ಭಾನುವಾರ, ಜೂನ್ 7, 2026

ಸೂಪರ್ ಗಾಡ್ ಸಣ್ಣಯ್ಯ (ಪುಸ್ತಕ ಯಾನ - 456)



ಪುಸ್ತಕದ ಶೀರ್ಷಿಕೆ : ಸೂಪರ್ ಗಾಡ್ ಸಣ್ಣಯ್ಯ

ಲೇಖಕರು : ಹೃದಯ ಶಿವ

ಪ್ರಕಾಶಕರು : ಹರಿವು ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 128

ಬೆಲೆ : 165 ರೂ. 


ಹೃದಯ ಶಿವ ಇವರು ಸಿನಿಮಾ ಗೀತ ರಚನಕಾರರು, ನಿರ್ದೇಶಕರು ಹಾಗೂ ಹವ್ಯಾಸಿ ಪತ್ರಕರ್ತರು. ಹಲವಾರು ಕವನ ಸಂಕಲನ, ಗದ್ಯ ಬರಹಗಳು, ಸಿನಿಮಾ ಗೀತೆಗಳನ್ನೂ ಬರೆದಿದ್ದಾರೆ. ಇದು ಇವರ ಮೊದಲ ಕಥಾ ಸಂಕಲನ. ಇದಕ್ಕೆ ಸ್ವಾಮಿ ಪೊನ್ನಾಚಿ ಅವರ ಮುನ್ನುಡಿ ಇದೆ. ಅದರಲ್ಲಿ ..

"ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕಥೆಗಳಾದರೂ ಉಳಿಯುತ್ತವೆ" ಎಂಬ ಮಾತಿನಿಂದಲೇ ಕಥೆಯ ಸೋಜಿಗಗಳನ್ನೆಲ್ಲ ತೆರೆದಿಡುತ್ತಾರೆ.

ಈ ಕಥಾ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. 


ಒಂದು ಫ್ರೆಂಡ್ ರಿಕ್ವೆಸ್ಟ್ : ಮೂರು ವರ್ಷಗಳ ಸುದೀರ್ಘ ಅಂತರದ ನಂತರ ಫೇಸ್ಬುಕ್ನಲ್ಲಿ ಅವಳು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅವನಿಗೆ ಹುಟ್ಟಿಸಿದ್ದು ಅಚ್ಚರಿ ಮಾತ್ರವಲ್ಲ ಆತಂಕವನ್ನೂ.. ಈ ಮೂರು ವರ್ಷಗಳಲ್ಲಿ ಇಬ್ಬರೂ ಹೇಗಿದ್ದರು...? ಅವರ ಆ ಅಂತರಕ್ಕೆ ಕಾರಣವೇನು ಎಂಬುದರ ಜೊತೆಜೊತೆಗೆ ಅವರಿಬ್ಬರ ಚಾಟಿಂಗ್ ತೆರೆದುಕೊಳ್ಳುತ್ತಾ ಸಾಗುತ್ತದೆ. ಅವನ ಚಿತ್ರದ ಸೂಕ್ಷ್ಮವನ್ನು ಗಮನಿಸುವ ಅವಳು ಹಾಗೂ ಅವಳ ಪ್ರೊಫೈಲ್ ಪಿಚ್ಚರ್ ಇಂದ ಅವಳನ್ನು ಅಳೆಯುವ ಇವನು ಮತ್ತೆ ಎದುರಾಗಿದ್ದು ಸ್ಮಶಾನದಲ್ಲಿ. ಈ ವಿಚಿತ್ರ ಭೇಟಿ ಹೇಗಿದೆ ಓದಿ ನೋಡಿ.


