ಶನಿವಾರ, ಅಕ್ಟೋಬರ್ 31, 2026

ಸೇದಿ ಬಾವಿ (ಪುಸ್ತಕ ಯಾನ - 494)


ಪುಸ್ತಕದ ಶೀರ್ಷಿಕೆ : ಸೇದಿ ಬಾವಿ

ಲೇಖಕರು : ಗಂಗಾದೇವಿ ಚಕ್ರಸಾಲಿ

ಪ್ರಕಾಶಕರು : ಮಿಂಚುಳ್ಳಿ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 110

ಬೆಲೆ : 150 ರೂ.


ಶಿಕ್ಷಕಿಯಾಗಿರುವ ಗಂಗಾದೇವಿ ಚಕ್ರಸಾಲಿಯವರ ಮೊದಲ ಕಥಾ ಸಂಕಲನ ಹಾಗೂ ಎರಡನೆಯ ಪುಸ್ತಕ ಸೇದಿಬಾವಿ. ಇಲ್ಲಿನ ಹಲವು ಕಥೆಗಳು ಮಿಂಚುಳ್ಳಿ, ಕರ್ಮವೀರ, ಅಕ್ಷರ ಸಂಗಾತ ಕುಂದಾನಗರಿ ಪತ್ರಿಕೆಗಳಲ್ಲಿ ಪ್ರಕಟಿತ. ಬದುಕಿನ ವೈವಿಧ್ಯಮಯ ಘಟನೆಗಳನ್ನು ಕಟ್ಟಿಕೊಡುವ 12 ಚೆಂದದ ಕಥೆಗಳಿವೆ ಇಲ್ಲಿ.


ಅರುಂಧತಿ : ಇಂದಿನ ದಿನಗಳಲ್ಲಿ ಅಹಂ ಇರುವ ಸಂಬಂಧಗಳು ಒಡೆದು ಹೋಗುವ, ನಂತರ ಪಶ್ಚಾತ್ತಾಪ ಪಟ್ಟರೂ ಮೊದಲಿನ ಬಿಸುಪು ಬರದ ಸಂಬಂಧಗಳು ನೆನಪಾದವು. ಅರುಂಧತಿ ಹಾಗೂ ಅಜಯ್ ಪ್ರೀತಿಸಿ ಮದುವೆಯಾದವರು. ಕುಟುಂಬದವರ ನೆರವಿಲ್ಲದೆ ಬದುಕು ಕಟ್ಟಿಕೊಳ್ಳಲು ಹೊರಟವರು. ಮುಂದೆ ಮಗುವಾದ ನಂತರ ದಾಂಪತ್ಯದಲ್ಲಿ ಬಿರುಕು ಮೂಡಿಸಿಕೊಂಡು ಬೇರೆಯಾಗುತ್ತಾರೆ. ಮಹತ್ವಕಾಂಕ್ಷಿಯಾಗಿ ಅರುಂಧತಿ ಗಂಡ ಹಾಗೂ ಪುಟ್ಟ ಮಗಳನ್ನು ಬಿಟ್ಟು ಅಮೆರಿಕಕ್ಕೆ ಉದ್ಯೋಗಕ್ಕೆಂದು ಹೋಗಿ ಕೆಲ ವರ್ಷಗಳ ನಂತರ ಅಲ್ಲಿಂದ ಪರಿತಪಿಸಿ ಮಗಳಿಗಾಗಿ ಬರುವ ಚಿತ್ರಣ ಇಲ್ಲಿದೆ. ರೈಲಿನಲ್ಲಿ ತನ್ನ ಜೊತೆಗಿದ್ದ ಅಜ್ಜಿಯನ್ನು ಮಾತನಾಡಿಸುತ್ತಲೇ ಗತ ಬದುಕನ್ನು ನೆನಪಿಸಿಕೊಂಡವಳ ಬದುಕು ಮುಂದೆ ಯಾವ ತಿರುವ ಪಡೆದುಕೊಂಡಿತು ಓದಿ ನೋಡಿ.


