ಭಾನುವಾರ, ಜೂನ್ 7, 2026

ಆರ್ಯಾವರ್ತ (ಪುಸ್ತಕ ಯಾನ - 455)


ಪುಸ್ತಕದ ಶೀರ್ಷಿಕೆ : ಆರ್ಯಾವರ್ತ

ಲೇಖಕರು : ಉಷಾ ನರಸಿಂಹನ್

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 360

ಬೆಲೆ : 450 ರೂ.


ಆರ್ಯಾವರ್ತ ಎಂಬುದು ಉತ್ತರ ಸೀಮೆಗಳನ್ನು ಒಳಗೊಂಡಿತ್ತು ಎಂಬ ಅರ್ಥವಿರುವಂತೆ ಶ್ರೇಷ್ಠರು ಓಡಾಡಿದ ಸ್ಥಳ ಎಂಬ ಅರ್ಥವೂ ಇದೆ. ಬುದ್ಧನ ಹಾದಿಯಲ್ಲಿ ನಡೆಯಲು ಹೊರಟ ಹರ್ಷವರ್ಧನನ ಕಥೆ ಇಲ್ಲಿದೆ. ಚೀನಿ ಪ್ರವಾಸಿಗ ಹ್ಯೂಯಾನ್ ತ್ಸಾಂಗ್ ಬಂದ ಸಂದರ್ಭದಲ್ಲಿ ಆತ ನೋಡಿದ ಹರ್ಷವರ್ಧನನ ಆಳ್ವಿಕೆ ಹಾಗೂ ಆತನ ವ್ಯಕ್ತಿತ್ವವೂ ಇಲ್ಲಿದೆ. ಈ ಕಾದಂಬರಿಯಲ್ಲಿ ಐತಿಹಾಸಿಕ, ಧಾರ್ಮಿಕ, ರಾಜಕೀಯದ ಎಲ್ಲಾ ನೋಟಗಳು ಕಾಣುತ್ತವೆ. ಹರ್ಷವರ್ಧನನನ್ನು ಕುರಿತ ಮೊದಲ ಕಾದಂಬರಿ ಎಂಬ ವಿಶೇಷತೆಯು ಇದರದ್ದು.


ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೆ, ಹಿಮಾಚಲದಿಂದ, ವಿಂಧ್ಯಾಚಲದವರೆಗಿನ ಭೂಪ್ರದೇಶ, ಗೌಡ, ಮಾಳವ, ಕಾಮರೂಪ, ಸಿಂಧೂ ದೇಶ, ಗುರ್ಜರ, ಗಾಂಧಾರ, ಕಳಿಂಗ, ಕಶ್ಮೀರ ಈ ಎಲ್ಲವನ್ನೂ ಒಳಗೊಂಡ ವಿಶಾಲ ಭೂಪ್ರದೇಶವೇ ಇಲ್ಲಿನ ಆರ್ಯಾವರ್ತ. 'ಸಕಲೋತ್ತರ ಪಥನಾಥ' ಎಂದು ಕರೆಸಿಕೊಂಡ ಹರ್ಷವರ್ಧನನ ಬದುಕಿನ ಚರಿತೆ ಅವನ ಆಸ್ಥಾನ ಕವಿ ಬಾಣಭಟ್ಟನ 'ಹರ್ಷ ಚರಿತ'ದಲ್ಲಿರುವುದೂ.. ಹ್ಯೂಯನ್ ತ್ಸಾಂಗ್ ನ ಆತ್ಮಕಥೆ 'ಸಿಯುಕಿ'ಯಲ್ಲಿಯೂ ಅದು ತಾಳೆಯಾಗುವುದೂ ವಿಶೇಷ. ಪಾಲಿ ಭಾಷೆಯ ನಾಲ್ಕು ಶೀರ್ಷಿಕೆಗಳಿಂದ ಕಾದಂಬರಿಯ ನಾಲ್ಕು ಘಟ್ಟಗಳನ್ನು ಕಾಣಬಹುದು. 


ಸಂವಟ್ಟ (ಲೋಕದವಿಲಯ) :

