ಶನಿವಾರ, ಅಕ್ಟೋಬರ್ 24, 2026

ಅವಳು ಹಾಗೆಯೇ.. (ಅವಳ ಕವಿತೆಗಳು - 26)

 


ಹೌದು, ಅವಳು ಹಾಗೆಯೇ..

ಅವಳ ಕಾಲು ನೆಲದ ಮೇಲೆ ನಿಲ್ಲುವುದೇ ಕಡಿಮೆ

ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಾ

ತನಗೆ ತಾನೇ ಕೆಲಸಗಳನ್ನು ಹಚ್ಚಿಕೊಳ್ಳುತ್ತಾಳೆ


ಹೌದು, ಅವಳು ಹಾಗೆಯೇ..

ಎಲ್ಲರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾಳೆ

ಸದಾ ಪ್ರೇಮದ ಹೊದಿಕೆ ಹೊದ್ದು, ದ್ವೇಷ ಕಳಚಿಟ್ಟು

ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಬೆರೆಯುತ್ತಾಳೆ


ಹೌದು, ಅವಳು ಹಾಗೆಯೇ..

ತನ್ನನ್ನು ಬಂಧಿಸ ಹೊರಟಷ್ಟು ಸ್ವತಂತ್ರವಾಗುತ್ತಾಳೆ

ಬಂಧನದಲ್ಲಿ ಸಿಲುಕದೆ ಕರ್ತವ್ಯವನ್ನು ಪ್ರೀತಿಸುತ್ತಾ

ಅಂಕೆಗೆ ಸಿಗದೆ ಸ್ವತಂತ್ರವಾಗಿರುವುದನ್ನು ಕಲಿಸುತ್ತಾಳೆ


ಹೌದು, ಅವಳು ಹಾಗೆಯೇ..

ಪದಗಳಿಗೆ ನಿಲುಕದೇ ಸದಾ ಸತಾಯಿಸುತ್ತಾಳೆ

ಸದಾ ಜಾಗೃತವಾಗಿದ್ದು ನಮ್ಮನ್ನೂ ಜಾಗೃತಿಗೊಳಿಸುತ್ತಾ

ಸ್ಫೂರ್ತಿಯಾಗಿ ಹೆಜ್ಜೆ ಹೆಜ್ಜೆಗೂ ಕಾಯುತ್ತಿರುತ್ತಾಳೆ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