ಶನಿವಾರ, ಜೂನ್ 13, 2026

ಹುಲಿ ವೇಷ (ಪುಸ್ತಕ ಯಾನ - 458)


ಪುಸ್ತಕದ ಶೀರ್ಷಿಕೆ : ಹುಲಿ ವೇಷ

ಲೇಖಕರು : ವಿಠಲ್ ಶೆಣೈ 

ಪ್ರಕಾಶಕರು : ಟೋಟಲ್ ಕನ್ನಡ 

ಪ್ರಥಮ ಮುದ್ರಣ : 2019

ಮೂರನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 206

ಬೆಲೆ : 160 ರೂ.


ಈ ಕಥಾ ಸಂಕಲನದ ಶೀರ್ಷಿಕೆಯಾಗಿರುವ 'ಹುಲಿ ವೇಷ' ಒಂದು ನೀಳ್ಗತೆ. ಲೇಖಕರು ಈ ಕಥೆ ಹುಟ್ಟಿದ ರೀತಿಯನ್ನು ಹೇಳುತ್ತಾರೆ. ಮಂಗಳೂರಿನಲ್ಲಿ 70-80ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿ ವೇಷ ಎಂದರೆ ಇರುವ ಆಪ್ತ ಭಾವ ಹಾಗೂ ನವರಾತ್ರಿಯ ಕೊನೆಯ ನಾಲ್ಕೈದು ದಿನಗಳ ಹುಲಿ ವೇಷದ ನೃತ್ಯ ಜೊತೆಗೆ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಹುಲಿ ವೇಷದ ಬಣ್ಣ ಹೀಗೆ ಈ ಎಲ್ಲಾ ಅನುಭವಗಳ ಜೊತೆಗೆ ಹುಲಿ ವೇಷದ ದಂಡನ್ನೇ ಆಧಾರವಾಗಿಟ್ಟು ಬರೆದ ಕಥೆ ಇದು. ತೀರಾ ಸಣ್ಣ ಕಥೆಯೂ ಆಗದೆ, ಕಾದಂಬರಿಯಷ್ಟು ದೊಡ್ಡದಾಗದೆ ನೀಳ್ಗತೆ ರೂಪ ತಳೆದಿದೆ ಎನ್ನುತ್ತಾರೆ. ಇದರ ಜೊತೆಗೆ ಇನ್ನು ಆರು ಕಥೆಗಳು ಈ ಕಥಾ ಸಂಕಲನದಲ್ಲಿದೆ. ಕೆಲ ಕಥೆಗಳು ಪ್ರತಿಲಿಪಿ ಆನ್ಲೈನ್ ನಲ್ಲಿ ಪ್ರಕಟವಾಗಿವೆ.


ಈ ಕಥಾ ಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. 7 ಕಥೆಗಳ ಕಥಾವಸ್ತುವೂ ವಿಭಿನ್ನವಾಗಿ ಸೆಳೆಯುತ್ತವೆ. ಬೆನ್ನುಡಿ ಹಾಗೂ ಕಥೆಗಳ ಪರಿಚಯದಲ್ಲಿ ಸಂಕ್ಷಿಪ್ತವಾಗಿ ಕಥೆಯ ಕುತೂಹಲವನ್ನು ಕಟ್ಟಿಕೊಟ್ಟು ಓದಲು ಪ್ರೇರೇಪಿಸಿದ್ದಾರೆ.


