ಸೋಮವಾರ, ಮಾರ್ಚ್ 25, 2019

ಅಮ್ಮ ಹಚ್ಚಿದೊಂದು ಹಣತೆ


ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ...

ಭಾವಗೀತೆಯನ್ನು ಕೇಳುತ್ತಾ ಇದ್ದರೆ, ಸಮಯ ಕಳೆದು ಹೋಗುತ್ತಿರುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ನಿನ್ನ ಧ್ವನಿಯಲ್ಲೇ ಮೂಡಿ ಬಂದಿರುವ ಈಹಾಡು ಕೇಳಿದಷ್ಟೂ ಕಿವಿಗೆ ಇಂಪು. ಆಳಕ್ಕಿಳಿದು ಅರ್ಥ ಮಾಡಿಕೊಂಡಷ್ಟೂ ಮನಕ್ಕೆ ತಂಪು ನೀಡುತ್ತಾ ಹೋಗುತ್ತದೆ. ಭಾವಗೀತೆ ಅದರಲ್ಲೂ,ಅಮ್ಮನ ಕುರಿತ ಭಾವಗೀತೆಯೇ ಮನಸ್ಸಿಗೆ ಹಿತ ನೀಡುತ್ತದೆ. ಅದರಲ್ಲೂ ಅಮ್ಮ ಹಾಡಿದ ಭಾವಗೀತೆ ಅಂದರೆ ಕೇಳಬೇಕಾ? ಆದರೂ ನೀನಿದ್ದಾಗ ನಿನ್ನ ಪಕ್ಕ ಕುಳಿತು ನೀನು ಹಾಡೋ ಈ ಭಾವಗೀತೆ ಕೇಳುವಾಗ ಅದರ ಆಳವೇ ಬೇರೆ, ಅರ್ಥವೇ ಬೇರೆ.

ನೀನು ಹಾಡೋ ಹಾಡು ಮನಸ್ಸಿಗೆ ಅಷ್ಟು ಹತ್ತಿರವಾಗೋದಾದ್ರೂ ಯಾಕೆ ಅಂತಾ ಯೋಚನೆ ಮಾಡುತ್ತೇನೆ... ಅಮ್ಮ ಅನ್ನುವುದೇ ಭಾವಗಳು ತುಂಬಿದ ಪದ. ಅದರಲ್ಲೂ ಅಮ್ಮ ಮತ್ತಷ್ಟು ಭಾವನೆ ಬೆರೆಸಿ ಹಾಡೋ ಹಾಡು ಇನ್ನೂ ಚೆಂದ. ಅದಕ್ಕೇ ಅನ್ಸುತ್ತೆ, ಅಮ್ಮನ ಹಾಗೆ ಅವಳ ಹಾಡು ಕೂಡಾ ಆಪ್ತ ಎನ್ನಿಸುವುದು.

ಎಲ್ಲರೂ ಹೇಳ್ತಾ ಇರ್ತಾರೆ ಅಮ್ಮನ ತರಹಾನೇ ಹಾಡ್ತೀಯಾ ಅಂತಾ, ಕೆಲವೊಮ್ಮೆ  ಕೆಲವರಂತೂ ಇನ್ನೂ ಮುಂದೆ ಹೋಗಿ ನಿಮ್ಮ ಅಮ್ಮನಿಗಿಂತಲೂ ಚೆನ್ನಾಗಿ ಹಾಡ್ತೀರ ಅಂತಾ ಹೇಳ್ತಾರೆ. ಆಗೆಲ್ಲಾ ಏನೋ ಉತ್ಸಾಹ, ಸ್ವರ್ಗಕ್ಕೆ ಮೂರೇ ಗೇಣು ಅಂತಾ ಅನ್ನಿಸೋ ಕ್ಷಣಗಳು. ನನಗೆ ಅಮ್ಮನ ಮಗಳು ಅಂತಾ ಅನ್ನಿಸಿಕೊಳ್ಳುವುದಕ್ಕಿಂತಾ, ನೀನು ಇಂತಹವಳ ಅಮ್ಮ ಅಂತಾ ಅನ್ನಿಸಿಕೊಳ್ಳಬೇಕಿತ್ತು ಅಂತಾ ಬಹಳಾ ಆಸೆ ಇತ್ತು. ಆದರೆ,ನೀನು ಅಲ್ಲಿಯವರೆಗೂ ಇರದೆ ಹೊರಟೇ ಬಿಟ್ಟೆಯಲ್ಲಾ..ಯಾಕೆ?ನೀನು ಮೊದಲಿನಿಂದಲೂ ಸ್ವಾಭಿಮಾನಿ ಅಂತಾ ಗೊತ್ತಿತ್ತು.ಆದರೆ ನಿನ್ನ ಸ್ವಾಭಿಮಾನ ಈ ಮಟ್ಟಕ್ಕಿದೆ ಅಂತಾ ಗೊತ್ತಿರಲಿಲ್ಲ.ಆದ್ರೂ ನಿನ್ನ ಹಾಡುಗಳನ್ನು ಕೇಳ್ತಾ ಇದ್ದರೆ, ನೀನು ಅವುಗಳ ಮೂಲಕ ಏನೋ ಹೇಳುವ ಪ್ರಯತ್ನದಲ್ಲಿದ್ದೀಯ ಅನ್ಸುತ್ತೆ. ನಿನ್ನಷ್ಟು ಇಂಪಾಗಿ ಹಾಡುವುದಕ್ಕೆ ಸಾಧ್ಯವೇ ಇಲ್ಲ ಅಂತಾ ಅನ್ನಿಸಿಬಿಡುತ್ತೆ. ಇದು ಸತ್ಯ ಕೂಡಾ..

ಯಾವಾಗ್ಲೂ ನೀನು ಹೇಳ್ತಾ ಇದ್ದೆಯಲ್ಲ,ಬೇರೆಯವರಿಗೋಸ್ಕರ ಹಾಡುವುದಕ್ಕಿಂತ ನಮಗೋಸ್ಕರ, ನಮ್ಮ ಆತ್ಮತೃಪ್ತಿಗೋಸ್ಕರ, ಪ್ರತಿಫಲವೇ ಬಯಸದೇ ನಿಸ್ವಾರ್ಥತೆಯಿಂದ ಹಾಡಿದಾಗ ನಾದದ ಇಂಪು ಜಾಸ್ತಿ ಅಂತಾ. ಅದು ನಿಜ, ತುಂಬಾನೇ ನಿಜ.ಆದರೆ, ಒಂದು ಪತ್ರ ಬಂದಿದ್ದೇ ನೆಪವಾಗಿ ಹೃದಯಾಘಾತದಿಂದ ಕುಸಿದವಳು  ಮತ್ತೆ ಮೇಲೆ ಏಳಲೇ ಇಲ್ಲ, ಯಾಕಮ್ಮಾ? ನಿನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲವಾ? ಅಥವಾ ನಾನು ನಿನ್ನನ್ನು ಬಿಟ್ಟು ಹೊರಡುವೆನೆಂದುಕೊಂಡೆಯಾ?

ನಿನ್ನ ಎಲ್ಲಾ ಕಾರ್ಯಗಳೂ ಮುಗಿದ ನಂತರ ಆ ಪತ್ರವನ್ನು ತೆರೆದೆ. ಅದರಲಿದ್ದದ್ದು ಹೀಗೇ, "ಗಂಡಿನ ಅಧೀನದಲ್ಲಿ ಬದುಕದ ಹೆಣ್ಣು ಅದೆಷ್ಟೇ ಪ್ರತಿಭಾವಂತೆಯಾದರೂ, ಅವಳ ಪೂರ್ಣತೆ ಗಂಡಿನಿಂದಲೇ.. ಅಂದು ನೀನು ನನ್ನನ್ನು ಧಿಕ್ಕರಿಸಿ ಬಂದು ನೆಲೆ ನಿಂತದ್ದು, ಈ ಹುಡುಗಿಗೇ ಆದರೆ, ಕೇಳು... ಆಕೆಯ ಹಾಡುಗಾರಿಕೆ ಅದೆಷ್ಟೇ ಮಧುರವಾಗಿದ್ದರೂ, ಆಕೆ ನಿನ್ನಂತೆ ಹಾಡಲಾರಳು. ಆಕೆಯ ಬದುಕು ಕೂಡಾ ನಿನ್ನಂತೆಯೇ ಅತಂತ್ರವಾಗಿಬಿಡುತ್ತದೆ. ಯಾಕೆಂದರೆ, ಅಪ್ಪನ ಅಥವಾ ಗಂಡನ ಬಲವಿಲ್ಲದೆ ಬದುಕಲು ಹೊರಟವಳ ನಿನ್ನ ನೆರಳಿನ ಪ್ರಭಾವವಲ್ಲದೇ ಮತ್ತೇನು ದೊರೆತಿರಲು ಸಾಧ್ಯ?"

