ಭಾನುವಾರ, ಜುಲೈ 19, 2026

ದೇವರಿದ್ದಾನೆ (ಪುಸ್ತಕ ಯಾನ - 468)


ಪುಸ್ತಕದ ಶೀರ್ಷಿಕೆ : ದೇವರಿದ್ದಾನೆ

ಲೇಖಕರು : ಭಾರತಿ ಪ್ರಸಾದ್ ಕೊಡ್ವಕೆರೆ

ಪ್ರಕಾಶಕರು : ಸಾಹಿತ್ಯಸುಧೆ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 212

ಬೆಲೆ : 260 ರೂ.


ಕೌಟುಂಬಿಕ ಹಾಗೂ ಸಾಮಾಜಿಕ ಕಥೆಗಳನ್ನು ನೈತಿಕತೆಯ ಚೌಕಟ್ಟಿನಲ್ಲಿ ಹೆಣೆದಿರುವ 40 ಕಥೆಗಳ ಸಂಕಲನ ಭಾರತಿ ಪ್ರಸಾದ್ ಕೊಡ್ವಕೆರೆ ಅವರ ದೇವರಿದ್ದಾನೆ. ಶೀರ್ಷಿಕೆ ಆಶಾಭಾವ, ಭರವಸೆ ಹುಟ್ಟಿಸುವಂತಿದೆ. ಇದು ಅವರ ಎರಡನೇ ಕಥಾಸಂಕಲನ. 


ಅಮ್ಮ: ಅಮ್ಮನೇ ಇಷ್ಟಪಟ್ಟು ಮಗಳ ಜೊತೆ ಬೆಂಗಳೂರಿಗೆ ಬರಲು ಹೊರಟಿದ್ದು ಮೊದಲ ಬಾರಿ. ಆದರೆ, ಆ ಬಾರಿ ಅಮ್ಮನ ಆಸೆ ಈಡೇರುವಂತಿರಲಿಲ್ಲ. ಅದೇಕೆ..? ಕೆಲವೊಂದು ವಿಚಾರಗಳು ಕಾಲ ಮಿಂಚಿ ಹೋಯಿತೆನ್ನುವಂತೆ ಪಶ್ಚಾತ್ತಾಪ ಮೂಡಿಸುವುದೇಕೆ..?


ತರವಾಡು: ಅಪ್ಪನ ಕಾಲದಲ್ಲಿ, ಅಪ್ಪ ತೀರಿಹೋದ ನಂತರ ತಪ್ಪಿ ಹೋಗಿದ್ದ ಅಜ್ಜನ ಮನೆ ಲೇಖಳ ಪಾಲಿಗೆ ದಕ್ಕಿದ್ದರ ಹಿಂದಿನ ಕಥೆ ಇಲ್ಲಿದೆ.


ಸೋದರತ್ತೆ: ಅಮ್ಮನ ನಂತರದ ಅಮ್ಮನಂತಿದ್ದ ಸೋದರತ್ತೆಯ ಸಾವು, ಅವರ ಆಸೆ ಹಾಗೂ ಸಹನಾಗೆ ತನ್ನ ಸಾವಿನ ವಿಚಾರವನ್ನು ಹೇಗೆ ಹೇಳಬೇಕು ಎಂದು ಹೇಳಿದ ಅವರ ಆದೇಶ, ಎಲ್ಲದರ ಅಂತಃಕರಣದಿಂದ ಕಾಡುವ ಕಥೆ.


ಆದದ್ದೆಲ್ಲಾ ಒಳಿತೇ ಆಯಿತು: ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಬಾಳುತ್ತಿರುವ ಸುಮಾ ಹಾಗೂ ಮಾಧವರ ದಾಂಪತ್ಯ ಜೀವನದ ಜೊತೆಗೆ ಪಶ್ಚಾತ್ತಾಪ ಪಡುತ್ತಿರುವ ಸೀತಮ್ಮನ ತಪ್ಪು ಏನಿತ್ತು..? ಕಾಲ ಕಲಿಸಿದ ಪಾಠ ಯಾವುದು..?


