ಗುರುವಾರ, ನವೆಂಬರ್ 14, 2019

ಮಾಸದ ದಾಸಸಾಹಿತ್ಯ


ಸುಮಾರು 12 ರಿಂದ 15 ನೆ ಶತಮಾನದಲ್ಲಿ, ನಡುಗನ್ನಡದಲ್ಲಿ ಪ್ರಸಾರವಾದ ಸಾಹಿತ್ಯಗಳು ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ. ದಾಸಸಾಹಿತ್ಯವು ಭಕ್ತಿಯನ್ನು ಮೂಲವಾಗಿ ಧ್ವನಿಸುತ್ತಾ, ವೇದಗಳ ಮುಂದುವರಿದ ಭಾಗಗಳಂತೆ ಭಾಸವಾಗುತ್ತಾ ಜನಸಾಮಾನ್ಯರಿಗೂ ತಲುಪುತ್ತಿವೆ.

ಹರಿದಾಸರು, ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶರು ಮುಂತಾದವರಿಂದ ದಾಸಸಾಹಿತ್ಯ ರೂಪುಗೊಂಡಿಡ್ಡರೂ ಪುರಂದರದಾಸರು ಮತ್ತು ಕನಕದಾಸರು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾಸ ಸಾಹಿತ್ಯವು  ಸಾಂಗವಾಗಿ ಹಾಡುವಂತೆ ರೂಪಿತವಾಗಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಕೀರ್ತನೆಗಳ ರೂಪದಲ್ಲಿ ಇವು ಇಂದಿಗೂ ಪ್ರಸ್ತುತವಾಗಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಇವುಗಳಿಗೆ ವಿಶಿಷ್ಟ ಸ್ಥಾನವಿದೆ. ಪುರಂದರದಾಸರು ಕರ್ನಾಟಕದ ಮೂಲಪುರುಷರೂ ಹೌದು. ಜೀವನದಿಂದ ತ್ಯಾಗದ ಪಾಠ ಕಲಿತ ಪುರಂದರದಾಸರು, ಅಹಿಂಸೆಯ ಪಾಠ ಕಲಿತ ಕನಕದಾಸರು ಇಬ್ಬರೂ ಜನರಿಗೆ ಮುಕ್ತಿ ಮಾರ್ಗವನ್ನು ಭೋಧಿಸುವ ಉತ್ತಮ ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯವನ್ನು ನೀಡಿದ್ದಾರೆ.

ಆಧ್ಯಾತ್ಮ, ತತ್ವ, ನೀತಿಗಳನ್ನು ಕ್ಲಿಷ್ಟವಿಲ್ಲದ ಪದಗಳಲ್ಲಿ ಹೇಳುತ್ತಾರೆ. ಅದರಲ್ಲಿ ಕೆಲವು ಪದ್ಯಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ.

"ಅಡಿಗೆಯನ್ನು ಮಾಡಬೇಕಣ್ಣ, ನಾನೀಗ ಜ್ಙಾನದ ಅಡುಗೆಯನ್ನು ಮಾಡಬೇಕಣ್ಣ" ಎನ್ನುತ್ತಾ ಹಸಿವು, ಅಡುಗೆಯನ್ನು ಜ್ಙಾನಕ್ಕೆ ಹೋಲಿಸುತ್ತಾರೆ ಕನಕದಾಸರು. "ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ" ಎನ್ನುತ್ತಾ ಬದುಕನ್ನು ಕೃಷಿಗೆ ಹೋಲಿಸುತ್ತಾ ಸಂಬಂಧಗಳನ್ನುಉ ಒಗ್ಗೂಡಿಸ ಹೊರಡುತ್ತಾರೆ. "ಕುಲ ಕುಲ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?" ಎಂದು ಪ್ರಶ್ನಿಸುತ್ತಾ ಧರ್ಮ, ಜಾತಿ, ಕುಲಗಳ ಪರಿಕಲ್ಪನೆಯನ್ನು ಅಲ್ಲಗಳೆಯುತ್ತಾ "ಆತ್ಮಕ್ಕೆ ಕುಲವಿಲ್ಲ" ಎಂದೆನ್ನುತ್ತಾರೆ. "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ?" ಎನ್ನುತ್ತಾ ಆತ್ಮವಿಮರ್ಶೆ ಹಚ್ಚುತ್ತಾರೆ.

"ಏನು ಬೇಡಲೋ ದೇವ ನಿನ್ನ" ಎನ್ನುವ ವ್ಯಾಸರಾಯರು ಕೊಡುವವನೂ ನೀನೇ, ನಿನ್ನ ಹತ್ತಿರ ಬೇಡುವುದೇನಿದೆ ಎಂದು ಪ್ರಶ್ನಿಸುತ್ತಾರೆ. ಇವರ ಪುರಂದರದಾಸರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಎಲ್ಲರೊಳಗೊಂದಾಗಿ ಬದುಕುತ್ತಾ, ಜನಸಾಮಾನ್ಯರ ನಡುವೆಯೇ ಬದುಕಿದವರು. ಸುಳಾದಿ, ಉಗಾಭೋಗ,ಕೀರ್ತನೆಗಳ ಮೂಲಕ ತಮ್ಮ ಭೋಧನೆಯನ್ನು ಪಸರಿಸುತ್ತಾ ಜನಮಾನಸದಲ್ಲಿ ಶಾಶ್ವತವಾಗಿರುವವರು.

"ಈಸಬೇಕು ಇದ್ದು ಜೈಸಬೇಕು ಹೇಸಿಗೆ ಸಂಸಾರದಲ್ಲಿ, ಆಸೆ ಲೇಶ ಇಡದಾಂಗೆ ತಾಮರಸಜಲದಂತೆ" ಎನ್ನುತ್ತಾ ನೀರಿನ ಮೇಲೆ ಪದ್ಮಪತ್ರೆಯಂತೆ ಬದುಕು ಎನ್ನುತ್ತಾರೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ" ಎನ್ನುತ್ತಾ ಮಾತು ಹೇಗಿರಬೇಕೆಂಬ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ. "ಎಲ್ಲಾನು ಬಲ್ಲೆನೆಂಬುವಿರಲ್ಲ, ಅವಗುಣ ಬಿಡಲಿಲ್ಲ" ಎಂದೆನ್ನುತ್ತಾ ತಾವೇ ಮೇಧಾವಿಗಳೆಂದು ಮೆರೆಯುತ್ತಿರುವವರಿಗೆ ಚಾಟಿ ಏಟು ನೀಡುತ್ತಾರೆ. "ನಿಂದಕರಿರಬೇಕು.. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಂಗೆ" ಎನ್ನುತ್ತಾ ಕೆಟ್ಟತನದಲ್ಲೂ ಒಳ್ಳೆಯತನವನ್ನು ಹುಡುಕಲು ಹೇಳಿಕೊಡುತ್ತಾರೆ. "ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ" ಎನ್ನುತ್ತಾ ಮೂಲಗುಣ ಸುಟ್ಟರೂ ಹೋಗದು, ಅಂತಹಾ ಬದಲಾವಣೆಗಳು ನಿರರ್ಥಕ ಎನ್ನುತ್ತಾರೆ. "ನೋಡದಿರು, ಪರಸ್ತ್ರೀಯರ ನೋಡಿದರೆ ಕೇಡಹುದು ತಪ್ಪದಿದಕೋ" ಎನ್ನುತ್ತಾ ಪುರಾಣ್ದ ವಾಲಿ, ರಾವಣ, ಇಂದ್ರರ ಜೀವನವನ್ನು ನೆನಪಿಸುತ್ತಾ ಬುದ್ದಿ ಹೇಳುತ್ತಾರೆ. ಪರ ಧನ ಮತ್ತು ಲೋಭಿಗಳಿಗೆ "ದುಗ್ಗಾಣಿ ಎಂಬುದು ಬಲು ಕೆಟ್ಟದಣ್ಣ" ಎನ್ನುತ್ತಾ ಹಣದ ವರ್ಜನೆಗೆ ಬುದ್ದಿ ಮಾತು ಹೇಳುತ್ತಾರೆ. "ಜಪವ ಮಾಡಿದರೇನು, ತಪವ ಮಾಡಿದರೇನು, ಕಪಟಗುಣ ವಿಪರೀತಕಲುಷವಿದ್ದವರು" ಎನ್ನುತ್ತಾ ಮೇಲಿನ ತೋರಿಕೆಯ ಶುದ್ದತೆಗಿಂತ, ಅಂತರಂಗದ ಶುದ್ದತೆ ಮುಖ್ಯ ಎನ್ನುತ್ತಾರೆ. "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ" ಎಂಬ ಜೀವನದ ಪರಮ ಸತ್ಯವನ್ನು ಬಿಚ್ಚಿಡುತ್ತಾರೆ.

ಈ ತತ್ವದ ನುಡಿಗಳು ಸಾರ್ವಕಾಲಿಕ ನುಡಿಗಳಂತೆ ಧ್ವನಿಸುತ್ತವೆ, ಇವುಗಳ ಮೂಲಕ ಅವರು ಜೀವನ ಮೌಲ್ಯವನ್ನು ತಿಳಿಸುತ್ತಾ, ಎಲ್ಲರಲ್ಲೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾರೆ. ಸಂಸಾರದ ವೈಯಕ್ತಿಕ ಬಂಧನವನ್ನು ತೊರೆದು, ಜಪ-ತಪಗಳಿಂದ ಮುಕ್ತಿ ಎನ್ನುತ್ತಾ ತಮ್ಮ ವೈಯಕ್ತಿಕ ಜೀವನಕ್ಕಷ್ಟೇ ಬದುಕನ್ನು ಮುಡಿಪಾಗಿರಿಸದೆ, ಸಮಾಜದ ಸಮಸ್ಯೆಗಳನ್ನು, ಮೂಡನಂಬಿಕೆಗಳನ್ನು ಹೊಡೆದೋಡಿಸುತ್ತಾ ಜೀವಂತ ಉದಾಹರಣೆಯಾದರು. ಆತ್ಮ ಶುದ್ದಿಗೆ ಮಾರ್ಗ ತೋರುತ್ತಾ ಸಮಾಜವನ್ನು ಸುಧಾರಿಸಿದರು.

ದಾಸಸಾಹಿತ್ಯದ ದಾಸರ ಪದಗಳು ದೇವರನಾಮಗಳೆಂದೂ ಪ್ರತೀತಿಯಾಗಿವೆ. ಈ ದಾಸರ ಪದಗಳನ್ನು ಇಂದಿಗೂ ತಮಿಳು ನಾಡಿನಲ್ಲಿ ಸಂಗೀತ ಕಛೇರಿಯ ಕೊನೆಯಲ್ಲಿ ಹಾಡಿಯೇ ಹಾಡುತ್ತಾರೆ. ಬರೀ ತತ್ವವಷ್ಟೇ ಅಲ್ಲ, ಸವಿನುಡಿಯಂತೆ ಭಾಸವಾಗುವ ಇವು ಕೆಲವೊಮ್ಮೆ ಛಾಟಿ ಏಟುಗಳಂತೆಯೂ ಅನ್ನಿಸುತ್ತವೆ. ಇನ್ನು ಕೆಲವು ಒಗಟಿನಂತೆ ಒಳಾರ್ಥವನ್ನು ಹೊಂದಿವೆ. ಪ್ರಸ್ತುತ ದಿನಗಳ ಸಾಮಾಜಿಕ ಪರಿಸ್ತಿತಿಗೂ ಇವು ಹೊಂದಿಕೆಯಾಗುವಂತಿವೆ. ಈಗಿನ ಪರಿಸ್ಥಿತಿ ಅಂದಿಗಿಂತ ಕೊಂಚ ಭಿನ್ನವಾಗಿರಬಹುದಷ್ಟೇ.. ಆದರೆ ಮೌಡ್ಯ, ಪರ ಸ್ತ್ರೀ ಮತ್ತು ಹೊನ್ನು-ಕಾಸಿಗೆ ಆಶಿಸುವುದು ಇನ್ನೂ ಕಡಿಮೆಯಾಗಿಲ್ಲ. ಕೇಳುವವರು ಇದನ್ನು ಅರಿತು ಆಚರಿಸಿದರೆ ಅವರ ಸಾಮಾಜಿಕ ಕಳಕಳಿಗೆ ಉತ್ತಮ ಪ್ರತಿಫಲ ಸಿಕ್ಕಂತಾಗುತ್ತದೆ. ಮತ್ತು ದಾಸಸಾಹಿತ್ಯ ಮತ್ತು ಅದರ ಹರಿಕಾರರು ಬದುಕಿನಲ್ಲಿ ಮಾಸದೆ ಉಳಿದುದರಲ್ಲಿ ಸಂಶಯವೇ ಇಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ನವೆಂಬರ್ 10, 2019

ಒಲವಿನ ಜೊತೆ ಮಿಳಿತ


ಅನ್ಯಮನಸ್ಕಳಾಗಿ ಸಿರಿಶಾ ಹೊರಜಗುಲಿಯ ಮೇಲೆ ಕುಳಿತು ತುಳಸಿಕಟ್ಟೆಯ ಮೇಲೆ ಹಚ್ಚಿಟ್ಟ ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಳು . ಎಲ್ಲೆಡೆಯೂ ಬೆಳಕಿತ್ತು ಆದರೆ ಸಿರಿಶಾಳ ಮನದಲ್ಲಿ ಮಾತ್ರ ಕಾರ್ಗತ್ತಲು. ಎಲ್ಲವೂ ಸರಿ ಇದ್ದಿದ್ದರೆ ಅವಳು ತನ್ನ ಗಂಡನೊಟ್ಟಿಗೆ ಅವನ ಮನೆಯಲ್ಲಿರುತ್ತಿದ್ದಳು. ಆಡಲೂ ಆಗದೆ, ಅನುಭವಿಸಲೂ ಆಗದೆ ಸಿರಿಶಾ ನಗೆಯ ಮೇಲ್ಮುಸುಕು ಹೊದ್ದು ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಾಳೆ. ಮನದಲ್ಲಿ ಅಲ್ಲೋಲಕಲ್ಲೋಲವೇ ನಡೆಯುತ್ತಿದ್ದರೂ ಅದನ್ನು ಮರೆಮಾಚಿ ನಗುವುದು ಹೆಣ್ಣುಮಕ್ಕಳಿಗೆ ಹೊಸದೇನೂ ಅಲ್ಲವಲ್ಲ. ಸಿರಿಶಾಳಾ ಮನದೊಳಗೆ ಆಲೋಚನೆಗಳ ಮಹಾಪೂರವೇ ಭೋರ್ಗರೆಯುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ವೆಂಕಟರಾಯರ ಧ್ವನಿ. "ಮಗೂ, ಹೊರಗಡೆ ಒಬ್ಬಳೇ ಯಾಕೆ ಕೂತಿದ್ದೀಯ? ಬಾ ಇಲ್ಲಿ" ಎಂದರು. ಸಿರಿಶಾ ದಿಗ್ಗನೆದ್ದು "ಬಂದೆ ಅಪ್ಪಾ, ಸುಮ್ಮನೆ ಕೂತಿದ್ದೆ ಅಷ್ಟೇ.." ಎನ್ನುತ್ತಾ ಒಳನಡೆದಳು. "ಕಾಫಿ ಏನಾದರೂ ಬೇಕಿತ್ತೇನಪ್ಪಾ?" ಎಂದಳು. "ಇಲ್ಲಮ್ಮಾ, ಹಾಗೇನಿಲ್ಲ. ಬಾ ಕೂತ್ಕೋ. ನಿನ್ನ ಸಂಗೀತ ಕೇಳಿ ಬಹಳ ದಿನ ಆಯಿತು. ಯಾಕೋ ಹಾಡು ಕೇಳೋ ಆಸೆಯಾಗಿದೆ. ಹಾಡ್ತೀಯೇನಮ್ಮಾ?" ಎಂದರು. "ಆಯ್ತಪ್ಪ, ಹಾಡ್ತೀನಿ" ಎಂದಳು.
"ಲೋಕದ ಕಣ್ಣಿಗೆ ರಾಧೆಯು ಕೂಡಾ
ಎಲ್ಲರಂತೆ ಒಂದು ಹೆಣ್ಣು"
ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡ್ತಾ ಇದ್ದಳು. ಮೈ ಮರೆತು ಮಗಳು ಹಾಡ್ತಾ ಇದ್ದರೆ, ಲೋಕವನ್ನೇ ಮರೆತು ಅಪ್ಪ ಕೇಳ್ತಾ ಇದ್ದರು.