ಪ್ರಭಾಕರವರ್ಧನ ಮತ್ತು ಯಶೋಮತಿ ದಂಪತಿಗಳ ಮೂವರು ಮಕ್ಕಳೇ ರಾಜ್ಯವರ್ಧನ, ಹರ್ಷವರ್ಧನ ಹಾಗೂ ರಾಜ್ಯಶ್ರೀ. ಇವರು ಪುಷ್ಯಭೂತಿ ವಂಶಸ್ಥರು. ಮಾಳವದಿಂದ ಯಶೋಮತಿ ವಿವಾಹವಾಗಿ ಬಂದಿದ್ದಾಗ ಆಕೆಯ ಗೆಳತಿಯಾಗಿದ್ದ ಗಿರಿಜೆಯೂ ಸ್ಥಾನೇಶ್ವರಕ್ಕೆ ಸೊಸೆಯಾಗಿ ಬಂದು.. ಅವರ ಸ್ನೇಹ ಇಲ್ಲಿಯೂ ಮುಂದುವರೆದಿತ್ತು. ಅಂತಸ್ತುಗಳು ಕಡಿಮೆಯಿದ್ದರೂ ಅರಮನೆಯ ಪೂಜೆ, ಪುನಸ್ಕಾರಗಳಲ್ಲಿ ಅವರಿಗೆ ಯಾವತ್ತಿಗೂ ಹಿರಿಯ ಸ್ಥಾನವೇ. ರಾಜ್ಯಶ್ರೀಯ ಪ್ರೀತಿಯ ಗಿರಿಜತ್ತೆ ಆಪ್ತವಾಗುತ್ತಾಳೆ. ಆಂತೆಯೇ ಗಿರಿಜತ್ತೆಯ ಮಗ ವಿಶ್ವಂಬರ ಹಾಗೂ ರಾಜ್ಯಶ್ರೀಯ ನವಿರಾದ ಭಾವಗಳು ಕಾಣುತ್ತವೆ. ಈಗ ಕನ್ಯಾಕುಬ್ಜದ ಅರಸು ಗೃಹವರ್ಮನ ಮನದನ್ನೆಯಾಗಿ ಹೋಗುತ್ತಿದ್ದಳು ರಾಜ್ಯಶ್ರೀ. ವಿವಾಹದ ಕುರಿತು ಅವಳಿಗಿದ್ದ ಭಯ, ಅದನ್ನು ಹೋಗಲಾಡಿಸುವ ಪರಿ ಎರಡು ಕುಟುಂಬಗಳ ಹಿನ್ನೆಲೆ, ನಿರ್ವಿಘ್ನವಾಗಿ ಸಾಗುವ ವಿವಾಹ ಎಲ್ಲವೂ ಮಧುರವಾದ ಓದು. ಈ ಶುಭ ಸಂದರ್ಭದಲ್ಲಿಯೂ ನೋವಿನ ಮುಳ್ಳಿತ್ತು. 


ಮಾಳವದಿಂದ ಯಾರೂ ಬರದಿದ್ದು ಕಾಡುತ್ತಲೇ ಇತ್ತು. ಅದಕ್ಕೆ ಕಾರಣವೂ ಇತ್ತು. ಮಾಳಗದ ಯುವರಾಜ ಭಂಡಿ ಚಿಕ್ಕ ಹುಡುಗನಾಗಿದ್ದಾಗಲೇ ಸ್ಥಾನೇಶ್ವರದಲ್ಲಿ ರಾಜಕೀಯ ಬಂಧಿಯಾಗಿದ್ದ. ಆದರೆ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಬೆಳೆಸಿದ್ದರು ವರ್ಧನ ದಂಪತಿಗಳು. ಈಗ ಆತ ಅಮಾತ್ಯನೂ ಹೌದು. ಯಶೋಮತಿಯ ತವರು ಮಾಳವಕ್ಕೂ ಪ್ರಭಾಕರವರ್ಧನನಿಗೂ ಉಂಟಾದ ವೈಮನಸ್ಯಕ್ಕೆ ಕಾರಣವೇನು? ಓದಿ ನೋಡಿ.


ಪುಷ್ಯಭೂತಿ ಹಾಗೂ ಮೌಖಾರಿ ವಂಶದ ನಂಟು ಬೆಳೆದಿದ್ದಕ್ಕೆ ರಾಜಕೀಯ ಹಿನ್ನೆಲೆಯೂ ಇತ್ತು. ಹಾಗಿಲ್ಲದಿದ್ದರೆ ರಾಜಶ್ರೀ ಹಾಗೂ ಭಂಡಿಯ ವಿವಾಹವಾಗುತ್ತಿತ್ತೇ..? ಹಾಗಿದ್ದರೆ ಆ ಹಿನ್ನೆಲೆಯೇನು..? ಅದನ್ನು ಪ್ರಭಾಕರವರ್ಧನ ಭಂಡಿಯೊಡನೆ ಚರ್ಚಿಸಿದ ರೀತಿ ಹೇಗಿತ್ತು..?

ಪ್ರಭಾಕರವರ್ಧನನ ಸಾವು, ಯಶೋಮತಿ ಸತಿಯಾಗುವುದರ ನಂತರದಲ್ಲಿಯೇ ರಾಜ್ಯವರ್ಧನ ಹಾಗೂ ಗೃಹವರ್ಮನ ಅನಿರೀಕ್ಷಿತ ಸಾವುಗಳು, ರಾಜ್ಯಶ್ರೀಯ ಬದುಕಿನಲ್ಲಿ ಕಡುಕಷ್ಟದ ದಿನಗಳನ್ನು ತರುತ್ತವೆ. ಭಂಡಿ ತನ್ನ ಅತ್ತೆಗೆ ಕೊಟ್ಟ ಮಾತಿನಂತೆ ನಡೆಯುತ್ತಾನಾ..? ಎಳೆಯ ಹರ್ಷವರ್ಧನ ಎಲ್ಲ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ..? ಸಾಯಲು ಹೊರಟಿದ್ದ ರಾಜ್ಯಶ್ರೀಯನ್ನು ತಡೆದ ದಿವಾಕರಮಿತ್ರರ ಹಿರಿಮೆಯನ್ನು ಇಲ್ಲಿ ಕಾಣಬಹುದು.


