ಶನಿವಾರ, ಜೂನ್ 13, 2026

ಹಿನ್ನೀರ ದಂಡೆಯ ಸೀತಾಳೆ ದಂಡೆ (ಪುಸ್ತಕ ಯಾನ - 460)


ಪುಸ್ತಕದ ಶೀರ್ಷಿಕೆ : ಹಿನ್ನೀರ ದಂಡೆಯ ಸೀತಾಳೆ ದಂಡೆ

ಲೇಖಕರು : ಮಂಗಳ ಟಿ. ಎಸ್. ತುಮರಿ

ಪ್ರಕಾಶಕರು : ಹರಿವು ಬುಕ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 100

ಬೆಲೆ : 130 ರೂ.


ಮಂಗಳ ಟಿ. ಎಸ್. ತುಮರಿ ಅವರ ಮೊದಲ ಕೃತಿ ಆರೋಹಿ ಎಂಬ ನಾಟಕ. ಇದು ಅವರ ಎರಡನೇ ಕೃತಿ ಹಾಗೂ ಮೊದಲ ಕಥಾ ಸಂಕಲನ.


ಶರಾವತಿ ಹಿನ್ನೀರ ದಂಡೆಯ ಲೇಖಕಿಯ ಸೀತಾಳೆ ಹೂವಿನಂತಹ ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. 


ಹಸಿರು ಕೆರೆ : ಕಾಂತಿ ಕೆಲಸಕ್ಕೆ ಸೇರಿದ ಏಳು ವರ್ಷಗಳಲ್ಲಿ ನಾಲ್ಕು ಬಾರಿಯಾದರೂ ಪತ್ರಿಕೆ ಗುಣಶೇಖರರ ಸಂದರ್ಶನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿತ್ತಾದರೂ.. ಎಷ್ಟೇ ಬೇಡಿದರೂ ಅವರ ಸಂದರ್ಶನ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಮನುಷ್ಯ ಸತ್ತ ನಂತರ ಆತನ ಪತ್ನಿಯ ಸಂದರ್ಶನಕ್ಕೆ ಸಿಕ್ಕ ಅವಕಾಶ ಅವಳನ್ನು ಸಕಲೇಶಪುರದತ್ತ ಕೊಂಡೊಯ್ಯಿತು. ಕಾಂತಿಯ ವೈಯಕ್ತಿಕ ಬದುಕಿನ ಸಂಘರ್ಷಗಳ ಜೊತೆಗೆ ಸಾಗುವ ಪಯಣ ಗುಣಶೇಖರನ ಪತ್ನಿ ಮೈಥಿಲಿಯ ಜೊತೆಗಿನ ಮಾತುಕತೆ, ವ್ಯಾವಹಾರಿಕ ಅಥವಾ ನಾಮಕಾವಸ್ಥೆ ಎಂಬಂತೆ ಆಗಬಹುದಾಗಿದ್ದ ಸಂದರ್ಶನ ಒಂದು ಸಂದರ್ಶನಕ್ಕಿಂತ ಹೆಚ್ಚಾಗಿ ಬಾಂಧವ್ಯ ಬೆಳಸಿತ್ತು. ಅಲ್ಲಿಂದ ಹೊರಟ ಕಾಂತಿಯ ಮನಸ್ಸಿನಲ್ಲೊಂದು ಸ್ಪಷ್ಟತೆ ಮೂಡಿದ್ದಕ್ಕೆ ಕಾರಣವೇನು..? ಮೈಥಿಲಿ ಹಸಿರು ಕೆರೆಗೆ ಕೊಟ್ಟ ವ್ಯಾಖ್ಯಾನ, ಕಾಂತಿ ಕಂಡುಕೊಂಡ ಬಗೆ ಇಲ್ಲಿದೆ. ವ್ಯಕ್ತಿತ್ವವನ್ನು ಹಲವು ಆಯಾಮಗಳಿಂದ ಕಾಣುವ ಇಬ್ಬರ ಕತೆ ಇಲ್ಲಿದೆ. 


