ಹೀಗೆಯೇ ನನ್ನ ಅವಳ ಮಾತು ಸಾಗುತ್ತಾ ಇತ್ತು. ತಡೆಯಿರದಂತೆ..!
ಮಾತಿನ ನಡುವಲ್ಲಿ "ನಂಬಿಕೆ ಅನ್ನೋದು ಎರಡಲಗಿನ ಕತ್ತಿಯಂತೆ.. ಯಾರನ್ನು ನಂಬುವುದೋ ಯಾರನ್ನು ಬಿಡುವುದೋ ಗೊತ್ತಾಗ್ತಾ ಇಲ್ಲ" ಎಂಬ ವೇದಾಂತದಂತಹ ಮಾತು ಕೇಳಿದಾಗ ಯಾರನ್ನೋ ನಂಬಿ ಹಣ ಕೊಟ್ಟು ಕಳೆದುಕೊಂಡಿರಬಹುದಾ..?! ಎಂದೆನಿಸಿತು. ಅವಳಾಗಿಯೇ ಬಾಯಿ ಬಿಡಲಿ ಎಂದುಕೊಂಡು ಹೆಚ್ಚು ಕೆದಕಲು ಹೋಗಲಿಲ್ಲ.
"ಕೌಸಲ್ಯೆ, ಸುಮಿತ್ರೆ, ಕೈಕೇಯಿಯರಲ್ಲಿ ನಿನಗೆ ತಾಯಿಯಾಗಿ ಯಾರು ಇಷ್ಟ" ಎಂದಳು. "ಯಾಕೆ..?" ಎಂಬ ಮರುಪ್ರಶ್ನೆಗೆ "ಕಾಲ ಕಳೆದಂತೆ ನನ್ನ ಆಯ್ಕೆ ಬದಲಾಗುತ್ತೆ ಬಿಡು"
"ನಿನಗೆ ಯಾರಿಷ್ಟ.. ಯಾಕೆ?" ಎಂದೆ ನಾನು.
"ಈಗ ಯಾರೂ ಇಲ್ವೆ.." ಎಂಬ ಮಾತು ನನ್ನನ್ನು ಅಚ್ಚರಿಗೆ ದೂಡಿತ್ತು. ಅವಳೇ ಮುಂದುವರಿಸಿದಳು..
"ಸ್ವಂತ ಮಗನ ಪರ ವಹಿಸಿ ಧ್ವನಿ ಎತ್ತಲಾಗದ ಕೌಸಲ್ಯೆ, ಧ್ವನಿ ಎತ್ತಲು ಹೊರಟ ಮಗನನ್ನು ಸುಮ್ಮನಾಗಿಸಿ ಅನುಯಾಯಿಯಾಗಿಸಿದ ಸುಮಿತ್ರೆ ಮೊದಲಿಂದೇನೂ ಅಷ್ಟು ಪ್ರಭಾವಿಸಿದ ಪಾತ್ರಗಳಲ್ಲ." ಎಂದು ನಿಲ್ಲಿಸಿದಳು.
"ಕೆಟ್ಟ ಮಗನಿದ್ದರೂ ಕೆಟ್ಟ ತಾಯಿ ಇರಲಾರಳು. ಭರತನಿಗಾಗಿ ಎಲ್ಲವನ್ನೂ ಮಾಡಿದ ಕೈಕೇಯಿ ನಿನಗಿಷ್ಟವೇ ಹಾಗಾದರೆ..!?" ಎಂದು ಕೇಳಿದೆ.
"ಭರತನ ಹಾಗೆ ರಾಮನನ್ನೂ ಪ್ರೀತಿಸಿದ್ದ, ಮಮತೆಯಿಂದ ಕಂಡಿದ್ದ ತಾಯಿ ರಾಮನಿಗೆ ಎಸಗಿದ್ದ ನಂಬಿಕೆದ್ರೋಹವನ್ನು ಕಂಡ ಮೇಲೂ ಮತ್ತೆ ಕೈಕೇಯಿ ಇಷ್ಟ ಅನ್ನೋಕಾಗುತ್ತದೆಯೇ..?" ಎಂದು ಪ್ರಶ್ನಿಸಿದಳು.