ಪಸಾರೋ (ಪ್ರಸರಣ, ವಿಸ್ತಾರ) :

ಪತಿಯಿಲ್ಲದ ರಾಜ್ಯಶ್ರೀ ಕನ್ಯಾಕುಬ್ಜದ ಅರಮನೆಗೆ ಸೇರಿದಾಗ ವಂಶ ಮುನ್ನಡೆಯವ ಸಾಧ್ಯತೆಯೂ ಇಲ್ಲ ಎನ್ನುವುದು ಮನದಟ್ಟಾಗಿತ್ತು. ಗೃಹವರ್ಮನನ್ನು ಕೊಂದ ದೇವಗುಪ್ತನನ್ನು ರಾಜ್ಯವರ್ಧನ ನರಕಕ್ಕೆ ಕಳುಹಿಸಿದ್ದನಾದರೂ.. ಗೌಡ ದೇಶದ ಶಶಾಂಕನ ಆಟ ಇನ್ನೂ ನಿಂತಿರಲಿಲ್ಲ. ಮುೌಖಾರಿ ವಂಶಕ್ಕೆ ರಾಜ್ಯಶ್ರೀ ರಾಣಿಯಾಗಿ ಪಟ್ಟವೇರುತ್ತಾಳೆ. ಹರ್ಷವರ್ಧನ ಎರಡೂ ಕಡೆ ನಿಭಾಯಿಸುತ್ತಾ.. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣ ಎಂಬಂತೆ ಬದುಕುತ್ತಾರೆ. ಸಾಮ್ರಾಜ್ಯದ ಹೊರೆಯನ್ನು ಹೊತ್ತ ಹರ್ಷನಿಗೆ ಭಂಡಿ ಕಾವಲಾಗುತ್ತಾನೆ.


ಧವಳ ಭವನದಲ್ಲಿ ಬದುಕದ ಅಲಕೆಯ ಮಗಳು ಕುಮುದಿನಿ ಹರ್ಷ ನ ಮತ್ತೊಬ್ಬ ತಂಗಿ. ಭಂಡಿಗೆ ಆಕೆಯ ವಿವಾಹದ ಪ್ರಸ್ತಾಪ ಮಾಡಿದಾಗ ನಿರಾಕರಿಸುವ ಭಂಡಿ ಜೀವನಪೂರ್ತಿ ಅವಿವಾಹಿತನಾಗಿಯೇ ಉಳಿಯುವುದು ವಿಪರ್ಯಾಸ.


ಕುಮುದಿನಿಯ ವಿವಾಹ, ದಿವಾಕರಮಿತ್ರರು ಹರ್ಷನ ಅರಮನೆಗೆ ಆಗಮಿಸುವುದು, ಅವರ ಶಿಷ್ಯ ಮೈತ್ರಕ ತಾವು ಹೊರಟ ನಳಂದ ವಿಹಾರದ ಕುರಿತಾಗಿ ಹೇಳುವುದು, ಜ್ಞಾನ ಪ್ರಸರಣ ಕೇಂದ್ರವಾದ ನಳಂದದ ಹಿರಿಮೆ ಅಲ್ಲಿನ ಕುಲಪತಿಗಳಾದ ಶಿಲಾಭದ್ರರು (ಈಶಾನ್ಯದ ಸಮತಾತದ ಅವರು ಸುಪುತ್ರ ಹಾಗೂ ಬ್ರಾಹ್ಮಣರು ಈಗ ಬುದ್ಧ ಧಮ್ಮವನ್ನು ಒಪ್ಪಿಕೊಂಡು ಬಿಕ್ಕುವಾಗಿ ದೀಕ್ಷೆ ಪಡೆದಿದ್ದವರು), ವಿದ್ಯಾರ್ಥಿಗಳಿಂದ ಒಂದು ಚಿಕ್ಕಾಸೂ ಪಡೆಯದೆ ನಿರ್ವಂಚನೆಯಿಂದ ವಿದ್ಯೆ ಕಲಿಸುತ್ತಿರುವ ನಳಂದ ಹಾಗೂ ಅಲ್ಲಿಗೆ ದೇಣಿಗೆ ಕೊಟ್ಟ ದೊರೆಗಳು, ಧರ್ಮಗಂಜ ಎನ್ನುವ ಸುಸಜ್ಜಿತ ಸಂಕೀರ್ಣ ಗ್ರಂಥಾಲಯ ಇವೆಲ್ಲವನ್ನೂ ಕಾಣಬಹುದು.