ಸಿರಿಶಾಳದ್ದು ದೈವದತ್ತವಾಗಿ ಬಂದ ಕಂಠಸಿರಿ. ಸಂಗೀತ ಶಾಲೆಗೆಲ್ಲಾ ಹೋಗಿ ಸಂಗೀತ ಕಲಿತಿರಲಿಲ್ಲ. ರೇಡಿಯೋ ಕೇಳುತ್ತಾ, ಕೇಳುತ್ತಾ ಹಾಗೇ ಧ್ವನಿ ಸೇರಿಸುತ್ತಾ ಇದ್ದಳು. ವೆಂಕಟರಾಯರಿಗೆ ಇವಳನ್ನು ಸಂಗೀತ ಶಾಲೆಗೆ ಸೇರಿಸುವ ಆಸೆ. ಆದರೆ, ಅವರ ಆಸೆ ಈಡೇರಿರಲಿಲ್ಲ ಇದಕ್ಕೆ ಕಾರಣ ಅವರ ಹೆಂಡತಿ ಶಾಂತಲಾ. "ಅವಳಿಗೆ ಅದೆಲ್ಲಾ ಯಾಕೆ? ಅದಕ್ಕೆ ಸುರಿಯೋ ದುಡ್ಡಲ್ಲಿ ಅವಳಿಗೆ ಒಡವೆ ಮಾಡಿಸಿದರೆ ಮುಂದಕ್ಕೆ ಉಪಯೋಗಕ್ಕಾದರೂ ಬರುತ್ತೆ. ಹಾಡು, ಕುಣಿತ ಅಂತಾ ಕಲಿತು ಊರೂರು ತಿರುಗುವುದೇನೂ ಬೇಡ ಅವಳು" ಎಂದರು. ಕೈಯಲ್ಲಿದ್ದದ್ದನ್ನು ತೋರಿಸಿ ಏನೆಲ್ಲಾ ಹೇಳಬೇಕೆಂದುಕೊಂಡು ಬಂದಿದ್ದ ಸಿರಿಶಾಳ ಮಾತು ಅಂದು ಗಂಟಲಲ್ಲೇ ಉಳಿಯಿತು.  ಏನೋ ಸದ್ದಾಯಿತೆಂದು ರಾಯರು ತಿರುಗಿ ನೋಡಿದರೆ, ಸಿರಿಶಾಳ ಕೈಯ್ಯಲ್ಲಿದ್ದ ಪ್ರಶಸ್ತಿ ಫಲಕ ಕೆಳಗೆ ಬಿದ್ದಿತ್ತು. ರಾಯರಿಗೆ ಮತ್ತೇನೂ ಹೇಳಲೂ ತೋಚಲಿಲ್ಲ. ಹೆಂಡತಿಯ ಮಾತಿಗೆ ಅವರು ಪ್ರತಿ ಮಾತನಾಡಿದ್ದೇ ಇಲ್ಲ. ಇತ್ತ ಸಿರಿಶಾಳ ಸಂಗೀತದ ಕನಸು ಸಹಾ ನೆಲಕ್ಕೆ ಬಿದ್ದು ಮಣ್ಣಾಗಿತ್ತು. ಆದರೆ, ಸಿರಿಶಾ ಇಷ್ಟಕ್ಕೆಲ್ಲಾ ಕೈ ಚೆಲ್ಲಿ ಕೂರಲಿಲ್ಲ. ರೇಡಿಯೋದಲ್ಲಿ ಬರುವ ಗಾಯನಗಳನ್ನು ಆಲಿಸುತ್ತಾ ಅಲ್ಲಿ ಹಾಡುವ ಗಾಯಕರನ್ನೇ ಗುರುವೆಂದು ಸ್ವೀಕರಿಸಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಳು.

ಶಾಂತಲಾ ಸಿರಿಶಾಳಿಗೆ ಮಲತಾಯಿಯೇನಲ್ಲ. ಆದರೆ ಶಾಂತಲಾ ಬೆಳೆದು ಬಂದ ವಾತಾವರಣ ಮತ್ತು ಆ ಕಾಲಘಟ್ಟದ ಸಂಕುಚಿತ ಮನೋಭಾವ ಅವಳಲ್ಲಿಯೂ ಬೆಳೆದು ಬಂದಿತ್ತು ಅಷ್ಟೇ. ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆ ಸೇರಿಸಿದರೆ ಅಲ್ಲಿ ಅವರು ಒಳ್ಳೆಯತನದಿಂದ ನಡೆದುಕೊಂಡರೆ ಮನೆಗೆ ಗೌರವ. ಇದೇ ತನ್ನ ಜೀವನದ ಪರಮಗುರಿ ಎಂಬಂತೆ ಮಗಳಿಗೆ ಸಂಸ್ಕಾರದ ಪಾಠಗಳನ್ನು ಮಾಡುತ್ತಿದ್ದರು. ಸಿರಿಶಾ ಹಾಡು ಹೇಳುವುದಕ್ಕೆ ಅವರ ಅಭ್ಯಂತರವಿಲ್ಲ ಆದರೆ ತರಬೇತಿ, ಕಛೇರಿ ಇವೆಲ್ಲವನ್ನೂ ಅವರು ಒಪ್ಪುತ್ತಿರಲಿಲ್ಲ.

ಸಿರಿಶಾ ವೆಂಕಟರಾಯರು ಮತ್ತು ಶಾಂತಲಾರವರ ಏಕೈಕ ಸಂತಾನ, ಒಬ್ಬಳೇ ಮಗಳಾದರೂ ಹೆಣ್ಣು ಎಂಬ ತಾತ್ಸಾರ ತೋರಿರಲಿಲ್ಲ. ಸಿರಿಶಾ ಕೃಷ್ಣ ಸುಂದರಿ. ಆದರೆ ಗುಣವಂತೆ, ಲಕ್ಷಣವಂತೆ. ಹಾಡು ಹೇಳುವುದು ಮಾತ್ರವಲ್ಲ, ಓದಿನಲ್ಲಿಯೂ ಚುರುಕು. ಕೊಂಚ ಭಾವಜೀವಿ. ಜೊತೆಗಾರರಿಲ್ಲದೇ ಒಬ್ಬಳೇ ಮಗಳಾಗಿ ಬೆಳೆದಿದ್ದಕ್ಕೋ ಅಥವಾ ತನ್ನ ಆಸೆಗಳನ್ನು ಅದುಮಿ ಬದುಕುತ್ತಿರುವುದಕ್ಕೋ ಕೊಂಚ ಅಂತರ್ಮುಖಿ ಎನ್ನಿಸುವಂತಿದ್ದರೂ ಎಲ್ಲರ ಮನಸ್ಸನ್ನು ಅರ್ಥ ಮಾಡಿಕೊಂಡು ಅದರಂತೆಯೇ ನಡೆದುಕೊಳ್ಳುತ್ತಿದ್ದಳು. ರೂಪ ಅಮ್ಮನಂತಿದ್ದರೂ ಗುಣ ತಂದೆಯಂತೆ. ಹೆಚ್ಚು ಎನ್ನಿಸುವಷ್ಟೇ ಮೃದು. ಆದರೆ, ಮತ್ತೊಬ್ಬರು ಕಷ್ಟ ಎಂದಾಗ ತನಗೆ ಎಷ್ಟೇ ಕಷ್ಟವಾದರೂ ಲೆಕ್ಕಿಸದೆ ಸಹಾಯಕ್ಕೆ ನಿಲ್ಲುತ್ತಿದ್ದಳು.

ಕಾಲಚಕ್ರ ಮೆಲ್ಲಮೆಲ್ಲನೆ ಸರಿಯುತ್ತಲಿತ್ತು. ಎಲ್ಲವೂ ಬದಲಾದರೂ ಬದಲಾಗದವಳು ಸಿರಿಶಾ ಮಾತ್ರ. ಸರಳತೆ, ಸಂಸ್ಕೃತಿ, ಪರೋಪಕಾರಿ ಗುಣವನ್ನು ಬಿಟ್ಟಿರಲಿಲ್ಲ. ಅಮ್ಮನ ವಿರೋಧದ ನಡುವೆಯೇ ಡಿಗ್ರಿ ಮುಗಿಸಿದ್ದಳಾದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣ ಶಾಂತಲಾರ ಮತ್ತದೇ ಧೋರಣೆ.. "ಮದುವೆ ಆದ ಮೇಲೆ ನಿನ್ನ ಗಂಡನನ್ನು ಕೇಳಿಕೊಂಡು ಕೆಲಸಕ್ಕೆ ಹೋಗು. ಈಗ ಅದೆಲ್ಲಾ ಏನೂ ಬೇಡ.ನೀನು ಸಂಪಾದಿಸುವ ದುಡ್ಡಿನಿಂದ ಇಲ್ಲಿ ಯಾರೂ ಜೀವನ ಮಾಡಬೇಕಾಗಿಲ್ಲ." ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು. ಹಾಗೆಂದು ಸಿರಿಶಾ ಸುಮ್ಮನೆಯಂತೂ ಕುಳಿತುಕೊಳ್ಳುತ್ತಿರಲಿಲ್ಲ. ಮನೆಗೆಲಸ ಮುಗಿಸಿ, ಹಾಡುತ್ತಾ ಇಲ್ಲವೇ ಪುಸ್ತಕ ಹಿಡಿದು ಕುಳಿತರೆ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅಪ್ಪ-ಮಗಳದ್ದು ಒಂದೇ ಅಭಿರುಚಿಯಾಗಿದ್ದರಿಂದ ಪುಸ್ತಕದ ಕುರಿತು ಚರ್ಚೆ ನಡೆಯುತ್ತಿತ್ತು. ಹೆಸರಿಗಷ್ಟೇ ಅದು ಚರ್ಚೆ. ಅಲ್ಲಿ ಬರೀ ರಾಯರದ್ದೇ ಮಾತು. ಸಿರಿಶಾಳದ್ದು "ಹೂಂ ಅಥವಾ ಹೂಂಹೂಂ", "ಹೌದು ಅಥವಾ ಇಲ್ಲ". ಸಿರಿಶಾಳ ಭಾವಲೋಕ, ಮಾತಿನ ಲೋಕವೆಲ್ಲಾ ಅನಾವರಣಗೊಳ್ಳುತ್ತಿದ್ದದ್ದು ಅವಳ ಡೈರಿಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಭಾವನೆಗಳಿಗೆ ಬಣ್ಣ ಹಚ್ಚಿ, ಗರಿಗೆದರಿ ನರ್ತಿಸುವಂತೆ ಮಾಡುತ್ತಿದ್ದದ್ದು ಇಲ್ಲೇ. ಸಾಕಾರಗೊಳ್ಳದ ಕನಸುಗಳ ಲೋಕವೇ ಮಲಗಿತ್ತು.

ಬದುಕು ಸರಾಗವಾಗಿ ಸಾಗುತ್ತಿದ್ದರೆ ದೇವರಿಗೂ ಅಸೂಯೆಯಾಗುತ್ತದೇನೋ.. ಶಾಂತಲಾರ ಆರೋಗ್ಯ ಮೆಲ್ಲನೆ ಕೆಡುತ್ತಾ ಬರುತ್ತಿತ್ತು, ಅವರಂತೂ ಪೂರ್ಣ ಹಾಸಿಗೆ ಹಿಡಿದರು. ವೈದ್ಯರಿಗೂ ಖಾಯಿಲೆಯ ಪತ್ತೆ ಮಾಡಲಾಗಲಿಲ್ಲ. ಎಲ್ಲಾ ಕೆಲಸವೂ ಸಿರಿಶಾಳ ಮೇಲೆಯೇ ಬಿದ್ದಿತ್ತು. ಶಾಂತಲಾರ ವರಾತ ಹೆಚ್ಚಾಗಿತ್ತು. "ನಾನು ಸಾಯುವ ಮುಂಚೆ ಅವಳ ಮದುವೆ ನೋಡಬೇಕು." ಅದೇ ಸಮಯಕ್ಕೆ ಶಾಂತಲಾರನ್ನು ನೋಡಲು ಬಂದ ಅವರ ಅಣ್ಣನಿಗೆ ಸಿರಿಶಾ ಕಣ್ಣಿಗೆ ಬಿದ್ದಳು. ಶಾಂತಲಾರ ಮುಂದೆ ತಮ್ಮ ಮಗ ಸಾಕೇತ್ ನಿಗೆ ಸಿರಿಶಾಳನ್ನು ತಂದುಕೊಳ್ಳುವ ಕುರಿತು ಪ್ರಸ್ತಾಪವಾಯಿತು. ಆಸ್ತಿ ವಿವಾದಗಳಿಂದ ಕೊಂಚ ದೂರವೇ ಇದ್ದ ತವರು ಮನೆಯವರೊಂದಿಗೆ ನಂಟು ಬೆಸೆಯಲು ಬಂದ ಈ ಸಂಬಂಧವನ್ನು ಕಳೆದುಕೊಳ್ಳಲು ಶಾಂತಲಾ ಸಿದ್ದರಿರಲಿಲ್ಲ. ಸಿರಿಶಾಳ ಒಪ್ಪಿಗೆಯನ್ನೂ ಕೇಳದೆ ಈ ಮದುವೆಗೆ ಒಪ್ಪಿಗೆ ಇತ್ತರು. ರಾಯರದ್ದೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ.     

ಶಾಂತಲಾ ಅವರ ಅಣ್ಣನ ಕುಟುಂಬ ವಾಸವಾಗಿದ್ದು ಹಳ್ಳಿಯಲ್ಲಿಯೇ ಆದರೂ ಮಗ ಸಾಕೇತ್ ವಾಸವಾಗಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗ ಮೇಲಾಗಿ ಸಂಸ್ಕಾರವಂತ. ಯಾರೇ ಆದರೂ ಒಪ್ಪುವಂತಹಾ ಹುಡುಗ. ಆದರೆ ಏಕೋ ಮದುವೆ ಬೇಡ ಬೇಡ ಎನ್ನುತ್ತಾ ಮುಂದೂಡುತ್ತಲೇ ಬಂದಿದ್ದ. ಯಾವ ಹುಡುಗಿಯನ್ನು ತೋರಿಸಿದರೂ ಯಾವುದಾದರೂ ಒಂದು ಕಾರಣ ಕೊಟ್ಟು ನಿರಾಕರಿಸಿಬಿಡುತ್ತಿದ್ದ. ಶಾಂತಲಾರ ಪರಿಸ್ಥಿತಿ ಮತ್ತು ಎರಡು ಕುಟುಂಬಗಳೂ ಒಂದಾಗಲೂ ಇದ್ದ ಅವಕಾಶ ಇದು ಎಂಬ ಕಾರಣವನ್ನು ಮುಂದಿಟ್ಟು ಸಾಕೇತ್ ನನ್ನು ಅವನ ತಂದೆ ಮದುವೆಗೆ ಒಪ್ಪಿಸಿದ್ದರು.

