ಶನಿವಾರ, ಜೂನ್ 13, 2026

ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ (ಪುಸ್ತಕ ಯಾನ - 459)


ಪುಸ್ತಕದ ಶೀರ್ಷಿಕೆ : ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ 

ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2025

ಪುಟಗಳು : 224

ಬೆಲೆ : 280 ರೂ.


ಅಯ್ಯಪ್ಪನ ದರ್ಶನಕ್ಕಾಗಿ ಕಠಿಣ ವ್ರತಗಳನ್ನು ಮಾಡಿ ಪಂಪಾ ನದಿಯಲ್ಲಿ ಮಿಂದು, ಭಕ್ತಿ ಪೂರ್ವಕವಾಗಿ ಇರುಮುಡಿ ಹೊತ್ತು ಹೋಗುವವರ ಭಕ್ತಿ, ಚಲನಚಿತ್ರ ಹಾಗೂ ಪ್ರಾಥಮಿಕ ಕತೆಯಾಗಿ ಮಣಿಕಂಠ ಹುಲಿಯ ಹಾಲನ್ನು ತರಲು ಹೋಗಿ ಮಹಿಷಿಯ ವಧೆ ಮಾಡಿ ಹುಲಿಯ ಮೇಲೆ ಸವಾರಿ ಮಾಡುತ್ತಾ ಬಂದು.. ಬಿಲ್ಲಿನಿಂದ ಬಾಣ ಹೂಡಿ ತನ್ನ ಸ್ಥಳವನ್ನು ತಾನೇ ಗುರುತಿಸಿ ಕೊಟ್ಟು ಅಯ್ಯಪ್ಪನಾಗುವ ಕಥೆಯ ಅರಿವಿತ್ತು. 18 ಮೆಟ್ಟಿಲುಗಳ ದಿವ್ಯತೆ ಹಾಗೂ ಅಪಾರವಾದ ಭಕ್ತಿಯಷ್ಟೇ ನನಗೆ ಅರಿವಿದ್ದದ್ದು . ಇದರ ಆಚೆಗೆ ಮಕರ ಜ್ಯೋತಿಯ ಕುರಿತು ಹಾಗೂ ಹತ್ತರಿಂದ 50 ವಯಸ್ಸಿನ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಚರ್ಚೆಗಳನ್ನು ಕೇಳಿದ್ದೆ. ಆದರೆ ಎಲ್ಲದರಾಚೆಗೆ ಭಕ್ತಿ ಮಾತ್ರವೇ ಮನದಲ್ಲುಳಿದಿತ್ತು.


ಹಲವಾರು ರೋಚಕ ಕಥೆಗಳು ಘಟನೆಗಳು, ಸಂದರ್ಭಗಳು, ಪೌರಾಣಿಕ ವಿಚಾರಗಳು, ಚಾರಿತ್ರಿಕ ಘಟನೆಗಳು ಎಲ್ಲವನ್ನೂ ಪೂರಕವಾಗಿ ಒಂದಕ್ಕೊಂದು ಹೆಣೆದು.. ತಮಗೆ ಸಿಕ್ಕ ಮಾಹಿತಿಗಳ ಮೂಲವನ್ನು ಉಲ್ಲೇಖಿಸಿ ಮಣಿಕಂಠನೇ ಉತ್ತಮ ಪುರುಷದಲ್ಲಿ ತನ್ನ ಗಾಥೆಯನ್ನು ವಿವರಿಸಿರುವಂತೆ ಕಟ್ಟಿಕೊಟ್ಟಿರುವ ಕಥಾನಕ ಹಾಗೂ ತರ್ಕಬದ್ಧವಾದ ವಿಚಾರಗಳು ಓದಿನ ಸಂಪೂರ್ಣ ತೃಪ್ತಿ ನೀಡಿತು. ಶಬರಿಮಲೆಯ ದಿವ್ಯತೆ ಮನಕ್ಕೆ ಮತ್ತಷ್ಟು ಆವರಿಸಿತು. 


