದ್ದ ಕುಟುಂಬ ನನ್ನದು. ಅಂತಹಾ ಕುಟುಂಬದ ಮಗಳಾಗಿ ಹುಟ್ಟಿದ್ದು ನನ್ನ ಪೂರ್ವಜನ್ಮದ ಸುಕೃತ. ವಿದ್ವಾನ್ ವೆಂಕಟೇಶ ಅಡಿಗರು ನನ್ನ ತಂದೆ. ದೂರ-ದೂರದ ಊರುಗಳಿಂದೆಲ್ಲಾ ಬಂದು ನನ್ನ ತಂದೆಯ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಸ್ವಂತ ಮಗಳಾದರೂ ನನ್ನನ್ನು ಅವರ ಶಿಷ್ಯಂದಿರಳೊಬ್ಬಳಾಗಿಯೇ ಪರಿಗಣಿಸಿ ಸಂಗೀತ ಪಾಠ ಹೇಳಿಕೊಟ್ಟರು ನನ್ನ ತಂದೆ. ತಾಯಿ ಪ್ರಸಿದ್ಧ ವೀಣಾವಾದಕಿ ವಿದೂಷಿ ಸುಮತಿ ವೆಂಕಟೇಶ ಅಡಿಗ. ನನ್ನ ತಾಯಿ ವಿದೂಷಿಯಾಗಿದ್ದರೂ ಬೇರಾರಿಗೂ ವೀಣೆಯ ಪಾಠ ಹೇಳಿಕೊಡುವ ಕಾಯಕದಲ್ಲಿ ತೊಡಗಿರಲಿಲ್ಲ. ಕಾರಣವೇನೋ ನಾನು ತಿಳಿಯೆ. ಆದರೆ, ನಾನು ಮಾತ್ರ ಆಕೆಯ ವೀಣಾವಾದನ ತರಗತಿಯ ಏಕಮಾತ್ರ ಶಿಷ್ಯೆ. ತಂದೆಯ ಸಂಗೀತ, ತಾಯಿಯ ವೀಣೆಯ ಸಾಧನೆ ಎರಡೂ ಮಿಳಿತವಾಗಿ ರೂಪುಗೊಂಡ ನಾನು ಅವರಿಬ್ಬರನ್ನೂ ಮೀರಿಸುವಂತೆ ಬೆಳೆದು ನಿಂತೆ. ನಿಮಗೆ ಈ ಹೋಲಿಕೆ ಅತಿಶಯೋಕ್ತಿಯೆನಿಸಿದರೆ ಅದಕ್ಕೆ ನಾನೇನೂ ಮಾಡಲಾರೆ. ಏಕೆಂದರೆ ಜನರಾಡಿದ್ದ, ಜನರಾಡುತ್ತಿದ್ದ ಮಾತಿದು. ನನ್ನ ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳಿಗೆ ಜನ ಕಿಕ್ಕಿರಿದು ಸೇರುತ್ತಿದ್ದರು. ನನ್ನನ್ನು ಶಾರದೆಯ ಅಪರಾವತಾರ ಎಂದು ಹೆಮ್ಮೆಯಿಂದ ಹೊಗಳುತ್ತಿದ್ದರು. ಇಷ್ಟೆಲ್ಲಾ ಹೊಗಳಿಕೆಗಳು ಬಂದರೂ ನನಗೆ ಅಹಂಕಾರವಿರಲಿಲ್ಲ, ಹೆಮ್ಮೆಯಿತ್ತು ಬದಲಿಗೆ ಗರ್ವದಿಂದ ಬೀಗುವ ಗುಣವಿರಲಿಲ್ಲ. ಏಕೆಂದರೆ ನನಗೆ ತಂದೆ-ತಾಯಿ ನೀಡಿದ್ದ ಸಂಸ್ಕಾರದ ಅರಿವಿತ್ತು ಅದರೊಟ್ಟಿಗೆ ವರ್ತಮಾನದ ಅರಿವೂ ಇತ್ತು. ಕಂಠವಿದ್ದರಷ್ಟೇ ನನ್ನನ್ನಿವರು ಹೊಗಳಲು ಸಾಧ್ಯ. ಹಿತವಾಗಿ ವೀಣೆ ನನ್ನನ್ನು ಒಪ್ಪಿಕೊಳ್ಳುತ್ತಾರಿವರು. ಬರಿಯ ಹೊಗಳಿಕೆಯ ಮಾತಿಗೆ ಉಬ್ಬಿ ಅಭ್ಯಾಸ ಮಾಡದೆ ಅಹಂಕಾರದಿಂದ ನಿಂತವರು ಇಂದು ಕಾಲಚಕ್ರದ ಸುಳಿಗೆ ಸಿಲುಕಿ ಹೋಗಿದ್ದಾರೆ. ಇದು ಬರೀ ಸಂಗೀತ ಕ್ಷೇತ್ರಕ್ಕಷ್ಟೇ ಅಲ್ಲದೆ ಸಿನಿಮಾ, ನೃತ್ಯ, ಬರಹ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹದ್ದು. ಹೀಗೇ ಮಣ್ಣಲ್ಲಿ ಮಣ್ಣಾಗಿ ಹೋಗದೆ ಅಜರಾಮರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದೆ.

ಸಾಧನೆಯ ಹಾದಿಯಲ್ಲಿ ಉತ್ತುಂಗದಲ್ಲಿದ್ದ ಕಾಲದಲ್ಲಿಯೇ ನನಗೆ ಇವನ ಜೊತೆ ವಿವಾಹವಾದದ್ದು. ಅಪ್ಪನ ಬಾಲ್ಯಸ್ನೇಹಿತ ಸುಂದರಕೃಷ್ಣ ಅಡಿಗರ ಮಗ ವಿನಾಯಕನೊಂದಿಗೆ ನನ್ನ ವಿವಾಹವಾಯಿತು. ಇಬ್ಬರ ಬಾಲ್ಯದ ಸ್ನೇಹವು ಮಕ್ಕಳ ವಿವಾಹದೊಂದಿಗೆ ಮಿಳಿತವಾಗಿ ನೆಂಟಸ್ತಿಕೆಯಿಂದ ಬೆಸೆದಿತ್ತು. ಅತ್ತೆ ಇರಲಿಲ್ಲ. ಅಮ್ಮನಿಲ್ಲದ ಮಗು ಎಂದು ಮಾವ ಇವನನ್ನು ಬಹಳ ಮುದ್ದಿನಿಂದ ಬೆಳೆಸುತ್ತಿದ್ದರು. ಅವನ ಬಹುಪಾಲು ಸಮಯ ಕಳೆದದ್ದು ಹಾಸ್ಟೆಲ್ ನಲ್ಲಿಯೇ..ಅವನಿಗೆ ಅವನು ಮತ್ತು ಹಣ ಮಾತ್ರವೇ ಮುಖ್ಯವೆಂಬ ಭಾವನೆ ಬೆಳೆದುಬಿಟ್ಟಿತ್ತು.

ಮಾವ ಮೃದಂಗ ವಾದಕರು. ಅಪ್ಪನ ಕೆಲವು ಸಂಗೀತ ಕಛೇರಿಗಳಿಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿದ್ದರು. ಅದು ಕೇವಲ ಅವರ ಹವ್ಯಾಸವಷ್ಟೇ ಆಗಿತ್ತು. ಅವರಿಗೆ ಅವರ ಕುಟುಂಬದ ತಲತಲಾಂತರದಿಂದ ಬಂದ ಅಪಾರ ಆಸ್ತಿಯಿತ್ತು. ಮಾವನಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಆದರೆ, ವಿನಾಯಕನಿಗೆ ಸಂಗೀತದಲ್ಲಿ ಕೊಂಚವೂ ಆಸಕ್ತಿ ಇರಲಿಲ್ಲ. ಇವನ ಮನಸ್ಸು ವ್ಯವಹಾರಕ್ಕಷ್ಟೇ ಸೀಮಿತವಾಗಿತ್ತು. ಸಂಗೀತ ನೀಡುವ ಅಲೌಕಿಕ ಆನಂದದ ಕುರಿತು ಅವನಿಗೆ ಅಸ್ಥೆ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ಸಂಗೀತಕ್ಕೆ ಗೌರವ ನೀಡದಿದ್ದರೂ, ನನ್ನ ಸಂಗೀತಾಭ್ಯಾಸಕ್ಕೆ ಅಡ್ಡಿಯನ್ನೂ ಮಾಡುತ್ತಿರಲಿಲ್ಲ. ಇವನು ಶುರು ಮಾಡಿದ್ದ ಸ್ಟಾರ್ಟ್ ಅಪ್ ಕೊಂಚ ಹೆಸರು ಮಾಡುತ್ತಿತ್ತು. ವೈಯಕ್ತಿಕವಾಗಿ ನನಗೆ ಗಂಡನೆಂಬ ಗೌರವ, ಮೆಚ್ಚುಗೆ ಇರದಿದ್ದರೂ ಅವನು ಕೆಲಸದಲ್ಲಿ ತೋರುತ್ತಿದ್ದ ಶ್ರದ್ಧೆ ಮತ್ತು ಅಸ್ಥೆಯನ್ನು ಮೆಚ್ಚುತ್ತಿದ್ದೆ. ಹೀಗೇ ಸಂಸಾರದ ಬಂಡಿ ಸಾಗುತ್ತಿದ್ದಾಗಲೇ ವಿಶು ಹುಟ್ಟಿದ್ದು.