ಅಪಸ್ವರ: ಸಾಮಾನ್ಯವಾಗಿ ಹಿರಿಯರಿಂದ ದಾಂಪತ್ಯದಲ್ಲಿ ಅಪಸ್ವರ ಮೂಡುವ ಕಥೆಗಳನ್ನು ಓದಿದ್ದೆ. ಆದರೆ, ಇಲ್ಲಿ ಸುಶ್ಮಿತಾ ಹಾಗೂ ಸುಹಾಸ್ ದಂಪತಿಗಳ ನಡುವಿನ ಅಪಸ್ವರ ಸುಸ್ವರವಾದ ಹಿನ್ನೆಲೆಗೆ ಹಿರಿಯರ ಹಿರಿತನವಿರುವುದು ಖುಷಿ ತಂದಿತು.


ಹೊಸಹಾದಿ: ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಇಬ್ಬರ ಗತ ಮುಂದೆ ವಿಭಿನ್ನ ಭವಿಷ್ಯ ಕಂಡುಕೊಂಡ ಕಥೆ ಇದು.


ಸಿರಿ: ಅಪ್ಪ-ಅಮ್ಮನ ದಾಂಪತ್ಯದ ದಿನಗಳನ್ನು ಕಂಡಿದ್ದ ಸಿರಿಗೆ ಸಂಸಾರದ ಕುರಿತು ಹುಟ್ಟಿದ ಹೇವರಿಕೆಯ ಭಾವ ಹಾಗೂ ಅಪ್ಪನನ್ನು ದ್ವೇಷಿಸುತ್ತಿದ್ದ ಸಿರಿ ತನ್ನ ವೈವಾಹಿಕ ಜೀವನವನ್ನು ಕಟ್ಟಿಕೊಂಡದ್ದು ಹೇಗೆ..?


ಆರಂಭ-ಅಂತ್ಯ: ಒಂದು ಸಂಬಂಧದ ಅಂತ್ಯ ಮತ್ತೊಂದರ ಆರಂಭವೂ ಆಗಿರಬಹುದು. ಒಂದೇ ದೋಣಿಯ ಪಯಣಿಗರಂತಿದ್ದ ಇಬ್ಬರು ತಮ್ಮ ಮುಂದಿನ ಜೀವನದ ಆರಂಭದ ನಾಂದಿ ಹಾಡಿದ ಕಥೆ.


ಆತ್ಮತೃಪ್ತಿ: ಇಳಿ ವಯಸ್ಸಿನ ಸಂಬಂಧಗಳ ಸವಿ ಇರುವುದು ಅವರ ಸಿಹಿ-ಸವಿ ಮಾತುಕತೆಯಲ್ಲಿ. ಕದ್ದು ಸಿಹಿತಿಂದ ವಿಚಾರ ಸಂಗಾತಿಗೆ ತಿಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು..?


ಋಣಾನುಬಂಧ ರೂಪೇಣ: ಋಣಾನುಬಂಧ ಇಲ್ಲದೆ ತಪ್ಪಿ ಹೋದ ಸಂಬಂಧದ ಹೆಣ್ಣುಮಗಳು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ.. ತಪ್ಪಿತಸ್ಥ ಭಾವದಲ್ಲಿ ಬೇಯುತ್ತಿದ್ದವರು ಅವಳ ಪ್ರಬುದ್ಧ ಆಲೋಚನೆಗೆ ಮನಸೋತದ್ದೇಗೆ..?


