ಮಂಗಳವಾರ, ನವೆಂಬರ್ 24, 2026

ಕನಸಿನ ಕೆಳದಿ (ಪುಸ್ತಕ ಯಾನ - 518)


ಪುಸ್ತಕದ ಶೀರ್ಷಿಕೆ : ಕನಸಿನ ಕೆಳದಿ

ಕೃತಿ ಪ್ರಕಾರ : ಕಥಾ ಸಂಕಲನ 

ಲೇಖಕರು : ರಂ. ಶ್ರೀ. ಮುಗಳಿ

ಪ್ರಕಾಶಕರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ 

ಪುನರ್ ಮುದ್ರಣ : 2013


ರಂ. ಶ್ರೀ. ಮುಗಳಿ ಅವರ ಏಕೈಕ ಕಥಾ ಸಂಕಲನ ಇದು. 1943ರಲ್ಲಿ ಮನೋಹರ ಗ್ರಂಥಮಾಲಾದಿಂದ ಪ್ರಕಟವಾಗಿತ್ತು. ಈ ಕಥಾ ಸಂಕಲನದಲ್ಲಿ 11 ಕಥೆಗಳಿವೆ. ಇಲ್ಲಿನ ಹೆಚ್ಚಿನ ಕಥೆಗಳು ಆಡುಭಾಷೆಯ ಸಂಭಾಷಣೆಗಳನ್ನು, ಸೊಗಡನ್ನು ಹೊಂದಿವೆ.


ಕನಸಿನ ಕೆಳದಿ : ಕನಸಿನಲ್ಲಿ ಬಂದ ಹೃದಯದರಸಿ, ಬಾಳಿನ ಕೆಳದಿ ಅರ್ಥಾತ್ ಗೆಳತಿ ಅಂದರೆ ಸಂಗಾತಿಯಾಗಿ ಮನಸ್ಸಿನಲ್ಲಿ ಬೀಡು ಬಿಟ್ಟದ್ದು ಕನಸಿನ ನಂತರವೂ ವಾಸ್ತವವೇನೋ ಎಂಬಂತೆ ಆತನ ಮನಸ್ಸಿನಲ್ಲಿ ಉಳಿದಿತ್ತು. ಸಾಂಪ್ರದಾಯಿಕ ಪರಿಸರದ ದಿನಗಳಲ್ಲಿ ವಿದ್ಯಾವಂತನಾದ ಆತನ ಮನಸ್ಸಿನ ಆಸೆಯೇ ಆತನ ಕನಸಾಗಿ ಬಂದು ಸಂಗಾತಿ ಹೀಗಿರಬೇಕು ಎಂಬ ಗೆಳತಿಯ ರೂಪವನ್ನು ಕಲ್ಪಿಸಿದ್ದು. ಕನಸಿನ ಕೆಳದಿಯನ್ನೇ ಮನಸ್ಸಿನಲ್ಲಿ ಪಡೆಯುವ ಆತನ ಆಸೆಗೆ ತಕ್ಕಂತಹ ಹುಡುಗಿ ಸಿಗದಾದಾಗ ತಾಯಿ ಅಣ್ಣನ ಮಗಳಾದ ಲೀಲೆಯನ್ನೇ ಕೆಳದಿ ಎಂದು ಭಾವಿಸಿ ಮದುವೆಯಾಗುತ್ತಾನೆ. ಮಗನ ಆಸೆಯ ಮುಂದೆ ತಂದೆಗೆ ಹುಡುಗಿ ಮನೆಯ ಬಡತನ ನಗಣ್ಯವಾಗುತ್ತದೆ. ಲೀಲೆಯಲ್ಲಿ ಆತನ ಕನಸಿನ ಗೆಳತಿ ಸಿಕ್ಕಳೇ? ಪ್ರೇಮ ಪ್ರಪಂಚದ ಈ ಕಥೆಯನ್ನು ಓದಿ ನೋಡಿ.