ಸುಶೀಲಾ : ಅಪ್ರತಿಮ ಸುಂದರಿಯಾಗಿದ್ದ ಸುಶೀಲಾ ಶಾಲೆಯ ಶಿಕ್ಷಕರಿಗೆಲ್ಲರಿಗೂ ಮೆಚ್ಚಿನ ಶಿಷ್ಯಳಾಗಿದ್ದಳು. ಅವಳಿಗೆ ಆರಾಧಕರೂ ಇದ್ದರು. ಹುಷಾರಿನ ಹುಡುಗಿಯಾಗಿದ್ದವಳಿಗೆ ಡಿಸ್ಟಿಕ್ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಿಕ್ಕ ಕಾರಣಕ್ಕೆ ತಂದೆ ಮದುವೆ ಮಾಡಿಕೊಟ್ಟಿದ್ದರು. ಅವಳ ವಕೀಲೆಯಾಗುವ ಕನಸು ಅರ್ಧಕ್ಕೆ ನಿಂತು ಸಂಸಾರ ಸಾಗರದಲ್ಲಿ ಮುಳುಗಿದ್ದಾಗ.. ಹಳೆಯ ಗೆಳೆಯ ಮೋಹನ ಅವಳ ಬದುಕಿನಲ್ಲಿ ಅಲೆ ಎಬ್ಬಿಸಿದ್ದು ಹೇಗೆ..? ಟಿ.ವಿಯಲ್ಲಿ ಸೆಳೆಯುತ್ತಿದ್ದ, ಕಾಣುತ್ತಿದ್ದ ಮೋಹನನ ಭೇಟಿ ಸುಶೀಲಾಳ ಬದುಕನ್ನು ಹೇಗೆಲ್ಲಾ ಬದಲಾಯಿಸಿತು ಓದಿ ನೋಡಿ.


ಮೊರೆವ ಕಡಲ ಧ್ಯಾನ : ಹಿಂದಿನ ದಿನವಷ್ಟೇ ಅಪ್ಪನ ಶವಪೆಟ್ಟಿಗೆಯನ್ನು ಚರ್ಚಿನಲ್ಲಿ ಹೂತು ಬಂದಿದ್ದ ನಿಕೊಲಸ್ ಹಾಗೂ ಗೇಬ್ರಿಯಲ್ ಒಂದೇ ತಂದೆಯ ಮಕ್ಕಳಾದರೂ .. ಒಂದೇ ತಾಯಿಯ ಮಕ್ಕಳಲ್ಲ. ಇಬ್ಬರೂ ತಮ್ಮ ಬದುಕನ್ನು ಪರಸ್ಪರ ತೆರೆದಿಟ್ಟುಕೊಳ್ಳುತ್ತಾ ಸಾಗುತ್ತಿದ್ದಾಗ ಎದುರಲ್ಲಿ ಕಡಲಿತ್ತು. ಅಪ್ಪನಿಲ್ಲದ ಹೊತ್ತಿನಲ್ಲಿ ಇಬ್ಬರ ಮನದಾಳ ಹೇಗಿತ್ತು...? ಕಡಲು ಯಾವುದಕ್ಕೆಲ್ಲ ಸಾಕ್ಷಿಯಾಯಿತು..?


ಬುಂಡೆದಾಸನೆಂಬ ಹುಚ್ಚಯ್ಯ : ಮುದುಕ ಬುಂಡೆದಾಸ ಆನೆ ತುಳಿದು ಸತ್ತಿದ್ದನು. ಬಾಲ್ಯದಿಂದಲೇ ಭಟ್ಟಿ ಸರಾಪು ಕುಡಿಯುತ್ತಿದ್ದವನಿಗೆ ಆ ಹೆಸರು ಬಂದಿತ್ತು. ಆತನ ಅಣ್ಣಂದಿರು, ಅತ್ತಿಗೆಯರಿಗೆ ಈತ ಯಾವತ್ತೋ ಸತ್ತು ಹೋಗಿದ್ದ. ಆದರೆ, ಆತನನ್ನು ಪ್ರೀತಿಸುತ್ತಿದ್ದ ಜನ ಬಹಳ ಇದ್ದರು. ಅವನ ಸಾವಿನ ಹೊತ್ತಿನಲ್ಲಿ ಅವನನ್ನು ಜ್ಞಾಪಿಸಿಕೊಂಡ ಪರಿಯೇ  ಈ ಕಥೆ. ನಿಯತ್ತಿನ ನಾಯಿ ಬೈರನ ಜೊತೆಗಿದ್ದವನ ಸಂಸಾರ ಹೇಗಿತ್ತು..? ಪ್ರಕೃತಿಯಲ್ಲಿ ಲೀನವಾದ ಬುಂಡೆದಾಸ ಹೇಗಿದ್ದ ಓದಿ ನೋಡಿ.