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು..
ದೂರದಲ್ಲಿ ತೀರವಿದೆ
ಎಂದು ತೋರಲು..

ಆ ಸಾಮಾನುಗಳ ಮಧ್ಯದಲ್ಲಿ ಒಂದು ಡೈರಿ ಸಿಕ್ಕಿತು.ಆ ಡೈರಿಯನ್ನು ಓದುತ್ತಾಹೋದಂತೆ ನಿನ್ನ ವ್ಯಕ್ತಿತ್ವದ ಪರಿಚಯವಾಗುತ್ತಾ ಹೋಯಿತು.

ಸಂಗೀತ, ಸಂಪ್ರದಾಯಗಳನ್ನೇ ಉಸಿರಾಗಿಸಿಕೊಂಡಿದ್ದ ಕುಟುಂಬದಲ್ಲಿ ಬೆಳೆದು ಸಂಗೀತಕಾರ್ತಿಯೇ ಆಗಿದ್ದ ನೀನು ಸೇರಿದ್ದೂ ಅಂತಹಾ ಕುಟುಂಬವನ್ನೇ ಆದರೂ, ನಿನ್ನ ಖ್ಯಾತಿ ನಿನ್ನ ಗಂಡನಿಗೆ ನುಂಗಲಾರದ ತುತ್ತಾಯಿತು.ದಿನೇ-ದಿನೇ ಗಂಡಸಿನ ಅಹಂಕಾರ ಮೊಳೆಯುತ್ತಾ ಹೋಯಿತು, ಈರ್ಷೆ ಚಿಗುರಲಾರಂಭಿಸಿತು.ಅದೇ ಸಮಯದಲ್ಲಿ ನಿನ್ನ ಬಸಿರು ನಿಂತಿತು, ಮಗು ಹೆಣ್ಣು ಎಂಬ ಕಾರಣಕ್ಕೆ ಅದನ್ನು ತೆಗೆಸಲು ನೋಡಿದರು. ಗಟ್ಟಿ ನಿರ್ಧಾರ ಮಾಡಿ ಮಗುವಿನ ಕಾರಣ ಹೇಳಿ, ಈ ಮಗುವನ್ನು ಉಳಿಸಿಕೊಟ್ಟರೆ ನಾನು ಹಾಡುವುದಿಲ್ಲ ಎಂದು ಹೇಳಿ ಹಾಡುವುದರಿಂದ ಹಿಂದೆ ಸರಿದೆ.ಈರ್ಷೆ ಕಡಿಮೆಯಾದರೂ ನಿನ್ನನ್ನು ಪ್ರೀತಿಯಿಂದೇನೂ ಕಾಣಲಿಲ್ಲ ಆತ. ಮಗುವಿನ ಭವಿಷ್ಯಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಂಡು ಆ ಸಾರ್ವಭೌಮತ್ವದ ಪಾಶದಿಂದ ಹೊರನಡೆದೆ.

ನಿನ್ನ ಜೀವನದ ಎರಡನೇ ಮಜಲಿನ ಆರಂಭ ಇಲ್ಲಿಂದಲೇ ಅಲ್ಲವೇ? ಯಾರೊಡನೆಯೋ ಓಡಿ ಹೋದಳೆಂಬ ಪಟ್ಟ ಕಟ್ಟಿ, ತವರಿನವರನ್ನೂ ದೂರ ಮಾಡಿದ. ಅದಕ್ಕೆಲ್ಲಾ ಎದೆಗುಂದದೆ, ಮಗಳನ್ನು ಗಾಯಕಿಯನ್ನಾಗಿಸಲು ಹೊರಟಾಗ ಎದುರಾದ ಸವಾಲು ನಿನ್ನ ಅಸ್ತಿತ್ವವನ್ನೇ ಅಲುಗಾಡಿಸಿತು ಅಲ್ಲವೇ..?

5 ವರ್ಷದ ಪುಟ್ಟ ಕಂದನಿಗೆ ಜ್ವರರ ಬಂದುದೇ ನೆಪವಾಗಿ ಆಕೆ ನಿನ್ನನ್ನು ಅಗಲಿದಳು. ನಂತರ ನೋವು ಮರೆಯಲು ಅನಾಥಾಶ್ರಮಕ್ಕೆ ಬಂದ ನೀನು ನಿನ್ನ ಸಂಗೀತ ಪಾಠವನ್ನು ಆರಂಭಿಸಿದೆ.ನಂತರ ನಮ್ಮಿಬ್ಬರ ನಡುವೆ ಬೆಳೆದ ಸಲುಗೆಯಿಂದ ನನ್ನನ್ನು ದತ್ತು ತೆಗೆದುಕೊಂಡು ಸಂಗೀತಯಾನದ ಪಯಣ ಆರಂಭಿಸಿದೆ.

ಅಂದು ನಾನು ಅದನ್ನು ಓದಿದ ನಂತರ ನನ್ನ ಜನ್ಮ ರಹಸ್ಯಕ್ಕಿಂತ ಹೆಚ್ಚು ಕಾಡಿದ್ದು ನಿನ್ನ ಬದುಕಿನ ಬವಣೆ. ಆ ಪತ್ರ ಬರೆದವರಿಗೆ ಸರಿಯಾದ ಉತ್ತರ ನೀಡಬೇಕೆಂದು ಅಚಲತೆಯಿಂದ ಸಂಗೀತ ಅಭ್ಯಾಸ ನಡೆಸಿ ನಿನ್ನ ಕನಸನ್ನು ನನಸಾಗಿಸಿದ್ದೇನೆ. ಅಲ್ಲದೇ ಇಂದು ಅದೇ ವ್ಯಕ್ತಿಯ ಕೈಯಿಂದ ನನಗೆ ಸನ್ಮಾನ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸ್ವೀಕಾರ. ಗಂಡಿನ ನೆರಳಿಲ್ಲದ್ಯೂ ಹೆಣ್ಣು ಬದುಕಬಲ್ಲಳು. ಅತಂತ್ರಳಾಗಿ ಅಲ್ಲ ಸ್ವತಂತ್ರಳಾಗಿ ಎಂದು ಹೇಳಿ ನಿನ್ನ ಬದುಕಿನ ಪುಟವನ್ನು ಇಂದು ಎಲ್ಲರೆದುರು ಅನಾವರಣಗೊಳಿಸುತ್ತೇನೆ. ಒಂದು ಪುಟದ ಹೊರತುಪಡಿಸಿ.. ಏಕೆಂದರೆ ನೀನೇ ನನ್ನ ಅಮ್ಮ. ಜನ್ಮ ನೀಡಿಯೇ ಅಮ್ಮನಾಗಬೇಕಿಲ್ಲ, ಜೀವನ ಕೊಟ್ಟವಳೂ ಅಮ್ಮನೇ. ನಾನೆಂದಿದ್ದರೂ ನಿನ್ನ ಮಗಳೇ..

ಕೃತಕದೀಪ ಕತ್ತಲಲ್ಲಿ
ಕಳೆದು ಹೋಗದಂತೆ..
ಸೂರ್ಯ,ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ..

ಪ್ರತಿಫಲ ಬಯಸದೇ ಇನ್ನು ಮುಂದೆ ನಾನು ಅನಾಥಾಶ್ರಮದ ಮಕ್ಕಳಿಗೆ ಪಾಠ ಹೇಳಿ ಬದುಕುತ್ತೇನೆ ಅಮ್ಮ. ಎಲ್ಲರಿಗೂ ನಿನ್ನಂಥಾ ಅಮ್ಮ ಬೇಕು. ಯಾಕೆಂದರೆ ಅಮ್ಮ ಹಚ್ಚಿದ ಹಣತೆಯೇ ಮಕ್ಕಳ ಬದುಕಿನ ದಾರಿದೀಪ..
ಎಂದು ಅಮ್ಮನ ಭಾವಚಿತ್ರದ ಮುಂದೆ ಮಾತನಾಡಿ, ಆಶೀರ್ವಾದ ಪಡೆದು ಹೊರಟಳು ಗಾಯಕಿ. 