ತನ್ನ ನೆಚ್ಚಿನ ಸಲಗ ಬಲಭದ್ರನ ಬೆನ್ನೇರಿ ಪಂಪಾ ನದಿಯ ಬದಿಯಲ್ಲಿ ಸಂಚರಿಸುತ್ತಾ.. ಚೆಂಗನ್ನೂರು ಮಹಾದೇವ ಕ್ಷೇತ್ರ ದರ್ಶನಕ್ಕೆ ಹೊರಟಿದ್ದಾಗ ಮಣಿಕಂಠನಿಗೆ ಪಂದಳದ ಡಂಗುರ ಕೇಳಿದ್ದು ಹೀಗೆ. ಹುಲಿಯ ಹಾಲನ್ನು ತಂದವರಿಗೆ ಒಂದು ಗ್ರಾಮ ಎಂದರೂ ಬಳುವಳಿಯ ಆಮಿಷಕ್ಕೆ ಯಾರು ತಮ್ಮ ಪ್ರಾಣವನ್ನು ಪಣಕ್ಕಿಡದೆ ಉಳಿದದ್ ಜೊತೆಗೆ ಮನುಷ್ಯರಿಗೆ ಹುಲಿಯ ಹಾಲಿನ ಸೇವನೆ ವರ್ಜ್ಯ ಎಂಬ ವಿಚಾರ ಮನಸ್ಸಿಗೆ ಬಂದದ್ದು ಎಲ್ಲವೂ ಸೇರಿ ಗೊಂದಲ ಮೂಡಿಸುತ್ತದೆ. 


ಮಹಾರಾಣಿಗೆ ಬಂದಿರುವ ಅಪರೂಪದ ವ್ಯಾಘ್ರವ್ಯಾಧಿಗೆ ನಾಡಿನ ಖ್ಯಾತ ವೈದ್ಯರಾದ ಕೇಳು ಪಂಡಿತರು ಸೂಚಿಸಿದ್ದ ಔಷಧಿ ಅದೆಂದು ತಿಳಿಯಿತು. ಅಮ್ಮನನ್ನು ನೋಡಲು ಹೋದಾಗ ತಾನು ಮಗನಾಗಿ ಕರ್ತವ್ಯ ನಿರ್ವಹಿಸಲು ಔಷಧಿಯನ್ನು ತಂದೇ ತರುತ್ತೇನೆಂದವನ ಮಾತಿಗೆ "ನೀನು ನನ್ನ ಮಗನಲ್ಲವಲ್ಲ" ಎಂಬ ಮಾತು ನೋಯಿಸಿದ್ದು ಮಾತ್ರವಲ್ಲದೆ, ಅನಾಥ ಭಾವವನ್ನು ಮೂಡಿಸಿ ತಾನು ಸಿಕ್ಕ ಹಿನ್ನೆಲೆಯನ್ನು ಅವರಿಂದಲೇ ಕೇಳಿದ್ದ ನೆನಪಾಯಿತು.


ವಾವರನನ್ನು ಶರಣಾಗಿಸಿಕೊಂಡು, ಶತ್ರು ಕಾಟವನ್ನು ನಿವಾರಿಸಿ ಆತನನ್ನು ಪಂದಳದ ಮಿತ್ರರನ್ನಾಗಿ ಮಾಡಿಕೊಂಡು ಬಂದಿದ್ದವನು ಮತ್ತೊಂದು ದೊಡ್ಡ ಕಾರ್ಯವನ್ನು ಹೆಗಲೇರಿಸಿಕೊಂಡು ಹೊರಟಿದ್ದ. 12ರ ಪ್ರಾಯದ ಬಾಲಕನನ್ನು ಕಾಡಿಗೆ ಕಳುಹಿಸಲು ತಂದೆಗೆ ಕೊಂಚವೂ ಇಷ್ಟವಿರಲಿಲ್ಲ. 