ವೈಷ್ಣವಿ ಎಂಬ ಸುಂದರಿ : ಕೇರಳದಿಂದ ಬೆಂಗಳೂರಿಗೆ ಬಂದು ಪಿ.ಜಿಯಲ್ಲಿ ನೆಲೆಸಿ ಚೆನ್ನಾಗಿ ಓದಿ ನರ್ಸ್ ಆಗುವ ಆಸೆ ಇಟ್ಟುಕೊಂಡಿದ್ದ ವೈಷ್ಣವಿ ಹಾಗೂ ಅವಳ ತಂದೆಯ ಕನಸಿನ ಜೊತೆಗೆ ಅವಳ ರೂಮ್ ಮೇಟ್ ಚೈತ್ರ ತುಂಬಿದ ಕನಸು ಚಿತ್ರನಟಿಯಾಗುವುದು. ಸ್ಟಾಫ್ ನರ್ಸ್ ಆಗಲಿ ಎಂಬ  ವಾಸ್ತವದ ಕನಸು ಕಾಣುತ್ತಿದ್ದ ತಂದೆ, ಬಾಲ್ಯದ ಗೆಳತಿ ವೈಷ್ಣವಿಯನ್ನೇ ಮನಸಾರ ಪ್ರೀತಿಸಿ ಅವಳೇ ತನ್ನ ಮಡದಿಯಾಗಲಿ ಎಂದು ಆಶಿಸುತ್ತಿದ್ದ ಮುರಳೀಧರನ್, ಚಿತ್ರನಟಿಯಾಗಲು ಅದಕ್ಕೆ ಬೇಕಾದ ಕಾಂಟಾಕ್ಟ್ ಮಾಡಿಕೊಟ್ಟಿದ್ದ ಚೈತ್ರ ಈ ಮೂವರ ಪ್ರಯತ್ನಗಳಲ್ಲಿ ವೈಷ್ಣವಿ ಯಾವುದರ ಹಿಂದೆ ಹೋಗುತ್ತಾಳೆ..? 


ಪ್ರಾಯಶ್ಚಿತ್ತ : ರಮಾಕಾಂತ್ ನನ್ನು ಹುಡುಕಿಕೊಂಡು ಬಂದಿದ್ದವಳು ಆತನ ಬಳಿ ಹೇಳ ಬಯಸಿದಾಗ ಸತ್ಯ ಆಕೆ ಗರ್ಭಿಣಿ ಎಂದೂ ಹಾಗೂ ಆಕೆಗೆ ಬೇರೊಬ್ಬರ ಜೊತೆ ಸಂಬಂಧವಿದೆ ಎಂದು. ಅಷ್ಟಕ್ಕೂ ವಕೀಲ ರಮಾಕಾಂತ್ ನನ್ನು ಆಕೆ ಹುಡುಕಿಕೊಂಡು ಬಂದದ್ದೇಕೆ..? ಮಟನ್ ಸ್ಟಾಲ್ ನ ಆ ವ್ಯಕ್ತಿ ಅವರಿಬ್ಬರ ಸಂಬಂಧವನ್ನು ತಿಳಿದು ನಿಬ್ಬೆರಗಾದ ಪ್ರಸಂಗ ಇಲ್ಲಿದೆ.


ಹೊನ್ನಮ್ಮನ ಕುರಿಗಳು : ಮುದುಕಿ ಹೊನ್ನಮ್ಮನನ್ನು ಮಣ್ಣಿನಲ್ಲಿರಿಸಿ ಎಲ್ಲರೂ ಹೊರಟರಾದರೂ ಬೀರಯ್ಯನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಆಕೆ ಒಳ್ಳೆಯ ಅಮ್ಮನಾದಳು, ತಾನೇ ಒಳ್ಳೆಯ ಮಗನಾಗಲಿಲ್ಲ ಎಂಬ ಭಾವ ಕಾಡುತ್ತಿತ್ತು. ತನ್ನ ತಾಯಿಯ ಸಾವಿಗೆ ಕಾರಣಕರ್ತಳಾದ ತನ್ನ ಹೆಂಡತಿಯ ಕ್ರೂರತೆ ಕಂಡು ಆಕ್ರೋಶವೂ ಹುಟ್ಟಿ ಈಗ ದಿಕ್ಕು ತೋಚದಂತಾಗಿತ್ತು. ಈ ಎಲ್ಲದರ ಹಿನ್ನೆಲೆ ಹಾಗೂ ಸತ್ಯಾಸತ್ಯತೆ ಏನಿತ್ತು ಓದಿ ನೋಡಿ.


