ಭಾನುವಾರ, ಜೂನ್ 7, 2026

ಮನೋಗಮ (ಪುಸ್ತಕ ಯಾನ - 457)


ಪುಸ್ತಕದ ಶೀರ್ಷಿಕೆ : ಮನೋಗಮ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 88

ಬೆಲೆ : 120 ರೂ. 


ಎಂದೋ ಓದಿದ ಅಥವಾ ಕೇಳಿದ ವಿಚಾರಗಳು ಅಥವಾ ಕಥೆಯ ಎಳೆಗಳು ಮತ್ತೆ ನನ್ನು ಯೋಚಿಸಲು ಪ್ರೇರೇಪಿಸುತ್ತವೆ. ಕೆ. ಎನ್. ಗಣೇಶಯ್ಯನವರಿಗೆ ಅವರು 'ಇಮ್ಮಡಿ ಮಡಿಲು' ಎಂಬ ಕಥಾಸಂಕಲನದಲ್ಲಿ ಬರೆದಿದ್ದ ಕಥೆ ಪರ್ಯಾಯದಲ್ಲಿ ಇಂದಿನ ಕಾಲದ ಹೆಣ್ಣುಗಳು ಅಕ್ಕಮಹಾದೇವಿ ಅನುಭವಿಸಿದ ಮಾನಸಿಕ ತಲ್ಲಣಕ್ಕೆ ತುತ್ತಾದರೆ ಆಕೆಯ ಸ್ಪಂದನೆ ಹೇಗಿರುತ್ತದೆ ಎಂದು ಬರೆಯುವಾಗ ಮನುಷ್ಯನ ಮನಸ್ಸಿನ ಬಗೆಯ ಚಿತ್ರಣವನ್ನು ಕಥೆಯ ಕೊನೆಯಲ್ಲಿ ಬರೆಯುತ್ತಾರೆ. ಅದಾದ ನಂತರ ಆ ಕಥೆ ಲೇಖನಗಳಿಗೆ ನಾಂದಿ ಹಾಡಿತು ಎನ್ನುತ್ತಾರೆ. ವಿಜಯ ಕರ್ನಾಟಕದಲ್ಲಿ 'ಮನೋಗಮ' ಶೀರ್ಷಿಕೆಯ ಅಡಿಯಲ್ಲಿ 20 ಲೇಖನಗಳು ಪ್ರಕಟಗೊಂಡಿತ್ತವೆ. ಅವುಗಳನ್ನು ಕೊಂಚ ಪರಿಷ್ಕರಿಸಿ, ನಂತರ ಬರೆದ ಕೆಲವು ಲೇಖನಗಳನ್ನು ಸೇರಿಸಿ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 15 ವಿಚಾರ ಪ್ರಚೋದಕ ಲೇಖನಗಳಿವೆ. 


ಬೆಂಕಿಯಲ್ಲಿ ಅರಳಿದ ಮೆದುಳು... : ಮಾನವನ ಮೆದುಳು ಚಿಂಪಾಂಜಿಗಿಂತ ಐದು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿದ್ದಕ್ಕೆ ಕಾರಣ ಬೆಂಕಿ ಎಂದು ಹೇಳುತ್ತಾರೆ. ಮಾನವನ ಮೆದುಳಿನ ಗಾತ್ರ ಹೆಚ್ಚಾಗಿದ್ದರ ಕಾರಣವನ್ನು ಹುಡುಕಿ ಹೊರಟ ವಿಜ್ಞಾನಿಗಳೆಲ್ಲರೂ ಸಾಮಾನ್ಯವಾಗಿ ಒಪ್ಪುವ ವಿದ್ಯಮಾನ ಎಂದರೆ ಅದೇ ಕಾಲಘಟ್ಟದಲ್ಲಿ ಮಾನವನ ಬೆಂಕಿಯನ್ನು ಪಳಗಿಸತೊಡಗಿದ ಎನ್ನುವುದು. ಅದಕ್ಕೂ ಮೊದಲೇ ಬೆಂಕಿಯ ಉಪಯೋಗಗಳನ್ನು ಗಮನಿಸಿರಲೂ ಸಾಧ್ಯ. ಈ  ಸಾಧ್ಯಸಾಧ್ಯತೆಗಳನ್ನಿಟ್ಟುಕೊಂಡು ಬೆಂಕಿ ಹಾಗೂ ಮೆದುಳನ್ನು ಕನೆಕ್ಟ್ ಮಾಡಿರುವ ಈ 'ಪ್ರಜ್ಞಾಕೋಶ'ದ ಕುರಿತು ಓದಿನೋಡಿ.


