ಭಾನುವಾರ, ಏಪ್ರಿಲ್ 26, 2020
ಅವಳೊಳಗಿನ ಕತೆಗಳು
*********************************
ನಿರಾಭರಣ ಸುಂದರಿಯಾದ ಅವಳ ಸೌಂದರ್ಯದ ರಹಸ್ಯ ಅವಳ ಮುಗ್ದ ಮುಗುಳ್ನಗು
**********************************
ಎಲ್ಲರನ್ನೂ ತಿರಸ್ಕಾರದಿಂದ ಧಿಕ್ಕರಿಸುತ್ತಾ ಬದುಕುತ್ತಿರುವವಳ ಕುರಿತು ಆಡುವವರಿಗೇನು ಗೊತ್ತು ಪ್ರೀತಿಯನ್ನು ಮೊಗೆದು ಕೊಟ್ಟು ಮೋಸ ಹೋದ ದೇವತೆ ಅವಳೆಂದು..
**********************************
ಅವಳು ಸತ್ತಳೆಂದು ಎಲ್ಲರೂ ದುಃಖಿಸುತ್ತಿರುವ ಹೊತ್ತಲ್ಲಿ ಅವಳ ಆತ್ಮ ಹೇಳುತ್ತಿತ್ತು. ಅವಳ ಆಸೆಗಳನ್ನು ಕೊಂದುಕೊಂಡು ಎಲ್ಲರ ಆಸೆಯಂತೆ ಬದುಕುವ ತೀರ್ಮಾನ ಮಾಡಿದಾಗಲೇ ಅವಳು ಸತ್ತಿದ್ದಳು, ಬದುಕಿದ್ದು ಅವಳ ದೇಹ ಮಾತ್ರ.
**********************************
ಅವಳ ಹಾಜರಿಯಲ್ಲಿ ಅವಳನ್ನು ತಮ್ಮ ಬದುಕಿನ ಪುಟವೊಂದರಂತೆ ಭಾವಿಸುತ್ತಿದ್ದವರಿಗೆ ಅವಳ ಗೈರು ಹಾಜರಿಯಲ್ಲಿ ಅರಿವಾದದ್ದು ಅವಳೊಂದು ಬೃಹತ್ ಗ್ರಂಥವೆಂದು.
**********************************
ಅವಳ ಚುಚ್ಚು ಮಾತು, ಪ್ರತಿಯೊಂದಕ್ಕೂ ತಡೆಯೊಡ್ಡುವ ಹಿಂದಿನ ಪ್ರೀತಿ ಅದೇಕೋ ಅವಳ ಸುತ್ತಮುತ್ತಲಿನವರಿಗೆ ಕಾಣಲೇ ಇಲ್ಲ.
************************************
ಕತೆಗೊಂದು ಜೀವಂತಿಕೆ ಸೃಷ್ಟಿಸಿ ಮಾಯವಾದಳು, ಕತೆ ಮುಗಿದ ನಂತರವೇ ಅರಿವಾದದ್ದು ಕತೆ ಮತ್ತು ಕತೆಯ ಜೀವಾಳವೇ ಅವಳೆಂದು
************************************
ಆಟ,ಪಾಠ,ಕಲೆ ಎಲ್ಲದರಲ್ಲೂ ಗೆಲುವು ಅವಳದ್ದೇ ಆದರೆ ಪ್ರೀತಿ ಪಡೆದುಕೊಳ್ಳುವುದರಲ್ಲಿ ಏಕೋ ಸೋತಿದ್ದಳು.
*************************************
ಅವಳನ್ನು ಸೋಲಿಸಿದೆ ಎಂಬ ಅಹಂಭಾವದಲ್ಲಿ ಮೆರೆಯುತ್ತಿದ್ದವನಿಗೆ ಗೊತ್ತಿರಲಿಲ್ಲ.. ತನ್ನ ಗೆಲುವು, ಅವಳ ಸೋಲು ಎರಡೂ ಅವಳು ಬಯಸಿದ್ದು ಮತ್ತು ಅದೇ ಅವಳ ಗೆಲುವೆಂದು.
*************************************
ಬೇಜಾರೇನಿಲ್ಲ ಅವಳಿಗೆ ಬೇರಾರ ಮೇಲೂ, ಅವಳ ಹೊರತು. ಪ್ರೀತಿ, ಕಾಳಜಿ ತೋರಿ ಮರುನಿರೀಕ್ಷಿಸುವ ತನ್ನ ಕುರಿತೇ ಅವಳಿಗೆ ಬೇಜಾರು ಅಷ್ಟೇ.
**************************************
ಹಣದಿಂದ ಪ್ರತಿಯೊಂದನ್ನೂ ಕೊಂಡುಕೊಳ್ಳಬಹುದೆಂಬ ಅಹಂನಲ್ಲಿದ್ದವನಿಗೆ ಅವಳು ಹೇಳಿದ್ದಳು. ಹಣದಿಂದ ನೀನು ಕೊಂಡುಕೊಳ್ಳಬಹುದಾದದ್ದು ನನ್ನ ದೇಹವನ್ನಷ್ಟೇ.. ಮನಸ್ಸನ್ನಲ್ಲ ಎಂದು.