ನೀರಿನ ನಾರಪ್ಪ : ಮುದ್ದಬ್ಬೆಹಳ್ಳಿಗೆ ವಕೀಲ ಭಗವಂತರಾಯರ ಮನೆಗೆ ನೀರು ತರಲು ನೀರಿನವನಾಗಿ ನಾರಪ್ಪ ನೇಮಕವಾಗುತ್ತಾನೆ. ಮುಂದೆ ಇದೇ ಹೆಸರು ಖಾಯಂ ಆಗುವಂತಹ ಕೆಲಸವನ್ನು  ಸಹ ಮಾಡುತ್ತಾನೆ. ಮೊದಲಿಗೆ ನಾರಪ್ಪನ ಬುದ್ಧಿವಂತಿಕೆಯ ಪರಿಚಯವಾಗುತ್ತದೆ. ಊರಿನ ಗೌಡ ತೆಗೆದುಕೊಂಡು ಬರಲಾಗದ ಮೊಸರು ಗಡಿಗೆಗಳನ್ನು ಬುದ್ಧಿವಂತಿಕೆಯಿಂದ ಸಂಪಾದಿಸುತ್ತಾನೆ. ಹಾಗಾದರೆ ಆತನ ಹಿನ್ನೆಲೆಯೇನು..?


ನೀರಿನವನಾಗಿ ಸೇರಿದ ನಾರಪ್ಪ ಮುಂದೆ ವಕೀಲರ ಅಂತರಂಗದ ಸೇವಕನಾಗಿ, ಅವರ ತೀರಿಹೋದ ಮೊದಲ ಪತ್ನಿಯ ಇಬ್ಬರು ಮಕ್ಕಳನ್ನು ಆಪ್ತವಾಗಿ ಪಾಲಿಸುತ್ತಾ ಬೆಳೆಸುತ್ತಾನೆ. ಆತನ ನಗೆಚಾಟಿಕೆ ಲವಲವಿಕೆಯಿಂದ ಮನೆಯು ಕಳೆಯಾಗಿರುವುದನ್ನು ನೋಡಬಹುದು. ಇದು ರಾಯರ ಎರಡನೇ ಹೆಂಡತಿ ಸುಶೀಲಾಬಾಯಿಯವರ ಕಣ್ಣು ಕುಕ್ಕುತ್ತದೆ. ಮಾತ್ರವಲ್ಲದೆ.. ದಿನೇದಿನೇ ಈ ಅಂತರ ಹೆಚ್ಚುತ್ತದೆ. ವಕೀಲರ ಮೊದಲ ಮಗಳ ವಿವಾಹದ ನಂತರ ನಾರಪ್ಪ ಹೊರಟದಲ್ಲಿಗೆ..? ಅದಕ್ಕೆ ಕಾರಣವೇನು ಓದಿ ನೋಡಿ.


ಮಂಜಿನ ಮನೆ : 'ನಾವೆಲ್ಲಾ ಇರೋ ಈ ಜಗತ್ತು ಒಂದು ಮಂಜಿನ ಮನೆ. ನಾವು ನಡೆದಂತೆ ನಾಲ್ಕು ಹೆಜ್ಜೆ, ಸುತ್ತು ಏನೋ ಕಾಣುತ್ತದೆ. ಮುಂದೆಲ್ಲಾ ಮಂಜು, ಕರಗಲಾರದ ಕಲ್ಲೆದೆಯ ಮಂಜು"

ಸಂತಸವಾಡಿಯಲ್ಲಿ ಶ್ರೀಪಾದ ಕಾಣೆಯಾಗಿರುವುದು ದೊಡ್ಡ ಸುದ್ದಿಯಾಗುತ್ತದೆ. ಮೂರನೇ ಬಾರಿ ಪರೀಕ್ಷೆ ಬರೆದಿದ್ದ. ನಪಾಸಾದರೂ ಆತ ಎದೆಗುಂದುವವನಲ್ಲ ಎಂದು ತಿಳಿದಿದ್ದರೂ.. ಹುಡುಕಲು ತಮ್ಮ ಕೈಲಾದ ಪ್ರಯತ್ನವನ್ನೆಲ್ಲ ಮಾಡಿರುತ್ತಾರೆ. ಆದರೆ, ಶ್ರೀಪಾದ ಸಿಕ್ಕಿದ್ದು ಹೆಣವಾಗಿ. ಆದರೆ ಅದು ಆತ್ಮಹತ್ಯೆಯಾಗಿರಲಿಲ್ಲ. ಅದೊಂದು ಕೊಲೆ. 

ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಸಿಕ್ಕ ಸತ್ಯ ಯಾವುದು..? ಕೋರ್ಟಿನಲ್ಲಿ ನಿಂತ ಸತ್ಯ ಯಾವುದು ಓದಿ ನೋಡಿ. ಪತ್ತೇದಾರಿ ಶೈಲಿಯ ಈ ಕಥೆಯ ಶೈಲಿ ಇಷ್ಟವಾಯಿತು


ವೇದಾಂತಿ : ಮಾಧವ ರಾಯರು ಪತ್ನಿಯನ್ನು ಕಳೆದುಕೊಂಡಿದ್ದರು. ಇದ್ದೊಬ್ಬ ಮಗಳು ಗೀತೆ ವಿವಾಹವಾದ ಸ್ವಲ್ಪ ಕಾಲದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ಏನೇ ಆಸ್ತಿ-ಅಂತಸ್ತು ಇದ್ದರೂ ಮಗಳು ದಾರಿ ತಪ್ಪದಂತೆ ಅವಳನ್ನು ಕಾಯ್ದುಕೊಳ್ಳುತ್ತಲೇ ಆಧ್ಯಾತ್ಮದ ಮಾತುಗಳಿಂದ ಅವಳ ಮನಸ್ಸನ್ನು ತಹಬದಿಗೆ ತರಲೆತ್ನಿಸುವ ತಂದೆ. ಆ ಬದಲಾವಣೆಗೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿದ್ದರೂ ಹರೆಯವೇ ಹೆಚ್ಚು ಪ್ರಭಾವ ಬೀರುತ್ತಿತ್ತು. ಇಂತಹ ಸಂದರ್ಭದಲ್ಲಿ ವೇದಾಂತಿಯೊಬ್ಬರು ಬಂದಾಗ ಮಾಧವರಾಯರ ಕೋರಿಕೆಯಂತೆ ದಿನಾ ಪಠಣೆಯನ್ನು ಆರಂಭಿಸುತ್ತಾರೆ. ವೇದಾಂತಿಯ ಕಾರಣದಿಂದ ಮನೆಯಲ್ಲಿ ಊಹಿಸಲಾಗದ ದೊಡ್ಡ ಬದಲಾವಣೆಯೊಂದು ಆಗುತ್ತದೆ. ಅದೇನು ಓದಿ ನೋಡಿ.


ಕಲ್ಯಾಣ ಮಂಟಪ : ಎರಡು-ಮೂರು ವರ್ಷಗಳಿಂದ ನರಳುತ್ತಲೇ ಇದ್ದ ತಾಯವ್ವ ಇನ್ನೇನು ಸಾಯುತ್ತಾಳೆ ಎನ್ನುವ ಸಂದರ್ಭದಲ್ಲಿ ತನ್ನ ಮಗ ರಾಮರಾಯನ ಮಗ ಹರಿಯ ವಿವಾಹ ನೋಡಬೇಕೆನ್ನುವ ಆಸೆ. ತರಾತುರಿಯಲ್ಲೇ ಹರಿಯ ವಿವಾಹ ತಾಯವ್ವನ ಆಸೆಯಂತೆಯೇ ಆಗುತ್ತದೆ. ಅದೂ ಮನೆಯಲ್ಲಿಯೇ ಕಟ್ಟಿದ ಕಲ್ಯಾಣ ಮಂಟಪದಲ್ಲಿ. ಲಕ್ಷ್ಮಿಯ ಕೈಹಿಡಿಯುತ್ತಾನೆ ಹರಿ. ಆಗಿನ ಕಾಲಘಟ್ಟದ ಮದುವೆಯ ರೀತಿ, ನೀತಿಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಹುಡುಗಿ ಮೈನೆರೆದು ಫಲಶೋಬನವೂ ಆದ ನಂತರ ಮನೆಯಲ್ಲಿ ಒಂದು ಸಾವಾಗುತ್ತದೆ. ಅದೂ ಕಲ್ಯಾಣ ಮಂಟಪದಲ್ಲಿಯೇ.. ಯಾರದು ಹಾಗೂ ಲಕ್ಷ್ಮಿಯ ಬದುಕು ಏನಾಗುತ್ತದೆ ಓದಿ ನೋಡಿ. ಇಲ್ಲಿ ಕಾಲ್ಗುಣದ ಮಾತು ಸಹ ಕಾಣಸಿಗುತ್ತದೆ.


