ಪುಸ್ತಕದ ಶೀರ್ಷಿಕೆ : ಅಪ್ಪನ ಅಂಗಡಿ
ಸಂಪಾದಕರು : ಮನು ಗುರುಸ್ವಾಮಿ
ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ
ಪ್ರಥಮ ಮುದ್ರಣ : 2026
ಪುಟಗಳು : 84
ಬೆಲೆ : 100 ರೂ.
ಮನು ಗುರುಸ್ವಾಮಿಯವರು ಕನ್ನಡ ಆಧ್ಯಾಪಕರು ಹಾಗೂ ಬರಹಗಾರರು. ಇವರ ಬರಹ ಸೇರಿದಂತೆ ಇಲ್ಲಿ 16 ಅಪ್ಪನ ಕುರಿತ ಬರಹಗಳನ್ನು ಕಾಣಬಹುದು. ವಿವಿಧ ಊರುಗಳ, ವಿವಿಧ ಕಾಲಘಟ್ಟಗಳ, ವಿವಿಧ ಶೈಲಿಯ ಕನ್ನಡದ, ಆಡು ಭಾಷೆಯ ಲೇಖನಗಳಿವೆ. ಅಪ್ಪಂದಿರು ಬದುಕಿದ ರೀತಿ ಮಕ್ಕಳ ಕಣ್ಣಲ್ಲಿ ಕಂಡ ಬಗೆ ವಿವಿಧ ರೂಪಗಳಲ್ಲಿ ಇಲ್ಲಿದೆ.
ಅಪ್ಪನನ್ನು ಹೀಗೆಯೇ ಎಂಬ ರೂಪದಲ್ಲಿ ಕಂಡುಕೊಳ್ಳಲಾಗದು. ಅವನ ಸ್ವರೂಪ ವಿಭಿನ್ನ. ಆತನ ವ್ಯಕ್ತಿತ್ವವಿಲ್ಲದೆ ನಾವಿಲ್ಲ. ಅಪ್ಪ ಹಾಸುಹೊಕ್ಕಾಗಿ ನಮ್ಮೊಳಗಿರುತ್ತಾನೆ. ಬಾಲ್ಯದ ನೆನಪುಗಳಿಂದ, ನಂತರ ಬದಲಾದ ಅಪ್ಪನ ರೂಪ, ನೆನಪುಗಳು ಅಪ್ಪನ ಕುರಿತ ದೃಷ್ಟಿಕೋನ ಎಲ್ಲವೂ ಇಲ್ಲಿವೆ. ಇಲ್ಲಿ ಎಲ್ಲಿಯೂ ಹೊಡೆದು ಬುದ್ದಿ ಕಲಿಸಿದ ಅಪ್ಪಂದಿರು ಕಾಣಲಿಲ್ಲ. ಹೀಗಾಗಿ ಅಪ್ಪ ಅಷ್ಟು ಆಳಕ್ಕಿಳಿದರಾ..?! ಎಲ್ಲಿಯೂ ಅತಿರಂಜಿತ ವರ್ಣನೆಗಳಿಲ್ಲ. ವಾಸ್ತವದ ದೃಷ್ಟಿಕೋನಗಳಿವೆ. ಸುಮ್ಮನೆ ಅಪ್ಪನನ್ನು ಕಣ್ತುಂಬಿಕೊಳ್ಳಬೇಕಿದೆ. ಎಲ್ಲಾ ಅಪ್ಪಂದಿರಲ್ಲಿಯೂ ಒಂದಲ್ಲಾ ಒಂದು ಬಗೆಯಲ್ಲಿ ನಾನು ನನ್ನಪ್ಪನನ್ನು ಕಂಡ ಕೌತುಕವೂ ಇದೆ.