***************************************
ಮಿಥ್ಯವೆಂದು ತಿಳಿದಿದ್ದರೂ ಅದನ್ನು ಮುಚ್ಚಿಟ್ಟು ಸತ್ಯವನ್ನಾಗಿಸಲು ಪಣತೊಟ್ಟು ಅವನನ್ನು ಕೆಟ್ಟತನದಿಂದ ಒಳ್ಳೆಯತನಕ್ಕೆ ಪರಿವರ್ತಿಸಿದವಳ ಹೆಸರು "ಮುಗ್ಧ ಕಿನ್ನರಿ" ಎಂದಿರಬಹುದೇ..?***************************************
ಎಲ್ಲವೂ ಬದಲಾಗಬಹುದು ಆದರೆ ಅವಳೊಳಗಿನ ತಾಯ್ತನದ ಮಿಡಿಯುವ ಮನಸ್ಸೊಂದನ್ನು ಬಿಟ್ಟು
***************************************
ಮಡಿಲಲ್ಲಿಟ್ಟು ಜಗದ ಪ್ರೀತಿಯನ್ನು ಪರಿಚಯಿಸಿದವಳಿಗೆ, ಅವಳು ಅವನ ಆಸರೆ ಬಯಸಿದ ಸಂಧರ್ಭದಲ್ಲಿ ಜಗದ ಕ್ರೌರ್ಯವನ್ನು ಪರಿಚಯಿಸಿದ.
****************************************
ಬಂಧ ಬೆಸೆದುಕೊಂಡಿತೆಂದು ಖುಷಿ ಪಟ್ಟವಳಿಗೆ ಅದು ಬಂಧನವೆಂಬ ಪರಿಚಯ ಮಾಡಿಕೊಟ್ಟ. ಬಂಧನವ ಧಿಕ್ಕರಿಸಿ ನಡೆದವಳು ಅವನ ಅಹಂ ಅನ್ನೂ ತುಳಿದು ನಡೆದಿದ್ದಳು. ಮತ್ತೆ ಸಾವರಿಸಿಕೊಳ್ಳದಂತೆ..
****************************************
ದೊಡ್ಡ ದನಿಯಲ್ಲಿ ಅವನನ್ನು ಗದರಿಸಿ, ಒಳಕೋಣೆ ಸೇರಿದವಳ ಬಿಕ್ಕು ಯಾರಿಗೂ ಕೇಳಲೇ ಇಲ್ಲ.
*****************************************
ಬದುಕಿಗೊಂದು ಗುರಿ ಇರಬೇಕು ಎಂದು ಭಾಷಣ ಮಾಡುತ್ತಿದ್ದವನ ಮಾತು ಕೇಳಿ ಹೇಳಿದಳು. ಗುರಿ ಸಾಧನೆಯಾದರೆ ಸಾಲದು ಅದನ್ನು ಸಂಭ್ರಮಿಸುವವರನ್ನೂ ಸಂಪಾದಿಸಿರಬೇಕು.
*****************************************
ಅವಳ ಮನದ ಭಾವಗಳ ಅರ್ಥೈಸುವಿಕೆ ಅದೆಷ್ಟೇ ಪುಸ್ತಕ ಓದಿದರೂ ಅರ್ಥವಾಗದ್ದು
*****************************************
ಎಲ್ಲಾ ಭರವಸೆಗಳ ತಂತು ಕಡಿದ ಮೇಲೆ ಕೊನೆಗುಳಿಯುವುದು, ಆಸರೆಯಾಗುವುದು ತಾನೇ ಧಿಕ್ಕರಿಸಿ ನಡೆದಿದ್ದ ಅವಳು, ಅವಳ ಭರವಸೆ, ಅವಳ ಮಡಿಲು, ಅವಳ ಒಲವು.
