ಶನಿವಾರ, ಅಕ್ಟೋಬರ್ 24, 2026

ಸುರಕ್ಷಾ


 "ಉಳ್ಳವರು ಶಿವಾಲಯವ ಕಟ್ಟುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಸವಯ್ಯ"


ಎನ್ನುವ ವಚನವನ್ನು ಶಾಲೆಯಲ್ಲಿ ಭೋಧಿಸುವಾಗ ಹೊರಗೆ ಏನೋ ಗಲಾಟೆ ಕೇಳಿಸುತ್ತಿತ್ತು. ಇದನ್ನು ಎಲ್ಲರ ಬಳಿಯೂ ಓದಿಸು ಎಂದು ಕ್ಲಾಸ್ ಲೀಡರ್ ಅಪ್ರಮೇಯನಿಗೆ ಹೇಳಿ ಹೊರಗೆ ಬಂದು ನೋಡಿದರೆ ಒಬ್ಬಳು ಹೆಂಗಸು ಜೋರು ಜೋರಾಗಿ ಗಲಾಟೆ ಮಾಡುತ್ತಿದ್ದಳು. "ನಾವು ಮಾಡೋದೂ ವೃತ್ತಿಯೇ ಅಲ್ವಾ ಮೇಡಂ.. ಅದಕ್ಕೆ ನನ್ನ ಮಗು ಶಾಲೆಯಲ್ಲಿ ಓದಬಾರದು ಅಂದ್ರೆ ಹೇಗೆ..?? ನೀವೇ ಹೇಳಿ. " ಎನ್ನುತ್ತಾ ಪ್ರಶ್ನಿಸುತ್ತಿದ್ದವಳ ಮಾತಲ್ಲಿಯೂ ನ್ಯಾಯವಿತ್ತು. ಅವಳು ಕೇಳುತ್ತಿದ್ದುದರಲ್ಲಿ ತಪ್ಪೇನೂ ಇರಲಿಲ್ಲ ಎನ್ನಿಸಿದರೂ.. ಅವಳ ಮಗು ಈ ಶಾಲೆಯಲ್ಲಿ ಓದುವುದು ಒಂದು ಸವಾಲೇ ಸರಿ ಎನ್ನಿಸಿತು. ಸುಶಿಕ್ಷಿತ ಮಹಿಳೆಯಂತೆ ಮಾತನಾಡುತ್ತಿದ್ದವಳ ಹಿನ್ನೆಲೆಯನ್ನು ಮೊದಲ ಬಾರಿಗೆ ನೋಡಿದವರು ಊಹಿಸುವಂತೆಯೇ ಇರಲಿಲ್ಲ. ಹಾಗಿತ್ತು ಅವಳ ನಡೆ-ನುಡಿ.


ಯಾಕೋ ಆಕೆಯ ವೃತ್ತಿಗಾಗಿ ಅವಳ ಮಗುವಿನ ಭವಿಷ್ಯವನ್ನು ಹಾಳು ಮಾಡುವುದರಲ್ಲಿ ಅರ್ಥವಿಲ್ಲ ಎನ್ನಿಸಿತು. ಇವತ್ತು ಈ ಕುರಿತು ಹೆಡ್ ಮೇಡಂ ಜೊತೆ ಒಮ್ಮೆ ಮಾತನಾಡಬೇಕು ಎಂದು ತೀರ್ಮಾನಿಸಿ ಅಲ್ಲಿಯೇ ಇದ್ದ ಆಯಾ ಜೊತೆಗೆ ಅವರನ್ನು ನಾಳೆ ಬೆಳಿಗ್ಗೆ ಬರಲು ಹೇಳಿ ಕಳುಹಿಸಿದೆ. ಆ ಶಾಲೆಯ ಕಾರ್ಯದರ್ಶಿಗಳ ಸೊಸೆಯಾಗಿ ಅಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಅವಳ ಮಗುವಿಗೊಂದು ನ್ಯಾಯಯುತ ಶಿಕ್ಷಣ ದೊರಕಿಸಿಕೊಡಬೇಕು ಎಂದು ಗಟ್ಟಿ ನಿರ್ಧಾರ ಮಾಡಿದೆ.


"ಅಲ್ಲ ಮೇಡಂ.. ನೀವು ಹೇಳುತ್ತಿದ್ದೀರ ಎಂದು ಆ ಮಗುವಿಗೆ ಶಾಲೆಯಲ್ಲಿ ಓದಲು ಅವಕಾಶ ಮಾಡಿಕೊಟ್ಟರೆ, ನಾಳೆ ಅಂತಹದ್ದೇ ಮಕ್ಕಳು ಬಂದರೆ ಏನು ಮಾಡುವುದು..?? " ಎಂದಾಗ "ಅಂತಹವರನ್ನು ಆ ಪರಿಸ್ಥಿತಿಗೆ ದೂಡಿದ್ದಕ್ಕೆ ನಾವೂ ಕಾರಣ ಆಗಬಾರದು. ಅಲ್ಲವಾ..?? " ಎಂದೆ. ಎಲ್ಲರಿಗೂ ನನ್ನ ನಿರ್ಧಾರ ಸರಿಯಾಗಿ ಕಂಡರೂ ಒಪ್ಪಿಕೊಳ್ಳಲು ಏನೋ ಅಡ್ಡಿ. ಕೊನೆಗೆ, ಮಗುವಿನ ತಾಯಿ ವೇಶ್ಯಾ ವೃತ್ತಿ ಬಿಟ್ಟು ಬೇರೆ ವೃತ್ತಿ ಆಯ್ದುಕೊಳ್ಳುವುದಾದರೆ ಆಕೆಯ ಮಗುವನ್ನು ಶಾಲೆಗೆ ಸೇರಿಸಿಕೊಳ್ಳಬಹುದು ಎಂದು ತೀರ್ಮಾನವಾಯಿತು. ಅದನ್ನು ಆಕೆಗೆ ಹೇಳುವ ಹೊಣೆ ನನ್ನ ಹೆಗಲೇರಿತು.