ಅಪ್ಪನ ಅಂಗಡಿ - ಮಂಜಯ್ಯ ದೇವರಮನಿ :
ಓದಿಲ್ಲದಿದ್ದರೂ ವ್ಯವಹಾರದ ಕಲೆ ಕಲಿತಿದ್ದ ಅಪ್ಪ ವ್ಯವಹಾರದಲ್ಲಿ ಎಷ್ಟು ನಿಪುಣ ಎನ್ನುವುದಕ್ಕೆ ಸಾಕ್ಷಿಯಾಗಿ ಅಪ್ಪನ ಅಂಗಡಿಯ ಕುರಿತು ಹೇಳುತ್ತಾ ಸಾಗುತ್ತಾರೆ. ಕಡು ಬೇಸಿಗೆಯ ಬರಗಾಲದಲ್ಲಿ ಬ್ಯಾಂಕಿನಲ್ಲಿದ್ದ ತನ್ನಲ್ಲ ದುಡ್ಡನ್ನು ಬಿಡಿಸಿಕೊಂಡು ಅಂಗಡಿಗೆ ಬೇಕಾದ ಸಾಮಾನುಗಳನ್ನು ತಂದು, ಉದ್ರಿ ಕೊಟ್ಟ ಅಪ್ಪ ಬೇರೆಯವರ ಕಣ್ಣಿಗೆ ಕಂಡ ಬಗೆಗೂ ಮಗನಿಗೆ ಕಂಡದ್ದಕ್ಕೂ ವ್ಯತ್ಯಾಸವಿದೆ. ಅಪ್ಪ ಯಾವ ನಂಬಿಕೆಯ ಮೇಲೆ ಉದ್ರಿ ಕೊಟ್ಟಿದ್ದ ಎಂದು ಮನವರಿಕೆಯಾದ ಸಂದರ್ಭ ಊರವರ ಒಳ್ಳೆಯತನಕ್ಕೂ.. ಅಪ್ಪನ ಉದಾತ್ತತೆಗೂ ಸಾಕ್ಷಿಯಂತಿದೆ. ಇಡೀ ಬರಹಗಳ ಗುಚ್ಛದಲ್ಲಿ ಇದು ಬಹಳ ಆಪ್ತವಾದ ಬರಹ.
ಹೀಗೊಂದು 'ನೀಚ ಅಪ್ಪ'ನ ನೆನಪು - ಈರಪ್ಪ ಎಂ ಕಂಬಳಿ :
ನಕಾರಾತ್ಮಕ ಶೀರ್ಷಿಕೆಯಾಗಿ ಕಂಡರೂ.. ಇಲ್ಲಿ ಸಕಾರಾತ್ಮಕವಾಗಿ ಅಪ್ಪನನ್ನು ಕಾಣುವ ಬಗೆಯಿದೆ.
"ಯಮಕಾಲನ ತೆಕ್ಕೆಯಲ್ಲಿ ಅಳಿದು ಹೋದವರು ಎಲ್ಲಿಯೂ ಹೋಗುವುದಿಲ್ಲ. ಹೀಗೆ ಜೀವಂತವಾಗಿರುತ್ತಾರೆ. ಬದುಕಿ ಇದ್ದ ನಮ್ಮ ನಿಮ್ಮಂತವರ ಮನಗಳಲ್ಲಿ. ಅವರಿಗೆ ಕಾಡುವ ಗುಣವಿದ್ದರಂತೂ ತೀರಿತು. ಅಂಥವರು ಬೆಂಬಿಡದೆ ಸತಾಯಿಸುತ್ತಿರುತ್ತಾರೆ."
ದೊಡ್ಡಾಟದ ಹಾರ್ಮೋನಿಯಂ ಮಾಸ್ತರಾಗಿದ್ದ ಅಪ್ಪ ಹಂಪಿಯ ಸಣ್ಣ ಕಂಬಗಳಲ್ಲಿ ರಾಗಗಳನ್ನು ನುಡಿಸಿದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಅಪ್ಪ ಮಗನನ್ನು ತನ್ನಂತಾಗಿಸದೆ ಬೇರೆ ದಾರಿ ಹಿಡಿಸಿದ್ದೇಕೆ..? ಓದಿ ನೋಡಿ.
ಅಪ್ಪ ಎಂಬ ಕಾಡುವ ಭಾವಗೀತೆ - ವಾಸುದೇವ ನಾಡಿಗ್ :
ಕಟು ಶತ್ರುವಾಗಿ, ಕಟು ಗುರುವಾಗಿ ಕಂಡವ ಈ ಅಪ್ಪ ಎನ್ನುತ್ತಲೇ ಶುರುವಾದ ಲೇಖನ ಅಪ್ಪನ ಹಿರಿದಾದ ಕನಸುಗಳು ನನಸಾಗದ ಸಂದರ್ಭದಲ್ಲಿ ನಡೆಸಿಕೊಳ್ಳುತ್ತಿದ್ದ ಕಟು ಸ್ವಭಾವ ಮಗನಲ್ಲಿ ಕೆಚ್ಚು ಮೂಡಿಸಿದ ಬಗೆ, ನಂತರ ಅಪ್ಪ ಕಾಡುವ ಬಗೆ ಆರ್ದ್ರವಾಗಿ ಚಿತ್ರಿತವಾಗಿದೆ.