ಆಯುಷ್ಕರ್ಮ : ಸಿರಿಯೂರ ನಾಡಗೌಡರ ಮಗ ಚಿಂತಾಮಣಿರಾಯನು ನಾಪಿತ ನಾಗಪ್ಪನ ಮನೆಯ ಹಾಗೂ ಅವನ ಬದುಕಿನ ಕಡೆಗೆ ಲಕ್ಷ್ಯ ತೋರಿದಾಗ ನಾಗಪ್ಪನ ಮನೆಯ ಪರಿಸ್ಥಿತಿ ಏನಿತ್ತು ..? ನಾಗಪ್ಪ ಹುಟ್ಟಿನಿಂದ ಆ ವೃತ್ತಿ ಆರಂಭಿಸಿದವನಲ್ಲ. ಅಲ್ಲದೆ ಚಿಕಿತ್ಸೆಗಾಗಿ ಮದ್ದು ಕೊಡುವ ಪರಿಪಾಠವೂ ಅವನಲ್ಲಿತ್ತು. ಚಿಂತಾಮಣಿರಾಯನ ಬದುಕಿನಲ್ಲಿಯೂ ಬದಲಾವಣೆಗಳಾಗುತ್ತವೆ. ತಾನೇ ವ್ಯವಸಾಯ ಮಾಡುತ್ತೇನೆಂದು ತಂದೆಯ ಬಳಿ ಹೇಳಿ ರೈತನಗುವ ಪರಿ ಜೊತೆಗೆ ತನ್ನ ಸಂತೋಷವನ್ನು ಹುಡುಕಿಕೊಳ್ಳುವ ಹುಕಿ. ಆತನಿಗೆ ಬದುಕಿನ ತೃಪ್ತಿಯ ಪಾಠ ಕಂಡದ್ದು ಎಲ್ಲಿ..?

ಇಲ್ಲಿ ಆಯುಷ್ಕರ್ಮವನ್ನು ಎರಡು ರೀತಿಯಲ್ಲಿ ಅರ್ಥೈಸಿದ್ದಾರೆ. ಒಂದು ನಾಪಿತ ಮಾಡುವಂತದು. ಮತ್ತೊಂದು ಆಯುಷ್ಯದಲ್ಲಿಯೇ ಮನುಷ್ಯ ಮಾಡಬೇಕಾದ ಕರ್ಮ ಮತ್ತು ಪಡೆಯಬೇಕಾದ ಮುಕ್ತಿಯ ರೂಪ ಎಂಬುದಾಗಿ.


ಜಗತ್ತು ಕಂಡವರು ಯಾರು? : ವಿದ್ಯಾಲಯದಿಂದ ಹೊರಬಿದ್ದ ಇಬ್ಬರು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಜಗತ್ತನ್ನು ತಮ್ಮ ನೋಟ ಹಾಗೂ ತಮ್ಮ ಆಲೋಚನೆಯ ಪರಿಧಿಯಲ್ಲಿ ಕಾಣುತ್ತಾ ಹೋಗುವ ಬಗೆ ಇಲ್ಲಿದೆ. ಲಲಿತ ಮತ್ತು ವಸಂತ ಇಬ್ಬರ ಜೀವನ ಎಂಬವಕ್ಕೆ ಸಿಕ್ಕ ನೋಟಗಳೇನು? ಜಗತ್ತು ಕಂಡವರು ಯಾರು..?

ಜಗತ್ತು ಕಂಡವ ಕುರುಡ ಎಂದರೆ ಎಷ್ಟು ಸರಿ..? ನಾವು ಕಾಣುವ ಪರಿಧಿಯನ್ನು ವಿಸ್ತಾರಗೊಳಿಸುವ ಕಥೆ ಇದು.