 ಹರ್ಷ ಅಲ್ಲಿಗೆ ಹೋಗಿ ಬಂದ ನಂತರ ರಾಜ್ಯಶ್ರೀ ಅಲ್ಲಿಗೆ ಹೋಗಿ ಬರುತ್ತಾಳೆ. ವಿಶ್ವಂಬರನಿಗೆ ಆತ ಆಶಿಸಿದಂತೆ ನಳಂದದಲ್ಲಿ ಚಿಕಿತ್ಸಾ ವಿದ್ಯೆ ಕಲಿಯಲು ಅವಕಾಶ ಸಿಗುತ್ತದ..? ಅಲ್ಲಿನ ದ್ವಾರ ಪಂಡಿತರು ಕೇಳುವ ಬುದ್ಧ ಸೂತ್ರಗಳು, ವಿನಯ ಪಿಟಕಗಳ ದಮ್ಮದ ಕುರಿತ ಪ್ರಶ್ನೆಗಳು ಇವೆಲ್ಲವನ್ನು ಗೆದ್ದು ಮುನ್ನಡೆದರೆ ಮುಂದೆ ನಡೆಯುವ ಸಂದರ್ಶನ ಎಲ್ಲವೂ ಹೇಗಿರುತ್ತದೆ..?


ಮುಂದೆ ಹರ್ಷವರ್ಧನ ಹಾಗೂ ದುರ್ಗಾವತಿಯರ ವಿವಾಹ, ಪ್ರಾಗ್ಯವರ್ಧನ ಹಾಗೂ ಕಲ್ಯಾಣವರ್ಧನ, ಯಶೋಮತಿಯರ ಜನನ.. ರಾಜ್ಯಶ್ರೀ ತನ್ನ ಮಕ್ಕಳಂತೆಯೇ ಭಾವಿಸುವ ಪರಿ..

 

ಆ ವಂಶದಲ್ಲಿ ಕುಮುದಿನಿ ಇದ್ದಂತೆ ಈ ವಂಶದಲ್ಲಿ ರಾಜಶ್ರೀಯ ಮಾವ ಆವಂತಿವರ್ಮರ ಮತ್ತೊಬ್ಬ ಪುತ್ರನೂ ಇರುತ್ತಾನೆ. ಆದರೆ, ಎರಡೂ ವಂಶಗಳು ಅವರನ್ನು ನಡೆಸಿಕೊಂಡ ರೀತಿ ಮಾತ್ರ ವಿಭಿನ್ನ.. ಹರ್ಷನ ಆಡಳಿತಕ್ಕೆ ಇಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ..? ಮೌಖಾರಿ ವಂಶದ ಮಹಾಮಾತ್ಯ ಅರ್ಜುನಾಶ್ವನ ಪ್ರತಿಕ್ರಿಯೆ ಹೇಗಿರುತ್ತದೆ..?


ಹರ್ಷನ ದಂಡಯಾತ್ರೆ, ರಾಜ್ಯವನ್ನು ವಿಸ್ತರಿಸುವ ಹಾಗೂ ಸಾಮಂತರನ್ನಾಗಿಸಿಕೊಳ್ಳುವ, ಸೈನ್ಯವನ್ನು ಬಲಪಡಿಸಿಕೊಳ್ಳುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. 

ಗಜಪಡೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಡಿನ ಆನೆಯನ್ನು ಪಳಗಿಸುವ ಹಾಗೂ ಶಬರರೇ ಕಾವಾಡಿಗಳಾಗಿ ಕನ್ಯಾಕುಬ್ಜಕ್ಕೆ ಬಂದು ಮಾವುತರಾಗುವ ಕಾರ್ಯಕ್ಕೆ ದಿವಾಕರಮಿತ್ರರು ಅಸಮಾಧಾನ ವ್ಯಕ್ತಪಡಿಸಿದ್ದೇಕೆ..? ಇಂದಿನ ದಿನಗಳಿಗೂ ಹೊಂದುವ ಸಮಸ್ಯೆ ಇದು. ಇದಕ್ಕೆ ಸಿಕ್ಕ ಪರಿಹಾರವೇನು..?


ವಿಶ್ವನ ನಳಂದದ ಪ್ರವೇಶ, ಅಲ್ಲಿನ ರೀತಿ-ನೀತಿಗಳು, ವಿದ್ಯೆ ಕಲಿಸುವ ಶಿಸ್ತು ಜೊತೆಗೆ ಬೌದ್ಧ ಧಮ್ಮದ ಹಲವಾರು ವಿಚಾರಗಳಿವೆ. ವಿಶ್ವ ರಾಜ್ಯಶ್ರೀಯನ್ನು ವಿವಾಹವಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಕ್ಕೆ ಅಡ್ಡಿಯಾದವರಾರು..?