ಬೇಲಿ : ಎಷ್ಟೋ ಬಾರಿ ಅಪ್ಪ ಅರ್ಥವಾಗುವುದು ಆತನ ಸಾವಿನ ನಂತರವೇ... ಶರವಿಂದುವಿಗೆ ತನ್ನ ತಂದೆ ಬದುಕಿದ್ದಾಗ ಒಂದು ರೀತಿಯಲ್ಲಿ ಕಂಡರೆ, ಸಾವಿನಾಚೆಗೆ ಬೇರೆಯದ್ದೆ ರೀತಿ ಕಾಣುತ್ತಾರೆ. ಅಪ್ಪ ಆಸ್ಪತ್ರೆಗೆ ಸೇರಲು ಮುಖ್ಯ ಕಾರಣವೇ ತೋಟ ಹಾಗೂ ಬೇಲಿಯ ಕೆಲಸ ಎಂಬಂತೆ ಶರವಿಂದು ತನ್ನ ಅಪ್ಪನ ಮಧ್ಯೆ ಎಳೆದುಕೊಂಡಿದ್ದ ಬೇಲಿ ಏನಾಯ್ತು..?


ತಪ್ಪೊಪ್ಪು : ರೇವಣಸಿದ್ಧ ಎನ್ನುವ ಹೆಸರು ಕಮಲಾಕರ ಮೇಷ್ಟ್ರ ನೆನಪಿನಲ್ಲಿ ಅಚ್ಚಳಿಯದಂತೆ ಕುಳಿತು ಹೋಗಿದ್ದಕ್ಕೆ ಕಾರಣ ಕೇವಲ ಆತನ ಬಾಲ್ಯ ಹಾಗೂ ಶಾಲೆಯ ದಿನಗಳಲ್ಲ.. ಅದರಾಚೆಗೂ ಬೆಸೆದುಕೊಂಡಿದ್ದ ಇವರ ಬಾಂಧವ್ಯ. ಅವನ ತಾಯಿ ಮೇಷ್ಟ್ರ ಬಳಿ ಬಂದು ಭಿನ್ನವಿಸಿದ್ದ ಒಂದು ವಿಚಾರಕ್ಕೆ ಆತನ ಓದು ಮುಂದುವರೆದಿದ್ದು ಈಗ ಇತಿಹಾಸವಾದರೂ.. ಅದೇ ವಿಚಾರ ಮತ್ತೆ ಮುತ್ತನೆ ಎದುರಿಗೆ ನಿಂತ ಸಂದರ್ಭದಲ್ಲಿ ಮೇಷ್ಟ್ರು ಯಾವ ನಿರ್ಧಾರ ತಳೆದರು..?


ಗುಲಾಬಿ ಫ್ರಾಕು : ಬಡತನದ ಮನೆಗಳಲ್ಲಿ ಬಟ್ಟೆ ಹೊಂದಿಸುವುದೇ ಕಷ್ಟ. ಹಿರಿಯ ಮಕ್ಕಳು ಹಾಕಿ ಬಿಟ್ಟ ಲಂಗ ಕಿರಿಯವರಿಗೆ ದಾಟಿಕೊಳ್ಳುತ್ತಾ ಸಾಗುತ್ತವೆ. ಐದು ಹೆಣ್ಣು ಮಕ್ಕಳ ಮನೆಯಲ್ಲಿ ಮಧ್ಯದವರಾಗಿದ್ದ ಇವರಿಗೆ ಗುಲಾಬಿ ಫ್ರಾಕ್ ನ ಆಸೆಯನ್ನು ಅಮ್ಮ ಹೇಗೆ ತೀರಿಸುತ್ತಾರೆ. ಡಾಲಿ ಪಾರ್ಟನ್ ಅವರ ಕೋರ್ಟ್ ಆಫ್ ಮೆನಿ ಕಲರ್ಸ್ ಕವಿತೆಯ ಸಾಲುಗಳೊಂದಿಗೆ ಅರ್ಥವಾಗದ ವಯಸ್ಸಿನ ನೆನಪು, ಕುಹಕಗಳು, ಅವಮಾನಗಳು ಎಲ್ಲದರಾಚೆಗೆ ಇನ್ನೂ ಗುಲಾಬಿ ಫ್ರಾಕಿನ ಮೋಹ, ಅವರ ಆಸೆಯನ್ನು ಯಾವೆಲ್ಲ ರೀತಿಯಲ್ಲಿ ತೀರಿಸಿಕೊಳ್ಳಲು ಬಯಸುತ್ತಾರೆ ಓದಿ ನೋಡಿ.