ಕಪ್ಪು ಹುಡುಗಿ : ಕಥಾ ಶೀರ್ಷಿಕೆಯ ವಿರುದ್ಧದ ಪದದ ಹೆಸರಿನ ಕಥಾನಾಯಕಿ ಶ್ವೇತಾಳನ್ನು ನೋಡಲು ಬಂದ ಗಂಡುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಕಪ್ಪು ಎನ್ನುವ ಕಾರಣಕ್ಕೆ ವಿವಾಹ ಕೂಡಿಬಂದಿರಲಿಲ್ಲ. ಆದರೆ, ಕಪ್ಪು ಎಂದಿಗೂ ಕೀಳಲ್ಲವಲ್ಲ. ಆದರೆ, ಮದುವೆ ಮಾತ್ರವಲ್ಲ ಪ್ರತಿ ವಿಚಾರದಲ್ಲಿಯೂ ಕಪ್ಪು ಎಂಬ ನುಡಿ ಕೇಳುತ್ತಲೇ.. ಕೀಳಿರಿಮೆ ಬೆಳಸಿಕೊಂಡ ಕಪ್ಪು ಹುಡುಗಿಯ ಬದುಕು ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಏನಾಗುತ್ತದೆ ಎಂಬ ಸ್ಪೂರ್ತಿದಾಯಕ ಕಥೆ ಇಲ್ಲಿದೆ.


ಕಲ್ಲೇಶಿ : ಎಸ್.ಎಸ್.ಎಲ್.ಸಿ ಪರೀಕ್ಷೆ ಕಟ್ಟಿರುವ ಕಲ್ಲೇಶಿ ಕುರಿತು ತಂದೆ-ತಾಯಿಗೆ ಆತನ ಶಾಲಾ ಶಿಕ್ಷಕರು ಹೇಳಿದ ನಂತರವೇ ಪರಿಸ್ಥಿತಿಯ ಗಂಭೀರತೆ ಅರಿವಾಗಿ ಆತನನ್ನು ಯಾವ ಕೆಲಸಕ್ಕೂ ಕರೆಯದಂತೆ ಓದಲು ಬಿಟ್ಟಿದ್ದರು. 

ಬದಲಾದ ಇಂದಿನ ಶಿಕ್ಷಣ ವ್ಯವಸ್ಥೆ, ಅಂಕ ಗಳಿಕೆಯ ಪಂದ್ಯದಲ್ಲಿ ಇರುವ ಬಗೆ, ಶಿಕ್ಷಣ ಇಲಾಖೆ, ಶಾಲಾ ಶಿಕ್ಷಕರು, ಬದಲಾದ ಸಮಾಜ, ತಂದೆ-ತಾಯಿ ಎಲ್ಲದರ ನಡುವೆ ನಲುಗುತ್ತಿರುವ ತಮ್ಮದೇ ಕನಸುಗಳನ್ನು ಕಾಣಲು ಕೂಡ ಸಮಯವಿಲ್ಲದಷ್ಟು ಮುಳುಗಿ ಹೋಗಿರುವ ವಿದ್ಯಾರ್ಥಿಗಳ ಪ್ರತಿನಿಧಿಯಂತೆ ಕಾಣುತ್ತಾನೆ ಕಲ್ಲೇಶಿ. ಬದಲಾದ ಶೈಕ್ಷಣಿಕ ದಿನಗಳಲ್ಲಿ ಕಡಿಮೆ ಬುದ್ಧಿಮತ್ತೆಯ ಅಥವಾ ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗಳ ಪ್ರತಿನಿಧಿಯಂತಿರುವ ಕಲ್ಲೇಶಿ ಅರಿವಾಗಿಸುವುದೇನು ಓದಿ ನೋಡಿ.


ಕುಲ ಮರ್ಯಾದೆ : ತಮ್ಮ ಕುಲದ ಮರ್ಯಾದೆಯೇ ಮುಖ್ಯ ಎನ್ನುವ ರಶ್ಮಿಯ ತಂದೆ-ತಾಯಿಯ ಕುರುಡು ನಂಬಿಕೆಯಲ್ಲಿ ರಶ್ಮಿ ಹಾಗೂ ವಿನಯ್ ಇಬ್ಬರ ಪ್ರೇಮ ಮಾತ್ರವೇ ಮುರುಟಿ ಹೋದದ್ದಾ..? ಜಾತಿ, ಧರ್ಮದ ಅಮಲಿನಲ್ಲಿ ಕೊಚ್ಚಿ ಹೋಗುವ ಹಿರಿಯರು ಕಿರಿಯರ ಭವಿಷ್ಯಕ್ಕೆ ಮುಳ್ಳಾದರೇ..? ಇದರಿಂದ ಯಾರ ಮರ್ಯಾದೆ ಉಳಿಯಿತು ಹಾಗೂ ಏನು ಅವಸಾನವಾಯಿತು ಎಂಬುದನ್ನು ಕಟ್ಟಿಕೊಟ್ಟಿದ್ದಾರೆ ಲೇಖಕಿ.


