ಭಾನುವಾರ, ನವೆಂಬರ್ 29, 2026

ನಳ ಚರಿತ್ರೆ (ಪುಸ್ತಕ ಯಾನ - 523)


ಪುಸ್ತಕದ ಶೀರ್ಷಿಕೆ : ನಳ ಚರಿತ್ರೆ 

ಕೃತಿ ಪ್ರಕಾರ : ಪೌರಾಣಿಕ ಕೃತಿ

ಲೇಖಕರು : ಗಳಗನಾಥ

ಪ್ರಥಮ ಮುದ್ರಣ : 1938

ಪುಟಗಳು : 112


'ಕನ್ನಡದ ಕಾದಂಬರಿ ಪಿತಾಮಹ' ಎಂದೇ ಖ್ಯಾತಿ ಪಡೆದಿರುವ ಗಳಗನಾಥರ ನಳ-ದಮಯಂತಿಯರ ಕಥೆಯನ್ನು ಜೊತೆಗೆ ಮೂರು ಪ್ರಬಂಧಗಳನ್ನು ಓದಬಹುದಾಗಿದೆ. 


'ಸ್ತ್ರೀ ಸ್ವಾತಂತ್ರ್ಯ' ಎಂಬ ಪ್ರಬಂಧ 'ರಹಸ್ಯ ಪ್ರಕಾಶಕ ಮಹಾಭಾರತಮೃತ' ಕೃತಿಯ ಆದಿಪರ್ವದ ರಹಸ್ಯದಿಂದಲೂ.. 'ಸ್ತ್ರೀಯರಲ್ಲಿಯ ವರ್ಗಗಳು' ಮತ್ತು 'ಸ್ತ್ರೀಯರ ಬಾಲ-ಪ್ರೌಢ ವಿವಾಹಗಳು' ಎಂಬ ಎರಡು ಪ್ರಬಂಧಗಳು 'ದುರ್ಗದ ಬಿಚ್ಚುಗತ್ತಿ' ಕಾದಂಬರಿಯೊಳಗಿಂದ ಆಯ್ದು ಕತೆಯೊಡನೆ ಪೂರಕವಾಗಿ ಓದಲು ಸಂಕಲಿಸಿದ್ದಾರೆ. 


ನಳಚರಿತ್ರೆಯನ್ನು 'ಕಲಿಬಾಧಾ ನಿವಾರಕವಾದ ಸರಹಸ್ಯ ನಳ ಚರಿತ್ರೆ' ಎಂದು ಕರೆಯುತ್ತಾರೆ. 

ಸಾಮಾನ್ಯವಾಗಿ ನಮಗೆ ನಳ-ದಮಯಂತಿಯರ ಕಥೆ ತಿಳಿದಿರುವುದೇ.. ಈ ಕೃತಿಯ ಜೊತೆಗೆ ಮೆಲುಕು ಹಾಕುವುದಾದರೆ...


ನಿಷದ ದೇಶದ ವೀರಸೇನ ರಾಜನ ಮಗ ನಳ. ಆತನನ್ನು ಲೇಖಕರು ಪರಿಚಯಿಸುವುದು ಹೀಗೆ..

"ನಳನು ಬ್ರಾಹ್ಮಣ ಪ್ರಿಯನು, ಶೂರನು, ವೇದತ್ವನು, ದ್ಯೂತಪ್ರಿಯನು, ಸತ್ಯವಾದಿಯು, ಉದಾರನು, ಜಿತೇಂದ್ರಿಯ ಶೂರನೂ ಇದ್ದನು."

ರಾಜನ ಸದ್ಗುಣಗಳ ಜೊತೆಗೆ ಆತನ ದ್ಯೂತದ ಪ್ರೇಮವನ್ನು ಇಲ್ಲಿಯೇ ಸೂಕ್ಷ್ಮವಾಗಿ ಪರಿಚಯಿಸುತ್ತಾರೆ.


ಇಂತಹ ನಳನಿಗೆ ಜೋಡಿಯಾಗಿದ್ದು ಸದ್ಗುಣ ಸಂಪನ್ನ, ಸೌಂದರ್ಯವತಿ ದಮಯಂತಿ. ಸುಂದರ ಹಂಸಗಳು ಇವರಿಬ್ಬರನ್ನು ಬೆಸೆದ ಪರಿಯನ್ನು ನಾವಿಲ್ಲಿ ಕಾಣಬಹುದು.