ಸುಕ್ರಿ : ಮೀನು ಮಾರಾಟ ಮಾಡುತ್ತಿದ್ದ ವಯಸ್ಸಾದ ಸುಕ್ರಿ ಇತ್ತೀಚೆಗೆ ಸುಳಿದು ನಾಲ್ಕು ವಾರಗಳೇ ಕಳೆದಿತ್ತು. ಆತಂಕ, ಚಡಪಡಿಕೆಯ ಜೊತೆಗೆ ಸುಕ್ರಿಯ ನೆನಪು ಸಾಗುತ್ತಾದೆ. ಯಾರೋ ಮಾತನಾಡುತ್ತಿದ್ದ ತಲ್ಲಣ ಹುಟ್ಟಿಸುವ ಮಾತುಕತೆಗಳು ಅದು ಸುಕ್ರಿ ಆಗದಿರಲಿ ಎಂದು ಪ್ರಾರ್ಥಿಸುವ ಕಥೆ ಇಲ್ಲಿದೆ. ಸುಕ್ರಿಯ ಬದುಕು ಹೀಗಿತ್ತು ಓದಿ ನೋಡಿ.


ಶಾಪ : ಶಾಪಗಳೆಲ್ಲ ಫಲಿಸುತ್ತವೆಯಾ ..? ಮುಗ್ಧ ಮನಸ್ಸಿನಿಂದ ಬೇಡಿಕೊಂಡ ಬೇಡಿಕೆಗಳು ಈಡೇರುವುದಾದರೆ ಇದೂ ಯಾಕಾಗಬಾರದು..?

ಊರಿನಲ್ಲಿ ಒಳ್ಳೆಯ ಕಾಲೇಜುಗಳಿಲ್ಲ ಎಂಬ ಕಾರಣಕ್ಕೆ ಊರಿನವರೆಲ್ಲರ ವಿರೋಧದ ನಡುವೆಯೂ ಅಪ್ಪ-ಅಮ್ಮನ ಬೆಂಬಲದೊಂದಿಗೆ ಹಾಸ್ಟೆಲ್ ಸೇರುವ ಹುಡುಗಿಯ ಓದಿನ ಎರಡನೇ ವರ್ಷದಲ್ಲಿ ಹಿಂದೆ ಬಿದ್ದಿದ್ದ ಹುಡುಗ ಅವಳನ್ನು ಕಾಡಿದ ಬಗೆ ಹೇಗೆ..? ಇಲ್ಲಿ ಶಾಪ ಯಾರದ್ದು..? ಶಾಪ ತಟ್ಟಿತೇ..? ಹಾಗಿದ್ದಲ್ಲಿ ಯಾರಿಗೆ..? ಹೊಸತನದ ಕಥೆಯಂತೆ ಭಾಸವಾಯಿತು.


