ಭಾನುವಾರ, ಮಾರ್ಚ್ 18, 2018

ಜೀವಕಳೆಯ ಪರ್ವ

ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ ದನಿಗೂಡಿಸುತ್ತಿದೆ. ತರು-ಲತೆಗಳು ಹೂಗಳನ್ನೇ ಮೈ ತುಂಬಿಕೊಂಡು ಚಿಗುರಿನಂದದಿಂದ ನಳನಳಿಸುತ್ತಾ ಕಣ್ಮನ ಸೆಳೆಯುತ್ತಿದೆ.
ವಸಂತ ಋತುವಿನ ಈ ಸಮಯದಲ್ಲಿ ಮತ್ತೆ ಮತ್ತೆ ಬರುತ್ತಲಿದೆ ಯುಗಾದಿ. ಕಳೆದ ಕ್ಷಣಗಳು ಮತ್ತೆ ಮತ್ತೆ ಬಾರದಿದ್ದರೂ , ಹೊಸ ಹರುಷವನ್ನು ತರುತ್ತಾ ಯುಗಾದಿ ತಪ್ಪದೆ ಮತ್ತೆ ಮತ್ತೆ ಬರುತ್ತಲಿದೆ.ಇಳೆಯ ಎಲ್ಲಾ ಜೀವರಾಶಿಗಳಿಗೂ ಜೀವಕಳೆಯನ್ನು ತರುತ್ತದೆ.
ಯುಗದ ಆದಿಯ ಸವಿನೆನಪನ್ನು ತರುವ ಯುಗಾದಿ ಅಭ್ಯಂಜನದ ಮಹತ್ವವನ್ನು ಸಾರುತ್ತಾ, ಅದರ ಮಧುರ ಅನುಭೂತಿಯನ್ನೂ ಪರಿಚಯಿಸುತ್ತದೆ.ಜೊತೆಗೆ ಬೇವು-ಬೆಲ್ಲವು ಯಾವ ರಾಸಾಯನಿಕವನ್ನೂ ಒಳಗೊಳ್ಳದ ತಿನಿಸಾಗಿ ಆರೋಗ್ಯವನ್ನು ವೃದ್ದಿಸುತ್ತದೆ.  ಬಾಯಿಗೆ ಕಹಿಯಾದರೂ, ಬೆಲ್ಲದೊಂದಿಗೆ ಸವಿಯುವದನ್ನು ತಪ್ಪಿಸುವುದಿಲ್ಲ. ಬೆಲ್ಲದ ಸಿಹಿಗಿಂತ ಬೇವಿನ ಕಹಿಯೇ ಬಾಯಲ್ಲಿ ಹೆಚ್ಚು ಉಳಿಯುತ್ತದೆನಿಸಿದರೂ, ದೇಹದ ಆರೋಗ್ಯಕ್ಕೆ ಬೇವು ಒಳ್ಳೆಯದು.
ಬೇವು-ಬೆಲ್ಲದಂತೆಯೇ ನಮ್ಮ ಬಾಳಿನಲ್ಲಿ ಬರುವ ಸುಖ-ದುಃಖಗಳು.  ಬೇವು-ಬೆಲ್ಲವನ್ನು ಸವಿಯುವಂತೆಯೇ ಕಷ್ಟ-ಸುಖಗಳನ್ನೂ ಒಟ್ಟಾಗಿ ಅನುಭವಿಸಬೇಕು.  ಕಷ್ಟಕ್ಕೆ ಹೆದರಿ ಕುಗ್ಗದೆ ಅದರಿಂದ ಕಲಿತ ಪಾಠಗಳನ್ನು ಸುಖದೊಂದಿಗೆ ಬೆರೆಸುತ್ತಾ ಬಾಳಿನಲ್ಲಿ ಅಳವಡಿಸಿಕೊಂಡರೆ ಬದುಕು ಸೊಗಸಾಗಿರುತ್ತದೆ ಎಂಬ ಪಾಠವನ್ನೂ ಯುಗಾದಿ ಕಲಿಸುತ್ತದೆ. 
ಹಳೆಯದನ್ನೆಲ್ಲಾ ನೆನಪಿಸುತ್ತಾ, ಈ ಕ್ಷಣ ಇಷ್ಟು ಬೇಗ ಕಳೆದೇ ಹೋಯಿತೇ ಎಂದೆನಿಸುವ ಮಧುರ ನೆನಪುಗಳನ್ನು ಮೂಡಿಸುತ್ತಾ, "ನಿದ್ದೆಗೊಮ್ಮೆ ನಿತ್ಯ ಮರಣ,ಎದ್ದ ಕ್ಷಣ ನವೀನ ಜನನ" ನಮಗೆ ಬರುವುದಿಲ್ಲ ಎಂದು ನೆನಪಿಸುತ್ತಾ ಬಂದಷ್ಟೇ ವೇಗದಲ್ಲಿ ಯುಗಾದಿ ಮುಗಿದೇ ಹೋಗಿಬಿಡುತ್ತದೆ.