ತರಾತುರಿಯಲ್ಲಿಯೇ ಮದುವೆ ನಿಶ್ಚಯವಾಗಿತ್ತು. ವಧು-ವರರಿಬ್ಬರೂ ಪರಸ್ಪರ ನೋಡಿದ್ದು ಮದುವೆ ಮಂಟಪದಲ್ಲಿಯೇ.. ಪರಸ್ಪರರ ಇಷ್ಟಾನಿಷ್ಟಗಳ ಅರಿವಿಲ್ಲದ ಅಪರಿಚಿತರಿಬ್ಬರೂ ಶುಭ ಘಳಿಗೆಯೊಂದರಲ್ಲಿ ಸತಿ-ಪತಿಯಾಗಿದ್ದರು. ನಂತರದಲ್ಲಿ ಸಿರಿಶಾ ಸಾಕೇತ್ ನೊಂದಿಗೆ ಬೆಂಗಳೂರಿಗೆ ಕಾಲಿಟ್ಟಳು. ಅಲ್ಲಿಗೆ ಬಂದ ಮೊದಲ ದಿನವೇ ಸಾಕೇತ್ ಹೇಳಿದ್ದ. "ಹಿರಿಯರ ಮಾತಿಗೆ ಬೆಲೆ ಕೊಟ್ಟು ನಿನ್ನನ್ನು ಮದುವೆಯಾಗಿದ್ದೇನೆ ಅಷ್ಟೇ. ಈ ಹಿಂದೆ ನಾನು ಒಬ್ಬಳನ್ನು ಪ್ರೀತಿಸಿದ್ದೆ ಆದರೆ ಈಗ ಅವಳ ಮದುವೆಯಾಗಿದೆ. ಸಮಾಜದ ದೃಷ್ಟಿಯಿಂದ ಈಗ ಈ ಪ್ರೇಮ ಸತ್ತಿರಬಹುದು ಆದರೆ ನನ್ನ ಬದುಕಲ್ಲಿ, ನನ್ನ ಮನಸ್ಸಿನಲ್ಲಿ ಆ ಪ್ರೇಮ ಇನ್ನೂ ಹಚ್ಚಹಸಿರಾಗಿದೆ. ನೀನು ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ" ಎಂದನು. ಸಿರಿಶಾಳಿಗೆ ಆಘಾತವಾದರೂ ಮತ್ತೇನೂ ಹೇಳಲೂ ತೋಚದೆ "ಕಾಯುತ್ತೇನೆ " ಎಂದಷ್ಟೇ ಹೇಳಿ ಸುಮ್ಮನಾದಳು.

ಸಿರಿಶಾ ಅವನ ದಿನಚರಿಯನ್ನು ಬದಲಾಯಿಸಲೇನೂ ಹೋಗಲಿಲ್ಲ. ತನ್ನ ಪಾಡಿಗೆ ತಾನು ಎಂಬಂತೆ ಅವಳು ಅವನನ್ನು ಅರ್ಥೈಸಿಕೊಂಡು ಅವನಿಗೆ ಅನುಕೂಲವಾದ ರೀತಿಯಲ್ಲಿಯೇ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಒಂದು ಸಂಜೆ ಎಂದಿನಂತೆ ಎಂದಿನಂತೆ ಸಾಕೇತ್ ಬರುವ ಮುನ್ನ ಹಾಡುತ್ತಿದ್ದಳು. ಆದರೆ ಅವತ್ತು ಎಂದಿಗಿಂತ ಮುಂಚೆ ಬಂದವನು ಅವಳ ಗಾಯನವನ್ನು ಕೇಳಿ ಮೈಮರೆತು ನಿಂತಿದ್ದ. ಅಂದಿನಿಂದ ಹದಿನೈದು ದಿನವೂ ಅವನ ದಿನಚರಿ ಹಾಗೆಯೇ ಮುಂದುವರಿದಿತ್ತು. ಅವಳ ಹಾಡು ಕೇಳಲೆಂದೇ ಮುಂಚೆ ಬಂದು ಅವಳಿಗೆ ತಿಳಿಯದಂತೆ ನಿಂತಿರುತ್ತಿದ್ದ. ಅದಾದ ನಂತರ ಒಂದು ದಿನ ಅವಳಿಗಾಗಿ ಒಂದಷ್ಟು ಹಾಡಿನ ಸಿ.ಡಿ ಗಳನ್ನು ತಂದು ಕೊಟ್ಟು, "ಆಸಕ್ತಿ ಇದ್ದರೆ ಸಂಗೀತ ಶಾಲೆಗೂ ಸೇರು. ನನ್ನ ಅಭ್ಯಂತರವೇನೂ ಇಲ್ಲ" ಎಂದನು. ಆಗ ಸಿರಿಶಾ ಅದಕ್ಕೆ ಏನೂ ಉತ್ತರಿಸದೆ " ನೀವೂ ಸಂಗೀತ ಕಲಿತಿದ್ದೀರಾ..? ನೀವೂ ಕೊಳಲು ನುಡಿಸುತ್ತಾ ಇದ್ದಿರಂತೆ.. ಈಗ್ಯಾಕೆ ಅದನ್ನು ನುಡಿಸುತ್ತಾ ಇಲ್ಲ" ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದವಳನ್ನು ತಡೆದು "ನನ್ನ ಬದುಕಿನ ಕುರಿತ ಅಸ್ಥೆ ನಿನಗೆ ಬೇಡ. ನೀನು ನನ್ನ ಬಾಳಿನಲ್ಲಿ ಏನೇನೂ ಅಲ್ಲ, ಮೊದಲು ಇಲ್ಲಿಂದ ಹೊರಡು ಇಲ್ಲವೆಂದರೆ ನಾನು ನಿನಗೆ ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ" ಎನ್ನುತ್ತಾ ಇನ್ನಷ್ಟನ್ನು ಮುಂದೆ ಮಾತನಾಡುವವನಿದ್ದ ಆದರೆ ಅಷ್ಟರಲ್ಲಿ ಬಂದ ಫೋನ್ ಕಾಲ್ ಅವನನ್ನು ಏನೂ ಹೇಳದಂತೆ ತಡೆದಿತ್ತು. "ಈಗಲೇ ಹೊರಡು ಬೇಗ, ಊರಿಗೆ ಹೊರಡಬೇಕಾಗಿದೆ" ಎಂದವನು ತರಾತುರಿಯಲ್ಲಿ ಅವಳನ್ನು ಕರೆದುಕೊಂಡು ಹಳ್ಳಿಗೆ ಹೊರಟ. ಸಿರಿಶಾ-ಸಾಕೇತ್ ಅಲ್ಲಿಗೆ ಬರುವಷ್ಟರಲ್ಲಿ ಮನೆಯ ಮುಂದೆಲ್ಲಾ ಜನಸಮೂಹವೇ ನೆರೆದಿತ್ತು. ಶಾಂತಲಾರ ಅನಿರೀಕ್ಷಿತ ಸಾವು ಸಿರಿಶಾಳಿಗೆ ಮತ್ತಷ್ಟು ಘಾಸಿ ಮಾಡಿತ್ತು. ಅಂತ್ಯಕ್ರಿಯೆ ಎಲ್ಲಾ ಮುಗಿದ ನಂತರ ಸಾಕೇತ್ ಸಿರಿಶಾಳನ್ನು ಇಲ್ಲಿಯೇ ಬಿಟ್ಟು ಹೊರಟ. ಮುಂದಿನ ಅವಳ ಭವಿಷ್ಯ ಅವಳ ಮುಂದೆ ಪ್ರಶ್ನಾರ್ಥಕವಾಗಿ ಕಾಡಿತ್ತು. ಸಾಕೇತ್ ತನ್ನನ್ನು ಇಲ್ಲಿಂದ ಕರೆದೊಯ್ಯುವನು ಎಂಬ ಭರವಸೆಯನ್ನೇ ಬಿಟ್ಟು ಬಿಟ್ಟಿದ್ದಳು. ಅಪ್ಪನ ಮುಂದೆ ಅವರ ಸಮಾಧಾನಕ್ಕಾಗಿ ನೆಮ್ಮದಿಯ ನಾಟಕವಾಡುತ್ತಿದ್ದಳು.

"ಲೋಕದ ಕಣ್ಣಿಗೆ..." ಹಾಡಿದ ನಂತರ ಸುಮ್ಮನಾದವಳನ್ನು ಇನ್ನೊಂದು ಹಾಡು ಹಾಡಮ್ಮ ಎಂದರು ರಾಯರು.

"ಈ ರಾಧೆಗೆ... ಗೋಪಾಲನಾ
ಸಂತೋಷವೇ ನಿಜವಾದ ಆನಂದವು
ರಾಧೆಯಾ ಕೃಷ್ಣನಾ ಅನುಬಂಧವಾ..
ಹೇಳಲೂ ಸಾಧ್ಯವೇ..?"
ಎಂದು ಹಾಡತೊಡಗಿದಳು. ಸಾಕೇತ್ ನೆನಪಾಗುತ್ತಿದ್ದ. ನಾನೇ ರಾಧೆಯಾಗಿ ಅವನು ಕೃಷ್ಣನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ಎಂದುಕೊಂಡವಳ ಮುಖದಲ್ಲೊಂದು ವಿಷಾದದ ಮುಗುಳ್ನಗು ಸುಳಿದುಹೋಯಿತು. "ನಾನು ಅವನ ಬಾಳಿನಲ್ಲಿ ಏನೂ ಅಲ್ಲ ಅಂದವನು ಕಾಳಜಿ ತೋರುತ್ತಿದ್ದದ್ದು ಏಕೆ? ಅವನಿಗೆ ನನ್ನ ಮೇಲೆ ಕರುಣೆಯಿತ್ತಾ? ಅಥವಾ ಪ್ರೀತಿಯೇ..? ಎಂದು ಆಲೋಚನೆಗೆ ಬಿದ್ದಿದ್ದಳು.

ಹಾಡು ಮುಗಿದ ನಂತರ ರಾಯರು ಕೇಳಿದರು. "ಏನು ವಿಶೇಷ? ಬರೀ ರಾಧೆಯ ಹಾಡನ್ನೇ ಹಾಡುತ್ತಿದ್ದೀಯಲ್ಲ.. ಇಂದು ಶಿವನ ಭಕ್ತೆಗೆ ರಾಧಾ-ಕೃಷ್ಣರು ಸೆಳೆದಂತಿದೆ." ಎಂದರು. "ಹಾಗೇನಿಲ್ಲಪ್ಪ, ರುಕ್ಮಿಣಿಗಿಂತ ರಾಧೆಯೇ ಪುಣ್ಯವಂತಳು ಅಲ್ಲವೇ? ರಾಧೆಯು ಭೌತಿಕವಾಗಿ ಕೃಷ್ಣನಿಗಿಂತ ದೂರದಲ್ಲಿದ್ದರೂ ಮಾನಸಿಕವಾಗಿ ಎಂದಿಗೂ ಕೃಷ್ಣನ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾಳೆ. ಹಾಗಾಗಿ ಇತ್ತೀಚೆಗೆ ಯಾಕೋ ರಾಧೆ ಕಾಡುತ್ತಿದ್ದಾಳೆ" ಎಂದಳು. ಅದಕ್ಕೆ ರಾಯರು "ಎಲ್ಲವೂ, ಕೃಷ್ಣನ ಮನಸ್ಥಿತಿಯ ಮೇಲೆ ಅವಲಂಬಿತ ಅಲ್ಲವೇನಮ್ಮಾ? ಕೃಷ್ಣ ಎಂದಿಗೂ ರುಕ್ಮಿಣಿಯನ್ನು ಕಡೆಗಾಣಿಸಲಿಲ್ಲ. ರಾಧೆಯನ್ನು ರುಕ್ಮಿಣಿಯಲ್ಲಿಯೇ ಕಂಡ. ಅಷ್ಟಕ್ಕೂ ರಾಧೆಗಿಂತ ರುಕ್ಮಿಣಿಯೇ ಪುಣ್ಯವಂತಳು.. ಅವಳಿಗೆ ಸದಾ ಕೃಷ್ಣನ ಸಾನಿಧ್ಯವಿತ್ತು. ಕೃಷ್ಣ ರುಕ್ಮಿಣಿಯನ್ನು ಮನಸ್ಫೂರ್ತಿ ಪ್ರೀತಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ, ರುಕ್ಮಿಣಿಯ ಪ್ರೀತಿಯೆಲ್ಲವೂ ಸದಾ ಕೃಷ್ಣನಿಗೇ ಸಮರ್ಪಿತವಲ್ಲವೇ..? ಅಲ್ಲದೇ ರಾಧೆ ಎಂದಿಗೂ ರುಕ್ಮಿಣಿಯ ಸವತಿಯಾಗಲಿಲ್ಲ. ರುಕ್ಮಿಣಿಯ ನಿಶ್ಕಲ್ಮಶ ಪ್ರೇಮವೇ ಅವಳನ್ನು ಕೃಷ್ಣನಿಗೆ ಹತ್ತಿರವಾಗುವಂತೆ ಮಾಡಿತು." ಎಂದರು. ಸಿರಿಶಾಳಿಗೆ ಈ ಮಾತುಗಳು ಎಲ್ಲೋ ಒಂದು ಕಡೆ ಆಶಾಕಿರಣದಂತೆ ಗೋಚರವಾದವು.

ಅಷ್ಟರಲ್ಲಿ ಮತ್ತೊಂದು ಧ್ವನಿ ಕೇಳಿಸಿತು. "ನಿಶ್ಕಲ್ಮಶ ಪ್ರೀತಿಗೆ, ಮುಗ್ದ ಮನಸ್ಸಿಗೆ, ಏನೂ ಬಯಸದಂತಹಾ ನಿಸ್ವಾರ್ಥ ಒಲವಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ. ಕೃಷ್ಣನಲ್ಲಿಯೇ ಅಂತಹಾ ಬದಲಾವಣೆ ಗೋಚರಿಸಿದೆ.ಬಹುಶಃ ಅವನಿಗೂ ರುಕ್ಮಿಣಿಯ ಸನ್ನಿಧಿಯಲ್ಲಿ ರಾಧೆಯ ಪ್ರೇಮ ಮರೆತು ಹೋಗುತ್ತಿತ್ತೇನೋ..? ಅಲ್ಲವೇ ಮಾವ?" ಎಂದ ಸಾಕೇತ್. ಸಿರಿಶಾಳಿಗೆ ಇದು ಕನಸೋ? ನನಸೋ? ತಿಳಿಯದ ಭಾವ. "ಓ ಅಳಿಯಂದ್ರೇ ಬನ್ನಿ, ನೀವು ಬರೋ ವಿಷಯವನ್ನು ಇವಳು ನನಗೆ ಹೇಳಿಯೇ ಇರಲಿಲ್ಲ. ಯಾವಾಗ ಬಂದ್ರಿ..? ಅದಕ್ಕೇ ಅನ್ನಿಸುತ್ತೆ ಸಂಜೆ ನಿಮ್ಮ ಹಾದಿಯನ್ನೇ ಕಾಯುತ್ತಾ ಹೊರಗಡೆ ಕುಳಿತಿದ್ದಳು" ಎನ್ನುತ್ತಲೇ ಸಾಕೇತ್ ನನ್ನು ಸ್ವಾಗತಿಸಿದರು. "ಸಿರಿ ಹಾಡು ಶುರು ಮಾಡಿದಾಗಲೇ ಬಂದೆ, ನಿಮ್ಮ ಸಂಗೀತ ಆಸ್ವಾದನೆಗೆ ಭಂಗ ಮಾಡಬಾರದೆಂದು ಅಲ್ಲೇ ನಿಂತೆ ಅಷ್ಟೇ.." ಎನ್ನುತ್ತಾ ಒಳಬಂದು ಕುಳಿತ. ಈ ಮಾತು ಕೇಳಿ ಲಜ್ಜೆಯಿಂದ ಒಳಗೆ ಓಡಿದಳು ಸಿರಿಶಾ. ಟೀ ಮಾಡಿ ತಂದವಳನ್ನು ರೇಗಿಸಲು "ಸಂಜೆಯಿಂದ ಅಪ್ಪನನ್ನು ಮರೆತಿದ್ದಳು ನನ್ನ ಮಗಳು, ಅವಳ ಗಂಡನ ದೆಸೆಯಿಂದ ಈಗ ಈ ಬಡಪಾಯಿ ಅಪ್ಪನಿಗೂ ಒಂದು ಲೋಟ ಟೀ ಸಿಕ್ಕಿತು ಅಷ್ಟೇ.."ಎಂದರು ರಾಯರು. ಸಿರಿಶಾ ಏನೂ ಮಾತನಾಡದೆ ಮುಗುಳ್ನಕ್ಕಳು ಅಷ್ಟೇ. ಸಾಕೇತ್ ಕೂಡಾ ಮುಗುಳ್ನಕ್ಕನು. ಸಾಕೇತ್ ಮಾವನೊಂದಿಗೆ ಮನಸ್ಸು ಬಿಚ್ಚಿ ಹರಟಿದರೂ ಸಿರಿಶಾಳೊಂದಿಗೆ ಕೊಂಚ ಗಂಭೀರವಾಗಿಯೇ ಇದ್ದ.