ಪಂದಳ ನಾಡಿನ ಅರಸು ರಾಜಶೇಖರ ವರ್ಮ ತಂಬುರಾನ್ ಅವರು ಮಂತ್ರಿ ಸುಶೀಲನ್ ಜೊತೆಗೆ ಕಾಡಿಗೆ ಹೋಗಿದ್ದಾಗ ಮಣಿಕಂಠ ಕಾಡಿನಲ್ಲಿ ಸಿಕ್ಕಿ 12 ವರ್ಷಗಳು. ಪೆರುಮಾದೇವಿಗೆ ಮಕ್ಕಳಾಗಲಿಲ್ಲವೆಂದು ಬಹು ಪತ್ನಿತ್ವವನ್ನು ಅನುಸರಿಸಲು ಹೊರಟವರಲ್ಲ. ಮಣಿಕಂಠನ ಕಾಲುಣವೇನೋ ಎಂಬಂತೆ ರಾಜರಾಜ (ಕೇತಕೀ ವರ್ಮ) ಜನಿಸಿದ್ದ. ಸ್ವಂತ ಅಣ್ಣ-ತಮ್ಮಂದಿರಂತೆ ಬೆರೆತಿದ್ದರು. ಮುಂದಿನ ರಾಜನಾಗಿ ಪಂದಳವನ್ನು ಆಳುವವನು ಎಂದೇ ತಂಬುರಾನ್ ಆತನಿಗೆ ಪಟ್ಟ ಕಟ್ಟುವ ಸಿದ್ಧತೆಯನ್ನು ಮಾಡಿಕೊಂಡಿದ್ದರು. ರಾಜರಾಜನು ಅಣ್ಣನ ನೆರಳಿನಂತೆ ಇರುತ್ತಿದ್ದ. ಹೀಗಿರುವಾಗ ಇನ್ನು ಬಾಲಕ ಮಣಿಕಂಠನನ್ನು ಕಾಡುಗೆ ಕಳುಹಿಸಲು ಒಪ್ಪದವರನ್ನು ಒಪ್ಪಿಸಿದ್ದು ಸಿದ್ಧಪುರುಷರು. ಜೊತೆಗೆ ಮಣಿಕಂಠ ಸಿಕ್ಕಾಗ ಆತನ ಶೌರ್ಯದ ಕುರಿತಾಗಿ ಒಂದು ಪ್ರಮುಖ ಹೇಳಿಕೆಯ ಕುರಿತ ಉಲ್ಲೇಖವಿದೆ. ಅದೇನು ಓದಿ ಅರಿಯಿರಿ. 


ತನ್ನ ಕುದುರೆ ರೇವಂತನನ್ನು ಏರಿ ಮಲೆಗೆ ಹೊರಟವನಿಗೆ ಮಾಯಾವಿ ಎಮ್ಮೆಗಳ ಕಾಟ ಬಂದಾಗ ರಕ್ಷಿಸುವುದು ವಾಪುರನ್ ಮತ್ತು ಸಹಚರರು. ತನ್ನ ಉದ್ದೇಶವನ್ನು ತಿಳಿಸಿದಾಗ ಪುಲಿಮೇಡಿನ ದೂರದ ಪ್ರಯಾಣಕ್ಕೆ ದಾರಿದೀಪವಾಗುತ್ತಾರೆ. 


ಮಣಿಕಂಠ ನೀನು ದೈವಾಂಶ ಸಂಭೂತ ಎಂದು ಹೇಳಿದ ಗುರುಗಳ ಮಾತು, ಗುರುಪುತ್ರನ ಬದುಕಲ್ಲಿ ಆದ ಪವಾಡ.. ಗುರುಕುಲದಿಂದ ಅರಮನೆಗೆ ಹೊರಡಿಸುವ ಸಮಯದಲ್ಲಿಯೂ ಗುರುದಕ್ಷಿಣೆಯನ್ನು ಬಯಸದವರು, ತನಗೆ ವಿಶೇಷವಾಗಿ ಸನ್ಮಾನಿಸಿ ಸ್ವರ್ಣದ ಚೂರಿಯನ್ನು ಬಹುಮಾನವಾಗಿತ್ತ ಪ್ರಸಂಗ, ಗುರುಗಳು ಅವನಿಗೆ ಹೇಳದ ರಹಸ್ಯಮಯ ಹಿನ್ನೆಲೆ, ಮಣಿಕಂಠನ ವಿಶೇಷ ತೇಜಸ್ಸು, ಅತಿಮಾನುಷವಾದ ಕಾರ್ಯಗಳು ಎಲ್ಲಕ್ಕೂ ಇಲ್ಲಿನ ಘಟನೆಗಳು ಸಾಕ್ಷಿಯಾಗಿವೆ. 