~ವಿಭಾ ವಿಶ್ವನಾಥ್
ಭಾನುವಾರ, ಏಪ್ರಿಲ್ 19, 2020
ನನ್ನ ಭಾವ ನನ್ನದಷ್ಟೇ
ಕೈ ಹಾಕಿ ಕದಡದಿರಿ
ಭಾವನೆಗಳ ಚೌಕಟ್ಟಿನೊಳಗೆ
ಅಂಕೆ ಮೀರಿ ಬರದಿರಿ
ನನ್ನ ಭಾವ ನನ್ನದು, ನನ್ನದಷ್ಟೇ
ಅದಕ್ಕೆ ನಿಮ್ಮ ನೆರಳ ಸೋಕಿಸದಿರಿ
ಆ ಕ್ಷಣದ ಸವಿಯ ಸಿಹಿಯನೆಂದೂ
ಕಹಿ ಮಾಡುವ ಯತ್ನ ಮಾಡದಿರಿ
ಲಂಗು ಲಗಾಮಿಲ್ಲದ ನಾಲಿಗೆಯ
ಬಳಸಿ ಹರಿಹಾಯದಿರಿ
ಮೇರೆ ಮೀರಿದ ಮಾತನ್ನಾಡಿ
ನಿಮ್ಮ ಗೌರವ ಕಳೆದುಕೊಳ್ಳದಿರಿ
ಬರೆದ ಭಾವ, ಭಾಷ್ಯ ನನ್ನದು
ನೀವದರ ಗೇಲಿ ಮಾಡದಿರಿ
ಮೆಚ್ಚುಗೆಯ ಮಾತನಾಡದಿದ್ದರೂ
ಚುಚ್ಚು ಮಾತನ್ನಂತೂ ಆಡದಿರಿ
ಇಷ್ಟು ದಿನ ಆದದ್ದು ಆಗಿ ಹೋಯಿತು
ಇನ್ನಾದರೂ ಎಚ್ಚೆತ್ತುಕೊಳ್ಳಿರಿ
ಒಳ್ಳೆಯತನಕ್ಕೂ ಮಿತಿ ಇದೆ
ನಿಮ್ಮ ವರ್ತನೆಯಿಂದ ಕೆಟ್ಟವಳನ್ನಾಗಿಸದಿರಿ
~ವಿಭಾ ವಿಶ್ವನಾಥ್
ಭಾನುವಾರ, ಏಪ್ರಿಲ್ 12, 2020
ನನ್ನಪ್ಪ ನನ್ನ ವಿಶ್ವ
ಆದರೆ,ಅವನೇ ನನ್ನ ವಿಶ್ವ
ನನ್ನಪ್ಪ ದೂರ್ವಾಸನಲ್ಲ
ಆದರೆ, ಅವನ ಕೋಪಕೇಕೋ ಹೆದರಿಕೆ
ನನ್ನಪ್ಪ ಸಾಮ್ರಾಟನಲ್ಲ
ಆದರೂ ನಾನೇ ಅವನ ರಾಜಕುಮಾರಿ
ನನ್ನಪ್ಪ ಹಠಮಾರಿಯಲ್ಲ
ಆದರೆ, ಆತನ ನಿರ್ಧಾರಗಳು ಅಚಲ
ನನ್ನಪ್ಪ ಭಾಷಣಕಾರನಲ್ಲ
ಆದರೆ,ಆತನ ಮಾತುಗಳೇ ನನ್ನ ಸ್ಫೂರ್ತಿ
ನನ್ನಪ್ಪ ನ್ಯಾಯಾಧೀಶನಲ್ಲ
ಆದರೆ,ಆತನ ಮಾತ ಮೀರಿ ನಡೆಯುವುದಿಲ್ಲ
ನನ್ನಪ್ಪ ಅತಿ ಭಾವುಕನಲ್ಲ
ಆದರೆ, ಭಾವನೆಗಳಿಗೆ ಸ್ಪಂದಿಸುವವ
ನನ್ನಪ್ಪ ಶಿಲ್ಪಿಯಲ್ಲ
ಆದರೆ,ನನ್ನ ವ್ಯಕ್ತಿತ್ವವನ್ನು ರೂಪಿಸುವವ
ನನ್ನಪ್ಪನನ್ನು ನಾನು ಪೂಜಿಸುವುದಿಲ್ಲ
ಏಕೆಂದರೆ, ನಾನು ಅವನನ್ನು ಪ್ರೀತಿಸುವೆ
~ವಿಭಾ ವಿಶ್ವನಾಥ್
ಭಾನುವಾರ, ಏಪ್ರಿಲ್ 5, 2020
ಒಲವ ಹೊರೆ ಹೊರಿಸಿದವಳೇ..
ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು.
ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು ಪಸರಿಸುವ ಸುಗಂಧದಂತೆ ನಿನ್ನ ಗುಣ. ನೀನು ನನ್ನ ಸುತ್ತ ಇರುವಾಗಲೆಲ್ಲಾ ನಿನ್ನದೇ ಗುಂಗು ಹಿಡಿಸಿಬಿಡುತ್ತೀಯ.. ಆದರೂ, ನಿನ್ನ ಒಳ್ಳೆಯತನದ ಆಜ್ಞೆಗೆ ಗುಲಾಮನಾಗಬೇಕಾದಾಗ ಅದೇಕೋ ಅಸಹಾಯಕನಾಗಿ ಬಿಟ್ಟೆನೇನೋ ಎನ್ನಿಸಿಬಿಡುವುದು ಸುಳ್ಳಲ್ಲ. ನನ್ನಂತ ಬಲಿಷ್ಠನನ್ನು ಸಹಾ ಮೃದುವಾಗಿಸುವುದು ನೀನೋ, ನಿನ್ನ ಗುಣವೋ, ನಿನ್ನ ಒಲವೋ ಅರಿವಿಗೆ ನಿಲುಕದ್ದು..
ಸ್ಪರ್ಶ ಮಣಿ ಎಂಬ ಮಣಿಯೊಂದಿದೆ ಎಂದು ಕೇಳಿದ್ದೆ. ಅದು ಕಬ್ಬಿಣವನ್ನು ತಾಕಿದ ತಕ್ಷಣ ಕಬ್ಬಿಣ ಚಿನ್ನವಾಗಿ ಬದಲಾಗುವುದಂತೆ.. ನೀನೂ ಅಂತಹಾ ಸ್ಪರ್ಶಮಣಿಯೇ.. ಇಲ್ಲದಿದ್ದರೆ ನಿನ್ನಿಂದ ನನ್ನಂತಹಾ ನಿರ್ಭಾವುಕ ಕೂಡಾ ಭಾವನೆಗಳೊಂದಿಗೆ ಬೆರೆಯುವುದ ಕಲಿತ ಎಂದರೆ.. ಅದರ, ಅಂದರೆ ನಿನ್ನ ಮಹತ್ವ ಎಷ್ಟಿರಬೇಕೆಂದು ನೀನೇ ಯೋಚಿಸು..