ಬಂಧ : ಆತ ಎರಡನೇ ಮದುವೆಯಾಗಿದ್ದರೂ ಈಗ ಮೊದಲ ಪತ್ನಿ ಮತ್ತೆ ಆತನ ಬದುಕಲ್ಲಿ ಬರುವ ಸುಳಿವು ಸಿಕ್ಕಿತ್ತು . ಎರಡನೆಯ ಹೆಂಡತಿಗೆ ಅವಳ ಫೋಟೋ ಕಂಡರೆ ಸಿಡಿಮಿಡಿ. ಇನ್ನು ಈಗಿನ ವಿಚಾರ ತಿಳಿದರೆ ಹೇಗಿರಬಹುದು..? ಮೊಮ್ಮಗಳಿಗೆ ಹೇಳುವ ಕಥೆ ಜೊತೆಗೆ ಅವರ ಬದುಕಿನ ವಾಸ್ತವ ಎರಡನ್ನು ಮಿಳಿತಗೊಳಿಸಿದಂತಿರುವ ಕಥೆ ಇದು. ಕಥಾತಂತ್ರ ಇಷ್ಟವಾಯಿತು.


ಒಂದು ರಾತ್ರಿ ಏನಾಯಿತೆಂದರೆ... : "ಮದುವೆ ಅನ್ನೋದು ಒಂದು ಸಂಬಂಧ ಬೆಸೆಯೋದ್ರ ಜೊತೆಗೆ ಒಂದಿಷ್ಟು ನಂಟುಗಳ ಬೇರುಗಳನ್ನು ಕತ್ತರಿಸಿ ಹಾಕುತ್ತೆ" ಎಂದವನ ವಿಚಾರಗಳು ಯಾವು ದಿಕ್ಕಿನಲ್ಲಿ ಓಡುತ್ತಿದ್ದವು..? ಲಿಸಾ ಹಾಗೂ ಅವನ ಸಂಬಂಧಕ್ಕೆ ಅರ್ಥವೇನು..? ಆ ಸಂಬಂಧದ ರೂಪುರೇಷೆ ಆ ರಾತ್ರಿ ಬದಲಾಯಿತೇ ಓದಿ ನೋಡಿ.


ಕಲ್ಗುಡಿ ಮಠ : ಜವರಪ್ಪ ಹಾಗೂ ಸಾಧುವಿನ ನಡುವೆ ನಡೆಯುವ ಸಂಭಾಷಣೆಗಳು ಅವರ ಬದುಕು ಮಾತ್ರವಲ್ಲದೆ ಬದುಕಿನ ಆಧ್ಯಾತ್ಮವನ್ನು, ಲೋಕದ ವ್ಯವಹಾರಗಳನ್ನು ತಮ್ಮದೇ ಪ್ರೀತಿಯಲ್ಲಿ ವಿಶ್ಲೇಷಿಸಿದ ಬಗೆ ಇಲ್ಲಿದೆ. ಹಳ್ಳಿಯ ಆಡುಮಾತಿನಲ್ಲಿರುವ ಈ ಕಥೆಯಲ್ಲಿ ಹಲವಾರು ತತ್ವಗಳು ಮಿಳಿತವಾಗಿವೆ.


ಸೂಪರ್ ಗಾಡ್ ಸಣ್ಣಯ್ಯ : ಮೈಮೇಲೆ ಬಸಪ್ಪ ದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ರಾಗಿದೊಡ್ಡಿಯ ಜನ ಮರುಮಾತಾಡದೆ ಒಪ್ಪುತ್ತಿದ್ದರು. ಇಡೀ ಊರಿನಲ್ಲಿಯೇ ಅವನೊಬ್ಬನಿಗೆ ಮಾತ್ರ ದೇವರು ಬರುತ್ತಿತ್ತು. ಊರದೇವರಾದ ಬಸಪ್ಪನ ಅರ್ಚಕ ಕಟ್ಟಾ ಬ್ರಹ್ಮಚಾರಿ ಎನ್ನುವ ಬಿರುದು ಪಡೆದಿದ್ದ. ಜನರ ಕಷ್ಟ-ಸುಖ, ಹಣ-ಚಿನ್ನ, ರೋಗ-ರುಜಿನ, ಮನೆಯ ಕಾರ್ಯಕ್ರಮಗಳು, ವ್ಯವಹಾರ ಎಲ್ಲದರ ಕುರಿತೂ ನಿಯಂತ್ರಿಸುತ್ತಿದ್ದ ಎಂದರೂ ತಪ್ಪಾಗುವುದಿಲ್ಲ. ಆತನನ್ನು ಜನ ನಂಬಿದಕ್ಕೂ.. ಆತ ನಡೆದುಕೊಳ್ಳುತ್ತಿದ್ದಕ್ಕೂ ವ್ಯತ್ಯಾಸವಿತ್ತೇ..? ಜನ ಎಷ್ಟೆಲ್ಲಾ ಮರ್ಯಾದೆ ಕೊಟ್ಟರೂ ಆತ "ಸಿಸುಮಗನೆ" ಎಂದು ಎಲ್ಲರನ್ನು ಸಂಬೋಧಿಸುತ್ತಿದ್ದ ಪರಿ ಒಪ್ಪುವಂತಿತ್ತೇ..? ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿಗಳ ಬದುಕನ್ನು ಬುಡಮೇಲು ಮಾಡುವಂತಹ ಘಟನೆಗಳು ನಡೆದ ಸರಣಿ ಇಲ್ಲಿದೆ.