ಗಿರಿಜೆಯ ಒತ್ತಾಯದ ಮೇರೆಗೆ ವಿಶ್ವ ಮದುವೆಯಾದ ಕಾತ್ಯಾಯಿನಿಯ ಸಾವಿನ ನಂತರ ವಿಶ್ವನ ಪರಿಸ್ಥಿತಿಯೇನಾಯಿತು ..?


ವಿರಾಗೋ (ಆಸಕ್ತಿರಹಿತ ಸ್ಥಿತಿ) :

ವಿಶ್ವನಿಗೆ ಅರಮನೆಯ ಬಾಗಿಲು ಮುಚ್ಚಿದ್ದು, ಪತ್ನಿಯ ಸಾವು ಆತನನ್ನು ಮಾತ್ರವಲ್ಲ.. ರಾಜ್ಯಶ್ರೀ, ಗಿರಿಜೆಯರನ್ನೂ ಬಾಧಿಸಿತು. ರಾಜ್ಯಶ್ರೀ ತನ್ನ ಸಖಿ ರಾಧಿಕೆಯೊಂದಿಗೆ ಬಿಕ್ಕುಣಿಯರಿದ್ದ ಸಂಘಾರಾಮಕ್ಕೆ ಹೋದಾಗ ಅಲ್ಲಿನ ರೀತಿ-ನೀತಿಗಳು, ಶಾಂತಿದೇವಿ ಎಂಬ ಅಧ್ಯಕ್ಷೆ, ತನ್ನೆಲ್ಲ ದುಗುಡಗಳನ್ನು ಅವರೊಡನೆ ಹಂಚಿಕೊಂಡಾಗ ಆಕೆಗೆ ಸಿಕ್ಕ ಸಮಾಧಾನದ ಮಾರ್ಗವೇನು..? 


ವಲ್ಲಭಿಯ ದೊರೆ ಧ್ರುವಸೇನನೊಂದಿಗೆ ಯಶೋಮತಿಯ ವಿವಾಹದಲ್ಲಿ ಬಾಣಭಟ್ಟನ ಪಾತ್ರವೇನಿತ್ತು..? ಹೆಣ್ಣುಮಗಳೊಬ್ಬಳ ಭವಿಷ್ಯದ ಹಾದಿಯನ್ನು ಎಷ್ಟೆಲ್ಲಾ ಎಚ್ಚರಿಕೆಯಿಂದ ರೂಪಿಸುತ್ತಾರೆ ಎನ್ನುವ ನಿದರ್ಶನವಿದು.


ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ಆಗಮನ ಹಾಗೂ ಆತನ ಹಿರಿಮೆಗಳಿವೆ.


ದಕ್ಷಿಣ ಪಥೇಶ್ವರ ಎಂದು ಕರೆಸಿಕೊಂಡಿದ್ದ ಇಮ್ಮಡಿ ಪುಲಕೇಶಿಯ ಮೇಲೆ ಯುದ್ಧಕ್ಕೆ ಹೋಗುವ ಹರ್ಷನ ನಿರ್ಧಾರಕ್ಕೆ ಕಾರಣವೇನು..? ಅಳಿಯ ಧ್ರುವಸೇನ ಯುದ್ಧದ ಸಹಾಯದಲ್ಲಿ ನಿರಾಕರಿಸಿದ್ದು ಮಾತ್ರವಲ್ಲದೆ, ತಟಸ್ಥವಾಗಿ ಉಳಿಯಲು ನಿರಾಕರಿಸಿದ್ದು ಸಂಬಂಧಕ್ಕೆ ಏನಾದರೂ ಚ್ಯುತಿ ತಂದಿತೇ..?

ಹರ್ಷನ ಒಂದು ಸೋಲು ಅವನನ್ನು ಯಾವ ಮಟ್ಟಕ್ಕೆ ಕುಗ್ಗಿಸಿತು..? ಎಲ್ಲದರ ಹಿಂದಿನ ಚಿತಾವಣೆಯ ಸುಳಿವು ಭಂಡಿಗೆ ಸಿಗದೆ ಹೋದದ್ದು ವಿಪರ್ಯಾಸ.