ಹಿಗ್ಗಿದ ಮೆದುಳು ಕುಗ್ಗಿದ್ದೇಕೆ? : ಹಿಂದಿನ ಲೇಖನದಲ್ಲಿ ಚಿಂಪಾಂಜಿ ಎಂತಹ ಪ್ರಭೇದದಿಂದ ವಿಕಾಸಗೊಂಡ ಮಾನವನ ಮೆದುಳು ಗಾತ್ರದಲ್ಲಿ 5 ಪಟ್ಟು ದೊಡ್ಡದಾದ ಕುರಿತಾಗಿ ಹೇಳಿದರಾದರೂ ಅದಾದ 3000 ವರ್ಷಗಳಲ್ಲಿ ಮೆದುಳಿನ ಗಾತ್ರ ಗಣನೀಯವಾಗಿ ಕುಗ್ಗಿದೆ ಎನ್ನುವುದಕ್ಕೆ ವಿಕಾಸಗೊಳ್ಳುವ ಹಾದಿಯಲ್ಲಿ ಮತ್ತೆ ಹಿಂದಕ್ಕೆ ಬಂದಂತೆ ಅಂದರೆ ಅವಿಕಾಸವಾಗುವ ವಿಚಾರವನ್ನೂ ತೆರೆದಿಡುತ್ತಾರೆ. ಮಂಗನಿಂದ ವಿಕಾಸಗೊಂಡ ನಾವು ಬಾಲ ಕಳೆದುಕೊಂಡಿದ್ದೇವೆ. ಹಾಗಾದರೆ ನಾವು ಮತ್ತೆ ಬಾಲ ಉಳಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ ಓದಿ ನೋಡಿ.


ವಂಚನೆಯ ವಿಕಾಸ ಏಕೆ ಮತ್ತು ಹೇಗೆ? : ಕವಲುತೋಕೆ ಹಕ್ಕಿಯ ಗುಂಪಿಗೆ ಸೇರಿದ ಕೆಲವು ಪಕ್ಷಿಗಳು ಹಿಂಡುಹಿಂಡಾಗಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಒಂದು ಪಕ್ಷಿ ಯಾವುದಾದರೂ ಒಂದು ಆಹಾರದ ಜಾಡು ಹಿಡಿದು ಅಲ್ಲಿಂದ ಆಹಾರ ತರುತ್ತಿದ್ದರೆ.. ಇತರ ಪಕ್ಷಿಗಳು ಅದನ್ನು ಅನುಸರಿಸಿ ಹೋಗುತ್ತವೆ. ಈ ವಿಚಾರವನ್ನು ತೆರೆದಿಟ್ಟಾಗ ಬಂದ ಸಂದೇಹವೆಂದರೆ, ಮೊದಲು ಆಹಾರವನ್ನು ಕಂಡು ಹಿಡಿದ ಪಕ್ಷಿಗೆ ಇದರಿಂದ ಅತೀವ ಸ್ಪರ್ಧೆ ಉಂಟಾಗುತ್ತದೆ. ಅದು ಅದಕ್ಕೆ ನಷ್ಟವಲ್ಲವೇ..? ಆ ಹಕ್ಕಿ ವಂಚನೆಯ ಹಾದಿ ಹಿಡಿದರೆ..?! ವಂಚನೆಯ ವರ್ತನೆ ಈ ಪಕ್ಷಿಗಳಲಿಲ್ಲ. ಆದರೆ, ಮಾನವನಲ್ಲಿ ಹೆಚ್ಚಾಗಿರುವ ವಂಚನೆ ಮತ್ತು ಸುಳ್ಳು ಹೇಗೆ ವಿಕಾಸಗೊಂಡಿದೆ ಎನ್ನುವುದರ ಜೊತೆಗೆ ಪ್ರಾಣಿ ಪ್ರಪಂಚದಲ್ಲಿ ಕಟ್ಲರ್ ಫಿಶ್ ಗಂಡು ಮತ್ತು ಹೆಣ್ಣು ಮೀನುಗಳನ್ನು ಮೋಸಗೊಳಿಸುವ ಬಗೆಯನ್ನು ಹೇಳುತ್ತಾರೆ. ಆದರೆ ಊಸರವಳ್ಳಿಯ ಬಣ್ಣ ಬದಲಾವಣೆ ವಂಚನೆಯಲ್ಲ ಎನ್ನುವ ತರ್ಕವನ್ನು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಪ್ರಾಣಿಯಲ್ಲಿ ಇಂತಹ ವಿಚಿತ್ರವನ್ನು ಕಾಣಬಹುದು ಓದಿ ತಿಳಿಯಿರಿ. 


