ಪುಸ್ತಕದ ಶೀರ್ಷಿಕೆ : ಗತ್ಯಂತರ
ಲೇಖಕರು : ಶ್ರೀಮತಿ ಮಾಲತಿ ರಾಮಕೃಷ್ಣ ಭಟ್
ಪ್ರಕಾಶಕರು : ರೇಖಾ ಪ್ರಕಾಶನ
ಪ್ರಥಮ ಮುದ್ರಣ : 2024
ಪುಟಗಳು : 156
ಬೆಲೆ : 195 ರೂ.
ಇದು ನಾನು ಓದುತ್ತಿರುವ ಇವರ ಎರಡನೇ ಕೃತಿ. ಲೇಖಕಿಯ ಮೂರನೇ ಕಾದಂಬರಿ.
ಮೊದಲಿಗೆ ನನಗೆ ಈ ಕೃತಿಯ ಅರ್ಪಣೆ ಬಹಳ ಇಷ್ಟವಾಯಿತು. "ಆತ್ಮವಿಶ್ವಾಸ ಬದುಕಿನ ಪಥವನ್ನು ಹಿಗ್ಗಿಸುತ್ತದೆ ಎಂದು ನಂಬಿದ ಲೋಕದ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ" ಎನ್ನುತ್ತಾರೆ ಲೇಖಕಿ.
"ಎಲ್ಲರ ಜೀವನದಲ್ಲೂ ಏಳು ಬೀಳುಗಳು ಸರ್ವೇಸಾಮಾನ್ಯ. ಬಿದ್ದು ಎದ್ದೇಳಬೇಕೇ ಹೊರತು ಎದ್ದು ಬೀಳಬಾರದು." ಎಂಬ ಲೇಖಕಿಯ ನುಡಿ ಎಚ್ಚರಿಕೆಯಂತೆಯೂ, ಬುದ್ಧಿ ಮಾತಿನಂತೆಯೂ ಸೂಕ್ತವಾಗಿದೆ.
ಅಪರ್ಣಳ ಬದಲಾದ ಬದುಕು ತೆರೆದುಕೊಳ್ಳುವಂತೆಯೇ ಅವಳ ಗತ ಜೀವನವು ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ಹೈನುಗಾರಿಕೆಯಿಂದ ಹಾಲು ಹಂಚುತ್ತಾ ನ್ಯಾಯಯುತವಾಗಿ ಬದುಕುತ್ತಿದ್ದ ಕನ್ನೇಶಗೌಡರ ಕುಟುಂಬದ ಪರಿಚಯವಾಗುತ್ತದೆ. ಅದು ಅವರ ಅಮ್ಮನ ತಂದೆಯ ಮನೆ ನ
ಅಪರ್ಣಳ ಬಾಲ್ಯ ಕಳೆದದ್ದು ಅಜ್ಜನ ಊರು ಪಿರಿಯಾಪಟ್ಟಣದಲ್ಲಿಯೇ. ಕನ್ನೇಶಗೌಡರಿಗೆ ಮೂವರು ಮಕ್ಕಳು ಶಿವಪ್ಪ, ಸೋಮು ಹಾಗೂ ಮಗಳು ಲಕ್ಷ್ಮಿ.
ಹಿರಿಯ ಮಗ ಶಿವಪ್ಪನಿಗೆ ರವೀಂದ್ರ, ಸುಧೀಂದ್ರ ಎಂಬ ಗಂಡು ಮಕ್ಕಳು. ಕಿರಿಯ ಮಾವ ಸೋಮುವಿಗೆ ರಂಜನ ಎಂಬ ಮಗಳು. ಅಪರ್ಣಳನ್ನು ಯಾರೂ ಬೇರೆ ಎಂಬಂತೆ ನೋಡದೆ ಮಮತೆ, ವಾತ್ಸಲ್ಯದಿಂದ ಕಾಣುತ್ತಿದ್ದರು. ಅಪರ್ಣ ಎಲ್ಲರ ಬಾಯಲ್ಲೂ ಅಪ್ಪಿಯಾಗಿ ಮನಸ್ಸಿಗೆ ಹತ್ತಿರವಾಗಿದ್ದಳು.