ಸಣ್ಣ ಪುಟ್ಟ ಬಿರುಕುಗಳಿದ್ದ ಸಂಸಾರದಲ್ಲಿ ಬಿರುಕು ದೊಡ್ಡದಾಗಿದ್ದು ವಿಶುವಿಗೆ ಹೆಸರಿಡುವ ಸಂಧರ್ಭದಲ್ಲೇ.. ನನಗಿದ್ದ ಸಂಗೀತದ ಮೇಲಿನ ಅಭಿಮಾನಕ್ಕೆ ಮಗನಿಗೆ 'ಆಲಾಪ್' ಎನ್ನುವ ಹೆಸರಿಡಬೇಕು ಎನ್ನುವಾಸೆ. ವಿನಾಯಕನಿಗೆ 'ಪ್ರಾಜ್ಙ' ಎಂದು ಹೆಸರಿಡುವಾಸೆ. ಸಾಫ್ಟ್ ವೇರ್ ಉದ್ಯಮದಲ್ಲಿ ಮಗ ಪ್ರಾಜ್ಙವಾಗಿ ಮಿಂಚಬೇಕೆನ್ನುವ ಆಸೆ. ಕೊನೆಗೆ ಜಗಳ ದೊಡ್ಡದಾದಾಗ ಮಾವ ಇದನ್ನು ಸುಲಭವಾಗಿ ಬಗೆಹರಿಸಿದ್ದರು. 'ವಿನಾಯಕ' ಮತ್ತು 'ಶುಭಾ' ಎಂಬ ಹೆಸರಿನ ನಮ್ಮಿಬ್ಬರ ಮೊದಲ ಅಕ್ಷರಗಳನ್ನು ತೆಗೆದು ಮಗನನ್ನು 'ವಿಶು' ಎಂದು ಕರೆದರು. ಮಗನ ಮೂಲಕ ನಮ್ಮಿಬ್ಬರನ್ನು ಒಂದಾಗಿಸಿದೆ ಎಂಬ ತೃಪ್ತಿಯಲ್ಲಿಯೇ ಮಾವ ಕಣ್ಮುಚ್ಚಿದರು. ಮಾವನ ಕಾಲಾನಂತರ ಎಲ್ಲವೂ ಬದಲಾಗುತ್ತಾ ಹೋಯಿತು. ವಿಶು ಬೆಳೆಯುತ್ತಿದ್ದಂತೆ ವಿನಾಯಕನ ಅಹಂಕಾರವೂ ಬೆಳೆಯುತ್ತಾ ಹೋಯಿತು. ನನ್ನ ಸಂಗೀತ ಕಛೇರಿಗಳಿಗೆಲ್ಲಾ ಅವನ ಅನುಮತಿ ಇರಲೇಬೇಕಿತ್ತು. ಅಲ್ಲದೇ ನನ್ನ ಸಂಗೀತ ಕಛೇರಿಯಿಂದ ಬಂದ ಹಣದಲ್ಲಿ ನಾನು ಅನಾಥಾಶ್ರಮಕ್ಕೆ ನೀಡುತ್ತಿದ್ದ ಹಣವನ್ನೂ ನೀಡದಂತೆ ನಿರ್ಬಂಧಿಸಿದ. ಹಣ, ಅಧಿಕಾರ, ಸ್ವಾತಂತ್ರ್ಯ ಎಲ್ಲವೂ ಒಂದೊಂದಾಗಿ ನಿರ್ಬಂಧಿಸಲ್ಪಟ್ಟವು.

ಮಾವ ಬದುಕಿದ್ದಷ್ಟು ಕಾಲ ಅವರಿಗಾಗಿ ಸಹಿಸಿಕೊಂಡೆ, ನಂತರ ಮಗನಿಗೋಸ್ಕರ ಬದುಕಿದೆ. ಸದ್ಯಕ್ಕೆ ನನ್ನ ಜೀವಾಮೃತವೆಂದರೆ ನನ್ನ ಸಂಗೀತ ಅಷ್ಟೇ. ವಿನಾಯಕನ ದರ್ಪ ಬರುಬರುತ್ತಾ ಮೇರೆ ಮೀರುತ್ತಿತ್ತು. ಅವನು ಹಾಡೆಂದರೆ ಹಾಡಬೇಕಿತ್ತು.. ನಿಲ್ಲಿಸೆಂದರೆ ನಿಲ್ಲಿಸಬೇಕಿತ್ತು. ಅವನು ಹಾಡಬೇಕು ಎಂದವರ ಎದುರಲ್ಲಿ ಮಾತ್ರ ಹಾಡಬೇಕಿತ್ತು. ನನ್ನ ಪ್ರಾಣವಾದ ಸಂಗೀತ ಅವನಿಗೆ ಹಣ ಅಷ್ಟೇ.

ವಿಶುವನ್ನು ಸಂಗೀತದ ಗಂಧವೂ ಸೋಕದಂತೆ ಬೆಳೆಸುತ್ತಿದ್ದ.ಆದರೆ, ವಿಶು ವಿನಾಯಕನಿಗೆ ಗೊತ್ತಿಲ್ಲದಂತೆ ಸಂಗೀತಾಭ್ಯಾಸ ಮಾಡುತ್ತಿದ್ದ. ರಕ್ತಗತವಾಗಿ ಬಂದ ರೂಢಿಯನ್ನು ತಡೆಯಲು ಸಾಧ್ಯವೇ..? ಇಷ್ಟೆಲ್ಲವನ್ನೂ ವಿನಾಯಕ ಮಾಡುತ್ತಿದ್ದುದ್ದು ಅವನ ಸ್ಟೇಟಸ್ ಗಾಗಿ. ಅವನ ಬೆಣ್ಣೆ ಮಾತುಗಳಿಂದ ಎಲ್ಲರನ್ನೂ, ಎಲ್ಲವನ್ನೂ ತನಗೆ ಬೇಕಾದಂತೆ ತಿರುಗಿಸಿಕೊಳ್ಳುತ್ತಿದ್ದ. ಅಕ್ಷರಶಃ ಪಂಜರದ ಪಕ್ಷಿಯಂತೆಯೇ ಬದುಕುತ್ತಿದ್ದೆ.

ವಿಶು ಸಂಗೀತ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಿದ್ದ. ವಿನಾಯಕನಿಗೆ ಅದೇಗೋ ವಿಶುವಿನ ಸಂಗೀತಾಭ್ಯಾಸದ ಸುಳಿವು ಹತ್ತಿತ್ತು ಅನ್ನಿಸುತ್ತದೆ. ಬಿಸಿನೆಸ್ ಟೂರ್ ಗೆ ಹೋಗುತ್ತಿದ್ದೇನೆ ಬರುವುದು ಒಂದು ವಾರವಾಗಬಹುದು ಎಂದು ಹೇಳಿ ಹೊರಟಿದ್ದ ವಿನಾಯಕ. ವಿಶುವಿಗೂ, ನನಗೂ ಸಂಭ್ರಮವೋ ಸಂಭ್ರಮ. ಪಂಜರದ ಪಕ್ಷಿಗಳನ್ನು ಗೂಡಿನಲ್ಲಾದರೂ ಸ್ವಚ್ಛಂದವಾಗಿ ಹಾರಾಡಬಹುದು ಎಂಬ ಭ್ರಮೆಯಲ್ಲಿದ್ದೆವು. ನಮ್ಮ ಭ್ರಮೆಯ ಸಾಮ್ರಾಜ್ಯ ನುಚ್ಚುನೂರಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅಂದಿನ ಸಂಜೆ 'ಶಂಕರಾಭರಣ'ದ ಹಾಡೊಂದನ್ನು ಹಾಡುತ್ತಾ ಮೈ ಮರೆಯುತ್ತಿರುವಾಗ ವಿನಾಯಕ ಬಂದು ಎದುರು ನಿಂತಿದ್ದ. ಗಾಬರಿಯಲ್ಲಿದ್ದಾಗಲೇ ವಿಶುವಿನ ಕೆನ್ನೆಗೆ ಬಿದ್ದ ಏಟು ಅವನ ಪ್ರಾಣಕ್ಕೇ ಎರವಾಗಿತ್ತು.

ವಿನಾಯಕ ಗಾಬರಿಗೊಂಡ. ಎದೆಯೆತ್ತರಕ್ಕೆ ಬೆಳೆದ ಮಗನ ಸಾವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು ನನಗೆ ಅಷ್ಟರಲ್ಲಿ ತನ್ನ ನಯವಾದ ಮಾತುಗಳಿಂದ ನನ್ನನ್ನು ವಂಚಿಸಲು ಇವನು ಆಗಲೇ ಸಿದ್ದವಾಗಿದ್ದ. "ನನ್ನ ಬಿಸಿನೆಸ್ ಉತ್ತುಂಗದಲ್ಲಿರುವಾಗ, ನಾನು ಪ್ರಸಿದ್ಧಿಯ ಶಿಖರದಲ್ಲಿರುವಾಗ ನಾನು ಈ ಸಾವಿನ ಹೊಣೆ ಹೊರಲು ಸಿದ್ಧನಿಲ್ಲ"  ಎಂದು ಮಗನ ಸಾವನ್ನು ಮುಚ್ಚಿಹಾಕಲು ಸಿದ್ಧವಾಗಿದ್ದ. ನನ್ನನ್ನೂ ಹೇಳಬೇಡವೆಂದು ಗೋಗರೆದ. ನನ್ನ ಮಗನ ಮರಣದಿಂದ ಅಷ್ಟೂ ದಿನ ತಡೆದುಕೊಂಡಿದ್ದ ನನ್ನ ಕ್ರೋಧವೆಲ್ಲಾ ಹೊರಬಂದಿತ್ತು. ರೋಷದಲ್ಲಿ ಪೋಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ನನ್ನ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಂಡೆ ಎಂದುಕೊಂಡೆ ಆದರೆ ಹಾಗಾಗಲಿಲ್ಲ. ಇವನ ಕುತಂತ್ರ, ಹಣಬಲದಿಂದ ನಾನೇ ದೋಷಿಯ ಸ್ಥಾನದಲ್ಲಿ ನಿಂತಿದ್ದೆ. ಕೊನೆಗೂ ನ್ಯಾಯದೇವತೆಯ ಕಣ್ಣು ಕುರುಡಾಗಿಯೇ ಉಳಿಯಿತು.

ಮಗಳ ಈ ಪರಿಸ್ಥಿತಿ ಹಾಗೂ ಸಂಗೀತ ಲೋಕದ ರಾಣಿಯಾಗಿ ಮೆರೆದಿದ್ದವಳ ಈ ಪರಿಸ್ಥಿತಿಯನ್ನು ನೋಡಲಾಗದೆ ಹಾಗು ನನ್ನ ಜೊತೆ ಸಂಗೀತಕ್ಕೂ ಆಗುತ್ತಿದ್ದ ಅವಮರ್ಯಾದೆಯನ್ನು ಕಂಡು ನನ್ನ ತಂದೆ-ತಾಯಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡರು. ಅವರ ಅಂತಿಮ ಮುಖದರ್ಶನ ಕೂಡಾ ನನಗಾಗಲಿಲ್ಲ.