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ಹೊಮ್ಮಲು
ಮಿಡಿದ ಹಾಗೆ ವೀಣೆ

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..

-ವಿಭಾ ವಿಶ್ವನಾಥ್

ಶುಕ್ರವಾರ, ಮಾರ್ಚ್ 8, 2019

'ಅವಳ' ಕಥೆಗಳು

1. ಬಿದ್ದು ಎದ್ದವಳು
-------------------------
ಅವಳು ಎಡವಿ ಬಿದ್ದಿದ್ದಳು ರಸ್ತೆಯಲ್ಲಿ ಮಾತ್ರವಲ್ಲ, ಬದುಕಿನಲ್ಲಿಯೂ. ಅಷ್ಟೇ ವೇಗವಾಗಿ ಮೇಲೂ ಎದ್ದಿದ್ದಳು ಅಷ್ಟೇ ಸಶಕ್ತಳಾಗಿ.ಎಷ್ಟೆಂದರೆ ಮತ್ತೊಬ್ಬರನ್ನು ಕೈ ಹಿಡಿದು ಎತ್ತುವಷ್ಟು. ರಸ್ತೆಯಲ್ಲಿ ಬಿದ್ದಿದ್ದವರನ್ನು ಮಾತ್ರವಲ್ಲ, ಬದುಕಿನಲ್ಲಿ ಬಿದ್ದಿದ್ದವರನ್ನೂ ಸಹಾ.

2. ಬಾಡಿದ ಬದುಕು
--------------------------
ಹೂ ಬಾಡುತ್ತದೆ ಎಂದು ನೀರು ಚಿಮುಕಿಸುತ್ತಿದ್ದ ಬಾಲೆಯ ಬದುಕು ಶಿಕ್ಷಣವಿಲ್ಲದೆ ಮುದುಡಿ ಹೋಗುತ್ತಿತ್ತು.

3.ಕಳಂಕಿನಿ
---------------
ಬದುಕಿನ ಅನಿವಾರ್ಯತೆಗಾಗಿ ನಿತ್ಯವೂ ಹಗಲು ಇರುಳು ಎನ್ನದೆ ಪುರುಷರ ಸಂಗದಲ್ಲಿ ಸತ್ತು ಹುಟ್ಟುತ್ತಿದ್ದಳು. ಮನದ ಅಪವಿತ್ರತೆಯನ್ನು ತೊರೆದು, ಹೊಸ ಬದುಕನ್ನು ಕಟ್ಟಿಕೊಂಡ ನಂತರವೂ ಆಕೆ ಜನರ ಮನಃಪಟಲದಲ್ಲಿ ಕಳಂಕಿನಿಯಾಗಿಯೇ ಉಳಿದಳು.

4. ಮುಖವಾಡ
---------------------
ತನ್ನ ನೋವನ್ನೆಲ್ಲಾ ಮರೆತು ಮುಖದ ಮೇಲೆ ನಗು ತಂದುಕೊಂಡು ಸವಿ ಮಾತನಾಡುತ್ತಿದ್ದವಳಿಗೆ ಸಿಕ್ಕ ಬಿರುದು "ಮುಖವಾಡ ತೊಟ್ಟವಳು".

5. ಅನ್ನಪೂರ್ಣೇಶ್ವರಿ
---------------------------
'ಅನ್ನಪೂರ್ಣೇಶ್ವರಿ'ಯಾಗಿ ಎಲ್ಲರಿಗೂ ನಿತ್ಯವೂ ಅನ್ನದಾನ ಮಾಡುತ್ತಿದ್ದವಳಿಗೆ ಮಾತ್ರ ಗೊತ್ತಿತ್ತು ತನ್ನ ಬಾಲ್ಯದಲ್ಲಿ ಆನ್ನವಿಲ್ಲದೆ ಪರದಾಡುತ್ತಾ ಬರೀ ಗಂಜಿಯಲ್ಲೇ ಅರೆಹೊಟ್ಟೆಯಲ್ಲೇ ಜೀವನ ಸಾಗಿಸಿದ್ದರ ಕಷ್ಟ.

6. ಪ್ರೀತಿಯನ್ನಪ್ಪಿ
-----------------------
ಹದಿಹರೆಯದ ಕಾಮನೆಗಳಿಗೆ ಮನಸೋತು ಪ್ರೀತಿಯನ್ನಪ್ಪಿ ಹೊರಟವಳಿಗೆ ತಂದೆ-ತಾಯಿಯರ ಪ್ರೀತಿಯಪ್ಪುಗೆಯ ವಿದಾಯ ಸಲ್ಲಲೇ ಇಲ್ಲ.

7. ಭಿಕ್ಷುಕಿ
-------------
ಹೊಸದಾದ ಹವಾನಿಯಂತ್ರಿತ ಕಾರಿನಲ್ಲಿ ಕುಳಿತಿದ್ದವಳಿಗೆ ಮಗುವಿಗೆಂದು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಕಾಣಿಸಿದ್ದಳು. ಆ ಕ್ಷಣದಲ್ಲೇ ಅವಳಿಗೊಂದು ಪ್ರಶ್ನೆ ಕಾಡುತ್ತಿತ್ತು. ಪ್ರೀತಿಯ ಮಗುವಿಗಾಗಿ ಹಣವಿಲ್ಲದೆ ಭಿಕ್ಷೆ ಬೇಡುತ್ತಿರುವ ಅವಳು ಭಿಕ್ಷುಕಿಯೋ ಇಲ್ಲ ಹಣವಿದ್ದರೂ ಹಿಡಿ ಪ್ರೀತಿಗೆ, ಮಗುವಿಗೆ ಗಂಡನನ್ನು ಬೇಡುವ ತಾನು ಭಿಕ್ಷುಕಿಯೋ?

8. ಸ್ವಾತಂತ್ರ್ಯ
-----------------
ಮಹಿಳಾ ಸ್ವಾತಂತ್ರ್ಯದ ಕುರಿತು ಕವನ ವಾಚನ ಮಾಡುತ್ತಿದ್ದವಳಿಗೆ ಹಠಾತ್ತನೆ ಗಂಡನ ಮಾತು ನೆನಪಾಗಿತ್ತು. ಎಲ್ಲಾ ಕೆಲಸ ಮುಗಿಸಿ ಹೊರಡು ಆದರೆ ಸಂಜೆ 6 ಘಂಟೆಯ ಮೊದಲು ಮನೆಯಲ್ಲಿರಬೇಕು.

9.ಬಿರುದು
--------------
ಒಂದೂ ಮಕ್ಕಳಿಲ್ಲವೆಂಬ ಕಾರಣಕ್ಕೆ ಬಂಜೆಯೆಂಬ ಬಿರುದು ಇದ್ದವಳಿಗೆ ಅನಾಥಾಶ್ರಮದ ನೂರಾರು ಮಕ್ಕಳು "ಅಮ್ಮ" ಎಂಬ ಬಿರುದು ನೀಡಿದ್ದಾರೆ.

10. ಅರಿವು
-----------------
ರೂಪವಿದೆ ಎಂದು ಮೆರೆಯುತ್ತಾ, ಬೇರೆಯವರನ್ನು ಜರಿಯುತ್ತಿದ್ದವಳಿಗೆ ರೂಪ ನಶ್ವರ ಎಂಬುದು ಅರಿವಾಗಲು ಹೆಚ್ಚು ಸಮಯವೇನೂ ಬೇಕಿರಲಿಲ್ಲ, ಕಾಲವೇ ಅವಳಿಗೆ ಅರಿವು ಮೂಡಿಸಿತ್ತು.

11. ವಾಸ್ತವ
------------------
ಬರಹದಲ್ಲಿ ಪ್ರೀತಿಯ ಪರಿಯನ್ನು, ಪ್ರೇಮಿಗಳನ್ನು, ಸಂಬಂಧಗಳನ್ನು ಚೆನ್ನಾಗಿ ಕಟ್ಟಿಕೊಡುತ್ತಿದ್ದವಳ ಬದುಕಲ್ಲಿ ವಾಸ್ತವದಲ್ಲಿ ಪ್ರೀತಿಸಲು ಯಾರೂ ಇರಲಿಲ್ಲ. ಆಕೆ ಅನಾಥೆ ಎಂಬ ಸತ್ಯ ಓದುಗರಿಗೆ ತಿಳಿಯಲೇ ಇಲ್ಲ.

