ಪುಸ್ತಕದ ಶೀರ್ಷಿಕೆ : ಈಗಿಲ್ಲಿ ಎಲ್ಲವೂ ಮೆಸ್ಸಿ!
ಲೇಖಕರು : ಎಂ ಆರ್ ಕಮಲ
ಪ್ರಕಾಶಕರು : ಬಹುರೂಪಿ
ಪ್ರಥಮ ಮುದ್ರಣ : ಡಿಸೆಂಬರ್ 2024
ಪುಟಗಳು : 104
ಬೆಲೆ : 150 ರೂ.
ನನಗೆ ಎಂ. ಆರ್ ಕಮಲ ಮೇಡಂ ಅವರ ಗದ್ಯಗಂಧಿ ಕವಿತೆಗಳು ಬಹಳ ಇಷ್ಟ. ಜೊತೆಗೆ ಅವರ ಸಕಾರಾತ್ಮಕ ನೋಟವೂ..
ಗದ್ಯಗಂಧಿ ಶೈಲಿಯ ಜೊತೆಗೆ ಲೇಖಕಿ 2015ರಲ್ಲಿ ಅರಬ್ ಹೆಣ್ಣು ಮಕ್ಕಳ ಕಾವ್ಯದ ಅನುವಾದದಲ್ಲಿ ತೊಡಗಿಕೊಂಡಿದ್ದಾಗ ಅವರ ಬರವಣಿಗೆಯ ಶೈಲಿಗಳು ಬದಲಾಗಿರುವುದಕ್ಕೆ ಕಾರಣ ಹಾಗೂ ಹೆಚ್ಚಿನ ಅರಬ್ ಮಹಿಳಾ ಕವಿಗಳ ಗದ್ಯಗಂಧಿ ಕವಿತೆಗಳ ಕುರಿತಾಗಿ ಪುಸ್ತಕದ ಪ್ರವೇಶಿಕೆಯಲ್ಲಿ ತೆರೆದಿಡುತ್ತಾರೆ.
ಸಾಮಾನ್ಯವಾಗಿ ಇವರ ಗದ್ಯಗಂಧಿ ಕವಿತೆಗಳಲ್ಲಿ ಅವಳು ಎನ್ನುವುದನ್ನು ಕಾಣಬಹುದು. ಇದು ಹಲವಾರು ಹೆಣ್ಣುಮಕ್ಕಳಿಗೆ ಕನೆಕ್ಟ್ ಆಗುತ್ತದೆ ಸಹ. ಇಲ್ಲಿ ಅವಳ ಭಾವಗಳು ಕಾಣುತ್ತವೆ. ಜೊತೆಗೆ ವಲಸೆ, ವಿಸ್ಮೃತಿ, ಹೆಣ್ಣಿನ ಅಸ್ಮಿತೆ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ ಹೀಗೆ ಹಲವಾರು ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ಶೀರ್ಷಿಕೆಯೇ ಸೂಚಿಸುವಂತೆ ಮೆಸ್ಸಿ ಅಂದರೆ ಗೊಂದಲವಿರುವ ಭಾವಗಳು ಹಾಗೂ ಅವುಗಳ ಮೇಳ್ಳೆಸುವಿಕೆಯ ಜೊತೆಗೆ ಹೊಸದೊಂದು ಸಕಾರಾತ್ಮಕ ಹೊಳಹು ಸಹ ಸಿಗುತ್ತದೆ.
ಈ ಕವಿತೆಗಳ ಮಾಲೆಯ ಮೊದಲ ಪುಸ್ತಕಕ್ಕೆ ಗದ್ಯಗಂಧಿ ಎಂಬ ಚಂದದ ಹೆಸರಿಟ್ಟ ಡಾ. ಎಚ್. ಎಸ್ ಸತ್ಯನಾರಾಯಣ ಅವರಿಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ.
ಇಲ್ಲಿ 76 ಸೊಗಸಾದ ಗದ್ಯಗಂಧಿ ಕವಿತೆಗಳಿವೆ. ನನಗಿಷ್ಟವಾದ ಕೆಲವನ್ನು ನನಗರ್ಥವಾದಂತೆ ಪ್ರಸ್ತಾಪಿಸುತ್ತೇನೆ.
**************
ಅವರು ಕೇಳುತ್ತಾರೆ :
ಅವರು ಕೇಳುತ್ತಾರೆ: ನಿನ್ನೊಳಗೆ ಕಹಿಯೇ ಇಲ್ಲವೇ?