ನಾಣಿ : ಇನ್ನೂ.. ಮಕ್ಕಳ ಬುದ್ಧಿಮತ್ತೆಯಷ್ಟೇ ಇದ್ದು ದೇಹ ಮಾತ್ರ ಬೆಳೆದಿದ್ದ ನಾಣಿ ಊರಿನವರಿಗೆಲ್ಲ ನಗೆಪಾಟಲಿನ ವಸ್ತುವಾಗಿದ್ದರೆ ಶಾಲೆಯ ಶಿಕ್ಷಕರಿಗೆ ಅಕ್ಕರೆ ಹಾಗೂ ಅನುಕಂಪದ ಹುಡುಗ. ಹೇಳಿದ್ದನ್ನು ಚಾಚೂ ತಪ್ಪದೆ ಮಾಡುವ ಆತನಿಗೆ ಹೆಡ್ ಮಾಸ್ಟರ್ ಶಾಲೆಯಲ್ಲಿಯೇ ಕಾಳಜಿಯಿಂದ ಆತನಿಗೆ ತಕ್ಕ ಕೆಲಸ ವಹಿಸುತ್ತಿದ್ದರು. ಆದರೂ.. ಕೆಲವೊಮ್ಮೆ ಶಾಲೆಯ ಮಕ್ಕಳ ಕಿತಾಪತಿಯಿಂದ ಆತನಿಗೆ ಕೋಪ ಬಂದು ಮಧ್ಯದಲ್ಲಿ ಹೊರಡುವುದೂ ಇತ್ತು. ನಾಣಿ ಅಂದರೆ ನಾರಾಯಣನ ಮನೆಯ ಪರಿಸ್ಥಿತಿ ಹೇಗಿತ್ತು..? ಇದ್ದಕ್ಕಿದ್ದಂತೆ ಕಾಣೆಯಾದ ನಾಣಿ ಎಲ್ಲಿದ್ದ ಆತನ ಪರಿಸ್ಥಿತಿ ಏನಿತ್ತು ಅದಕ್ಕೆ ಕಾರಣರು ಯಾರು..? ಮನ ಮಿಡಿಯುವ ಕಥೆ ಸಸ್ಪೆನ್ಸ್ ಶೈಲಿಯಲ್ಲಿ ಹೆಣೆಯಲ್ಪಟ್ಟಿದೆ.


ಮಡಿಲ ಕೆಂಡ : ಪದ್ಮ ಹಾಗೂ ಮಂಜುಳಾ ಇಬ್ಬರು ಬಾಲ್ಯದ ಗೆಳತಿಯರು. ಮದುವೆಯಾಗಿದ್ದು ಒಂದೇ ಊರಿಗೆ ಈಗ ಪದ್ಮಳ ಬದುಕಿನಲ್ಲಿ ದೊಡ್ಡ ಸಮಸ್ಯೆ ಒಂದು ಎದುರಾಗಿತ್ತು. ತನಗೆ ಮಕ್ಕಳಾಗದ್ದಕ್ಕೆ ಅವಳೇ ತನ್ನ ಗಂಡನಿಗೆ ತನ್ನ ಚಿಕ್ಕಮ್ಮನ ಮಗಳನ್ನು ವಿವಾಹ ಮಾಡಿಸುವ ನಿರ್ಧಾರ ತಳೆದಿದ್ದಳು. ಹೆಚ್ಚು ಕಡಿಮೆ ಅದಕ್ಕೆ ಎಲ್ಲರೂ ಒಪ್ಪಿದ್ದರು. 

