ಭಾನುವಾರ, ಜುಲೈ 19, 2026

ಹಕ್ಕುದಾರ (ಬೆಳಕಿಂಡಿಯ ಕತೆಗಳು - 58)


 ಕಾರ್ಗತ್ತಲು, ಕುಳಿರ್ಗಾಳಿ ಬೀಸುತ್ತಿದ್ದ ಆ ಅಪರಾತ್ರಿಯಲ್ಲೂ ಕಣ್ಣಲ್ಲಿ ಬೆಳಕು ಮೂಡಿಸಿಕೊಂಡು ಬಾಗಿಲು ತೆಗೆದು ಅಲ್ಲೇ ಕೂರುತ್ತಾಳೆ ಅಮ್ಮ, ಎಂದಿನಂತೆ... ಅಂದು ಹೋದ ಈ ಜೀವದ ಹಕ್ಕುದಾರ ಇಂದಾದರೂ ಮರಳುತ್ತಾನೇನೋ ಎಂಬ ಆಸೆಯಿಂದ.


ಕೆಲಸ ಹುಡುಕುತ್ತೇನೆಂಬ ನೆಪಹೇಳಿ, ಮನೆಯಿಂದ ಇಂತದ್ದೇ ಒಂದು ಮಳೆಗಾಲದ ಕಾರ್ಗತ್ತಲ ರಾತ್ರಿಯಲ್ಲಿ ನಗ-ನಾಣ್ಯಗಳನ್ನೆಲ್ಲಾ ಗಂಟು ಕಟ್ಟಿ ಹೊರಟವ.. ಇಂದಾದರೂ ಬಂದಾನೇನೋ ಎಂಬ ಆಸೆಯಿಂದ ಕುಟುಕು ಜೀವ ಹಿಡಿದು ಕಾಯುತ್ತಿದ್ದಾಳೆ. ಎಷ್ಟಾದರೂ ಮಾತೃಹೃದಯವಲ್ಲವೇ? 

ಮಗ ಅತ್ತ ಐಷಾರಾಮಿ ಜೀವನ ನಡೆಸುತ್ತಾ ಬಂಗಲೆಯಲ್ಲಿ ಹೆಂಡತಿಯೊಡನೆ ಬೆಚ್ಚಗೆ ಹೊದ್ದು ಮಲಗಿದ್ದಾನೆ, ತನಗೊಬ್ಬಳು ತಾಯಿ ಇರುವಳು ಎಂಬುದನ್ನೂ ಮರೆತು..!


ತಾಯಿ ಕಾದಿರುವ ಮನೆಗೆ ಕಾರ್ಗತ್ತಲಿನಲ್ಲಿ ಬಂದನೊಬ್ಬ ಅತಿಥಿ. ಆತ ಆಕೆಯ ಮಗನಲ್ಲ, ಸಾವಿನ ರೂಪದ ವಿಧಿ.ಆತ ಮಗನಷ್ಟು ಕಲ್ಲು ಹೃದಯಿಯಲ್ಲ. ಕಾಯದಿದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಾನೆ. ಸಿಡಿಲಿನ ರೂಪದಲ್ಲಿ ಬಂದಿಳಿದ ಆತ, ಆಕೆಗೇ ಅರಿವಾಗದಂತೆ ತನ್ನ ನುಣ್ಣನೆ ತೋಳಿನಲ್ಲಿ ಬರಸೆಳೆದು ಮಗುವಿನಂತೆ ಮಲಗಿಸಿಕೊಂಡ. ತಾನೇ ಅವಳ ಹಕ್ಕುದಾರ ಎಂಬಂತೆ...


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