ದಮಯಂತಿ ಸ್ವಯಂವರದ ವಿಚಾರ ದೇವೇಂದ್ರನಿಗೆ ತಿಳಿದದ್ದು ನಾರದರ ಮೂಲಕ ನ ಆ ಸಂದರ್ಭ ಹೇಗಿತ್ತು..? ಓದಿ ನೋಡಿ.


ದೇವತೆಗಳಾದ ಇಂದ್ರ, ಅಗ್ನಿ, ವರುಣ, ಯಮ ಸಹ ದಮಯಂತಿ ಸ್ವಯಂವರಕ್ಕೆ ಬರುವುದು ಅವರ ಆಶೀರ್ವಾದದೊಂದಿಗೆ ದಮಯಂತಿ ನಳನ ಕೈಹಿಡಿಯುವ ಕಥೆ ತಿಳಿದಿದೆ. ದಮಯಂತಿಯ ಭಕ್ತಿ, ಪ್ರೇಮ, ನಳನ ಪ್ರಾಮಾಣಿಕತೆ ಜೊತೆಗೆ ನಳನಿಗೆ ಸಿಕ್ಕ ವರಗಳ ವಿಚಾರವನ್ನು ತೆರೆದಿಟ್ಟಿದ್ದಾರೆ. 


ನಳ-ದಮಯಂತಿ ವಿವಾಹವಾದ ನಂತರ "ನಾನು ಮನುಷ್ಯನಿದ್ದೂ.. ದೇವತೆಗಳ ಸಮಕ್ಷ ನನ್ನ ಲಗ್ನ ಮಾಡಿಕೊಂಡದ್ದರಿಂದ ನಾನು ನಿನ್ನ ಪತಿಯಾಗಿದ್ದರೂ ನಿನ್ನ ಅಪ್ಪಣೆ ಪಾಲಿಸುವಲ್ಲಿ ತತ್ಪರನಾಗಿರುತ್ತೇನೆ ಎಂದು ನಂಬು. ನಾನು ಬದುಕಿರುವವರೆಗೂ ನಿನಗೆ ಅಂಕಿತನಾಗಿ ನಡೆಯುವೆನು" ಎನ್ನುತ್ತಾನೆ ನಳ. ಮುಂದೆ ಇವರಿಗೆ ಇಂದ್ರಸೇನ ಎಂಬ ಮಗ ಇಂದ್ರಸೇನಾ ಎಂಬ ಮಗಳು ಜನಿಸುತ್ತಾರೆ.


ದಮಯಂತಿಯ ತಂದೆ ಭೀಮರಾಜ. ಇಲ್ಲಿನ ಕಥೆಯಲ್ಲಿ ದಮಯಂತಿಯನ್ನು ಸ್ವಯಂವರಕ್ಕೂ ಮುನ್ನ ಭೀಮಕನ್ಯೆ ಎಂಬ ಹೆಸರಿನಿಂದ ಗುರುತಿಸುತ್ತಾರೆ ಲೇಖಕರು. ವಿವಾಹದ ನಂತರವೂ ಭೀಮಕನ್ಯೆ ಎಂದು ಗುರುತಿಸುವ ವಿಚಾರವೂ ಇಲ್ಲಿದೆ. ಮುಂದೆ ಹೇಳುವೆ.