ಆದರೆ ಕೆಲವೇ ದಿನಗಳಲ್ಲಿ ಗೆಳತಿ ಮಂಜುಳಾಳಿಗೆ ತಾಯಿಯಾಗುತ್ತಿರುವ ವಿಚಾರ ತಿಳಿಸಿದರೂ ಅದರಲ್ಲಿ ತಳಮಳವೇ ತುಂಬಿತ್ತು. ಅದಕ್ಕೆ ಕಾರಣವೇನಿತ್ತು ..? ಓದಿ ನೋಡಿ.


ಆಲೋಚನೆ : ಪರಿಣಿತ ಒಬ್ಬಂಟಿಯಾಗಿ ಗಂಡನ ಮನೆಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಅಪರಿಚಿತ ವ್ಯಕ್ತಿಯ ಕುರಿತು ತನ್ನದೇ ಆಲೋಚನೆಗಳನ್ನು ಮಾಡುತ್ತಿರುವಾಗಲೇ ರೈಲು ಇಳಿದ ನಂತರ ಅದೆಲ್ಲದಕ್ಕೂ ಪೂರ್ಣವಿರಾಮ ಸಿಕ್ಕಿತು.

ಮನಸ್ಸಿನಲ್ಲಿಯೇ ಮೂಡಿಬರುವ ವಿಚಾರಗಳು, ಊಹೆಗಳಿಗೆ ಎಷ್ಟೆಲ್ಲಾ ಶಕ್ತಿಗಳಿರುತ್ತವೆ..! ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ತುಂಬಿದಾಗ ಸುತ್ತಲಿನ ಪರಿಸರವೂ ಹಾಗೆಯೇ ಕಾಣುತ್ತದೆ. ಕೆಲವೊಮ್ಮೆ ಸತ್ಯ ಬೇರೆಯೂ ಇರಬಹುದು.


ಶರಣ : ಬಸವಣ್ಣನವರ ಒಂದು ವಚನದೊಂದಿಗೆ ಶುರುವಾಗುವ ಕಥೆಯಲ್ಲಿ ಶರಣನ ಮನಸ್ಸಿನ ತುಮುಲಗಳು ಹೆಚ್ಚಿಕೊಳ್ಳುತ್ತಾ ಸಾಗುತ್ತವೆ. ಕೆಲವರು ಭೂತದ ನೆನಪುಗಳನ್ನು ಅಳಿಸಿ ಸುಖವಾಗಿದ್ದರೆ.. ಇನ್ನು ಕೆಲವರು ಅದೇ ನೆನಪುಗಳು ತಮ್ಮನ್ನು ಕಾಡುವುದಿಲ್ಲ ಎಂದುಕೊಂಡಿದ್ದರೂ ಅದೇ ನೆನಪುಗಳಲ್ಲಿ ಜೀವಿಸುತ್ತಿರುತ್ತಾರೆ. ಇದರಲ್ಲಿ ಶರಣ ಹಾಗೂ ಆತ ಪ್ರೀತಿಸಿದ ಹುಡುಗಿ ಇಬ್ಬರೂ ಯಾವ ಕೆಟಗರಿಗೆ ಸೇರುತ್ತಾರೆ ಓದಿ ಅರಿಯಿರಿ.