ಮಾರನೇ ದಿನ ಬೆಳಿಗ್ಗೆ ಅವಳನ್ನು ಕರೆದು, ಸಂಜೆ ಗುಡ್ಡದ ಮೇಲಿನ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣ. ಮಾವನೂ ಅದನ್ನೇ ಹೇಳಿದ್ದಾರೆ. ತಯಾರಾಗು ಎಂದನು. ಸಿರಿಶಾಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡುತ್ತಿದ್ದವು. ಅಯೋಮಯ ಸ್ಥಿತಿಯಲ್ಲಿ ಎಂದಿನಂತೆ ಆಡಂಬರವಿಲ್ಲದೆ ಸರಳವಾಗಿ ತಯಾರಾಗಿ ಬಂದಳು. ಸರಳವಾದರೂ ಅವಳು ಸುಂದರಿಯೇ. ಇಬ್ಬರು ದೇವರ ದರ್ಶನ ಮಾಡಿ ಅಲ್ಲಿಯೇ ಪ್ರಶಾಂತವಾದ ಪ್ರಾಂಗಣದಲ್ಲಿ ಕುಳಿತರು.  

ಎದುರು ಕುಳಿತಿದ್ದ ಅವಳ ಎರಡೂ ಕೈಗಳನ್ನು ತನ್ನ ಕೈಯ್ಯೊಳಗೆ ತೆಗೆದುಕೊಂಡ ಸಾಕೇತ್ "ಜೊತೆಯಲ್ಲಿದ್ದಾಗ ನಿನ್ನ ಕಾಳಜಿ, ಪ್ರೀತಿಯ ಅರಿವಾಗಲಿಲ್ಲ. ಮನಸ್ಸಿನ ಮೂಲೆಯಲ್ಲಿ ನಿನ್ನ ಮೇಲೆ ಪ್ರೀತಿಯ ಊಟೆ ಒಡೆಯುತ್ತಿತ್ತು ಆದರೆ ಅದನ್ನು ಅದುಮಿ ಬದುಕಲು ಪ್ರಯತ್ನಿಸುತ್ತಿದ್ದೆ. ನೀನು ನನ್ನ ಜೊತೆ ವಾದ ಮಾಡಿದಿದ್ದರೆ ನಿನ್ನನ್ನು ಬೈಯ್ದು ದೂರ ಮಾಡಿಕೊಳ್ಳುತ್ತಿದ್ಡೆ. ಮೌನದಿಂದಲೇ ನೀನು ನನ್ನನ್ನು ಗೆಲ್ಲುತ್ತಾ ಹೋದೆ. ನಾವು ಜೊತೆಯಿದ್ದದ್ದು ತಿಂಗಳು ಅಷ್ಟೇ. . ಆಗ ನಿನಗೆ ನನ್ನಿಂದ ಯಾವ ಪ್ರೀತಿಯೂ ದೊರಕದಿದ್ದರೂ ನೀನು ಪ್ರೀತಿ ನೀಡುತ್ತಲೇ ಹೋದೆ. ಎಲ್ಲಿ ನಿನ್ನ ಮೇಲೆ ಮನಸ್ಸಾಗಿ ಮೊದಲ ಪ್ರೀತಿಯನ್ನು ಮರೆಯುತ್ತಾ ನಿನ್ನ ದೃಷ್ಟಿಯಲ್ಲಿಯೂ ಕೀಳಾಗಿ ಬಿಡುತ್ತೇನೋ ಎಂದು ಗೊಂದಲದಲ್ಲಿರುವಾಗಲೇ ನೀನು ಕೊಳಲಿನ ವಿಷಯ ಎತ್ತಿದ್ದೆ.

ನಾನು ನಿನ್ನನ್ನು ಬೈದೆ, ನೀನು ಮರುವಾದ ಮಾಡುವೆ ಆಗಲಾದರೂ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳುವೆ ಎಂದು ಕಾಯುತ್ತಿದ್ದೆ. ಗಂಡಿಗೆ ಪ್ರೀತಿಯಿದ್ದರೂ ತಾನೇಕೆ ಮೊದಲು ಸೋಲಬೇಕು ಎನ್ನುವ ಅಹಂಭಾವವೂ ಇರುತ್ತದೆ. ಹಾಗಾಗಿ ನೀನೇ ನಿನ್ನ ಪ್ರೀತಿ ಹೇಳುವೆ ಎಂದು ಕಾಯುತಲಿದ್ದೆ. ಅದಾದ ನಂತರ ಏನೇನೋ ಆಯಿತು..

ನಿನ್ನ ತಾಯಿಯ ಮರಣವೊಂದು ನೆಪವಾಗಿತ್ತು ನಿನಗೆ ನನ್ನಿಂದ ದೂರ ಉಳಿಯಲು. ನಿನ್ನ ಪ್ರೀತಿಗಿಂತ ತಿರಸ್ಕಾರ ನನ್ನನ್ನು ಹೆಚ್ಚು ಭಾದಿಸುತ್ತದೆ ಕಣೇ. ನಿನ್ನ ಗೈರು ಹಾಜರಿಯಲ್ಲಿ ಬದುಕಿನಲ್ಲಿ ಅಮೂಲ್ಯವಾದದ್ದು ಏನನ್ನೋ ಕಳೆದುಕೊಂಡಿದ್ದೇನೆ ಎನ್ನಿಸುತ್ತಿದೆ. ನನಗೆ ಕೃಷ್ಣ-ರುಕ್ಮಿಣಿ, ರಾಧೆ-ಕೃಷ್ಣರ ಪ್ರೀತಿಯ ಕುರಿತು ಗೊತ್ತಿಲ್ಲ. ಆದರೆ ಶಿವ ಭಕ್ತೆಯಾದ ನಿನ್ನ ಪ್ರೀತಿ ಮಾತ್ರ ಗೊತ್ತು. ಅವರನ್ನೇ ಆದರ್ಶವಾಗಿರಿಸಿಕೊಂಡು ಬದುಕೋಣ. ನನ್ನ ಬದುಕಿನ ಅರ್ಧಾಂಗಿಯಾಗಿ ನೀನು ಪಾಲಿನ ಬೆಳಕಾಗು." ಎನ್ನುತ್ತಾ ಅವಳ ಡೈರಿಯನ್ನು ಅವಳಿಗೆ ನೀಡಿದನು.

"ಮತ್ತೊಬ್ಬರ ಡೈರಿಯನ್ನು ಓದಬಾರದೆಂದುಕೊಂಡಿದ್ದೆ, ಆದರೆ ಅರ್ಧಾಂಗಿಯ ಡೈರಿಯನ್ನು ಓದುವುದರಲ್ಲಿ ತಪ್ಪಿಲ್ಲವಲ್ಲ" ಎಂದು ಕಣ್ಣು ಹೊಡೆದನು. "ಧೈರಿ ಓದಿ ಬದಲಾಗಿದ್ದೇನೆ, ಕರುಣೆ ತೋರುತ್ತಿದ್ದೇನೆ ಎಂಬ ಭಾವ ಬೇಡ. ಡೈರಿ ಓದಿದ ನಂತರ ನಿನ್ನ ಬದುಕಿನ ಪ್ರತಿ ಹಂತದ ಪರಿಚಯವಾಗಿದೆ ಅಷ್ಟೇ. ಈ ಪ್ರೀತಿ ಪ್ರೀತಿಯೇ.. ನಿಷ್ಕಲ್ಮಶವಾದ ಒಲವೇ.. ಅದರ ಕುರಿತು ಸಂದೇಹ ಬೇಡ" ಎಂದನು.

ಸಿರಿಶಾ ಮೇಲೆದ್ದು ಅವನನ್ನು ಅಪ್ಪಿ ಹಿಡಿದವಳೇ ಕೊಂಚ ಹೊತ್ತು ಸುಮ್ಮನಿದ್ದು ನಂತರ ಅವನನ್ನು ಬಿಟ್ಟು ಸುಮ್ಮನೇ ನಡೆದು ಬಿಟ್ಟಳು. ಸಾಕೇತ್ ನಿಗೆ ಅವಳು ತನ್ನನ್ನು ಒಪ್ಪಿದಳೋ, ನಿರಾಕರಿಸಿದಳೋ ಒಂದೂ ತಿಳಿಯಲಿಲ್ಲ. ನನ್ನಂತಹವನೇ ಪ್ರೀತಿಯಿಂದ ಬದಲಾಗಿರುವಾಗ ಅವಳನ್ನು ಬದಲಾಯಿಸಲಾಗದೇ..? ನನ್ನ ಪ್ರೀತಿಯಿಂದ ಅವಳನ್ನು ಒಲಿಸಿಕೊಳ್ಳುತ್ತೇನೆ ಎಂದು ತೀರ್ಮಾನಿಸಿ ಮನೆಗೆ ಬಂದ. ಅವಳೆಲ್ಲಿಯೂ ಕಾಣಲಿಲ್ಲ. ರೂಮಿನಲ್ಲಿ ಹಾಸಿಗೆಯ ಮೇಲಿರುವ ಪತ್ರ ಕಂಡಿತು. ಅದನ್ನು ಬಿಡಿಸಿದಾಗ ಹೀಗಿತ್ತು.

ಒಲವೇ ಒಲವ ತಿಳಿಸಿದ ಮೇಲೆ
ಒಪ್ಪದಿರುವುದಾದರೂ ಹೇಗೆ..?
ಒಪ್ಪುವವರೆಗೂ ಕಾಯುವೆನೆಂದವಳ
ಜೀವದುಸಿರು ನಿನಗೇ ಮೀಸಲು
ನಿನ್ನ ಒಲವಲ್ಲಿ ಮಿಂದವಳಿಗೆ
ಬದುಕಲ್ಲಿ ನೀನೇ ಉಸಿರು..
ಒಲವಿನ ಮಿಳಿತವೇ ನಮ್ಮ ಬದುಕು

ನಿಮ್ಮ ಒಲವಿನ ಮಾತು ಕೇಳಿದೆ. ಕೊಳಲಿನ ಮಾತು ಕೇಳಬೇಕೆನಿಸುತ್ತಿದೆ. ನನ್ನ ಗಾಯನದೊಂದಿಗೆ ನಿಮ್ಮ ಕೊಳಲ ನಾದ ಬೆರೆತರೆ ಎಷ್ಟು ಚೆಂದ ಅಲ್ಲವೇ..? ನಮ್ಮಿಬ್ಬರ ಬದುಕಲ್ಲಿ ಒಲವ ಜೇನ ಬೆರೆಸಿದಂತೆ.
-ಸಿರಿಶಾ

ಸಾಕೇತ್ ಮನ ಗಾಳಿಯಲ್ಲಿ ತೇಲಾಡುತ್ತಿತ್ತು. ಅಂದು ಸಂಜೆಯಿಂದ ಮನೆಯಂಗಳದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ದೀಪಾವಳಿಯಲ್ಲದಿದ್ದರೂ ದೀಪಗಳ ಬೆಳಕು ಮನೆಯಂಗಳದಲ್ಲಿ ಚೆಲ್ಲಾಡಿತ್ತು. ಸಾಕೇತ್-ಸಿರಿಶಾ ಜುಗಲ್ಭಂದಿ ಸಂಜೆಗೇ ರಂಗು ತಂದಿತ್ತು. ರಾಯರಂತೂ ಗಾಯನದಿಂದ ಮೈಮರೆತು ತಲ್ಲೀನರಾಗಿದ್ದರೆ, ಜೋಡಿ ಹಕ್ಕಿಗಳು ಪ್ರೇಮರಾಗದಿಂದ ತಲ್ಲೀನರಾಗಿದ್ದರು. ಆಕಾಶದಿಂದ ಒಂದು ನಕ್ಷತ್ರ ಈ ಸಂತಸವ ಕಂಡು ಸಂಭ್ರಮಿಸುತಲಿತ್ತು. ಒಲವಿನ ಜೊತೆ ಮಿಳಿತವಾದ ಈ ಜೋಡಿ ಹೀಗೇ ಇರಲೆಂದು ಹಾರೈಸುತಲಿತ್ತು.

~ವಿಭಾ ವಿಶ್ವನಾಥ್

ಗುರುವಾರ, ನವೆಂಬರ್ 7, 2019

ಶಚಿ ತೀರ್ಥದಾಳದಲ್ಲಿ..

ನಮ್ಮೆಲ್ಲಾ ನೆನಪ ಹುಗಿದಿಟ್ಟುಬಿಡಲೇ
ಶಚಿ ತೀರ್ಥದ ಆಳದಲ್ಲಿ..

ಅದಾವ ಮೀನೂ ನುಂಗದಂತೆ
ಯಾವ ಮೀನುಗಾರನಿಗೂ ಸಿಕ್ಕದಲೇ..
ಯಾವ ಈಜುಗಾರನಿಗೂ ದಕ್ಕದಂತೆ
ಶಚಿ ತೀರ್ಥದ ಆಳದಲ್ಲಿಟ್ಟು ಬಿಡಲೇ..?

ಮರೆತ ನೆನಪೂ ನಿನಗಾಗದಿರಲಿ
ನೆನಪಿನಿಂದೊದಗುವ ಖುಷಿಯೂ ದಕ್ಕದಿರಲಿ
ಹುಗಿದಿಟ್ಟ ನೆನಪ ನೆನಪೂ ನನಗಾಗದೆ
ಶಚಿ ತೀರ್ಥದಲ್ಲೇ ಮುಳುಗಿಹೋಗಲಿ..

ಶಾಪವೂ ವರವಾಗುವಂತೆ ಭಾಸವಾಗಿ
ವರವೂ ಶಾಪದಂತೆ ಭ್ರಮೆಯಾಗಿ
ಅವೆಲ್ಲವನೂ ತೊಳೆದು ಬಿಡಲೇ
ಶಚಿ ತೀರ್ಥದ ತೀರ್ಥಧಾರಿಣಿಯಾಗಿ

ಕಾಲಾಂತರಾಳದ ಸುಳಿಗೆ ಸಿಲುಕುತ್ತಾ
ಅವ ದುಷ್ಯಂತನಾಗದೇ, ನಾ ಶಾಕುಂತಲೆಯಾಗದೆ
ಉಳಿದು ಹೋಗುವೆವು ನಾವು ನಮ್ಮಂತೆಯೇ
ಶಚಿ ತೀರ್ಥದಾಳದ ದಯೆಯಲಿ ಬದುಕಿ

ಮರೆವಿನ ಲೋಕದಲಿ ಅವನಂತೆ ಅವನೂ
ವಾಸ್ತವತೆಯ ಲೋಕದಲ್ಲಿ ನನ್ನಂತೆ ನಾನೂ
ಬದುಕ ದೋಣಿಯನು ನಡೆಸುವೆವು
ಶಚಿ ತೀರ್ಥದ ಮೇಲೆಯೇ ಹುಟ್ಟು ಹಾಕಿ..