ಹಿಂದೂಗಳ ಹೊಸ ವರ್ಷವೆಂದೇ ಖ್ಯಾತಿ ಪಡೆದ ಯುಗಾದಿಯನ್ನು ಅಬ್ಬರದಿಂದ ಆಚರಿಸದೆ, ಪರಿಸರ-ಸ್ನೇಹಿ ಹಬ್ಬವಾಗಿ ಆಚರಿಸೋಣ. ಮಾವಿನ ತಳಿರ-ತೋರಣವ ಕಟ್ಟುತ್ತಾ, ಬೇವು-ಬೆಲ್ಲದೊಂದಿಗೆ, ಮರಳಿ ಬರುತ್ತಿರುವ ಜೀವಕಳೆಯ ಹಬ್ಬ ಯುಗಾದಿಯನ್ನು ಮಂದಹಾಸದೊಂದಿಗೆ ಸ್ವಾಗತಿಸೋಣ.

-ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 8, 2018

ಅವಳಂತರಂಗ


ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ, ಸ್ಫೂರ್ತಿ ನೀಡಿದ  ಮಹಿಳೆಯರನ್ನು ನೆನೆಯುವ ನಾವು ಎಂದಾದರೂ ಅವಳಂತರಂಗದ ಆಲೋಚನೆಗಳು ಹೇಗಿರಬಹುದೆಂಬುದನ್ನು ಯೋಚನೆ ಮಾಡಿದ್ದೇವೆಯೇ?

"ಮಹಿಳೆ ಇಂದು ಪುರುಷ ಪ್ರಧಾನ ಸಮಾಜದಲ್ಲಿ, ತಾನೂ ಸರಿಸಮವಾಗಿ ನಿಂತು ಪ್ರಗತಿ ಸಾಧಿಸುತ್ತಿದ್ದಾಳೆ" ಎಂದು ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡಿದಾಗ ಒಂದು ಕಿರು ನಗೆ ನಕ್ಕು ಸುಮ್ಮನಾಗಿಬಿಡುತ್ತೇವೆ.ಆ ನಗು ಮಹಿಳೆಯರದಾದರೆ ಒಂದು ಹೆಮ್ಮೆಯ ನಗು, ಪುರುಷರದಾದರೆ ತಿರಸ್ಕಾರದ ಒಣ ನಗು(ಬಹುಷಃ ಎಲ್ಲರಿಗೂ ಅನ್ವಯಿಸದಿದ್ದರೂ, ಬಹುಮಂದಿಗೆ ಅನ್ವಯಿಸುತ್ತದೆ.)