ತ್ಸಾಂಗ್ ಹರ್ಷ ನ ಬಗ್ಗೆ ತಿಳಿದುಕೊಳ್ಳುವುದು, ಬುದ್ಧನ ಕುರಿತು ಬುದ್ಧ ಸೂತ್ರಗಳ ಕುರಿತು ಆತನ ಆಸಕ್ತಿ, ನಳಂದದಲ್ಲಿ ಆತನ ದಿನಗಳು, ಆತನಿಗೆ ಸಹಾಯಕನಾಗುವ ರವಿತೇಜ, ಶಿಲಾಭದ್ರರ ಜೊತೆಯಲ್ಲಿ ಆಸಕ್ತಿಯ ಮಾತುಕತೆಗಳು, ತ್ಸಾಂಗ್ ಬುದ್ಧನ ಸೂತ್ರಗಳನ್ನು.. ಭಾರತೀಯ ವಿದ್ಯೆಯ ಗ್ರಂಥಗಳನ್ನು ತನ್ನ ದೇಶಕ್ಕೆ ಒಯ್ಯಲು ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ಇಲ್ಲಿವೆ


ನಿಬ್ಬಾಣ (ಜನನ-ಮರಣ ಚಕ್ರದ ಅಂತ್ಯ) :

ಹರ್ಷ ದಿವಾಕರಮಿತ್ರರ ಬಳಿ ಬಂದಾಗ ಅಷ್ಟರಲ್ಲಾಗಲೇ ಅವರಿಗೆ ಆತನ ಸೋಲಿನ ಸುದ್ದಿ ತಿಳಿದಿತ್ತು. ಹರ್ಷನ ಸೋಲಿನ ಕುಗ್ಗುವಿಕೆಗೆ ಅವರು ಕೊಟ್ಟ ಕಾರಣಗಳೇನು..? ತಥಾಗತನಂತೆ ಹರ್ಷನೂ ರಾಜ್ಯ-ಕೋಶವನ್ನು ತೊರೆದು ಮುನ್ನಡೆಯಲು ಹೊರಟಾಗ ಅದರಿಂದ ಉಂಟಾಗುವ ಅನರ್ಥಗಳನ್ನು ಹೇಳಿ ತಡೆದದ್ದೇಕೆ..? ಹಾಗಾದರೆ, ಬುದ್ಧ ಮಾಡಿದ್ದು ಸರಿಯೇ..?


ಹರ್ಷನ ಆಸ್ಥಾನವನ್ನು ನೋಡುವ ತ್ಸಾಂಗ್ ಮುಂದೆ ಹರ್ಷನ ವ್ಯಕ್ತಿತ್ವವನ್ನು ಅರಿಯುತ್ತಾನೆ ಜೊತೆಗೆ ಸರ್ವ ಧರ್ಮ ಸಮ್ಮೇಳನದಲ್ಲಿ ಮಹಾಯಾನ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಂದರ್ಭದ ಭವ್ಯ ಕಾರ್ಯಕ್ರಮವೂ ಇಲ್ಲಿದೆ. ಆದರೆ, ಇಲ್ಲಿ ನಡೆದ ಆಘಾತ ಹರ್ಷನ ವಿರುದ್ಧ ನಡೆದ ಷಡ್ಯಂತ್ರಗಳನ್ನು ತೆರೆದಿಡುತ್ತದೆ. ನಿಧಾನ ವಿಷಪ್ರಾಶನದಿಂದ ಜರ್ಜರಿತನಾಗಿದ್ದ ಅವನನ್ನು ಉಳಿಸಲು ಮತ್ತೆ ವಿಶ್ವ ಬರುತ್ತಾನೆ. ಆತನಿಗೆ ವಿಷಪ್ರಾಶನ ಮಾಡಿಸಿದ್ದು ಯಾರು..? ತಮ್ಮ ಧರ್ಮಕ್ಕಿಂತಲೂ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಆತನಿಗೆ ಮುಳುವಾಯಿತೇ..?


ವಿಶ್ವನನ್ನು ಕಂಡು ರಾಜ್ಯಶ್ರೀಯಲ್ಲಿ ಉಂಟಾದ ಭಾವಗಳು ಇನ್ನೂ ಮೋಹವನ್ನು ಮೀರದ ಅವಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಶಾಂತಿದೇವಿಯ ಭೇಟಿಯ ಜೊತೆಗೆ ಥೇರಿಗಾಥಾದ ಕೆಲವು ಪದ್ಯಗಳು, ಬುದ್ಧನ ಕಾಲದಲ್ಲಿ ಸಂಸಾರವನ್ನು ತೊರೆದು ಬಂದ ಹೆಣ್ಣು ಮಕ್ಕಳ ಪರಿಸ್ಥಿತಿ, ಅವರ ರಕ್ಷಣೆಗಾಗಿ ಬುದ್ಧ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಜೀವನಶೈಲಿ ಎಲ್ಲವನ್ನು ಕಾಣಬಹುದು.


ಹರ್ಷನ ಕುಲಪುತ್ರರಿಬ್ಬರ ಮರಣ, ತ್ಸಾಂಗ್ ಮತ್ತೆ ತನ್ನ ದೇಶಕ್ಕೆ ಮರಳುವುದು ಎಲ್ಲದರೊಂದಿಗೆ ಕಾದಂಬರಿ ಮುಕ್ತಾಯದ ಹಂತಕ್ಕೆ ಬರುತ್ತದೆ. ಹರ್ಷನ ಕೊನೆ ಹೇಗಾಗುತ್ತದೆ..? ಅದಕ್ಕೆ ಕಾರಣವಾದವರು ಯಾರು..?