ಆದರೂ, ನೀನು ಬಂದ ಮೇಲೆ ಬದುಕು ಬದಲಾಯಿತು ಎಂಬುವುದನ್ನು ಒಪ್ಪಲು ಕೊಂಚ ಕಷ್ಟವೇ. ಮನಸ್ಸಿಗಲ್ಲ, ಎಲ್ಲರೆದುರು. ಏಕೋ ಈ ಬದಲಾವಣೆ ನಿನ್ನೊಡನೆ ಮಾತ್ರವೇ.. ಅಷ್ಟು ಬೇಗ ನಾನು ಬದಲಾದರೆ ಅದು ಎಲ್ಲರಿಗೂ ನಾಟಕೀಯ ಎನ್ನಿಸಬಹುದು. ಏಕೆಂದರೆ, ಎಲ್ಲರೂ ಕೆಟ್ಟತನದ ಬದಲಾವಣೆಯನ್ನು ಕ್ಷಣಮಾತ್ರದಲ್ಲಿ ಒಪ್ಪುತ್ತಾರೆ ಆದರೆ ಒಳ್ಳೆಯತನದ ಬದಲಾವಣೆಯನ್ನು ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನೀನು ನನ್ನ ಎಲ್ಲಾ ಬದಲಾವಣೆಯ ಕಾರಣ ಎಂಬುದನ್ನು ಮನಸ್ಸಿನಲ್ಲೇ ಕೂಗಿ ಕೂಗಿ ಹೇಳುತ್ತೇನೆ. ಆದರೆ, ಅದು ಹೊರ ಜಗತ್ತಿಗೆ ಕೇಳುವುದಿಲ್ಲ. ಕೇಳಲೂಬಾರದು. ಅವರಿಗೆ ಇದರ ಗಂಧ ಪಸರಿಸಿದರೆ ಸಂಬಂಧಕ್ಕೆ ಒಂದು ಬಣ್ಣ ಬಳಿದು ಬೇರೆಯ ರೀತಿಯೇ ಪ್ರದರ್ಶನಕ್ಕೆ ಇಟ್ಟುಬಿಡುತ್ತಾರೆ.
ಬದುಕಿನಲ್ಲಿ ನಾನು ದೇವರನ್ನು ಪ್ರಾರ್ಥಿಸಿದವನೇ ಅಲ್ಲ ಆದರೆ ಇತ್ತೀಚೆಗೆ ದೇವರನ್ನು ವಂದಿಸುವುದನ್ನು ಮರೆಯುವುದಿಲ್ಲ. ಪ್ರಾರ್ಥನೆ ನಿಸ್ವಾರ್ಥವಾಗಿದ್ದರೆ ಫಲಿಸುವುದೆಂದು ನೀನೇ ಹೇಳಿದ್ದೆಯಲ್ಲಾ.. ಹಾಲ್ಮನಸ್ಸಿನಂತಹಾ ಗೆಳತಿಯ ಒಲವು ಹೀಗೇ ಉಳಿದುಬಿಡಲಿ ಎಂದು ಕೇಳಿಕೊಳ್ಳುತ್ತೇನೆ. ನಿನ್ನಂತಹಾ ಗೆಳತಿಯನ್ನು ನನಗೆ ನೀಡಿದ್ದಕ್ಕೆ ವಂದಿಸುತ್ತೇನೆ.
ನಿನ್ನ ಒಲವಿನ ಹೊರೆಯ ಭಾರವನ್ನು ಇಳಿಸಿಕೊಳ್ಳುವುದು ಸುಲಭವಲ್ಲ ಎಂಬುದರ ಅರಿವು ನನಗಿದೆ. ಒಲವು ಹಾಗೇ ಅಲ್ಲವೇ..?? ಕೊಟ್ಟಷ್ಟೂ ಮುಗಿಯದು, ತುಂಬಿದಷ್ಟೂ ಪೂರ್ತಿಯಾಗದು. ಆದರೆ ಆ ಒಲವಿಗೆ ಹೆಸರಿಡಲಾರೆ, ಕಾಮದ ಯೋಚನೆಯನ್ನು ಸಹಾ ಸೋಕಿಸಲಾರೆ. ಜೀವನವಿಡೀ ನಿನ್ನ ಒಲವ ಹೊರೆ ಹೊತ್ತುಕೊಂಡೇ ನಿನ್ನ ಆತ್ಮೀಯನಾಗಿ ಬದುಕಿ ಬಿಡುವಾಸೆ.