ಅಜ್ಜ-ಅಜ್ಜಿ ಇಳಿಯ ವಯಸ್ಸಿನಲ್ಲಿಯೂ ತಮ್ಮ ಗಂಡು ಮಕ್ಕಳಿಗೆ ಮಗಳನ್ನು ಯಾವುದಕ್ಕೂ ಕೊರತೆ ಮಾಡುವಂತೆ ನೋಡಿಕೊಳ್ಳಿರೆಂದು ಪದೇಪದೇ ಹೇಳುತ್ತಿದ್ದರು. ಅಷ್ಟಕ್ಕೂ ಲಕ್ಷ್ಮಿಯ ಬಾಳಿನ ಕಥೆ ಏನಿತ್ತು ..?
ಅತ್ತೆ-ಮಾವನಿಗೆ ತಮ್ಮ ಹಿರಿಯ ಮಗ ರವೀಂದ್ರ ಹಾಗೂ ಅಪ್ಪುವನ್ನು ಜೋಡಿಯಾಗಿ ಕಾಣುವಾಸೆ. ಆದರೆ ಅಪರ್ಣಳ ಮನಸ್ಸಿಗೆ ಇದು ಹಿಡಿಸುತ್ತಿರಲಿಲ್ಲ.ಕಷ್ಟದಲ್ಲಿ ಆಸರೆಯಾಗಿದ್ದ ಅಣ್ಣನ ಮಾತನ್ನು ತೆಗೆದು ಹಾಕದ ಅಮ್ಮನ ಅಸಹಾಯಕತೆ, ಜೊತೆಗೆ ತಾನು ಮುಂದಕ್ಕೆ ಓದಬೇಕು ಎನ್ನುವ ಅವಳ ಆಸೆ ಅಮ್ಮನ ಬಳಿ ಮನಬಿಚ್ಚಿ ಮಾತನಾಡುವಂತೆ ಮಾಡಿತು. ರವೀಂದ್ರ ಹಾಗೂ ಸುಧೀಂದ್ರ ಹರೆಯದ ಅಪರ್ಣ ಕಣ್ಣಲ್ಲಿ ಕಾಣುತ್ತಿದ್ದದ್ದು ಹೇಗೆ..?
ಅಮ್ಮ ತನ್ನ ಓದಿನ ಕುರಿತಾಗಿ ಮಾವನ ಬಳಿ ಮಾತನಾಡುವುದಾಗಿ ಹೇಳಿದವರು ಸೋಮು ಮಾವ ಕಮಲತ್ತೆಯ ಜೊತೆಗೆ ಪುಣ್ಯಕ್ಷೇತ್ರದ ಯಾತ್ರೆಗೆಂದು ಹೊರಟು, ಅವರೊಡನೆ ಹೋಗಿ ಬಂದು ಮಾತನಾಡುತ್ತೇನೆಂದು ಹೇಳಿದ್ದರು. ಆದರೆ ಅಲ್ಲಿಂದ ವಾಪಾಸ್ ಬಂದದ್ದು ಕಮಲತ್ತೆ ಮಾತ್ರವೇ..!
ಮನೆಯ ಇಬ್ಬರು ಸದಸ್ಯರನ್ನು ಕಳೆದುಕೊಂಡ ಮನೆಗೆ ಹೇಗಿತ್ತು..? ಶಿವಪ್ಪ ಮಾವ ಮತ್ತು ದೊಡ್ಡತ್ತೆ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿದ ಪರಿ ಹೇಗೆ..?