ಅದೇ ಧ್ವನಿ : "ಕರ್ನಾಟಕದ ಹೊಸ ಧ್ವನಿಗಳು" ಎಂಬ ಟಿ.ವಿ ಕಾರ್ಯಕ್ರಮದ ಕೊನೆಯ ಹಂತದ ಸ್ಪರ್ಧೆಯ ವಿಜೇತನಾಗಿ ಹೊರಹೊಮ್ಮಿದ ಮನೋಜ್ ಕುಮಾರ್ ನಿಗೆ ದೈವದತ್ತವಾದ ಕಂಠ ಒಲಿದಿತ್ತು ಜೊತೆಗೆ ಮುಖದಲ್ಲಿ ಆತ್ಮವಿಶ್ವಾಸವಿತ್ತು. ಅವನ ಸುಮಧುರ ಗಾಯನದಿಂದ ಆತ ಎಲ್ಲರನ್ನೂ ಸೆಳೆದಿದ್ದ. ಮನೋಜ್ ತಾಯಿ ಮುಕ್ತ ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ ಮಗನನ್ನು ಸಾಕಿದ್ದರು. ಓದಿನಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಅವನ ಒಲವು ಹೆಚ್ಚಾಗಿತ್ತು. ಅವನ ಸುಶ್ರಾವ್ಯ ಕಂಠದ ಅರಿವಾಗಿ ಜೊತೆಗೆ ವಠಾರದ ಸರೋಜಮ್ಮನ ಮೆಚ್ಚುಗೆಯೂ ಸೇರಿ ಸಂಗೀತ ತರಬೇತಿ ಕೊಡಿಸಿದರು. ಅವರ ಶ್ರಮಕ್ಕೆಲ್ಲ ಪ್ರತಿಫಲ ಸಿಕ್ಕ ಸಮಯವಿದು. ವಿಜಯದ ಪ್ರತಿಫಲವಾಗಿ ಅಮರ್ - ಕುಶಲ್ ಜೋಡಿಯ ಸಂಗೀತ ನಿರ್ದೇಶನದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಲಿಯುತ್ತಾ ಅವರ ಗರಡಿಯಲ್ಲಿಯೇ ಕಲಿಯುತ್ತಾ ಸಾಗಿದ. ಮೂವರ ನಡುವೆಯೂ ಹೇಳದೆಯೇ ಆಪ್ತತೆ ಜೊತೆಗೆ ಕನೆಕ್ಟಿವಿಟಿ ಬೆಳೆದಿದ್ದು, ಮನೋಜನ ಪ್ರತಿಭೆ, ಯಶಸ್ಸು, ಕೀರ್ತಿ ಎಲ್ಲವೂ ಬೆಳೆದು ಎಲ್ಲವೂ ಸುಸೂತ್ರವಾಯಿತು ಎಂಬ ಸಂದರ್ಭದಲ್ಲಿ ಗಂಟಲು ನೋವಿನಿಂದ ಹಾಡು ಅಪಸ್ವರವಾಯಿತು. ಅಪಸ್ವರದ ಕಾರಣವನ್ನು ಡಾಕ್ಟರ್ ಏನೆಂದರು..? ಅವನ ಚಿಕಿತ್ಸೆ ನಡೆಯಿತು. ಅವನ ಕಮಿಟ್ಮೆಂಟ್ ಹಾಗೂ ಆತನ ಮುಂದಿನ ಬದುಕು ಹೇಗಿತ್ತು..? ಗಾಯಕನಿಗೆ ಧ್ವನಿ ಎಷ್ಟು ಮುಖ್ಯ ಹಾಗೂ ಎಲೆಮರೆ ಕಾಯಿಯಂತಹ ಪ್ರತಿಭೆಗಳ ಪಾಡು ಹೇಗಿರುತ್ತದೆ ಎಂಬುದನ್ನು ಹೇಳುವ ಕಥೆ. ತಾಯಿಯ ಮಮತೆಯ ಮತ್ತೊಂದು ಸ್ವರೂಪವನ್ನೂ ಹೇಳುತ್ತದೆ.