ಸ್ವಪ್ನ ಸೌಧ : "ನನ್ನ ಕನಸುಗಳೆಲ್ಲ ಕಾಸು ಕೊಟ್ಟು ಕಿತ್ಕೊಂಡ್ರೋ ಕಿತ್ಕೊಂಡ್ರು! ಉಳ್ಳೋರು ಸಿವಾಲಯ ಮಾಡ್ತಾರೆ ನಾನೇನ್ ಮಾಡ್ಲಿ ಬಡಪಾಯಿ" ಏಕೆ ಅಳಲಿಡುತ್ತಿರುವ ಧ್ವನಿ ಚಿರಪರಿಚಿತವಾಗಿದ್ದರೂ.. ಗದ್ದಲದ ನಡುವೆ ನೆನಪಾಗಿರಲಿಲ್ಲ. ಆದರೆ ಮನೆಗೆ ತಲುಪಿದ ಮೇಲೆ ಎದುರು ಬೀದಿಯ ದೇವಮ್ಮನ ಧ್ವನಿ ಅದೆಂದು ತಿಳಿದು.. ಅವಳ ಬದುಕಿನ ಸ್ವಪ್ನ ಸೌಧ ಕಳಚಿದ ಕರುಣಾಜನಕ ಕಥೆ ತಿಳಿಯಿತು. ಕಷ್ಟಜೀವಿ ಹಾಗೂ ಹೋರಾಟದ ಸಾಕಾರ ರೂಪದಂತಿದ್ದು ಅವಳ ಬದುಕು ಹಾಗಾಗಿದ್ದು ವಿಪರ್ಯಾಸವಾದರೂ ದೇವಮ್ಮನ ಹೋರಾಟವೇನೂ ಕಡಿಮೆಯಿರಲಿಲ್ಲ. ದೇವಮ್ಮ ಗೆಲ್ಲಬೇಕಿತ್ತು ಎನಿಸಿದರೂ.. ಆಕೆಗೆ ಸಹಕಾರ ಸಿಗದಿದ್ದೇಕೆ ಎಂದು ಪುನರಾವಲೋಕಿಸಬೇಕಾಗುತ್ತದೆ. 


ಕಲ್ಲು ದೇವರನೆಲ್ಲ... : ಆಸ್ತಿಕ ಪತ್ನಿ ಹಾಗೂ ನಾಸ್ತಿಕ ಗಂಡ ಇಬ್ಬರ ನಡುವೆಯೂ ಪೂಜೆ, ಹೋಮ ದೇವಾಲಯದ ವಿಚಾರಕ್ಕೆ ಆಗಾಗ ಸಣ್ಣ ಮುನಿಸುಗಳು ಇದ್ದಿದ್ದೇ. ಆತನ ತಾಯಿಯದ್ದೂ ಇದೇ ವಿಚಾರಕ್ಕೆ ಸಿಡಿಮಿಡಿ. ಮನುಷ್ಯ ದೇವರನ್ನು ನಂಬದಿದ್ದರೂ ಆತನೇ ಮತ್ತೊಬ್ಬರ ಪಾಲಿಗೆ ದೇವರಾಗುವ, ಮಾನವೀಯತೆಯನ್ನು ಇಟ್ಟುಕೊಂಡಿದ್ದರೆ..? ಹೂವಮ್ಮನ ಪಾಲಿಗೆ ಸಹಾಯಕ್ಕೊದಗಿದ ದೇವರಂತ ಮನಸ್ಸಿನ ಮನುಷ್ಯನ ಕಥೆ ಇದು.


ಅವನಿ : ಮಲೆನಾಡಿನ ಊರಿಗೆ ಬ್ಯಾಂಕ್ ಕೆಲಸಕ್ಕೆ ಹೊಸದರಲ್ಲಿ ಬಂದಾಗ ಯಾಕಾದರೂ ಇಲ್ಲಿಗೆ ಬಂದೆ ಎಂದುಕೊಂಡಿದ್ದ ವಾಸುದೇವ ಶರ್ಮರಿಗೆ ಈಗ ಗೋವೆಗೆ ಟ್ರಾನ್ಸ್ಫರ್ ಆರ್ಡರ್ ಸಿಕ್ಕರೂ ಊರು ಬಿಟ್ಟು ಹೊರಡಲು ಸಂಕಟ ಹಾಗೂ ಆ ಊರಿನ ನೆನಪುಗಳು ಅವರನ್ನು ಬಾಧಿಸುತ್ತಿರುತ್ತವೆ. ಅವರ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೆ ಉಳಿಯಲಿದ್ದ ಅವನಿ ಯಾರು..?