ಕಾಕನ ಹೋಟೆಲ್: ಮದುವೆಗೂ ಮುನ್ನ ಕೆಲಸದಲ್ಲಿದ್ದ ಅಂಗಡಿಯ ಪಕ್ಕದಲ್ಲಿ ಪರಿಚಿತರಾಗಿದ್ದ ಆಪ್ತಜೀವ ಕಾಕಾರಿಗೆ ಈಗ ಇಳಿವಯಸ್ಸು ಹಾಗೂ ಆಪ್ತಬಂಧ ಮನಸ್ಸಿಗೆ ಹತ್ತಿರವಾಗುವ ಕಥೆಯಿದು.


ದೇವರಿದ್ದಾನೆ: ಕಥಾಸಂಕಲನದ ಶೀರ್ಷಿಕೆಯ ಕಥೆ. ಅಮ್ಮನ ಪ್ರೇರಣೆ ಇದ್ದರೂ.. ಅಮ್ಮ, ಸದಾ ದೇವರಿದ್ದಾನೆ ಎಂದು ಯಶಸ್ಸನ್ನು ದೇವರಿಗೆ ಸಮರ್ಪಿಸುತ್ತಿದ್ದರು. "ನಿಜಕ್ಕೂ ಅಮ್ಮ ಹೇಳುವ ಆ ದೇವರಿದ್ದಾನಾ..?" ಎಂದು ಲೇಖಕಿ ಕೇಳುವುದೇಕೆ..?


ನನ್ನ ಪ್ರೀತಿಯ ಹುಡುಗಿ: ಈತನಿಗೆ ತಾನು ಪ್ರೀತಿಸಿದ ಹುಡುಗಿ ತನ್ನವಳಾಗಲಿ ಎನ್ನುವ ಆಸೆ. ಆದರೆ, ಪ್ರೀತಿಸಿದ ಹುಡುಗಿಯ ಮನಸ್ಸಿನಲ್ಲಿದ್ದ ಮಾತೇನು..?


ಅಪ್ಪ: ಅಮ್ಮನಿಲ್ಲದ ದಿನಗಳಲ್ಲಿ ಅಪ್ಪನಿದ್ದ ಬಗೆ, ಅಮ್ಮನಿದ್ದ ದಿನಗಳಲ್ಲಿ ಅಪ್ಪನಿದ್ದ ಬಗೆ.. ಎರಡೂ ಮಗಳ ನೋಟಕ್ಕೆ ಕಂಡದ್ದೇಗೆ.? 


ನಿರ್ಧಾರ: ತಂದೆ ತಾಯಿ ನೋಡಿ ಅನುರೂಪ ಎಂದು ಸಹನಾಳಿಗೆ ಜೋಡಿ ಮಾಡಿದ ಹುಡುಗ ಶ್ರೀಕಾಂತ್. ಅನುರೂಪ ದಾಂಪತ್ಯದಂತೆ ಸಾಗುತ್ತಿದ್ದವರ ಬದುಕಲ್ಲಿ ಈಗ ಬದಲಾವಣೆ ನಿಚ್ಚಳವಾಗಿತ್ತು. ಅದು ಮೊದಲು ಕಾಡಿದ್ದು ಸಹನಾಳಿಗೆ ಬ ಅವಳ ನಿರ್ಧಾರವೇನು..? ಅದು ಖಂಡಿತವಾಗಿಯೂ ವಿಚ್ಛೇದನವಲ್ಲ. ಹಾಗಾದರೆ ಮತ್ತೇನು..?


ತುಮುಲ(ನೀಳ್ಗತೆ): ಅರವಿಂದ ಅಚಾನಕ್ಕಾಗಿ ಕಂಡ, ಭೇಟಿಯಾದ ಹುಡುಗಿಯನ್ನು ಮೆಚ್ಚಿದ್ದ. ಅವಳ ಜೊತೆಯಲ್ಲಿ ಮಗುವೂ ಇತ್ತು. ಕಾಕತಾಳೀಯವೆಂಬಂತೆ ಆಕೆಯ ಮನೆಗೆ ವಧುಪರೀಕ್ಷೆಗೆ ಹೋಗುವ ಸಂದರ್ಭವೂ ಬಂದಿತು. ಆದರೆ, ಅಲ್ಲಿ ನಡೆದ ಪ್ರಸಂಗವೊಂದು ಅವನ ಮನದ ತುಮುಲವನ್ನು ಹೆಚ್ಚಾಗಿಸಿದ ನವಿರಾದ ಪ್ರೇಮ ಕಥೆ ಇಲ್ಲಿದೆ.