ಪ್ರತಿ ಮಹಿಳೆಯ ಸಾಧನೆಯ ಹಿಂದೆ ಒತ್ತಾಸೆಯಾಗಿ ನಿಂತವರು, ಸ್ಥೈರ್ಯ ತುಂಬಿದವರು ಪ್ರತಿಯೊಬ್ಬರೂ ಇರುತ್ತಾರೆ. ಹಾಗೆಯೇ ಅವರುಗಳ ನಡುವಲ್ಲೇ ಕುಹಕವಾಡಿ ನಕ್ಕವರೂ ಇರುತ್ತಾರೆ. ಇದನೆಲ್ಲಾ ಮೆಟ್ಟಿ ನಿಲ್ಲಲು ಬಹಳಷ್ಟು ಅಂತಃಶಕ್ತಿ ಬೇಕು. ಅದರ ಮಧ್ಯೆ, ತಾನೆಲ್ಲೋ ಇದರ ನಡುವಲ್ಲಿ ಕಳೆದುಹೋಗುತ್ತಿದ್ದೇನೇನೋ ಎಂಬ ಭಾವನೆಯಿಂದ ಹೊರಬಂದು ಸ್ಥೈರ್ಯ ತಳೆದು ಬದುಕು ಕಟ್ಟಿಕೊಳ್ಳಬೇಕು. ಈ ಪ್ರಸಂಗಗಳು ಉದ್ಯೋಗಸ್ಥ,ವಿವಾಹಿತ ಮಹಿಳೆಯರ ಬದುಕಿನಲ್ಲಿ ಸ್ವಲ್ಪ ಹೆಚ್ಚೇ ಇರುತ್ತವೆ. ಹೊರ ಜಗತ್ತಿಗೆ ಅವಳ ಸಾಧನೆ ಕಾಣುತ್ತದೆ ಅಷ್ಟೇ, ಅದಕ್ಕಾಗಿ ಅವಳು ಅನುಭವಿಸಿದ ಮಾನಸಿಕ ತುಮುಲಗಳು ಕಾಣದೆ ಮುಚ್ಚಿ ಹೋಗಿ ಬಿಡುತ್ತವೆ.

ಅವಳ ಅಂತರಂಗದ ತೊಳಲಾಟ ಯಾರಲ್ಲೂ ಹೇಳಲೂ ಸಾಧ್ಯವಿಲ್ಲದೆ, ಅನುಭವಿಸಲೂ ಆಗದೆ ಇರುವ ಮನಸ್ಥಿತಿ ದೇವರಿಗೇ ಪ್ರೀತಿ. ಅದರಲ್ಲೂ ತಿಂಗಳ 'ಆ ದಿನ'ಗಳಲ್ಲಿ ಇನ್ನಷ್ಟು ಅಸ್ತವ್ಯಸ್ತವಾಗಿ ಬಿಡುತ್ತದೆ. ಬದಲಾಗುತ್ತಿರುವ ಭಾವನೆಗಳ ಆಂದೋಲನ(ಮೂಡ್ ಸ್ವಿಂಗ್ಸ್), ಜೊತೆಯಲ್ಲಿ ಶುರುವಾಗುವ ಕಿರಿ-ಕಿರಿ, ಜೊತೆಗೊಂದಿಷ್ಟು ಹೊಟ್ಟೆನೋವು, ಎಲ್ಲವೂ ಸೇರಿ  ಅವಳನ್ನು ಹಣ್ಣಾಗಿಸುತ್ತವೆ. ಇದೆಲ್ಲದರ ಜೊತೆಗೆ ಆಫೀಸ್ ನ ಅನಿವಾರ್ಯ ಕೆಲಸಗಳು, ಮಕ್ಕಳ ಪ್ರಾಜೆಕ್ಟ್ ವರ್ಕ್, ಅದೇ ಸಮಯದಲ್ಲಿ ಸುಳಿವೇ ನೀಡದೆ ಬರುವ ನೆಂಟರು, ಇವೆಲ್ಲ ಅವಳಿಗಾಗಿಯೇ ಕಾಯ್ದು ಕುಳಿತಿವೆಯೇನೋ ಎಂಬಂತೆ ಒಟ್ಟಿಗೆ ಮುಗಿಬಿದ್ದು ಅವಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಡುತ್ತವೆ.

ಇನ್ನು 45-50 ರ ಆಸುಪಾಸಿನ ಮಹಿಳೆಯರದ್ದು ಇನ್ನೊಂದು ಬಗೆ. ಋತುಚಕ್ರ ನಿಲ್ಲುವ ಸಂಧರ್ಭದಲ್ಲಿ ಉಂಟಾಗುವ ಬೇಡದ ಸಂದರ್ಭಗಳು, ಅದರೊಂದಿಗೆ ನಿಶ್ಶಕ್ತಿ, ಎಲ್ಲರೂ ನನ್ನಿಂದೇನೋ ಮುಚ್ಚಿಡುತ್ತಿದ್ದಾರೇನೋ ಅಥವಾ ಎಲ್ಲರೂ ನನ್ನಿಂದ ದೂರವಾಗುತ್ತಿದ್ದಾರೇನೋ ಎನ್ನುವುದೊಂದು ಭಾವನೆ ಸಣ್ಣದಾಗಿ ಮೊಳೆಯಲು ಪ್ರಾರಂಭವಾಗಿಬಿಟ್ಟಿರುತ್ತದೆ. ಮನೆಯಲ್ಲಿನ ಕೆಲಸಗಳ ಒತ್ತಡಗಳು, ಮಕ್ಕಳ ಜವಾಬ್ದಾರಿ ಇವುಗಳೂ ಸೇರಿ  ಅವರನ್ನು ಜರ್ಜರಿತರನ್ನಾಗಿಸುತ್ತಿರುತ್ತದೆ.

