ಶನಿವಾರ, ನವೆಂಬರ್ 28, 2026

ಕರ್ಣಾಮೃತ (ಪುಸ್ತಕ ಯಾನ - 522)


ಪುಸ್ತಕದ ಶೀರ್ಷಿಕೆ : ಕರ್ಣಾಮೃತ

ಕೃತಿ ಪ್ರಕಾರ : ಶ್ರವ್ಯ ನಾಟಕಗಳು

ಲೇಖಕರು : ಗೌರೀಶ ಕಾಯ್ಕಿಣಿ 

ಪ್ರಕಾಶಕರು : ಶ್ರೀ ರಾಘವೇಂದ್ರ ಪ್ರಕಾಶನ

ಪ್ರಥಮ ಮುದ್ರಣ : 1980

ಪುಟಗಳು : 115


ಶ್ರವ್ಯ ನಾಟಕಗಳು ಅಥವಾ ರೇಡಿಯೋ ರೂಪಕಗಳಲ್ಲಿ ಕಣ್ಣಿಗೆ ಕಾಣುವಂತಹ ದೃಶ್ಯಗಳಿರುವುದಿಲ್ಲ. ಬದಲಾಗಿ ನಮ್ಮ ಕಿವಿಗೆ ಬೀಳುವ ವೈವಿಧ್ಯಮಯ ಶಬ್ದಗಳು, ಹಿನ್ನೆಲೆ ಸಂಗೀತ, ಸಂಭಾಷಣೆ ಹಾಗೂ ಧ್ವನಿಯ ಏರಿಳಿತಗಳ ಮೂಲಕ ಕೇಳುಗರ ಕಲ್ಪನಾಶಕ್ತಿಗೆ ಹೆಚ್ಚಿನ ಅವಕಾಶ ಕೊಡುವ ವೈವಿಧ್ಯಮಯ ಸಾಹಿತ್ಯ ಪ್ರಕಾರ ಇದು. ಅಂದಿನ ಬಾನುಲಿ ರೂಪಕಗಳಿಂದ ಇಂದಿನ ಆಡಿಬಲ್, ಕುಕು ಎಫ್.ಎಂ ಗಳಂತಹ ಆಪ್ ಗಳಲ್ಲಿಯೂ ಈ ಪ್ರಕಾರಗಳನ್ನು ಕಾಣಬಹುದು. ಧ್ವನಿಯ ಏರಿಳಿತದಂತೆಯೇ ಸಂಭಾಷಣೆಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. 


ಕರ್ಣಾಮೃತ ಎಂಬ ಶೀರ್ಷಿಕೆ ಇಲ್ಲಿನ ಒಂದು ರೂಪಕದಲ್ಲಿನ ಮಹಾಭಾರತದ ಕರ್ಣನ ಕುರಿತ ಪ್ರಸಂಗವೂ ಹೌದು.. ಕಿವಿಗೆ ಅಮೃತದಂತಹ ಸಾಹಿತ್ಯವನ್ನು ಉಣಬಡಿಸುವ ರೂಪವೂ ಹೌದು ಎನ್ನಿಸಿತು. ಇಲ್ಲಿ ನಾಲ್ಕು ರೇಡಿಯೋ ರೂಪಕಗಳಿವೆ. ಒಂದು ಪೌರಾಣಿಕ ಒಂದು ಚಾರಿತ್ರಿಕ ಹಾಗೂ ಮತ್ತೆರಡು ಸಾಮಾಜಿಕ ರೂಪಕಗಳಿವೆ. ಅದರಲ್ಲಿ ಒಂದು ನಿಷ್ಠೆಯನ್ನು ತೋರುವ ಪ್ರಸಂಗವನ್ನು, ಮತ್ತೊಂದು ಭಕ್ತಿಯನ್ನು ಎತ್ತಿ ಹಿಡಿಯುವ ಪ್ರಸಂಗವನ್ನು ತೋರುತ್ತಿವೆ.