12. ಅನಕ್ಷರಸ್ಥೆ
--------------------
ಡಿಗ್ರಿಯಲ್ಲಿ ಓದಿನಲ್ಲಿ ಚಿನ್ನದ ಪದಕ ಗಳಿಸಿದ್ದ ಆಕೆ ಆಗ ತಾನೇ ಶುರು ಮಾಡಿದ್ದ ನೂತನ ಸಂಸಾರದಲ್ಲಿ ಬಂಧಗಳ ಸೆಳಕೂ ಗೊತ್ತಿಲ್ಲದ ಅನಕ್ಷರಸ್ಥೆ.

13. ನಪಾಸು
-----------------
ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಶ್ರೇಣಿಯಲ್ಲಿಯೇ ಉತ್ತೀರ್ಣಳಾಗುತ್ತಿದ್ದ ಅವಳು ವಧುಪರೀಕ್ಷೆಯಲ್ಲಿ ಪ್ರತಿಬಾರಿಯೂ ನಪಾಸು. ಕಾರಣ ಇಷ್ಟೇ, ತಳುಕು ಬಳುಕಿಗೆ ಒಗ್ಗದ ಆಕೆಯ ತತ್ವ, ಪ್ರಾಮಾಣಿಕತೆ ಮತ್ತು ಅದರ ದೆಸೆಯಿಂದ ಬಂದೊದಗದ ಆಕೆಯ ಆಸ್ತಿ.

14. ಕೃಷ್ಣ ಸುಂದರಿ
------------------------
ಸೃಷ್ಟಿಯಲ್ಲಿ ಕಪ್ಪು ಶ್ರೇಷ್ಠ ಎಂದೆಲ್ಲಾ ಭಾಷಣ ಮಾಡುತ್ತಿದ್ದ, ಕಪ್ಪು ಬಣ್ಣ ಇಷ್ಟವೆಂದು ಬೊಗಳೆ ಬಿಡುತ್ತಿದ್ದ ಮಹಾಶಯ ಮಗಳನ್ನು ದ್ವೇಷಿಸಲು ಕಾರಣ ಇಷ್ಟೇ.. ಮಗಳು ಕೃಷ್ಣ ಸುಂದರಿ.

15. ಪಾಠ
--------------
ಪ್ರೀತಿಯ ಮಾಯೆಯಲ್ಲಿ ಬೀಳಬೇಡ ಎಂದು ಮಗಳಿಗೆ ಕಿವಿಮಾತು ಹೇಳುತ್ತಿದ್ದ ಅಮ್ಮನಿಗೆ ಆಕೆಯ ವಿಫಲ ಪ್ರೇಮ ಚೆನ್ನಾಗಿಯೇ ಪಾಠ ಕಲಿಸಿತ್ತು.

~ವಿಭಾ ವಿಶ್ವನಾಥ್

ಶುಕ್ರವಾರ, ಫೆಬ್ರವರಿ 22, 2019

ಅವಳ ಪ್ರೀತಿ

ಅವಳ ಪ್ರೀತಿಯನು ತೀರಿಸ ಹೊರಟು
ಮತ್ತವಳದ್ದೇ ತೀರದ ಋಣದಲಿ ಬಂಧಿ

ನವಮಾಸ ಹೆತ್ತು, ಹೊತ್ತು, ತುತ್ತಿಟ್ಟಳು
ಬೆಚ್ಚಗೆ ಕಾಪಿಟ್ಟು, ನವೆಯದಂತೆ, ನೋಯದಂತೆ
ಕಷ್ಟಗಳಿಗೆಲ್ಲಾ ತಾನೇ ಗುರಾಣಿಯಂತಾದವಳು
ಒಳಗಿನ ಕತ್ತಿಯಿಂದ ಇಂಚಿಂಚೇ ತಿವಿಸಿಕೊಂಡಳು

ಅವಳ ನೆತ್ತರ ಹೀರುತ್ತಲೇ ನಿಂತವಗೆ
ಅವಳ ಕಸುವನೆಲ್ಲಾ ಬಸಿದ ಮೇಲೆ
ಅವಳ ಪ್ರೀತಿಯ ಅಗಾಧತೆ ಅರಿವಾಗಿತ್ತು
ಪ್ರೀತಿಯ ಸಾಲ ಆಗಲೇ ಆಗಸಕ್ಕೇರಿತ್ತು

ಪ್ರೀತಿಯ ಅಸಲು ತೀರಿಸುವೆನೆಂದು ಹೊರಟರೆ
ಅದಕ್ಕೀಗ ಬಡ್ಡಿ, ಚಕ್ರಬಡ್ಡಿಗಳೂ ಸೇರುತ್ತಿವೆ..
ಯಾವಾಗ ಇಷ್ಟೆಲ್ಲಾ ಪ್ರೀತಿಯ ಸಾಲವಾಯಿತೋ
ಅವಳ ಪ್ರೀತಿಯ ಸಾಲ ತೀರುವುದೇ ಎಂದಾದರೂ

ಅವಳ ಪ್ರೀತಿಯ ಅಳೆಯಲು ಹೊರಟರೆ
ಸಿಗುತ್ತಿಲ್ಲ ಯಾವುದೇ ಮಾಪಕಗಳೂ ಈಗ
ಆಳ, ಉದ್ದ, ಅಗಲ ಯಾವುದೂ ದಕ್ಕುತ್ತಿಲ್ಲ
ಅವಳ ಪ್ರೀತಿಯ ಅಳೆಯ ಹೊರಟ ಹುಚ್ಚ ನಾನು..

ಅವಳ ಪ್ರೀತಿಯ ದೊಡ್ಡ ಸಾಗರದೊಳಗೆ
ನನ್ನ ಪ್ರೀತಿಯು ಚಿಕ್ಕ ಹನಿಗೂ ಸಮವಿಲ್ಲವಲ್ಲ
ಹೀಗೇ ಹಪಾಹಪಿಸುವಾಗ ಅವಳಂದಳು
"ಅಯ್ಯೋ, ಹುಚ್ಚಪ್ಪಾ" ಪ್ರೀತಿಗೆ ಮಾಪನವುಂಟೇ?

ನಾನು ರಕ್ಕಸನಾದಾಗ ಮರುಗುತ್ತಲಿದ್ದವಳು
ಮನುಷ್ಯನಾದಾಗ ಅಂದದ್ದು ಒಂದೇ ಮಾತು
ನನ್ನ ಪ್ರೀತಿ ವಿಷಬೀಜ ಬಿತ್ತಿತೆಂದುಕೊಂಡಿದ್ದೆ
ಸದ್ಯ ಫಲವೀಯದಿದ್ದರೂ ವಿಷವಾಗಲಿಲ್ಲ

ಪ್ರೀತಿಯ ಋಣ ಎಂದೆಂದೂ ತೀರದೆಂದು
ಅರಿವು ಮೂಡುವಾಗ, ಪ್ರೀತಿಯಿಂದ ಮೈದಡವುತ್ತಲೇ
ಅವಳು ಕಣ್ಮುಚ್ಚಿದ್ದಳು, ನಾನು ಕಣ್ಬಿಟ್ಟಿದ್ದೆ
ಇತ್ತ ಅವಳ ಪ್ರೀತಿಯ ಸಾಲ ಅನಂತವಾಗುತಲಿತ್ತು

~ವಿಭಾ ವಿಶ್ವನಾಥ್

ಕ್ರಾಂತಿಯ ಕಿಚ್ಚು

ಧಗಧಗಿಸುತಲಿದೆ ಎಲ್ಲರೆದೆಯಲಿ
ದ್ರೋಹಿಗಳ ಸದೆಬಡಿಯುವ ಕಿಚ್ಚು

ನರರಾಕ್ಷಸರ ಕ್ರೂರ ಅಟ್ಟಹಾಸದ
ಕೇಕೆ ಕೆರಳಿಸಿತ್ತು ಇಡೀ ದೇಶವನೆ
ಬಾಂಬ್ ದಾಳಿಯ ಅಗ್ನಿಯ ರಾವು
ಕಮರಿಸಿತ್ತು ಮುಗ್ದರ ಆಸೆಗಳನು..

ಬಾರದ ಲೋಕದೆಡೆಗೆ ಪಯಣಿಸಿದರು
ಗಡಿಗಳ ರಕ್ಷಿಸಿದ್ದ ಹಲವಾರು ಯೋಧರು
ಕ್ರಾಂತಿವೀರರ ಮಾರಣ ಹೋಮಕೆ
ಪ್ರತೀಕಾರ ಸಲ್ಲುವುದೇ ತರವಲ್ಲವೇ?