ಗಗನ ಕುಸುಮವನ್ನು ಮುಟ್ಟಲು ಯೋಗ್ಯತೆ ಬೇಕು. ಆ ಯೋಗ್ಯತೆಯ ಮಾಪನ ಹಣ, ಅಂತಸ್ತಲ್ಲ. ಇಷ್ಟು ದಿನ ನಿನ್ನೊಡನಿದ್ದು ಅದನ್ನು ಅರಿತಿಲ್ಲ ಎಂದರೆ ನನ್ನಂತಹ ಮೂಢ ಬೇರೆ ಯಾರೂ ಇರಲಾರನೇನೋ..
ಒಲವನ್ನು ಬಂಧಿಸಲಾರೆ ಹಾಗೆಯೇ ಭಾವನೆಗಳನ್ನು ಅಧಿಕವಾಗಿಯೂ ಹರಿಬಿಡಲಾರೆ. ಎಲ್ಲದಕ್ಕೂ ಕಾರಣ ನಿನ್ನಂತಹಾ ಉತ್ತಮ ಗೆಳತಿಯನ್ನು ಕಳೆದುಕೊಳ್ಳುವ ಭಯ. ಬದುಕಿನಲ್ಲಿ ಇಂತಹಾ ಒಲವನ್ನು ಹೊರಿಸಿಕೊಳ್ಳುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬ.
ನಿನ್ನಿಂದ ಕಲಿತದ್ದನ್ನು ಮರೆಯಲಾರೆ, ಒಳ್ಳೆಯದನ್ನು ಮತ್ತೊಬ್ಬರಿಗೆ ಹಂಚುವೆ.
ಆದರೆ ಈ ಬರಹವನ್ನು ನಿನಗೆ ತೋರಿಸಲಾರೆ. ನೀನು ಹೊಗಳಿಕೆಗೆ ಉಬ್ಬಲಾರೆ, ತೆಗಳಿಕೆಗೆ ಕುಗ್ಗಲಾರೆ ಎಂದು ಅರಿವಿದ್ದರೂ ಸಹಾ...
ಆದರೂ ಈ ಬರಹ ಒಲವ ಹೊರೆ ಹೊರಿಸಿದವಳಿಗೆ ಅರ್ಪಣೆ
~ಇಂತಿ
ಒಲವ ಸಾಲಗಾರನಾಗಿರುವ ಆತ್ಮೀಯ
------------------------------------------
(~ವಿಭಾ ವಿಶ್ವನಾಥ್)
ಭಾನುವಾರ, ಮಾರ್ಚ್ 29, 2020
ಮತ್ತೆ ಹುಟ್ಟಿ ಬರುವನೇ ರಾಮ?
ಮತ್ತೆ ಹುಟ್ಟಿ ಬರುವನೇ ರಾಮ?
ತಂದೆ-ತಾಯಿಯರ ಕಣ್ಮಣಿಯಾಗಿ
ಸತ್ಯಪಾಲಕ, ನರೋತ್ತಮನಾಗಿ
ಎಲ್ಲರಿಗೂ ಮಾದರಿಯಾಗಿ ಬದುಕಲು
ಮತ್ತೆ ಹುಟ್ಟಿ ಬರುವನೇ ರಾಮ?
ಸಿಂಹಾಸನದ ವೈಭೋಗವನೆಲ್ಲ ತೊರೆದು
ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು
ಸತ್ಯ-ನಿಷ್ಠನಾಗಿ ಜನರ ಮನವ ಗೆಲ್ಲಲು
ಮತ್ತೆ ಹುಟ್ಟಿ ಬರುವನೇ ರಾಮ?
ಕಲಿಗಾಲದ ಜನರ ನಡುವಲೊಬ್ಬನಾಗಿ
ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ಪೋಷಿಸಿ
ಮನದ ಅಂಧಕಾರಕ್ಕೆ ಮುಕ್ತಿ ನೀಡಲು
ಮತ್ತೆ ಹುಟ್ಟಿ ಬರುವನೇ ರಾಮ?
