ಭಾನುವಾರ, ಜುಲೈ 19, 2026

ಗಂಡು ಮುತ್ತೈದೆ (ಪುಸ್ತಕ ಯಾನ - 469)


ಪುಸ್ತಕದ ಶೀರ್ಷಿಕೆ : ಗಂಡು ಮುತ್ತೈದೆ 

ಲೇಖಕರು : ಮಂಜುಳಾ ಪ್ರಸಾದ್

ಪ್ರಕಾಶಕರು : ಅಕ್ಷರನಾದ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2025

ಪುಟಗಳು : 106

ಬೆಲೆ : 150 ರೂ. 


ಇದು ಮಂಜುಳಾ ಪ್ರಸಾದ್ ಅವರ ಮೂರನೇ ಪುಸ್ತಕ. 'ಮಂದಾರ' ಎಂಬ ಕಿರುಕಥೆಗಳ ಸಂಕಲನ ಹಾಗೂ 'ಬಿಡಿ ಹೂಗಳು' ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಇದು ನಾನು ಓದುತ್ತಿರುವ ಇವರ ಮೊದಲ ಪುಸ್ತಕ. 


ಈ ಕಥಾಸಂಕಲನದಲ್ಲಿ ಮೂರು ಕಥೆಗಳಿವೆ. ಶೀರ್ಷಿಕೆಯಾಗಿರುವುದು ಇಲ್ಲಿರುವ ನೀಳ್ಗತೆ. ಅಪ್ಪನ ವಾಚು ಹಾಗೂ ದೊಡ್ಡತನ ಎಂಬ ಇನ್ನೆರಡು ಕಥೆಗಳು ಓದಿಗೆ ಸಿಗುತ್ತವೆ. ಡಿ. ಮಲ್ಲಾರೆಡ್ಡಿ ಸರ್ ಅವರ ಬೆನ್ನುಡಿ ಇದೆ. 


ಗಂಡು ಮುತ್ತೈದೆ : ಶೀರ್ಷಿಕೆ ವಿಭಿನ್ನವಾಗಿದೆ. ಆದರೆ, ಈ ಹೆಸರಿನಲ್ಲಿ ಕರೆಸಿಕೊಳ್ಳುವವರಿಗೆ ಇದು ಮುಜುಗರವನ್ನು ತಂದೊಡ್ಡುತ್ತದೆ. ಆದರೆ, ಸೃಷ್ಟಿಯಲ್ಲಿ ಕೆಲವೊಮ್ಮೆ ದೈಹಿಕ ಭಿನ್ನತೆಯಿಂದ ಹೀಗಾಗುವವರು ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿರುವ ಕಥೆ ಇದು. 


ಸಾಮಾನ್ಯವಾಗಿ ಹೆಣ್ಣೆಂದರೆ ಹೀಗಿರಬೇಕು ಹಾಗೂ ಗಂಡೆಂದರೆ ಹೀಗಿರಬೇಕು ಎಂಬ ಅಲಿಖಿತ ನಿಯಮಗಳು ನಮ್ಮನ್ನು ಪ್ರಭಾವಿಸುವುದಿದೆ. ಆದರೆ, ಈ ಕಥೆ ಅಂತಹ ಮನಸ್ಥಿತಿಯನ್ನು ಬದಲಾಯಿಸಲು ಪರಿಣಾಮಕಾರಿಯಾಗಿದೆ. 


ಪೂಜೆ, ವ್ರತ, ಸಂಪ್ರದಾಯ ಎಲ್ಲವನ್ನು ಪಾಲಿಸುತ್ತಿದ್ದ ಅಮ್ಮನಿಗೆ ಪಾರ್ಶ್ವವಾಯು ಬಡಿದು ಎರಡು ಕಾಲುಗಳು ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾಗಲೂ.. ದೈಹಿಕ ಕೆಲಸಗಳು ಕಷ್ಟವಾಗುತ್ತಿದ್ದರೂ ಯಾವುದನ್ನೂ ಬಿಡಲೊಪ್ಪದ ಅಮ್ಮನಿಗೆ ಆಕೆಯ ಆರೋಗ್ಯ ಸುಧಾರಿಸಲು ಮರು ಮಾತಾಡದೆ ಸಹಾಯಕನಾಗಿದ್ದ ಸುಶೀಲ್. ಸುಶೀಲ್ ತಂದೆ ಸಹ ಆತನ ಸಹಾಯಕ್ಕೆ ಮೆಚ್ಚುತ್ತಿದ್ದರು. ಆದರೂ.. ಹಬ್ಬದ ದಿನ ಅವರ ಬಾಯಿಯಿಂದ ಬಂದ ಒಂದು ಶಬ್ದ ಆತನನ್ನು ಹೆಚ್ಚು ನೋಯಿಸಿತು.