ನಾನು ಹೇಳುತ್ತೇನೆ: ಇಲ್ಲಿ ಎಲ್ಲರೂ ಕಹಿ ತುಂಬಿದ
ಪಾತ್ರೆಯಾಗಿದ್ದಾರೆ. ಎಲ್ಲ ಕಡೆಯೂ ಅದನ್ನೇ ಹೀರುತ್ತ, ಉಗುಳುತ್ತ
ಹೊಳೆಯಂತೆ ಹರಿಯುತ್ತಿದ್ದಾರೆ. ಯಾವಾಗ ಕಹಿಯೊಂದು
ಕಡಲಾಗುವುದೋ? ಅದಕ್ಕೆಂದೇ ಜೇನುಹುಟ್ಟಿಯಾಗಿದ್ದೇನೆ.
ಎಲ್ಲರೂ ಕಹಿ ತುಂಬಿಕೊಂಡು.. ಕಹಿಯನ್ನೇ ಕಕ್ಕುವಾಗ ಸಿಹಿಯಾಗಿರುವರು ಮಾದರಿಯಾಗಬೇಕಿದೆ. ಪ್ರತಿಯೊಂದಕ್ಕೂ ಏಕೆ, ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿ ಎಲ್ಲರಂತೆಯೇ ತಾನೂ ಆದರೆ ಹೇಗೆ..?! ಎಂಬ ವಿಭಿನ್ನತೆಯ ಜೊತೆಗೆ ಮನುಷ್ಯ ಏನಾಗಬೇಕಿದೆ ಎಂಬುದನ್ನು ಬೋಧಿಸದೆ ತಾನೇ ಮಾದರಿಯಾಗಿ ನಿಲ್ಲುವ ಬಗೆ ಕಾಣಸಿಗುತ್ತದೆ.
**************
ಹೀಗಿಲ್ಲಿ ಎಲ್ಲವೂ ಮೆಸ್ಸಿ! :
ಇಲ್ಲಿ ಮೆಸ್ಸಿ ಎಂಬ ಪದ ಗೋಜಲು, ಗೊಂದಲ ಎಂಬರ್ಥ ನೀಡುತ್ತದೆ.
ಬದಲಾದ ದಿನಗಳು ಬದಲಾದ ರೀತಿ-ನೀತಿಗಳು, ಬದುಕಿನ ರೀತಿಗಳು, ಅಪ್ಡೇಟ್ ಆಗುವ ನೆಪದಲ್ಲಿ ಬದಲಾಗಿರುವ ನಮಗೆ ಕನ್ನಡಿ ಹಿಡಿದಂತಿದೆ ಇದು.
**************
ಉದುರಿದ ಪದಗಳನ್ನು ಅಂಟಿಸಲಾಗುವುದಿಲ್ಲ :
'ಪದಗಳೆಂದರೆ' ಮರದಿಂದ ಉದುರಿದ ಎಲೆಗಳು
ಎಂಬ ಸಾಲು ಮರದಿಂದ ಉದುರಿದ ಎಲೆಗಳನ್ನು ಮತ್ತೆ ಹೇಗೆ ಮೊದಲಿನಂತಾಗಿಸುವುದಿಲ್ಲವೋ ಹಾಗೆಯೇ ಒಮ್ಮೆ ಆಡಿದ ಮಾತುಗಳು ಎಲ್ಲೆಲ್ಲಾ ಹಾರಿ, ಹೊತ್ತಿ ಉರಿಯಬಹುದು ಅಥವಾ ಹೇಗೆಲ್ಲಾ ವಿನ್ಯಾಸವಾಗಬಹುದು, ಯಾವ ರೀತಿಯಲ್ಲಿ ಬಳಕೆಯಾಗಬಹುದು ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಉದುರಿದ ಪದಗಳನ್ನು ಹಿಂತೆಗೆದು ಅಂಟಿಸಲಾಗುವುದಿಲ್ಲವಲ್ಲ!
ಎಂಬ ಸಾಲು ಅದೆಷ್ಟು ಅರ್ಥಪೂರ್ಣವಲ್ಲವೇ..!