ಆಕೆಗೆ ಬುದ್ಧಿ ಮಾತು ಹೇಳಲು ಹೊರಟ ನನಗೆ ಅವಳ ಕತೆ ಕೇಳಿ ನಾಲಿಗೆಯೇ ಹೊರಳಲಿಲ್ಲ. ಆಕೆ ಚಿಕ್ಕ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೆ ಒಳಗಾದವಳು. ಸಂಪ್ರದಾಯಸ್ಥ ಕುಟುಂಬದಲ್ಲಿ ಹೆಣ್ಣಿನ ದೇಹ ಬಹಳ ಪವಿತ್ರ ಎಂಬ ಭಾವವಿತ್ತು. ಅಪವಿತ್ರವಾದವಳ ಭವಿಷ್ಯಕ್ಕಿಂತ ಮನೆತನದ ಮರ್ಯಾದೆ ಮುಖ್ಯವಾಗಿ ಅವಳನ್ನು ಮನೆಯಿಂದ ಹೊರ ಹಾಕಿದ್ದರು. ಕೊನೆಗೆ, ವಿಧಿ ಇಲ್ಲದೇ ಆ ಪಾಪಕೂಪದಲ್ಲಿ ನರಳಿದ್ದವಳು ತನ್ನ ಮಗುವಿಗೂ ಅದೇ ಪರಿಸ್ಥಿತಿ ಉಂಟಾಗಬಾರದು ಎಂದು ಶಾಲೆಗೆ ಸೇರಿಸುವ ತೀರ್ಮಾನಕ್ಕೆ ಬಂದಿದ್ದಳು.


ಕೊಂಚ ಸಾವರಿಸಿಕೊಂಡು ಅವಳೇ ಮುಂದುವರಿಸಿದ್ದಳು. ಯಾವುದಾದರೂ ಕೆಲಸ ಸಿಕ್ಕರೆ ನನಗೂ ಈ ಕೆಲಸದಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದಾಗ ನನಗೂ ಕೊಂಚ ಧೈರ್ಯ ಬಂದಿತ್ತು.


ನನ್ನ ಯೋಜನೆಗೆ ರೂಪು ನೀಡಲು ಇದೇ ಸರಿಯಾದ ಸಮಯ ಎಂದೆನಿಸಿತು.


ಮಕ್ಕಳಿಗೆ ತಮ್ಮ ದೇಹದ ಕುರಿತು.. ಅದರಲ್ಲೂ ಚಿಕ್ಕ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಕುರಿತು ತಿಳಿಸಿ ಹೇಳಲು ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಹೆಣ್ಣು ಮಕ್ಕಳನ್ನು ರಕ್ಷಿಸಲು ಹಾಗೂ ಧೈರ್ಯ ತುಂಬಲು ಒಂದು ಪ್ರಾಜೆಕ್ಟ್ ರೂಪಿಸಿದ್ದೆ. ಆದರೆ, ಆ 'ಸುರಕ್ಷಾ' ಯೋಜನೆಯನ್ನು ಜಾರಿಗೆ ತರಲು ಇದಕ್ಕಿಂತ ಒಳ್ಳೆಯ ಅಭ್ಯರ್ಥಿ ಇಲ್ಲವೆಂದು ಆಕೆಯನ್ನು ಆಯ್ಕೆ ಮಾಡಿ ಆಕೆಗೆ ಉದ್ಯೋಗ ನೀಡಿದೆ. ಇದಲ್ಲದೆ ಆಕೆಯ ಮಗುವಿಗೆ ಕೂಡಾ ಶಿಕ್ಷಣ ದೊರೆಯಿತು.


ಇದಲ್ಲದೇ.. ಮಕ್ಕಳಲ್ಲಿ ತಮ್ಮ ದೇಹ ಪ್ರಕೃತಿಯ ಕುರಿತು ಅರಿವು ಮೂಡಿಸುವ ಪ್ರಯತ್ನ ಅಂದಿನಿಂದಲೇ ಜಾರಿಗೆ ಬಂದಿತು.


ಮಕ್ಕಳು ತರಗತಿಯೊಳಗಿನಿಂದ ವಚನವನ್ನು ಹೇಳುತ್ತಿದ್ದದ್ದು ಕೇಳುತ್ತಲೇ ಇತ್ತು.


ಉಳ್ಳವರು ಶಿವಾಲಯವ ಕಟ್ಟುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಸವಯ್ಯ"


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