ನಾವೇಕೆ ದ್ವೇಷಿಸುತ್ತೇವೆ? : ಪ್ರೀತಿ-ಪ್ರೇಮಗಳಂತೆ ದ್ವೇಷವು ಕೂಡ ಮನುಷ್ಯನ ಉಳಿವಿಗೆ ಅವಶ್ಯಕ ಎನ್ನುತ್ತದೆ ವಿಜ್ಞಾನ. ಅಸೂಯೆ ಮತ್ತು ದ್ವೇಷ ನಮ್ಮನ್ನು ನಾವು ಹೋಲಿಸಿಕೊಳ್ಳಬಹುದಾದ ಸಮಾಜ ಅಥವಾ ಪ್ರಪಂಚಕ್ಕೆ ಮಾತ್ರವೇ ಸೀಮಿತವೇ..? ದ್ವೇಷ ಹರಡುವ ಬಗೆಯ ಜೊತೆಗೆ ದ್ವೇಷವು ಪ್ರೀತಿಯ ಇನ್ನೊಂದು ಮುಖವಾಗಿ ವಿಕಾಸಗೊಂಡಿರುವ ಪರಿಯನ್ನು ನಾವಿಲ್ಲಿ ಕಾಣಬಹುದು. ಪ್ರೀತಿಯೇ ದ್ವೇಷವಾಗಿ ವಿಕಾಸಗೊಂಡದ್ದು ಹೇಗೆ..? ಇದು ತಲೆಮಾರುಗಳಿಂದ ತಲೆಮಾರುಗಳಿಗೆ ಧಾತುಗಳ ಮೂಲಕ ಸಾಗುತ್ತದಾ..? ಅಚ್ಚರಿ ಹಾಗೂ ವಿಸ್ಮಿತಗೊಳಿಸುವ ವಿಶ್ಲೇಷಣೆ ಇಲ್ಲಿದೆ.


ಎಲ್ಲ ಮರೆತಿರುವಾಗ... ಮತ್ತೆ ಮರಳುವ ನೆನಪು : ನಮ್ಮ ಆತ್ಮೀಯರ ಸಾವು ನಮ್ಮನ್ನು ಕಾಡುತ್ತದೆ. ಆದರೆ, ಅವರ ನೆನಪು ಬೇಕು ಅವರಿಲ್ಲ ಎಂಬ ನೋವು ಬೇಡ ಎಂದು ನೆನಪುಗಳನ್ನು ಶೋಧಿಸಲು ಮನಸ್ಸಿಗೆ ಸಾಧ್ಯವಾಗದು. ನೋವು ಕೊಡುವ ನೆನಪುಗಳು ನಮಗೆ ಹಾಗೂ ನಮ್ಮ ಉಳಿವಿಗೆ ಬೇಕೇ..? ನೆನಪುಗಳು ವಿಕಾಸಗೊಂಡಿರುವುದು ನಮ್ಮ ಉಳಿವಿಗೆ ಹಾಗೂ ಕ್ಷೇಮಕ್ಕೆ ಎಂಬುದು ಎಷ್ಟು ಸರಿ. ನೆನಪು ಹಾಗೂ ಕಾಲದ ಊಹೆಯ ಪ್ರಯೋಗವನ್ನು ನಾಲ್ಕು ಗುಂಪಿನ ಮೂಲಕ ಮಾಡಿರುವ ಪ್ರಯೋಗವನ್ನು ಸಹ ಇಲ್ಲಿ ಕಾಣಬಹುದು.