ಅಮ್ಮನನ್ನು ಕಳೆದುಕೊಂಡ ದುಃಖದಿಂದ ಹೊರಬರಲೆಂದು ತಾತ್ಕಾಲಿಕವಾಗಿ ಅಪರ್ಣ ಓದಲು ಒಪ್ಪಿದರೂ.. ನಂತರ ರವೀಂದ್ರ ಹಾಗೂ ಆಕೆಯ ವಿವಾಹದ ಪ್ರಸ್ತಾಪವನ್ನು ಮಾಡಿದಾಗ ಗಟ್ಟಿಯಾಗಿ ನಿರಾಕರಿಸಿದ ಅಪರ್ಣಳಿಗೆ ಧೈರ್ಯ ತುಂಬಿದ್ದು ಯಾವುದು..? ಒಲ್ಲದ ಮದುವೆ ಬೇಡವೆಂದು ಶಿವಪ್ಪನವರು ತಳೆದ ಪ್ರಬುದ್ಧ ನಿರ್ಧಾರವೂ ಇಲ್ಲಿದೆ.
ರವೀಂದ್ರನಿಗೇನೋ ಅಹಲ್ಯಾ ಎಂಬ ದೂರದ ಸಂಬಂಧಿಕರ ಮಗಳೊಡನೆ ಮದುವೆಯಾಯಿತು. ಆದರೆ, ಅಪರ್ಣಳನ್ನು ಮನೆಯಲ್ಲಿ ಕಾಣುವ ಬಗೆ ಹೇಗಿತ್ತು..?
ಮುಂದೆ ರಂಜನಿಯ ಮದುವೆಯೂ ದೂರವೇನಿರಲಿಲ್ಲ. ರಾಘವ ಎನ್ನುವ ಗುಣವಂತ ಹುಡುಗ ಮನೆಯ ಅಳಿಯನಾಗಿ ಬಂದಿದ್ದ. ದೊಡ್ಡಪ್ಪನ ನೆರಳಿನಲ್ಲಿ ಬೆಳೆದ ರಂಜನಿ ಮನೆಯ ಜವಾಬ್ದಾರಿ ಹೊರದಿದ್ದರೂ.. ತನ್ನದೇ ಪುಟ್ಟ ಆದಾಯದ ದಾರಿ ಕಂಡುಕೊಂಡಿದ್ದ ಬಗೆ ಹೇಗಿತ್ತು..? ಕೇವಲ ವಿದ್ಯೆಯಿಂದ ಮಾತ್ರವೇ ಕೆಲಸ ಎನ್ನುವವರಿಗೆ ಹೆಚ್ಚು ಓದದ, ತನ್ನದೇ ದುಡಿಮೆಯ ದಾರಿ ಹಿಡಿದ ರಂಜನಿ ಮಾದರಿಯಾಗುತ್ತಾಳೆ. ಸದ್ಯಕ್ಕೆ ಆ ಮನೆಯಲ್ಲಿ ಅಪ್ಪನ ಆಪ್ತ ಜೀವವೆಂಬಂತಿದ್ದ ರಂಜನಿಯಿಂದಲೇ ಮನೆಯ ವಿದ್ಯಾಮಾನಗಳು ಅರಿವಾಗುತ್ತವೆ.
ಮದುವೆ ಮುಗಿಸಿ ಹೊರಟುವಷ್ಟರಲ್ಲಿ ರವೀಂದ್ರ ಅಲ್ಲದಿದ್ದರೆ ಸುರೇಂದ್ರನನ್ನಾದರೂ ಮದುವೆಯಾಗು ಎನ್ನುವ ಪ್ರಸ್ತಾಪವನ್ನು ನಿರಾಕರಿಸಿ ದಿಟ್ಟವಾಗಿ ತನ್ನ ಪ್ರೀತಿಯ ವಿಚಾರವನ್ನು ಹೇಳಿಯೇ ಹೊರಡುತ್ತಾಳೆ. ಅದರ ಪರಿಣಾಮವೇನಿತ್ತು..?