ಸೇದಿಬಾವಿ : ಈ ಕಥೆಯಲ್ಲಿ ಸೇದಿಬಾವಿಯದ್ದು ಬಹಳ ಮುಖ್ಯ ಪಾತ್ರ. ಅದರ ಪ್ರಾಮುಖ್ಯತೆ ಇಂದಿಗೂ ಅರಿವಿದ್ದದ್ದು ಗುರುಬಸಪ್ಪನಿಗೆ. ಅದರೊಟ್ಟಿಗಿನ ಆತ್ಮೀಯ ಭಾವ ಆತನ ಬಾಲ್ಯದ ದಿನಗಳನ್ನು ನೆನಪಿಸಿ ಬದುಕನ್ನು ನವಿರಾಗಿರಿಸಿತ್ತು. ಗುರುಬಸಪ್ಪನ ಬದುಕು ಹಾಗೂ ಬಾವಿಯ ಜೊತೆಗಿನ ನಂಟು ಎರಡನ್ನೂ ತೆರೆದಿಡುತ್ತಾರೆ. ಹೀಗೆ ಸಾಗುವ ಕಥೆಯಲ್ಲಿ ಬದಲಾದ ದಿನಗಳನ್ನು ಕಾಣಬಹುದು. ಎಪ್ಪತ್ತು ವರ್ಷದ ಮುದುಕನಾಗಿದ್ದರೂ ಇನ್ನೂ ಬಾವಿ ನೀರು ಸೇದಿ ಕುಡಿಯುವ ಏಕೈಕ ವ್ಯಕ್ತಿಯಾಗಿದ್ದವನು ಆಧುನಿಕತೆಗೆ ಒಗ್ಗಿಕೊಳ್ಳದ ವ್ಯಕ್ತಿಯಂತೆ ಕಂಡರೂ.. ಜೀವನೋತ್ಸಹ ಬಿಡದ ವ್ಯಕ್ತಿಯಂತೆಯೂ ಕಾಣಸಿಗುತ್ತಾನೆ. ಆತನ ನ್ಯಾಯ ತೀರ್ಮಾನ ಇಂಗ್ಲಿಷ್ ಶಾಲೆಯನ್ನು ಬಿಟ್ಟು ಸರ್ಕಾರಿ ಕನ್ನಡ ಶಾಲೆಗೆ ಮೊಮ್ಮಗನನ್ನು ಹಾಕುವ ಕುರಿತಾಗಿ ಹೀಗೆ ಹಲವಾರು ವಿಚಾರಗಳಿಂದ ಗುರುಬಸಪ್ಪ ಮನೆಯವರಿಗೆ ಸವಾಲಿನಂತೆಯೂ ಕಾಣುತ್ತಾನೆ. ಗುರುಬಸಪ್ಪನ ಮನಸ್ಸಿಗಾದ ಆಳವಾದ ಗಾಯಕ್ಕೂ ಸೇದಿ ಬಾವಿಗೂ ಇದ್ದ ಸಂಬಂಧವೇನು..? ಬಹಳ ಅರ್ಥಪೂರ್ಣವಾದ ಮಾರ್ಮಿಕವಾದ ಹಾಗೂ ಮನಸ್ಸಿನಲ್ಲುಳಿಯುವ ಕಥೆ ಇದು.


ಸ್ನೇಹಬಂಧ : ಲಲಿತಾ ಬಹಳ ವರ್ಷಗಳ ನಂತರ ಗೆಳು ಗಿರಿಜಳ ಮನೆಗೆ ಬಂದ ಸಂದರ್ಭದಲ್ಲಿ ಜಾಣೆಯಾಗಿದ್ದ ಗಿರಿಜಾ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿ ಬದುಕಿನಲ್ಲಿ ಸೋತು ಸೊರಗಿದ್ದ ದಿನಗಳ ವಿಚಾರಕ್ಕೆ ಕಿವಿಯಾಗುತ್ತಾಳೆ. ಗಂಡನ ಮನೆಯವರು ಹಾಗೂ ಗಂಡನೂ ಕೈಬಿಟ್ಟ ಸಂದರ್ಭದಲ್ಲಿ ಸೋತೇ ಹೋಗಿದ್ದ ಗಿರಿಜಾಳನ್ನು ಕೈಹಿಡಿದ ಸ್ನೇಹಬಂಧದ ಸುಂದರ ಸಮ್ಮಿಲನವಿದು. ಸ್ನೇಹ ಬಳಗದ ಪರಿಶ್ರಮದಿಂದ ಬಾಳಲ್ಲಿ ನೆಮ್ಮದಿ ಕಂಡ ಗಿರಿಜಾಳ ಬದುಕಿನ ಗಾಥೆ ಇಲ್ಲಿದೆ.