ಯೋಧರ ಆತ್ಮಗಳೂ ಲೀನವಾಗದೆ
ಪಾಪಿಗಳ ಪ್ರಾಣ ಪಡೆಯಲು ಕಾದಿವೆ
ತಮ್ಮ ಬಲಿದಾನದ ನೆತ್ತರಿನೊಂದಿಗೆ
ನೂರಾರು ಮನಗಳಲಿ ಕಿಚ್ಚು ಹೊತ್ತಿಸಿವೆ

ಭಗ್ನ ದೇಹಗಳ ಕಂಡು ಸುಮ್ಮನಾದರೆ
ನಮ್ಮ ಜನ್ಮಕ್ಕೇ, ಮಾನವತೆಗೇ ಅವಮಾನ
ಇನ್ನಾದರೂ ಹಚ್ಚುವ ಕ್ರಾಂತಿಯ ಕಿಚ್ಚು
ಪಾಪಿಗಳ ಹತ್ಯೆಗೆ, ಪ್ರಾಣವನೇ ಪಣವಿಟ್ಟು..

~ವಿಭಾ ವಿಶ್ವನಾಥ್

ಮಂಗಳವಾರ, ಫೆಬ್ರವರಿ 19, 2019

ಗಜಲ್-02

ಬಾಲ್ಯವಿವಾಹದ ಕುಣಿಕೆಗೆ ದೂಡದಿರಿ ಎಂದಿಗೂ
ಕಲಿಕೆಯ ತೊರೆಸಿ ಸೆರೆಯಾಳಾಗಿಸದಿರಿ ಎಂದಿಗೂ

ಪೆನ್ನು ಪುಸ್ತಕ ಹಿಡಿವ ಪುಟ್ಟ ಕೈಗಳನು
ಅನ್ಯಾಯವಾಗಿ ದೂರ ಸರಿಸದಿರಿ ಎಂದಿಗೂ

ಮುಗ್ದ ಮನಗಳು ಕಟ್ಟಿದ ಕಲಿಯುವ ಕನಸ
ಚಿವುಟಿ ಹಾಕಿ ಘಾಸಿಗೊಳಿಸದಿರಿ ಎಂದಿಗೂ

ಚಿನ್ನದ ಮಾಂಗಲ್ಯದ ಸಂಕೋಲೆ ತೊಡಿಸಿ
ಬಾಳನೇ ಹೊನ್ನ ಶೂಲಕ್ಕೇರಿಸದಿರಿ ಎಂದಿಗೂ

ಗೋರಂಟಿಯಿಂದ ಕೈ ಕೆಂಪು ಮಾಡಲು ಹೋಗಿ
ಬಾಲ್ಯಹರಣ ಮಾಡಿ ನರಳಿಸದಿರಿ ಎಂದಿಗೂ

ಓಡುವ-ಓದುವ ಮನದಾಸೆಯನು ಕಟ್ಟಿ ಹಾಕಿ
ಹೆಣ್ಣು ಮಕ್ಕಳ ಖೈದಿಗಳನಾಗಿಸದಿರಿ ಎಂದಿಗೂ

ಮಣ್ಣಲಿ ಆಡುವ ಮಗಳ ಹಸೆಮಣೆಗೇರಿಸಿ
ಶಿಕ್ಷಣದ ಬಾಳಿಗೆ ಮಣ್ಣು ಹಾಕದಿರಿ ಎಂದಿಗೂ

ವಿಭಾಳ ಈ ಮನವಿಗೆ ಬೆಂಬಲಿಸುವಿರಾದರೆ
ಬಾಲ್ಯವಿವಾಹಕೆ ಪ್ರೋತ್ಸಾಹಿಸದಿರಿ ಎಂದಿಗೂ

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 10, 2019

ಆತ್ಮಸಖ

"ಕೆಲವರು ದೂರದಲ್ಲಿದ್ದರೂ, ಮನಸ್ಸು ಅವರನ್ನು ಮಾತನಾಡಿಸಲೇಬೇಕು ಅಂತಾ ಬಯಸುತ್ತೆ. ಇನ್ನು ಹಲವರು ಮುಂದೆಯೇ ಇದ್ದರೂ ಮಾತನಾಡಬೇಕು ಅಂತಾ ಅನಿಸುವುದೇ ಇಲ್ಲ, ಅಂದ ಹಾಗೆ ಈ ಕೆಲವರು ಅಪರಿಚಿತರೇನೂ ಅಲ್ಲಾ ದೂರವಿದ್ದರೂ ಹತ್ತಿರವೇ ಇದ್ದಾರೆಂದೆನಿಸುವ ಪರಿಚಿತರೇ, ನನಗೆ ಹಾಗನ್ನಿಸುವುದು ಶಿವುವಿನ ಬಗ್ಗೆ ಮಾತ್ರ" ಎಂದು ತನ್ನ ಆಪ್ತ ಗೆಳತಿ ವಸುಧಾಳ ಬಳಿ ಹೇಳಿಕೊಳ್ಳುತ್ತಿದ್ದಾಳೆ ಅಪರ್ಣ, ಮತ್ತೆ ಹೋಗಿ ಮಾತಾಡೋದಲ್ವಾ ಎಂದು ಕೇಳಿದ ವಸುಧಾಳಿಗೆ "ನನಗೆ, ಅವರ ಜೊತೆ ನೃತ್ಯದ ಬಗ್ಗೆ ಬಿಟ್ಟು ಬೇರೇನನ್ನೂ ಮಾತನಾಡಲೂ ಸಾಧ್ಯವಾಗುತ್ತಿಲ್ಲ, ಪರಿಚಯವಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಸಹಾ ಅವರ ಊರು,ಗೆಳೆಯರು,ತಂದೆ-ತಾಯಿ ಯಾರ ಬಗ್ಗೆಯೂ ಗೊತ್ತಿಲ್ಲ, ಇವೆಲ್ಲದರ ಬಗ್ಗೆ ಕೇಳಬೇಕೆನಿಸಿದರೂ, ಕೇಳಿದರೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೋ ಅಂತಾ ಹೆದರಿ ನನಗೆ ಕೇಳೋಕೆ ಭಯ ಆಗುತ್ತೆ. ಹಾಗಂತ ಗಂಟು ಮುಖ ಹಾಕಿಕೊಂಡು ಸಿಡಿಮಿಡಿ ಅಂತ ಆನ್ನೋದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ ತುಂಬಾ ತಾಳ್ಮೆ ಇದೆ ಆದರೆ ಕೆಲವೊಮ್ಮೆ ಕ್ಷುಲ್ಲಕವೆನಿಸುವ ವಿಷಯಕ್ಕೂ ಕೂಗಾಡಿಬಿಡುತ್ತಾರೆ, ನಾನು ಕೊಟ್ಟ ಸಲಹೆಗಳನ್ನು ತೆಗೆದುಹಾಕುವುದಿಲ್ಲ, ತುಂಬಾ ಚರ್ಚೆ ಮಾಡಿದರೂ ವೈಯಕ್ತಿಕ ವಿಚಾರಗಳನ್ನು ಮಾತಡುವಷ್ಟು ಸಲುಗೆಯಿಲ್ಲ,ಏಕೋ ನಾವು ಹತ್ತಿರದಲ್ಲಿದ್ದರೂ ಅಂತರಂಗಗಳು ದೂರದಲ್ಲೇ ಉಳಿದವು." ಎಂದು ನಿಡುಸುಯ್ದು ಸುಮ್ಮನಾದಳು.

