ಶನಿವಾರ, ಅಕ್ಟೋಬರ್ 31, 2026

ಎಲ್ಲರೂ ನಮ್ಮವರೇ..


 ಎಲ್ಲರೂ ನಮ್ಮವರೇ

ವೇಷ ಕಳಚಿ ಬೀಳುವವರೆಗೂ

ಕಷ್ಟಗಳು ಎದುರಾಗುವವರೆಗೂ

ಬಣ್ಣಗಳು ಬದಲಾಗುವವರೆಗೂ

ಸುಳ್ಳುಗಳು ಮರೆಮಾಚಿರುವ ತನಕ

ಬದುಕು ದಿಕ್ಕು ಬದಲಿಸುವ ತನಕ


ಕಡೆ ಉಸಿರಿನ ತನಕವೂ

ವೇಷ ಕಳಚಿ ಬೀಳದಿರಲಿ

ಕಷ್ಟಗಳು ಮುಖಾಮುಖಿಯಾಗದಿರಲಿ

ಬಣ್ಣಗಳು ಬದಲಾಗದಿರಲಿ

ಸುಳ್ಳುಗಳೇ ಕಣ್ಮುಂದೆ ಇರಲಿ

ಬದುಕು ದಿಕ್ಕು ಬದಲಿಸದಿರಲಿ


ಎಲ್ಲರೂ ನಮ್ಮವರೇ ಆಗಿರಲಿ

ಬಣ್ಣದ ವೇಷಗಳಲ್ಲೇ ಸುಖವಿದ್ದರೆ

ನಮ್ಮವರೆಂದುಕೊಂಡೇ ಇರಿಯದಿರಲಿ

ಬೆನ್ನ ಹಿಂದೆ ದೂರದಿರಲಿ

ವಿಷದ ಮಾತಿಗೂ ಸಕ್ಕರೆಯ ಲೇಪವಿರಲಿ

ಹತ್ತಿರ ಬಾರದೇ ದೂರವೇ ಇರಲಿ


ಎಲ್ಲರೂ ನಮ್ಮವರು ಎಂದುಕೊಂಡೇ

ಆಯಸ್ಸು , ಆರೋಗ್ಯ ಬೇಡೋಣ

ಒಳ್ಳೆಯದಾಗಲೆಂದು ಹರಸೋಣ

ಆದರೆ ಸಹಾಯ ಮಾಡೋಣ

ಆಗದಿದ್ದಾಗ ಕಹಿ ಹಂಚದೆ ಸುಮ್ಮನಿರೋಣ

ನಮ್ಮವರ ಅಭ್ಯುದಯವನ್ನೇ ಬಯಸೋಣ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