ಈ ಕಥೆಯಲ್ಲಿ ಕಾಡಿದ ಸಾಲುಗಳಿವು

"ಅಬ್ಬಾ! ಹೆಣ್ಣು ಮಕ್ಕಳ ಜಗತ್ತೇ! ನಿಮ್ಮ ತಾಕತ್ತೇ! ಏನೇನು ಭಾರವನ್ನು ಇಟ್ಟುಕೊಂಡು ಹೀಗೆಲ್ಲ ಹಾಡುತ್ತೀರಿ! ಒಮ್ಮೆ ಲಾಲಿ. ಇನ್ನೊಮ್ಮೆ ಸ್ನೇಹಗೀತೆ, ಇನ್ನೊಮ್ಮೆ ಒಲವ ಗುನುಗು... ಎಷ್ಟೆಲ್ಲಾ... ಜಗದ ತೇರು ಎಳೆಯುವುದಕ್ಕೆ!"


ಕನ್ನಡಿಯ ಜಗತ್ತು : ಹಲವಾರು ಜನಗಳನ್ನು ನೋಡುವಂತಹ ಅವಕಾಶ ಆ ಕನ್ನಡಿಗಿತ್ತು. ಕನ್ನಡಿಯಿದ್ದ ರೂಮಿಗೆ ಬಂದು ಹೋಗುತ್ತಿದ್ದವರು ಹಲವರು. ಅವರನ್ನು ಹೊರಜಗತ್ತು ನೋಡಿ ಅಳೆದು ಮಾತನಾಡುವುದಕ್ಕೂ ಒಳಜಗತ್ತಿನಲ್ಲಿ ಅವರಿರುವ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿತ್ತು ಅಂತಹ ಹಲವಾರು ಘಟನೆಗಳನ್ನು ಕನ್ನಡಿಯ ಕಣ್ಣಲ್ಲಿ ಕಾಣಬಹುದು.


ಮುಂಬೈ ದರ್ಶನ : ಮುಂಬೈ ದರ್ಶನ ಮಾಡಿಸಲು ಸಿಕ್ಕ ಗೈಡ್ ಸಮೀರ, ಪತಿ-ಪತ್ನಿಯರಿಬ್ಬರ ಆಸಕ್ತಿಗಳು ಬೇರೆ-ಬೇರೆ ಇದ್ದುದರಿಂದ ಅವರಲ್ಲುಂಟಾದ ಮನಸ್ತಾಪಕ್ಕೆ ತೆರೆ ಎಳೆಯುವಲ್ಲಿ ಸಮೀರನ ಪಾತ್ರ ಹಿರಿದಾದುದು. ಸಮೀರನ ಜೀವನಾನುಭವ ವಿಸ್ತಾರವಾಗಿದ್ದು, ತನ್ನ ಪತ್ನಿಯ ಮನಸು ಗೆಲ್ಲುವುದಕ್ಕೆ ಸಮೀರನನ್ನು ಹತ್ತಿರವಾಗಿಸಿಕೊಂಡಿದ್ದವರು ಅವನದ್ದೇ ಕಾರಣದಿಂದಾಗಿ ಪೊಲೀಸ್ ಸ್ಟೇಷನ್ ನ ಸರಳಿನ ಹಿಂದೆ ಹೋಗಬೇಕಾಗಿ ಬಂದದ್ದೇಕೆ..? ಈ ಕಥೆಯ ಅಂತ್ಯ ಊಹಿಸಲು ಕಷ್ಟವಿತ್ತು.