ವಸುಧಾ ಎಂದೂ ಶಿವುವನ್ನು ನೇರವಾಗಿ ಭೇಟಿಯಾಗಿರಲಿಲ್ಲ, ಅವರಿಬ್ಬರ ನೃತ್ಯದ ಫೋಟೋ ನೋಡಿದ್ದಳು ಅಷ್ಟೇ.ಅಪರ್ಣ ಹೇಳುವುದನ್ನು ಕೇಳಿ ಅವನ ವ್ಯಕ್ತಿಚಿತ್ರವನ್ನು ರೂಪಿಸಿಕೊಂಡಿದ್ದಳು. ಶಿವುನ ಪೂರ್ತಿ ಹೆಸರು ಶಿವರಾಜ್, ನೋಡಲಿಕ್ಕೆ ಮನ್ಮಥನ ಹಾಗಿಲ್ಲದಿದ್ದರೂ, ಹೆಸರಿಗೆ ತಕ್ಕಂತೆ ಶಿವನ ರೀತಿ ಇದ್ದಾನೆ.ಶಾಂತ ಮುಖಭಾವ, ನೋಡಲು ತುಸು ಕಪ್ಪಾದರೂ, ಲಕ್ಷಣವಾಗಿದ್ದಾನೆ. ಅಂತಹಾ ಒಳ್ಳೆಯ ಭಾಷಣಕಾರನಲ್ಲದಿದ್ದರೂ , ಮುಗ್ಧ ಮಾತುಗಳಿಂದ ಎಲ್ಲರನ್ನೂ ಮೋಡಿ ಮಾಡುತ್ತಾನೆ ಎಂದಿದ್ದಳು ಅಪರ್ಣ.

ಅಪರ್ಣ ತುಂಬಾ ಸುಂದರಿಯಲ್ಲದಿದ್ದರೂ, ನೋಡಲು ಲಕ್ಷಣವಾಗಿದ್ದಾಳೆ. ಮುಗುಳ್ನಗೆಯೇ ಅವಳಿಗೊಂದು ಮೆರುಗು ನೀಡಿದೆ. ಭರತನಾಟ್ಯ ಅವಳ ಜೀವ, ಅದರಲ್ಲಿ ತುಸು ಹೊಸತನವನ್ನು ಬೆರೆಸುವ ಪ್ರಯೋಗಶೀಲೆ,ಅದರೊಂದಿಗೆ ಕೈಯಲ್ಲೊಂದು ಪುಸ್ತಕ ಹಿಡಿದು ಕೂತರೆ ಥೇಟ್ ತಪಸ್ಸಿಗೆ ಕೂತಂತೆಯೇ . ಊಟ,ನಿದ್ದೆ ಎಲ್ಲವನ್ನೂ ತೊರೆದು ಕೈಯಲ್ಲಿರುವ ಪುಸ್ತಕ ಮುಗಿಸುತ್ತಾಳೆ. ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಭಾವುಕಳು, ಹೆಚ್ಚಿನ ಸ್ನೇಹಿತರಿಲ್ಲ ಆದರೆ ಇರುವ ಕೆಲವರೇ ಇವಳ ಜೀವ. ತಂದೆ-ತಾಯಿಯರ ಮಾತಿಗೆ ಎದುರು ಮಾತಾಡುವವಳಲ್ಲ, ಅದಕ್ಕೋಸ್ಕರವಾಗಿ ತನಗಿಷ್ಟವಿಲ್ಲದಿದ್ದರೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಳು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸವಾಗಿದ್ದ ಇವಳಿಗೆ ತನ್ನ ಭರತನಾಟ್ಯ ಪ್ರದರ್ಶನಕ್ಕೆ ಒಂದು ಸದವಕಾಶ ಒದಗಿ ಬಂದಿತ್ತು. ದಸರಾ ಪ್ರಯುಕ್ತ ಯುವಜನತೆಗೆಂದೇ ಆಯೋಜಿತವಾಗಿದ್ದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಈಕೆ, ಅಂತಿಮ ಹಂತಕ್ಕೂ ಆಯ್ಕೆಯಾಗಿ ಜುಗಲ್ ಬಂಧಿ ಸುತ್ತಿನಲ್ಲಿ ಶಿವರಾಜ್ ನೊಂದಿಗೆ ಮುಖಾಮುಖಿಯಾದಳು. ಇಬ್ಬರೂ ಒಬ್ಬರಿಗೊಬ್ಬರು ಸೋಲದೆ, ಇಬ್ಬರೂ ಪ್ರಥಮ ಸ್ಥಾನವನ್ನು ಹಂಚಿಕೊಂಡರು. ಆಗ ಶಿವರಾಜ್ ನ ಮನಸ್ಸಿನಲ್ಲಿ ಈಕೆಯೂ ನನ್ನೊಡನೆ ಕಲಾಸೇವೆಯಲ್ಲಿ ಪಾಲ್ಗೊಂಡರೆ ನನ್ನ ನೃತ್ಯ ಪ್ರದರ್ಶನ ಮತ್ತು " ಕಲಾ ಶಾಲೆ"ಗೆ ಅರ್ಥ ಬರುವುದು ಎಂದುಕೊಂಡ. ಆದರೆ ಈ ಕಾಲದಲ್ಲಿ ಇದಕ್ಕೆಲ್ಲಾ ಬೆಲೆಕೊಟ್ಟು ನನ್ನೊಡನೆ ಆಕೆ ಸೇರುತ್ತಾಳಾ? ಎಂದೆಲ್ಲಾ ಆಲೋಚಿಸಿದರೂ,ಕೊನೆಗೆ ಆಕೆಯನ್ನು ಕೇಳಿದಾಗ ಅಪರ್ಣ ಸಂತೋಷದಿಂದ ತನಗೆ ಸಿಕ್ಕಿದ್ದ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಇದಕ್ಕೆ ಒಪ್ಪುತ್ತಾಳೆ.ಮನೆಯಲ್ಲಿ ಮೊದಲಿಗೆ ವಿರೋಧ ವ್ಯಕ್ತವಾದರೂ ನಂತರ ಮಗಳ ಸಂತೋಷಕ್ಕಾಗಿ ಅವಳ ತಾಯ್ತಂದೆಯರು ಇದಕ್ಕೆ ಒಪ್ಪಿ ಸುಮ್ಮನಾಗುತ್ತಾರೆ.

ಹೀಗೆ ಶಿವರಾಜ್ ನ "ಕಲಾ ಶಾಲೆ" ಯಲ್ಲಿ ಪ್ರಾರಂಭವಾದ ನೃತ್ಯ ಸೇವೆ ಮತ್ತು ಇವರಿಬ್ಬರ "ಅರ್ಧನಾರೀಶ್ವರ" ನೃತ್ಯ ಈಗ ಎಲ್ಲೆಡೆ ಸುಪ್ರಸಿದ್ದವಾಗಿದೆ. ಜೊತೆಗೆ ಕಲಾಶಾಲೆಯ ವಿದ್ಯಾರ್ಥಿಗಳ ಕಣ್ಮಣಿಗಳಾಗಿ ಇಬ್ಬರೂ ಆ ಶಾಲೆಯ ಎರಡು ಕಣ್ಣುಗಳಂತಾಗಿದ್ದಾರೆ.

ಇಷ್ಟಾದರೂ, ಇಬ್ಬರಿಗೂ ನನ್ನಿಂದಲೇ ಇಷ್ಟೆಲ್ಲಾ ಆಗಿರುವುದು ಎಂಬ ಹಮ್ಮು-ಬಿಮ್ಮುಗಳಿಲ್ಲ. ಅವರು ಒಬ್ಬರನ್ನೊಬ್ಬರು ಆದರಿಸಿ, ಅಭಿಮಾನಿಸುತ್ತಾರಲ್ಲದೇ ಪರಸ್ಪರ ಗೌರವಿಸುತ್ತಾರೆ.ಅಪರ್ಣ ವಸುಧಾಳ ಜೊತೆ ಬಿಟ್ಟರೆ ಇನ್ನೆಲ್ಲೂ ಅವನನ್ನು "ಶಿವು" ಎಂದು ಕರೆಯದೆ, ಶಿವರಾಜ್ ಎಂದೇ ಸಂಭೋದಿಸುತ್ತಾಳೆ. "ಆತ್ಮಸಖ"ನ ಪರಿಕಲ್ಪನೆಯಲ್ಲಿ ಮುಳುಗಿರುವ ಅವಳು ಆತನನ್ನೇ ತನ್ನ "ಆತ್ಮಸಖ"ನೆಂದು ಭಾವಿಸುತ್ತಾಳೆ. ಆದರೆ ಪ್ರೀತಿಯೋ, ಆರಾಧನೆಯೋ ತಿಳಿಯದೇ ಹೋಗಿದ್ದಾಳೆ.ಇಬ್ಬರೂ ಏಕಾಂತದಿಂದ ಇರುವ ಸಮಯ ಬಹಳಷ್ಟಿದ್ದರೂ, ಎಂದಿಗೂ ಅನುಚಿತವಾಗಿ ವರ್ತಿಸಿಲ್ಲ,ಮಾತುಕತೆಗಳು ನೃತ್ಯದ, ಓದಿನ ವಿಷಯಗಳನ್ನು ಬಿಟ್ಟು ಆಚೀಚೆ ಹೊರಳಿಲ್ಲ. ಆದರೆ ನೋಡುಗರ ಕಣ್ಣಿಗೆ ಇದಾವುದೂ ಗೋಚರವಾಗುವುದಿಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಎಂದಾದಾಗ, ಅಪರ್ಣಳ ತಂದೆ-ತಾಯಿಅವಳಿಗೆ ಯೋಗ್ಯ ವರನನ್ನು ಹುಡುಕಲು ಶುರುವಿಟ್ಟಿದ್ದಾರೆ. ಆಕೆ ಈಗ "ಕಲಾ ಶಾಲೆ"ಗೆ ಹೋಗದೆ ತಿಂಗಳಾಗುತ್ತಾ ಬಂದಿದೆ. ವಸುಧಾ ಮಾತಿಗೆ ಸಿಕ್ಕಾಗಲೆಲ್ಲಾ ಈ ವಿಷಯವನ್ನೇ ಹೇಳುತ್ತಾ ಹಲುಬುತ್ತಾಳೆ ಅಷ್ಟೆ.