ಮೂವರು ಹೆಣ್ಣುಮಕ್ಕಳ ನಂತರ ಎಂಟು ವರ್ಷ ಚಿಕ್ಕವನಾಗಿ ಹುಟ್ಟಿದ್ದ ಸುಶೀಲ್. ಅಕ್ಕಂದಿರ ಮಧ್ಯೆ ಅವರಿಗಿಂತಲೂ ಹೆಚ್ಚು ಜಾಗೃತಿ ವಹಿಸಿ ಬೆಳೆಸಿದ್ದಕ್ಕೋ ಏನೋ ಹೆಣ್ಣು ಮಕ್ಕಳಿಗೆ ಬರುತ್ತಿದ್ದ ಪ್ರತಿ ಕೆಲಸವೂ ಅವರಿಗಿಂತಲೂ ನಾಜೂಕಾಗಿ ಇವನಿಗೆ ಬರುತ್ತಿತ್ತು. ವಿದ್ಯೆಯಲ್ಲಿ ಮಾತ್ರವಲ್ಲದೆ.. ಅಡುಗೆ, ಮನೆ ಸುಧಾರಿಸುವಿಕೆ ಎಲ್ಲವನ್ನು ನಿಭಾಯಿಸುತ್ತಿದ್ದವನಿಗೆ ಬೇರೆಯದ್ದೇ ಹೆಸರು ಆಂಟಿದ್ದು ವಿಪರ್ಯಾಸ.


ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಬ್ಯಾಂಕಿನ ಕ್ಷೇತ್ರವನ್ನು ಆರಿಸಿಕೊಂಡು ಇನ್ನೇನು ಮದುವೆಯೂ ಆಗಿ ಸುಖವಾಗಿರಬೇಕು ಎನ್ನುವಾಗ ಅಕ್ಕನ ಮಗಳ ಸಂಬಂಧ ಕೂಡಿ ಬರಲಿಲ್ಲ. ಇದೇ ನೆಪವಾಗಿ, ಮದುವೆಯ ವಿಚಾರವಾಗಿ ಒಬ್ಬೊಬ್ಬರಾಗಿ ತವರಿನ ನೆಟನ್ನು ಹೆಚ್ಚು ಅಂಟಿಸಿಕೊಳ್ಳದೆ ದೂರವೇ ಉಳಿದರು ಅಕ್ಕಂದಿರು. ಅಷ್ಟಕ್ಕೂ ಅಕ್ಕನ ಮಗಳ ಜೊತೆಗಿನ ವಿವಾಹ ಹಾಗೂ ನಂತರದ ವಿವಾಹ ಸಂಬಂಧಗಳು ತಪ್ಪಿ ಹೋಗುತ್ತಿರುವುದಕ್ಕೆ ಕಾರಣವೇನಿತ್ತು..?


ಅದೇ ಸಂದರ್ಭದಲ್ಲಿ ಹೊಸ ಪ್ರಮೋಷನ್ ಸಿಕ್ಕಾಗ.. ಹೊಸ ಜಾಗ ಅದೃಷ್ಟವನ್ನು ಬದಲಾಯಿಸಬಹುದು ಎಂದು ದಾವಣಗೆರೆಗೆ ಹೋದವನಿಗೆ ಅಲ್ಲಿ ನಡೆದ ಘಟನೆಯೊಂದು ಆತನ ಬದುಕಿನಲ್ಲಿ ಕಪ್ಪುಚುಕ್ಕಿಯಾಗಿಬಿಡಬಹುದು ಎನ್ನುವ ಆಲೋಚನೆ ಕನಸಿನಲ್ಲಿಯೂ ಇರಲಿಲ್ಲ. ಹೆಣ್ಣುಮಕ್ಕಳ ನಡುವೆ ಬೆಳೆದಿದ್ದವನು, ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿದ್ದವನು ತಾನೇ ಸುಳ್ಳು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಲು ಹೋಗಿ ಅದನ್ನೇ ಉರುಳಾಗಿಸಿಕೊಂಡಿದ್ದ. ಅಷ್ಟಕ್ಕೂ ಘಟನೆ ಹಾಗೂ ಸುಶೀಲ್ ಹೇಳಿದ ಸುಳ್ಳು ಏನಿತ್ತು ..?