ಮುಂದೆ ಆ ಮನೆಯ ನಂಟು ಕಡಿದೇ ಹೋಯಿತು ಎನ್ನುವಂತೆ ಬದುಕುವ ಅಪರ್ಣಳ ಬದುಕಿನಲ್ಲಿ ವೇಣುವಿನ ಅಧ್ಯಾಯ. ಆತನ ಮನೆಯಲ್ಲಿ ಒಪ್ಪಲಿಲ್ಲವಾದ ಕಾರಣ ದೇವಸ್ಥಾನವೊಂದರಲ್ಲಿ ವಿವಾಹವಾಗುತ್ತಾರೆ. ಸರ್ಕಾರಿ ಸ್ವಾಮ್ಯದ ಕೃಷಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯ ಕೆಲಸವೂ ಸಿಗುತ್ತದೆ. ತಾಯಿಯಾಗುವ ಸೂಚನೆಯೂ ಸಿಗುವ ಅಪರ್ಣಳ ಬಾಳು ಪರಿಪೂರ್ಣವಾಯಿತು ಎನ್ನುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗುತ್ತದೆ.
ವೇಣು ಅಪರ್ಣಳಿಂದ ದೂರವಾದ ಸಂದರ್ಭ ಯಾವುದು..? ಹೇಗೆ..? ಅನುರಾಧಳೊಡನೆ ಅಪರ್ಣ ಬರುಕು ಕಟ್ಟಿಕೊಂಡ ಬಗೆ ಹೇಗಿತ್ತು..? ಎಲ್ಲಿಯೂ ಅಡ್ಡದಾರಿ ಹಿಡಿಯದೆ, ಕೆಟ್ಟ ವಿಚಾರವನ್ನು ಮಾಡದೆ ಬದುಕುವ ಅಪರ್ಣಳ ಸಂಸ್ಕಾರವನ್ನು ತೋರುತ್ತದೆ ಬದುಕಿನ ರೀತಿ. ಹಳಿ ತಪ್ಪಿದ ತನ್ನ ಬದುಕು ತನ್ನವರಿಗೆ ಗೊತ್ತಾಗದಂತೆ ದೂರದಲ್ಲಿಯೇ ಬದುಕುತ್ತಿದ್ದಳು ಅಪರ್ಣ. ಎಲ್ಲರ ಕಣ್ಮಣಿಯಂತಿದ್ದ ಅಪರ್ಣಳನ್ನು ಮನೆಯವರು ಹುಡುಕಲಿಲ್ಲವೇ..?
ಎಷ್ಟೋ ಬಾರಿ ರಕ್ತ ಸಂಬಂಧಗಳಲ್ಲದ ಬಂಧಗಳು ಬೆಸೆದುಕೊಳ್ಳುತ್ತವೆ. ಹಾಗೆ ಬೆಸೆದುಕೊಂಡ ಬಂಧ ಕುಮುದಾಳದ್ದು. ಸ್ವಂತ ಸೋದರಿ ಎನ್ನುವಷ್ಟು ಅಕ್ಕರೆ ತೋರುವ, ಹಿಂದಿನ ವಿಚಾರವನ್ನು ಕೆದಕದ ಕುಮುದಾ ಆಸರೆಯಾದಳು ಎಂದರೂ ತಪ್ಪಾಗಲಾರದು. ಮುಂದೆ ಕುಮುದಾಳ ಓತ್ತಾಯದಿಂದ ಮನೆಯಲ್ಲಿ ದೇವರನಾಮ, ಭಾವಗೀತೆ ಎಂದು ಲಘುಸಂಗೀತದ ತರಗತಿ ಮಾಡಿ ತನ್ನ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುತ್ತಿದ್ದಳು. ಸಂಗೀತ ಅವಳ ಮನದ ಮದ್ದಾಯಿತು ಸಹ.
ಅಚಾನಕ್ಕಾಗಿ ಎದುರಾದ ಸಂದರ್ಭದಲ್ಲಿ ರಂಜನಿ ಹಾಗೂ ಸುರೇಂದ್ರರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತಾಳೆ. ಆ ಸಂದರ್ಭ ಯಾವುದು..?