ಕರ್ಣಾಮೃತ : ಕುಂತಿ ಹಾಗೂ ಕರ್ಣರ ಭೇಟಿಯ ಪ್ರಸಂಗದ ಚಿತ್ರಣ ಇಲ್ಲಿದೆ. ವಚನ ಭಾರತ, ಕುಮಾರವ್ಯಾಸವನ್ನು ಮೂಲವಾಗಿಟ್ಟುಕೊಂಡು ಕಲ್ಪನೆಯಿಂದ ಕಟ್ಟಿಕೊಟ್ಟಿರುವ ರೂಪಕವಿದು. ಕೃಷ್ಣ ಮಹಾಭಾರತ ಯುದ್ಧಕ್ಕೂ ಮುನ್ನ ಸಂಧಾನಕ್ಕೆ ಬಂದ ಸಂದರ್ಭದಲ್ಲಿ ವಿದುರನ ಮನೆಗೆ ಬರುತ್ತಾನೆ. ಕುಂತಿಗೆ ತಾನು ಕರ್ಣನನ್ನು ಭೇಟಿಯಾದ ಕುರಿತು ತಿಳಿಸುವ ಹಾಗೂ ಕರ್ಣನ ಜನ್ಮ ವೃತ್ತಾಂತದ ಮತ್ತು ಕುಂತಿ ಕರ್ಣನನ್ನು ಭೇಟಿಯಾಗುವ ಪ್ರಸಂಗಗಳಿವೆ. ಕೃಷ್ಣ ಹಾಗೂ ಕುಂತಿಗೂ ಮುನ್ನ ಕರ್ಣನಿಗೆ ಜನ್ಮವೃತ್ತಾಂತವನ್ನು ತಿಳಿಸಿದವರು ಯಾರು..? ಓದಿ ನೋಡಿ.


ಈ ನಾಟಕದಲ್ಲಿ ಒಂದು ದೃಶ್ಯ ರೂಪಕದ ಹಿನ್ನೆಲೆಯನ್ನು ಬರೆದಿರುವ ಕ್ರಮವನ್ನು ಹೀಗೆ ನೋಡಬಹುದು. ಕೌರವನ ಸಭೆಯಲ್ಲಿ ಸಂಧಾನ ವಿಫಲವಾಗುವ ಹಿನ್ನೆಲೆ ಇದು.

(ಕೌರವ ಸಭಾವಿಸರ್ಜನೆಯನ್ನು ಸೂಸುವ ಕಲಕಲ ಕೋಲಾಹಲ, ಶಂಖ ತುತ್ತೂರಿ ನಗಾರಿಗಳು ಮೊಳಗುತ್ತಿವೆ. ಜನಸ್ತೋಮ ಗುಂಪುಗುಂಪಾಗಿ ಚದುರುವ ಸದ್ದು, ಮಾತುಕತೆ, ಕೃಷ್ಣಸಂಧಾನ ವಿಫಲವಾದ ಸಭೆಯ ವಿಚಿತ್ರ ಮುಕ್ತಾಯದ ಬಗ್ಗೆ ಮಿಶ್ರ ಪ್ರತಿಕ್ರಿಯೆಯ ಉದ್ಗಾರಗಳು. ಮುನ್ನೆಲೆಯಲ್ಲಿ, ಹಿನ್ನೆಲೆಯಲ್ಲಿ ನಗಾರಿಯ ಸದ್ದು ಕೆಲ ನಿಮಿಷ ಮುಂದುವರಿಯುತ್ತಾ ಮಂದವಾಗುತ್ತದೆ.)