ಕಲ್ಯಾಣ ಜಂಕ್ಷನ್ : ದ್ಯಾಮವ್ವ ತಾನು ನೋಡಿಯೇ ಇರದಿದ್ದ ಊರಿಗೆ ಎರಡನೆಯ ಮಗ ಶಿವಪ್ಪನೊಂದಿಗೆ ಹೊರಟಿದ್ದಳು. ಮಾತಿಗೆ ಮಾತು ಬೆಳೆದು ಅಣ್ಣನ ಮನೆಯಿಂದ ತನ್ನ ತಾಯಿಯನ್ನು ಕರೆದುಕೊಂಡು ಮುಂಬೈ ಸೇರಿದ್ದ ಶಿವಪ್ಪ. ಪ್ರೀತಿಸಿ ಮದುವೆಯಾಗಿದ್ದ ಶಿವಪ್ಪ ಅಲ್ಲಿಯ ಬದುಕಿಗೆ ಒಗ್ಗಿ ಹೋಗಿದ್ದ ಆದರೆ ದ್ಯಾಮವ್ವಳಿಗೆ ಅದು ಅಷ್ಟು ಸುಲಭವಿತ್ತೇ..? ಮುಂಬೈ ಮಹಾನಗರದ ಮತ್ತೊಂದು ಮುಖವನ್ನು, ಒಂಟಿತನದ ತೆಕ್ಕೆಗೆ ಜಾರುವವರನ್ನು, ಹೊಂದಿಕೊಳ್ಳಲಾಗದ ಅಸಹಾಯಕತೆಯನ್ನು ನಾವಿಲ್ಲಿ ಕಾಣುತ್ತೇವೆ. 


ದೇವಮ್ಮಜ್ಜಿ ಮತ್ತು ಮನೆ : ದೇವಮ್ಮಜ್ಜಿ ತನ್ನ ಕನಸಿನ ಒಂದು ಮನೆಗಾಗಿ ಐದಾರು ವರ್ಷದಿಂದಲೂ ಪಂಚಾಯಿತಿಗೆ ಅರ್ಜಿ ಕೊಡುತ್ತಲೇ ಬಂದಿದ್ದಳಾದರೂ ಅವಳಿಗೆ ಏನಾದರೂ ನೆಪ ಹೇಳಿ ಸಾಗ ಹಾಕುತ್ತಿದ್ದದ್ದೇ ಹೆಚ್ಚು. ಇದ್ದೊಬ್ಬ ಮೊಮ್ಮಗಳೊಂದಿಗೆ ಒಂಟಿಯಾಗಿದ್ದ, ಪುಟ್ಟ ಗುಡಿಸಲಲ್ಲಿ ವಾಸಿಸುತ್ತಿದ್ದ ಅಜ್ಜಿ ಮೊಮ್ಮಗಳು ರೇಣುಕಾಳಿಗೆ ದಿಕ್ಕು ಮಾಡುವ ಆಲೋಚನೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವೇನು..? ರೇಣುಕಾ ಎಡವಿದ್ದನ್ನು ದೇವಮ್ಮಜ್ಜಿ ಸರಿಪಡಿಸಲು ಸಾಧ್ಯವಿತ್ತೆ..?


ಇಲ್ಲಿನ ಕಥೆಗಳಲ್ಲಿ ಗ್ರಾಮೀಣ ಪರಿಸರದ ಸೊಗಸು ಹಾಗೂ ಭಾಷೆಯ ಸೊಗಡು ಚೆನ್ನಾಗಿ ಮೂಡಿ ಬಂದಿದೆ. ಇಂದಿನ ಜೀವನ ಶೈಲಿ, ಬದಲಾದ ದಿನಗಳು ಬದಲಾದ ಪರಿಸ್ಥಿತಿಗಳ ಜೊತೆಗೆ ಅಂತಃಕರಣದ ಜೀವಗಳು ಬದುಕುವ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕಥೆಯಲ್ಲಿಯೂ ಒಂದಲ್ಲಾ ಒಂದು ಮಾನವೀಯತೆಯ ಒರತೆ ಕಾಣುತ್ತದೆ. ಇದು ಕಥೆಯ ಸಕಾರಾತ್ಮಕ ಅಂಶವಾಗಿ ಕಂಡಿತು. ಸರಳ ಸುಂದರ ಕಥೆಗಳು ಭಾಷಾ ಶೈಲಿ, ಸೊಗಸಾದ ನಿರೂಪಣೆಯಿಂದ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಲೇಖಕಿಯಿಂದ ಇನ್ನಷ್ಟು ಚೆಂದದ ಕಥೆಗಳು ಮೂಡಿಬರಲಿ ಹಾಗೂ ಮುಂದಿನ ಸಾಹಿತ್ಯ ಪಯಣಕ್ಕೆ ಶುಭವಾಗಲಿ ಎಂದು ಹಾರೈಸುವೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