~ವಿಭಾ ವಿಶ್ವನಾಥ್

ಭಾನುವಾರ, ನವೆಂಬರ್ 3, 2019

ವಿಷಮುಕ್ತವಲ್ಲ ವಿಷಯುಕ್ತ


ಪಟಾಕಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಪಟಾಕಿ ಸಿಡಿಸಬೇಡಿ ಅಂತಾ ಯಾರೋ ಹೇಳಿದ್ದಕ್ಕೆ ಮತ್ಯಾರೋ ಕ್ರಿಸ್ ಮಸ್ ಬರುತ್ತಾ ಇದೆ, ಕ್ಯಾಂಡಲ್ ಹಚ್ಚಬೇಡಿ ಅದೂ ಸಹಾ ವಾಯುಮಾಲಿನ್ಯ ಮಾಡುತ್ತದೆ ಅಂತಾ ಒಬ್ಬರನೊಬ್ಬರು ಗುರಿ ಮಾಡಿಕೊಂಡು ಜಾತಿ, ಧರ್ಮ, ರಾಜಕೀಯವಾಗಿ ಕಿತ್ತಾಡುವುದು ಸಾಮಾನ್ಯವಾಗಿ ಹೋಗಿದೆ. ಪರಿಸರವನ್ನು ಇವತ್ತು ಮಲಿನ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಮನುಷ್ಯನ ಯೋಚನಾಲಹರಿ, ಬದಲಾಯಿಸಿಕೊಳ್ಳಲಾಗದಿರುವ ನಡವಳಿಕೆ ಮತ್ತು ಅಹಂ ಅಷ್ಟೇ.

ಕಳೆದ ಮೂರು ದಿನದಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಇವತ್ತು ಎಷ್ಟು ಜನಕ್ಕಿದೆ? ಯಾವುದೋ ಕೆಲಸಕ್ಕೆ ಬಾರದ ಮಾಹಿತಿಗಳನ್ನು ದಿನವಿಡೀ ತೋರಿಸುವ ನ್ಯೂಸ್ ಚಾನೆಲ್ ಗಳು ಇದನ್ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ಈ ಸಮಸ್ಯೆಯ ಮೂಲ ಏನು? ಸಮಸ್ಯೆ ಎಷ್ಟು ತೀವ್ರವಾಗಿದೆ? ಇದರ ಮುಂದಿನ ಪರಿಣಾಮಗಳೇನು? ಈ ಸಮಸ್ಯೆಯ ಪರಿಹಾರ ಹೇಗೆ? ನನಗೆ ದಕ್ಕಿದ ಮಟ್ಟಿಗೆ ನನ್ನ ವಿಶ್ಲೇಷಣೆ ಹೀಗಿದೆ ನೋಡಿ.
ದೆಹಲಿಯ ಶಾಲೆಗಳಿಗೆ ನವೆಂಬರ್ 5 ರ ವರೆಗೆ ರಜೆ ಘೋಷಿಸಲಾಗಿದೆ. ಇದು ಸಂತಸದ ಸಂಭ್ರಮಾಚರಣೆಗಲ್ಲ, ಕಳವಳಕಾರಿ ಬೆಳವಣಿಗೆಯೊಂದರ ಭಾಗವಾಗಿ.. ದೆಹಲಿಯಲ್ಲಿ ಮಾಲಿನ್ಯದ ಮಟ್ಟ 450ನ್ನೂ ದಾಟಿದೆ. ಸಾಮಾನ್ಯವಾಗಿ ಇರಬೇಕಾದುದಕ್ಕಿಂತ 4-5 ಪಟ್ಟು ಹೆಚ್ಚಾಗಿದೆ. ಇಂದು ಬೆಳಿಗ್ಗೆ ಮಳೆಯಾದ ನಂತರವಂತೂ ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟಿದೆ. ಗಾಜಿಯಾಬಾದ್ ನಲ್ಲಿ 496, ನೋಯ್ಡಾದಲ್ಲಿ 499 ಮುಟ್ಟಿದೆ. ಈ ಮಾಲಿನ್ಯದ ಮಟ್ಟ ಅಳೆಯುವುದಾದರೂ ಹೇಗೆ ಗೊತ್ತಾ?

SAFAR[system of Air Quality and Weather Forecasting and Research] ಇದು ಎಲ್ಲಾ ನಗರಗಳ ಮಾಲಿನ್ಯದ ಮಟ್ಟವನ್ನೂ, ಗಾಳಿಯ ಗುಣಮಟ್ಟವನ್ನೂ ಅಳೆಯುವ ಸರ್ಕಾರದ ಸಂಸ್ಥೆ. ಪ್ರತಿ ಗಂಟೆಗೊಮ್ಮೆ ನಗರಗಳ ವಿವಿಧ ಭಾಗಗಳಲ್ಲಿ ಅಂದರೆ ಇಂಡಸ್ಟ್ರಿಯಲ್ ಏರಿಯಾ, ರಸ್ತೆಯ ಬದಿ, ಟ್ರಾಫಿಕ್ ಸಿಗ್ನಲ್, ಕೃಷಿ ಜಾಗ, ರೆಸಿಡೆನ್ಸಿಯಲ್ ಏರಿಯಾ ಹೀಗೇ ವಿವಿಧ ಪರಿಸರಗಳಿಂದ ಹವಾಮಾನವನ್ನು ಆಧರಿಸಿ ಮಾಲಿನ್ಯದ ಮಟ್ಟವನ್ನು ಪತ್ತೆ ಮಾಡುತ್ತದೆ. ಆ ಸಂಖ್ಯೆಯೇ AQI[Air Quality Index]. AQI ಮಟ್ಟ ಮತ್ತು ಪರಿಣಾಮ ಹೀಗಿದೆ.

0-50 ಇದ್ದರೆ Good
51-100 ಇದ್ದರೆ Satisfactory
101-200 ಇದ್ದರೆ Moderate
201-300 ಇದ್ದರೆ Poor
301-400 ಇದ್ದರೆ Very Poor
401-500 ಇದ್ದರೆ Severe plus / Emergency

ಈಗ ದೆಹಲಿಯಲ್ಲಿ ಅಥವಾ ಪರಿಸ್ಥಿತಿ ಜಾರಿಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ? ದೀಪಾವಳಿಯ ಪಟಾಕಿಗಳಲ್ಲ, ವಾಹನಗಳ ಅತಿ ಮಾಲಿನ್ಯವೂ ಅಲ್ಲ. ಅಸಲಿಗೆ ಇದರ ಕಾರಣ ಇರುವುದು ಪಕ್ಕದ ರಾಜ್ಯಗಳಲ್ಲಿ 50% ಕಾರಣೀಕರ್ತರು ಇವರುಗಳೇ.

ಪಂಜಾಬ್ ಮತ್ತು ಹರಿಯಾಣಗಳು ಪರೋಕ್ಷವಾಗಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣೀಕರ್ತರು. ಗಾಳಿ ಬೀಸುವ ದಿಕ್ಕು ಅಲ್ಲಿಂದ ಇಲ್ಲಿಗೆ ಮಾಲಿನ್ಯವನ್ನು ಇಲ್ಲಿಗೆ ಹೊತ್ತು ಹಾಕಿದೆ. ಕಾರಣ ಹೀಗಿದೆ ಕೇಳಿ.
ಕೃಷಿಯ ಕೊಯ್ಲಿನ ನಂತರ ಉಳಿಯುವ ಕಡ್ಡಿ ಅದರಲ್ಲೂ ಮುಖ್ಯವಾಗಿ ಭತ್ತ, ಗೋಧಿಯಂತಹಾ ಬೆಳೆಗಳ ಕಟಾವಿನ ನಂತರ ಕೂಳೆಯನ್ನು ಇಲ್ಲಿ ಸುಡುತ್ತಾರೆ. ಪ್ರತಿ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ಈ ಭತ್ತದ ತ್ಯಾಜ್ಯ[Stubble] ವನ್ನು ಹೊಲದಿಂದ ತೆಗೆದು ಹಾಕುವುದಕ್ಕೆ ಇವರು ಬಳಸುವ ಮಾರ್ಗ ತಮ್ಮ ಹೊಲದಲ್ಲಿ ಬೆಂಕಿ ಹಾಕುವುದು. ಅವರ ದೃಷ್ಟಿಯಲ್ಲಿ ಇದು ಕಡಿಮೆ ಖರ್ಚಿನಲ್ಲಿ ಆಗುವ ವಿಧಾನ. ಜೊತೆಗೆ ಚಳಿಗಾಲದ ಕೊಯ್ಲಿಗೆ ತಮ್ಮ ಹೊಲಗಳನ್ನು ಮರು ಅಣಿಗೊಳಿಸುವ ವಿಧಾನ. ಆದರೆ ಇದರ ಅಡ್ಡ ಪರಿಣಾಮದಿಂದಾಗಿ "ವಿಷಯುಕ್ತ ಮೋಡ" ನಿರ್ಮಾಣವಾಗುತ್ತಿದೆ. ಗಾಳಿಗೆ ವಿಷ ಸೇರ್ಪಡೆಯಾಗುತ್ತಿದೆ. ಇದೆಲ್ಲದರ ಪರಿಣಾಮವೇ ಇಂದಿನ ದೆಹಲಿಯ ಪರಿಸ್ಥಿತಿ.

ಗಾಳಿ ಜೀವನದ ಜೀವನಾಡಿ, ಉಸಿರಾಟಕ್ಕೆ ತೊಂದರೆಯಾದರೆ ಬದುಕುವುದಾದರೂ ಹೇಗೆ? ಕಣ್ಣು, ಶ್ವಾಸಕೋಶ ಮತ್ತು ಚರ್ಮ ಸಂಬಂಧಿ ರೋಗಗಳು ಹೆಚ್ಚಾಗಿವೆ. ಅಸ್ತಮಾ, ಕೆಮ್ಮು ಮರುಕಳಿಸುತ್ತಲಿವೆ. ಶ್ವಾಸಕೋಶ ಮತ್ತು ಲುಕೇಮಿಯಾದಂತಹಾ ಖಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿವೆ. ಗರ್ಭಿಣಿಯರಿಗೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಅವಧಿಪೂರ್ವ ಪ್ರಸವಗಳು ಹೆಚ್ಚಾಗಲಿವೆ. ಇನ್ನೂ ಕಣ್ಣೇ ಬಿಡದ ಹಸುಗೂಸುಗಳೂ ಸಹಾ ಇದರಿಂದಾಗಿ ನರಳಲಿವೆ. 

ಇಂದು ಇದು ದೆಹಲಿಗೆ ಹರಡಿದೆ. ನಾಳೆ ಎಲ್ಲೆಡೆಯೂ ಪಸರಿಸಬಹುದು. ಇದೊಂದೇ ಕಾರಣವಲ್ಲ. ಇದು ನಾಳಿನ ಕರಾಳ ಭವಿಷ್ಯದ ನಿಮಿತ್ತ ಮತ್ತು ಉದಾಹರಣೆಯಷ್ಟೇ. ಈಗಾಗಲೇ ಕೃಷಿಗೆ ಉಪಯೋಗಿಸುತ್ತಿರುವ ರಾಸಾಯನಿಕಗಳು ಗಾಳಿಯಲ್ಲಿ ಮತ್ತು ಆಹಾರದಲ್ಲಿ ಸೇರಿ ಕ್ಯಾನ್ಸರ್ ಮತ್ತು ವಿವಿಧ ಅಡ್ಡ ಪರಿಣಾಮಗಳುಂಟಾಗುತ್ತಿವೆ. ಯಾರೋ ಸೇದಿದ ಸಿಗರೇಟ್ ನಿಂದಾಗಿ ಮತ್ತಾರೋ ಪ್ಯಾಸೀವ್ ಸ್ಮೋಕರ್ ಎಫೆಕ್ಟ್ ಗೆ ಒಳಗಾಗಿ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಇನ್ನಾದರೂ ಇದೆಲ್ಲದರಿಂದ ಎಚ್ಚೆತ್ತುಕೊಳ್ಳಬೇಕಿದೆ.

ಇವತ್ತು ಟೆಕ್ನಾಲಜಿಯಲ್ಲಿ ಅಷ್ಟೂ ಮುಂದಿದ್ದೇವೆ,ಇಂಟರ್ ನೆಟ್ ಆಫ್ ಥಿಂಗ್ಸ್[IoT]ನಿಂದಾಗಿ ಕುಳಿತಲ್ಲೇ ಡಿವೈಸ್ ಗಳನ್ನು ಕಂಟ್ರೋಲ್ ಮಾಡುತ್ತೇವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್[AI]ನಿಂದ ಮಶೀನ್ ಲರ್ನಿಂಗ್[ML]ನಿಂದ ಬೇಕಾದ್ದನ್ನು ಬೇಕಾದ್ದನ್ನು ಬೇಕಾದಂತೆ ಸೃಷ್ಟಿಸ ಹೊರಡುತ್ತೇವೆ. ಆದರೆ, ಮನುಷ್ಯನ ಜೀವವನ್ನು, ಪರಿಸರವನ್ನೂ, ಇರುವುದನ್ನೇ ಉಳಿಸಿಕೊಳ್ಳದೇ ಹೋದರೆ ಇದೆಲ್ಲದರ ಫಲವೇನು? ಮಾನವೀಯತೆಯನ್ನು ಸಾಯಿಸಿಕೊಂಡು ಮತ್ತೊಬ್ಬರಿಗೆ ಹಾನಿ ಮಾಡುತ್ತಾ ಜಾತಿ, ಧರ್ಮ, ರಾಜಕೀಯ ದೃಷ್ಟಿಯಲ್ಲಿ ಯೋಚಿಸಿದರೆ ಫಲವಾದರೂ ಏನು? ಇನ್ನಾದರೂ ವಿಷಮುಕ್ತವಾಗಲು ಹೆಜ್ಜೆ ಹಾಕೋಣ. ಪರಿಸರದಲ್ಲಿಯೂ ಹಾಗೂ ದೃಷ್ಟಿಕೋನದಲ್ಲಿಯೂ..

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 31, 2019

ಜೊತೆಗೂಡದ ಹೆಜ್ಜೆಗಳು

ಅದೆಷ್ಟೇ ಪ್ರಯತ್ನಿಸಿದರೂ ನಿನ್ನ ನಡಿಗೆಯ ವೇಗಕ್ಕೆ ನನಗೆ ಸರಿಸಾಟಿಯಾಗಲು ಸಾಧ್ಯವೇ ಆಗಲಿಲ್ಲ. ಬರಿ ಹೆಜ್ಜೆ ಮಾತ್ರವಲ್ಲ, ನಿನ್ನ ಬದುಕು ಮತ್ತು ಕನಸಿನ ಜೊತೆಗೂಡಲು ನನ್ನಿಂದ ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ನಾ ನಿನ್ನೊಡನೆ ಹೆಜ್ಜೆ ಹಾಕುವುದಿಲ್ಲ. ನಾ ನಿನ್ನೊಡನೆ ಹೆಜ್ಜೆ ಹಾಕಲು ಯಾರು, ಯಾರು ನೀ ನನಗೆ..?

ಸಾವಿತ್ರಿ ಯಮನೊಡನೆ ಪತಿಯ ಪ್ರಾಣ ಭಿಕ್ಷೆಗಾಗಿ ಹೆಜ್ಜೆ ಹಾಕಿದಳು. ಇನ್ನು ಸಪ್ತಪದಿಯಲ್ಲಿ ಸಹಚರರಿಗಾಗಿ ಪ್ರಮಾಣ ಮಾಡಲು ಹೆಜ್ಜೆ ಹಾಕುತ್ತಾರೆ. ನಾನೇಕೆ ನಿನ್ನೊಡನೆ ಹೆಜ್ಜೆ ಹಾಕಲಿ..?