ಒಂದಾನೊಂದು ಕಾಲದಲ್ಲಿ ಸಂಗೀತದ ಅನಭಿಷಿಕ್ತ ದೇವತೆಯಾಗಿದ್ದ ನಾನು ಇಂದು ಸೆರೆಮನೆಯ ಖೈದಿಯಾಗಿ ಒಂದು ನಂಬರಿನಿಂದ ಗುರುತಿಸಲ್ಪಟ್ಟೆ. ಸಂಗೀತವನ್ನು ಹಾಗು ನನ್ನತನವನ್ನು ಕಳೆದುಕೊಂಡು ಇಲ್ಲಿಯೇ ಕಳೆದುಹೋಗುತ್ತೇನೆ, ನನ್ನ ಸಂಗೀತ ಪಯಣ ಕೊನೆಯಾಯಿತು ಎಂದುಕೊಂಡೆ. ಇಲ್ಲ, ಹಾಗಾಗಲಿಲ್ಲ.. ಅವತ್ತು ಜೈಲಿನಲ್ಲಿ ರಿಮ್ಯಾಂಡ್ ಹೋಮ್ ನ ಮಗುವೊಂದು ಹಾಡು ಹಾಡುವುದನ್ನು ಕೇಳಿದೆ. ತಪ್ಪಾದ ಶೃತಿಯಲ್ಲಿ ಹಾಡುತ್ತಿದ್ದ ಮಗುವನ್ನು ತಿದ್ದಲು ಹಾಡಲಾರಂಭಿಸಿದೆ. ಅದೆಷ್ಟು ಹೊತ್ತು ಮೈಮರೆತು ಹಾಡುತ್ತಿದ್ದೆನೋ ತಿಳಿಯದು. ಹಾಡು ಮುಗಿಸಿದಾಗ ಚಪ್ಪಾಳೆಗಳ ಸದ್ದು ಕೈಗಡಚಿಕ್ಕುವಂತೆ ಕೇಳುತ್ತಿತ್ತು. ಅಂದಿನಿಂದ ಮಹಿಳಾ ಖೈದಿಗಳು ಮತ್ತು ಮಕ್ಕಳಿಗೆ ಸಂಗೀತ ಶಿಕ್ಷಕಿಯಾದೆ. ಸಂಗೀತ ನನ್ನ ಬದುಕಲ್ಲಿ ಮತ್ತೆ ಜೀವಕಳೆ ತುಂಬಿತ್ತು.

ಅವಧಿಗೆ ಮುಂಚೆಯೇ ನನ್ನ ಸನ್ನಡತೆಯಿಂದ ಬೇಗನೆ ಬಿಡುಗಡೆ ಹೊಂದಿದ್ದೆ. ಮುಂದೇನು ಎಂಬ ಪ್ರಶ್ನೆ ಕಾಡದೆ ಬಿಡಲಿಲ್ಲ. ತವರನಲ್ಲಿ ಅಪ್ಪ-ಅಮ್ಮನ ಆಸರೆಯಿಲ್ಲ. ತಂದೆಯ ಸ್ಥಾನದಲ್ಲಿದ್ದ ಮಾವನಿಲ್ಲ. ಬದುಕಲ್ಲಿ ಬೆಳಕಾಗಬೇಕಾಗಿದ್ದ ಮಗನೂ ಬದುಕಿಲ್ಲ. ಗಂಡ ನನ್ನ ಪಾಲಿಗೆ ಇದ್ದರೂ ಸತ್ತಂತೆ.. ಹೊರ ಜಗತ್ತಿಗೆ ಮಗನನ್ನೇ ಕೊಂದ ಕೊಲೆಗಾತಿ ನಾನು. ಜಗತ್ತಿನಲ್ಲಿ ನನ್ನವರು ಎಂಬುವವರೇ ಇಲ್ಲದೆ ಒಬ್ಬಂಟಿಯಾಗಿದ್ದೆ. ಮುಂದೇನು ಎಂದು ಯೋಚಿಸುತ್ತಿರುವಾಗ ಜೈಲಿನಿಂದ ಸಂಗೀತ ಶಿಕ್ಷಕಿಯಾಗಿ ಮುಂದುವರಿಯಿರಿ ಎಂಬ ಕೋರಿಕೆ ಬಂದದ್ದು ಗುರಿಯಿಲ್ಲದೆ ಅಂಡಲೆಯುತ್ತಿದ್ದ ದೋಣಿಗೆ ಗಮ್ಯ ಕಾಣಿಸಿದಂತಾಗಿತ್ತು.

10-15 ವರ್ಷಗಳ ನಂತರ ನನ್ನ ಸಂಗೀತದ ಪಯಣದಲ್ಲಿ ಯಾವುದೂ ಹೊಸ ಕಲಿಕೆ ಮತ್ತು ಹೊಸ ಪ್ರಯೋಗಗಳಿಲ್ಲದೇ ಏಕತಾನತೆ ಎನ್ನಿಸತೊಡಗಿತು. ನನ್ನ ಅಷ್ಟು ವರ್ಷದ ದುಡಿಮೆಯಿಂದ ಕೂಡಿಸಿಟ್ಟ ಹಣದಲ್ಲಿ 'ಅನುಕ್ಷಣ ಆಲಾಪ' ಎಂಬ ಸಂಗೀತಶಾಲೆ ಆರಂಭಿಸಿದೆ. ಆಸಕ್ತ ಬಡ ವಿದ್ಯಾರ್ಥಿಗಳಿಗೆ ಹಣ ತೆಗೆದುಕೊಳ್ಳದೆ ಸಂಗೀತವನ್ನು ಧಾರೆ ಎರೆದೆ. ನನ್ನಿಂದ ಸಂಗೀತ ಕಲಿತ ವಿದ್ಯಾರ್ಥಿಗಳು ಇಂದು ದಿಕ್ಕುದಿಕ್ಕಿನಲ್ಲಿಯೂ ನನ್ನ ಮತ್ತು ಸಂಗೀತದ ಹಾಗೂ ಸಂಗೀತಶಾಲೆಯ ಕೀರ್ತಿಯನ್ನು ಪಸರಿಸಿದರು. ಇಷ್ಟೆಲ್ಲಾ ನಡೆಯುವಾಗ ಬರದಿದ್ದ ವಿನಾಯಕ ಈಗ ನನ್ನ ಬಾಳಲ್ಲಿ ಬಂದಿದ್ದ.

ಹತ್ತು ನಿಮಿಷದ ಭೇಟಿಯಲ್ಲಿ "ನಡೆದಿದ್ದನ್ನು ಮರೆತುಬಿಡು. ನನ್ನ ಜೊತೆ ಬಾ. ಯಾಕೋ ನನ್ನ ಕಂಪೆನಿ ಈಗ ಲಾಸ್ ನಲ್ಲಿದೆ. ಅದನ್ನು ಮಾರಿ ನಿನ್ನ ಜೊತೆ ನಿಲ್ಲುತ್ತೇನೆ. ವಿದೇಶದಲ್ಲಿ ನಿನ್ನ ಸಂಗೀತ ಕಛೇರಿ ನಡೆಸೋಣ, ನಿನ್ನ ಸಂಗೀತದಿಂದ ಹಣದ ಹೊಳೆಯನ್ನೇ ಹರಿಸಬಹುದು."ಎಂದೆಲ್ಲಾ ಮಾತನಾಡಿದ್ದ. ಅವನ ಮಾತುಗಳಲ್ಲಿ ಕಪಟವಿತ್ತಾ..? ಗೊತ್ತಿಲ್ಲ. ಆದರೆ, ನಯವಂಚಕತೆಯ ಎಲ್ಲಾ ಲಕ್ಷಣಗಳೂ ಇದ್ದವು.

ಹಾಡುವಾಗ ಅಪಶೃತಿ ಉಂಟಾದರೆ ಮತ್ತೆ ಮತ್ತೆ ಅಪಶೃತಿ ಬರುತ್ತದೇನೋ ಎಂದು ನಿರೀಕ್ಷಿಸುತ್ತದೆ ಮನಸ್ಸು. ಪಂಜರದ ಪಕ್ಷಿಯಂತೆ ಬಂಧಿತವಾಗಿದ್ದ ನನಗೆ ನಾನು ನಿರೀಕ್ಷಿಸಿದ ಬದುಕು ಈಗಷ್ಟೇ ದಕ್ಕಿದೆ. ಸಂಗೀತ ಬದುಕು ಕಟ್ಟಿಕೊಟ್ಟಿದೆ. ವಿದೇಶದ ಆಸೆಗಾಗಿ ಹಾತೊರೆದು ನಿಂತ ನೆಲವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾದರೆ..? ಅಲ್ಲದೆ ಹತ್ತು ನಿಮಿಷದ ಭೇಟಿಯಲ್ಲಿ ನನ್ನ ಯೋಗಕ್ಷೇಮವನ್ನು ಒಮ್ಮೆಯೂ ವಿಚಾರಿಸಲಿಲ್ಲ. ಅವನ ಸ್ವಾರ್ಥ, ಹಣಕ್ಕಾಗಿ ಈಗ ನನ್ನ ಬಳಿ ಬಂದಿದ್ದಾನೆ ಅಷ್ಟೆ.. ಅವನ ಕಂಪನಿ ಲಾಭದಲ್ಲಿದ್ದಿದ್ದರೆ ನನ್ನನ್ನು ತಿರುಗಿಯೂ ನೋಡುತ್ತಿರಲಿಲ್ಲ.

ಸನ್ಮಾನ ಸ್ವೀಕರಿಸಲು ಕರೆದ ಎಷ್ಟೋ ಸಂಧರ್ಭದಲ್ಲಿ ಇವನೂ ಅತಿಥಿಯಾಗಿರುತ್ತಿದ್ದ. ಎಷ್ಟೋ ಸಂಧರ್ಭಗಳಲ್ಲಿ ಇವನಿಗೆ ಎದುರಾಗಬಾರದು ಎಂಬ ಕಾರಣಕ್ಕೆ ಹೋಗಲಿಲ್ಲ. ಜನಪ್ರಿಯತೆಯಿಂದ ದೂರವೇ ಉಳಿದೆ. ಇಂದು ಎಷ್ಟೇ ಉನ್ನತಿಗೇರಿದರೂ ನನ್ನ ಭೂತದ ಸಂಧರ್ಭ ನನ್ನ ಭವಿಷ್ಯದಲ್ಲಿ ಕಪ್ಪುಚುಕ್ಕಿಯಾಗಿ ಉಳಿದುಬಿಟ್ಟಿದೆ. ಅಪಶೃತಿಯ ಹಾಡಾಗಿರುವ ನನ್ನ ಬದುಕು ಸರಿಯಾಗುವುದೇ?