ಸಾಕ್ಷಿ : ರಚನೆಗೆ ಅಮ್ಮನ ಅಕ್ಕ-ತಂಗಿಯರಲ್ಲಿ ಅಚ್ಚುಮೆಚ್ಚಿನವಳೆಂದರೆ ರಜನಿ ಚಿಕ್ಕಿ. ರಜನಿ ಚಿಕ್ಕಿಯ ಸಾವಿನ ಸುದ್ದಿ ಅಮ್ಮ ಹೇಳಿದಾಗ ಆಘಾತ ತಂದಿತ್ತಾದರೂ ವಾಣಿ ಚಿಕ್ಕಿಗೆ ಕ್ಯಾನ್ಸರ್ ಆಗಿದ್ದು, ಟ್ರೀಟ್ಮೆಂಟ್ ಆಗುತ್ತಿರುವುದು ಹಾಗೂ ಅವಳ ನೋವುಗಳೆಲ್ಲವೂ ನೆನಪಾಗಿತ್ತು. ವಿಪರ್ಯಾಸವೆಂದರೆ ಗಟ್ಟಿ ಹೆಂಗಸಾಗಿದ್ದ ಅವಳು ಕ್ಯಾನ್ಸರ್ ನಿಂದಲೂ ಚೇತರಿಸಿಕೊಂಡು ಚೈತನ್ಯದ ಮಾತುಗಳನ್ನಾಡುತ್ತಿದ್ದಳು. ಅವಳ ಛಲವೇ ಅವಳನ್ನು ಗೆಲ್ಲಿಸುತ್ತದೆ ಎಂದುಕೊಳ್ಳುವಷ್ಟರಲ್ಲಿ ಅವಳ ಸಾವು ಸಂಭವಿಸಿತ್ತು. ರಚನೆಗೆ ತಿಳಿದ ಆಘಾತಕಾರಿ ಸುದ್ದಿ ಎಂದರೆ ಚಿಕ್ಕಿ ಸತ್ತದ್ದು ಕ್ಯಾನ್ಸರ್ ನಿಂದಲ್ಲ. ಬದಲಾಗಿ ..? 

ಒಂದು ಸಾವು ಮನೆಯ ಸಂಬಂಧಗಳ ಸತ್ಯವನ್ನು ಹೊರ ಹಾಕುವ ಬಗೆ ಹೇಗಿರುತ್ತದೆ ಓದಿ ನೋಡಿ.


ಇಲ್ಲಿನ ಕಥೆಗಳಲ್ಲಿ ಸಣ್ಣ-ಸಣ್ಣ ಸಂಗತಿಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ. ಚಂದದ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಹೆಣ್ಣು ಮಕ್ಕಳಲ್ಲಿ ಛಲ, ಧೈರ್ಯ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದರಲ್ಲಿಯೂ ಪಾಸಿಟಿವಿಟಿಯನ್ನೇ ಕಾಣಬಹುದು. ಹಾಗೆಂದು ಹೆಣ್ಣಿನ ಒಳತೋಟಿಗಳು ಅನಾವರಣವಾಗಿಲ್ಲವೆಂದಲ್ಲ .ಅದರಾಚೆಗೆ ವಾಸ್ತವವನ್ನು ಸ್ವೀಕರಿಸುವ ಗಟ್ಟಿ ಪಾತ್ರಗಳು ಇಲ್ಲಿವೆ. ನೊಂದ ಜೀವಗಳು ಇಲ್ಲಿ ಹಂಚುವುದು ನೋವನ್ನಲ್ಲ, ಬದಲಾಗಿ ತಮ್ಮ ಜೀವನಾನುಭವವನ್ನು ಜೊತೆಗೆ ಪಾಸಿಟಿವಿಟಿಯನ್ನು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ ದಾರಿಯಂತೂ ಇದ್ದೇ ಇದೆ. ಆ ಹಾದಿಯ ಮೂಲಕ ಸಾಗಬೇಕಷ್ಟೆ ಎಂದು ನೀಡುವ ಸಂದೇಶಗಳು ವಾಸ್ತವತೆಯನ್ನು ತೋರುವ ಕಥಾ ಹೂರಣವನ್ನು ತೋರುತ್ತವೆ. ಚೆಂದದ ನಿರೂಪಣೆಯ ಚೆಂದದ ಓದು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