ನೆನಪಿನ ಹಿಂಜೋಲ : ನೆಮ್ಮದಿಯ ಸಂಸಾರದಲ್ಲಿ ಈಗ ಮೊಮ್ಮಗನಿಗೆ ಕಥೆ ಹೇಳುತ್ತಾ.. ಅದೂ ತನ್ನ ಯಜಮಾನನ ಕಥೆಯನ್ನೇ ಹೇಳುತ್ತಾ ಕೆಂಪಮ್ಮ ನೆನಪಿಗೆ ಜಾರಿದ್ದಳು. ತನ್ನಷ್ಟು ಸುಖಿ ಬೇರೊಂದು ಹೆಣ್ಣಿಲ್ಲವೆಂದು ಭಾವಿಸಿ ನೆಮ್ಮದಿಯಿಂದಿದ್ದ ಅವಳ ಬದುಕನ್ನು ಮೊಮ್ಮಗನಿಗೆ ಕಥೆ ಹಾಗೂ ಹಾಡಿನ ರೂಪದಲ್ಲಿ ತೆರೆದಿಟ್ಟ ಚಿತ್ರಣ ಇಲ್ಲಿದೆ. ಹಾಡಿನ ಒಂದೆರಡು ಸಾಲುಗಳನ್ನು ನೋಡುವುದಾದರೆ ಹೀಗಿವೆ.

"ಯಾವ ಕುದುರೆಯನೇರಿ ಯಾವ ರಾಜ್ಯವ ಸುತ್ತಿ

ಯಾವ ಕಷ್ಟಕೆ ನೀ ನೆರವಾದೋ

ಯಾರ ಕಂಬನಿಯೊರೆಸಿ ಯಾರ ದುಃಖವ ಸರಿಸಿ

ಯಾರ ಮುಖದಲ್ಲಿ ನಗುವಾದೋ"


ಹಕ್ಕಿಗೂಡು : ಮಾಧವ್ ಸಂದರ್ಶನ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸ್ಪೆಷಲ್ ಗೆಸ್ಟ್ ಬೇರಾರೂ ಆಗಿರಲಿಲ್ಲ.. ಆತನ ತಾಯಿ ಯಶೋದಾ. ಜಗತ್ತಿನಲ್ಲಿರುವ ಪ್ರತಿ ಜೀವಿಯನ್ನು ಪ್ರೀತಿಸಬೇಕು ಅಂತ ಹೇಳುವ ಅವನ ಆಶಯ ಹಾಗೂ ಅಂತಹದ್ದೇ ಕ್ಲಿಪಿಂಗ್ ಅನ್ನು ತೋರಿಸಿದ ಸಂದರ್ಶಕಿ ಈಗ ವೃದ್ಧಾಪ್ಯದಲ್ಲಿ ಆತ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವಷ್ಟು ಕಟುಕರಾಗಿದ್ದೇಕೆ ಎಂದು ಕೇಳಿದಾಗ ಅವನ ಉತ್ತರವೇನಿತ್ತು..? ಅದಕ್ಕೆ ಅವನ ಮಗ ಹಾಗೂ ತಾಯಿಯ ಪ್ರತಿಕ್ರಿಯೆಯೇನು..? ಯಶೋಧಾಳ ನೋಟ ಹಾಗೂ ಬದುಕಿನ ಸಾಕ್ಷಿಯಾಗಿ ಹಕ್ಕಿ ಗೂಡೊಂದು ಕಾಣುತ್ತದೆ.