ಹುಲಿ ವೇಷ : ಮಂಗಳೂರಿನ ದಸರಾದ ಸಂಭ್ರಮದ ಭಾಗವಾಗುತ್ತಿದ್ದ ಹುಲಿವೇಷದ ದಂಡಿನಲ್ಲಿ ಭಾನು ಶೆಟ್ಟಿ ಫ್ರೆಂಡ್ಸ್ ಸರ್ಕಲ್ ಹುಲಿಗಳ ತಂಡಕ್ಕೆ 75ನೇ ವರ್ಷದ ಸಂಭ್ರಮ. ತಾತ ಕಟ್ಟಿ ಬೆಳೆಸಿದ್ದ ತಂಡವನ್ನು ಈಗ ತಾನು ವೇಷ ಹಾಕಿ ಭಾನು ಶೆಟ್ಟಿ ಮುನ್ನಡೆಸುತ್ತಿದ್ದ. ಆದರೆ, 30 ವರ್ಷಗಳ ಹಿಂದೆ ತನ್ನ ತಂದೆ ಭೈರವ ಶೆಟ್ಟಿಯನ್ನು ನಿರ್ದಯವಾಗಿಯೇ ಕಣ್ಣಮುಂದೆಯೇ ಕೊಂದದ್ದು ಭಾನು ಶೆಟ್ಟಿಯ ಮನಸ್ಸಿನಲ್ಲಿ ಇನ್ನು ಹಸಿಯಾಗಿಯೇ ಉಳಿದಿತ್ತು. ಇದರ ಹಿನ್ನೆಲೆ ಮತ್ತು ಕಾರಣವೇನು..?

ಹುಲಿ ವೇಷದ ಜೊತೆ ಜೊತೆಗೆ ಚುನಾವಣೆಯ ಹಾಗೂ ರಾಜಕೀಯದ ವಿಚಾರವೂ ತೆರೆದುಕೊಳ್ಳುತ್ತದೆ. ಬಹುಜನ ಪಕ್ಷ ಪ್ರಜಾರಾಜ್ಯ ಪಕ್ಷ ಹಾಗೂ ರೈತ ಬಂಧು ಪಕ್ಷದ ಚುನಾವಣಾ ಫಲಿತಾಂಶ ಹೊರ ಬಿದ್ದು ರೆಸಾರ್ಟ್ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಇತ್ತ ಹುಲಿವೇಷವೂ ನಡೆಯುತ್ತಿರುತ್ತದೆ.

ರೋಚಕವಾಗಿ ಕಥೆಯನ್ನು ಹೇಳುತ್ತಾ ಸಾಗುವಾಗ ರಾಜಕೀಯದ ಆಸಕ್ತರಲ್ಲದವರು ಮುಂದೇನಾಗಬಹುದು ಎಂದು ಕುತೂಹಲದಿಂದ ಕಾಯುವಂತಾಗುತ್ತದೆ.

ಬಿಜಾಪುರದಿಂದ ಬಂದಿದ್ದ ನಾಲ್ವರಲ್ಲಿ ಮಂಜುನಾಥ ನ ಪತ್ನಿಯ ಆಪರೇಷನ್ ಗೆ ದುಡ್ಡು ಕೂಡಿಸಲು, ದುಡ್ಡು ಸಂಪಾದಿಸಲು ವೇಷ ಹಾಕಲು ಬಂದೆವೆಂದು ಹೊಸಬರಿಗೆ ಅವಕಾಶ ಕೊಡುತ್ತಿದ್ದ ಭಾನುಶೆಟ್ಟಿ ಗ್ರೂಪ್ ನಲ್ಲಿ ಸೇರಿದಾಗ ಅವರಿಗೆ ಪೇಂಟಿಂಗ್ ಮಾಡುವುದು, ಹುಲಿ ನೃತ್ಯದ ಸ್ಟೆಪ್ ಗಳನ್ನು ಹೇಳಿಕೊಡುವುದು ಇದೆಲ್ಲದ ಜೊತೆಗೆ ಹುಲಿ ವೇಷದ ವೈಶಿಷ್ಟ್ಯಗಳನ್ನು ತೆರೆದಿರುತ್ತಾರೆ. ಭಾನು ಶೆಟ್ಟಿ ಆಶಿಸುತ್ತಿದ್ದಂತೆಯೇ ಅವರ ಟ್ಯಾಬ್ಲೋಗೆ ದೇವಿಯ ಹತ್ತಿರದ ಸ್ಥಾನವನ್ನು ದೇವಸ್ಥಾನದವರೇ ಕೊಟ್ಟಿದ್ದರ ಅಚ್ಚರಿಯ ಜೊತೆಗೆ ಮತ್ತೊಂದು ಅಚ್ಚರಿಯೂ ಕಾದಿರುತ್ತದೆ.