ಕೃತಜ್ಞಳೋ, ಕೃತಘ್ನಳೋ: 23 ವರ್ಷಗಳ ಹಿಂದಿನ ಸ್ನೇಹ ಮತ್ತೆ ಬೆಸೆದದ್ದು ಒಂದು ಕರೆಯ ಮೂಲಕ. ಹಾಗೆ ಕರೆ ಬಂದದ್ದು ಸಹಾಯಕ್ಕೋಸ್ಕರ. ಹೇಗೋ ಬೇಡಿಕೆ ಈಡೇರಿತ್ತು. ಅದಕ್ಕೆ ಸಹಾಯ ಮಾಡಿದವರಿಗೂ.. ಈಕೆಗೂ ಕೃತಜ್ಞತೆಯನ್ನು ಸಲ್ಲಿಸಿದ್ದವಳು ಮುಂದಿನ ದಿನಗಳಲ್ಲಿ ಹೇಗಿದ್ದಳು..? ಆಕೆ ಕೃತಜ್ಞಳೋ, ಕೃತಘ್ನಳೋ..?


ಜೇಡರಬಲೆ: ಯಾರು ಏನೇ ಅಂದರೂ ತನ್ನಿಷ್ಟದ ಬದುಕು ಕಟ್ಟಿಕೊಳ್ಳಬೇಕು. ಅಲ್ಪ ಸ್ವಾತಂತ್ರ್ಯವಾದರೂ ತನ್ನದಾಗಬೇಕು ಎಂದು ಮಹತ್ವಾಕಾಂಕ್ಷೆಯಿಂದ ನಿರ್ಧರಿಸಿ ಹೊರಟವಳ ಆಸೆಗೆ ಅಡ್ಡಿಯಾದದ್ದೇನು..? ಸಂಸಾರವೆಂಬ ಜೇಡರಬಲೆಯಲ್ಲಿ ಸಿಕ್ಕಿದವಳ ಪರಿಸ್ಥಿತಿ ಏನಿತ್ತು..?


ಉಡುಗೊರೆ: ವ್ಯಾಸ ಹಾಗೂ ಸುನಂದ ತಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಇಚ್ಛೆಯನ್ನರಿತು ಬಾಳುವ ಸತಿಪತಿಗಳಂತಿದ್ದವರು. ವ್ಯಾಸನ ಒಂದು ದುಡುಕು ಮಾತಿನಿಂದ ಸುನಂದಾ ಮನಸ್ಸು ಘಾಸಿಯಾದದ್ದು ಹೇಗೆ..? ವ್ಯಾಸ ಅದನ್ನು ಸರಿಪಡಿಸಿದನೇ..? ಒಂದು ಆದರ್ಶ ದಾಂಪತ್ಯದ ಕಥೆ ಇದು.


ಆಸ್ತಿ: ತನ್ನ ಪಾಲಿನ ಆಸ್ತಿ ಕೇಳಲು ಹೊರಟಾಗ ಹೆಂಡತಿ ಬೇಡವೆಂದು ತಡೆದರೂ ಅವಳ ಮಾತಿಗೆ ಬೆಲೆ ಕೊಡದವನು ಬದಲಾದದ್ದೇಗೆ..?