**************
ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! :
ಫೇಸ್ಬುಕ್ ನ ಅನ್ ಫ್ರೆಂಡ್ ಆಗುವ ವಿಚಾರವನ್ನು ಪ್ರಸ್ತಾಪಿಸುತ್ತಲೇ.. ಚಿಕ್ಕವರಿದ್ದಾಗ ನೆಂಟರು ಬರುವ ಸಂದರ್ಭದ ಸಂಭ್ರಮ ಜೊತೆಗೆ ಅವರ ನಿರ್ಗಮನದ ನಂತರದ ಖಾಲಿತನ ಎರಡರ ಅನುಭವವನ್ನು ಪ್ರಸ್ತಾಪಿಸುತ್ತಾರೆ. ಅದಕ್ಕೂ.. ಇಂದಿನ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಗೂ ಲಿಂಕ್ ಆಗುತ್ತದೆ. ಬರುವವರ, ಹೋಗುವವರ, ಹೊಂದುವವರ ಕುರಿತು ಹೇಳುತ್ತಾರೆ.
ಬರುವವರ ಹೋಗುವವರ ಎಣಿಕೆಯಲ್ಲಿ ಕವಿಗೀಗ ವಿಸ್ಮೃತಿ.
ತನ್ನನ್ನು, ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ!
**************
ನಕ್ಷತ್ರಗಳನ್ನು ಹುಡುಕುವುದು! :
ಚಿಕ್ಕಂದಿನಿಂದ ಇದ್ದ ನಕ್ಷತ್ರಗಳ ಹುಚ್ಚಿನಲ್ಲಿ ಕೆಂಪು ಕಲ್ಲಿನ ನಕ್ಷತ್ರದ ಓಲೆ, ನಂತರ ಅದು ಕಳೆದು ಹೋಗಿದ್ದು, ನಕ್ಷತ್ರ ಕತ್ತಿನ ಫ್ರಾಕು ಹೀಗೆ ನಕ್ಷತ್ರದ ಆಸೆಗಳು ಹಲವಿದ್ದವು. ಆದರೆ ನಕ್ಷತ್ರಗಳು ಸಿಕ್ಕಿದ್ದೇ ಬೇರೆ ರೀತಿಯಲ್ಲಿ. ಇವು ಕಳೆದುಹೋಗದ ನಕ್ಷತ್ರಗಳು. ಅವು ಹೇಗಿವೆ ಎಂದರೆ ಹೀಗಿವೆ ನೋಡಿ.
ಪಾಠ ಮಾಡಿದರೆ ಮಕ್ಕಳ ಕಣ್ಣಲ್ಲಿ ನೂರಾರು ನಕ್ಷತ್ರ, ಅಡುಗೆ
ಮುಗಿಸಿದರೆ ಕೈಯಲ್ಲೊಂದು, ನೆಟ್ಟ ಮಲ್ಲಿಗೆಯ ಬಳ್ಳಿಯಲ್ಲಿ
ಲೆಕ್ಕವಿರದಷ್ಟು! ಕಾಲಿಟ್ಟಲ್ಲೆಲ್ಲ ನಕ್ಷತ್ರಗಳ ಬಳ್ಳಿ ತೊಡರಿಕೊಳ್ಳುತ್ತಿವೆ.
ಮನಸ್ಸಿಗೆ ಮಂಕು ಕವಿದಿದೆ ಎನ್ನಿಸಿದರೆ ಎದ್ದು ಕೆಲಸ ಹುಡುಕುತ್ತಾಳೆ.
ನಕ್ಷತ್ರಗಳು ದಳದಳ ಉದುರುತ್ತವೆ!
**************
ಮಾತನಾಡಿಸಬೇಕಾಗಿಯೇ ಇಲ್ಲ! :
"ಬೆಳಗಾದರೆ ಅದದೇ ಮನೆಯ ರಂಗೋಲಿ ನೋಡುತ್ತಾ ನಡೆಯುತ್ತಾಳೆ. ಕವಿ ನಿಸಾರರಿಗಿದ್ದ ಜಿಜ್ಞಾಸೆ, ಬೆರಗುಗಣ್ಣು ಯಾವುದೂ ಇಲ್ಲ. ಪ್ರಶ್ನೆಗಳು ಇಲ್ಲ ಹೆಚ್ಚಿನವು ಉತ್ತರಗಳೇ!"