~ವಿಭಾ ವಿಶ್ವನಾಥ್
ಗುರುವಾರ, ಮಾರ್ಚ್ 26, 2020
ಅಂದಿನಿಂದ ಇಂದಿನವರೆಗೂ ಮಹಿಳಾ ಸಾಹಿತ್ಯ
ಭಾನುವಾರ, ಮಾರ್ಚ್ 22, 2020
ಅವನು ಬರಲೇ ಇಲ್ಲ
ಗುರುವಾರ, ಮಾರ್ಚ್ 19, 2020
ತೇಜಸ್ವಿ ಎಂದೆಂದಿಗೂ ಅಚ್ಚಳಿಯದ ತೇಜಸ್ಸು
"ಓದುಗರನ್ನು ಗೆಲ್ಲಬೇಕು,ಪ್ರಶಸ್ತಿಗಳನ್ನಲ್ಲ" ಎಂಬ ಧ್ಯೇಯಕ್ಕೆ ನಿಷ್ಠರಾಗಿ ಬರೆದ ತೇಜಸ್ವಿಯವರು ತಮ್ಮ ಬರಹಗಳಿಂದ ಕೋಟ್ಯಾಂತರ ಓದುಗರನ್ನು ಗೆದ್ದಿದ್ದಾರೆ, ಗೆಲ್ಲುತ್ತಲೂ ಇದ್ದಾರೆ. ಇವರ ಬರಹಗಳಲ್ಲಿ ಅದ್ಭುತ ಕಲಾಸೃಷ್ಠಿ ಇದೆ, ಜೀವನದೃಷ್ಟಿ ಇದೆ, ತತ್ವ ಚಿಂತನೆಗಳಿವೆ. ತಮ್ಮದೇ ಬದುಕಿನ ಅಪೂರ್ವ ವ್ಯಾಖ್ಯಾನವಿದೆ, ದೂರದೃಷ್ಟಿತ್ವವಿದೆ. ಒಮ್ಮೆ ತೇಜಸ್ವಿಯವರ ಪುಸ್ತಕಗಳನ್ನು ಓದಲು ಶುರು ಮಾಡಿದರೆ, ಓದಿಸಿಕೊಂಡು ಹೋಗುವ ಓದಿನ ಓಘದ ಮಧ್ಯೆ ಓದುಗ ಕಳೆದು ಹೋಗುತ್ತಿದ್ದಾನೆ. "ಮುಖ್ಯ ವಿಚಾರವನ್ನು ಬಿಟ್ಟು ಅಡ್ಡದಾರಿ ಹಿಡಿಯಬೇಡಿ" ಎಂದು ಜನತೆಗೆ ಸಂದೇಶ ನೀಡುತ್ತಾ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ದೂರವಿದ್ದರೂ ತಮ್ಮ ಬರವಣಿಗೆಯ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ನಮ್ಮ ಸುತ್ತ-ಮುತ್ತಲಿನ ಜನರೇ ತಮ್ಮ ಜೀವನವನ್ನು ತೋರಿಸುವಂತೆ ತೇಜಸ್ವಿಯವರ ಕಥಾ ಪಾತ್ರಗಳು ಭಾಸವಾಗುತ್ತವೆ. ಇಂತಹ ಒಂದು ಪಾತ್ರವೇ ತಬರಸೆಟ್ಟಿ. ತಬರನ ಕಥೆಯಲ್ಲಿ ಬರುವ ತಬರ ಇಂದಿನ ಪರಿಸ್ಥಿತಿಗೂ ಹಿಡಿದ ಕೈಗನ್ನಡಿಯಾಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದ ತಬರ ಸ್ವಾತಂತ್ರ್ಯಾ ನಂತರ ಅನೇಕ ಕಡೆ ವರ್ಗಾವಣೆಯ ಕಷ್ಟಕ್ಕೆ ಸಿಲುಕಿ ಪಡುಗೆರೆಯ ಮುನಿಸಿಪಾಲಿಟಿ ನೌಕರನಾಗುವ ಹೊತ್ತಿಗೆ ನಿವೃತ್ತಿಯ ವಯಸ್ಸಿಗೆ ಬಂದಿದ್ದ. ತಬರನ ಮನಸ್ಸಿನ ಆತಂಕಗಳು ಉನ್ಮಾದ ಅಥವಾ ಅಸಂಬದ್ಧವಾಗಿರದೆ ಪಡುಗೆರೆಯ ಆಡಳಿತ ವೈಖರಿಯಿಂದ ಉದ್ಭವವಾದುದಾಗಿತ್ತು. ಒಂದೊಮ್ಮೆ ತಬರ ಬರೆದ ರಸೀತಿಗೆ ಇನ್ನೂ ವಸೂಲಾಗದೆ ಅವನ ಸಂಬಳಕ್ಕೆ ಕತ್ತರಿ ಬೀಳುವ ಪರಿಸ್ಥಿತಿಯಲ್ಲಿ ಪಡಿಪಾಟಲು ಪಡುತ್ತಿರುವಾಗಲೇ, "ದುರ್ಭಿಕ್ಷದಲ್ಲಿ ಅಧಿಕ ಮಾಸ" ಎಂಬಂತೆ ಅವನ ಹೆಂಡತಿಗೆ ಮಧುಮೇಹ ಆವರಿಸಿತ್ತು. ಈ ಮಧುಮೇಹದ ಚಿಕಿತ್ಸೆಗಾಗಿ ಹಣ ಹೊಂದಿಸಲು ತಬರ ಪಡಿಪಾಟಲು ಪಡುತ್ತಿದ್ದಾಗ, ಯಾರೋ ಹೇಳಿದಂತೆ ಫ್ರಾವಿಡೆಂಟ್ ಫಂಡನ್ನು ಪಡೆಯಲು ಕಛೇರಿಯಿಂದ,ಕಛೇರಿಗೆ ತಿರುಗಿ ಸಂಬಳವನ್ನಷ್ಟೇ ಅಲ್ಲದೆ, ಗ್ಯಾಂಗ್ರೀನ್ ಆದ ಹೆಂಡತಿಯನ್ನೂ ಕಳೆದುಕೊಂಡ. ತನ್ನ ಪೆನ್ಶನ್ ಹಣವನ್ನೂ ಪಡೆಯದ ತಬರ ಸ್ವಾತಂತ್ರ್ಯ ದಿನಾಚರಣೆಯ ಬೆಳ್ಳಿಹಬ್ಬದ ಆಚರಣೆಯಂದೇ ಹುಚ್ಚನೆಂಬ ಪಟ್ಟ ಹೊತ್ತು, ದುರಂತ ನಾಯಕನಾದ.ಎಲ್ಲೋ ಕೆಲವರಿಗೆ ಮಾತ್ರ ಅವನನ್ನು ಕಂಡಾಗ ನಮ್ಮ ಭೀಕರ ವ್ಯವಸ್ಥೆಯ ವಿರಾಡ್ರೂಪ ಮಿಂಚುತ್ತಿತ್ತು. ಯಾವುದೋ ಅರಿಯದ ಭೀತಿಯಲ್ಲಿ ಅವರು ನಡುಗುತ್ತಿದ್ದರು.