ಕಲಿ ದೇವತೆಗಳಿಗೆ ಸಿಕ್ಕು ಸ್ವಯಂವರ ಮುಗಿದಿದ್ದನ್ನು ತಿಳಿದು.. ದೇವತೆಗಳನ್ನು ಬಿಟ್ಟು ಮನುಷ್ಯನನ್ನು ವರಿಸಿದ ದಮಯಂತಿಯ ಕುರಿತು ಕೋಪ ಬಂದು ದೊಡ್ಡ ಶಿಕ್ಷೆಯೇ ಯೋಗ್ಯವೆಂದಾಗ.. ದೇವತೆಗಳು ನಳನ ವಿಚಾರವಾಗಿ ಹೇಳಿದರೂ ಸಿಟ್ಟುಬಿಡುವ ಧೈರ್ಯವಾಗದೆ ನಳನ ಶರೀರ ಪ್ರವೇಶಿಸಿ, ತಮ್ಮ ದ್ವಾಪರನನ್ನು ಲೆತ್ತಗಳನ್ನಾಗಿಸಿ ದೇಶಭ್ರಷ್ಟನಾಗಿಸುತ್ತಾನೆ. ಆದರೆ, ಕಲಿ ನಳನ ದೇಹ ಪ್ರವೇಶಿಸುವುದಕ್ಕೆ ಕಾದಿದ್ದು ಎಷ್ಟು ವರ್ಷಗಳು ಗೊತ್ತೇ..? ಬರೋಬ್ಬರಿ 12 ವರ್ಷಗಳು. ಕಲಿಗೆ ಸಿಕ್ಕ ಅವಕಾಶವಾದರೂ ಯಾವುದು ಓದಿ ನೋಡಿ.


ಕಲಿಬಾಧೆ, ದಮಯಂತಿಯ ತ್ಯಾಗಗಳು ಇಲ್ಲಿವೆ. ಮಕ್ಕಳಿಬ್ಬರನ್ನು ತನ್ನ ತವರು ಕುಂಡಿನೀಪುರಕ್ಕೆ ಕ್ಷೇಮವಾಗಿ ತಲುಪಿಸಲು ಹೇಳಿದ್ದು ವಾರ್ಷ್ಣೇಯನಿಗೆ. ನಂತರ ಆತ ಸಾರಥಿಯಾಗಿ ಕೆಲಸಕ್ಕೆ ಸೇರಿದ್ದು ಎಲ್ಲಿ..?


ಪುಷ್ಕರನಿಂದ ಅಪಮಾನಕ್ಕೆ ಒಳಗಾದದ್ದು.. ನಂತರ ಲೆತ್ತಗಳೇ ಹಕ್ಕಿಗಳಾಗಿ ನಳನ ಬಟ್ಟೆ ಅಪಹರಿಸಿದ್ದು, ದಮಯಂತಿ ತನ್ನರ್ಧ ವಸ್ತ್ರವನ್ನೇ ಕೊಟ್ಟದ್ದು ಗೊತ್ತೇ ಇದೆ. ಇಲ್ಲಿ ನಳ ದಮಯಂತಿಯನ್ನು ತೊರೆಯುವಾಗ ಆತನ ಮನಸ್ಸು ಡೋಲಾಯಮಾನವಾಗಿ, ನಂತರ ಕಲಿಪ್ರೇರಿತನಾದ ನಳ ಅಲ್ಲಿಂದ ಹೊರಡುತ್ತಾನಾದರೂ.. ಆತನ ಮನಸ್ಸಿನ ತಳಮಳಗಳು ಹೇಗಿತ್ತು ಓದಿ ನೋಡಿ.


ದಮಯಂತಿ ಅನುಭವಿಸುವ ನಾನಾ ಕಷ್ಟಗಳು ಮನಕರಗಿಸುವಂತಿವೆ. ಮುಂದೆ ಆಕೆ ವ್ಯಾಪಾರಿಗಳ ಗುಂಪಿನೊಡನೆ ಸೇರಿದರೂ ಅಲ್ಲಿಯೂ ಕಷ್ಟವೇ.. ಹಾಗೂ ಹೀಗೂ ಸೇರಿದ್ದು ಛೇದಿ ದೇಶದ ಸುಬಾಹುವಿನ ಪಟ್ಟಣಕ್ಕೆ. ರಾಜಮಾತೆಯ ಕಣ್ಣಿಗೆ ಬಿದ್ದು ಆಕೆ ನೀಡಿದ ಕೆಲಸ ಯಾವುದು..? ಮುಂದೆ ರಾಜಮಾತೆಯ ತಂಗಿಯ ಮಗಳೇ ಅವಳು ಎಂಬ ಸತ್ಯ ಅರಿವಾದದ್ದು ಯಾರಿಂದ..? ತನ್ನ ಅಬಚಿಯ ಅನುಮತಿ ಪಡೆದು ತವರು ಸೇರುವ ದಮಯಂತಿ ನಳನನ್ನು ಹುಡುಕುವ ಪ್ರಯತ್ನಕ್ಕೆ ಹೇಳಿದ ಮಾರ್ಗ ಯಾವುದು..?