ಹುಲಿವೇಷ ಹಾಗೂ ರಾಜಕೀಯ ಎರಡು ಮಿಳಿತವಾಗಿರುವ ಈ ಕಥೆ ಇಷ್ಟವಾಯಿತು. ಕಿರುಚಿತ್ರ ನಿರ್ಮಿಸಲು ಚೆಂದದ ಕಥಾನಕ ಇಲ್ಲಿದೆ. 


ತಕ್ಷಕನ ದೋಷ : ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆಫ್ ಕ್ಲೌಡ್ ಟೆಕ್ನಾಲಜಿಸ್ ಸಮ್ಮೇಳನಕ್ಕೆ ಹೋಗಬೇಕಾಗಿದ್ದ, ಅದರಲ್ಲಿಯೂ ತಾನು ಪೀಡಿಸಿ ಪಡೆದುಕೊಂಡಿದ್ದಅವಕಾಶವನ್ನು ಧನುಷ್ ಕಳೆದುಕೊಳ್ಳುವ ಸಂದರ್ಭ ಉಂಟಾಗಿದ್ದು ಹಾವಿನಿಂದ. ಏರ್ಪೋರ್ಟ್ಗೆ ಹೊರಡೋದು ಇನ್ನೇನು ಕೆಲವೇ ನಿಮಿಷಗಳು ಎನ್ನುವಾಗ ಆ ಮಧ್ಯರಾತ್ರಿಯಲ್ಲಿ ಅನಪೇಕ್ಷಿತವಾಗಿ ಕಂಡ ದೃಶ್ಯ ಮನೆಯಲ್ಲಿ ಹೆಡೆ ಬಿಚ್ಚಿ ಕುಳಿತಿದ್ದ ನಾಗರಹಾವು. ಆತನ ಪತ್ನಿಯ ಹೆದರಿಕೆ, ಆಸ್ತಿಕ ಕುಟುಂಬದಲ್ಲಿ ಹುಟ್ಟಿ ನಂಬಿಕೆ ಇಟ್ಟುಕೊಂಡಿದ್ದ ಧನುಷ್ ಬದಲಾದ ಪರಿ ಹಾಗೂ ದೈವ ಭಕ್ತಿ ಮತ್ತು ಆಸ್ತಿಕ ಮನೋಭಾವದ ಪತ್ನಿ ಸಂಧ್ಯಾ ಇವರಿಬ್ಬರ ನಡುವಿನ ಮಾತುಕತೆಗಳು, ವಾದಗಳು ಜೊತೆಗೆ ಹಾವನ್ನು ಓಡಿಸಲು ಮಾಡುವ ಪರದಾಟ ಎಲ್ಲವೂ ಇಲ್ಲಿದೆ. ಇದಕ್ಕೆ ಸರ್ಪ ದೋಷ ಎಷ್ಟರಮಟ್ಟಿಗೆ ಕಾರಣ..? ಓದಿ ನೋಡಿ.


ಅವಳು ಅವನು ಮತ್ತು ಕೋಣೆ : ವಿಚಿತ್ರವಾದ ಕತ್ತಲ ಕೋಣೆಯಲ್ಲಿ ಬಂದಿಗಳಾದ ಇಬ್ಬರು ಬಂಧಿಗಳು ಅವನು ಮತ್ತು ಅವಳು. ಅವರಿಬ್ಬರೂ ಬಂಧಿಯಾದ ಪರಿ, ಅವರಿಬ್ಬರು ಹೊರ ಹೋಗಲು ಪ್ರಯತ್ನಿಸಿ ವಿಫಲರಾಗುವ ಬಗೆ, ಅವರಿಬ್ಬರ ನಡುವಿನ ಮಾತುಕತೆಗಳು, ಸಂಧಾನ ಎಲ್ಲವೂ ಇಲ್ಲಿದೆ. ಹೆಚ್ಚು ಹೇಳಿ ಈ ಕಥೆಯ ಸ್ವಾರಸ್ಯವನ್ನು ಹಾಳು ಮಾಡಲಾರೆ.