ಅಪ್ಪಾ - ನಾನು ನಿಮ್ಮ ಮಗ ಮತ್ತು ಮಗಳು - ಸಹನಾ ರವೀಂದ್ರ :
ಅಪ್ಪನ ಪ್ರೀತಿಯಲ್ಲಿ ಭಾವನೆಗಳ ಕಾಮನಬಿಲ್ಲಿದ್ದರೂ.. ಗಂಡು ಮಗನಾಗಲಿಲ್ಲ ಎಂಬ ಅಸಮಾಧಾನವನ್ನು ಮಗಳಾಗಿ ಹೋಗಲಾಡಿಸಿದ ಇವರ ಸೂಕ್ಷ್ಮ ಹಾಗೂ ಪ್ರೀತಿಯ ಒಡನಾಟ ಚೆಂದವಾಗಿ ಅಭಿವ್ಯಕ್ತವಾಗಿದೆ. ಅಪ್ಪನ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ಮಗ ಮಾಡುವ ಕೆಲಸಗಳನ್ನು ಮಾಡಿದರೂ.. ಸ್ವೀಕರಿಸಲು ಅಪ್ಪನಿಗಿದ್ದ ಹಿಂಜರಿಕೆ, ಮುಜುಗರ ಅಸಮಾಧಾನಗಳಾಚೆಗೂ ಅಪ್ಪ ಮಾಡುವ ಮಗಳ ರಕ್ಷಣೆ, ಅಗತ್ಯಗಳ ಪೂರೈಕೆ, ಪ್ರಶಂಸೆ ಎಲ್ಲಕ್ಕಿಂತ ಹೆಚ್ಚಾಗಿ ಉಪಸ್ಥಿತಿಯಿಂದ ಕಾಡುತ್ತಾರೆ.
ಅಪ್ಪ ನನಗೇಕೆ ನಿನ್ನ ಪ್ರೀತಿ ತಿಳಿಯುತ್ತಿಲ್ಲ? - ಎಸ್. ಎಮ್. ಪುಷ್ಕರ :
ಶಿಸ್ತಿನ ಅಪ್ಪನ ಮುಖವನ್ನು ತೆರೆದಿಡುತ್ತಲೇ.. ಅಪ್ಪನ ಇಚ್ಛೆಯಂತೆಯೇ ಓದಿ ಕೆಲಸ ಹಿಡಿದ ನಂತರ ಮನೆಗೆ ಹೋದಾನ ಕಂಡ ಅಪ್ಪನ ಕಣ್ಣುಗಳು ಅಷ್ಟು ವರ್ಷ ಹೇಳದ ಮಾತುಗಳನ್ನು, ಪ್ರೀತಿಯನ್ನು ತೋರಿದ ಬಗೆ ಸೊಗಸಾಗಿದೆ.
ಅಪ್ಪ ಅಪ್ರಯೋಜಕನಲ್ಲ - ಪುಟ್ಟಸ್ವಾಮಿ ನೇರಲೇಕೆರೆ :
ಮಾಜಿಯ ತಾತನನ್ನು ತೋರುತ್ತಲೇ ಮಾಜಿಯ ತಂದೆಯನ್ನು ಪರಿಚಯಿಸುತ್ತಾರೆ. ಕುಡುಕ, ಬೇಜವಾಬ್ದಾರಿತನ, ಅಕ್ಕ-ಪಕ್ಕದವರ ಕೋಪಕ್ಕೆ ತುತ್ತಾಗಿದ್ದವನು ಮಗನ ಬಗೆಗೆ ತೋರುತ್ತಿದ್ದ ಕಾಳಜಿ, ಮಕ್ಕಳಿಗೆ ಜಮೀನನ್ನು ಹಿಂದಿರುಗುವಂತೆ ಮಾಡಲು ಹವಣಿಸಿದ್ದು, ಮಕ್ಕಳ ಬದುಕಿನ ದಾರಿ ರೂಪಿಸಿದ್ದು ಅಪ್ಪನ ಮತ್ತೊಂದು ರೂಪವನ್ನೇ ಬಯಲು ಮಾಡುತ್ತದೆ.