ನಳ ಕರ್ಕೋಟಕನನ್ನು ರಕ್ಷಿಸುವ ಸಂದರ್ಭ, ಕರ್ಕೋಟಕ ಶಾಪ ಏನು..? ಆತ ರಕ್ಷಿಸಿದರೂ ಕರ್ಕೋಟಕ ಕಚ್ಚಿದ್ದು ನಳನ ಪಾಲಿಗೆ ವರದಾನವೇ ಆಗುತ್ತದೆ. ಅಯೋಧ್ಯೆಯ ರಾಜ ಋತುಪರ್ಣನ ಸಾರಥಿಯಾಗಿ ಬಾಹುಕನೆಂಬ ಹೆಸರಿನಿಂದ ಜೀವನ ನಡೆಸಲು ಹಾಗೂ ಆತನಿಂದ ಅಕ್ಷ ವಿದ್ಯೆ ಕಲಿಯಲು ಹೇಳುವ ಕರ್ಕೋಟಕ.. ನಳನ ಮುಂದಿನ ಭವಿಷ್ಯದ ಸುಗಮ ಹಾದಿಯನ್ನು ತೋರಿದರೂ ನಳ ನಿರಾಳನಾದನೇ..?


ನಳ-ದಮಯಂತಿಯರ ವಿರಹ ಹಾಗೂ ದಮಯಂತಿಯ ಬುದ್ಧಿವಂತಿಕೆ ನಳನನ್ನು ಗುರುತಿಸಲು ಎಷ್ಟರ ಮಟ್ಟಿಗೆ ಶಕ್ಯವಾಯಿತು..? ಋತುಪರ್ಣನಿಗೆ ಅಶ್ವ ವಿದ್ಯೆ ಕಲಿಸಿಕೊಟ್ಟು ತಾನು ಅಕ್ಷ ವಿದ್ಯೆ ಕಲಿತ ಸಂದರ್ಭವೇನು..? ಕಲಿ ಕೇರ ಗಿಡವನ್ನು ಸೇರಿದ್ದೇಕೆ..?


 ದಮಯಂತಿಗೆ ಮತ್ತೊಂದು ವಿವಾಹವೆಂಬ ಪುಕಾರು ಹಬ್ಬಿದ್ದು ಹೇಗೆ..? ಅದು ಆಕೆಯ ತಂದೆಗೆ ತಿಳಿದಿತ್ತೇ...? ತನ್ನ ಬುದ್ಧಿವಂತಿಕೆ ಹಾಗೂ ಸಮಯೋಚಿತ ನಡೆಯಿಂದ ನಳನ್ನು ಸೇರಿದ ಕಥೆಗೆ ಸಹಾಯಕವಾದ ಹಲವು ಪೂರಕ ಪಾತ್ರಗಳಿವೆ. ಅದರಲ್ಲಿ ಕೇಶಿನಿ, ಸುದೇವನ ಪಾತ್ರಗಳು ಪ್ರಮುಖವೆನಿಸುತ್ತವೆ. 


"ಭೀಮಕನ್ಯೆ ತನ್ನ ಮನಸ್ಸಿಗೆ ಬಂದ ಎರಡನೆಯ ಪತಿಯನ್ನು ಲಗ್ನವಾಗುವಳು ಎಂದು ಪ್ರಸಿದ್ಧಪಡಿಸಬಹುದೇ" ಎನ್ನುತ್ತಾ ನಳ ದಮಯಂತಿಯ ಕುರಿತು ಅನುಮಾನಿಸಿದಾಗ ಅದನ್ನು ನಿವಾರಿಸಿದ ಶಕ್ತಿ ಯಾವುದು..?

ಭೀಮಕನ್ಯೆ ಎಂಬ ಪದವನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು.

ಮುಂದೆ ನಳ-ದಮಯಂತಿಯರ ಸಂಯೋಗವಾಗಿ ನಳ ಮತ್ತೆ ರಾಜ್ಯ ಪಡೆದು ರಾಜ್ಯವಾಳಿದ ಕಥೆ ಇಲ್ಲಿದೆ.