ಆದರೂ ಮಹಿಳೆಯರ ಅಂತರಂಗದ ಶಕ್ತಿಯೆಂತದೆಂದರೆ, ಆಕೆ ಇವೆಲ್ಲವನ್ನೂ ದಾಟಿ ಮುಂದುವರಿಯುತ್ತಾಳೆ. ತನ್ನ ಪುಟ್ಟ ಪ್ರಪಂಚದಲ್ಲಿ ಯಾರಿಗೂ, ಯಾವ ಕೊರತೆಯೂ ಆಗದಂತೆ, ಕಾಪಾಡಿ ಬಿಡುತ್ತಾಳೆ. ತನಗೆ ಸಾವಿರಾರು ಕೈಗಳಿವೆಯೇನೋ ಎಂಬಂತೆ ದುಡಿಯುತ್ತಾಳೆ. ತನ್ನ ಮುಟ್ಟಿನ ನೋವನ್ನೂ ಬಚ್ಚಿಟ್ಟುಕೊಂಡು ಮಗುವಿನ ಸಣ್ಣ ತಲೆನೋವಿಗೆ ಸಂಕಟಪಡುತ್ತಾಳೆ. ಗಂಡನಷ್ಟೇ ಸಂಪಾದಿಸಿದರೂ, ಅವನಿಗಿಂತ ಮೇಲೆಂದು ಅಹಂಕಾರ ತೋರದೆ, ದರ್ಪ ತೋರದೆ, ಸಂಸಾರದ ರಥ ಸಾಗಿಸುತ್ತಾಳೆ. ಗಂಡಿನಷ್ಟು ಸ್ವಾತಂತ್ರ್ಯ ದೊರೆಯದಿದ್ದರೂ, ತನಗೆ ಸಿಕ್ಕಿದ ಮಿತಿಯಾದ ಸ್ವಾತಂತ್ರ್ಯದಲ್ಲೇ, ತನ್ನವರಾರಿಗೂ ತೊಂದರೆಯಾಗದಂತೆ, ತನ್ನ ಗುರಿ ಸಾದಿಸಿಯೇ ಬಿಡುತ್ತಾಳೆ. ಆದರೆ ತನ್ನ ಅಂತರಂಗವನ್ನು ಸುತ್ತಲಿನವರು ಅರ್ಥ ಮಾಡಿಕೊಂಡರೆ... ಎಷ್ಟು ಚೆಂದವಲ್ಲವೇ ಎಂಬ ಸ್ವಗತದೊಂದಿಗೆ ಮುಖದ ಮೇಲೆ ಮುಗುಳ್ನಗೆಯೊಂದನ್ನು ಮೂಡಿಸಿಕೊಂಡು ಬಿಡುತ್ತಾಳೆ.

ಅಂತಹಾ ಎಲ್ಲಾ ಮಹಿಳೆಯರಿಗೂ ನನ್ನದೊಂದು ಪುಟ್ಟ ಸಲಾಂ.

ಸಾಧ್ಯವಾದರೆ, ಇನ್ನು ಮುಂದಾದರೂ ಅವಳಿಗೆ ಸ್ವಲ್ಪ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಅಣಕವನ್ನಂತೂ ಮಾಡಬೇಡಿ. ಅವಳ ಜೊತೆಯೇ ನಿಂತು ಸಹಾಯ ಮಾಡಬೇಕೆಂದೇನೂ ಇಲ್ಲ. ನಾನಿದ್ದೇನೆಂಬ ಭರವಸೆಯ ಮುಗುಳ್ನಗೆಯೊಂದೇ ಸಾಕು ಅವಳಲ್ಲಿ ಆತ್ಮವಿಶ್ವಾಸ ಮೂಡಿಸಲು. ಆ ಒಂದು ಮುಗುಳ್ನಗು ಅವಳ ಜೀವನದಲ್ಲಿ ಖುಷಿ ತರುವುದರಲ್ಲಿ ಸಂದೇಹವೇ ಇಲ್ಲ.