ಚೀರಪ್ಪನ್ ಪಣಿಕ್ಕರ್ ಗುರುಕುಲದಲ್ಲಿ ಕಳರಿಪಯಟ್ಟು ವನ್ನು ಕಲಿಯಲು ಹೋದಾಗ ಆ ವಿದ್ಯೆಯ ಹಿನ್ನೆಲೆ, ಆಶ್ರಮದಲ್ಲಿ ಸಿಕ್ಕ ವಿರೋಧಗಳು, ಅದರಾಚೆಗೆ ಎಲ್ಲರೂ ಮಣಿಯುವಂತೆ ಮಾಡಿದ ಶೌರ್ಯ ಹಾಗೂ ಸಾಹಸಗಾಥೆಯನ್ನು ಕಾಣಬಹುದು. ಗುರುಪುತ್ರಿ ಲಲಿತಾಂಬಿಕೆ ಮಾಡಿಕೊಟ್ಟ ಕಪ್ಪು ಬಣ್ಣದ ಪಾಯಸ ಋಧುಮತಿ ಗಂಜಿ, ಹೊಸಬಗೆಯ ಅರವಣ ಪಾಯಸದ ಉಲ್ಲೇಖ ವಿಶೇಷವಾಗಿದೆ. 

ಲಲಿತಾಂಬಿಕೆಯ ಬಳಿ ತಾನು "ನೈಷ್ಠಿಕ ಬ್ರಹ್ಮಚಾರಿ, ಪಟ್ಟವನ್ನು ಏರುವುದಿಲ್ಲ, ಮದುವೆಯನ್ನೂ ಆಗುವುದಿಲ್ಲ, ವಂಶವನ್ನು ಬೆಳೆಸುವುದಿಲ್ಲ" ಎಂದು ತನ್ನ ದೃಢ ನಿರ್ಧಾರವನ್ನು ತಿಳಿಸಿದ್ದೇಕೆ..? ನಂತರ ವಾವರನ ಪ್ರಸಂಗವನ್ನು ಕಾಣಬಹುದು. 


ಅಚ್ಚನ್ ಕೋವಿಲ್ ಶ್ರೀಧರ್ಮಶಾಸ್ತನೇ ಮಹಾವೈದ್ಯನಾಗಿ ಪ್ರಕಟವಾದ ಪ್ರಸಂಗ, ಮೇಲ್ಸ್ಯಾಂತಿಯವರ ಅಚ್ಚರಿಯ ಪ್ರಸಂಗವೂ ಇಲ್ಲಿದೆ.


ನಾರದರು ಮಣಿಕಂಠನನ್ನು ಭೇಟಿಯಾಗುವ ಮುನ್ನ ಮಣಿಕಂಠನಿಗೆ ತನ್ನ ಸಂಪೂರ್ಣ ಜನ್ಮ ರಹಸ್ಯ ಅರಿವಾದ ಬಗೆ ಹೇಗಿತ್ತು..?

ಮಹಿಷಿಯ ವಧೆಯ ಏಕೈಕ ಉದ್ದೇಶದಿಂದ ಮಣಿಕಂಠನ ಜನ್ಮವಾಗಿತ್ತೇ..? 

ಧರ್ಮಶಾಸ್ತ ಹಾಗೂ ಮಣಿಕಂಠ ಇಬ್ಬರಲ್ಲ, ಬೇರೆಯಲ್ಲ ಎಂಬ ತತ್ತ್ವಮಸಿ ಅನುಭಾವ ಉಂಟಾದ ಕ್ಷಣಗಳ ಹಿನ್ನೆಲೆ ಏನು..?


"ಸಾವು ಅವರವರ ಕರ್ಮ ಸಿದ್ದಾಂತದ ಪ್ರಕಾರವೇ ಆಗುತ್ತದೆ." ತನ್ನ ಅಂತ್ಯವೂ ಹರಿಹರಸುತನಿಂದಲೇ ಆಗಬೇಕು ಎಂದು ವಿಧಿಯಲ್ಲಿ ವರ ಕೇಳಿ ಪಡೆದಿದ್ದ ಮಹಿಷಿಯ ಜನ್ಮದ ಹಿಂದೆಯೂ ಒಂದು ಹಿನ್ನೆಲೆ ಇದೆ. ಪೂಂಗಾವನದಲ್ಲಿ ನೆಲೆಸಿದ್ದ ಮಹಿಷಿ ಮಣಿಕಂಠನೆದುರಲ್ಲಿ ಯಾವ ರೀತಿಯಲ್ಲಿ ನಡೆದುಕೊಂಡಳು..? ಯಾರ ಶಾಪ ವಿಮೋಚನೆಯಾಯಿತು.?