ಪೌರಾಣಿಕ ಕಥೆಗಳು ಕೆಲವೊಮ್ಮೆ ಒಬ್ಬರಿಂದ ಒಬ್ಬರ ಹೇಳಿಕೆಯಲ್ಲಿ ಕೆಲ ಬದಲಾವಣೆಗಳನ್ನು ಹೊಂದಿರುತ್ತವೆ. ಇಲ್ಲಿಯೂ ಅಂತಹ ಬದಲಾವಣೆಗಳು ಮತ್ತು ವಿಶೇಷತೆಗಳನ್ನು ಕಾಣಬಹುದು. 


ಕರ್ಕೋಟಕ ನಾಗ, ದಮಯಂತಿ, ನಳ, ರಾಜರ್ಷಿ ಋತುಪರ್ಣ ಇವರ ನಾಮ ಸಂಕೀರ್ತನೆ ಮಾಡುವವರಿಗೆ ಕಲಿದೋಷ ನಾಶವಾಗುವುದು, ನಳನ ಪ್ರಸಂಗ ಕೇಳುವವರಿಗೆ ಕಲಿಬಾಧೆ ಬಾರದು ಎನ್ನುವ ಲೇಖಕರು ಈ ಪ್ರಸಂಗವನ್ನಿಟ್ಟುಕೊಂಡು ಮೂರು ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ.


ಇಲ್ಲಿ ದಮಯಂತಿಯ ನಡೆಯನ್ನು ನೋಡಿದರೆ... ಆಕೆ ಅತಿ ಸ್ವತಂತ್ರದಿಂದ ಎಂದಿಗೂ ನಡೆಯದೆ, ತಂದೆ-ತಾಯಿ, ಪತಿ ಅಥವಾ ಗುರು-ಹಿರಿಯರನ್ನು ಅನುಸರಿಸಿದ್ದನ್ನು ಜೊತೆಗೆ ಎಷ್ಟೇ ಕಷ್ಟ ಬಂದರೂ ಅದಕ್ಕೆ ಕಾರಣ ದುರ್ದೈವವೇ ಹೊರತು ಪತಿ ಎಂದು ಹೇಳಲಿಲ್ಲ. ದಮಯಂತಿಯ ವಿವಾಹದ ವಿಷಯದಲ್ಲಿಯೂ ಮನಸ್ಸಿನಿಂದ ನಳನನ್ನೇ ವರಿಸಿದ್ದ ಅವಳು ಬೇರೆಯವರನ್ನು ಮದುವೆಯಾಗದೆ ದೃಢನಿರ್ಧಾರ ತೆಗೆದುಕೊಂಡಿದ್ದು,.. 

ಈ ಮೂರು ವಿಚಾರಗಳ ಮೇಲೆ ಮೂರು ಪ್ರಬಂಧಗಳ ಪ್ರಸ್ತಾಪವಾಗಿದೆ.


ಇದು 1938ರ ಕೃತಿ ಎಂದು ಗಮನದಲ್ಲಿಟ್ಟುಕೊಂಡು ಈ ಪ್ರಬಂಧಗಳನ್ನು ಓದಬೇಕಾಗುತ್ತದೆ.


ಸ್ತ್ರೀಯರಿಗೆ ಸ್ವಾತಂತ್ರ್ಯ ಕೊಡಬಹುದೋ..? :

ಸಚೇತನ ಮತ್ತು ಆಚೇತನ ವಿಚಾರಗಳ ಕುರಿತು ಪ್ರಸ್ತಾಪಿಸಿ ಸ್ತ್ರೀ ಯಾವ ವರ್ಗಕ್ಕೆ ಸೇರುತ್ತಾಳೆ ಎನ್ನುವುದನ್ನು ಇಲ್ಲಿ ಚರ್ಚಿಸಿದ್ದಾರೆ.

ಉದಾಹರಣೆಯಾಗಿ ಎರಡು ಸಚೇತನ ಪದಾರ್ಥಗಳಾಗಿ ಆನೆ ಮತ್ತು ಸಿಂಹಗಳನ್ನು ತೆಗೆದುಕೊಂಡು ವಿವರಿಸುತ್ತಾರೆ. ಐವರು ಪತಿವ್ರತೆಯರ ಹೆಸರು ಮತ್ತು "ನಸ್ತ್ರೀ ಸ್ವಾತಂತ್ರ್ಯಂಮರ್ಹತಿ" ಎಂಬ ಮಾತಿನ ಔಚಿತ್ಯತೆಯನ್ನು ಇಲ್ಲಿ ಚರ್ಚಿಸಲಾಗಿದೆ.