ಪ್ರಜ್ಞೆ 'ನಿನ್ನ ಸೊತ್ತಲ್ಲ' ಎಂದ ಇರುವೆಗಳು : ಇಡೀ ಜೀವ ಜಗತ್ತಿನಲ್ಲಿ ಬುದ್ಧಿವಂತ ಪ್ರಜ್ಞಾವಂತ ಎನಿಸಿಕೊಂಡ ಮನುಷ್ಯ ಚಿಟ್ಟೆ, ದುಂಬಿ, ಇರುವೆ ಮುಂತಾದ ಕ್ಷುದ್ರ ಪ್ರಾಣಿಗಳನ್ನು ಅರಿವು ಮೂಡಲಾರದ ಜೀವಿಗಳಂತೆ ಕಂಡ. ಆದರೆ, ಆ ಪ್ರಾಣಿಪ್ರಜ್ಞೆ ಹೇಗಿರುತ್ತದೆ ಎನ್ನುವುದನ್ನು ನಾವಿಲ್ಲಿ ಇರುವೆಗಳು, ಅವುಗಳ ವಾಸನಾ ಗ್ರಹಿಕೆಯ ಹಾಗೂ ಸಂದೇಶ ತಿಳಿಸುವ ನಡೆಯ ಮೂಲಕ ಕಾಣಬಹುದು.


ಅರಮನೆಯೇ ಸೆರೆಮನೆಯಾಗುವ ಪರಿ : ನಮ್ಮ ಹವ್ಯಾಸ ಅಥವಾ ಆಸಕ್ತಿಯ ಕ್ಷೇತ್ರ ಅಥವಾ ಅದಮ್ಯ ಗುರಿಯ ಕಡೆಗೆ ನಡೆಯುತ್ತಾ.. ನಮ್ಮಗರಿವಿಲ್ಲದಂತೆಯೇ ನಾವೆಲ್ಲರೂ ನಮ್ಮದೇ ಅದೃಶ್ಯ ಸೆರೆಮನೆಗಳನ್ನು ಕಟ್ಟಿಕೊಂಡು ಹೊರ ಜಗತ್ತಿಗೆ ತೆರೆದುಕೊಳ್ಳದೆಯೇ ಮರೆಯಾಗಿ ಬಿಡುತ್ತೇವೆ ಎಂಬುದು ಲೇಖಕರ ವಾದ. ಅದನ್ನು ಸೆರೆಮನೆ ಎಂದು ಹೇಳುವ ಬದಲು ಧ್ಯೇಯದತ್ತ ಸಾಗುವ ಸಾಧಕ ಪಯಣ ಎಂದೇಕೆ ಪರಿಗಣಿಸಬಾರದು ಎನ್ನುವ ಅವರ ಮಗಳ ಪ್ರಶ್ನೆ ಚರ್ಚಾ ರೂಪದಲ್ಲಿ ಸಾಗುವ ಪರಿ ಇಲ್ಲಿದೆ.


ಹಸಿರು, ಮನೆ, ಮನ : ನಾವು ಪ್ರಕೃತಿಯ ಸಾಂಗತ್ಯದಿಂದ ದೂರವಾದಂತೆ ನಮಗರಿವಿಲ್ಲದೆಯೇ ಹಲವು ರೀತಿಯ ಅನಾರೋಗ್ಯಗಳಿಗೆ ತುತ್ತಾಗುವುದರ ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುವ ಸಂಭವದ ಕುರಿತು ಎಚ್ಚರಿಸುತ್ತಿದ್ದಾರೆ. ಹಸಿರು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ, ಆರೋಗ್ಯ, ಮನ-ಮನೆಗಳ ಕೊಂಡಿಯ ಜೊತೆಗೆ ಕುವೆಂಪು ಅವರ ರಾಮಾಯಣ ದರ್ಶನಂ ಹಾಗೂ ರಾಮಾಯಣ ಕಾಲದ ಉದಾಹರಣೆಗಳನ್ನು ಇಲ್ಲಿ ಕಾಣಬಹುದು.


ನಮ್ಮ ಬದುಕಿಗೆ ಕೃತಕತೆ ತಂದ ಸಮಾಜ 'ಪ್ರಜ್ಞೆ' : ಪ್ರಾಣಿಗಳಿಗೇಕೆ ಪ್ರತ್ಯೇಕವಾದ ಸ್ನಾನದ ಮನೆಗಳಿಲ್ಲ..? ಪ್ರಾಣಿಗಳಿಗೆ ಮೈ ಮುಚ್ಚಿಕೊಳ್ಳುವುದಿಲ್ಲ ಎಂಬ ಪ್ರಶ್ನೆಗಳು ನಮ್ಮಲ್ಲೂ ಒಂದು ಬಾರಿ ಮೂಡಿವೆಯಲ್ಲವೇ..?! ಇಂತಹ ಪ್ರಶ್ನೆಗಳ ಪಟ್ಟಿಯೇ ಮೂಡಿರಬಹುದು. ಮನುಷ್ಯ ವಿಕಾಸವಾಗುತ್ತಾ ಹೋದಂತೆ ನಗು, ಭಾವ ಪ್ರದರ್ಶನ, ನಾಚಿಕೆ, ಮರ್ಯಾದೆ ಹೀಗೆ ಒಂದೊಂದಾಗಿ ಜೊತೆಯಾಗುತ್ತಾ ಹೋದವು. ಇದು ಸಮಾಜಕಷ್ಟೇ ಸೀಮಿತವೇ..? ನಾವು ಒಬ್ಬರೇ ಇರುವಾಗಿನ ನಿರಾಳ ಸ್ಥಿತಿ, ಸಮಾಜ ಹಾಗೂ ಜನರೊಡನೆ ಬೆರೆಯುವಾಗ ಇರುವ ನಡೆಗೂ ವ್ಯತ್ಯಾಸವಿರುತ್ತದೆಯಲ್ಲವೇ..? ಇದರ ಆಧಾರಿತ ಲೇಖನವಿದು.