ಅತ್ತ ಶಿವರಾಜ್ ಕೂಡಾ ಮೊದಲಿನ ಉತ್ಸಾಹದಲಿಲ್ಲ. ಈ ಹಾಡಿನ ಸಾಲುಗಳನ್ನು ಇತ್ತ ಶಿವರಾಜ್, ಅತ್ತ ಅಪರ್ಣ ಗುನುಗುತ್ತಿದ್ದಾರೆ.

"ಪಾರ್ವತಿ ಸ್ಪಂದನ, ಪರಶಿವ ನರ್ತನ

ಪರಶಿವ ಸನ್ನಿಧಿ, ಪಾರ್ವತಿ ಚೇತನ"

ಸುಪ್ತವಾಗಿ ಹುಟ್ಟಿದ ಈ ಪ್ರೀತಿ,ದೂರದಲ್ಲಿದ್ದಾಗ ಹೆಚ್ಚೆಚ್ಚು ಅರಿವಾಗುತ್ತಿದೆ ಶಿವರಾಜ್ ನಿಗೆ. ಆತ ಕೆಲವೊಮ್ಮೆ ಅಪರ್ಣಳೊಂದಿಗೆ ಇದರ ಕುರಿತು ಚರ್ಚಿಸಬೇಕೆಂದುಕೊಂಡಾಗ ಅವಳ ಗಂಭೀರತೆ, ಸಂಕೋಚದ ಸ್ವಭಾವ ಕಂಡು ಮತ್ತು ಆಕೆ ತಪ್ಪು ತಿಳಿದು ನನ್ನಿಂದ ದೂರಾದರೆ ಎಂದು ಸುಮ್ಮನಾಗಿದ್ದ. ಕಳೆದುಕೊಂಡ ಮೇಲೆಯೇ ಅದರ ಬೆಲೆ ಅರಿವಾಗುವುದು ಎಂಬಂತೆ ಆಕೆಯ ಅನುಪಸ್ಥಿತಿ ಈಗೀಗ ಅವನನ್ನು ಹೆಚ್ಚು ಕಾಡಲಾರಂಭಿಸಿದೆ. ಆಕೆಯ ಗೆಜ್ಜೆಯ ದನಿಯಿಲ್ಲದೆ ಕಿವಿಗೆ ಇಂಪೆನಿಸುತ್ತಿಲ್ಲ, ಆಕೆಯಿಲ್ಲದೆ ಗೆಜ್ಜೆ ಕಟ್ಟಲು ಮನಸಿಲ್ಲ. ಪ್ರೀತಿಯೆಂದರೆ ಇದೇನಾ ಎಂಬ ಪ್ರಶ್ನೆ ಅವನನ್ನು ಕಾಡುತ್ತಿದೆ.

ಇದೇ ಸಮಯಕ್ಕೆ ಆತನ ತಂದೆ-ತಾಯಿಗಳು ಇದಾವುದರ ಅರಿವಿಲ್ಲದೆ ವಧುವಿನ ಅನ್ವೇಷಣೆಯಲ್ಲಿದ್ದಾರೆ. ಈತನೂ ಏನೂ ಮಾಡಲು ತೋಚದೆ, ಅವರ ಜೊತೆಗೆ ಕನ್ಯಾ ಪರೀಕ್ಷೆಗೆ ಹೊರಟಿದ್ದಾನೆ.


*****

ಇಂದು ವಸುಧಾ ಶಿವರಾಜ್-ಅಪರ್ಣರ ಮದುವೆಯಲ್ಲಿ ಸಡಗರ-ಸಂಭ್ರಮದಿಂದ ಓಡಾಡುತ್ತಿದ್ದಾಳೆ.

ಅಂದು ನಡೆದದ್ದಿಷ್ಟು....

ಶಿವರಾಜ್ ಅಂದು ನೋಡಲು ಹೋಗಿದ್ದ ಹುಡುಗಿ ವಸುಧಾ, ಆದರೆ ಆತ ಅಪರ್ಣಳ ಶಿವು ಎಂದು ಗೊತ್ತಾದ ತಕ್ಷಣವೇ ಅವನನ್ನು ನಿರಾಕರಿಸಿ ಇಬ್ಬರ ಮನೆಯವರಿಗೂ ವಿಷಯ ತಿಳಿಸಿದಳು.ಇಬ್ಬರ ಮನೆಯಲ್ಲೂ ಇವರ ಮುಗ್ಧ ಪ್ರೇಮಕ್ಕೆ ಮತ್ತು ತಮ್ಮ ತಮ್ಮ ಸಂತೋಷವನ್ನು ಬದಿಗಿರಿಸಿ ತಮ್ಮ ಮಾತಿಗೆ ಬೆಲೆ ನೀಡಿದಕ್ಕೆ ಹರ್ಷಿಸಿ, ಶಿವ-ಪಾರ್ವತಿಯರ ಮಿಲನಕ್ಕೆ ದೈವಿಕ ಪ್ರೇರಣೆಯೆಂಬಂತೆ ಅಂತರಂಗಗಳ ಪ್ರೀತಿ ಒಂದಾಗಲು ಎಲ್ಲರೂ ಒಮ್ಮನಸಿನಿಂದ ಒಪ್ಪಿದರು.

ಅಪರ್ಣಳಿಗಂತೂ ವಸುಧಾಳನ್ನು ಎಷ್ಟು ಕೊಂಡಾಡಿದರೂ ಸಾಲದು. ಆದರೆ ವಸುಧಾ ಅದಕ್ಕೊಪ್ಪದೆ ನಾನು ನಿಮಿತ್ತ ಮಾತ್ರ. ಕಾಲವೇ ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ಒಂದಾಗಿಸಿದೆ.ಅರ್ಧನಾರೀಶ್ವರರನ್ನು ಯಾರಿಂದಲೂ ದೂರ ಮಾಡಲಾಗದು.

"ಆತ್ಮದೊಲುಮೆಗೆ ಕಾಲವೇ ಸಹಕಾರಿ
ಆತ್ಮಸಖನ ಕೂಡಿದಳು ಪ್ರೇಮದರಸಿ"

ಎಂದು ನಗುತ್ತಾ ಇಬ್ಬರಿಗೂ ಶುಭ ಕೋರಿದಳು ವಸುಧಾ.

~ವಿಭಾ ವಿಶ್ವನಾಥ್

ಬುಧವಾರ, ಫೆಬ್ರವರಿ 6, 2019

ಮನಸ್ಸಿನ ಪ್ರವೇಶದ್ವಾರ

ಕಲ್ಲಿನ ಕೋಟೆಯ ದಾಟಬಹುದಂತೆ
ಮನದ ಗೋಡೆಯ ಹಾರಬಹುದೇ?

ಮರ್ಕಟದಂತಹಾ ಮನಸ್ಸಾದರೂ
ಮನದ ರಕ್ಷಣೆಯಲ್ಲಿ ಬಹು ಹುಶಾರು..!
ಅಪರಿಚಿತರೆಲ್ಲರೂ ಮನದೊಳಗಿರಲಾರರು
ಅದಕ್ಕೊಂದು ಪರಿಮಿತಿ ಇದೆಯಲ್ಲವೇ?

