ಭಾನುವಾರ, ಜೂನ್ 14, 2026

ರಾಜಿ


"ಮಗುವಿನ ಭವಿಷ್ಯಕ್ಕೆ ಶಿಕ್ಷಣ ಕೊಡಿಸಬೇಕಾದ ನಾನೇ ಅವಳನ್ನು ಮನೆಗೆಲಸಕ್ಕೆ ಕಳುಹಿಸುತ್ತಿದ್ದೇನಲ್ಲ..!" ಎಂದು ಬೇಸರದಿಂದ ನುಡಿದು ಬಾರ್ ಕಡೆಗೆ ಹೊರಟ ಮುನಿಯಪ್ಪ. ಕಾಲೋನಿಯಲ್ಲಿ ಬಡಾಯಿ ಮುನಿಯಪ್ಪನೆಂದೇ ಹೆಸರು ಅವನಿಗೆ. ಬಣ್ಣಬಣ್ಣದ ಮಾತುಗಳಿಂದ ಎಲ್ಲರನ್ನೂ ಮರುಳು ಮಾಡಿ ಹಣ ಕೀಳುತ್ತಿದ್ದ. ಆದರೆ, ಆ ಹಣದಿಂದ ಕುಡಿದು ತೂರಾಡುತ್ತಿದ್ದ.


ಮುನಿಯನ ಮಾತಿಗೆ ಮರುಳಾಗಿ ಮದುವೆಯಾಗಿದ್ದ ಗಿರಿಜ ಆತನ ಬಡಾಯಿಗೆ, ಕುಡಿತಕ್ಕೆ ಬೇಸತ್ತು ತಾನೇ ಮನೆಗೆಲಸ ಮಾಡುತ್ತಾ ದುಡಿದು ಗಂಡ, ಮಗಳನ್ನು ಸಾಕುತ್ತಿದ್ದಳು. ಎಂಟು ವರ್ಷದ ರಾಜಿ ಹುಟ್ಟಿದ ನಂತರ ಮೂರು ಗರ್ಭಪಾತವಾಗಿ ಈಗ ಗರ್ಭ ನಿಂತಿತ್ತು. ಅವಳಿಗೆ ವಂಶೋದ್ಧಾರಕನ ಆಸೆ ಬೆಟ್ಟದಷ್ಟಿತ್ತು. ಈ ಬಾರಿ ಗಂಡು ಮಗುವೇ ಹುಟ್ಟುತ್ತದೆಂದು ಆಸೆಯಿಂದ ಏಳನೇ ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು  ತನ್ನ ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ನಿರ್ಧರಿಸಿದಳು. ನಾಳೆಯಿಂದ ತಾನು ಹೋಗುತ್ತಿದ್ದ ಮನೆಗೆ ಮಗಳು ರಾಜಿಯನ್ನು ಕೆಲಸಕ್ಕೆ ಕಳುಹಿಸುತ್ತೇನೆಂದು ಒಪ್ಪಿಸಿ ಬಂದಿದ್ದಳು. ಚಿಕ್ಕಂದಿನಿಂದಲೂ ಚೂಟಿಯಾಗಿದ್ದ ರಾಜಿ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗುತ್ತಾ ತಾನೂ ಕೆಲಸ ಕಲಿತಿದ್ದಳು. ಅವಳ ವಯಸ್ಸಿಗಿಂತಲೂ ಉದ್ದ-ದಪ್ಪವಾಗಿದ್ದ ರಾಜಿ ಕೆಲಸ, ಮಾತು ಎರಡರಲ್ಲಿಯೂ ಚೂಟಿ.


ಆದರೆ, ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವ ಅಮ್ಮನ ಮಾತಿಗೆ ಎದುರಾಡದ ಪರಿಸ್ಥಿತಿ ಇದ್ದುದರಿಂದ ಅರೆ ಮನಸ್ಸಿನಿಂದಲೇ ಒಪ್ಪಿದಳು. ಹೇಗೂ ಈಗ ಬೇಸಿಗೆ ರಜೆ. ಶಾಲೆ ಶುರುವಾಗುವಷ್ಟರಲ್ಲಿ ಏನೋ ಒಂದು ದಾರಿ ಸಿಕ್ಕರೆ ಸಾಕು ಎಂದುಕೊಂಡಿದ್ದವಳ ಶಾಲೆ ಶುರುವಾಗಿ ಒಂದು ತಿಂಗಳಾಗಿತ್ತು. ಅಷ್ಟರಲ್ಲಿ ಅವಳ ಮೆಚ್ಚಿನ ಸುಗಂಧಿ ಟೀಚರ್ ಅವಳನ್ನು ಶಾಲೆಗೆ ಕಳುಹಿಸಲು ಕೇಳಿಕೊಂಡು ಮೂರು ಬಾರಿ ಬಂದು ಹೋಗಿದ್ದರು. 