ಅಪ್ಪನಿಗ್ ಹೇಳ್ತೀನಿ - ವಾಣಿ ಭಟ್ಟ :
ಈ ಲೇಖನ ವಿಭಿನ್ನವೆನಿಸಿತು. ಇಲ್ಲಿ ಲೇಖಕಿ ತಂದೆ ಹಾಗೂ ತನ್ನ ಮಗುವಿನ ತಂದೆ ಎರಡು ತಂದೆಯ ರೂಪವನ್ನು ತೋರುತ್ತಾರೆ. ಅಮ್ಮನ ಜೊತೆಗಿನ ಸಲುಗೆ ಅಪ್ಪನ ಜೊತೆಗಿಲ್ಲದಿದ್ದರೂ.. ಅಪ್ಪನ ಒಂದು ಮಾತಿಗೆ ಭಯ ಬೀಳುವ ದಿನಗಳು..
ಮಕ್ಕಳು ಪಾಲಕರನ್ನು ನೋಡುವ ದೃಷ್ಟಿಕೋನ ರೂಪಿಸುವ ತಂದೆ-ತಾಯಿಯ ಜವಾಬ್ದಾರಿಯ ವಿಚಾರ ಹೇಳುತ್ತಾರೆ. ಬದಲಾದ ದಿನಗಳಲ್ಲಿ ಮಕ್ಕಳ ಜೊತೆಗೆ ಮಗುವಾಗಿ ಆಡುವ ಅಪ್ಪನನ್ನು ತೋರುತ್ತಾರೆ. ಇಂದಿನ ತಂದೆಯಂದಿರ ಜವಾಬ್ದಾರಿ ಹಾಗೂ ಪ್ರೀತಿಯಿಂದ ಕೈಜೋಡಿಸುವ ಗುಣಗಳ ತಂದೆಯಂದಿರ ಮೇಲೆ ಬೆಳಕು ಚೆಲ್ಲುತ್ತಾರೆ. ಹಿಂದಿಗಿಂತ ಇಂದಿನ ಸ್ಥಿತಿ ಸುಧಾರಿಸಿದೆ. ಮಗುವಿನ ದೈನಂದಿನ ಜೀವನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ತಂದೆಯಂದಿರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎನ್ನುವ ಆಶಯ ಬಹಳ ಇಷ್ಟವಾಯಿತು.
ವಾಮಣ್ಣ-ಅಣ್ಣ ಅಲ್ಲ ಅಪ್ಪ - ಮಾಧುರಿ ಭಾವೆ :
ತಂಗಿಯಂದಿರು ಕರೆದ ಹಾಗೆ ಮಕ್ಕಳು ತಂದೆಯನ್ನು ವಾಮಣ್ಣನೆಂದೇ ಕರೆದ ಬಗೆ.. ಬರೀ ಓದು ಎಂದು ಒತ್ತಡ ಹೇರದೆ, ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದನ್ನು ತಿಳಿಹೇಳಿದ, ಅಪರಿಮಿತ ವಿಶ್ವಾಸದಿಂದ ಮಗಳನ್ನು ನಂಬಿದ ತಂದೆ, ತಂದೆ-ತಾಯಿಯರ ಪ್ರೀತಿ ಅನ್ಯೋನ್ಯತೆಯ ದಾಂಪತ್ಯ ಇರುವ ಬಹಳ ಲವಲವಿಕೆಯ ಚಿತ್ರಣ ಇದು.
ಅಪ್ಪಾ ಲವ್ ಯೂ ಪಾ - ಗೀತಾ ನಾಗರಾಜ್ :
ಹಾಡನ್ನು ನೆನಪಿಸಿಕೊಳ್ಳುತ್ತಲೇ ಮಕ್ಕಳೊಡನೆ ಮಗುವಾಗಿ ನಲಿಯುತ್ತಾ.. "ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಗುಲಗಂಜಿಗಿಂತ ರವಷ್ಟು ಹೆಚ್ಚು ಪ್ರೀತಿ ತೋರಿಸುವ", ಮುದ್ದು ಹೆಸರುಗಳಿಂದ ಕರೆದು ರೇಗಿಸುವ ಅಪ್ಪ ಕಾಣುತ್ತಾರೆ.