ತವರಿನಲ್ಲಿ ಜನಗಳು ಬದಲಾಗಿದ್ದರು. ಅವರ ವಾತ್ಸಲ್ಯವಂತೂ ಬದಲಾಗಿರಲಿಲ್ಲ ಎಂದು ಅರಿವಾಗಲು ರಂಜನಿ ಸೇತುವೆಯಾದಳು. ಮುರಿದಿದ್ದ ಮನಗಳು ಬೆಸೆದವು ಎನ್ನುವಂತೆ ಅಪರ್ಣ ತನ್ನ ಮಗಳೊಂದಿಗೆ ಅಲ್ಲಿಗೂ ಹೋಗಿ ಬಂದಳು. ಎಲ್ಲರಿಗೂ ಅವಳ ಬದುಕಿನ ವಿಚಾರ ತಿಳಿದಿದ್ದರೂ.. ತೀರಾ ನೋಯಿಸಲು ಮುಂದಾಗುತ್ತಿರಲಿಲ್ಲ.
ರವೀಂದ್ರನಾಥ್ ಇಬ್ಬರು ಹೆಣ್ಣುಮಕ್ಕಳು, ರಂಜನಿಯ ಗಂಡು ಮಗುವಿನ ಜೊತೆಗೆ ಅನುರಾಧ ಚೆನ್ನಾಗಿ ಹೊಂದಿಕೊಂಡಳು.
ಸುರೇಂದ್ರ ಇನ್ನು ಅವಿವಾಯಿತನಾಗಿದ್ದ. ಕೃಷಿ ಕುಟುಂಬದ ಬದುಕು ಹೇಗಿರುತ್ತದೆ ಎಂಬುದನ್ನು ರವೀಂದ್ರ ಹಾಗೂ ರಾಘವರ ಮೂಲಕ ತಿಳಿಯಬಹುದು. ಅಲ್ಲದೆ, ಸುರೇಂದ್ರನ ವಿವಾಹ ಇನ್ನು ಕೂಡಿ ಬರದ್ದಕ್ಕೆ ಕಾರಣವೇನು..? ಅವನ ನೆಚ್ಚಿನ ಹವ್ಯಾಸಕ್ಕೆ ಮನೆಯವರ ಸಹಕಾರ ಹೇಗಿತ್ತು..?
ಈಗಲೂ ಮನೆಯವರ ಮನಸ್ಸಿನಲ್ಲಿ ಅಪರ್ಣ ಹಾಗೂ ಸುರೇಂದ್ರರ ಜೋಡಿಯ ಕನಸಿದ್ದರೂ ಪ್ರಸ್ತಾಪಿಸಲು ಹಿಂದೆಗೆದಿದ್ದರು. ಮುಂದೇನಾಯಿತು ..?
ಮಾಗಿದ ಮನಸ್ಥಿತಿ ಬಹಳವೇ ಪಾಠ ಕಲಿಸಿತ್ತು. ಅವಿಭಕ್ತ ಕುಟುಂಬದ ಮೂಲಮಂತ್ರವಾದ ಒಗ್ಗಟ್ಟು ಇಲ್ಲಿ ಎದ್ದು ಕಾಣುತ್ತಿತ್ತು. ಹಿರಿಯ ಸೊಸೆಯಾಗಿ ಅಹಲ್ಯಾಳ ಗಂಭೀರ ನಡೆ ಅಪರ್ಣಳನ್ನು ಆಕರ್ಷಿಸಿತ್ತು. ಆಕೆಯೇ ಸರಿಯಾದ ಸೊಸೆ ಎಂದೆನಿಸಿತ್ತು. ಅಲ್ಲಿ ಹೊಟ್ಟೆಕಿಚ್ಚು, ಸೋಮಾರಿತನಕ್ಕೆ ಆಸ್ಪದವಿರಲಿಲ್ಲ.