-ವಿಭಾ ವಿಶ್ವನಾಥ್

ಬುಧವಾರ, ಫೆಬ್ರವರಿ 14, 2018

ಇಳೆ-ಮಳೆ

ದಿನವೆಲ್ಲ ತುಂತುರು ಹನಿಗಳು
ಜಿನುಗುತಿವೆ ಧರೆಯ ಸೋಕಲು
ತರು-ಲತೆಗಳು, ಗಿಡ-ಮರಗಳು
ಇದರ ಸೊಬಗ ಸವಿಯುತಿರಲು,
ಮಳೆಗೆ ತೊಯ್ದ ಮಣ್ಣಿನಿಂದ
ಸುಗಂಧ ಮೂಗಿಗೆ ಅಡರುತಿರಲು,
ಬೀಸಿ ಬಂದ ತಂಗಾಳಿಯು
ಮನಕೆ ತಂಪನೆರೆಯುತಿರಲು,
ನನಗೆ ಇದರಲಿ ಒಂದಾಗುವ
ಆಸೆ ಮನದಿ ಮೂಡಿಬಂದಿರಲು,
ಮಲೆನಾಡಿನ ಮಧ್ಯದಾರಿಯಲಿ
ಆಸೆಗಳೆಲ್ಲವ ಮಳೆಗೆ ತೋಯಿಸಿ,
ತನುವು ಗರಿಗೆದರಿ ನರ್ತಿಸುತಿದೆ
ಇಳೆ-ಮಳೆಗಳೊಡನೆ ಮನವು ಬೆರೆತು
ಪ್ರಕೃತಿಯಲಿ ಲೀನವಾಗಿದೆ

~ವಿಭಾ ವಿಶ್ವನಾಥ್

ಅಭಿಸಾರಿಕೆ

ಮೊಗದಲಿ ದುಗುಡ ತುಂಬಿ
ಏನ ಹುಡುಕುತ ಹೊರಟೆ?
ರೆಕ್ಕೆ ಬಿಚ್ಚಿ ಹಾರುವಂತೆ
ಮನ ಬಿಚ್ಚಿ ಮಾತನಾಡಲೊಲ್ಲೆಯೇಕೆ?

ದೂರ ತೀರದ ಪಯಣಕೆ,
ತೇಲುತ ಹೋಗುವ ಹವಣಿಕೆಯೇ?
ದೂರ ಹೊರಟು ಹೋಗುವುದಕಿಂತ
ಹತ್ತಿರವಾಗು ಸುತ್ತ ಇರುವವರ ಮನಕೆ..

ಹೋಗುವುದಾದರೆ ಹೋಗಿಬಿಡು
ನಿನ್ನ ಮನವ ಬಿಟ್ಟು ಯಾರೂ ತಡೆಯಲಾರರು ನಿನ್ನ
ನೀ ಅಭಿಸಾರಿಕೆಯೆಂದರೆ...
ನಿನ್ನ ಮನಸ್ಸೂ ಅಭಿಸಾರಿಕೆಯೇ?

~ವಿಭಾ ವಿಶ್ವನಾಥ್

ಮರವೇ ನಿನಗಿದು ತರವೇ?

ಕಣ್ಣು-ಬಾಯಿ ಬಿಟ್ಟುಕೊಂಡು
ಏನು ಮಾಡುತಿರುವೆ ಮರವೇ?
ಈ ವೇಷ ನಿನಗೆ ತರವೇ?
ಮನುಜನ ಈ ನಡತೆಯಿಂದ ಆಶ್ಚರ್ಯವೇ?
ಅವನಲೀಗ ಧನದಾಹ, ದುರಭಿಮಾನ
ಲೋಭ,ಮೋಸ,ಕ್ರೋಧ,ಕ್ರೌರ್ಯವೇ ತುಂಬಿದೆ
ನಿನ್ನಿಂದ ಪಡೆದ ಮನುಜನೇ,
ನಿನ್ನ ಕಡಿಯಲು ಹೊರಟಿಹನು
ಇದ ಕಂಡು ಆಶ್ಚರ್ಯವಾಯಿತೇನೆ?
ಇದುವೇ ನೋಡು ನಾಡಿನ ಅನೀತಿ
ಪಡೆದವರೆಲ್ಲ ಮರಳಿ ಏನನೂ ನೀಡುವುದಿಲ್ಲ
ನಿನ್ನ ತಿರುಗಿ ಪೋಷಿಸುವುದಿಲ್ಲ
ಸಿದ್ದಳಾಗು ಮರಣಶಾಸನಕೆ
ಇನ್ನಾದರು ಕಣ್ಣು-ಬಾಯಿ ಮುಚ್ಚಿ
ಅನುಭವಿಸು ಬಂದುದನು ನಿರ್ಲಿಪ್ತಳಂತೆ