ಅದಾದ ನಂತರದ ವರ್ಗಾವಣೆ, ವಿವಾಹ ಸಂಬಂಧ, ವಿವಾಹ ನಂತರದ ಬದುಕು ಎಲ್ಲವೂ ಸುಶೀಲ್ ನ ಬವಣೆಯ ಜೊತೆಗೆ ಗಂಡು ದೈಹಿಕವಾಗಿ ಬದಲಾವಣೆ ತೋರಿದಾಗ ಸಮಾಜದಲ್ಲಿ ಯಾವ ದೃಷ್ಟಿಯಲ್ಲಿ ಕಾಣಿಸುತ್ತಾನೆ ಹಾಗೂ ಸುತ್ತಲಿನವರ ಪ್ರತಿಕ್ರಿಯೆ, ಮನಸ್ಥಿತಿ, ಪರಿಸ್ಥಿತಿ ಏನಿರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 


ಸುಶೀಲ್ ಹಾಗೂ ಆತನ ಪತ್ನಿ ಸುಮ ಇಬ್ಬರೂ ಮನೋವೈದ್ಯರನ್ನು ಸಂಪರ್ಕಿಸಿದ್ದೇಕೆ..? ಮುಂದೆ ಗಂಡು ಮುತ್ತೈದೆ ಎಂಬ ಪದ ಆತನಿಗೆ ಹೆಮ್ಮೆ ತಂದದ್ದೇಕೆ? ಓದಿ ನೋಡಿ.


ಅಪ್ಪನ ವಾಚು : 

"ಹೌದು! ಸಂಜೆಯ ಗೋಧೂಳಿ ಟೈಮ್... ಅದು ಪ್ರಕೃತಿಗೆ; ಆದರೆ ಈ ವಾಚ್ ನ ಅಂಗಡಿಯವನಿಗೆ ಪ್ರತಿಕ್ಷಣವೂ ಅವನ ಅಂಗಡಿಯ ತುಂಬ ನೇತು ಹಾಕಿರುವ ಆ ಗಡಿಯಾರಗಳ ನಿರಂತರ ಶಬ್ದಗಳಿಗೆ ಒಳ್ಳೆಯ ಸಮಯ ಯಾವುದು? ಕೆಟ್ಟ ಸಮಯ ಯಾವುದು? ಕಾಲಚಕ್ರ ಉರುಳುತ್ತಿರುವಾಗ!"


ಕಥೆಯ ಶೀರ್ಷಿಕೆ ಹಾಗೂ ಈ ಅರ್ಥಪೂರ್ಣ ಸಾಲುಗಳನ್ನು ಓದುವಾಗಲೇ ಕುರಿತಾಗಿ ನಮಗೊಂದು ಕಲ್ಪನೆ ಬರುತ್ತದೆ. ಅಪ್ಪ ಸಾಯುವ ಕೊನೆಯ ಗಳಿಗೆಯಲ್ಲಿ ದೃಷ್ಟಿ ನೆಟ್ಟದ್ದು ಹಾಗೂ ಬದುಕಿನುದ್ದಕ್ಕೂ ಅಪ್ಯಾಯತೆಯಿಂದ ಅಪ್ಪಿಕೊಂಡದ್ದು ವಾಚ್ ಅನ್ನು. ಅಪ್ಪನ ವರ್ಷಾಂತಕದ ಕಾರ್ಯಕ್ಕೆ ಬೇಕಾಗಿದ್ದು ಮಾಡುವುದರ ಜೊತೆಗೆ, ಅಂದೇ ವಾಚ್ ರಿಪೇರಿ ಕೆಲಸವನ್ನು ಅಂಟಿಸಿಕೊಂಡಿದ್ದೇಕೆ..?