"ನಮ್ಮ ಬಾಲ್ಯ ಹುಡುಗಾಟಕೆಯ ದಿನಗಳು ಅಪ್ಪನ ನೆನಪುಗಳೊಂದಿಗೆ ಸಮೃದ್ಧವಾಗಿದೆ. ದಿನಗಳಂತೆ ನಮಗೆ ವಯಸ್ಸಾಗುತ್ತಾ ಹೋದಂತೆ ಅಪ್ಪ ಮತ್ತಷ್ಟು ಮಗದಷ್ಟು ನಮ್ಮೊಳಗೆ ಜೀವಂತವಾಗಿದ್ದಾರೆ" ಎನ್ನುತ್ತಾರೆ.
ತಂದೀಯ ನೆನೆದರೆ ತಂಗಳು ಬಿಸಿಯಾಯಿತು - ಯಶೋದ ಗಾಣಿಗ :
ಜನಪದದ ಚಂದದ ಸಾಲೊಂದನ್ನು ನೆನೆಯುತ್ತಾ.. ಹೆಚ್ಚು ಕಾಲ ಅಪ್ಪನೊಡನೆ ಇಲ್ಲದ, ಮಲತಾಯಿ ಬಂದ ನಂತರ ಅಪ್ಪನ ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಮಗಳ ಕಣ್ಣಲ್ಲಿ ಅಪ್ಪ ಎತ್ತರದಲ್ಲಿರುವ ಮನ ಮಿಡಿಯುವ ಚಿತ್ರಣವಿದು.
ಅಪ್ಪ ಎಂದರೆ - ದ್ವಾರನಕುಂಟೆ ಪಿ ಚಿತ್ತಣ್ಣ :
ಅಪ್ಪ ಪಾಂಡುರಂಗಪ್ಪನ ಪ್ರಪಂಚ, ಹೊಲ-ಮನೆ, ಎತ್ತುಗಳ ಒಡನಾಟವಿದ್ದರೂ.. ಕಡುಬಡತನದಲ್ಲಿಯೂ ಮಕ್ಕಳನ್ನು ತನ್ನ ಪ್ರಪಂಚವೆಂಬಂತೆ ಸಾಕಿದ, ಅಮ್ಮನನ್ನು ಕಷ್ಟಪಟ್ಟು ಉಳಿಸಿಕೊಳ್ಳುವ ದಿನಗಳಲ್ಲಿ ಅಮ್ಮನ ಸ್ಥಾನದಲ್ಲಿ ನಿಂತು ಮುತುವರ್ಜಿವಹಿಸಿ ಕಾಳಗೆ ಮಾಡುವ ಇಂತಹ ಅಪ್ಪಂದಿರು ಬಹಳ ಅಪರೂಪ.
ಅಪ್ಪ - ರೇಣುಕಾ ಗೌಳಿ :
ಮಹಾನ್ ದೇಶಾಭಿಮಾನಿ ಅಪ್ಪನ ಮಗಳು ಊರಿಗೆ, ಪರರಿಗೆ ಮಹೋಪಕಾರಿಯಾದ ದಿನಗಳನ್ನು ಹೇಳುತ್ತಾರೆ. ಸ್ವಾತಂತ್ರ್ಯ ಪೂರ್ವದ ದಿನಗಳ ಅಪ್ಪನ 50 ವರ್ಷದ ಬದುಕಿನ ಬಗೆ ಇಲ್ಲಿದೆ. ದೇಶಭಕ್ತಿ, ಶರಣರ ವಾಣಿ, ಧೈರ್ಯದ ಬದುಕು ಎಲ್ಲವನ್ನೂ ಕಲಿಸಿದ ಚೇತನ ಅಪ್ಪ ಕೇವಲ ಮನೆಯವರು ಮಾತ್ರವಲ್ಲ ಹೆ, ಪ್ರತಿಯೊಬ್ಬರೂ ಗೌರವಿಸುವ ವ್ಯಕ್ತಿತ್ವವಾಗಿರುವುದರ ಚಿತ್ರಣವಿಲ್ಲಿದೆ.