ಮಣಿಕಂಠನಾಗಿ ತನ್ನ ಪ್ರೀತಿಪಾತ್ರರ ಮನಸ್ಸಿನಲ್ಲಿ ಏನಿದೆ ಎಂದು ನಿಜಾಂಶವನ್ನು ಅರಿಯುವ ಸಂದರ್ಭದಲ್ಲಿ ಸತ್ತ್ವ ಪರೀಕ್ಷೆಗಾಗಿ ದೇವೇಂದ್ರ ವಾಯು, ವರುಣ, ಅಗ್ನಿ, ಕುಬೇರರು ಯಾವ ರೀತಿಯಲ್ಲಿ ಸಹಾಯ ಮಾಡಿದರು..? ಅರಮನೆಯಲ್ಲಿ ಮಣಿಕಂಠನಿಗೆ ಅರಿವಾದ ಸತ್ಯ ಆತನನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಿತು..? ಇಲ್ಲಿ ತಂಬುರಾನ್ ರಿಗೆ ಆದ ಆಘಾತ ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹದು. ತಾನು ಅರಮನೆಗೆ ಕರೆ ತಂದ ಶಿಶುವನ್ನು ಮಗನಂತೆ ಭಾವಿಸಿದ್ದ ಅವರ ಅನನ್ಯ ಪ್ರೇಮಕ್ಕೆ ಘಾಸಿಗೊಳಿಸಿದ್ದು ಅವರ ಅತ್ಯಾಪ್ತರೇ ಆದದ್ದು ವಿಪರ್ಯಾಸ. ಮಣಿಕಂಠನನ್ನು ಮಣಿಸುವ ಅವರ ಯೋಚನೆ ವಿಫಲವಾಯಿತಾದರೂ.. ರಾಜರಾಜನನ್ನು ರಾಜನಾಗಿಸುವ ಅವರ ಯೋಚನೆ ಗೆದ್ದರೂ.. ಆ ಗೆಲುವು ತೃಪ್ತಿಕರ ಗೆಲುವಾಗದ್ದು ಏಕೆ..? ಮಣಿಕಂಠನ ಮಾತಿಗೆ ತಂಬುರಾನ್ ಒಪ್ಪದೇ ದಾರಿಯೇ ಇರಲಿಲ್ಲ. ಮಣಿಕಂಠನ ಮಾತಿನಂತೆಯೇ ನಡೆದ ತಂಬುರಾನ್ ಧರ್ಮಶಾಸ್ತನ ಕ್ಷೇತ್ರವನ್ನು ಪುನರ್ ನಿರ್ಮಿಸುವಲ್ಲಿ ಏನೆಲ್ಲಾ ಮಾಡಿದರು..? 


ಶಬರ ಪಡೆಯ ಮುಖಂಡ ಕೊಚ್ಚು ವೇಲನ್ ನಂಬಿಕೆಯಿಂದ ಕಾಯುತ್ತಿದ್ದ ಚಾತ್ತನ್ ದೇವ ಶ್ರೀ ಭೂತನಾಥನಾದ ಧರ್ಮಶಾಸ್ತ. ಅವರೆಲ್ಲರೂ ಮಣಿಕಂಠನನ್ನು ಕಾಯುತ್ತಿದ್ದುದ್ದೇಕೆ..? ಅವರಿಟ್ಟ ಬೇಡಿಕೆ ಏನಿತ್ತು ..?


ಅಗಸ್ತ್ಯ ಮಹರ್ಷಿಗಳ ಸಹಾಯ ಹಾಗೂ ಪುಲಿಪಾಣಿ ಸಿದ್ದರು ಸೇರಿ ನಿರ್ಮಿಸಿದ ನವಪಾಷಣ ವಿಗ್ರಹ ಈಗ ಎಲ್ಲಿತ್ತು ಹಾಗೂ ಅದರ ದಿವ್ಯತೆ ಏನು..? ಇದರಲ್ಲಿ ಪರಶುರಾಮರ ಪಾತ್ರವೇನು ಎಲ್ಲದರ ಕುರಿತು ಓದಿ ನೋಡಿ.