ಸ್ತ್ರೀಯರಲ್ಲಿ ವರ್ಗಗಳೆಷ್ಟು..? :

ಇಲ್ಲಿ ನಾಲ್ಕು ಬಗೆಯ ಸ್ತ್ರೀಯರನ್ನು ಗುರುತಿಸುತ್ತಾರೆ. ಅದರಲ್ಲಿಯೂ ವೈವಾಹಿಕ ಸ್ತ್ರೀಯರನ್ನು ಪರಿಗಣಿಸಿ ಇದನ್ನು ವರ್ಗೀಕರಿಸಿ, ಪ್ರತಿಯೊಂದು ವರ್ಗಕ್ಕೂ 7 ಗುಣಲಕ್ಷಣಗಳನ್ನು ಗುರುತಿಸುತ್ತಾರೆ.

ಪತಿರಕ್ಷಕ ಸ್ತ್ರೀಯರು ಹಾಗೂ ಪತಿಭಕ್ಷಕ ಸ್ತ್ರೀಯರು ಎಂಬ ಮುಖ್ಯ ಶಾಖೆಗಳ ನಂತರ ಸಾಧ್ವಿಯರು ಹಾಗೂ ಸುವಿಚಾರಿಗಳ ಕುರಿತು ಹೇಳುತ್ತಾರೆ.

ಪತಿ ಏನೇ ಮಾಡಿದರು ಅದನ್ನು ವಿರೋಧಿಸದೆ, ಆತನೇ ದೈವವೆಂದು ಬಗೆದು ಆತನನ್ನು ಸಂತೋಷಪಡಿಸುವ, ಹೊಂದಿಕೊಂಡು ಬಾಳುವ ವರ್ಗ ಸಾಧ್ವಿಯರದ್ದಾದರೆ.. ಸುವಿಚಾರಿಗಳು ಪತಿಯನ್ನು ಗೌರವಿಸುತ್ತಾರಾದರೂ ಎಲ್ಲಿಯಾದರೂ ಪತಿ ತಪ್ಪಿ ನಡೆದರೆ ಅದನ್ನು ತಿಳಿಹೇಳಿ, ತಿದ್ದಿಕೊಂಡು, ಧರ್ಮಮಾರ್ಗದಲ್ಲಿ ನಡೆಸುವ ವರ್ಗಕ್ಕೆ ಇವರು ಸೇರುತ್ತಾರೆ. ಪಂಚಪತಿವ್ರತೆಯರನ್ನು ಸುವಿಚಾರಿಗಳ ವರ್ಗಕ್ಕೆ ಉದಾಹರಣೆಯಾಗಸುತ್ತಾರೆ. ಹೀಗೆ ಹಲವು ವ್ಯತ್ಯಾಸಗಳನ್ನು ಇಲ್ಲಿ ಹೇಳಿದ್ದಾರೆ.


ಸುಖಲೋಲುಪ ಸ್ತ್ರೀಯರು ಮತ್ತು ಸಾಹಸಿ ಸ್ತ್ರೀಯರು ಎನ್ನುವ ಮತ್ತೆರಡು ವರ್ಗದ ಸ್ತ್ರೀಯರ ಕುರಿತಾಗಿ ಹೇಳುತ್ತಾರೆ. ಈ ಕುರಿತು ಓದಿ ನೋಡಿ.

ಆದರೆ ಒಂದು ವಿಶೇಷ ಸಂಗತಿಯನ್ನು ಹೇಳುತ್ತಾರ ಜಗತ್ತೇ ಗುಣದೋಷ ಮಿಶ್ರವಾಗಿರುವುದರಿಂದ ಯಾವ ಸ್ತ್ರೀಯರನ್ನೂ ಒಂದೇ ವಿಭಾಗಕ್ಕೆ ಸೇರಿಸಲು ಆಗುವುದಿಲ್ಲ. ಒಬ್ಬರಲ್ಲೇ ಹಲವು ಲಕ್ಷಣಗಳು ಕಂಡು ಬರಬಹುದು. ಹೆಚ್ಚಿನ ಯಾವ ಗುಣಗಳು ಅವರಲ್ಲಿ ಕಂಡುಬರುತ್ತದೋ ಆ ವರ್ಗಕ್ಕೆ ಆಯಾ ಸ್ತ್ರೀಯರನ್ನು ಸೇರಿಸುತ್ತಾರೆ.