ಎಷ್ಟೋ ಹೊತ್ತಿನ ಯೋಚನೆಯ ನಂತರ ನನ್ನಲ್ಲೊಂದು ಗಟ್ಟಿ ನಿರ್ಧಾರ ರೂಪುಗೊಂಡಿತು. ಸಂಗೀತದ ಅಧಿದೇವತೆ ಶಾರದೆಯ ಅಸ್ತಿತ್ವ ಗಂಡಿನ ಅಧೀನದಲ್ಲಿಲ್ಲ, ಬದಲಾಗಿ ಸಂಗೀತದ ಅಧೀನದಲ್ಲಿದೆ. 'ಅನುಕ್ಷಣ ಆಲಾಪ' ಅಮರವಾಗಲು ಅಪಶೃತಿಯ ಹಾಡು ಕೊನೆಯಾಗಬೇಕು. ಸವಿಶೃತಿಯ ಗಾನದಲ್ಲಿ ಮತ್ತೆಂದೂ ಅಪಶೃತಿಯ ಸೆಳಕೂ ಬರಬಾರದು. ಈ ನಿರ್ಧಾರ ನಿಮಗೆ ಸಮ್ಮತವಲ್ಲವೇ..?

~ವಿಭಾ ವಿಶ್ವನಾಥ್

ಮಂಗಳವಾರ, ಜುಲೈ 30, 2019

ಟೆಕ್ ಲೋಕದ ಗಾದೆಗಳು - 01

ಈಗಿನ ಟೆಕ್ನಾಲಜಿ ಯುಗಕ್ಕೆ ಹೊಂದಿಕೆಯಾಗುವ ಹೊಸ ರೀತಿಯ ಗಾದೆಗಳನ್ನು ಬರೆಯುತ್ತಿರುವ ನನ್ನದೊಂದು ಹೊಸ ಪ್ರಯತ್ನ. ಓದಿ ಪ್ರೋತ್ಸಾಹ ನೀಡುವಿರೆಂಬ ಆಶಯದಲ್ಲಿ ಬರೆದಿರುವೆ...
ಮೂಲ ಗಾದೆಗಳು, ಹೊಸ ಗಾದೆಗಳ ಕೆಳಗೆ ಬ್ರಾಕೇಟ್ ಅಲ್ಲಿವೆ.

1. ಪೆನ್ ಡ್ರೈವ್ ಗೆ ಹೋದ ಮರ್ಯಾದೆ ಲ್ಯಾಪ್ಟಾಪ್ ಕೊಟ್ಟರೂ ಸಿಗಲ್ಲ
(ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ)

2. ಸಿಸ್ಟಮ್ ಡೇಟಾ ಕದ್ದರೂ ಕಳ್ಳ, ಡೇಟಾ ಸೆಂಟರ್ ಡೇಟಾ ಕದ್ದರೂ ಕಳ್ಳ
(ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ)

3. ಸೋಶಿಯಲ್ ಮೀಡಿಯಾಗಳ ಮೇಲೆ ಆಸೆ, ಮೊಬೈಲ್ ಡೇಟಾ ಮೇಲೆ ಪ್ರೀತಿ
(ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ)

4. ಅತಿ ಮೊಬೈಲ್ ಬಳಕೆ ಮತಿ ಕೇಡು
(ಅತಿ ಆಸೆ ಗತಿ ಕೇಡು)

5. ಕೋಡಿಂಗ್ ಮಾಡ್ತಾ ಮಾಡ್ತಾ ಅಪ್ಲಿಕೇಶನ್, ಡೇಟಾ ಬಳಸುತ್ತಾ ಬಳಸುತ್ತಾ ಖಾಲಿ
(ಹಾಡ್ತಾ ಹಾಡ್ತಾ ರಾಗ, ಉಗುಳ್ತಾ ಉಗುಳ್ತಾ ರೋಗ)

6. ವಾಟ್ಸಾಪ್ ಬಳಸುವುದು ಬಿಡುವುದಿಲ್ಲ, ಇನ್ಸ್ಟಾಗ್ರಾಮ್ ಆನ್ ಇನ್ಸ್ಟಾಲ್ ಮಾಡುವುದಿಲ್ಲ
(ಆರಕ್ಕೆ ಏರುವುದಿಲ್ಲ, ಮೂರಕ್ಕೆ ಇಳಿಯುವುದಿಲ್ಲ)

7. ಅಪ್ಲಿಕೇಶನ್ ಡೆವಲಪ್ ಮಾಡಿದವರಿಗಿಂತ, ಬಳಕೆದಾರರೇ ಮೇಲು
(ಅಡುಗೆ ಮಾಡಿದವಳಿಗಿಂತ ಬಡಿಸಿದವರೇ ಮೇಲು)

8. ಸೋಶಿಯಲ್ ಮೀಡಿಯಾ, ಇಂಟರ್ನೆಟ್ ಡೇಟಾ ತೊಳಿಯ
(ಅಳಿಯ ಮನೆ ತೊಳಿಯ)

9. ನಮ್ಮ ಮುಖದ ಅವಲಕ್ಷಣಕ್ಕೆ ಸೆಲ್ಫಿ ಬೇಕೇ ?
(ಅಂಗೈ ಹುಣ್ಣಿಗೆ ಕನ್ನಡಿ ಬೇಕೇ)

10. ಮೊಬೈಲ್ ಡೇಟಾ ಅಲರ್ಟ್ ಇದ್ದಾಗಲೇ, ವಿಡಿಯೋ ಮೇಲೆ ವಿಡಿಯೋ ಕಳುಹಿಸಿದರಂತೆ
(ಅಟ್ಟದ ಮೇಲಿಂದ ಬಿದ್ದವನಿಗೆ, ದಡಿಗೆ ತಗೊಂಡು ಹೇರಿದರಂತೆ)

11.ಕಡಿಮೆ ಎಂ.ಬಿ, ಕೆಟ್ಟ app
(ಅಗ್ಗದ ಮಾಲು, ಮುಗ್ಗಿದ ಜೋಳ)

12. ಅಜ್ಜಿಗೆ ಗ್ರೂಪ್ ಮೆಸೇಜ್ ಚಿಂತೆ ಆದರೆ, ಮೊಮ್ಮಗಳಿಗೆ ಸ್ಟೇಟಸ್ ಚಿಂತೆ
(ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ  ಮತ್ತೇನೋ ಚಿಂತೆ)

13. ಕಾಡಿ ಬೇಡಿ ಪಬ್ ಜಿ ಆಡ್ತಾ ಇದ್ದರು
(ಅತ್ತೂ ಕರೆದು ಔತಣ ಹೇಳಿಸಿಕೊಂಡರು)

14. ವೈ-ಫೈ ಪಾಸ್ವರ್ಡ್ ನೀಡದವರ ಸಂಗ, ಸ್ನೇಹವೇ ಭಂಗ
(ಅಲ್ಪರ ಸಂಗ ಅಭಿಮಾನ ಭಂಗ)

15. ಇಂಟರ್ನೆಟ್ ಡೇಟಾ ಇರೋತನಕ, ಸ್ಮಾರ್ಟ್ ಫೋನ್ ನಲ್ಲಿ ವೈಭೋಗ
(ರಾಜ ಇರೋ ತನಕ, ರಾಣಿ ಭೋಗ)

16. ವೈ-ಫೈ ನೆನಪಾದಾಗ, ಪಾಸ್ವರ್ಡ್ ಮರೆತು ಹೋದಂತೆ
(ರಾಗ ನೆನಪಾದಾಗ, ತಾಳ ಮರೆತು ಹೋಯಿತಂತೆ)

17. ಯೂಟ್ಯೂಬ್ ನಲ್ಲಿ app ಇನ್ಸ್ಟಾಲ್ ಮಾಡೋ ವಿಡಿಯೋ ನೋಡಿ, ಪ್ಲೇಸ್ಟೋರ್ ಗೂ, app ಗೂ ಏನು ಸಂಬಂಧ ಅಂದ್ರಂತೆ
(ರಾತ್ರಿ ಎಲ್ಲಾ ರಾಮಾಯಣ ಕೇಳಿ, ಬೆಳಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ್ರಂತೆ)

18. ಅಪ್ಲಿಕೇಶನ್ ಡೆವಲಪರ್ ಕಾಣದ್ದನ್ನ, ಯೂಸರ್ ಕಂಡ
(ರವಿ ಕಾಣದ್ದನ್ನ ಕವಿ ಕಂಡ)

19. ಗೇಮ್ ನ ಕೊನೆಯ ಹಂತದಲ್ಲಿರುವಾಗ, ಮೊಬೈಲ್ ಹ್ಯಾಂಗ್ ಆದಂಗೆ
(ಶಿವ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ)

20. ವೈರಸ್ ಗೆ anti-ವೈರಸ್
(ಸೇರಿಗೆ ಸವ್ವಾಸೇರು)

21. ಮೊಬೈಲ್ ಸಹವಾಸದಿಂದ ವಿದ್ಯಾರ್ಥಿ ಕೆಟ್ಟ
(ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ)

22. ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದವನು, ಅಪ್ಡೇಟ್ ಮಾಡಿಕೊಳ್ಳುವುದಿಲ್ಲವೇ?
(ಊರಿಗೆ ಬಂದವಳು ನೀರಿಗೆ ಬರುವುದಿಲ್ಲವೇ )

23. ಅನ್ ಇನ್ಸ್ಟಾಲ್ ಮಾಡೋ ಮುಂಚೆ, ಅಪ್ಡೇಟ್ ಮಾಡಿದಂತೆ
( ಸಾಯೋ ಮುಂಚೆ, ಸಕ್ಕರೆ ತುಪ್ಪ ತಿನಿಸಿದರಂತೆ)

24. App ಬಳಸಲು ತೆಗೆದಾಗಲೆಲ್ಲಾ ಜಾಹೀರಾತುಗಳೇ ಆದರೆ, app ಬಳಸುವುದಾದರೂ ಯಾವಾಗ?
(ಸಾಯೋ ತನಕ ಶನಿ ಕಾಟ ಆದರೆ ಬಾಳೋದು ಯಾವಾಗ?)

25. ಡೇಟಾ ಹ್ಯಾಕ್ ಮಾಡಿದವನು ನುಣುಚಿಕೊಂಡ, ಸಿಸ್ಟಮ್ ಕೊಟ್ಟವನು ಸಿಕ್ಕಿ ಹಾಕಿಕೊಂಡ
(ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ)