ಇಲ್ಲಿಯಾದರೂ ನಮಗೆ ಎಂತೆಂತಹ ಸದ್ದು ಎಂದು ಓದಲು ಸಿಗುತ್ತದೆ. ಆದರೆ, ಇದು ಕೇವಲ ಸದ್ದಿನಿಂದಲೇ ಸಂದರ್ಭದ ಆಸಕ್ತಿ ಮೂಡಿಸಿ ಕೇಳುಗರನ್ನು ಸೆಳೆಯುವುದನ್ನು ಗಮನಿಸಬಹುದು.


ಭಾಗೀರಥಿ ತೀರದಲ್ಲಿ ಕುದುರೆ-ಬಟ್ಟೆ ತೊಳೆಯುತ್ತಿದ್ದ ಸೂತ ದಂಪತಿಗೆ ತೇಲಿ ಬರುತ್ತಿದ್ದ ಮಗು ಸಿಗುವ ಸಂದರ್ಭ. ರಾಧಾ ಮಗುವನ್ನು ಎದೆಗೊತ್ತಿಕೊಂಡಾಗ ಕುಪ್ಪಸ ತೊಯ್ದು ಹೋಯಿತು ಎಂದು ಹೇಳುತ್ತಾಳೆ ರಾಧಾ. 

ಅದಕ್ಕೆ ಕಾರಣ ಅವಳ ಎದೆಯಲ್ಲಿ ಹಾಲು ತುಂಬಿ ಬಂದದ್ದು.

ಅಧಿರಥ ಗಹಗಹಿಸಿ ನಗುತ್ತಾ "ಬಂಜೆಗೆ ಹಾಲು ಅಂದ್ರೇನು" ಎಂದು ಹಾಸ್ಯ ಮಾಡಿದರೂ ಇಲ್ಲಿ ರಾಧಾಳ ಮಾತೃತ್ವ ಜಾಗೃತವಾದ ಸಂದರ್ಭ ವಿಶೇಷವೆನ್ನಿಸಿತು.


ಕುಂತಿ-ಕರ್ಣನಿಂದ ತೊಟ್ಟ ಬಾಣ ಮರಳಿ ತೊಡಗುವುದಿಲ್ಲ ಎಂದು ವಚನ ಕೊಡು ಎಂದು ಕೇಳುವ ಮುನ್ನ ಭಾಗೀರಥಿಯೇ ಎದ್ದು ಬಂದು ವಚನ ಕೊಡಬೇಡವೆಂದು ಹೇಳುವ ಪ್ರಸಂಗವಿದೆ.

"ನಿನ್ನನ್ನು ತೇಲಿಸಿದವಳು ನಾನು ಈಗಲೂ ಉಳಿಸಲು ಬಂದೆ" ಎನ್ನುವ ಮಾತೇ ಎಲ್ಲವನ್ನು ಧ್ವನಿಸುವಂತಿದೆ. ಆದರೆ, ದೈವ ನಾಲಿಗೆಯಲ್ಲಿ ಆಡಿಸುವ ಮಾತನ್ನು ತಪ್ಪಿಸಲು ಸಾಧ್ಯವೇ..?


ಮೊದಲಿಗೆ ಕುಂತಿಯ ಅಪ್ಪುಗೆಯನ್ನು ನಿರಾಕರಿಸಿ ನೋವು ನೀಡುವ ಕರ್ಣ ಕುಂತಿ ಹೊರಡುವ ಮುನ್ನ ಕರ್ಣನನ್ನು ಬಿಗಿದಪ್ಪುವ ಪ್ರಸಂಗವಿದೆ. ಅದಕ್ಕೆ ಕರ್ಣನಿಂದ ಬರುವ ಉದ್ಗಾರ

"ಆಹಹ! ಇದು ಸ್ವರ್ಗ! ಆತ್ಮೋತ್ಸರ್ಗ !"

ಮಹಾಭಾರತದ ಈ ಪ್ರಸಂಗ ಗೊತ್ತಿದ್ದರೂ ಸವಿಯುತ್ತಾ ಓದುವಂತಿದೆ.