ಪೂರ್ಣಿಮಾಳ ಭರವಸೆ : ಚಿಕ್ಕವಳಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಹಾಗೂ ಈಗ ತಂದೆ ಸಾವಿಗೀಡಾದ ಪರಿಣಾಮವಾಗಿ ಕಾಲೇಜನ್ನು ಅರ್ಧಕ್ಕೆ ಬಿಟ್ಟು ಜವಾಬ್ದಾರಿ ವಹಿಸಿಕೊಂಡ ಪೂರ್ಣಿಮಾಳಿಗೆ ಇಬ್ಬರು ತಂಗಿಯರಿದ್ದರು. ಮೊದಲನೇ ತಂಗಿ ಮುಂಗೋಪಿ, ಅಹಂಕಾರಿ, ಉದ್ದಟ ಹಾಗೂ ತನ್ನ ಸ್ವಾರ್ಥವನ್ನು, ಸುಖ-ಸಂತೋಷವನ್ನು ಯೋಚಿಸುವ ಸ್ವಭಾವದವಳಾದರೆ.. ಎರಡನೆಯ ತಂಗಿ ಬುದ್ಧಿಮಾಂದ್ಯೆ. ಇಬ್ಬರನ್ನು ತಾಯಿಯಂತೆ ಸಲಹಲು ಹೊರಡುವ ಪೂರ್ಣಿಮಾಳಿಗೆ ಯಾವ ಸವಾಲುಗಳು ಎದುರಾಗಿದ್ದವು ಹಾಗೂ ಅವೆಲ್ಲವನ್ನು ದಾಟಿ ತನ್ನ ಬದುಕಿನ ಕುರಿತು ಮಾತ್ರವಲ್ಲದೆ, ತನ್ನ ತಂದೆಯಂತೆಯೇ ದೊಡ್ಡ ಉದ್ಯಮಿಯಾಗಿ ನೂರಾರು ಜನಕ್ಕೆ ಉದ್ಯೋಗ ಕೊಡುವ ವಿಶ್ವಾಸ ಬೆಳೆಸಿಕೊಂಡದ್ದು ಹೇಗೆ..?


ಕತ್ತಲ ವಂಶದವನು : "ಬೆಳಕೆಂಬುದು ಕೇವಲ ಸೂರ್ಯನಿಗೆ ಸಂಬಂಧಿಸಿದ ವಿಷಯವಲ್ಲ ಬಿಡಿ."

"ಕತ್ತಲೆ ಎಂಬುದು ಕಪ್ಪಗಿರುತ್ತದೆಂದೂ ನಾನು ನಂಬಿದವನಲ್ಲ." 

"ನನಗೆ ರಾತ್ರಿಗಳೆಂದರೆ ಇಷ್ಟ. ಈ ರಾತ್ರಿಯಲ್ಲಿ ಹುಟ್ಟುವ ಒಂದೊಂದು ವಾಕ್ಯವೂ ನನ್ನ ನಲ್ಮೆಯ ಸಂತಾನ." 

ಹೀಗೆ ಕತ್ತಲು, ಬೆಳಕು ಜಿಜ್ಞಾಸೆಯ ಕಾವ್ಯಾತ್ಮಕ ಭಾಷೆಯ ಕಥನವಿದು.


ಹಳ್ಳಿಗೆ ತಕ್ಕ ಹಿನ್ನೆಲೆ ಹಾಗೂ ಆಡು ಮಾತುಗಳು, ವಯಸ್ಸಿಗೆ ತಕ್ಕ ನೋಟಗಳು ಹಾಗೂ ಅನುಭವಗಳು, ಸಿಟಿಯ ಪರಿಸರಕ್ಕೆ ತಕ್ಕಂತೆ ಅಪ್ಡೇಟ್ ಸಂಭಾಷಣೆಗಳು ಎಲ್ಲವನ್ನು ಹೊಂದಿರುವ ಕಥಾ ಸಂಕಲನ. ಕಥೆಯ ಮತ್ತು ಹಾಗೂ ಕಥಾತಂತ್ರಕ್ಕಿಂತಲೂ ಸಂಭಾಷಣೆಗಳು, ಕಥೆಯನ್ನು ಕನೆಕ್ಟ್ ಮಾಡಲು ಬಳಸುವ ರೂಪಕಗಳು ಹೆಚ್ಚು ಇಷ್ಟವಾದವು. ಕೆಲವು ಕತೆಗಳಲ್ಲಿ ಸಿನಿಮೀಯ ಟಚ್ ಕಾಣುತ್ತದೆ. ಚೆಂದದ ಕಥಾ ಸಂಕಲನದ ಸುಂದರ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