ಎಲ್ಲರ ಬದುಕಿನ ಮುಂದಿನ ಹದಿನೈದು ವರ್ಷಗಳ ಬದುಕನ್ನು, ಪ್ರಬುದ್ಧ ನಡೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಹೊಂದಾಣಿಕೆ, ಸುಧಾರಣೆಗಳು ಕೆಲವೊಮ್ಮೆ ಹಿರಿಯರಿಗೂ.. ಕಿರಿಯರಿಗೂ.. ಇರುಸುಮುರಿಸಾದರೂ ಹೊಂದಿಬಾಳುವ ಗುಣ ಎಲ್ಲರಲ್ಲಿಯೂ ಇತ್ತು.
ಎಷ್ಟೋ ಹೆಣ್ಣುಮಕ್ಕಳು ಅಪರ್ಣಾಳ ಹಾದಿಯನ್ನೇ ಹಿಡಿದು ಬಿದ್ದಿರಬಹುದು. ಆದರೆ, ಮೇಲೆದ್ದು.. ಮತ್ತೆ ಬೀಳದಂತೆ ಬದುಕಲು ಅಪರ್ಣ ಆದರ್ಶವಾಗಿದ್ದಾಳೆ.
ಈ ಕಾದಂಬರಿ ಕೌಟುಂಬಿಕ ಮೌಲ್ಯಗಳನ್ನು, ಬದುಕಿನ ರೀತಿ ನೀತಿಗಳನ್ನು ತೆರೆದಿಟ್ಟಂತೆಯೇ.. ಕೃಷಿ ಕುಟುಂಬದ ಗಂಡು ಮಕ್ಕಳ ಮದುವೆಯ ಸಮಸ್ಯೆಯನ್ನೂ ಓದುಗರಿಗೆ ತೋರುತ್ತದೆ. ಕೂಡು ಕುಟುಂಬದ ಮೌಲ್ಯವನ್ನು ಅರಿವಾಗಿಸುತ್ತದೆ. ಅಲ್ಲಿಯ ಸಂಸ್ಕೃತಿ ನೀಡುವ ಸಾಂಸ್ಕೃತಿಕ ಮೌಲ್ಯಗಳು ಹೊಂದಾಣಿಕೆ, ಹೊಂದಿ ಬಾಳುವಿಕೆ ಎಲ್ಲವೂ ಇಷ್ಟವಾಯಿತು. ಇಲ್ಲಿ ಯಾರೂ ಕೆಟ್ಟವರಂತೆ ಬಿಂಬಿತವಾಗಿಲ್ಲ. ಬದಲಾಗಿ, ಬದಲಾದ ಬದುಕಿನಲ್ಲಿ ಸಮಯವೇ ಅವರನ್ನು ಬದಲಾಯಿಸುತ್ತದೆ. ಮನುಷ್ಯ ನೋಡುವ ನೋಟ ಕಾಲದೊಡನೆ ಬದಲಾಗುತ್ತದೆ. ಅಂತೆಯೇ .. ಕೆಲವೊಮ್ಮೆ ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ತೋರಬಹುದೇನೋ.. ಆದರೆ ಸ್ವಭಾವತಃ ಕೆಟ್ಟವರಿರಲಾರರು ಎನ್ನುವ ಸಾತ್ವಿಕ ನೋಟ ಬಹಳವೇ ಹಿಡಿಸಿತು. ಸುಂದರ ಕಾದಂಬರಿಯ ಚೆಂದದ ಓದು. ಲೇಖಕಿಯ ನುಡಿಯ ಸಾಲುಗಳನ್ನು, ಆಶಯವನ್ನು ಸಮರ್ಥವಾಗಿ ಬಿಂಬಿಸಿದೆ.
ಫೀಲ್ ಗುಡ್, ರಿಫ್ರೆಶಿಂಗ್ ಎನಿಸುವ ಹಾಗೂ ಮನಸ್ಸಿಗೆ ಬಹಳ ಮುದ ನೀಡುವ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