ಬೇಡಿ ಸಣ್ಣವಳಾಗಲಾರೆ, ಕೊಟ್ಟು ದೊಡ್ಡವಳಾಗಲಾರೆ. ಸಹಮತಕ್ಕೆ ನಮ್ಮಲ್ಲಿ ಸಮಾನಾಭಿರುಚಿಯೂ ಇಲ್ಲ. ಬಹುಶಃ ಹೆಜ್ಜೆ ಹಾದಿ ತಪ್ಪಬಹುದು, ಹೃದಯದ ಬಡಿತ ತಪ್ಪಬಹುದು. ಆದರೂ, ಹೆಜ್ಜೆಗಳು ಜೊತೆಗೂಡಲಾರವು.ಅಲ್ಲವೇ..?

ನಿನ್ನ ಹಿಂದೆ ನಾ ಹೆಜ್ಜೆ ಹಾಕಲು ನೀನು ಮುಖಂಡನಲ್ಲ, ನಾನು ಹಿಂಬಾಲಕಿಯಲ್ಲ. ಇಲ್ಲವೆಂದರೆ, ನಾ ಮುಂದೆ ಹೆಜ್ಜೆ ಹಾಕಲು ನಾನು ಮುಂದಾಳುವಲ್ಲ, ನೀನು ನನ್ನ ಹಿಂಬಾಲಕನಲ್ಲ. ಜೊತೆ-ಜೊತೆಗೆ ಹೆಜ್ಜೆ ಹಾಕಲು ನಾವು ಸ್ನೇಹಿತರೂ ಅಲ್ಲ. ಬಹುಶಃ ಕಾಲದೊಡನೆ ಕೆಲಕಾಲ ಸಮಾನಾಂತರದಲ್ಲಿ ಹೆಜ್ಜೆ ಹಾಕುತ್ತಿರುವೆವೋ, ಏನೋ..? ಎಲ್ಲರ ಕಾಲೆಳೆದು ಮೋಜು ನೋಡುವ ಕಾಲ ಕೆಲಕಾಲದ ನಂತರ ನಮ್ಮ ಹೆಜ್ಜೆ ಗುರುತುಗಳನ್ನೆಲ್ಲಾ ಅಳಿಸಲೂಬಹುದು ಅಥವಾ ಅದರ ಮೇಲೆ ಮತ್ತೊಬ್ಬರ ಹೆಜ್ಜೆ ಗುರುತನ್ನು ಮೂಡಿಸಬಹುದು. ಕಾಲಾಂತರದ ಹಾದಿಯಲ್ಲಿ ನಾ ಯಾರೋ..? ನೀ ಯಾರೋ..? ಅವರ್ಯಾರೋ..?

ಸಮುದ್ರವೇ ನಮ್ಮ ಹೆಜ್ಜೆಗಳನ್ನು ಒಟ್ಟಿಗಿರಲು ಬಿಡುವುದಿಲ್ಲವೆಂದರೆ, ಕಾಲ ಸುಮ್ಮನಿರುವುದೇ..? ಎಂದೋ, ಯಾವುದೋ ಕಾರಣಕ್ಕೆ ಆಸರೆಯಾದ ಹೆಜ್ಜೆಗಳು ಸದಾ ಹಾಗೆಯೇ ಆಸರೆಯಾಗಿರಲು ಸಾಧ್ಯವೇ..? ಅಚಾನಕ್ಕಾಗಿ ಕಾಲು ಮುರಿದಾಗ ತಾನಿಲ್ಲದೆ ಆಸರೆಯೇ ಇಲ್ಲ, ಜೀವನವೇ ಇಲ್ಲ ಎಂಬಂತಿದ್ದ ಊರುಗೋಲು  ತಾನು ಎದ್ದು ನಡೆದಾಡುವಂತಾದ ಮೇಲೆ ಮೂಲೆಪಾಲು.ಅಕಸ್ಮಾತ್, ಆ ಊರುಗೋಲನ್ನು ನಾವು ಬಿಡುವುದಿಲ್ಲವೆಂದು ಸುತ್ತಲಿನವರು ಸುಮ್ಮನಿರುವರೇ..? ಊರುಗೋಲಿಗೆ ಮಾತ್ರವಲ್ಲ, ಮನುಷ್ಯರಿಗೂ ಅದೇ ಪಾಡೇ. ಎಂದೋ ಮಾಡಿದ ಸಹಕಾರ ಆ ಕಾಲಕ್ಕೆ ದೊಡ್ಡದಾದರೂ, ಮುಂದಿನ ದಿನಗಳಲ್ಲಿ ಕಡಿಮೆಯೇ.. ಆದರೂ ಯಾರಿಗಾದರೂ ಸಹಕಾರ ನೀಡಿದರೆ ಪ್ರತಿಫಲದ ಅಪೇಕ್ಷೆ ಇರಬಾರದು. ಪ್ರತಿಫಲದ ನಿರೀಕ್ಷೆಯಿಂದ ನೀಡುವ ಸಹಕಾರ, ಮಾಡುವ ಸಹಾಯ ವ್ಯಾಪಾರವಲ್ಲದೇ ಮತ್ತೇನು..? "ನೀ ನನಗಾದರೆ, ನಾ ನಿನಗೆ.." ಎಂಬುದೇ ಸಾರ್ವತ್ರಿಕವಾಗಿದ್ದರೂ ನನ್ನ ದೃಷ್ಠಿಯಲ್ಲಿ "ನೀ ನನಗಾಗದಿದ್ದರೂ, ನಾ ನಿನಗೆ" ಎಂದು ಬದಲಾಗಿದೆ. 

ಹೆಜ್ಜೆಯಿಂದ ಪ್ರತಿಫಲದ ಕಡೆಗೆ ಯೋಚನೆಯ ಹೆಜ್ಜೆ ಸಾಗಿತು. ಎಷ್ಟಾದರೂ ಮನಸ್ಸು ಮರ್ಕಟವಲ್ಲವೇ..? ಏನನ್ನೋ ಹೇಳ ಹೊರಟು ಮತ್ತೇನನ್ನೋ ಹೇಳಿದ ಹಾಗೆ, ಹೆಜ್ಜೆಗಳೂ ಸಹಾ ಏನನ್ನೋ ಹಿಂಬಾಲಿಸ ಹೊರಟು ಮತ್ತೇನನ್ನೋ ಹಿಂಬಾಲಿಸುತ್ತವೆ, ಮತ್ತೆಲ್ಲಿಗೋ ಹೊರಟು ಬಿಡುತ್ತವೆ. ಕೆಲವೊಮ್ಮೆ ತಮಗೆ ಜೊತೆಯಾಗಬಯಸುವವರನ್ನು ತೊರೆದು, ತಾವು ಬೇರಾರಿಗೋ ಜೊತೆಗಾರರಾಗಲು ಹೊರಡುತ್ತವೆ. ಅದು ತಮ್ಮಭಿಪ್ರಾಯದ ಮೇರೆಗೋ ಅಥವಾ ಪ್ರತಿಷ್ಠೆಗೋ ಅಥವಾ ಬೇರೆಯವರ ಮೇಲಿನ ಗೌರವಕ್ಕೋ ಅಥವಾ ತಮ್ಮ ಕನಸಿನಂತೆ ಬದುಕುವುದಕ್ಕಾಗಿಯೋ ಎಂಬುದು ಮತ್ತೊಂದು ಹೆಜ್ಜೆಗೆ ಮುಖ್ಯವಾಗುವುದಿಲ್ಲ, ಬಹುಶಃ ಆ ಸಮಯಕ್ಕೆ ಸಹ ಹೆಜ್ಜೆಗೆ ಅದು ಅಪ್ರಸ್ತುತ ಕೂಡಾ.

ಉಸುಕಿನ ಮೇಲೆ ಮೂಡಿಸಿದ ಹೆಜ್ಜೆ ಗಾಳಿಗೆ ಮುಚ್ಚಿ ಹೋಗಲೇ ಬೇಕಲ್ಲವೇ? ನೀರಿನ ಮೇಲೆ ಎಂದಾದರೂ ಹೆಜ್ಜೆ ಮೂಡಿಸಲು ಸಾಧ್ಯವೇ? ಬದುಕಿನ ಹಾದಿಯೂ ಹಾಗೆಯೇ..ಹೆಜ್ಜೆಗಳನ್ನು ಒಡಮೂಡಿಸುತ್ತದೆ, ಕ್ರಮೇಣ ಅದರ ಮೇಲೆ ಪ್ರಭಾವ ಬೀರುತ್ತಾ ಆ ಜೊತೆಗೂಡಿದ ಹೆಜ್ಜೆಗಳನ್ನು ಜೊತೆಗೂಡದಂತಾಗಿಸುತ್ತದೆ. ಆದರೆ, ನಂಬಿಕೆ ಜೊತೆಗಿದ್ದರೆ, ಜೊತೆಗಿರುವ ಹೆಜ್ಜೆಗಳು ಎಂದಿಗೂ ಬೇರಾಗವು. ಆದರೂ, ಹೆಜ್ಜೆಗಳು ಜೊತೆಗಿರದಿದ್ದರೂ ಮನಸ್ಸು ಜೊತೆಗಿರಬೇಕಲ್ಲವೇ..? ರಾಧೆಯ ಹೆಜ್ಜೆಗೆ ಕೃಷ್ಣ ಕೊಳಲಾದಂತೆ. ಕೃಷ್ಣನ ರಾಗಕ್ಕೆ ರಾಧೆಯ ಹೆಜ್ಜೆ-ಗೆಜ್ಜೆ-ಲಜ್ಜೆಗಳು ಒಂದಾದಂತೆ.. ನಮ್ಮ ಪಯಣದ ಹೆಜ್ಜೆಗಳು ಜೊತೆಯಾಗಿಯೇ ಸಾಗಲು ಸಾಧ್ಯವೇ..? ಕಡೇ ಪಕ್ಷ ಕನಸಿನಲ್ಲಾದರೂ..

ಬಹುಶಃ ಇಂದು ಜೊತೆಗೂಡದ ಹೆಜ್ಜೆಗಳು, ಬಾಳಯಾನದಲ್ಲಿ ನಾಳೆ ಒಂದಾಗಿ ಜೊತೆಗೂಡಿ ಪಯಣಿಸಬಹುದೇ..? ಬಹುಶಃ ಅದು ಸಾಧ್ಯವಾಗದಿದ್ದರೇ ಒಳಿತು. ಏಕೆಂದರೆ, ಕೈಗೆ ಸಿಕ್ಕ ಚಂದಿರನನ್ನು ನಿರ್ಲಕ್ಷಿಸಿ, ನಿಲುಕದ ನಕ್ಷತ್ರಕ್ಕೇ ಅಲ್ಲವೇ ಮನ ಹಾತೊರೆಯುವುದು..ಅಷ್ಟೇ ಅಲ್ಲದೆ, ಜೊತೆಗೂಡಿ ದೂರವಾಗುವುದಕ್ಕಿಂತ ದೂರವಿದ್ದರೇ ಒಳಿತಲ್ಲವೇ..?

-ವಿಭಾ ವಿಶ್ವನಾಥ್         

ಭಾನುವಾರ, ಅಕ್ಟೋಬರ್ 27, 2019

ಮಾತು ಗಟ್ಟಿಯಾಗಿತ್ತಷ್ಟೇ, ಮನಸಲ್ಲ

ಅವತ್ತು ಮಧ್ಯಾಹ್ನದ ಬ್ರೇಕ್ ವೇಳೆಯಷ್ಟರಲ್ಲಿ ಹಾಸ್ಟೆಲ್ ನಲ್ಲೆಲ್ಲಾ ಕೋಲಾಹಲವೋ ಕೋಲಾಹಲ.ಅದು ಲೇಡೀಸ್ ಹಾಸ್ಟೆಲ್, ವಾಚ್ ಮನ್ ಬಿಟ್ಟು ಉಳಿದವರಿಗಾರಿಗೂ ಪ್ರವೇಶವೇ ಇಲ್ಲದ ಆ ಹಾಸ್ಟೆಲ್ ಗೆ ಅಂದು ಅಡ್ಮಿನಿಸ್ಟ್ರೇಷನ್ ನ ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಕೆಳಗಿನ ಹಂತದ ಅಧಿಕಾರಿಗಳೆಲ್ಲರೂ ಬಂದಿದ್ದರು. ಹಾಸ್ಟೆಲ್ ಮುಂಭಾಗದಲ್ಲೂ ತಕ್ಕ ಮಟ್ಟಿಗೆ ಜನ ನೆರೆದಿದ್ದರು.ಅಲ್ಲಿದ್ದವರೆಲ್ಲರನ್ನೂ ಕಂಡು ಯಾರಿಗೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡಿದ್ದಂತೂ ಸುಳ್ಳಲ್ಲ.

ಟಾಪ್ ಪ್ಲೋರ್ ನಲ್ಲಿ ನಡೆದಿದ್ದ ಆ ಘಟನೆಗೆ ಸಾಕ್ಷಿಯಾಗಲೋ, ಕುತೂಹಲದಿಂದಲೋ ಬಂದ ಜನರಿಂದ ತುಂಬಿ ತುಳುಕುತ್ತಿದ್ದ ಹಾಸ್ಟೆಲ್ ನಲ್ಲಿ ಮೇಲಿನ ಪ್ಲೋರ್ ಗೆ ಹೋಗಲೂ ಸ್ಥಳಾವಕಾಶ ಇರಲಿಲ್ಲ. ಆದದ್ದಿಷ್ಟು ಡಿಪ್ಲೊಮಾ ಓದುತ್ತಿದ್ದ ಆ ಹುಡುಗಿ ಉರುಳು ಹಾಕಿಕೊಂಡಿದ್ದಳು. ಆದರೆ ಆ ಹುಡುಗಿ ಯಾರು? ಕಾರಣ ಏನು ಎಂಬುದು ತಿಳಿಯಲಿಲ್ಲ. ಆದರೆ ತಿಳಿದಾಗ ಬಹಳವೇ ಆಶ್ಚರ್ಯವಾಯಿತು.

ಗಲಗಲ  ಮಾತನಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ, ರೇಗಿಸಿದವರಿಗೆ ಪ್ರತ್ಯುತ್ತರ ಕೊಡುತ್ತಾ ಜೀವನಪ್ರೀತಿಯಿಂದ ಬದುಕುತ್ತಿದ್ದ ಹುಡುಗಿ ಅವಳು. ಅವಳೇ ಸುಫಲಾ. ಕೊನೆಯ ವರ್ಷದ ಪರೀಕ್ಷೆ ಬರೆದು, ಉನ್ನತ ವಿದ್ಯಾಭ್ಯಾಸಕ್ಕಾಗಿ ಕನಸು ಕಟ್ಟಿಕೊಂಡು ಬದುಕುತ್ತಿದ್ದ ಅವಳು ಹಾಗೆ ಮಾಡಿಕೊಂಡದ್ದು ಬಹಳ ಅಚ್ಚರಿಯೇ. ಪರೀಕ್ಷೆಯ ಅನುತ್ತೀರ್ಣದ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದೇನಲ್ಲ ಅವಳು. ಏಕೆಂದರೆ, ಅವಳಿನ್ನೂ ಪರೀಕ್ಷೆಯನ್ನೇ ಬರೆದಿರಲಿಲ್ಲ, ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿಯೂ, ಯಾವ ವಿಷಯದಲ್ಲಿಯೂ ಅನುತ್ತೀರ್ಣಳಾಗಿರಲಿಲ್ಲ.

ಅವತ್ತು ಬೆಳಿಗ್ಗೆ ತಿಂಡಿ ತಿಂದು ಹೊರಗೆ ಹೋಗಿ ಬರಲು ಅವಳು ರಿಜಿಸ್ಟರ್ ಬುಕ್ ನಲ್ಲಿ ಬರೆದಿದ್ದ ಚೆಕ್ ಔಟ್ ಮತ್ತು ಚೆಕ್ ಇನ್ ಸಮಯದಲ್ಲಿ ಇದ್ದ ಅಂತರ ಬರೀ 15 ನಿಮಿಷಗಳಷ್ಟೇ. ಆ ಹದಿನೈದು ನಿಮಿಷಗಳಲ್ಲಿ ಏನಾದರೂ ಆಗಿರಬಹುದಾ?