ವಾಸವದತ್ತಾ : 1964 ರಲ್ಲಿ ರಚಿಸಿರುವ ರೂಪಕವಿದು. ಸೌಂದರ್ಯದಿಂದ ಹೆಸರುವಾಸಿಯಾಗಿದ್ದ ವಾಸವದತ್ತಾ ಸನ್ಯಾಸಿಯಾಗಿದ್ದ ಉಪಗುಪ್ತರನ್ನು ತನ್ನಲ್ಲಿಗೆ ಆಹ್ವಾನಿಸುವುದರಿಂದ.. ಸೌಂದರ್ಯದ ನಶ್ವರದ ನಂತರವೂ ಉಳಿಯುವ ಮಹತ್ವದವರೆಗೂ ಕಟ್ಟಿಕೊಟ್ಟಿರುವ ನೋಟವಿದೆ. ಬೌದ್ಧ ಗುರು ಉಪಗುಪ್ತ ಸಾಮ್ರಾಟ ಅಶೋಕ, ಧನಿಕ ಶ್ರೇಷ್ಠ ಲಕ್ಷ್ಮೀಕಾಂತ, ವೇಶ್ಯೆ ವಾಸವದತ್ತಾ ಮತ್ತವಳ ಸಖಿ ವಾಸಂತಿ ಇಲ್ಲಿದ್ದಾರೆ. 

ಸಾಮ್ರಾಟ ಅಶೋಕ ಕಲಿಂಗ ಯುದ್ಧದ ವಿಜಯದ ನಂತರ ಹಿಂಸೆ, ರಕ್ತಪಾತಗಳಿಗೆ ಹೇಸಿ ಯುದ್ಧವನ್ನು ತ್ಯಜಿಸಿ ಧರ್ಮ ಸಾಮ್ರಾಜ್ಯ ಸ್ಥಾಪನೆಗೆ ಕೈಗೊಳ್ಳುತ್ತಾ ಸಂದರ್ಭ. ಅಶೋಕ ಚಕ್ರವರ್ತಿಯ ಪುನರ್ಜನ್ಮದ ಈ ಶುಭ ಸಂದರ್ಭದಲ್ಲಿ ವಾಸಂತಿಯ ಕಣ್ಣಿಗೆ ಬಿದ್ದದ್ದು ಭಿಕ್ಷು ಉಪಗುಪ್ತರು ಗುರು ಅಮಿತಾಭರ ಶಿಷ್ಯರು. ಅವರ ತೇಜಸ್ಸು, ಗಾಂಭೀರ್ಯಕ್ಕೆ ಮಾರುಹೋಗಿ ತನ್ನನ್ನೇ ಅರ್ಪಿಸಿಕೊಳ್ಳಲು ಹೋದ ವಾಸವದತ್ತೆಗೆ ಕಾಯಲು ಹೇಳಿ ಹೊರಡುವ ಉಪಗುಪ್ತರು ಮತ್ತೊಮ್ಮೆ ಭೇಟಿಯಾಗುವಷ್ಟದಲ್ಲಿ ಆಕೆಯ ಹಮ್ಮು ಹೆಮ್ಮೆಯಲ್ಲ ಕರಗಿ ಸೌಂದರ್ಯ, ಐಶ್ವರ್ಯವನ್ನು ಕಳೆದುಕೊಂಡಿದ್ದಳು. ಅದಕ್ಕೆ ಕಾರಣವೇನು..? 