ಬಂಗಾರದ ಬಳೆ : ಎಷ್ಟೋ ಬಾರಿ ಪ್ರಾಮಾಣಿಕತೆಯಿಂದ ಇದ್ದವರು ಮನಸ್ಸು ಜಾರಿದ ಕ್ಷಣದಲ್ಲಿ ಅತಿಯಾಸೆಯಿಂದಲೋ ಅಥವಾ ಇದು ಒಂದು ಚಿಕ್ಕ ಅವಕಾಶ ಬಳಸಿಕೊಂಡರೆ ಬೇರೆಯವರಿಗೆ ಹಾನಿಯಾಗಲಾರದು ಎಂತಲೋ ಮನಸ್ಸು ಹೇಳಿದಂತೆ ಕೇಳಲು ಹೋದ ಕ್ಷಣಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುವುದು ಹೆಚ್ಚು. ಕಳ್ಳರಿಗಿಂತಲೂ ಹೆಚ್ಚು ಪಾಪಪ್ರಜ್ಞೆ ಕಾಡುವುದು ಇಂತಹ ಕ್ಯಾಟಗರಿಗೆ ಸೇರಿದವರಿಗೆ. 

ಬದಲಾದ ದಿನಗಳಲ್ಲಿ ರಿಕ್ಷಾಗಿಂತಲೂ ಕ್ಯಾಬ್ ಭರಾಟೆ ಹೆಚ್ಚಾದಾಗ ನವೀನ್ ರಿಕ್ಷಾ ಬಿಟ್ಟು ಲೋನ್ ಪಡೆದು ಕ್ಯಾಬ್ ಓಡಿಸಲು ಶುರುವಿಟ್ಟ. ಪತ್ನಿ ಸುಜಾತಳಿಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕೊಡುವ ಆಸೆ ಅವನಿಗೆ. ಅವಳ ಮನಸ್ಸಿನಲ್ಲಿದ್ದದ್ದು ಬಂಗಾರದ ಬಳೆ. ಹಗಲು-ರಾತ್ರಿ ಕಷ್ಟಪಟ್ಟರೆ ಉಳಿಸಲಾಗುವ ಪುಟ್ಟ ಮೊತ್ತ ಅದಕ್ಕೆ ಸಾಲುವಂತಿರಲಿಲ್ಲ. ಆದರೆ, ಅಚಾನಕ್ ಸಿಕ್ಕಿದ ಅವಕಾಶದಿಂದ ಸುಜಾತಾಳಿಗೆ ಬಂಗಾರದ ಬಳೆಯನ್ನು ಕೊಡಿಸುವ ಸಮಯ ಕೂಡಿ ಬಂದಿತ್ತು ಎಂದುಕೊಂಡು ಹೋದರೆ ಮನಸ್ಸಿನ ಕಲ್ಪನೆಗಳಿಗಿಂತಲೂ.. ಅಲ್ಲಿ ನಡೆದ ವಿದ್ಯಮಾನ ಇಬ್ಬರಿಗೂ ದೊಡ್ಡ ಪಾಠವನ್ನೇ ಕಲಿಸಿದ ಕಥೆ ಇಲ್ಲಿದೆ. 