ಅಥವಾ, ಹಿಂದಿನ ದಿನ ವಾರ್ಡನ್ ಕೈಯಲ್ಲಿ ವಾಚಾಮಗೋಚರವಾಗಿ ಬೈಯ್ಯಿಸಿಕೊಂಡಿದ್ದಳು. ಅದೇನಾದರೂ ಇದಕ್ಕೆ ಕಾರಣವಾಗಿರಬಹುದಾ? ಇಲ್ಲ, ಹಾಗಿರಲಾರದು. ನಿನ್ನೆಯದ್ದನ್ನು ನಿನ್ನೆಗೇ ಬಿಟ್ಟು ಬಿಡುವ ಹುಡುಗಿ ಅವಳು. ಬೆಳಿಗ್ಗೆ ಸಹಾ ಅವರೊಂದಿಗೆ ಬೈಯ್ಯಿಸಿಕೊಂಡಿದ್ದರ ಕುರುಹೇ ಇಲ್ಲದಂತೆ ನಡೆದುಕೊಂಡಿದ್ದಳು ಆಕೆ.

ವಾರ್ಡನ್ ಕರೆದು ಬೈದ್ದದ್ದಕ್ಕೆ ಕಾರಣ ಆಕೆಯೂ, ಆಕೆಯ ಗೆಳತಿಯೂ ತೆಕ್ಕೆ ಬಿದ್ದು ಹೊಡೆದಾಡಿಕೊಂಡು ಇಡೀ ಹಾಸ್ಟೆಲ್ ಅನ್ನೇ ತಿರುಗಿ ನೋಡುವಂತೆ ಮಾಡಿದ್ದಕ್ಕೆ. ಆ ಜಗಳದ ನಂತರ ಅವರಿಬ್ಬರಿಗೂ ಮತ್ತೇನಾದರೂ ಜಗಳವಾಯಿತಾ?
ಅಷ್ಟಕ್ಕೂ ಜಗಳವಾಗುವುದಕ್ಕೆ ಆಕೆಯ ಗೆಳತಿ ಆ ರೂಂನಲ್ಲಿ ಇರಲೇ ಇಲ್ಲ. ಅನುಮಾನದಿಂದ ಎಲ್ಲರ ಕಡೆ ಬೊಟ್ಟು ಮಾಡಿ ತೋರಿಸಲು ಕಾರಣ  ಅವೆಲ್ಲಾ ಘಟನೆಗಳಿಗೆ ಕಾರಣ ಅವೆಲ್ಲಾ ಘಟನೆಗಳಿಗೂ ಸಾಕ್ಷಿಯಾಗಿದ್ದದ್ದು ಸಿ.ಸಿ.ಕ್ಯಾಮೆರಾ.

ಆದರೆ ಸಿ.ಸಿ.ಕ್ಯಾಮೆರಾ ಕಣ್ಣಿಗೆ ಬೀಳದಂತೆಯೂ ಕೆಲ ಘಟನಾವಳಿಗಳು ನಡೆಯಬಹುದು ಅಲ್ಲವೇ? ಸಿ.ಸಿ ಕ್ಯಾಮೆರಾ ಕಣ್ಣಿಗೆ ಬೀಳದ್ದು ಆ ತನಿಖೆಯ ಮುಖ್ಯಾಧಿಕಾರಿಯ ಕಣ್ಣಿಗೆ ಬಿದ್ದಿತ್ತು.

ಸಾಕ್ಷಿಯಾದ ಪ್ರಮುಖ ಸಾಕ್ಷಿ ಆಕೆಯ ಮೊಬೈಲ್. ಡೆತ್ ನೋಟ್ ಅಂತಹದ್ದೇನೂ ಸಿಗದಿದ್ದರಿಂದ ಆಕೆ ಮಾಡಿದ ಕೊನೆಯ ಮೆಸೇಜ್ ಮತ್ತು ಕಾಲ್ ಗಳೇ ಪ್ರಮುಖ ಸಾಕ್ಷಿಯ ಪಾತ್ರ ವಹಿಸಿಕೊಂಡಿದ್ದವು.ಆ ನಂಬರ್ ಗಳೆಲ್ಲವೂ ಬೊಟ್ಟು ಮಾಡಿ ತೋರಿಸುತ್ತಿದ್ದದ್ದು ರವಿಯ ನಂಬರ್ ಗೆ. ರವಿ ಈಕೆಗಿಂತ 2 ವರ್ಷ ದೊಡ್ಡವನು ಅಷ್ಟೇ. ಈಕೆ ಕಾಲೇಜಿಗೆ ಸೇರಿದಾಗ ಆತ ಫೈನಲ್ ಇಯರ್ ಜೊತೆಗೆ ಆತನದ್ದೂ ಈಕೆಯ ಊರೇ. ಪರಿಚಯ, ಸ್ನೇಹಕ್ಕೆ ತಿರುಗಿ ಅಲ್ಲಿಂದ ಪ್ರೇಮಕ್ಕೆ ತಿರುಗಿತ್ತು. ಆದರೆ, ಅದು ನೈಜ ಪ್ರೇಮವೇನೂ ಆಗಿರಲಿಲ್ಲ ಎಂದು ಸುಫಲಾಳಿಗೆ ತಿಳಿಯಲು ಒಂದು ವರ್ಷವೇ ಬೇಕಾಗಿತ್ತು. ಏಕೆಂದರೆ, ಈಕೆಯ ರೂಂ ಮೇಟ್ ಆಗಿ ಬಂದ ಸೃಜನಾಳ ಜೊತೆಗೆ ರವಿಯ ಸಲುಗೆ ಹೆಚ್ಚಾಯಿತು.ಆದರೆ, ಮುಸುಕಿನ ಗುದ್ದಾಟದಂತೆಯೇ ತ್ರಿಕೋನ ಪ್ರೇಮ ಕತೆ ನಡೆದಿತ್ತು. ಸುಫಲಾ ಸಾಯುವ ಹಿಂದಿನ ದಿನ ಸೃಜನಾಳೊಂದಿಗೆ ಆಗಿದ್ದ ಜಗಳಕ್ಕೆ ಮೂಲ ಕಾರಣ ಕೂಡಾ ಇಡೇ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಅಶ್ಲೀಲ್ಲ ಮಾತುಗಳೊಂದಿಗೆ ಬೆಳೆದ ಜಗಳ ಇಬ್ಬರೂ ಶರಂಪರ ಕಿತ್ತಾಡಿ, ಕೂದಲು ಹಿಡಿದು ಜಗ್ಗಾಡಿ, ತೆಕ್ಕೆ ಬಿದ್ದು ಹೊಡೆದಾಡುವಷ್ಟಾಗಿತ್ತು. ಇತರರಿಗೆ ಮತ್ತು ವಾರ್ಡನ್ ಗೆ ನೈಜ ವಿಷಯದ ಅರಿವಿರಲಿಲ್ಲ, ಆದರೆ ಇಬ್ಬರ ಈ ಮಟ್ಟದ ಹೊಡೆದಾಟವನ್ನು ಇಡೀ ಹಾಸ್ಟೆಲ್ ನಿಂತು ನೋಡುತ್ತಿತ್ತು. ಎಲ್ಲರಿಗೂ ಬಿಟ್ಟಿ ಮನೋರಂಜನೆ ಸಿಗುವಾಗ ಯಾರಾದರೂ ಹೋಗಿ ಬಿಡಿಸುತ್ತಾರೇಕೆ? ಕಾಲವೇ ಹೀಗಲ್ಲವೇ..? ಕೆಲಹೊತ್ತಿನ ನಂತರ ಬಂದ ವಾರ್ಡನ್ ಇಬ್ಬರಿಗೂ ಛೀಮಾರಿ ಹಾಕಿ ಹೊರಟರು.

ಅದಾದ ನಂತರ ಸೃಜನಾ ಆ ರೂಂಗೆ ಕಾಲಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ರವಿ ವೀಡಿಯೋ ಕಾಲ್ ಮಾಡಿ ಸುಫಲಾಳಿಗೆ ಬುದ್ದಿ ಹೇಳಿ, ತಾನು ಮತ್ತು ಸೃಜನಾ ಇಬ್ಬರೂ ಪ್ರೀತಿಸುತ್ತಿದ್ದೇವೆ ಅಲ್ಲದೆ ಮದುವೆಯೂ ಆಗುತ್ತೇವೆ ಆದ್ದರಿಂದ ತಮ್ಮನ್ನು ಬಿಟ್ಟು ನಿನ್ನ ಜೀವನವನ್ನು ನೋಡಿಕೋ ಎಂದು ಹೇಳಿದ್ದ.

ಇದೆಲ್ಲದರಿಂದ ಒತ್ತಡಕ್ಕೊಳಗಾದ ಸುಫಲಾ, ಸೃಜನಾಳನ್ನು ಹುಡುಕಿಕೊಂಡು ಹೋಗಿದ್ದಳು.ಆದರೆ, ಸೃಜನಾ ಸ್ಟಡೀ ಹಾಲಿಡೇಸ್ ಆದ್ದರಿಂದ ಅಂದು ಬೆಳಿಗ್ಗೆಯೇ ಊರಿಗೆ ಹೋಗಿದ್ದಳು. ಇದು ಗೊತ್ತಿಲ್ಲದ ಸುಫಲಾ ಅವಳನ್ನು ಕ್ಯಾಂಪಸ್ ನಲ್ಲೆಲ್ಲಾ ಹುಡುಕಿ ಸುಸ್ತಾಗಿ ಬಂದಳು. ಅದಕ್ಕಾಗಿಯೇ ಅವಳ 15 ನಿಮಿಷ ವ್ಯಯವಾಗಿದ್ದು.

ಬಂದವಳು ಬಾಗಿಲನ್ನು ಬೋಲ್ಟ್ ಮಾಡದೆ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ಮೊದಲು ನೋಡಿದ್ದ ಕೆಲಸದವಳು ತಾನೂ ಗೊಂದಲಗೊಂಡು ಎಲ್ಲರನ್ನೂ ಕೊಲೆಯೋ? ಆತ್ಮಹತ್ಯೆಯೋ ? ಎಂಬ ಅನುಮಾನ ಮೂಡುವಂತೆ ಮಾಡಿದ್ದಳು.ಅಂದು ಸೃಜನ ಸಿಕ್ಕಿದ್ದರೆ ಅವಳೊಡನೆ ಮಾತನಾಡಿಯಾದರೂ ಇವಳ ನೋವು ಹಗುರಾಗುತ್ತಿತ್ತೇನೋ..? ಗಟ್ಟಿ ಮಾತಿನ ಹುಡುಗಿ ಗಟ್ಟಿ ನಿರ್ಧಾರ ತಳೆಯಬಹುದಾಗಿತ್ತು. ಆತ್ಮವಿಶ್ವಾಸವಿದ್ದರೂ, ಒಂದು ಕ್ಷಣದ ದುರ್ಬಲ ಮನಸ್ಸಿನ ಮೆದು ನಿರ್ಧಾರ ಅವಳಿಗೇ ಉರುಳಾಗಿತ್ತು. ಬದಲಾಯಿಸಬಹುದಾಗಿದ್ದ ಭವಿಷ್ಯ, ಬದಲಾಯಿಸಲಾಗದ ಭೂತವಾಗಿತ್ತು ಅಷ್ಟೇ.

~ವಿಭಾ ವಿಶ್ವನಾಥ್ 

ಗುರುವಾರ, ಅಕ್ಟೋಬರ್ 24, 2019

ಜನನಾಯಕರಿಗೆ ಜನಸಾಮಾನ್ಯರಿಂದ..

ಜನನಾಯಕರಿಗೆ,

ಈ ಪ್ರಜಾತಂತ್ರ ಆಡಳಿತದಲ್ಲಿ, ಪ್ರಜೆಗಳಿಂದಲೇ ಆರಿಸಿಕೊಂಡು ಅವರನ್ನೇ ಮರೆತು ಅವರ ಹಣದ ಭಿಕ್ಷೆಯಿಂದ ಜೀವನ ನಡೆಸುತ್ತಿರುವ ಧೀಮಂತನಾಯಕರಿಗೆ...

ಒಬ್ಬ ಸಾಮಾನ್ಯ ಪ್ರಜೆಯ ಅಳಲು ಕೇಳುವ ಆಸಕ್ತಿಯಿದ್ದರೆ ಮುಂದುವರಿಯಿರಿ.
ಐದು ವರ್ಷದ ಅಧಿಕಾರದ ಅವಧಿಯಲ್ಲಿ ನೀವು ಎಷ್ಟೆಲ್ಲಾ ಅವ್ಯವಹಾರ ನಡೆಸಿಬಿಡುತ್ತೀರಾ ಅಲ್ಲವೇ? ಅಧಿಕಾರದ ಅಮಲು ನಿಮಗೆ ಅಷ್ಟೊಂದು ಆವರಿಸಿಕೊಂಡು ಬಿಡುತ್ತದೆಯೇ?ಅಧಿಕಾರ ಬರುವ ಮುನ್ನ ನಮ್ಮ ಹಾಗೆಯೇ ಬಸ್ಸಿನಲ್ಲಿ,ಬೈಕಿನಲ್ಲಿ ಅಥವಾ ನಡೆದುಕೊಂಡೇ ಓಡಾಡುತ್ತಿದ್ದವರು ,ಈಗ ಕಾರು ಬಿಟ್ಟು ಕಾಲು ಬಿಟ್ಟು ಕಾಲು ಬಳಸುವುದೇ ಅಪರೂಪ. ನೀವು ನಿಮ್ಮ ಕಾಲು ಬಳಸಿದರೆ ಬಹುಶಃ ಅದು ನಿಮ್ಮ ಪಕ್ಷದ ಯಾವುದೋ ಪ್ರಚಾರಕ್ಕೆ ಇಲ್ಲವೆಂದರೆ ತೂಕ ಇಳಿಸುವ ಯಾವುದೋ ಚಿಕಿತ್ಸೆಗಾಗಿರುತ್ತದೆ.

ತಂಗಳು ಮುದ್ದೆ,ಅನ್ನ, ಮಧ್ಯಾಹ್ನದ ಸಾರಲ್ಲಿ ಊಟ ಮಾಡುತ್ತಿದ್ದವರಿಗೆ ಈಗ ಫೈವ್ ಸ್ಟಾರ್ ಹೋಟೆಲ್ ಗಳ ಊಟ ಬಿಟ್ಟು ಬೇರೆ ಊಟ ರುಚಿಸುವುಡೇ ಇಲ್ಲ. ನೀವು ಬಿಸಾಡುವ ಊಟ ಎಷ್ಟೋ ಜನ ಬಡವರ ದಿನನಿತ್ಯದ ಆಹಾರಕ್ಕಿಂತ ಹೆಚ್ಚಿರುತ್ತದೆ ಎಂಬುದು ನಿಮಗೆ ಗೊತ್ತೇ ಆಗುವುದಿಲ್ಲ..!ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದಾದಾಗ ಮಾತ್ರವೇ ಹೀಗಾಗುತ್ತದೆ. ಕಷ್ಟಪಟ್ಟು ದುಡಿದಿದ್ದರೆ ಬಹುಶಃ ನಿಮಗೆ ಆ ಹಣದ ಬೆಲೆಯ ಅರಿವಾಗುತ್ತಿತ್ತೇನೋ?