ಹಾಗೆಂದು ಪರಿತಪಿಸುವಾಗ ಉಪಗುಪ್ತ ಹೇಳುವ ಮಾತು." ಧನ ಕನಕ, ರೂಪವೆಲ್ಲ ಬಿಸಿಲುಗುದುರೆ. ಈಗ ನೀನು ಪರಿಶುದ್ಧ" ಎನ್ನುತ್ತಾನೆ. ಅಶೋಕ ಉಪಗುಪ್ತರ ನಡುವಿನ ಸಂಭಾಷಣೆಯಲ್ಲಿ ಹಾಗೂ ಪ್ರಸಂಗದಲ್ಲಿ ಬರುವ ಸಿಂಹ ನಂತರ ವಾಸವದತ್ತೆ ಬೀದಿಪಾಲಾದಾಗಲೂ ಬರುತ್ತದೆ. ಸಿಂಹಕ್ಕೆ ಹಾಗೂ ಪ್ರಸಂಗಕ್ಕೆ ಕೊಟ್ಟಿರುವ ನಂಟು ತಿಳಿಯಲು ಓದಿ ನೋಡಿ.


ದೇವಿ ಕಂಡ ಬೆಳಕು : 1930 ರ ಸಿದ್ದಾಪುರ ಸೀಮೆಯ ಕರ ನಿರಾಕರಣೆಯ ಯುಗದ ಒಂದು ಪ್ರಸಂಗ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ಸಂದರ್ಭ. ಅದೇ ಸಂದರ್ಭದಲ್ಲಿ ಒಂದು ಊರಿನಲ್ಲಿ ಅಣ್ಣ-ತಮ್ಮ ಇಬ್ಬರೂ ತಮ್ಮ ಪತ್ನಿಯರೊಂದಿಗೆ ಜೈಲು ಸೇರುವ ಸಂದರ್ಭವಿದೆ. ಅದೂ ಸ್ವಾತಂತ್ರ ಹೋರಾಟದ ಪರ ನಿಂತಿದ್ದಕ್ಕಾಗಿ. 

ತಮ್ಮನಿಗೆ ಮುಚ್ಚಿಡಲು ಹೇಳಿದ ವಸ್ತು ಆ ಗುಪ್ತಸ್ಥಳದಿಂದ ಮರೆಯಾದದ್ದು ಹೇಗೆ..? ಹಸಲರ ಹೆಂಗಸು ದೇವಿಗೆ ಅದು ಸಿಕ್ಕಿತಾದರೂ ಅದು ಮರಳಿ ಮನೆ ಸೇರಿದ್ದು ಹೇಗೆ..?  ದೇವಿಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಓದಿ ನೋಡಿ. ಇದಕ್ಕೆ ಪ್ರತಿಫಲವಾಗಿ ಏನನ್ನಾದರೂ ಕೊಡಲು ಸಿದ್ಧವಿರುವ ನಾಗಪ್ಪ ಹೆಗಡೆ ಮತ್ತು ನಾಗವೇಣಿಯವರಿಗೆ ದೇವಿ ಕೇಳಿ ಪಡೆದದ್ದೇನು..? 


ಯಾಕೋಬಾ ಮಾತನಾಡುವಾಗ ಕನ್ನಡದ ಜೊತೆಗೆ ಹಿಂದಿಯ ಪದಗಳನ್ನು ಸೇರಿಸಿರುವ ಸಂಭಾಷಣಾ ಶೈಲಿ ಇಲ್ಲಿದೆ. 

ದೇವಿಯ ಪುಟ್ಟ ಮಗ ಫಕೀರ ಮಾತನಾಡುವ, ಪ್ರಶ್ನಿಸುವ ಪ್ರಶ್ನೆಗಳು ಹಾಗೂ ಸಂಭಾಷಣೆಗಳು ಮುದ ಕೊಡುತ್ತವೆ.


ಶಿವಯೋಗ ಸಿದ್ಧಿ : ಕೌಂಟಲಿಯೋ ಟಾಲ್ಸ್ಟೈಯ್ ಅವರ ಕಥೆಯ ಒಂದಂಶವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. 1978 ರಲ್ಲಿ ಬರೆದ ರೂಪಕವಿದು.