ಅಪ್ಪನ ಬಾಲ್ಯದ ದಿನಗಳು, ಪೊಲೀಸ್ ಆದ ಸಂದರ್ಭ ಆ ಸಮಯದಲ್ಲಿಯೂ ವಾಚ್ ವ್ಯಾಮೋಹ, ಅಮ್ಮನೊಡನೆ ಜೊತೆಯಾದ ವಾಚ್.. ಹೀಗೆ ಜೀವನದ ಪ್ರತಿ ಪ್ರಮುಖ ಘಟ್ಟದಲ್ಲಿಯೂ ಜೊತೆಯಾಗಿದ್ದ ವಾಚ್ ನ ಚಿತ್ರಣ ನಮಗೆ ಸಿಗುತ್ತಾ ಹೋಗುತ್ತದೆ


"ವಾಚು ಸುಬ್ಬಣ್ಣನ ತಿಥಿಯಲ್ಲಿ ಅವರ ಮಗ ಎಲ್ಲರಿಗೂ ವಾಚುಗಳನ್ನು ದಾನವಾಗಿ ಕೊಡಲಿದ್ದಾನೆ" ಎಂಬ ಗಾಳಿಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನಿತ್ತು ಹಾಗೂ ಅಪ್ಪನ ವಾಚು ಏನಾಯ್ತು..? ನೀವೇ ಓದಿ ನೋಡಿ.


ದೊಡ್ಡತನ : ತಾನು ಹುಟ್ಟಿ ಬೆಳೆದ ಊರಿಗೆ, ಬಾಲ್ಯವನ್ನು ಕಳೆದ ಊರಿಗೆ ಮತ್ತೆ ಮರಳಿ ಬರುತ್ತಿದ್ದ. ಅದಕ್ಕೆ ಕಾರಣವಿತ್ತು. ಹಾಗೆಂದು, ಆತ ಇಷ್ಟಪಟ್ಟು ಬರುತ್ತಿದ್ದ ಕಾರಣವಲ್ಲ. ಸಾಕಷ್ಟು ದ್ವೇಷ, ಹಗೆಯನ್ನು ಬೆಳೆಸಿಕೊಂಡು ಊರಿನಿಂದ ದೂರವೇ ಇದ್ದವನು ಅಮ್ಮನಿಗೆ ಕೊಟ್ಟ ಆ ಒಂದು ಮಾತಿಗೆ ಮತ್ತೆ ಅಲ್ಲಿ ಬಂದಿದ್ದ .


ಕೂಡು ಕುಟುಂಬದ ಮನೆಯ ನೆನಪಿನ ಜೊತೆಗೆ ಆ ಮನೆಯಲ್ಲಿದ್ದವರ ಸಣ್ಣತನಗಳು ಹಾಗೂ ಪರಿಸ್ಥಿತಿಗಳು ಜೊತೆಗೆ ಅಪ್ಪ ಎಲ್ಲರಿಂದ ದೂರಾದ ಪ್ರಸಂಗ ಎಲ್ಲವೂ ಕಾಣಿಸುತ್ತದೆ. ವಿಪರ್ಯಾಸವೆಂದರೆ ಚಿಕ್ಕಪ್ಪ ಹಾಗೂ ಮಕ್ಕಳಿಗೆ ತಾನು ಬಂದಿದ್ದ ಕೆಲಸಕ್ಕಿಂತ ಅವರವರ ಸಮಸ್ಯೆಯೇ ದೊಡ್ಡದಾಗಿ ಕಂಡದ್ದು. ಹಾಗೂ ಅದರ ಪರಿಹಾರವನ್ನು ಕಂಡುಕೊಳ್ಳಲು ಹೊರಟದ್ದು.


ಇಲ್ಲಿ ದೊಡ್ಡತನ ಮೆರೆದವರು ಯಾರು..? ಅಮ್ಮನ ಭಾಷೆ ಏನಿತ್ತು ಅವನ ಕಾರ್ಯ ಸಂಪೂರ್ಣವಾಯಿತೇ ಓದಿ ನೋಡಿ.


ನೀಳ್ಗತೆ ಹಾಗೂ ಉಳಿದೆರಡು ಕಥೆಗಳು ಕಥೆಯ ಅಂತ್ಯಗಳು ಅಷ್ಟು ಸುಲಭವಾಗಿ ಊಹಿಸಲಾಗದಂತಿವೆ. ಎಲ್ಲ ಕಥೆಗಳಲ್ಲಿಯೂ ಪ್ರಮುಖವಾಗಿ ಮನಸ್ಸಿನ ಭಾವನೆಗಳು ಅತ್ಯಂತ ಸ್ಪಷ್ಟವಾಗಿ ಹಾಗೂ ಆಪ್ತವಾಗುವಂತೆ ಚಿತ್ರಿತವಾಗಿವೆ. ವಾಸ್ತವಕ್ಕೆ ಹತ್ತಿರವಾದ ಕಥೆಗಳು ಇಲ್ಲಿವೆ. ಸೊಗಸಾದ ಕಥೆಗಳ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