ಭಾನುವಾರ, ಜೂನ್ 14, 2026

ಒಲವ ಕುಡಿನೋಟ (ಬೆಳಕಿಂಡಿಯ ಕತೆಗಳು - 35)


"ಆ ಕುಡಿನೋಟಕ್ಕೆ ತಾನೇ ನಾನು ಮನಸೋತು ಅವಳನ್ನು ಪ್ರೀತಿಸಿದ್ದು. ಆದರೆ, ಈಗ ಅವಳು ಅಪಘಾತದಲ್ಲಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ನಾನು ಅವಳ ಕಳ್ಳ ನೋಟದ, ತುಂಟತನದ ನಗುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ.. ಆದರೆ, ಅದೊಂದೇ ಕಾರಣಕ್ಕೆ ಅವಳನ್ನು ನನ್ನಿಂದ ದೂರ ಮಾಡಲಾಗುವುದೇ..?! 


ಕುಡಿ ನೋಟದಿಂದ ಹುಟ್ಟಿದ ಪ್ರೀತಿ ಚಿಗುರಿ, ಹೆಮ್ಮರವಾಗಿದೆ. ಎಷ್ಟೇ ನ್ಯೂನ್ಯತೆ ಇದ್ದರೂ ಅದೆಲ್ಲವನ್ನೂ ಕಡೆಗಣಿಸುವಷ್ಟು ನನ್ನ ಪ್ರೀತಿಯಂತೂ ಶಕ್ತವಾಗಿದೆ. ಅವಳು ಕುಡಿ ನೋಟ ಬೀರದಿದ್ದರೂ.. ನಾನು ಅವಳನ್ನು ಹಾಗೆಯೇ ಪ್ರೀತಿಸಬಹುದಲ್ಲ..! ಇನ್ನು ಅವಳನ್ನು ಮನದಣಿಯುವಷ್ಟು ನೋಟದಲ್ಲಿಯೇ ಮುದ್ದಿಸಬಹುದು."


 ಹೀಗೆಂದುಕೊಂಡು ಅವಳನ್ನು ಮದುವೆಯಾಗಿ ಹತ್ತು ವರ್ಷವೇ ಕಳೆಯಿತು. ಇಂದು ಯಾರೋ ದೃಷ್ಟಿದಾನಕ್ಕೆ ನೋಂದಾಯಿಸಿಕೊಂಡಿದ್ದ ದಾನಿಗಳು ತೀರಿ ಹೋಗಿ ನಮ್ಮ ಸರದಿ ಬಂದು ಎಲ್ಲವೂ ಹೊಂದಿಕೆಯಾಗಿ ಅವಳಿಗೆ ದೃಷ್ಟಿ ಬರುವ ಹೊತ್ತು.


ಮತ್ತೆ ಕಣ್ ಕಣ್ಣ ಸಲಿಗೆ ಎಂದು ಮೊದಲಿನಿಂದ ಪ್ರೀತಿಸುವ ಸಮಯ ಹೆಚ್ಚು ದೂರವಿಲ್ಲ ಎಂದುಕೊಂಡು ಅವಳ ಕುಡಿನೋಟಕ್ಕೆ ಕಾಯುತ್ತಿದ್ದಾನೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