ಶಾಂತಿಯನ್ನು ಅರಸಿ ಹೊರಟ ಹರ್ಷನ ಆ ಅಂತ್ಯಕ್ಕೆ ರಾಜ್ಯಶ್ರೀ ಪರಿತಪಿಸಿ ಎಲ್ಲಿಗೆ ಹೋಗುತ್ತಾಳೆ..! ಭಂಡಿಗೂ ಸಿಗದ ಅವಳು ವಿಶ್ವನಿಗೆ ಸಿಕ್ಕದ್ದು ಹೇಗೆ..?

ವಿಶ್ವ ಹರ್ಷನಿಗೆ ರಾಜ್ಯಶ್ರೀಯ ಕುರಿತ ಕೊಟ್ಟ ಮಾತೇನು.. ಅದನ್ನು ಆತ ನೆರವೇರಿಸುತ್ತಾನಾ..?


ಬುದ್ಧನೆಂದರೆ ಅಪಾರ ಭಕ್ತಿಯಿದ್ದರೂ.. ಧಮ್ಮವನ್ನು ಅದರ ಮೂಲಸೆಲೆಯಲ್ಲಿ ಅನುಸರಿಸಿ ಆಚರಿಸುತ್ತಿದ್ದರೂ ವಿಶ್ವನಿಗೆ ಭಿಕ್ಕುವಾಗುವ ಮನಸ್ಸಿಲ್ಲದ್ದು ಏಕೆ..? ಬುದ್ಧನ ದಯೆ, ಕರುಣೆ, ಧರ್ಮಗಳು ಜೀವಪರ ಎಂದು ಒಪ್ಪಿಕೊಂಡು ಯಾವುದೇ ಪಂಥಕ್ಕೆ ಸೇರದೆಯೂ ಮಾನವ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವ .. ಹರ್ಷ ಹಾಗೂ ರಾಜಶ್ರೀಯಿಂದ ದೂರವಾಗಿ ನೆಲೆಸಿದ್ದು ಎಲ್ಲಿ..?


ಚಿಕ್ಕವಯಸ್ಸಿನಲ್ಲಿಯೇ, ಹೆಚ್ಚಿನ ಮಾರ್ಗದರ್ಶನ ವಿಲ್ಲದೆ ಸಕಲೋತ್ತರ ಪಥನಾಥನಾದ ಹರ್ಷನ ಧೈರ್ಯ, ಸಾಹಸ, ತಂಗಿಗಾಗಿ ತನ್ನ ಬದುಕನ್ನು ಮುಡುಪಾಗಿಸಿಕೊಂಡು, ರಾಜ್ಯಕ್ಕಾಗಿ ಜೀವ ಸವೆಸಿದ ಹರ್ಷ ಮನದಲ್ಲುಳಿಯುತ್ತಾನೆ. ನಳಂದಕ್ಕೆ ಕೊಡುಗೈ ದಾನಿಯಾಗಿ, ಗ್ರಾಮಗಳ ಉಂಬಳಿ, ಸ್ತೂಪಗಳ ನಿರ್ಮಿತಿ, ದೇಣಿಗೆ ಕೊಟ್ಟವನು ನಡೆಸಿದ ಕನ್ಯಾಕುಬ್ಜದ ಗಂಗಾ ತಟಾಕದ ಸರ್ವಧರ್ಮ ಸಮ್ಮೇಳನ, ಕರ್ಣನಿಗೂ ಮಿಗಿಲಾಗಿ ಮಾಡುವ ದಾನ.. ಕೌಪೀನವನ್ನೊಂದುಳಿದು ಎಲ್ಲವನ್ನೂ ದಾನ ಮಾಡಿದ ಪರಿ, ಎಲ್ಲದರಾಚೆಗೂ ಆತನ ಅಂತ್ಯ ಕಾಡುತ್ತದೆ. ವಿರಾಗಿಯಾಗಿ ನಡೆಯಲು ಹೊರಟವನ ಹಾದಿಯನ್ನು ಆಗಲೇ ಒಪ್ಪಿದ್ದರೆ.. ಹರ್ಷ ಉಳಿಯುತ್ತಿದ್ದನೇನೋ..! ಸಾಮ್ರಾಜ್ಯದ ಪರಿಸ್ಥಿತಿಯೇನೂ ವಿಭಿನ್ನವಾಗುತ್ತಿರಲಿಲ್ಲ ಎನ್ನಿಸುತ್ತದೆ. ಹರ್ಷ ತನ್ನ ದುರಂತ ಅಂತ್ಯದಿಂದ ಮನದಲ್ಲುಳಿಯುತ್ತಾನೆ.