~ವಿಭಾ ವಿಶ್ವನಾಥ್

ಮಂಗಳವಾರ, ಫೆಬ್ರವರಿ 13, 2018

ಹಳ್ಳಿಯ ಕಟ್ಟೆ

ಹಳೆಯ ತಲೆಗಳ ಹಳಿಯುವಂತೆ
ಹಳೆಯ ಕಟ್ಟೆ ಇದು ಎಂದು
ದೂಷಿಸದೆ ಹಿರಿ-ಕಿರಿಯರೆಲ್ಲ ಸೇರಿ
ಅರಳಿ ಕಟ್ಟೆ ಎಂದು ಪೂಜೆ ಸಲ್ಲಿಸುವ ಕಟ್ಟೆಯಿದು

ಊರಿನ ಎಲ್ಲಾ ವಿಷಯಗಳು
ಚರ್ಚೆಯಾಗುವ ಕಟ್ಟೆಯೂ
ಮನೆ-ಮನೆಯ ರಂಗಿನ ಸುದ್ದಿಗಳೂ
ರೆಕ್ಕೆ-ಪುಕ್ಕ ಪಡೆವ ಹಳ್ಳಿ ಕಟ್ಟೆಯಿದು

ಹಳ್ಳಿಯ ರಾಜಕೀಯ ರಾರಾಜಿಸುತ
ಎಲ್ಲರ ಬಾಯಲ್ಲು ಹಬ್ಬುವ ಜನ್ಮಸ್ಥಳವಿದು
ಗೋಳದೆಲ್ಲ ಸಮಾಚಾರಗಳೂ
ಕಲರವಗೊಳ್ಳುವ ಚಚ್ಚೌಕದ ಹಳ್ಳಿ ಕಟ್ಟೆಯಿದು

ಬುಗುರಿ ಆಡಲು ಕಿರಿಯರು
ಸುದ್ದಿ ಓದುತ ಹಿರಿಯರೂ
ನ್ಯಾಯ ತೀರ್ಮಾನಕೆ ಎಲ್ಲರೂ
ನೆಚ್ಚಿಕೊಂಡಿರುವ ಮೆಚ್ಚಿನ ಕಟ್ಟೆಯಿದು

~ವಿಭಾ ವಿಶ್ವನಾಥ್

ಆಡುವೆವು ಆಟವ

ಗೆಳೆಯರೆಲ್ಲ ಒಂದುಗೂಡಿ
ಬಳಗವನ್ನು ಮಾಡಿಕೊಂಡು
ಮಸ್ತಿಯಲಿ  ಕಲಿಯುವೆವು ಪಾಠವ
ಅದರೊಂದಿಗೆ  ಆಡುವೆವು ಆಟವ

ಇಂದು ಗೋಲಿ, ನಾಳೆ ಗಜ್ಜುಗ
ಇನ್ನೊಮ್ಮೆ ಚಿಣ್ಣಿ-ದಾಂಡು,ಬುಗುರಿ
ಹೀಗೇ ಬೆಳೆಯುತಿವುದು ಆಟದ ಪಟ್ಟಿ
ಜೊತೆಗೆ ಗೆಳೆಯರ ಪಟ್ಟಿಯೂ

ಬಿಸಿಲು-ಮಳೆ ಏನೇ ಬರಲಿ
ಮನದಣಿಯೆ ಆಡುವೆವು ಆಟವ
ಸೋಲು - ಗೆಲುವು ಏನೇ ಇರಲಿ
ಎಲ್ಲರೂ ಇರುವೆವು ಜೊತೆಯಲಿ