ವಿತಂತು-ವೇಶ್ಯೆ ! : ತಂದೆ-ತಾಯಿಯ ಮಡಿಲಲ್ಲಿ ಬೆಳೆಯದ ಆಕೆ ಸಾಕುತಾಯಿಯ ಮನೆಯಲ್ಲಿ ಬೆಳೆದರೂ ಮುಂದೆ ವಿವಾಹವಾಗಿದ್ದು ತನ್ನ ಮೂರು ಪಟ್ಟು ವಯಸ್ಸಾಗಿದ್ದ ವ್ಯಕ್ತಿಯೊಂದಿಗೆ. ಅಲ್ಲಿಗೆ ಸಾಕಿದವರ ಋಣವೂ ಮುಗಿದಿತ್ತು. ಗಂಡನ ಮನೆಯಲ್ಲಿ ನಾಲ್ಕು ಮಲಮಕ್ಕಳ ತಾಯಿಯಾಗಿ ಬದುಕು ಸಾಗಿಸುತ್ತಿದ್ದವಳ ಬದುಕು ಬೆಂಕಿಯಿಂದ ಬಾಣಲೆಗೆ ಎಂಬಂತಾಗಿತ್ತು. ಸಂಸಾರದಲ್ಲಿದವಳು ವೇಶ್ಯಾವೃತ್ತಿಗೆ ಬಂದದ್ದು ಹೇಗೆ..? ಅದು ಅನಿವಾರ್ಯವಾಗಿತ್ತೇ..? ಕಡಿದ ತಂತುಗಳ ಜೋಡಣೆ ಎಂದಿಗಾದರೂ ಸಾಧ್ಯವೇ ? 


ವಿರಕ್ತ ಸಂಸಾರಿ! : ಗೋಪಿನಾಥನು ಊರೂರು ಅಲೆದು ಸುಸ್ತಾಗಿ ಬಂದದ್ದು ನಾಗರಹಳ್ಳಿಗೆ. ಅಲ್ಲಿ ಊರ ಹೊರಗಿನ ಕೇದಾರಿಯ ಗುಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ಆತನ ಬದುಕಿನ ಬಗ್ಗೆ ತಿಳಿಯದಿದ್ದರೂ ಆಗಿನ ಪರಿಸ್ಥಿತಿಯನ್ನು ನೋಡಿದ ಹಳ್ಳಿಯವನು ಈ ಅವನಿಗೆ ಕೇದಾರಿಯ ಗುಡಿಯ ಪೂಜೆ ವಹಿಸಿಕೊಳ್ಳುವ ಸಲಹೆ ನೀಡುತ್ತಾನೆ. ಮೌನ ವ್ರತಧಾರಿಯಾಗಿ ಕೇದಾರಿಯ ಧ್ಯಾನ ಹಿಡಿಯುತ್ತಿದ್ದವನ ಮನಸ್ಸು ಕೇಂದ್ರೀಕೃತವಾಗಿರಲಿಲ್ಲ. ಹಾಗೆಯೇ ಹರಿದಾಡುತ್ತಿದ್ದ ಮನಸ್ಸು ಪಾರ್ವತಿಯ ಮೇಲೆ ನೆಲೆ ನಿಂತಿತ್ತು. ತಾಯಿ ಪಾರ್ವತಿಯಿಂದ ಸಿಕ್ಕ ಆದೇಶವೇನು..? ಬೀರಪ್ಪನಾದರೂ ಸಂಸಾರವನ್ನು ಬಿಡುವುದು ಅಷ್ಟು ಸುಲಭವೇ..? ನಿತ್ಯಪೂಜೆ ಹೇಗೆ ಸಾಗಿತು ಓದಿ ನೋಡಿ.


ಕೂಟ ಪ್ರಶ್ನೆ : ಇಲ್ಲಿಯೂ ಕೂಟ ಪ್ರಶ್ನೆ ಎಂಬುದು ಎರಡು ಅರ್ಥದಂತೆ ಭಾಸವಾಗುತ್ತದೆ. ಕಥೆಯ ಈ ಸಾಲನ್ನು ಗಮನಿಸಬಹುದು.