ನಾ ಕಂಡ ಅಪ್ಪ - ಪದ್ಮಲತಾ ಮೈಸೂರು :
ಅಪ್ಪನ ಸಕಾರಾತ್ಮಕ ನಿಲುವು, ಜ್ಞಾನ ಸಂಪಾದನೆ, ಶ್ರದ್ಧೆ, ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಹೀಗೆ ಸಕಾರಾತ್ಮಕವಾಗಿ ಅಪ್ಪನನ್ನು ತೆರೆದಿಟ್ಟರೂ.. ಎರಡು ನಕಾರಾತ್ಮಕ ಗುಣಗಳನ್ನು ಉಲ್ಲೇಖಿಸಿ ಅವುಗಳನ್ನು ಸುಧಾರಿಸಿಕೊಂಡ, ತಿದ್ದಿಕೊಂಡ ಹಾಗೂ ಮಾದರಿಯಾದ ಬಗೆ ಇಲ್ಲಿದೆ.
ಎಲ್ಲರಂತಲ್ಲ ನನ್ನಪ್ಪ - ಗಾಯತ್ರಿ ಅನಂತ್ :
ಓದು ಮಾತ್ರವಲ್ಲದೆ.. ಕಲೆ, ಸಾಹಿತ್ಯ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ನೆರವಾದ ಅಪ್ಪನಿದ್ದಿದ್ದರೆ.. ಕರಕುಶಲ ಕಲೆಗಾಗಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ನ್ಯಾಷನಲ್ ರೆಕಾರ್ಡ್ ಸಿಕ್ಕಾಗ ಅದೆಷ್ಟು ಹರುಷಪಡುತ್ತಿದ್ದರು ಎನ್ನುವ ನೆನಪುಗಳ ತೆರೆದಿಡುವಿಕೆ ಇಲ್ಲಿದೆ.
ಅಪ್ಪ ಎಂದರೆ ಅಸ್ತಿತ್ವ - ಚೈತ್ರ ವಿ ಮಂಡ್ಯ :
ಅಪ್ಪ ಎಂದರೆ ನನ್ನ ಅಸ್ತಿತ್ವ ಎನ್ನುವ ಇವರ ತಂದೆ ಕೇಳುವ ಶಕ್ತಿಯನ್ನು ಒಂದು ಸಂದರ್ಭದಲ್ಲಿ ಕಳೆದುಕೊಂಡಿದ್ದರು. ಬದುಕಲು ಬೇಕಿರುವ ಅದಮ್ಯ ಚೈತನ್ಯವನ್ನು ಕಳೆದುಕೊಳ್ಳದೆ ಬದುಕಿದ ಕ್ರಿಯಾಶೀಲ ವ್ಯಕ್ತಿ. ಇವರೂ ಶ್ರವಣಶಕ್ತಿ ಕಳೆದುಕೊಂಡಾಗ ನನಗಿಂತಲೂ ಹೆಚ್ಚು ಕನಲಿ,ಬೆಂದದ್ದು ನನ್ನಪ್ಪನೇ ಎನ್ನುತ್ತಾ ಮಕ್ಕಳನ್ನೇ ಆಸ್ತಿ ಮಾಡುವ ಯೋಚನೆಯ ಅಪ್ಪ ಇಲ್ಲಿದ್ದಾರೆ. ಬರೆದಷ್ಟು ಮುಗಿಯದ ಅಕ್ಷಯ ಪಾತ್ರೆಯನ್ನು ನಮಗೆ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಣ್ಣನಿಗೆ ನಾನಿನ್ನೂ ಪುಟ್ಟ ಮಗು - ಮನು ಗುರುಸ್ವಾಮಿ :
ಎತ್ತರದಲ್ಲಿ ಮಾತ್ರವಲ್ಲದೆ, ವ್ಯಕ್ತಿತ್ವದಲ್ಲಿಯೂ ಅಷ್ಟೇ ಎತ್ತರವಿರುವ ತಂದೆ ಗುರುಸ್ವಾಮಿಯವರ ಕುರಿತು ಹೇಳುತ್ತಲೇ ಈಗಲೂ ಪುಟ್ಟ ಮಗುವಂತೆ ಕಾಳಜಿ ಮಾಡುವ ತಂದೆಯನ್ನು ತೋರುತ್ತಾರೆ.
ಅಪ್ಪನೆಂಬ ಮುಗಿಯದ ಅದ್ಭುತಗಳ ಕಥನ ಇಲ್ಲಿದೆ. ಕೆಲ ಅಕ್ಷರ ದೋಷಗಳಿವೆ. ಆದರೆ, ಅಪ್ಪನೆಂಬ ಅದ್ಭುತ ಭಾವವಷ್ಟೇ ಮನದಲ್ಲುಳಿಯಿತು.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