"ಇಂತಹ ಕುಡುಕ ಗಂಡನನ್ನು ನೆಚ್ಚಿ ನಾನೇನೂ ಮಾಡುವ ಹಾಗಿಲ್ಲ. ಹಾಗೆಂದು, ಮಗಳ ಮದುವೆಗೆ ಒಂದು ದಾರಿ ಮಾಡಬೇಕಾದರೆ ಅವಳನ್ನು ಶಾಲೆಗೆ ಕಳುಹಿಸುವ ಬದಲು ಮನೆಗೆಲಸಕ್ಕೆ ಕಳುಹಿಸಬೇಕು. ಇಷ್ಟರವರೆಗೆ ಓದಿದ್ದು ಸಾಕು. ಟೀಚರಮ್ಮ ಏನೂ ಹಣ ಕೊಡುತ್ತಾಳಾ..?" ಎಂದು ಗಿರಿಜ ತನ್ನಷ್ಟಕ್ಕೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸಮಾಧಾನ ಮಾಡಿಕೊಂಡಳು. 


ಮೂರು ವರ್ಷಗಳಲ್ಲಿ ರಾಜಿಯ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾದವು. ಗಿರಿಜ ಗಂಡು ಮಗುವನ್ನು ಹೆತ್ತಳಾದರೂ.. ಅದು ಬುದ್ಧಿಮಾಂದ್ಯ ಮಗು. ಮುನಿಯಪ್ಪ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡಿದ್ದ. ಈಗ ರಾಜಿ ಮನೆ ಮನೆಗೂ ಹೋಗಿ ದುಡಿಯುತ್ತಿದ್ದಾಳಾದರೂ ಅದು ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ರಾಜಿಯನ್ನು ಒಂದು ಮನೆಯಲ್ಲಿ ಕೆಲಸಕ್ಕೆ ಬಿಡಲು ತೀರ್ಮಾನಿಸಿದರು ಗಿರಿಜ ಮತ್ತು ಮುನಿಯಪ್ಪ. ಇಷ್ಟು ದಿನ ಅಪ್ಪ-ಅಮ್ಮನಿಗಾಗಿ ಅವರ ಮುಖ ನೋಡಿಕೊಂಡು ಇದ್ದ ರಾಜಿಗೆ ಈಗ ಆ ಅವಕಾಶವು ತಪ್ಪಿ ಹೋಗುತ್ತಿತ್ತು. ಅಲ್ಲೇ ಇದ್ದ ಗೆಳತಿಯಿಂದ ಪಡೆದು ಓದುತ್ತಿದ್ದ ಪುಸ್ತಕ ಹಾಗೂ ಕಲಿಕೆಯ ಅವಕಾಶವೂ ತಪ್ಪಿ ಹೋಗುತ್ತಿತ್ತು. 


ರಾಜಿ ದೊಡ್ಡ ಮನೆಗೆ ಕೆಲಸಕ್ಕೆ ಹೋದಳಾದರೂ.. ದಿನವಿಡೀ ಕತ್ತೆಯ ದುಡಿತ ಇದ್ದೇ ಇರುತ್ತಿತ್ತು. ಕನಿಕರ, ಪ್ರೀತಿ ಎಂಬುದು ಅವಳ ಪಾಲಿಗೆ ಕೈಗೆಟುಕದು. ಇಂತಹ ಸಂದರ್ಭದಲ್ಲಿ ಸುಮ್ಮನೆ ಅತ್ತು ತನ್ನ ನೋವು ಮರೆಯುವುದರ ಜೊತೆಗೆ ಪುಟ್ಟ ಪುಸ್ತಕದಲ್ಲಿ ತನ್ನೆಲ್ಲ ಭಾವನೆಗಳನ್ನು ತೆರೆದಿಡುತ್ತಿದ್ದಳು. 


ರಾಜಿಯ ಬದುಕಲ್ಲಿಯೂ ಬದಲಾವಣೆ ಬರಲಿತ್ತು. ದೊಡ್ಡ ಮನೆಯ ಮಗಳು ಕೃಪಾ ವಿದೇಶದಿಂದ ಬಂದವಳು ಇಲ್ಲಿ ಎನ್.ಜಿ.ಓ ಸ್ಥಾಪಿಸುವ ತಯಾರಿಯಲ್ಲಿದ್ದಳು. ಅವಳ ಸಂದರ್ಶನಕ್ಕೆಂದು ಬಂದಿದ್ದ ಟಿ.ವಿ ನಿರೂಪಕಿಯೊಬ್ಬಳಿಗೆ ರಾಜಿ ಕಣ್ಣಿಗೆ ಬಿದ್ದಿದ್ದಳು. ಅನಾಥಾಶ್ರಮ ಹಾಗೂ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುವ ಮನೆಯಲ್ಲಿಯೇ ಪುಟ್ಟ ಹುಡುಗಿ ಒಬ್ಬಳು ಜೀತದಾಳಿನಂತೆ ದುಡಿಯುವುದು ಸಹನೀಯವಾಗಿರಲಿಲ್ಲ ಅದು ನ್ಯಾಯವೂ ಆಗಿರಲಿಲ್ಲ. ಇದನ್ನು ನೇರವಾಗಿ ಪ್ರಶ್ನಿಸಿ, ಸಂದರ್ಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಬೈಸಿಕೊಳ್ಳುವಂತೆ ಮಾಡಬಹುದಾಗಿದ್ದರೂ ಹಾಗೆ ಮಾಡದೆ, ಸಂದರ್ಶನ ಮುಗಿದ ನಂತರ ಈ ಕುರಿತು ಪ್ರಸ್ತಾಪಿಸಿದಳು. 