ಸುಕೋಮಲ ರಾಜಕುಮಾರಿಯಂತೆ ಕಾದಂಬರಿಯ ಆರಂಭದಲ್ಲಿ ಕಾಣುವ ರಾಜ್ಯಶ್ರೀ ಮುಂದೆ ಪಡುವ ಕಷ್ಟಗಳು ಒಂದೆರಡಲ್ಲ. ಸಾಮಾನ್ಯ ಮನುಷ್ಯಳಂತೆ ತನ್ನಿಷ್ಟದಂತೆ ಬದುಕಲಾಗದ ರಾಜಕುಮಾರಿಯಾಗಿ, ಬುದ್ಧಿವಂತೆಯಾದರೂ.. ದಿನೇ ದಿನೇ ಪ್ರೌಢಳಾಗಿ ಆಧ್ಯಾತ್ಮದತ್ತ ಹೆಚ್ಚು ವಾಲುತ್ತಾ ಸಾಗುವ ರಾಜ್ಯಶ್ರೀ ಇಲ್ಲಿ ಹರ್ಷನಿಗಿಂತಲೂ ಹೆಚ್ಚೇ ಕಾಡುತ್ತಾಳೆ. ತ್ಸಾಂಗನ ಪತ್ರವೂ ಇದನ್ನು ಪುಷ್ಟೀಕರಿಸುತ್ತದೆ.


ತನ್ನ ರಾಜ್ಯದಿಂದ ಕರೆತಂದು ಬಾಲ್ಯದಲ್ಲೇ ತಂದೆ-ತಾಯಿಯಿಂದ ದೂರ ಮಾಡಿದ ಮಾವನ ಮೇಲೆ, ರಾಜ್ಯಶ್ರೀಯನ್ನು ಪಡೆಯಲಾಗದ್ದಕ್ಕೆ ಸೇಡು ತೀರಿಸಿಕೊಳ್ಳಬಹುದಾದ ಎಲ್ಲಾ ಅವಕಾಶವಿದ್ದರೂ.. ತಾನೇ ಆಡಳಿತದ ಚುಕ್ಕಾಣಿ ಹಿಡಿಯಬಹುದಾದ ಸಾಮರ್ಥ್ಯ ಹಾಗೂ ಅವಕಾಶವಿದ್ದರೂ.. ಅದಾವುದನ್ನು ಮಾಡದೆ ಪರಿಸ್ಥಿತಿಯನ್ನು ಪ್ರೌಢವಾಗಿ, ಪ್ರಾಮಾಣಿಕವಾಗಿ ಅರ್ಥೈಸಿಕೊಂಡು ಅತ್ತೆಗೆ ಕೊಟ್ಟ ಮಾತಿನಂತೆ, ಜೊತೆಗೆ ಅವರನ್ನೇ ತಂದೆ-ತಾಯಿಯಂತೆ ಪೂಜಿಸುತ್ತಾ .. ತನ್ನ ತಂದೆಯ ಹೀನ ಕಾರ್ಯಕ್ಕೆ ಆತನಿಗೆ ಛೀಮಾರಿ ಹಾಕುವ ಭಂಡಿಯ ಧೈರ್ಯ,ಅಜೀವ ಬ್ರಹ್ಮಚಾರಿಯಾಗಿ ಉಳಿಯುವ ಆತನ ಬದುಕು ಹರ್ಷ ಹಾಗೂ ರಾಜಶ್ರೀಯಷ್ಟೇ ಉನ್ನತವಾಗಿ ನಿಲ್ಲುತ್ತದೆ. 


ಕಾದಂಬರಿ ಕೇವಲ ಐತಿಹಾಸಿಕ ಕಾರಣದಿಂದ ಮಾತ್ರವಲ್ಲದೆ.. ಕಥೆಯ ನಿರೂಪಣೆ, ವಿಶಾಲವಾದ ಹರವು, ಭಕ್ತಿ, ವೈರಾಗ್ಯ, ಇತಿಹಾಸ ಪುಟದಲ್ಲಿ ಬುದ್ಧನಲ್ಲಿದ್ದ ಪ್ರೇಮ, ರಾಜ್ಯವೊಂದರ ಚುಕ್ಕಾಣಿ ಹಿಡಿದವರ ಬದುಕಿನ ಒಳನೋಟಗಳು ಹೀಗೆ ಆರ್ಯಾವರ್ತದಂತೆಯೇ ವಿಶಾಲವಾದ ಓದು ಇಲ್ಲಿದೆ. ಒಮ್ಮೆ ಓದಲು ಶುರು ಮಾಡಿದರೆ ಕಾದಂಬರಿಯನ್ನು ಪೂರ್ತಿ ಮುಗಿಸುವವರೆಗೂ ಕೆಳಗಿಡುವುದು ಕಷ್ಟ. ಮುಗಿದ ನಂತರವೂ ಕಾಡುವ ಓದು ಇದು. 


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