ಹೆತ್ತವರು: ಹೆತ್ತವರು ತಮ್ಮ ಕಷ್ಟವನ್ನು ಮಕ್ಕಳಿಗೆ ತಿಳಿಸುವುದಿಲ್ಲ. ಮಕ್ಕಳು ಅದರ ಅರಿವಿರದೆ ದುಂದು ವೆಚ್ಚ ಮಾಡಲು ಹೊರಟಾಗ ಅಚಾನಕ್ಕಾಗಿ ತನ್ನ ಹೆತ್ತವರ ಕಷ್ಟದ ಸ್ಥಿತಿ ಕಣ್ಮುಂದೆ ನಿಂತರೆ..? 


ನೈತಿಕತೆ: ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ 14 ವರ್ಷಗಳ ನಂತರ ತವರೂರಿಗೆ ವರ್ಗಾವಣೆಯಾಗಿತ್ತು. ತಾನು ಓದಿದ ಶಾಲೆಗೆಯನ್ನು ಹೋಗಿ ನೋಡಬೇಕೆಂಬ ಆಸೆ ಇದ್ದಾಗಲೇ ಅದೇ ಶಾಲೆಯಿಂದ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನವೂ ಸಿಕ್ಕಿತ್ತು. ಹೋಗುವಾಗ ಇದ್ದ ಉತ್ಸಾಹ, ಖುಷಿ ಬರುವಾಗ ಹೇಗಿತ್ತು..?


ನಿನ್ನ ನೆರಳಿನಾಸರೆ: ಪತಿ ಸುಹಾಸ್ ನದ್ದು ಹೇಳುವಂತಹ ತಕರಾರಿಲ್ಲದಿದ್ದರೂ.. ಅಖಿಲಾಳಿಗೆ ಅವನ ಒಂದು ನಡೆ ಸರಿ ಕಂಡಿರಲಿಲ್ಲ. ಆದರೆ, ಅದು ಸರಿ ಎಂದು ಸಾಬೀತಾದ ಗಳಿಗೆ ಮತ್ತೆ ಅವನ ಒಲವಿನಾಸರೆಗೆ ದಾರಿಯಾಯಿತೇ..?


ನೀನಿಲ್ಲದ ಈ ಬಾಳು: ಹೊರಗೆ ದುಡಿದು, ಮನೆಯಲ್ಲಿಯೂ ಕೆಲಸ ಮಾಡುವ ಗೃಹಿಣಿ ಸಾಮಾನ್ಯವಾಗಿ ಗಂಡ-ಮಕ್ಕಳ ಸ್ವಲ್ಪ ಸಹಾಯವನ್ನು ಬಯಸುತ್ತಾಳೆ. ಅದು ಅವರ ಕರ್ತವ್ಯವೂ ಹೌದು. ಪ್ರಶಾಂತಿಯೂ ಇದಕ್ಕೆ ಹೊರತಾಗಿರಲಿಲ್ಲ. ಆಕೆಯ ಗಂಡ-ಮಕ್ಕಳಿಗೆ ಅವಳಿಲ್ಲದ ಸಂದರ್ಭ ಹೇಗನ್ನಿಸಿತು..?


ಶಿಕ್ಷೆ: ಮದುವೆ, ಸಂಸಾರ, ಮಕ್ಕಳು ಎಂದು ಕಷ್ಟದ ಬದುಕು ಬದುಕುತ್ತಿದ್ದ ಗೆಳತಿ ಪದ್ಮಿನಿಗೆ ಸಿಕ್ಕಿದ್ದು ಇನ್ನೂ ಮದುವೆಯಾಗದ ಭಾವನಾ. ಅಚಾನಕ್ಕಾಗಿ ಆದ ಇವರಿಬ್ಬರ ಭೇಟಿ ಯಾರಿಗೆ ಯಾವ ಭಾವ ಹುಟ್ಟಿಸಿತು. ಭಾವನಾಳ ಬದುಕಲ್ಲಿ.. ಯಾರ ತಪ್ಪಿಗೆ ಅವಳಿಗೆ ಶಿಕ್ಷೆಯಾಗಿತ್ತು..?