ಅವರಂತೆಯೇ ಇಂದು ನಾವೂ ಸಹ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ. ತೇಜಸ್ವಿಯವರು ಅಂದಿನ ದಿನಗಳಲ್ಲಿಯೇ ಬಿಚ್ಚಿಟ್ಟಿರುವ ಈ ಲಂಚಾವತಾರಿ ಸಮಸ್ಯೆಗೆ ಇಂದಿನ ಜನಾಂಗದಲ್ಲಿಯಾದರೂ ಪರಿಹಾರ ನೀಡಬೇಕಾಗಿದೆ. ಇಂತಹ ದಿನಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಪರಿಹಾರವನ್ನು ನೀಡಲು ಹೊರಟಿರುವ ಸಲಹೆಗೆ ಕೈ ಜೋಡಿಸಿದರೆ ಅಡ್ಡದಾರಿಯನ್ನು ಹಿಡಿಯದೆ, ರಾಜಮಾರ್ಗದಲ್ಲಿಯೇ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ದುಡಿದರೆ ತಬರನ ಕಥೆಯ ಅಂತ್ಯವನ್ನು ಬದಲಾಯಿಸಿ ತೇಜಸ್ವಿಯವರ ಅಚ್ಚಳಿಯದ ತೇಜಸ್ಸನ್ನು ಕಂಡುಕೊಳ್ಳಬಹುದಾಗಿದೆ.
-ವಿಭಾ ವಿಶ್ವನಾಥ್
ಭಾನುವಾರ, ಮಾರ್ಚ್ 15, 2020
ಆಷಾಡದ ಅನುಭೂತಿ
ಆಷಾಡ ಮಾಸವೇ ಮುಗಿವ ಹೊತ್ತಲ್ಲಿ ಹೀಗೊಂದು ಅನುಭೂತಿ..
ಆಷಾಡದಲ್ಲಿ ನವವಿವಾಹಿತರ ಚಿರವಿರಹ ಒಂದು ಅನುಭೂತಿಯಾದರೆ, ಸುತ್ತಲೂ ಸುಳಿದಾಡುವ ಸುಳಿಗಾಳಿಯದ್ದೇ ಮತ್ತೊಂದು ವಿಚಿತ್ರ ಅನುಭವ.
ಮಂದಗಾಮಿನಿಯಂತೆ ಸುಳಿಗಾಳಿಯಂತೆ ಬೀಸುತ್ತಿದ್ದ ಗಾಳಿಗೆ ಭೋರೆಂದು ಬೀಸುವ ತವಕ. ಕಿವಿಗಂತೂ ಯಾವುದೋ ರೌದ್ರನರ್ತನದ ಆಲಾಪದಂತೆ ಕೇಳಿಸುತ್ತಾ, ತನ್ನ ವಿರಹವನ್ನು ಅರುಹುತ್ತಿರುವ ಪ್ರೇಮಿಯಂತೆ ಭಾಸವಾಗುತ್ತದೆ. ಎಲ್ಲಿಂದಲೋ ಎಲ್ಲಿಗೋ ಪಯಣಿಸುತ್ತಿರುವ, ಯಾರ ಅಂಕೆಗೂ ನಿಲುಕದ, ಯಾರನ್ನೋ ಹುಡುಕಿ ಸಿಗದಾದಾಗ ಪ್ರಲಾಪಿಸುವ ಆರ್ತನಾದದಂತೆ ಅನ್ನಿಸುತ್ತದೆ.