'ಜೀವ'ಕ್ಕೇಕೆ ಈ ಸ್ಪಂದನ : ನಾವು ಮಾನವ ಜೀವಕ್ಕೆ ಮರುಗುವಷ್ಟು ತೀಕ್ಷ್ಣವಾಗಿ ಇತರೆ ಪ್ರಾಣಿಗಳ ಜೀವಗಳಿಗೆ ಮರುಗುವುದಿಲ್ಲವೇಕೆ..? ಬೇರೆ ಪ್ರಾಣಿಗಳಿಗೂ ಇದೇ ಭಾವವಿದೆಯಾ..? ಹಲವು ಆಯಾಮಗಳಿಂದ ಚರ್ಚಿತವಾಗಿದೆ.


ನಮ್ಮ ನಿಮ್ಮೊಳಗಿನ ರಾವಣ : ರಾಮಾಯಣ ದರ್ಶನಂನಲ್ಲಿ ರಾವಣನ ಆತ್ಮ ಶ್ರೀರಾಮನ ಆತ್ಮದೊಳಗೆ ಮೋಕ್ಷ ಪಡೆಯುವ ಪ್ರಸಂಗವನ್ನು ಹೇಳುತ್ತಾ.. ಸಂಶೋಧನಾ ಪ್ರಬಂಧವೊಂದರ ತಿರುಳನ್ನು ಹೇಳುತ್ತಾರೆ. ಲಕ್ಷಾಂತರ ವರ್ಷಗಳಿಂದ ಮಾನವನನ್ನು ರಾವಣನಂತೆ ಕಾಡಿದ ಸಾವಿರಾರು ವೈರಾಣುಗಳ ಪ್ರಮುಖ ಧಾತುಗಳು ವಿಕಾಸದ ಹಾದಿಯಲ್ಲಿ ನಮ್ಮದೇ ಧಾತುಗಳೊಂದಿಗೆ ಲೀನವಾಗಿ ನಮ್ಮೊಂದಿಗೆ ಬದುಕಿ ಬಾಳುತ್ತಿವೆ ಎಂಬ ಸತ್ಯವನ್ನು ತೆರೆದಿಡುತ್ತಾರೆ. ಸಂಶೋಧನೆಯ ಆಂತರ್ಯವನ್ನು ಕೋವಿಡ್ ಹಾಗೂ ಇತರ ವೈರಸ್ ಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.


ಸುಖದ ಬೇಟೆ ಕೊಡುವ ದುಃಖ : ಸುಖ ಹುಡುಕುವುದರಲ್ಲಿ ಯಾವ ತಪ್ಪೂ ಇಲ್ಲ. ಒಂದೇ ತೊಂದರೆ. ಅದು ಸಿಕ್ಕಿದಾಗ ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಪರಿಹಾರವೇನು..? ಅದನ್ನು ಹೇಗೆ ತಿಳಿದುಕೊಳ್ಳಬಹುದು..? ಮಾನವನ ಮನಸ್ಸಿನ ಚಂಚಲತೆ ಹಾಗೂ ಸುಖದ ಸ್ಥಿತಿಯ ನಡುವಿನ ಸಂಬಂಧದ ಅಧ್ಯಯನವೂ ಇಲ್ಲಿದೆ.