"ಪ್ರಶ್ನಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತಲೂ ಅವರಿಗೆ ತಪ್ಪಿನ ಅರಿವಾಗಿಸಿ, ಕಷ್ಟಪಡುತ್ತಿರುವವರಿಗೆ ಮುಕ್ತಿ ಕೊಡಿಸುವುದೇ ಉದ್ದೇಶವಾಗಿರುತ್ತದೆ. ಅಲ್ಲವೇ..? ಅದರ ಹಾದಿ ಎಂದಿಗೂ ಉಪಕಾರ ಮಾಡುವುದಾಗಿರಬೇಕೇ ಹೊರತು ಯಾರಿಗೂ ಅಪಕಾರ ಮಾಡುವುದಲ್ಲ."

  


ಎರಡು ದಿನದ ಹಿಂದಷ್ಟೇ ಬಂದಿದ್ದ ಕೃಪಾಳಿಗೆ ನಿಜಕ್ಕೂ ತನ್ನ ಮನೆಯಲ್ಲಿ ದುಡಿಯುತ್ತಿರುವ ಹುಡುಗಿಯ ಪರಿವೆ ಇರಲಿಲ್ಲ. ತನ್ನ ಮನೆಯಲ್ಲಿಯೇ ನಡೆಯುತ್ತಿದ್ದ ಈ ಶೋಷಣೆಗೆ ಅಂತ್ಯ ಹಾಡಬೇಕೆಂದು ರಾಜಿಯನ್ನು ಮತ್ತೆ ಅವಳ ಮನೆಗೆ ಕಳುಹಿಸುವ ನಿರ್ಧಾರ ಮಾಡಿದರೂ ರಾಜಿಯೇ ಹೋಗಲು ಒಪ್ಪಲಿಲ್ಲ. ಎಷ್ಟೋ ಅನಾಥ ಮಕ್ಕಳು ಹಾಗೂ ವೃದ್ಧರಿಗೆ ಆಶ್ರಯ ಕೊಡುವ ಅವಳು ರಾಜಿಯ ಬದುಕಿನ ಕುರಿತು ತಿಳಿದು ಅವಳಿಗೆ ಶಿಕ್ಷಣ ಹಾಗೂ ವಸತಿಯ ವ್ಯವಸ್ಥೆ ಮಾಡಿಕೊಟ್ಟು, ಅಕ್ಕನ ಸ್ಥಾನದಲ್ಲಿ ನಿಂತು ಪೋಷಿಸಿದಳು. ಅತ್ತ ಅವಳ ಸಂಬಳದ ಹಣ ಕಳುಹಿಸುವುದಕ್ಕೆ ಅಡ್ಡಿ ಮಾಡದೆ ಅಲ್ಲಿಗೂ ಸಹಾಯ ಮಾಡಿದಳು. 


ರಾಜಿ ತನ್ನ ವಿದ್ಯಾಭ್ಯಾಸದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಚೆನ್ನಾಗಿ ಕಲಿತಳು. ಶಾಲೆಗೆ ಹೋಗದಿದ್ದರೂ ಅಭ್ಯಾಸವನ್ನಂತೂ ಅವಳು ಕೈಬಿಟ್ಟಿರಲಿಲ್ಲ. ಬಾಲ ಕಾರ್ಮಿಕಳಾಗಿ ಇಡೀ ಜೀವನವನ್ನು ಕೆಲಸದವಳಾಗಿ ಕಳೆಯಬೇಕಾಗಿದ್ದವಳಿಗೆ ಯಾರದ್ದೋ ಧೈರ್ಯ ಹಾಗೂ ಮತ್ತಾರದ್ದೋ ಆಶ್ರಯ ಹೊಸ ಬದುಕನ್ನೇ ತೆರೆದಿಟ್ಟಿತ್ತು. ಈಗ ರಾಜಿ ಯಾರೊಡನೆಯೂ, ಯಾವುದರೊಡನೆಯೂ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿ ವೇತನದಿಂದ ತನ್ನ ಓದು ಹಾಗೂ ಬದುಕನ್ನು ಕಂಡುಕೊಳ್ಳುತ್ತಿದ್ದಾಳೆ. ಇಷ್ಟೇ ಅಲ್ಲದೆ, ಬಾಲಕಾರ್ಮಿಕರ ನಿರ್ಮೂಲನೆಗೆ ಶ್ರಮಿಸುವ ತಂಡದಲ್ಲಿ ತಾನು ಒಬ್ಬಳಾಗಿದ್ದಾಳೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