ನೀವು ಹುಟ್ಟಿದ ಹಳ್ಳಿಯ ಹೆಸರನ್ನು ನಿಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ಮೆರೆಯುವ ನೀವು ಆ ಊರಿನ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಲ್ಲವೇ?ಆ ಊರಿನ ರಸ್ತೆ ಡಾಂಬರು ಕಂಡು ಎಷ್ಟೋ ವರ್ಷಗಳೇ ಆಗಿಹೋಗಿದೆ, ನಿಮ್ಮೂರಿನ ಸರ್ಕಾರಿ ಶಾಲೆಗೆ ಹಾಕಿದ ಬೀಗ ತೆಗೆಯಲಾಗದಂತೆ ಕಿಲುಬು ಹಿಡಿದಿದೆ. ಆದರೂ ಸರ್ಕಾರದಿಂದ ಬಿಡುಗಡೆಯಾಗುವ ಹಣದ ಅನುದಾನಕ್ಕೆ ಆ ಶಾಲೆಯದ್ದೇ ಮುಖ್ಯ ಹೆಸರು. ಡಾಂಬರು ಹಾಕಿಸುವ ನೆಪದಲ್ಲಿ ಕಾಂಟ್ರಾಕ್ಟ್ ಮಾಡಲು ಗೊತ್ತೇ ಇರದ ಆ ಕಾಂಟ್ರಾಕ್ಟುದಾರನಿಗೆ ಹಣದ ಸುರಿಮಳೆ. ಇದನ್ನೆಲ್ಲಾ ತಡೆಯಲು ಬರುವ ಸರ್ಕಾರಿ ಅಧಿಕಾರಿಗಳಿಗೆ ಯಮನೂರಿಗೆ ಪರವಾನಗಿ ಕೊಟ್ಟು ಕಳುಹಿಸಿಯೇ ಬಿಡುತ್ತೀರ,  ಅದಕ್ಕೆ ಅಡ್ಡಿಪಡಿಸಿದರೆ ಅಲ್ಲಿಂದ ಎತ್ತಂಗಡಿಯ ಭಾಗ್ಯ. ಇದೇ ಅಲ್ಲವೇ ನಿಮ್ಮಿಂದ ಆಗುವುದು?

ಓ, ಒಂದು ರೂಪಾಯಿಗೆ ಅಕ್ಕಿ ನೀಡುತ್ತೇನೆನ್ನುವಿರಾ,ನಿಮ್ಮ ಆ ಅಕ್ಕಿ ಪಡೆಯಲು ಹೆಬ್ಬೆಟ್ಟಿನ ಗುರುತು ನೀಡಲು ಬರುವ ವೃದ್ದರ ಪಾಡು ನೀವು ಗಮನಿಸಲೇ ಇಲ್ಲವೇ? ರೇಷನ್ ಒದಗಿಸುವ ವ್ಯಕ್ತಿಯ ಅಧಿಕಾರದ ಚುಕ್ಕಾಣಿ ಬೇರೊಬ್ಬರ ಹಿಡಿತದಲ್ಲಿದ್ದರೂ,ಯಾರೂ ಅದನ್ನು ಚಕಾರವೆತ್ತದಂತೆ ಅವರು ಕೊಟ್ಟಷ್ಟು ತೆಗೆದುಕೊಂಡು, ಅವರು ಅಂದಂತೆ ಅನ್ನಿಸಿಕೊಂಡು ನಮ್ಮ ಹಣೆಬರಹವೇ ಇಷ್ಟೆಂದು ಹಳಿದುಕೊಂಡು ಸುಮ್ಮನಿರಬೇಕೆಂದು ಕಟ್ಟಳೆ ಮಾಡಿಲ್ಲವೇ? ದುಡಿಯುವ ವ್ಯಕ್ತಿಗಳಿಗೂ ಅಕ್ಕಿಯ ಆಸೆ ತೋರಿಸಿ ಸೋಮಾರಿಗಳನಾಗಿಸಿದ್ದು ಸಾಲಲಿಲ್ಲವೇ?

ಸ್ವಾಮಿ, ಒಂದು ದಿನ ಪೊರಕೆ ಹಿಡಿದು ಬೀದಿ ಶುಭ್ರ ಮಾಡಿದರೆ ಸಾಲದು, ಮೊದಲು ಮನಸ್ಸನ್ನು ಶುಭ್ರಗೊಳಿಸಿಕೊಳ್ಳಬೇಕು. ಲಂಚ ಕೊಡಲಾಗದೆ ಬದುಕನ್ನೇ ಛಿದ್ರ ಮಾಡಿಕೊಂಡವರ ಬದುಕನ್ನು ಮರಳಿಸಲು ನಿಮ್ಮಿಂದಾಗುವುದೇ? ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು-ರಾತ್ರಿ ಓದಿ ಪ್ರಥಮ ಸ್ಥಾನ ಪಡೆದವನನ್ನೂ, ಲಂಚ ಕೊಡಲಿಲ್ಲವೆಂದೂ ರಿಸರ್ವೇಷನ್ ಇಲ್ಲವೆಂದು ತಿರಸ್ಕರಿಸಿದಾಗ, ಅವನ ಕಣ್ಣಿನಲ್ಲಿನ ಅಸಹಾಯಕತೆಯ ನೋವು ನಿಮಗೆ ಕಾಣಲೇ ಇಲ್ಲವೇ?

ಸರಕಾರಿ ಶಾಲೆಗಳನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ, ದೂರದರ್ಶನದಲ್ಲಿ ಅಷ್ಟುದ್ದದ ಸಂದರ್ಶನ ನೀಡುತ್ತಿರುವಾಗ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕೆಂಬುದು ನೆನಪಾಗಲಿಲ್ಲವೇ?
ಬಹುಶಃ ಪೂರ್ತಿ ಪತ್ರ ಓದಿದ್ದರೆ, ಮಾನವೀಯತೆಯ ಲವಲೇಷವಾದರೂ ನಿಮ್ಮಲ್ಲಿ ಇನ್ನೂ ಜೀವಂತವಾಗಿದ್ದರೆ ಮೊದಲು ನೀವು ಬದಲಾಗಿ, ನಂತರ ನಿಮ್ಮವರನ್ನೂ ಬದಲಾಯಿಸಿ

-ಇಂತಿ
ಬದಲಾವಣೆ ಬಯಸುವ ಸಾಮಾನ್ಯ ಪ್ರಜೆ

(ಬರಹ : ವಿಭಾ ವಿಶ್ವನಾಥ್)

ಭಾನುವಾರ, ಅಕ್ಟೋಬರ್ 20, 2019

ಬಿಟ್ಟು ಹೊರಡುವ ಮುನ್ನ..

ನಿನಗೆ,
ಏನೆಂದು ಸಂಭೋಧಿಸಲೆಂದೇ ಗೊತ್ತಾಗದೆ ಆತ್ಮೀಯನಾಗಿದ್ದ ನಿನಗೇ,

ಬಿಟ್ಟು ಹೊರಡುವ ಘಳಿಗೆ ಹತ್ತಿರ ಬರುತ್ತಿದ್ದಂತೆ ಮನದಲ್ಲೇನೋ ತಲ್ಲಣ, ಮಾತನಾಡಲು ನೂರಾರು ಪದಗಳಿವೆ, ಹಂಚಿಕೊಳ್ಳಲು ನೂರಾರು ಕನಸುಗಳಿವೆ. ಎದೆಯಾಳದಲ್ಲಿ ಸಾವಿರಾರು ಭಾವನೆಗಳಿವೆ.ಆದರೆ ಹೇಳಿಕೊಳ್ಳಲು ನೀನೇ ಸಿಗುತ್ತಿಲ್ಲ. ಮೌನಿಯಂತಿದ್ದ ನನ್ನಲ್ಲಿ ಮಾತನಾಡಲು ಚೈತನ್ಯ ತುಂಬಿದ ನಿನಗೆ ಧನ್ಯವಾದಗಳನ್ನೇಳಬೇಕು ಎಂದಿದ್ದೇನೆ. ಆದರೆ ಹೇಳುವುದಿಲ್ಲ. ಮನದಲ್ಲಿರುವುದು ಮಾತಾಗಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಅದನ್ನು ಹೇಳುವ ಮನಸಿಲ್ಲ.

ಏಕೋ, ನೀನು ಮೊದಲಿನಂತಿಲ್ಲ.ನನಗೇ ಹಾಗನ್ನಿಸುತ್ತಿದೆಯೋ, ಇಲ್ಲ ನೀನೇ ಬದಲಾಗುತ್ತಿರುವೆಯೋ ಗೊತ್ತಿಲ್ಲ. ಆದರೆ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದವಳನ್ನು ವಾಚಾಳಿಯನ್ನಾಗಿ ಮಾಡಿದೆ. ಆದರೆ ನನ್ನ ಮಾತುಗಳನ್ನು ನೀನು ಕೇಳಲೇ ಇಲ್ಲ. ನಿನ್ನ ಮುಂದಿದ್ದಾಗ ಮಾತೇ ಹೊರಡದೇ ತಬ್ಬಿಬ್ಬಾದರೂ ಭಾವನೆಗಳನ್ನು ಅರ್ಥೈಸಿಕೊಂಡು ಸಾಂತ್ವನ ಹೇಳಿದ್ದೀಯ. ನಿನಗೆ ನನ್ನ ಅವಶ್ಯಕತೆ ಮುಗಿಯುವ ಮುನ್ನವೇ ಈ ಸಂಬಂಧದ ಕೊಂಡಿಯನ್ನು ಕಳಚಲೇಬೇಕಲ್ಲವೇ?

ಭಾವನೆಗಳ ಸೂಕ್ಷ್ಮತೆಗಳು ನಿನಗೆ ತಿಳಿಯುವುದಿಲ್ಲವೆಂದು ನಾನು ಹೇಳಿದ್ದು ಎಷ್ಟು ಸಲವೋ? ಆದರೆ ಎಷ್ಟೋ ಸಲ ಅನ್ನಿಸಿದ್ದಿದೆ. ನಾನು ನಿನ್ನಷ್ಟು ಭಾವುಕಳಲ್ಲವೆಂದು. ಹೆಂಗರುಳು ನಿನ್ನದು. ಎಲ್ಲರ ಕಷ್ಟಕ್ಕೂ ಮರುಗುವ, ಸ್ಪಂದಿಸುವ ನೀನು ಇತ್ತೀಚೆಗೆ ಹೃದಯವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಕಂಡರೂ ಕಾಣದಂತೆ ಹೋಗಿ ಬಿಡುತ್ತೀಯೆ. ಏಕೆಂಬುದು ಮಾತ್ರ ಗೊತ್ತಿಲ್ಲ, ನನ್ನ ತಪ್ಪಿದ್ದರೆ ಬೈದು ಬುದ್ದಿ ಹೇಳಬಹುದಲ್ಲವೇ? ಕೇಳಿದರೆ ಕೆಲಸದ ಬ್ಯುಸಿ ಎನ್ನುತ್ತೀಯ, ಕೆಲಸದ ಬ್ಯುಸಿ ಎಂದಾದರೆ ನನ್ನದೊಂದು ಪ್ರಶ್ನೆ. ಕೆಲಸಕ್ಕೋಸ್ಕರವಾಗಿ ಬದುಕುತ್ತಿದ್ದೀಯೋ? ಅಥವಾ ಬದುಕುವುದಕ್ಕೋಸ್ಕರವಾಗಿ ಕೆಲಸವೋ? ಇದಕ್ಕಾದರೂ ಎಂದಾದರೂ ಉತ್ತರ ಹುಡುಕಿಕೋ.

ಮನಸ್ಸಿಗೆ ಬೇಜಾರಾದಾಗ ಯೋಚಿಸಲು ಪುರುಸೊತ್ತಿಲ್ಲದಂತೆ ಕೆಲಸ ಮಾಡು ಎಂದು ನೀನೇ ಎಂದೋ ಹೇಳಿದ್ದೆ. ಅದಕ್ಕೋಸ್ಕರವೇ ನೀನು ಹೀಗೆ ನಿನ್ನನ್ನು ನೀನು ಕೆಲಸದದಲ್ಲಿ ತೊಡಗಿಸಿಕೊಂಡಿದ್ದೀಯಾ? ಉತ್ತರ ಹೇಳಲು , ನಿನಗೆ ನಾನು ಯಾರು ಅಲ್ಲವೇ?

ಉತ್ತರಗಳೇ ಸಿಗದ, ದ್ವಂದ್ವ ನಿಲುವಿನ ಎಷ್ಟೋ ಪ್ರಶ್ನೆಗಳಿಗೆ ನೀನೇ ಉತ್ತರಿಸಿದ್ದೀಯ. ಆಗ ವಾದಗಳು, ಚರ್ಚೆಗಳು ನಡೆದರೂ ಕೊನೆಗೆ ಇಬ್ಬರೂ ಮತ್ತೆ ಬರುತ್ತಿದ್ದುದು ದ್ವಂದ್ವತೆಯ ನಿಲುವಿಗೇ. ಕಾರಣ, ನೀನು ಹೇಳಿದ್ದು ಸರಿ ಎಂದು ನನಗನ್ನಿಸಿದರೆ, ನಾನು ಹೇಳಿದ್ದು ಸರಿ ಎಂದು ನಿನಗನ್ನಿಸುತ್ತಿತ್ತು. ಕೊನೆಗೆ ಒಂದು ನಿಲುವಿಗೆ ಬರಲಾಗದೆ, ಒಬ್ಬರಿಗೊಬ್ಬರು ಸೋಲದೆ,ಇಬ್ಬರೂ ಗೆಲ್ಲದೆ ದೂಡಿದ ಕ್ಷಣಗಳೆಷ್ಟೋ?

ಕೆಲವೊಂದು ವಿಷಯಗಳಲ್ಲಿ ಭಿನಾಭಿಪ್ರಾಯಗಳಿದ್ದರೂ, ಒಮ್ಮತದ ನಿಲುವಿಗೆ ಬರಬೇಕೆಂದಾದಾಗ ನೀನೊಮ್ಮೆ ಸೋತರೆ, ನಾನೊಮ್ಮೆ ಸೋಲುವೆ. ಗೆಲುವಿನ ಅಹಂಭಾವ ಅಲ್ಲಿಲ್ಲ, ಸೋಲುವಿಕೆಯ ಸೊಗಡೂ ಅಲ್ಲಿ ಸುಳಿಯಲಿಲ್ಲ. ಅಭಿಪ್ರಾಯಗಳಲ್ಲಿ ನೀನು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ. ಬಹುಶಃ ವಿಜ್ಞಾನದ ಕಾಂತೀಯ ನಿಯಮದಂತೆ "ವಿರುದ್ದ ಧ್ರುವಗಳು  ಆಕರ್ಷಿಸಲ್ಪಡುತ್ತವೆ" ಎಂಬ ನಿಯಮದಂತೆಯೇ ಇರಬೇಕು ನಾವು ಸೆಳೆಯಲ್ಪಟ್ಟಿದ್ದು.ಸೆಳೆಯಲ್ಪಡಲು ಕಾರಣವಾದ ಆ ಶಕ್ತಿ ಯಾವುದೋ? ಈಗ ಬೇರೆಯಾಗುವ ನಿರ್ಧಾರವನ್ನು ಬೆಂಬಲಿಸುತ್ತಿರುವ ಶಕ್ತಿ ಯಾವುದೋ?
ಎಲ್ಲದಕ್ಕೂ ಒಂದು ಕಾರಣ ಇದೆ ಎಂದು ಹೇಳುತ್ತಿದ್ದೆಯಲ್ಲಾ, ಆ ಕಾರಣ ಯಾವುದು ಎಂದು ಕೇಳಿದರೆ.. ಗೊತ್ತಿಲ್ಲ, ಆದರೆ ಯಾವುದೋ ಒಂದು ಕಾರಣ ಇರುವುದಂತೂ ಸತ್ಯ ಎನ್ನುತ್ತೀಯಲ್ಲ. ನಿನ್ನ ನಂಬಿಕೆಯಂತೆ ಇದಕ್ಕೂ ಯಾವುದೋ ಒಂದು ಬಲವಾದ ಕಾರಣ ಇರಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ಒಳ್ಳೆಯದೇ ಆಗಲಿ.

-ಇಂತಿ
ಬಿಡಲಾಗದಿದ್ದರೂ ಬಿಟ್ಟು ಹೊರಟಿರುವ ನಿನ್ನ ಹಿತೈಷಿ

(ಬರಹ : ವಿಭಾ ವಿಶ್ವನಾಥ್)