ನೀ. ಹೀ. ಸಂ : ನಿದ್ದೆ ಬರದೆ ಏನೇನೋ ಸರ್ಕಸ್ ಮಾಡುತ್ತಿದ್ದ ಸುಮಂತ್ ಗೆ ತನ್ನಂತೆಯೇ ಇದ್ದ ಆಲ್ಬರ್ಟ್ ಅಂಕಲ್ ಜೊತೆಯಾದಾಗ ರಾತ್ರಿಯ ವಾಕಿಂಗ್ ಶುರುವಾಗಿತ್ತು. ಮುಂದೆ ರಾಮನಾಥ್ ಜೊತೆಯಾದರು. ಹೀಗೆ ಇವರ ಚಟುವಟಿಕೆಗಳು ಜೋರಾಗಿ ಮುಂದೆ ನಿದ್ರಾಹೀನರದ್ದೇ ಒಂದು ಸಂಘ ಸ್ಥಾಪಿತವಾಗುತ್ತದೆ. ಆದರೆ, ಎಲ್ಲರನ್ನೂ ನಿಯಂತ್ರಿಸುವುದು ಸುಲಭವಲ್ಲ. ಹಾಗೆಂದು ಆ ಸಂಘ ಸರಿಯೇ..? ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ತಮ್ಮಂಥವರೆಲ್ಲರನ್ನು ಸೇರಿಸಿಕೊಂಡ ಸಂಘದ ಪರಿಸ್ಥಿತಿ ಏನಾಯಿತು ಓದಿ ನೋಡಿ.


ಕೀರ್ತಿ ಟ್ರಾವೆಲ್ಸ್ : ಕೀರ್ತಿ ಟ್ರಾವೆಲ್ಸ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ರಚಿತ್ ಹಾಗೂ ಕೀರ್ತಿ ಇಬ್ಬರ ಪರಿಚಯವಾಗಿ ಆಗುವ ಮಾತುಕತೆಯಲ್ಲಿ ಇಬ್ಬರೂ ಮರುದಿನ ಮನೆಯಲ್ಲಿ ನೋಡಿದ ತಮ್ಮ ಭಾವಿ ಸಂಗಾತಿಗಳನ್ನು ನೋಡಲು ಹೊರಟಿರುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಹಾಗೆಂದು ಕೀರ್ತಿಕೆ ರಚಿತ್ ಹಾಗೂ ರಚಿತ್ ಗೆ ಕೀರ್ತಿ ನೋಡಲು ಹೊರಟಿರುವ ಹುಡುಗ-ಹುಡುಗಿಯಲ್ಲ ಇಬ್ಬರ ಬದುಕಿನಲ್ಲಿ ನಡೆಯುವ ಘಟನೆ ಕಾಕತಾಳೀಯ. ಕಥೆಯ ಮೊದಲರ್ಧ ಓದುವಾಗ ನಾನು ಇದು ಕಾಕತಾಳೀಯ ಘಟನೆ ಎಂದೇ ಅಂದುಕೊಂಡೆ. ಆದರೆ, ಯಾವ ಘಟನೆಯೂ ಸುಖಾಸುಮ್ಮನೆ ಘಟಿಸುವುದಿಲ್ಲ. ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ಸುಮ್ಮನೆ ನಮ್ಮ ಬದುಕಲ್ಲಿ ಬಂದಿರುವುದಿಲ್ಲ ಎನ್ನುವ ಉಕ್ತಿಯೊಂದನ್ನು ಓದಿದ್ದೆ. ಅಂತೆಯೇ ಪರಸ್ಪರರು ನೋಡದಿದ್ದರೂ.. ಇಬ್ಬರ ಜೀವನದಲ್ಲಿಯೂ ಬರುವ ವ್ಯಕ್ತಿಗಳ ನಡುವೆ ಕನೆಕ್ಟಿವಿಟಿಯಂತೂ ಇದ್ದೇ ಇದೆ. ಹಾಗೆಂದು ಇದು ಪ್ರೇಮ ಕಥೆಯಾ..? ಹೌದೆನ್ನಲೇ..? ಇಲ್ಲವೆನ್ನಲೇ..? ಎರಡನ್ನೂ ಪೂರ್ತಿಯಾಗಿ ಹೇಳುವುದು ಕಷ್ಟ ಓದಿ ನೋಡಿ.


ವಿಭಿನ್ನ ಕಥೆಗಳ ಓದು ಇಷ್ಟವಾಯಿತು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