ಸ್ತ್ರೀಯರ ಬಾಲ-ಪ್ರೌಢ ವಿವಾಹಗಳು :

ಇಂದಿನ ದಿನಮಾನಕ್ಕೆ ಬಾಲ್ಯ ವಿವಾಹ ನಿಷಿದ್ಧ. ಆದರೆ ಅಂದಿನ ಕಾಲ ಹಾಗಿರಲಿಲ್ಲ. ವಿವಾಹ ಪದ್ಧತಿ ಹೇಗಿತ್ತು..? ವಿವಾಹಕ್ಕೆ ಮುಖ್ಯ ಕಾರಣ ಹಾಗೂ ಕರ್ತವ್ಯಗಳೇನು ಎಂದು ಚರ್ಚಿಸಿರುವದರ ಜೊತೆಗೆ ವಿವಾಹದ ನಂತರ ಗೃಹಸ್ಥ ಧರ್ಮದ ಪಾಲನೆಯಲ್ಲಿ ಬಂದ ಬದಲಾವಣೆಗಳ ಕುರಿತು ಹೇಳುತ್ತಾರೆ. ಬ

ಬಾಲ್ಯವಿವಾಹ ಹೆಣ್ಣು ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಜೊತೆಗೆ ಆ ಕಾಲಘಟ್ಟಕ್ಕೆ ಯಾವುದು ಸೂಕ್ತವಾಗಿತ್ತು ಎನ್ನುವುದನ್ನು ಹೇಳಿದ್ದಾರೆ. ಆದರೆ, ಈ ಉದಾಹರಣೆಗಳು ಅಥವಾ ಆಲೋಚನೆಗಳು ಈಗಿನ ಕಾಲಕ್ಕೆ ಹೊಂದಿಕೆಯಾಗದು. ಇದರ ಒಳಹೊಕ್ಕು ನೀವೇ ಓದಿ ನೋಡಿ.


ಪೌರಾಣಿಕ ಕಥೆಗಳ ಜೊತೆಗೆ ಅಲ್ಲಿನ ರೀತಿ-ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸುವ, ಗುರುತಿಸುವ ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ಕಾಲಮಾನಕ್ಕೆ ತಕ್ಕಂತೆ ಹಲವಾರು ವಿಚಾರಗಳಲ್ಲಿ ವೈರುಧ್ಯತೆ ಕಂಡುಬಂದದ್ದಕ್ಕೆ ಕಾರಣ ಶಿಕ್ಷಣ ಹಾಗೂ ಅರಿವು ಇರಬಹುದು ಎನ್ನಿಸಿತು. ಈ ಪ್ರಬಂಧಗಳನ್ನು ಆ ಕಾಲಮಾನದ ವಿಚಾರಗಳನ್ನು ತಿಳಿದುಕೊಳ್ಳಲು ಓದಬಹುದು. ಅಂದಿನ ನಡೆ-ನುಡಿಗಳ ಸೂಕ್ಷ್ಮತೆ, ಕಟ್ಟುಪಾಡುಗಳು ಒಪ್ಪಿಕೊಳ್ಳಲು ಕಷ್ಟವೇ.. ವಿಚಾರಗಳಲ್ಲಿ, ಆಲೋಚನೆಯಲ್ಲಿ ಬದಲಾವಣೆ ಕಂಡುಬಂದರೂ ನಾವು ಪೌರಾಣಿಕ ಕಥೆಗಳನ್ನು ಕೇಳುವ, ಓದುವ ರೀತಿ ಬದಲಾಗಿಲ್ಲ ಎನ್ನುವುದು ಇಲ್ಲಿ ಗಮನೀಯ. ಕಥೆ ಹಾಗೂ ಪ್ರಬಂಧಗಳ ಓದು ಹೊಸ ಆಲೋಚನೆಗಳನ್ನು ಹುಟ್ಟಿಸಿದವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