ತುಡಿತ: ಇಚ್ಛೆಯನರಿತು ನಡೆವ ಪತಿರಲು ಎನ್ನುವ ಆಸೆಯೇ ಎಲ್ಲರಲ್ಲೂ ಕಾಣುತ್ತದೆ. ಇಲ್ಲಿ ಚೇತನಾಳಿಗೆ ಇಚ್ಛೆಯನ್ನರಿತು ನಡೆದ ಪತಿಯ ಅಮ್ಮ ಸಿಕ್ಕಿದರು. ಅವರು ತಮ್ಮ ಮಗನಿಗೆ ಹೇಳಿದ ಬುದ್ಧಿಮಾತೇನು..? ಚೇತನ ಹಾಗೂ ಯಶೋಧಾರ ಹೂವಿನ ಮನಸ್ಸುಗಳು ಇಷ್ಟವಾದವು.


ಅವನಿಕಾ: 33 ನಾಯಿಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡುತ್ತಿದ್ದ ಅವನಿ ಕಾಳಿಗೆ ಅವಳು ಕೊಟ್ಟ ಪ್ರೀತಿಯ ಎರಡರಷ್ಟು ಪ್ರೀತಿ ಅವುಗಳಿಂದ ಸಿಗುತ್ತಿತ್ತು. ಅವನಿಕಾಳ ಬದುಕಿನ ಬದಲಾದ ರೀತಿ ಮಧುವಿನ ಕಣ್ಣಲ್ಲಿ ಕಂಡ ಕಥೆ ಇದು.


ಮುನಿಸು: ದಂಪತಿಗಳು ಪುಟ್ಟ ಕಾರಣವೊಂದಕ್ಕೆ ಮುನಿಸಿಕೊಂಡಿದ್ದ ಮನಸ್ಸುಗಳೆರಡು ಒಂದಾಗಬೇಕಾದರೆ, ಅವರು ಪಡುವ ಪಶ್ಚಾತ್ತಾಪ, ಬದಲಾವಣೆಯನ್ನು ತೋರಿದ ಹಾದಿ ಮಾದರಿಯಂತಿದೆ.


ಪಶ್ಚಾತ್ತಾಪ: ಕೆಲವೊಮ್ಮೆ ಅವಸರ ಅಥವಾ ಸಮಯ ಎರಡೂ ಹೇಳಬೇಕಾದ ವಿಚಾರವನ್ನು ಹಾಗೂ ಕೇಳಬೇಕಾದ ವಿಚಾರವನ್ನು ತಪ್ಪಿಸುವುದಿದೆ. ಮಗನನ್ನು ಅಮ್ಮನಂತೆಯೇ ಸಾಕಿದ ಪಾಪಮ್ಮನ ಸಾವಿನ ಸುದ್ದಿ ಐದು ದಿನದ ನಂತರ ತಿಳಿದಾಗ ಪಟ್ಟ ಪಶ್ಚಾತ್ತಾಪ ನಮ್ಮನ್ನೂ ಕಾಡುತ್ತದೆ.


ಜವಾಬ್ದಾರಿ: ಸುರೇಶ ತನ್ನ ಅಪ್ಪ-ಅಮ್ಮನ ತಪ್ಪನ್ನು ತನ್ನ ಅಕ್ಕನಿಗೆ ಹಾಗೂ ಅವಳ ದುಡುಕಿನ ತೀರ್ಮಾನವನ್ನು ಮನದಟ್ಟು ಮಾಡಿಸಿ, ಜವಾಬ್ದಾರಿಯನ್ನು ಹಂಚಿದ ಕಥೆ ನಿಜಕ್ಕೂ ಮಾದರಿಯಂತಿದೆ. ಇಂತಹ ಸಹಕಾರ ಎಲ್ಲರಿಗೂ ಸಿಕ್ಕರೆ ಸಂಸಾರಗಳೆಷ್ಟು ಸುಮಧುರ..!