26. ಹತ್ತು ಹೊಸ ಪೆನ್ ಡ್ರೈವ್ ತೆಗೆದುಕೊಂಡರೂ ಕಳೆದುಕೊಂಡ ಒಂದು ಪೆನ್ ಡ್ರೈವ್ ಅನ್ನು ಮರೆಯುವುದಿಲ್ಲ
(ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯುವುದಿಲ್ಲ)

27. ಸೆಲ್ಫಿ ಹುಚ್ಚಿನವನಿಗೆ, ಟಿಕ್-ಟಾಕ್ ಮಾಡುವವನ ಸಾಕ್ಷಿ
(ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ)

28. ಮೊಬೈಲ್ ನೋಡಿಲ್ಲದವನಿಗೆ ಸ್ಮಾರ್ಟ್ ಫೋನ್ ಸಿಕ್ಕರೆ, ಅರ್ಧ ರಾತ್ರೀಲಿ ವಾಟ್ಸಾಪ್ ವಿಡಿಯೋ ಕಾಲ್ ಮಾಡಿದನಂತೆ
(ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ)

29. ಎನ್ಕ್ರಿಪ್ಟ್ ಮಾಡಿದವನಿಗೆ ಡಿಕ್ರಿಪ್ಟ್ ಮಾಡುವುದು ತಪ್ಪದು
(ಹುಟ್ಟಿದವನಿಗೆ ಸಾವು ತಪ್ಪದು)

30. ಗೇಮ್ ಅತಿಯಾಗಿ ಆಡಿದವನಿಗೆ  ಗೇಮ್ ಬೋರು ಬೋರು
(ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು)

ಮತ್ತಷ್ಟು
~ವಿಭಾ ವಿಶ್ವನಾಥ್

ಭಾನುವಾರ, ಜುಲೈ 21, 2019

ಭಂಡತನದ ಬಯಲಾಟ

ಬಣ್ಣವೇ ಬಳಿಯದ ನಟರು
ಬಣ್ಣದ ನಾಟಕದ ಪಾತ್ರಧಾರಿಗಳು

ಅಸೂಯೆಯ ಮುಖಕೆ ಪ್ರೀತಿಯ ಮುಖವಾಡ
ದ್ವೇಷಕೆ ಈಗ ಸವಿ ಮಾತಿನ ಮೇಲ್ಪದರ
ಜನ್ಮವನ್ನೇ ಜಾಲಾಡಿದ ಮಾತುಗಳಿಗೀಗ
ಜನ್ಮ ಜನ್ಮಾಂತರದ ನಂಟಿನ ನಿಲುವಂಗಿ

ಮಗಾ ಮಗಾ ಎನ್ನುತ್ತಿರುವುದು ಬಾಯಲ್ಲಿ
ಬೆನ್ನ ಹಿಂದೆ ಭಗ-ಭಗ ಎನ್ನುವ ಉರಿ
ಪಾಪಾತ್ಮರೆಲ್ಲರ ಪುಣ್ಯ ಕಾರ್ಯಕ್ಕೆ ಈಗ
ಸಾಮಾನ್ಯರ ಬದುಕೇ ಒಂದು ರಂಗಸಜ್ಜಿಕೆ

ನಿಸ್ವಾರ್ಥದ ಪ್ರೀತಿ ಸ್ವಾರ್ಥದ ಮುಸುಕಲ್ಲಿ
ಉಸಿರು ಕಟ್ಟಿ ನಲುಗುತಿದೆ, ಸಾಯುತಿದೆ..
ನಿಲ್ಲದಾ ಧೂರ್ತತನಕ್ಕೀಗ ಎಲ್ಲಿಲ್ಲದ ಆವೇಗ
ಮುಗ್ಧರ ಭಾವನೆಗಳ ಜೊತೆ ಚೆಂಡಾಟವಾಡಲು

ಭಂಡತನದ ಪರಮಾವಧಿಯ ಮೀರಿ
ಬಯಲಾಟದ ಬೀದಿ ನಾಟಕ ನಡೆಯುತಿದೆ
ಮುಖವಾಡ ಕಳಚಲು, ಬಣ್ಣ ಅಳಿಸಲು
ಮಂಕುಬೂದಿಯ ಸರಿಸಿ ಎದ್ದೇಳಬೇಕಿದೆ ಬೇಗ..

~ವಿಭಾ ವಿಶ್ವನಾಥ್

ಶುಕ್ರವಾರ, ಜುಲೈ 19, 2019

ತ್ರಿಶಂಕು ಸ್ವರ್ಗ

ಆಳವಾಗಿ ಬೇರು ಬಿಟ್ಟು ನಿಂತವಳ
ಅಸ್ತಿತ್ವವನ್ನೇ ಬದಲಾಯಿಸುವೆವೆನ್ನುತ್ತಾ
ಬೇರನ್ನೇ ಕಿತ್ತು ನೆಡಲು ಹೊರಡುತ್ತೀರಿ
ಬೇರು ಕಿತ್ತ ಗಿಡ ಬಲವಾಗಿ ನಿಲ್ಲಲುಂಟೇ?
ಅವಳು ಅಲ್ಲಿಯೂ ಸಲ್ಲದೆಯೇ..
ಇತ್ತ ಇಲ್ಲಿಯೂ ಸರಿಯಾಗಿ ನಿಲ್ಲದೆಯೇ
ಅಂಡಲೆಯುತ್ತಾ ಮುಕ್ತಿಗಾಗಿ ಬೇಡುತ್ತಾಳೆ
ಮುಕ್ತಿಯೂ ನೀಡದಷ್ಟು ಕಟುಕರಾಗುತ್ತಾ
ನನ್ನ ಜವಾಬ್ದಾರಿಯಲ್ಲವೆಂದು ಕಳಚಿಕೊಳ್ಳುತ್ತೀರಿ
ಮಾರಿದವರು ಈಗ ಮನೆಮಗಳಲ್ಲವೆಂದಳು
ಕೊಂಡವರು ಇಂಚಿಂಚೇ ಕೊರೆಯುತ್ತಾ
ಮತ್ತೊಂದು ವಿಷಬೀಜಕ್ಕಾಗಿ ತಿವಿಯುತ್ತಾರೆ
ಬೇರೇ ಬಿಡದೆ ವಂಶವೃಕ್ಷವೆಲ್ಲಿಂದ..?
ಬಂಜೆಯೆಂದು ಜರಿಯುತ್ತಾ ಹಿಂಸಿಸುವಾಗ
ಅವಳು ಪಟ್ಟ ಪಾಡು ಅವಳಿಗೇ ಪ್ರೀತಿ..
ಬದುಕಿದರೆ ಇತ್ತ ನಿಲ್ಲಲೂ ನೆಲೆ ಸಿಗದೆ
ಸತ್ತರೆ ಅತ್ತ ಎಲ್ಲಿಯೂ ಮುಕ್ತಿ ಸಿಗದೆ
ತ್ರಿಶಂಕು ಸ್ವರ್ಗದಲ್ಲಿಯೇ ನೆಲೆಯೂರುತ್ತಾಳೆ
ಎಂದಿನಂತೆಯೇ...

~ವಿಭಾ ವಿಶ್ವನಾಥ್

ಸೋಮವಾರ, ಜುಲೈ 1, 2019

ಆಯ್ಕೆ ನನ್ನದಲ್ಲ


ಆಯ್ದುಕೊಳ್ಳುವ ಭಾಗ್ಯ ನಿನಗೆ ಸಿಕ್ಕಿದೆ
ಸುಖ, ದುಃಖದ ಆಯ್ಕೆ ನಿನ್ನದೇ, ನನ್ನದಲ್ಲ

ಬರೆಸಿಕೊಳ್ಳುವ ತೆವಲು ನಿನಗೆ
ಇಂತಹವರಿಂದಲೇ ಎಂಬ ಆಯ್ಕೆ ಬೇರೆ
ದಕ್ಕದವರಿಗೂ ದಕ್ಕಿಸಿಕೊಳ್ಳುವ
ಇಡಿಯಾಗಿ ದೊರೆಯುವ ಆಯ್ಕೆ ನಿನ್ನದೇ, ನನ್ನದಲ್ಲ

ಒಂದಿಷ್ಟು ಅಕ್ಷರಗಳ ರಾಶಿಯ ಗುಡ್ಡೆ ಹಾಕಿಕೊಂಡು
ಆಯ್ಕೆ ನನ್ನದೇ ಎಂದು ಬೀಗಿದ್ದ ಕಾಲವೊಂದಿತ್ತು
ಬದಲಾದದ್ದು ಆಲೋಚನೆಯಷ್ಟೇ, ಅಕ್ಷರವಲ್ಲ
ಬರೆಸಿಕೊಂಡು ಬೀಗುವ ಆಯ್ಕೆ ನಿನ್ನದೇ, ನನ್ನದಲ್ಲ

ಮನದಿ ಮಂಥನವ ನಡೆಸಿ, ಕಾಯಿಸಿ
ಹೊರಬರುವ ಕಾಲವನೂ ನೀನೇ ನಿರ್ಧರಿಸಿ
ರಾಜಾರೋಷವಾಗಿ ಹೊರಬಂದು ನಿಂತು
ನನ್ನಿಂದ ನೀನು ಎನ್ನುವ ಆಯ್ಕೆ ನಿನ್ನದೇ, ನನ್ನದಲ್ಲ

~ವಿಭಾ ವಿಶ್ವನಾಥ್


ಬುಧವಾರ, ಜೂನ್ 26, 2019

ಸ್ವಪ್ನಪ್ರಿಯ

ಯಮುನೆಯ ತೀರದಲ್ಲಿ ರಾಧೆ ಮಲಗಿ ಬಡಬಡಿಸುತ್ತಿದ್ದಾಳೆ.. "ಅಷ್ಟಕ್ಕೂ, ನಿನ್ನ ಒಲವಿಗೆ ನಾನು ಮನಸೋತದ್ದು ಏಕೆ? ಎಂಬ ಪ್ರಶ್ನೆಗೆ ಇವತ್ತಿಗೂ ನನ್ನ ಬಳಿ ಉತ್ತರ ದೊರಕದು. ಮನೆಯ, ಮನಸಿಜನ ಬಂಧನವನ್ನೆಲ್ಲಾ ತೊರೆದು ಧಿಕ್ಕರಿಸಿ ನಿನ್ನ ಮಾಯೆಯ ಪರಿಧಿಗೆ ಬರುತ್ತಿದ್ದದ್ದಾದರೂ ಯಾಕೆ? ಇವತ್ತಿಗೂ ಇವೆಲ್ಲದರ ಕುರಿತು ನನಗೇ ಉತ್ತರ ದೊರಕದ ಪ್ರಶ್ನೆಗಳಿವು.."