ಆಷಾಡ ಮಾಸಕ್ಕೆ ಕರೆಯಲು ಬರುವ ಅಣ್ಣನ ನಿರೀಕ್ಷೆಯೂ ಈ ಸುಳಿಗಾಳಿಯ ಜೊತೆಜೊತೆಗೇ ಸುಳಿಯುತ್ತಾ, ಅಣ್ಣ ಇಂದೂ ಬರಲಿಲ್ಲವೆಂಬುದನ್ನು ಮತ್ತೆ-ಮತ್ತೆ ನೆನಪಿಸುತ್ತದೆ.ಅಣ್ಣನಿಗಾದರೂ ಈಗ ತಂಗಿಯ ನೆನಪೆಲ್ಲಿದೆ? ಅತ್ತಿಗೆಯ ವಿರಹ ಕಾಡುತ್ತಿರುವ ಹೊತ್ತಲ್ಲಿ ತಂಗಿ ನೆನಪಾಗುವುದಾದರೂ ಹೇಗೆ ಅಲ್ಲವೇ..?ಜೊತೆಗೆ ಈ ತಣ್ಣನೆ ಗಾಳಿಯ ಸ್ಪರ್ಶ, ಅದರೊಟ್ಟಿಗೆ ಬರುವ ಬರುವ ತುಂತುರು ಹನಿಗಳೂ ಅವನನ್ನು ಮನೆಯಲ್ಲೇ ನಿಲ್ಲುವಂತೆ ಮಾಡಿಬಿಡುತ್ತವೆ. ಅಮ್ಮನ ಕೈರುಚಿಯ ಚಹಾ ಕೂಡಾ ಸಪ್ಪೆಯೆನಿಸುತ್ತಿರುತ್ತದೆ.ನೆನಪುಗಳಿಗೇನು ಬರ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ತೋರಿಕೆಯ ಪ್ರೀತಿ ತೋರುವ ಅಣ್ಣನ ಮನಸ್ಸು ಕೂಡಾ ಶೀತಲ ಗಾಳಿಗೆ ಮಂಜಿನಂತಾಗಿರುತ್ತದೆ. ಅತ್ತಿಗೆಯ ಬರುವಿಕೆ ಮಾತ್ರ ಬೇಸರದ ಮಂಜನ್ನು ಕರಗಿಸಲು ಸಾಧ್ಯ.ಇತ್ತ ಅಣ್ಣನ ಬರುವಿಕೆಗೆ ಕಾದ ತಂಗಿ ಸುಸ್ತಾಗಿ, ಮಹಾಲಕ್ಷ್ಮಿಯಂತೆ ಇಲ್ಲಿಯೇ ಇರುವೆನೋ ಹೊರತು ಮಾರಿಯಾಗಿ ಆ ಮನೆಗೆ ಕಾಡಲಾರೆ ಎಂಬ ಯೋಚನೆ ಮಾಡುತ್ತಾ ಅನ್ಯಮನಸ್ಕಳಾಗುತ್ತಿರುತ್ತಾಳೆ.
ಶುಭಕಾರ್ಯಗಳು ಜರುಗದ ಆಷಾಡ ಮಾಸ ಸದಾ ಗಜಿಬಿಜಿಯಂತಿರುವ ಕಾರ್ಯಕ್ರಮಗಳಿಗೆಲ್ಲಾ ಒಂದು ಸಣ್ಣ ವಿರಾಮ ನೀಡುತ್ತದೆ. ಶುಭ-ಅಶುಭಗಳೆಲ್ಲಾ ಮನಸ್ಸಿನಲ್ಲಿರುತ್ತದೆ, ಮಾಸದಲ್ಲಲ್ಲ ಎಂಬುದಕ್ಕೆ ವೈಜ್ಙಾನಿಕ ಉದಾಹರಣೆ ನೀಡಿ ಗಂಟೆಗಟ್ಟಲೆ ಭಾಷಣ ಮಾಡಿದವರೂ ಸಹಾ ಆಷಾಡ ಮಾಸದಲ್ಲಿ ಮದುವೆ ಕಾರ್ಯಕ್ರಮವನ್ನು ನೆರವೇರಿಸುವುದಿಲ್ಲ.
ಅದೇಕೋ ಮೋಡಗಳೂ ಸಹಾ ಮುಖ ಊದಿಸಿಕೊಂಡು ನೆಲಕ್ಕಿಳಿಯದೇ ಅಲ್ಲೇ ಕುಳಿತುಬಿಡುತ್ತವೆ. ಮುಖ ಗಂಟು ಹಾಕಿಕೊಂಡು ಕೂತ ಅಣ್ಣನನ್ನು ಪದೇ ಪದೇ ನೆನಪಾಗಿಸಿಬಿಡುತ್ತದೆ.
ಆಷಾಡದ ಅನುಭೂತಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಾಡಿಬಿಡುತ್ತದೆ. ಕಾಡದೇ ಬಿಡುವ ಮಾಸವಂತೂ ಇದಲ್ಲ. ಮುಖ ಧುಮ್ಮಿಸಿ ಕೂತ ಮೋಡ, ಮರೆಯಾದ ಬಿಸಿಲು, ನೆನಪಲ್ಲಷ್ಟೇ ಉಳಿದುಬಿಡುವ ತಂಗಿ, ವಿರಹವನ್ನು ಅನುಭವಿಸುವ ನವಜೋಡಿ, ಎಷ್ಟೇ ಬಿಸಿಯಿದ್ದರೂ ತಣ್ಣಗೆನಿಸುವ ಚಹಾ, ರಾತ್ರಿಯಲ್ಲಿ ಕಾಣದ ಚುಕ್ಕಿಗಳು, ಬೀರುವಿನಿಂದಲೇ ನನ್ನನ್ನು ಎತ್ತಿಕೋ ಎಂದು ಕರೆಯುವ ಸ್ವೆಟರ್ ಹೀಗೆ.. ಹುಡುಕಿದಷ್ಟೂ ಅನುಭೂತಿಗಳು ಆಷಾಡಕ್ಕೆಂದೇ ಕಾಪಿಟ್ಟಂತೆ ಕಾಣಸಿಗುತ್ತದೆ.
~ವಿಭಾ ವಿಶ್ವನಾಥ್