"ಅವನ ಕೂಟ ಪ್ರಶ್ನೆ ಮಾತ್ರ ಉತ್ತರ ಪಡೆಯದೆ ಅವನ ಆ ಕೂಟದ ಕಂಬದ ಸುತ್ತು ಭೂತದಂತೆ ಅಲೆಯುತ್ತಿತ್ತು"

ಕೂಟದ ಕಂಬದ ಬಳಿ ಕೆಲಸ ಮಾಡುತ್ತಿದ್ದ ಪೊಲೀಸನಿಗೆ ಮೊದಲಿನ ನಿಷ್ಠೆ, ಪ್ರಾಮಾಣಿಕತೆ ಕ್ರಮೇಣ ಮಾಯವಾಗಿ ಮೋಹದ ದಾರಿ ಕೆಲಸವನ್ನು ಕಳೆದುಕೊಳ್ಳುವವರೆಗೂ ಸಾಗುತ್ತದೆ. ಪೋಲಿಸನ ನಡವಳಿಕೆ ಹೇಗಿತ್ತು ಹಾಗೂ ಅದು ಬದಲಾಯಿತೇ...?


ಕ.....ಚ್ಚು...! : ಪೆರೆಜ್ ಎಂಬ ಯಿಡಿಶ್ ಕತೆಗಾರ 'The women's Wrath'  ಎಂಬ ಕಥೆಯ ಆಧಾರದಿಂದ ಬರೆದಿರುವ ಈ ಕಥೆಯಲ್ಲಿ ಅವನು, ಅವಳು ಮತ್ತು ಮಗುವಿನ ಪುಟ್ಟ ಕುಟುಂಬ. ನಡು ಹರೆಯದ ಅವಳ ತುಮುಲಗಳು, ಪಾರಮಾರ್ಥದತ್ತ ಮುಖ ಮಾಡಿ ಸಂಸಾರದ ಮೇಲೆ ಹೆಚ್ಚು ನಿಗಾ ತೋರದ ಅವನು ಜೊತೆಗಿನ್ನು ಪುಟ್ಟ ಮಗು. ಮಧ್ಯಮ ವರ್ಗದ ಸಂಸಾರದ ಚಿತ್ರಣ ಒಂದು ಇಲ್ಲಿದೆ.ಈ ಕಥೆಯ ಶೀರ್ಷಿಕೆ ಹಾಗೂ ಕಥೆ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ ನೀವೇ ಓದಿ ನೋಡಿ.


ಇಲ್ಲಿನ ಕಥೆಗಳಲ್ಲಿ ಸಂದೇಶ ಕೊಡುವುದು ಅಥವಾ ಬದಲಾವಣೆಯ ಹಾದಿ ಸೂಚಿಸುವುದಕ್ಕಿಂತಲೂ ವಾಸ್ತವದ ಚಿತ್ರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆನ್ನಿಸಿತು. ಸಂಪ್ರದಾಯದ ಆಚೆಗಿನ ಆಧುನಿಕತೆ, ಸುಧಾರಣೆಯನ್ನು ಇಲ್ಲಿನ ಕಥೆಗಳಲ್ಲಿ ಬಿಂಬಿಸಿದ್ದಾರೆ. ಇಲ್ಲಿನ ಕಥೆಗಳಲ್ಲಿ ಕೆಲವು ಪದಗಳು ಎರಡು ರೀತಿಯ ಅರ್ಥಗಳನ್ನು ಕೊಡುವಂತೆ ಹಿರಿದರ್ಥದ ಪದಗಳಾಗಿವೆ. ವಾಕ್ಯ ರಚನೆಯಲ್ಲಿಯೂ ಪದಗಳ ಲಾಲಿತ್ಯ ನಮಗೆ ಕಾಣಸಿಗುತ್ತದೆ. 


ಹೆಚ್ಚಿನ ಕಥೆಗಳು ಈ ಕಾಲಘಟ್ಟಕ್ಕೆ ಹೊಂದಿಕೆಯಾಗುವುದಿಲ್ಲವಾದರೂ.. ಆ ಕಾಲಘಟ್ಟದ ಪರಿಚಯ ಮಾಡಿಕೊಳ್ಳಲು ನಾವದನ್ನು ಓದಬಹುದು. ಮಾನವೀಯ ಅಂಶಗಳು ಹಾಗೂ ಭಾವನೆಗಳಂತೂ ಸದಾ ಕಾಲಕ್ಕೂ ಬದಲಾಗವು. ಅಲ್ಲವೇ..?!

ಮತ್ತೊಂದು ಕಾಲಘಟ್ಟಕ್ಕೆ ಕರೆದೊಯ್ಯುವ ಸಾಮಾಜಿಕ ಕಥೆಗಳ ಓದು ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