"ಹೌದು, ನಿನ್ನನ್ನು ದ್ವೇಷಿಸಲಾಗದಷ್ಟು, ತಿರಸ್ಕರಿಸಲಾಗದಷ್ಟು ನೀನು ಎಂದಾದರೂ ಬಿಟ್ಟು ಹೊರಡಬಹುದೆಂಬ ಕಲ್ಪನೆಯೇ ಮಾಡಿಕೊಳ್ಳಲಾಗದಷ್ಟು ನಿನ್ನ ಪ್ರೀತಿಯ ಮಾಯೆಯೊಳಗೆ ಸಿಲುಕಿಬಿಟ್ಟಿದ್ದೆ. ಆದರೆ ಇದೆಲ್ಲದಕ್ಕೂ ಮೊದಲು ನಿನ್ನೆಡೆಗೆ ಅಗಾಧ ತಿರಸ್ಕಾರವಿದ್ದದ್ದು ಸುಳ್ಳಲ್ಲ. ನಿನ್ನ ಮಾಯೆಗಳೆಲ್ಲವನ್ನೂ ಕಂಡು ನಕ್ಕು ಸುಮ್ಮನಾಗಿಬಿಡುತಿದ್ದೆ, ನೀನು ಮಾಡಿದ್ದು ಅಂತಹಾ ಮಹಾನ್ ಕೆಲಸವೇನೂ ಅಲ್ಲ ಎಂಬುದಾಗಿತ್ತು ನನ್ನ ಭಾವನೆ. ಆದರೆ ತಿರಸ್ಕಾರ, ದ್ವೇಷದ ಮೂಲೆಯಲ್ಲೆಲ್ಲೋ ಮಧುರ ಕಂಪನ ಮೂಡುತ್ತಿದ್ದದ್ದು ನನ್ನರವಿಗೆ ಬಂದರೂ ಅದನ್ನು ನಾನೇ ಬಚ್ಚಿಟ್ಟುಬಿಡುತ್ತಿದ್ದೆ. ಈ ಪರಿಯ ದ್ವೇಷ ಹೊಂದಿದ್ದ ಈ ರಾಧೆ ಮುರಳಿಯ ಮಾಯೆಗೆ ಸಿಕ್ಕಿದ್ದು ಆ ಒಂದು ಸಂಧರ್ಭದಲ್ಲಿಯೇ.."

"ಇದ್ದದ್ದು, ಬೆಳೆದದ್ದು ಒಂದೇ ಪರಿಸರದಲ್ಲಿಯಾದರೂ ನೀನು ಕಂಡರೂ ಕಾಣದಂತೆ ತಲೆತಗ್ಗಿಸಿ ಹೊರಟುಬಿಡುತ್ತಿದ್ದೆ. ಆಗಂತುಕನ ಕುರಿತಾಗಿ ಮತ್ತಾವ ಭಾವನೆಗಳೂ ಬೆಳೆಯಲು ಬಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಪೂತನಿ, ಅಘಾಸುರ, ಶಕಟಾಸುರ ಮುಂತಾದ ಭೀಕರ ರಾಕ್ಷಸರ ಹತ್ಯೆಯನ್ನು ಮಾಡಿಬಿಟ್ಟು ನೀನು ಅದಾವುದನ್ನೂ ಮಾಡಿಯೇ ಇಲ್ಲವೇನೋ ಎಂಬಂತೆ ನಿರುಮ್ಮಳವಾಗಿದ್ದೆ.
ನಿನ್ನ ಬೆಣ್ಣೆ, ಹಾಲು, ಮೊಸರಿನ ಪ್ರೀತಿಯ ಕಥೆಗಳನ್ನು ಕೇಳಿದ್ದೆ. ಸುತ್ತಮುತ್ತಲಿನ ಮನೆಗಳಿಗೆ ನೀನು ನಿನ್ನ ಗೆಳೆಯರ ಪಟಾಲಂನೊಂದಿಗೆ ದಾಳಿ ಮಾಡಿದ್ದರೂ ನನ್ನ ಮನೆಗೆ ಬರುವ ಕೃಪೆ ತೋರಿರಲಿಲ್ಲ. ನೀಲವರ್ಣದ ನಿನ್ನ ರೂಪು ನೋಡಿದಷ್ಟೂ ನೋಡುವಂತೆ ಮಾಡುತ್ತಿತ್ತಂತೆ.. ಹಾಗೆಂದು ಉಳಿದವರು ಹೇಳಿದ್ದನ್ನು ಕೇಳಿದ್ದೆನಷ್ಟೇ, ಯಾಕೆಂದರೆ ಅದುವರೆಗೂ ನಾನು ನಿನ್ನನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಅಕಸ್ಮಾತ್, ಮೊದಲೇ ನೋಡಿದ್ದರೆ ನನ್ನ ರಾಗದ್ವೇಷಗಳೆಲ್ಲಾ ಕರಗಿ ನೀರಾಗುತ್ತಿದ್ದವೋ ಏನೋ.. ಆದರೆ, ಎಲ್ಲದಕ್ಕೂ ಸಮಯ ಸಹಕಾರಿಯಾಗಿರಬೇಕಂತಲ್ಲಾ.. ಆ ಸಮಯ ನನ್ನ ಪಾಲಿಗೆ ಇನ್ನೂ ಯಾಕೋ ಕೃಪೆ ತೋರಿರಲಿಲ್ಲ.

ಆವತ್ತು, ನನ್ನ ಬಾಳಿನಲ್ಲಿ ನೆನಪಿಡಬೇಕಾದ ಒಂದು ದಿನ. ಮೊಗ್ಗು ಬಿರಿದು ಹೂವಾಗುವ ಸುಸಮಯವಂತೆ ಅದು ಆದರೆ ನನಗೆ ಹಾಗನ್ನಿಸಲೇ ಇಲ್ಲ. ಏಕೆಂದರೆ, ಬಿಟ್ಟೂ ಬಿಡದ್ದ್ ಕಾಡುವ ಹೊಟ್ಟೆನೋವು ನಾನು ಪುಷ್ಪವತಿಯಾದ ಸಂದರ್ಭದಲ್ಲಿ ಕಾಡುತ್ತಿತ್ತು. ಅದೇನೇನೋ ಶಾಸ್ತ್ರಗಳು ನಡೆಯುತ್ತಿದ್ದರೂ ಆ ಪರಿವೆಯೇ ನನಗಿರಲಿಲ್ಲ. ಆ ಸಂದರ್ಭದಲ್ಲಿ ನಿನ್ನಮ್ಮ ಯಶೋದೆ ಕೂಡಾ ಆ ಆರತಿಶಾಸ್ತ್ರಕ್ಕೆ ಬಂದಿದ್ದರು.ಪುರುಷರಿಗೆ ಆ ಸಂದರ್ಭದಲ್ಲಿ ನಿರ್ಬಂಧ ಎಂದಿದ್ದರೂ ನಿನಗೇಕೋ ಆ ನಿಯಮ ಅನ್ವಯಿಸಿರಲಿಲ್ಲ. ನಿನ್ನಮ್ಮನನ್ನು ಕಂಡು ಆ ರತ್ನಮಾಲೆಯನ್ನು ಕೊಡಲೆಂದು ಬಂದವನು ನನ್ನ ಕಣ್ಣಿಗೆ ಬಿದ್ದಿದ್ದೆ. ನಿನ್ನ ನೋಡಿದ ಆ ಘಳಿಗೆಯಲ್ಲಿ ಕಾಲ ಹೀಗೇ ನಿಲ್ಲಬಾರದೇ ಎಂದೆನಿಸುತ್ತಿತ್ತು, ಅಷ್ಟೊಂದು ಪೀಡಿಸುತ್ತಿದ್ದ ಹೊಟ್ಟೆನೋವು ಕೂಡಾ ಹೊರಟುಹೋಗಿತ್ತು. ಅದು ಕನಸೋ, ನನಸೋ ತಿಳಿಯಲಿಲ್ಲ. ದಿನಾ ರಾತ್ರಿ ಕನಸಲ್ಲಿ ಬಂದು ಕಾಡುವ ರೂಪ ಅಂದು ಕಣ್ಮುಂದೆ ಬಂದಿತ್ತು. ಪಕ್ಕದಲ್ಲಿದ್ದ ಗೆಳತಿಯನ್ನು ಕೇಳಿದೆ ಯಾರವನು? ಎಂದು.."ಅವನೇ ಮುರಳಿ" ಎಂದಳವಳು. ಮನದಲ್ಲಿ ದ್ವಂದ್ವ ಭಾವನೆಗಳ ತರಂಗ. ನಾನು ದ್ವೇಷಿಸುತ್ತಿದ್ದ ಮುರಳಿಗೂ, ನಾನು ಕಂಡಿದ್ದ ನನ್ನ ಸ್ವಪ್ನದ ಮುರಳಿಗೂ ತಾಳೆ ಹಾಕುತ್ತಾ ಕೂತಿದ್ದೆ. ವಿಧಿ ಹೀಗೂ ಇರಬಹುದೇ? ಅಂತೂ ಶಾಸ್ತ್ರಗಳೆಲ್ಲವೂ ಮುಗಿದಿದ್ದವು. ಮುಗಿದದ್ದು ಗೊತ್ತೇ ಆಗಿರಲಿಲ್ಲ. ಆ ನಂತರ ಗೆಳತಿಯೆಂದಳು "ಈ ಸಮಯದಲ್ಲಿ ಕಂಡ ಮೊದಲ ಹುಡುಗನೊಟ್ಟಿಗೇ ನಿನ್ನ ವಿವಾಹವಾಗುತ್ತದಂತೆ". ಈ ಮಾತು ಕೇಳಿಯೇ ಮನದಲ್ಲಿ ಪುಳಕವೆದ್ದಿತ್ತು. ಇಂತಹವುಗಳನ್ನೆಲ್ಲಾ ಕೇಳಿ ಧಿಕ್ಕರಿಸುತ್ತಿದ್ದ ನಾನು ಇದು ಈಡೇರಲೆಂದು ಹರಕೆ ಹೊತ್ತದ್ದೆಷ್ಟೋ? ಆದರೆ ಹರಕೆ ಫಲಿಸದಂತೆ ವಿಧಿ ಆಯನನ ಹೆಸರನ್ನು ನನ್ನ ಮಾಂಗಲ್ಯಕ್ಕೆ ಪೋಣಿಸಿದ್ದರೆ, ಯಾವ ಜಗನ್ನಿಯಾಮಕನಿಗೆ ತಿದ್ದಿ ಬರೆಯುವ ಭಾಗ್ಯವಿದೆ..?