ಆಟದಲಿ ಗೆಲ್ಲುವುದೇ ಗೆಲುವಲ್ಲ
ಮತ್ತೊಬ್ಬರ ಮನವ ಗೆಲ್ಲುವುದೇ ಗೆಲುವೆಂದು
ಹೀಗೇ ಒಂದೊಂದು ಆಟಗಳೂ ಕಲಿಸುತಿಹವು
ಮೌಲ್ಯಯುತ  ಜೀವನದ ಪಾಠವ

~ವಿಭಾ ವಿಶ್ವನಾಥ್

ನನ್ನ ಪಾಲಿನ ದೇವತೆ

ಬೀದಿಯಲಿ ಯಾರೋ ಬಿಸುಟಿ ಹೋದ,
ಹಸುಳೆಯ ಉಸಿರಿಗೆ ಉಸಿರು ಕೊಟ್ಟಳು
ಅದಕೊಂದು ಚೆಂದದ ಹೆಸರನಿಟ್ಟಳು
ಲಾಲಿಸಿ ಪಾಲಿಸಿ ಮುದ್ದಿಸಿದಳು

ನನ್ನ ಮಡಿಲಲಿ ಬೆಚ್ಚಗೆ ಜಾಗಕೊಟ್ಟಳು
ತಾನು ಉಣ್ಣದೆ ಮನಗೆ ಉಣಿಸಿದಳು
ಭಯವಾದಾಗ ಧೈರ್ಯ ತುಂಬಿದಳು
ಬದುಕಲು ಆತ್ಮಸ್ಥೈರ್ಯ ತುಂಬಿದಳು

ಪ್ರಾಮಾಣಿಕತೆಯೇ ದೇವರೆಂದು ಹೇಳಿದಳು
ತುಟಿಯಲೆಂದೂ ಮುಗುಳ್ನಗೆಯ ಬಿಡದವಳು
ಕಡುಕತ್ತಲಿನಲ್ಲಿಯೂ ಬೆಳಕು ತೋರಿದವಳು
ದಿಕ್ಕು ತಪ್ಪಿದಾಗ ದಾರಿದೀಪವಾದವಳು

ನನಗಾಗಿ ತನ್ನೆಲ್ಲಾ ಸುಖವ ಬಲಿಕೊಟ್ಟವಳು
ಲೋಕದ ಕಣ್ಣಿಗೆ ದುರಂತ ನಾಯಕಿಯಾದಳು
ಆದರೆ ನನ್ನ ಪಾಲಿನ ದೇವತೆಯವಳು
ಆ ದೇವತೆಯ ಹೆಸರೇ "ಅಮ್ಮ"

~ವಿಭಾ ವಿಶ್ವನಾಥ್

ಮಾಯಾಜಾಲ

ನಿನ್ನ ಮಾಯೆಗೆ ಎಲ್ಲರೂ ಸಿಲುಕುವರೇನು
ಓ ಮರುಳೇ...?
ಅರಿವಾಗಿದೆ ನಿನ್ನ ಬಣ್ಣದಜಾಲ
ಸಿದ್ದವಾಗಿದೆ ಕಾಲವೇ
ನಿನ್ನ ಮುಖವಾಡವನು ಕಳಚಲು
ನೀ ಮಾಡಿದ ಮೋಸವೇ,
ತಿರುಗಿ ನಿಂತಿದೆ ನಿನ್ನ ನುಂಗಲು.
ಕಳಚಿ ಬಿದ್ದಿದೆ ನಿನ್ನ ಭ್ರಮಾ ಸಾಮ್ರಾಜ್ಯ

-ವಿಭಾ ವಿಶ್ವನಾಥ್

ಬಯಕೆ

ಓ ಮರುಳೇ..,
ಸಿಗದಿದ್ದನ್ನು ಬಯಸುವಿಯೇಕೆ?
ಸಿಗದಿದ್ದಕ್ಕೆ ಕೊರಗುವಿಯೇಕೆ?
ಬಯಸಿದ್ದೆಲ್ಲಾ ದೊರೆತರೆ ,
ಬೆಲೆಯು ಉಂಟೇ ಬಯಕೆಗೆ?
ಸಿಗಬೇಕೆಂದಿದ್ದರೆ ಸಿಕ್ಕೇ ಸಿಗುವುದು
ತಾಳ್ಮೆಯು ಇರಲಿ ಜೀವನದಿ

-ವಿಭಾ ವಿಶ್ವನಾಥ್