ಡಾರ್ವಿನ್ ವಾದಕ್ಕೆ ಸವಾಲಾದ ಸಮ್ಮೋಹನ : ಯಾವುದೇ ವರ್ತನೆ ಪುನರಾಭಿವೃದ್ಧಿಗೆ ಸಹಕಾರಿಯಾಗಿದ್ದರೆ ಮಾತ್ರವೇ ವಿಕಾಸಗೊಳ್ಳುತ್ತದೆ ಎನ್ನುವುದು ಡಾರ್ವಿನ್ ಸಿದ್ದಾಂತದ ಪ್ರತಿಪಾದನೆ. ಸಲಿಂಗ ಕಾಮ ಸ್ವಾಭಾವಿಕವೇ..? ತಮ್ಮ ಪುನರಾಭಿವೃದ್ಧಿಯನ್ನೇ ತ್ಯಾಗ ಮಾಡಿ ಸೋದರಿಯನ್ನು ಸಾಕುವ ಬಂಜೆ ಜೇನುನೊಣಗಳಂತೆ ಸಲಿಂಗ ಕಾಮ ಸಮಾಜದ ಒಳಿತಿಗಾಗಿಯೇ ವಿಕಾಸಗೊಂಡಿರುವ ತ್ಯಾಗ ವರ್ತನೆ ಎನ್ನುವ ವಾದ ಎಷ್ಟು ಸಮಂಜಸ. ಈ ಕುರಿತ ವಾದ-ಪ್ರತಿವಾದಗಳು ಇಲ್ಲಿವೆ.


ನಾನು ಎಂಬ ನಂಬಿಕೆ : ನಾನು ಎಂಬುದಕ್ಕೆ ಅದೆಷ್ಟು ರೂಪಗಳು..! ಕೆಲವರಿಗೆ ಭಾವಚಿತ್ರ, ಕೆಲವರಿಗೆ ಬೆರಳಚ್ಚು, ಕೆಲವೊಮ್ಮೆ ನಮ್ಮ ಯೋಚನೆಗಳು. ಹಾಗಾದರೆ ನಾನು ಎಂಬ ಭಾವ ನಿಜಕ್ಕೂ ನಂಬಿಕೆ ಮಾತ್ರವಾ..? ಹಲವು ಆಯಾಮಗಳ ನೋಟ ಇಲ್ಲಿದೆ.


ರಣಮೇಘದ ಕಣ್ಣೀರು : ಇರಾನಿನ ಪರ್ವತ ಪ್ರದೇಶದ ಅಂತರಾಳದಲ್ಲಿ ಹುದುಗಿದ್ದ ಅಣುಸ್ಥಾವರಗಳ ಮೇಲೆ ನಡೆಯುತ್ತಿದ್ದ ಬಾಂಬ್ ದಾಳಿ ಇರಾನಿನಿಂದ ಸುಮಾರು 3000 ಕಿಲೋಮೀಟರ್ ದೂರದಲ್ಲಿರುವ ಜರ್ಮನಿಯ ಒಂದು ಸಣ್ಣ ಪಟ್ಟಣದ ವಿಜ್ಞಾನ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಯನ್ನು ಹೊಕ್ಕ.. ಆಲೋಚನೆಗೆ ಹಚ್ಚುವ ಪ್ರಸಂಗ ಇಲ್ಲಿದೆ. ಈ ಪ್ರಸಂಗದ ಕುರಿತು ಹೆಚ್ಚು ತೆರೆಡಿಡಲಾರೆ. ಲೇಖಕರಿಗೆ ಪಾಪಪ್ರಜ್ಞೆ ಕಾಡಿದ ಗಾಢವಾದ ಕ್ಷಣಗಳು ಇಲ್ಲಿವೆ. 


ಕಡಿವಾಣವಿಲ್ಲದ ಕುದುರೆಯಂತಹ ಮನಸ್ಸು ಹಾಗೂ ಅದರ ಆಲೋಚನೆಗಳು ವಿಸ್ತಾರ ಹಾಗೂ ವಿಭಿನ್ನ. ಇದನ್ನು ಜೀವ ವಿಕಾಸದ ಹಿನ್ನೆಲೆಯಲ್ಲಿ, ಸಂಶೋಧನೆಗಳು ಹಾಗೂ ತರ್ಕಗಳ ಮೂಲಕ ಕಟ್ಟಿಕೊಟ್ಟಿರುವ ಸತ್ವಯುತ ಲೇಖನಗಳ ಸಂಗ್ರಹ ಇಲ್ಲಿದೆ. ವಿಜ್ಞಾನ ಮತ್ತು ಮನೋವೈಜ್ಞಾನಿಕ ವಿಷಯದ ಆಸಕ್ತರು ತಪ್ಪದೇ ಓದಿ ನೋಡಿ.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