ಸಂಚು(ನೀಳ್ಗತೆ): ನಕ್ಸಲರಾಗಿ ಬದುಕುತ್ತಿದ್ದವರ ಗುಂಪನ್ನು ಚಾಕಚಕ್ಯತೆಯಿಂದ ಹಿಡಿದ ಕಥೆ ಇದು. ಅಷ್ಟೇ ಅಲ್ಲದೆ ಅವರ ಗುಂಪಿನಲ್ಲಿ ಹುಚ್ಚಿಯಂತೆ ವರ್ತಿಸುತ್ತಿದ್ದ ಹುಡುಗಿಯೊಬ್ಬಳಿದ್ದಳು. ಆದರೆ, ಅವಳು ಅವರೊಡನೆ ಮೊದಲಿನಿಂದಲೂ ಇರಲಿಲ್ಲ. ಕಥೆಯ ತಿರುವಿರುವುದು ಇಲ್ಲಿ ನ ಅವರಿಗಿಂತ ಕ್ರೂರಿಯಾಗಿದ್ದ ಅವಳ ಸಂಚು ಬಯಲಾದದ್ದು ಹೇಗೆ..? ಒಂದೊಳ್ಳೆ ರೋಚಕ ಕಥೆ.


ಮುನಿಸು: "ನಾಳೆ ಹುಟ್ಟುವ ಮಗು ನಿಮ್ಮ ಹಾದಿ ಹಿಡಿದರೆ.." ಎನ್ನುವ ಸಾಕ್ಷಿಯ ಮಾತಿನಲ್ಲಿ ಇದ್ದ ಎರಡರ್ಥವನ್ನು ಆತ ಗಮನಿಸದೆ ಮುನಿಸಿಕೊಂಡು ಹೊರಟಿದ್ದವನಿಗೆ ವಿರುದ್ಧ ದಂಪತಿಗಳು ಅರ್ಥ ಮಾಡಿಸಿದ ಸತ್ಯ ಏನಿತ್ತು..?


ಗಂಗಾ ಕೌಸಲ್ಯ: ತವರಿನಿಂದ ಬಂದಿದ್ದ ಹಸು ಗಂಗೆ ಹಾಗೂ ಕೌಸಲ್ಯಳ ಅನುಬಂಧದ ಅನುಭೂತಿಯ ವಿಭಿನ್ನ ಕಥೆ. ಈ ಕಥಾ ಸಂಕಲನದಲ್ಲಿ ನನಗೆ ಅಚ್ಚುಮೆಚ್ಚಿನ ಕಥೆ ಇದು.


ಮಾಡಿದ್ದುಣ್ಣೋ ಮಹಾರಾಯ: ಪಲ್ಲವಿ ಊರಿಗೆ ಬಂದಿದ್ದ ಸಮಯದಲ್ಲಿ ನಡೆದ ಘಟನೆಯೊಂದು ಅವಳಿಗೆ ಅವನ ಹಿಂದಿನ ಬದುಕನ್ನು ನೆನಪಿಸಿತ್ತು ಜೊತೆಗೆ ಈಗಿನ ಗತಿಯನ್ನೂ .. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ತನ್ನ ಕೆಟ್ಟ ಕರ್ಮಗಳ ಫಲ ತಾನೇ ಅನುಭವಿಸುವಂತಾದ ಘಟನೆ ಇದು.


ಇಷ್ಟು ಕಾಲ ಒಟ್ಟಿಗಿದ್ದು: ಎಷ್ಟು ಕಾಲ ಒಟ್ಟಿಗಿದ್ದವರೇ ಆರಿಯದ ವಿಚಾರಗಳನ್ನು ಆರು ತಿಂಗಳ ದಾಂಪತ್ಯದಲ್ಲಿದ್ದವರು ಎಷ್ಟು ಅರಿತಿದ್ದರು..?