ಇದಾದ ಕೆಲವು ದಿನ ನಾನು ಮನೆಯಿಂದ ಹೊರಗೆ ಕಾಲೇ ಇಡಲಿಲ್ಲ. ಆದರೆ, ಆವತ್ತು ಬಿಟ್ಟೂ ಬಿಡದಂತೆ ಮಳೆ ಸುರಿಯುತ್ತಿತ್ತು. ನೀನು ಹಟ ಮಾಡಿ ದೇವರಾಜ ಇಂದ್ರನಿಗೆ ಪೂಜೆ ಮಾಡದಂತೆ ತಡೆದಿದ್ದರ ಫಲ ವರುಣನ ಮೂಲಕ ಇಲ್ಲಿ ಎಲ್ಲರ ಮೇಲೂ ಪ್ರತಿಫಲನವಾಗುತ್ತಿತ್ತು. ಆಗಲೇ ಅಲ್ಲವೇ ನಿನ್ನ ವಿಶ್ವರೂಪದರ್ಶನ ಆದದ್ದು. ಗೋವರ್ಧನಗಿರಿಯನ್ನೆತ್ತಿ ಎಲ್ಲರಿಗೂ ಆಶ್ರಯವನ್ನಿತ್ತಿದ್ದೆ. ಅದೇ ಸಮಯದಲ್ಲಿ ಎಲ್ಲರ ಹತ್ತಿರಕ್ಕೂ ಬಂದು ಕ್ಷೇಮ ಸಮಾಚಾರವನ್ನೂ ವಿಚಾರಿಸುತ್ತಿದ್ದೆ. ಅದು ಹೇಗೆಂಬುದು ಅರ್ಥವಾಗಲೇ ಇಲ್ಲ. ಆದರೆ ನಿನ್ನ ವಿನಯ, ಹಿರಿಯರೆಡೆಗಿನ ಗೌರವ,ಕಾಳಜಿ ಎಲ್ಲವನ್ನೂ ನಾನು ಹತ್ತಿರದಿಂದ ಕಂಡಿದ್ದೆ. ಗೋಪಿಕೆಯರೊಡನೆ ವಿಶೇಷ ಸಲುಗೆಯೇನೂ ಇರಲಿಲ್ಲ. ಸ್ತ್ರೀಲೋಲ ಎಂಬ ಪದ ನಿನಗೆ ಇನಿತೂ ತಾಳೆಯಾಗುತ್ತಲೇ ಇರಲಿಲ್ಲ. ಆ 7 ದಿನಗಳಲ್ಲಿ ನಾನು ದ್ವೇಷಿಸುತ್ತಿದ್ದ ಮುರುಳಿಯ ರೂಪ ಮರೆಯಾಗಿ ನನಗೆ ಪ್ರೇಮಮಯವಾದ ಸ್ವಪ್ನಸುಂದರ ಮುರುಳಿ ನೆಲೆನಿಂತಿದ್ದ. ಎಲ್ಲೆಲ್ಲಿ ನೋಡಿದರೂ ಅಲ್ಲೆಲ್ಲಾ ನಿನ್ನ ರೂಪವೇ ಕಾಣುತ್ತಿತ್ತು. ಅದಕ್ಕೆ ಅಲ್ಲವೇ ಆಯನನೊಂದಿಗೆ ನಾನು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದು. ದಿಬ್ಬಣದಲ್ಲಿ ಬಂದದ್ದು, ವಿವಾಹವಾಗುತ್ತಿದ್ದದ್ದೂ ಎಲ್ಲವೂ ನೀನೇ ಎಂದೇ ಭಾವಿಸಿದ್ದೆ. ಪತಿಯ ಹೆಸರೇಳಲು ಇಟ್ಟ ಒಡಪಿನ ಶಾಸ್ತ್ರದಲ್ಲಿಯೂ ನಿನ್ನ ಕುರಿತೇ ವರ್ಣಿಸಿದ್ದೆ. ಎಲ್ಲರೂ ಆಯನನನ್ನು ಅದೃಷ್ಟವಂತ ಎಂದು ಹೊಗಳಿ ನನ್ನೊಡನೆ ಕೂರಿಸಿ ಆರತಿ ಮಾಡುವಾಗ ಕೈ ಹಿಡಿದ ಆಯನನ ಸ್ಪರ್ಶ ಅಪರಿಚಿತವೆನಿಸಿತ್ತು. ಸುಂದರ ಸ್ವಪ್ನ ದುಃಸ್ವಪ್ನವಾಗಿತ್ತು, ಸುಮಧುರ ನಾದದಲ್ಲೊಂದು ಅಪಶೃತಿ ಕೇಳಿಸಿತ್ತು. ಮುರುಳಿಯನ್ನು ಹುಡುಕಿದಷ್ಟೂ ಆತ ದೂರದಲ್ಲೇ ಕಾಣಿಸಹತ್ತಿದ್ದ. 

ಸ್ವಪ್ನ ಕಳೆದು ವಾಸ್ತವ ಮರಳಿತ್ತು. ವಾಸ್ತವದಲ್ಲಿ ಬದುಕ ಹೊರಟಷ್ಟೂ ಮುರಳಿಯ ಕೊಳಲ ನಾದ ಕೆಣಕುತ್ತಿತ್ತು. ಇದೆಲ್ಲದಕ್ಕೂ ಅಂತ್ಯ ಹಾಡಬೇಕೆಂದು ನಿಶ್ಚಯಿಸಿ ಅಲ್ಲಿಂದ ಹೊರಟು ದಿನವೂ ಅಲೆಯುತ್ತಿದ್ದೆ. ಕೊಳಲ ನಾದವನ್ನೇ ಅರಸಿ ಮುರಳಿಯ ಜಾಡು ಹಿಡಿಯಲು ಎಲ್ಲೆಲ್ಲೂ ಅಲೆಯುತ್ತಿದ್ದೆ. ಇಲ್ಲೇ ಕಂಡ ಎಂದರೆ ಅದಾಗಲೇ ಮರುಭೂಮಿಯ ಮರೀಚಿಕೆಯಂತೆ ದೂರದಲ್ಲೆಲ್ಲೋ ಕಾಣುತ್ತಿದ್ದ. ಸಿಕ್ಕಿಯೇ ಬಿಟ್ಟ ಎನ್ನುವಷ್ಟರಲ್ಲೇ ಮರೆಯಾಗುತ್ತಿದ್ದ.

ಎಲ್ಲರೂ ನನ್ನನ್ನು ವಿಚಿತ್ರ ಎಂಬ ರೀತಿಯಲ್ಲೇ ನೋಡುತ್ತಿದ್ದರು. ತವರು ಮನೆಯಲ್ಲೂ, ಗಂಡನ ಮನೆಯಲ್ಲೂ ನಾನು ತಿರಸ್ಕೃತಳಾದಷ್ಟೂ ನನಗೆ ಕೊಳಲ ನಾದ ನಿಲ್ಲಿಸು ಎಂದು ಮುರಳಿಗೆ ಹೇಳುವ ಹಪಾಹಪಿ ಹೆಚ್ಚಾಗುತ್ತಿತ್ತು. "ಮುರಳಿಯ ಕಂಡಿರೇನೇ?" ಎಂದು ಗೋಪಿಕೆಯರನ್ನು ಕೇಳಿದರೆ "ಒಂದು ಕ್ಷಣವೂ ನಿನಗೆ ಅವನನ್ನು ಬಿಟ್ಟಿರಲಾಗದೇ?" ಎಂದು ಛೇಡಿಸುತ್ತಾ "ಸದಾ ನಿನ್ನೊಂದಿಗೇ ಇರುವವನು ಎಲ್ಲಿರುತ್ತಾನೆ ಎಂದು ನಮಗೇನು ಗೊತ್ತು?" ಎಂದು ಈರ್ಷ್ಯೆಯಿಂದ ಹೇಳುತ್ತಿದ್ದರು. ಆದರೆ, ನನಗೆಂದೂ ನನ್ನ ಮುರುಳಿ ಸಿಗಲೇ ಇಲ್ಲ, ಅವನ ನಾದ ನಿಲ್ಲಲೇ ಇಲ್ಲ.

ಆದರೆ, ಅವನ ನಾದ ನಿಲ್ಲುವ ಸಮಯ ಬಂದಿತ್ತೇನೋ.. ಅಕ್ರೂರ ಬಂದಿರುವನಂತೆ ಮಧುರೆಯಿಂದ. ಅದೂ ಮುರುಳಿಯನ್ನು.  ಕಾಣಲು ಎಂಬ ಮಾತು ಕಿವಿಗೆ ಬಿತ್ತು. ಇವತ್ತಾದರೂ ಮುರುಳಿ ಅವನ ಮನೆಯ ಮುಂಭಾಗದಲ್ಲಿ ಸಿಗಬಹುದೇನೋ ಎಂಬ ಆಸೆಯಿಂದ ಓಡೋಡಿ ಬಂದೆ. ಆದರೆ, ಎಲ್ಲರೂ ಸಾಲಾಗಿ ಅವನನ್ನು ಬೀಳ್ಕೊಡಲು ನಿಂತಿದ್ದರು. ಎಲ್ಲಿಗೆ ಹೊರಟ? ಯಾಕೆ ಹೊರಟ? ಎಂದು ನನಗೆ ತಿಳಿದಿರಲಿಲ್ಲ. ಅದರ ಪೂರ್ವಾಪರವೇ  ನನಗೆ ಗೊತ್ತಿರಲಿಲ್ಲ. ಮುರಳಿ ಅಲ್ಲಿ ನೆರೆದಿದ್ದವರ ಎಲ್ಲರ ಬಳಿಗೂ ಬಂದು ಏನನ್ನೋ ಕೇಳುತ್ತಿದ್ದ. ಒಬ್ಬರಿಗೆ ಕೇಳಿದ್ದು, ಹೇಳಿದ್ದು ಮತ್ತೊಬ್ಬರಿಗೆ ಗೊತ್ತೇ ಆಗುತ್ತಿರಲಿಲ್ಲ. ಹಾಗೆಯೇ, ನನ್ನ ಹತ್ತಿರಕ್ಕೂ ಬಂದ, "ಏನಾಗಬೇಕು?" ಎಂದ. "ನಿನ್ನ ನಾದವನ್ನು ನಿಲ್ಲಿಸಿ ನನ್ನಿಂದ ದೂರಾಗಬೇಕು"  ಎಂದೆ. ಆತ ಮರುಮಾತನಾಡದೆ ತನ್ನ ಕೊಳಲನ್ನು ನನ್ನ ಕೈಗಿತ್ತ. ಎಲ್ಲರಿಗೂ ದಿಗ್ಬ್ರಮೆಯಾಗಿತ್ತು. ರಾಧೆ ಮುರಳಿಯ ಮುಂದಿಟ್ಟ ಕೋರಿಕೆ ಎಲ್ಲರಿಗೂ ಕೇಳಿತ್ತು. ನಿಶ್ಶಬ್ಧದಲ್ಲಿ "ಹೋಗುತ್ತೇನೆ ರಾಧೆ" ಎಂದವನ ಧ್ವನಿ ಕೇಳಿ ನನ್ನೆದೆ ಒಡೆದು ಛಿದ್ರ-ಛಿದ್ರವಾಗಿತ್ತು. ಹಿಂದೆ ತಿರುಗಿಯೂ ನೋಡದಂತೆ ಮುನ್ನಡೆದಿದ್ದ, ಮುಂದೆಂದೂ ಅವನು ಬರಲೇ ಇಲ್ಲ. 