ಹೆಣ್ಣುಮಕ್ಕಳ ಮನಸ್ಸು ರಂಗೋಲಿಯ ಮೂಲಕ ಚಿತ್ರಿತವಾಗಿರುವ ಪರಿಯನ್ನು ನಮಗೂ ಕಟ್ಟಿಕೊಡುತ್ತಾರೆ. ಕಾಟಾಚಾರಕ್ಕೆ ಎಳೆದ ರಂಗೋಲಿ, ಬಿಳಿಯ ರಂಗೋಲಿ ಜೊತೆಗೆ ಕೆಮ್ಮಣಿನ ಅಲಂಕಾರ, ಬಣ್ಣದ ರಂಗೋಲಿ, ಬಣ್ಣ ಬೇಡದ ಕಡೆ ಬಣ್ಣ ಸೇರಿಸಿ ಅಂದಗೆಟ್ಟ ರಂಗೋಲಿ, ಹೆಚ್ಚು ಎಳೆಗಳಿದ್ದ ರಂಗೋಲಿಯನ್ನು ಹಿಗ್ಗಿಸುತ್ತಾ ಸಾಗಿರುವ ಪರಿ, ಬದಲಾಗದ ಒಂದು ಮನೆಯ ರಂಗೋಲಿ, ಹೀಗೆ ವಿವಿಧ ರಂಗೋಲಿಗಳು ಅವರ ಮನಸ್ಸನ್ನೇ ಬಿಚ್ಚಿಡುವಂತೆ ಕಾಣುತ್ತವೆ.
ಗದ್ಯಗಂಧಿ ಕೊನೆಯಲ್ಲಿನ ಈ ಸಾಲು ಎಲ್ಲವನ್ನೂ ಹೇಳುತ್ತದೆ.
ಈ ಹೆಣ್ಣು ಮಕ್ಕಳನ್ನು ಅರಿಯಲು ಮಾತನಾಡಿಸಬೇಕಾಗಿಯೇ ಇಲ್ಲ!
**************
ಸ್ವಯಂ ಸಂಭ್ರಮೆಗೆ ಯಾವ ಹಂಗಿಲ್ಲ! :
ಯಾತನೆಯ ಒರೆಸಿ ಹಾಕಿರುವ ನೂತನೆಯ ಕಣ್ಣ ಕಾಡಿಗೆ
ನೀರಾಗುವುದಿಲ್ಲ, ತುಟಿ ರಂಗು ಅಳಿಯುವುದಿಲ್ಲ, ಅಳಿಸುವುದೂ
ಇಲ್ಲ. ಬರುವನೋ, ಬಾರನೋ ಎಂಬ ಗೊಂದಲವೇ ಇಲ್ಲ.
ಸ್ವಯಂ ಸಂಭ್ರಮೆಗೆ ಯಾವುದರ ಹಂಗಿಲ್ಲ.
ಸ್ವಯಂ ಸಂಭ್ರಮೆಯರಾಗಿ ಮೊದಲಿಗೆ ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ಹಾಗೂ ಯಾರಲ್ಲೂ ತಮ್ಮ ಸಂತೋಷವಿಲ್ಲ ಎಂಬ ಅರಿವನ್ನು ಮೂಡಿಸಿಕೊಳ್ಳುವ, ಸ್ವಯಂ ಸಂಭ್ರಮೆ ಇಲ್ಲಿ ಮಾದರಿಯಾಗುತ್ತಾಳೆ ಹಾಗೂ ಇಷ್ಟವಾಗುತ್ತಾಳೆ. ಇಲ್ಲಿ ಸ್ವಯಂ ಸಂಭ್ರಮೆಯ ಅರಳುವಿಕೆ ಹಾಗೂ ಅವಳ ಪರಿ ಆವರಿಸಿಕೊಳ್ಳುತ್ತದೆ.
**************
ವಿರುದ್ಧ ಪದಗಳ ಹುಡುಕುತ್ತ ! :
ಎಲ್ಲದಕ್ಕೂ ನಿಮ್ಮದು 'ಏರುದ್ಧ ಪದ'ದ ಹುಡುಕಾಟ. ಸಿಗದಿದ್ದರೆ ತತ್ತರಿಸಿ ಎಂಥದ್ದನ್ನೋ ಎದುರಿಗೆ ತಂದು ನಿಲ್ಲಿಸಿ ಕಾದಾಡಲೇಬೇಕು.
ಮಾಗಿಯ ಕೋಗಿಲೆಯಂತೆ ಯಾರೂ ಇಲ್ಲಿ ಮೂಗರಾಗಬಾರದು.
ಹುಲಿಯೋ, ನರಿಯೋ ಯಾವುದೋ ವೇಷ ತೊಟ್ಟು
ಕುಣಿಯುತ್ತಿರಬೇಕು.