ಶಾಸ್ತಮಲೆಯನ್ನು ಶೌರ್ಯಮಲೆ ಎಂದು ಕರೆದದ್ದೇಕೆ..? ಕಡು ಪಾಪಿಷ್ಟ ಉದಯನನ್ ನಡೆಸಿದ ಪಾಪ ಕಾರ್ಯಗಳೆಲ್ಲವೂ ಈಗ ಮಣಿಕಂಠನ ಎದುರಿಗೆ ತೆರೆದುಕೊಂಡ ನಂತರ ಆತ ದುಷ್ಟ ನಿಗ್ರಹಕ್ಕೆ ತೆಗೆದುಕೊಂಡ ಕ್ರಮವೇನು..? 


ವಾವರನನ್ನು ಮಣಿಸಿದ ರೀತಿಗೂ ಹಾಗೂ ಉದಯನನ್ನು ಮಣಿಸಿದ ರೀತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ದುಷ್ಟ ನಿಗ್ರಹ ಮಾತ್ರವಲ್ಲದೆ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಪ್ರಜೆಗಳಿಗೆ ದಾರಿ ತೋರಿದ ಮಣಿಕಂಠನನ್ನು ಇಲ್ಲಿ ಕಾಣಬಹುದು. 41 ದಿನದ ಮಂಡಲ ಹಾಗೂ ಮಲೆ ಏರಿ ಬರುವರು ಆಚರಿಸುವ ವಿಧಿ ವಿಧಾನದ ಹಿಂದಿನ ಅರ್ಥವೂ ಇಲ್ಲಿದೆ. ಮಣಿ ಮಂಟಪದ ಪಕ್ಕದಲ್ಲಿರುವ ಶಕ್ತಿಸ್ಥಾನ ಯಾರದ್ದಾಯಿತು..? ವಾಪುರನ್ ನ ಪ್ರಾಮುಖ್ಯತೆ, ಶೌರ್ಯವನ್ನು ಇಲ್ಲಿ ಕಾಣಬಹುದು. 


ಶಬರಿಮಲೆ ಎಂಬ ಹೆಸರು ಬರಲು ಕಾರಣವಾದ ಶಬರಿ ತ್ರೇತಾಯುಗದ ಶಬರಿಯೇ ಓದಿ ನೋಡಿ.


ಅಯ್ಯಪ್ಪನ ಮಾಲೆ ಹಾಕಿದವರೆಲ್ಲರೂ ತಮ್ಮ ನಿಜ ನಾಮಧೇಯದ ಬದಲು ಅಯ್ಯಪ್ಪ ಎಂದೇ ಕರೆಯಲ್ಪಡುವುದೇಕೆ..? ಮಕರ ಜ್ಯೋತಿ ಹಾಗೂ ಮಕರ ಬೆಳಕಿನ ವೈಶಿಷ್ಟ್ಯವೂ ಇಲ್ಲಿದೆ. 


ಇಲ್ಲಿ ನಾನು ಪ್ರಸ್ತಾಪಿಸಿದ್ದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯ ಹಾಗೂ ವಿಚಾರಗಳನ್ನು ನೀವು ಓದಬಹುದು. ಇಲ್ಲಿ 18 ರ ಪ್ರಾಮುಖ್ಯತೆಯನ್ನು ಕಾಣಬಹುದು. ಮಣಿಕಂಠ ಅಯ್ಯಪ್ಪನಾಗಿ ಪ್ರತಿಷ್ಠಾಪಿತನಾದ ಸಂದರ್ಭದಲ್ಲಿ ಇನ್ನುಳಿದ ದೈವಗಳು ಪ್ರತಿಷ್ಠಾಪಿತರಾದ ದೈವತ್ವವೂ ಇಲ್ಲಿದೆ.


ಭಕ್ತಿಪೂರ್ವಕ ಓದಿನ ಅನುಭವದಲ್ಲಿ ನಾವು ಕಾಣದ ಶಬರಿಮಲೆಯ ದರ್ಶನ ಮಾತ್ರವಲ್ಲದೆ, ಇನ್ನುಳಿದ ದೈವೀ ದರ್ಶನವನ್ನು ನಮಗೆ ಮಾಡಿಸುತ್ತಾರೆ ಪೂಂಗಾವನ ಆವರಿಸುವಂತೆ ಮಾಡುತ್ತಾರೆ. ಮೊದಲ ಓದು ಮಾತ್ರವಲ್ಲದೆ, ಮರುಓದಿನಲ್ಲಿಯೂ ಮತ್ತಷ್ಟು ಆಪ್ತ ಓದು ನಮ್ಮದಾಗುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