ಓ ಮೌನ ಮಾತಾಡು: ಸಾವಿತ್ರಿ ಅಷ್ಟು ದಿನವೂ ಒಳಗೊಳಗೆ ಮನಸ್ಸಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿನಗಳು ಮುಗಿದ ಸಂದರ್ಭದಲ್ಲಿ, ನಾನು ಅತ್ತರೆ ಇನ್ನೂ ಆನಂದಭಾಷ್ಪವೇ ಎಂದುಕೊಂಡಿದ್ದವಳು ಜೀವಕ್ಕೆ ಕೊಟ್ಟ ಬೆಲೆ ಏನಿತ್ತು ..?


ತಪ್ಪಿದ್ದೆಲ್ಲಿ?: ಪ್ರೀತಿ-ಪ್ರೇಮದ ಹೆಸರಿನಲ್ಲಿ ತಪ್ಪಿ ನಡೆಯುವ ಯುವಜನತೆ ತಮ್ಮ ತಪ್ಪಿಗೆ ತಾವೇ ಅನುಭವಿಸಬೇಕಾದ ಶಿಕ್ಷೆಯ ವಾಸ್ತವದ ಕಥೆ ಇಲ್ಲಿದೆ.


ಸಪ್ತಸಾಗರದಾಚೆ: ಕಲಿಯಬೇಕು ಎಂದಿದ್ದ ವಳನ್ನು ಮಗು ನೋಡಿಕೊಳ್ಳಲು ಸಪ್ತಸಾಗರದ ಆಚೆಗೆ ಕಳುಹಿಸಿದ್ದ ತಾಯಿಯ ಕೊರಗು ಮಗಳನ್ನು ನೋಡಿದಾಗ ಏನಾಗಿತ್ತು..? ಎಲ್ಲವನ್ನು ಮೀರುವಂತೆ ಬೆಳೆದಿದ್ದ ಮಗಳು ಅಲ್ಲಿಗೆ ಬಂದದ್ದೇಗೆ..?


ಮಳೆಗಾಲದ ಒಂದು ಮುಂಜಾನೆ: ಮಳೆಗಾಲದ ಒಂದು ಮುಂಜಾನೆಯಲ್ಲಿ ಆಕೆ ಕಾಯುತ್ತಿದ್ದವರು ಬಂದಾಗಿನ ಅವಳ ಭಾವ ತುಂಬಿದ ಸ್ವಗತ ಇಲ್ಲಿದೆ.


ಆದರ್ಶವಾದಿ: ಕಾಲೇಜಿನಲ್ಲಿದ್ದಾಗ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದ ವರುಣ್ ಆದರ್ಶವಾದಿಯೂ ಆಗಿದ್ದ. ಓದುವಾಗ ಇದ್ದ ಆದರ್ಶ ಮುಂದುವರೆಯುವುದು ಕಡಿಮೆ. ಆದರೆ, ವರುಣ್ ಅಂತಹವನಲ್ಲ ಎಂದು ಅರಿವಾದ ಗಳಿಗೆ ಯಾವುದು..?


ಸಣ್ಣ ಕಥೆಗಳನ್ನು ಅದರಲ್ಲಿಯೂ ಕೌಟುಂಬಿಕ ಇಷ್ಟಪಟ್ಟು ಓದುವ ನನಗೆ ಇದು ಭರ್ಜರಿ ಓದು. ಹಲವಾರು ಕಥೆಗಳಲ್ಲಿ ನೀಡಿರುವ ಮುಕ್ತಾಯ ಭಾವ, ಯುನಿಕ್ ಟಚ್ ಎರಡನ್ನು ಮೇಳೈಸಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ, ಆದರ್ಶಗಳು ಅಡಗಿರುವ ಕಥೆಗಳ ಓದು ಇಷ್ಟವಾಯಿತು.

~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