ಎಲೆ ಕಳಚಿ ನಿಂತ ಮರದ ಮೌನ, ವಿಷಾದ, ಚಿಗುರ ಭರವಸೆ
ಯಾವುದೂ ವಿರುದ್ಧ ಪದಗಳ' ಹುಡುಕಾಡುವವರಿಗೆ
ಅರ್ಥವಾಗುವುದಿಲ್ಲ.
ಪಕ್ಷಿಗಳಿಗೆ ಮರಗಳಿಗೆ ಹೀಗೆ ಪರಿಸರದಲ್ಲಿ ವಿರುದ್ಧ ಎಂಬುದಿಲ್ಲ. ಅವುಗಳಿಗೆ ನಿಯಮವೂ ಇಲ್ಲ. ತಮ್ಮ ಪಾಡಿಗೆ ಚಿಗುರಿ, ಅರಳಿ ನಳನಳಿಸುತ್ತವೆ. ಮನುಷ್ಯನಂತೆ ಹುನ್ನಾರಗಳಿಲ್ಲ ಎಂದು ಹೇಳುತ್ತಲೇ ಮನುಷ್ಯರ ವಿರುದ್ಧ ಪದದ ಹುಡುಕಾಟದ ಪ್ರಯತ್ನವನ್ನು ಬದಿಗಿರಿಸಿ, ಏನೋ ಒಂದು ಮಾಡುತ್ತಲಿದ್ದಾಗ ಹೇಗಿರುತ್ತದೆ ಎಂದು ಹೇಳಿದ್ದಾರೆ.
**************
ಅರಳುವುದಷ್ಟೇ ತನ್ನ ಸಹಜ ಗುಣ! :
ತನ್ನೊಳಗೊಂದು ಭಾಷೆಯಿದೆಯೆಂದೇ ತಿಳಿದಿರಲಿಲ್ಲ ತನಗೆ
ತಾನೇ ಹೂವಂತೆ ಅರಳುವವರೆಗೂ! ಈಗವಳು ಹೊರಗಿನೆಲ್ಲ
ಭಾಷೆಯನ್ನು ಆಚೆಗಟ್ಟಿದ್ದಾಳೆ. ಅರಳುವುದಷ್ಟೇ ತನ್ನ ಸಹಜ ಗುಣ!
ಕೆಲವೊಮ್ಮೆ ಪರಿಸರದ ಅಥವಾ ಕುಟುಂಬದ ಯಾರದ್ದೋ ಭಾಷೆಯನ್ನೋ, ಭಾವವನ್ನೋ ನಮ್ಮೊಳಗೆ ಅಳವಡಿಸಿಕೊಳ್ಳುತ್ತಾ ಸಾಗುತ್ತೇವೆ. ಆದರೆ, ನಮ್ಮ ನೈಜತೆಯ ಅರಿವಾಗುವುದು ನಮ್ಮ ಭಾವ, ಭಾಷೆಯ ಅರಿವಾಗುವುದು ಸಹಜವಾದ ಪ್ರಕ್ರಿಯೆ. ಹೂವರಳುವಂತೆ.. ಜೊತೆಗೆ ಅದರ ನಂತರದ ಜ್ಞಾನೋದಯ, ಪರಿಪಕ್ವತೆ ಯಾವುದನ್ನು ಆಚೆಗಿಡಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅಲ್ಲವೇ..?
**************
ಅರ್ಥಪೂರ್ಣವಾದ ಹಾಗೂ ಮನಸ್ಸಿಗೆ ಹತ್ತಿರವಾಗುವ ಹಲವು ಸಾಲುಗಳಿವೆ ಇಲ್ಲಿ. ಪ್ರಸ್ತಾಪಿಸಲು ಹೊರಟರೆ ಈ ಪುಸ್ತಕದ ಸಾಕಷ್ಟು ಸಾಲುಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ರೂಪಕಗಳನ್ನು ಇಷ್ಟಪಡುವ ಗದ್ಯದ ಪ್ರಿಯರು ಹಾಗೂ ಪದ್ಯದ ಪ್ರಿಯರು, ಕಾವ್ಯಾತ್ಮಕ ಭಾಷೆಯನ್ನು ಇಷ್ಟಪಡುವವರು ಹೀಗೆ ಎಲ್ಲರೂ ಓದಬಹುದಾದ ಗದ್ಯಗಂಧಿ ಕವಿತೆಗಳಿವೆ ಇಲ್ಲಿ. ಸೊಗಸಾದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