"ರಾಮನೇ ಅವಳನ್ನು ಕ್ಷಮಿಸಲಿಲ್ಲವಾ..?! ಮಂಥರೆ ತಾನೆ ಅವಳ ಮನದಲ್ಲಿ ಕಹಿ ಮೂಡಿಸಿದ್ದು" ಎಂದೆ.
"ರಾಮ ಕೈಕೇಯಿಯನ್ನು ಕ್ಷಮಿಸಿದ. ಮಣಿಕಂಠ ಪೆರುಮಾದೇವಿಯನ್ನು ಕ್ಷಮಿಸಿದ. ಅದಕ್ಕೆ ಅವರು ದೇವರಾದರು. ಸ್ವಂತ ಮಕ್ಕಳ ಮೇಲಿನ ಮೋಹಕ್ಕೆ ಇದೆಲ್ಲವನ್ನೂ ಮಾಡಿದ್ದಕ್ಕೆ ಬೇರಾರನ್ನೋ ಕಾರಣ ಅನ್ನುವುದು ಹೇಗೆ..?
ಇವತ್ತಿನ ಕಾಲಘಟ್ಟದಲ್ಲಿಯೂ ಇಂತಹವರು ಇರುತ್ತಾರೆ. ನಮ್ಮಂಥ ದಡ್ಡರು ಅಮ್ಮನಷ್ಟೇ ಮಮತೆ ತೋರುತ್ತೇವೆ. ಕೆಲವೊಮ್ಮೆ ಅಮ್ಮನಿಗಿಂತಲೂ ಹೆಚ್ಚೇ ಪ್ರಾಶಸ್ತ್ಯ ನೀಡುತ್ತೇವೆ. ಅಮ್ಮನ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಅದು ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ ಯಾರೂ ಆಗಿರಬಹುದು. ಅವರ ವಿಶ್ವಾಸದ್ರೋಹ ಅಮ್ಮನ ಸ್ಥಾನವನ್ನಷ್ಟೇ ಕಳೆಯುವುದಿಲ್ಲ. ಮನುಷ್ಯರ ಮೇಲಿನ ನಂಬಿಕೆ, ವಿಶ್ವಾಸ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಹಾಗೆಂದು, ವನವಾಸ ಮಾಡೋದಿಲ್ಲ ನಾವು. ಆದರೆ, ಮತ್ತೆಂದೂ ಯಾರನ್ನೂ ನಂಬುವುದಕ್ಕೆ ಹೋಗೋದೇ ಇಲ್ಲ." ಎಂದು ಮನಸ್ಸಿನ ಕಹಿಯನ್ನು ಪ್ರಾಮಾಣಿಕವಾಗಿ ಹೊರ ಹಾಕುತ್ತಿದ್ದಳು.
"ಮತ್ತೆ ನನ್ನನ್ನೂ..?!" ಪ್ರಶ್ನಿಸಿದೆ ನಾನು.
"......" ನಿರುತ್ತರಳಾದ ಅವಳು ತನ್ನ ಮನಸ್ಸಿನ ಘಾಸಿಯನ್ನು ನನ್ನ ಬಳಿಯೂ ಸಂಪೂರ್ಣವಾಗಿ ಬಿಚ್ಚಿಡಲು ಸಿದ್ದಳಿರಲಿಲ್ಲ.
ಬಹುಶಃ, ಅವಳು ಹಣ ಕಳೆದುಕೊಂಡಿದ್ದರೆ ಯಾವುದಾದರೂ ರೂಪದಲ್ಲಿ ಮರಳಿ ಸಿಗುತ್ತಿತ್ತೇನೋ.. ಅವಳು ಕಳೆದುಕೊಂಡಿದ್ದು ನಂಬಿಕೆಯನ್ನು.
ಕೇವಲ ನಂಬಿಕೆಯನ್ನಲ್ಲ...! ಸಂಬಂಧಗಳ ಅಡಿಪಾಯವೇ ಆಗಿದ್ದ ನಂಬಿಕೆಯನ್ನು. ಮತ್ತೆಂದೂ ಗಟ್ಟಿಯಾಗದ ಬಾಂಧವ್ಯವನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