ಎಲ್ಲರ ಕಣ್ಣಲ್ಲೂ ನಾನು ಅಪರಾಧಿನಿಯಂತೆ ಭಾಸವಾದೆ. ಅಂತರಂಗದಲ್ಲಿ ಕೋಲಾಹಲವೇಳುತ್ತಿದ್ದರೂ ಬಾಹ್ಯದಲ್ಲಿ ನಿರ್ಲಿಪ್ತೆ ನಾನು. ನನ್ನ ಕೋರಿಕೆಯನ್ನು ಅವನು ಈಡೇರಿಸಿದ್ದ ಅದೂ ಯಾವುಧೇ ಮರುಮಾತಿಲ್ಲದೇ.. ಹಾಗಾದರೆ ಅವನಿಗೆ ನಾನು ಯಾರು? ಅವನಿಗೆ ನನ್ನ ಮೇಲಿರುವ ಭಾವನೆಗಳೇನು? ನಿಜಕ್ಕೂ ಅವನು ನನ್ನನ್ನು ಪ್ರೀತಿಸುತ್ತಿದ್ದನೇ? ಆ ಮಾತನ್ನು ಅವನು ಒಮ್ಮೆ ಹೇಳಿದ್ದರೆ ಸಾಕಾಗಿತ್ತು ಆ ಭಾವನೆಯಲ್ಲೇ ಇಡೀ ಬದುಕನ್ನು ಸವೆಸಿಬಿಡುತ್ತಿದ್ದೆ ಆದರೆ ಆತ ಏನೂ ಹೇಳದೆ ಮಾತು ಕೊಟ್ಟು ಹೊರಟ. ಇದಕ್ಕೇನರ್ಥ? ಅವನೇನೋ ಹೊರಟುಹೋದ. ಆದರೆ, ಅವತ್ತಿನಿಂದ ಇವತ್ತಿನವರೆಗೂ ನಾನು ಕೊಳಲ ನಾದಕ್ಕೆ ಹಾತೊರೆಯುತ್ತಿದ್ದೇನೆ. ಮುಕ್ತಿಯಿಲ್ಲದೆ ಆತ್ಮದಂತೆ ಅಂಡಲೆಯುತ್ತಿದ್ದರೂ ನಾನು ಸರ್ವವ್ಯಾಪಿಯ ಕೃಪಾದೃಷ್ಟಿಗೆ ಪಾತ್ರವಾಗಲೇ ಇಲ್ಲ. ಅಲೆದೆ, ಅಲೆದೆ ಹುಚ್ಚಿಯಂತೆ ಅಲೆದೆ. ಆಗ ರಾಧಾ-ಕೃಷ್ಣರ ಜೋಡಿ ನೋಡುತ್ತಿದ್ದವರು ಈಗ ಒಬ್ಬಂಟಿ ಹುಚ್ಚಿಯನ್ನು ಕನಿಕರದಿಂದ ನೋಡುತ್ತಿದ್ದರು. ಆಯನನ ಪ್ರೀತಿ  ಕಂಡರೂ ಕಾಣದವಳಂತೆ ಇದ್ದುಬಿಟ್ಟಿದ್ದೆ. ಇನ್ನೊಬ್ಬಳನ್ನು ಮದುವೆಯಾಗಿ ಆದರೂ ಅವನು ಸುಖವಾಗಿರಲೆಂಬ ನನ್ನಾಸೆ ನೆರವೇರಲೇ ಇಲ್ಲ. ನನ್ನನ್ನು ಸರಿಪಡಿಸಲೆತ್ನಿಸಿ ಯತ್ನಿಸಿ ಆಯನ ಸೋತು ಹೋಗಿದ್ದ, ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಟ್ಟಿದ್ದ.

ಇವತ್ತು,ಯಾಕೋ ಮುರಳಿಯ ಕೊಳಲನ್ನು ನುಡಿಸುವ ಆಸೆಯಾಯಿತು.ಅಂದು ಆತ ಕೊಟ್ಟಿದ್ದ ಕೊಳಲು ನನ್ನ ಮನೆಯ ದೇವರಮನೆಯಲ್ಲಿದ್ದ ಏಕೈಕ ವಸ್ತುವಾಗಿತ್ತು. ಅದನ್ನೆತ್ತಿಕೊಂಡು ನಡೆದು ಯಮುನೆಯ ತೀರಕ್ಕೆ ಬಂದೆ. ಮರಳಿನಲ್ಲಿ ನಿನ್ನ ಹೆಸರು ಬರೆದೆ. ಬಂದ ಗಾಳಿ ಆ ಹೆಸರನ್ನು ಅಳಿಸಿ, ನಿನ್ನ ರೂಪವನ್ನು ಮೂಡಿಸಿತು. ಈಗ ನೋಡಿದರೆ ನಾನು ನಿನ್ನ ತೊಡೆಯ ಮೇಲೆ ಮಲಗಿದ್ದೇನೆ. ಮುರಳಿ, ನನಗೊಮ್ಮೆ ಮುಕ್ತಿ ನೀಡಿಬಿಡು. ಕಾಮವಿಲ್ಲದ ಪ್ರೇಮವನ್ನು ತೋರಿದ ಆಯನನಿಗೊಂದು ನೆಲೆ ಮಾಡಿ, ನನಗೆ ಮುಕ್ತಿ ನೀಡು. ಈ ಕೊಳಲು ನುಡಿಸು..
ಎಷ್ಟೋ ಹೊತ್ತು ಹೀಗೇ ಮಾತನಾಡಿದ ರಾಧೆ ಆಯನನ ತೊಡೆಯ ಮೇಲೆ ಮಲಗಿದ್ದಳು. ಬೂದಿ ಬಳಿದುಕೊಂಡು ರೂಪಾಂತರ ಮಾಡಿಕೊಂಡಿದ್ದ ಆಯನ,ಎಂದೂ ಕೊಳಲನ್ನೇ ನುಡಿಸದಿದ್ದ ಆಯನ ಕೊಳಲು ಹಿಡಿದಿದ್ದ, ಜೊತೆಗೆ ಮನಮೋಹಕ ರಾಗವನ್ನು ನುಡಿಸಿದ್ದ ಕೂಡಾ. ತೃಪ್ತಿಯ ಉತ್ತುಂಗದಲ್ಲಿದ್ದ ರಾಧೆಯ ಮುಖದಲ್ಲಿ ಶಾಂತತೆ ನೆಲೆಸಿತ್ತು. ಮುಗುಳ್ನಗೆ ಸ್ಥಿರವಾಗಿತ್ತು ಮತ್ತೆಂದೂ ಮಾಸದಂತೆ.. ಆಯನನಿಂದ ಹೊರಬಂದ ಮುರುಳಿ ವಿಶ್ವರೂಪಿಯಾದ ರಾಧೆ-ಆಯನರ ಆತ್ಮ ಮುರುಳಿಯಲ್ಲಿ ಲೀನವಾಗಿತ್ತು. ಅವರ ದೇಹದ ಮೇಲೆ ಪಾರಿಜಾತದ ವೃಷ್ಟಿಯಾಯಿತು.

~ವಿಭಾ ವಿಶ್ವನಾಥ್

ಮಂಗಳವಾರ, ಜೂನ್ 18, 2019

ವಿದಾಯದ ಹಾದಿಯಲ್ಲಿ

ವಿದಾಯದ ಹಾದಿಯಲ್ಲಿ
ದುಗುಡಗಳು ಸಹಜವೇ..

ಮನಸ್ಸಿನ ತೂಗುಯ್ಯಾಲೆಯಲಿ
ನಿರ್ಧಾರವು ಜೀಕಾಡಿದರೂ
ಕಡೆಗೆ ವಿದಾಯದ ಹಾದಿ
ನಿಶ್ಚಿತವೇ ಅಲ್ಲವೇ..?

ವಿದಾಯ ಹೇಳಿದವರಿಗೂ
ವಿದಾಯ ಹೇಳಿಸಿಕೊಂಡವರಿಗೂ
ವಿರಹದ ಒಂದಿಷ್ಟು ಅಮಲು
ಎದೆಯಾಳಕ್ಕಿಳಿಯಬಹುದಲ್ಲವೇ?

ಒಂದೆರಡು ಹನಿ ಕಣ್ಣೀರು
ಒಂದೆರಡು ದಿನ ಬೇಜಾರು
ಒಂದಿಷ್ಟು ಹಳೆ ನೆನಪುಗಳು
ಉಳಿಯುವುದಿಷ್ಟೇ ಅಲ್ಲವೆ..?

ವಿದಾಯದ ಘಳಿಗೆಯ ಮಾತು
ವಿದಾಯದ ನಂತರದ ಮೌನ
ಪರಿಚಿತತೆಯ ಅಪರಿಚಿತತೆ
ಹೀಗಲಾದರೂ ಕಾಡಬಹುದಲ್ಲವೇ?

~ವಿಭಾ ವಿಶ್ವನಾಥ್