ಶಂಕ್ರಪ್ಪ ಹಾಗೂ ಪಾರ್ವತಮ್ಮ ಇಬ್ಬರೂ ಮಹಾಬಲೇಶ್ವರನ ದರ್ಶನ ಮಾಡಲು ಗೋಕರ್ಣಕ್ಕೆ ಹೊರಟು ನಿಂತಾಗ ಪ್ರತಿಬಾರಿಯೂ ತಪ್ಪಿಸಿಕೊಳ್ಳುತ್ತಿದ್ದ ಬಸವಣ್ಣಪ್ಪನನ್ನು ತಮ್ಮೊಡನೆ ಕರೆದೊಯ್ಯುತ್ತಾರಾದರೂ.. ಅರೆ ಮನಸ್ಸಿನಿಂದಲೇ ಹೊರಟಿದ್ದವನ ಹಾದಿ ಸೇರಿದ್ದು ನೋವಿನಲ್ಲಿದ್ದವರ ಸಹಾಯಕ್ಕೆ. ದಿಕ್ಕಿಲ್ಲದ ಬಸವಣ್ಣಪ್ಪ ತೋರುವ ದಯೆ ದೊಡ್ಡದೋ ದೇವರ ದರ್ಶನ ಮಾಡಿ ಪುಣ್ಯ ಗಳಿಸುವ ದಂಪತಿಗಳ ಭಕ್ತಿ ದೊಡ್ಡದೋ..? 


ಬಸವಣ್ಣಪ್ಪ ಇವರಿಂದ ಸ್ವಲ್ಪ ದೂರದಲ್ಲಿಯೇ ಇದ್ದನೆಂಬ ಅವರ ನಂಬಿಕೆ ಅಥವಾ ನೋಡಿದ ಪ್ರಸಂಗಗಳು ಎಷ್ಟು ನಿಜವಾದವು..? 

ಈ ನಾಟಕದಲ್ಲಿ ಮುಗ್ಧ ಜನರ ಸಂಭಾಷಣೆಗಳು ಜೀವನ ಶೈಲಿ, ಗಂಡಸರು ವಿಚಾರಗಳನ್ನು ನೋಡುವುದಕ್ಕೂ ಹೆಣ್ಣು ಮಕ್ಕಳು ಗಮನಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾಟಕದಲ್ಲಿ ಕಟ್ಟಿಕೊಟ್ಟಿರುವ ಬಗೆ ಇಷ್ಟವಾಯಿತು.

ಬಸವಣ್ಣಪ್ಪ ಗೋಕರ್ಣದಿಂದ ಬಂದ ದಂಪತಿಗಳನ್ನು ಕುರಿತು ಆಡುವ ಮಾತು

" ಹ್ಯಾಗಾತು ಶಿವರಾತ್ರಿ ಜಾತ್ರೆ ? ಭೂಕೈಲಾಸದಿಂದ ಶಿವ ಪಾರ್ವತಿ ಇಳಿದುಬಂದ ಹಾಗೆ ಬಂದೀರಿ" 

'ದಯೆಯೇ ಧರ್ಮದ ಮೂಲವಯ್ಯ' ಎಂಬ ಸೂಕ್ತಿಯನ್ನಿಟ್ಟುಕೊಂಡು ಹೆಣೆದಿರುವ ನಾಟಕವಿದು.


ಸಂಭಾಷಣೆಗಳಲ್ಲಿ ಮುದ ಕೊಡುವ, ನವಿರಾದ ಆರೋಗ್ಯಕರ ಹಾಸ್ಯ, ಹಿನ್ನೆಲೆ ಧ್ವನಿಯ ಕುರಿತಾದ ಸೂಚನೆಗಳು ಜೊತೆಗೆ ಸಂಭಾಷಣೆಗಳು ಈ ಎಲ್ಲವೂ ಇಷ್ಟವಾದವು. ಮೊದಲ ಬಾರಿಗೆ ಈ ಪ್ರಕಾರದ ಕೃತಿಯನ್ನು ಓದಿದ್ದು. ಮುದ ನೀಡಿದ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