ಪರಿಚಯ ಎಂದಾಕ್ಷಣ ಮಾತ್ರಕ್ಕೆ
ಮನದೊಳಗೆ ನೆಲೆ ನಿಂತುಬಿಡಲು
ಇದೇನು ಅತಿಥಿ ಗೃಹವಲ್ಲವಲ್ಲಾ..!
ನಮ್ಮಯ ರಹಸ್ಯ ಅಭೇದ ಕೋಟೆ

ರಕ್ಷಣೆಗೆ ಮತ್ತೊಬ್ಬರನು ನೆಚ್ಚಲಿಲ್ಲ
ಆಳಿನ ಕೆಲಸವು ಹಾಳು ಅಲ್ಲವೇ..?
ನಿಕಟವರ್ತಿಗಳ ಭಾಂದವ್ಯ ಭವನಕ್ಕೆ
ಇಷ್ಟಾದರೂ ಎಚ್ಚರಿಕೆ ಒಳಿತಲ್ಲವೇ..?

ಮನಸ್ಸು ಕಲ್ಲೆನಿಸುವುದಿಲ್ಲ ಆಪ್ತರಿಗೆ
ಮನಸ್ಸಿನ ಕೋಟೆಗೆ ನಿಷೇಧವುಂಟು
ಅಪರಿಚಿತರಿಗೆ, ಕೆಲ ಪರಿಚಿತರಿಗೂ..!
ನಮ್ಮ ಮನಸ್ಸಿನ ವಾಸಿಗಳ ಹೊಣೆ ನಮ್ಮದೇ..

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 3, 2019

ನಾಜೂಕಿನ ಹಸಿರು ಬಳೆಗಳು

ಗಾಜಿನ ಬಳೆಗಳು ಚೆಂದವೇ
ಆದರೆ ಈಗೀಗ ಪಟ್ಟಣದ
ಮಾಲ್ ಗಳಲ್ಲಿ ಇವು ದೊರಕುವುದಿಲ್ಲ

ಬಣ್ಣ ಬಣ್ಣದ ಪ್ಲಾಸ್ಟಿಕ್ ಬಳೆಗಳು
ಡಬ್ಬಿಯಲ್ಲಿ ರಾಶಿ ಬಿದ್ದಿವೆ ಜೀವವಿಲ್ಲದಂತೆ
ಆದರೆ ನನಗವು ಇಷ್ಟವೇ ಆಗುವುದಿಲ್ಲ

ಕಿಣಿ ಕಿಣಿ ಎಂದು ಸದ್ದು ಮಾಡುವ
ನನ್ನ ಓಡಾಟಕೆ ಜೀವ ತುಂಬುವ
ಗಾಜಿನ ಬಳೆಗಳು ಬಹಳವೇ ಇಷ್ಟ

ಆಡುವಾಗ ಒಡೆಯಬಹುದೆಂದು
ಗೆಳತಿಯರಂತೂ ಇದರಿಂದ ಬಹು ದೂರ
ಗಾಜು ಒಡೆಯದಿರಲು ಸಾಧ್ಯವೇ..?

ಇದು ಹಳೆಯ ಪ್ಯಾಷನ್ ಎನ್ನುತ್ತಾ
ಅಕ್ಕ ಗಾಜಿನ ಬಳೆಗಳಿಂದ ದೂರ..
ಹಿಂದಿನ ತಲೆಮಾರುಗಳಿಂದಲೂ ಸಹಾ..!

ಕೆಲಸಕ್ಕೆಂದು ಬಸ್ ನಲ್ಲಿ ಹೋಗುವಾಗ
ನೂಕುನುಗ್ಗಲಲ್ಲಿ ನುಜ್ಜುಗ್ಗುಜ್ಜಾಗುವುದೆಂದು
ಅಮ್ಮನೂ ಗಾಜಿನ ಬಳೆ ತೊಡುವುದಿಲ್ಲ..

ಆದರೆ ಅಜ್ಜಿಯ ಕೈ ತುಂಬೆಲ್ಲಾ
ಗಲಗಲಿಸುವ ಹಚ್ಚ ಹಸಿರು ಬಳೆಗಳು
ಹೆಣ್ತನಕೆ ಶೋಭಿಸುವ ಶುಭ ಕಳೆಗಳು

ಪಟ್ಟಣದಿಂದ ಬಂದಿಯೆ ಹಳ್ಳಿಗೆ
ಸಂಪ್ರದಾಯದ ಸೌಧದ ಮಡಿಲಿಗೆ
ಅಪರೂಪದ ಬಳೆಗಾರನೂ ಬಂದಿಹನು

ತರಹೇವಾರಿ ಬಳೆಗಳೆಲ್ಲವ ತಂದಿಹನು
ನನಗಂತೂ ಚುಕ್ಕಿಯ ಹಸಿರು ಬಳೆಗಳು
ಪುಟ್ಟಗೌರಿಗೆ ಪುಟ್ಟ ಬಳೆಯ ಅಲಂಕಾರ

ಒಡೆಯದ,ಸವೆಯದ ಬಳೆ ಏನು ಚೆಂದ?
ಒಡೆದರೆ ಸುಂದರ ಕಲಾಕೃತಿ ಮಾಡುವೆ
ಗಾಜಿನ ಬಳೆಗಳ ತೊಡದೆ ಬಿಡೆನು

ಅಜ್ಜಿಯಂದಳು ನಾಜೂಕಿನ ಬದುಕಿನಂತೆಯೇ
ಈ ಗಾಜಿನ ನಾಜೂಕಿನ ಬಳೆಗಳೂ..
ಸಂಭಾಳಿಸುವುದರ ಮೇಲೆ ನಿಂತಿದೆ ಬದುಕು

ಇಂದು ನಾನೂ ಬಳೆ ತೊಟ್ಟಿರುವೆ
ಅಜ್ಜಿಗೆ ಭಾಷೆಯನ್ನೂ ಕೊಟ್ಟಿರುವೆ
ಸಂಪ್ರದಾಯವ ಬಲಿ ನೀಡೆನೆಂದು

~ವಿಭಾ ವಿಶ್ವನಾಥ್
(ಚಿತ್ರ ಕೃಪೆ: ಶ್ರೀಮತಿ ಲತಾ ಜೋಷಿ)

ಸೋಮವಾರ, ಜನವರಿ 21, 2019

ನಮ್ಮ ಶಿಕ್ಷಣದ ಕಥೆ ನಿಮ್ಮ ಜೊತೆ..

ರೂಪಕವನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ. ಮಕ್ಕಳ ಅಭಿನಯವನ್ನು ಆನಂದಿಸಿ.

ಪಾತ್ರಗಳು:
1. ಕಿಟ್ಟಿ
2. ಕಿಟ್ಟಿಯ ತಾಯಿ
3. ರಾಜು
4. ರಾಜುವಿನ ತಾಯಿ
5. ರಾಜುವಿನ ತಂದೆ
6. ಹೂ ಮಾರುವ ಅಜ್ಜಿ

ದೃಶ್ಯ-01
-----------
(ಕಿಟ್ಟಿಯ ತಾಯಿ, ಕಿಟ್ಟಿ)

ಕಿಟ್ಟಿಯ ಅಮ್ಮ: ಕಿಟ್ಟಿ, ಏನ್ ಮಾಡ್ತಾ ಇದ್ದೀಯೋ ?

ಕಿಟ್ಟಿ: ಚಿತ್ರ ಬಿಡಿಸ್ತಾ ಇದ್ದೀನಿ ಕಣಮ್ಮಾ..

ಕಿಟ್ಟಿಯ ಅಮ್ಮ: ಯಾವಾಗ ನೋಡಿದ್ರೂ ಈ ಹಾಳಾದ ಚಿತ್ರ ಬಿಡಿಸ್ತಾನೇ ಕೂತಿರ್ತೀಯಾ. ಅದ್ಯಾವಾಗ ಓದಿಕೋತಿಯೋ..? ಗೊತ್ತಿಲ್ಲ..!
ಚಿತ್ರ ಬರಿಯೋದು ಬಿಟ್ರೆ ಕಥೆ ಪುಸ್ತಕ ಇಲ್ಲಾ ಅಂದ್ರೆ ಆಟ. ಇದೇ ಆಗೋಯ್ತು ಮೂರೊತ್ತು..
ಮುಂದಗಡೆ ಮನೆ ರಾಜೂನಾ ನೋಡಿ ಕಲಿತುಕೊಳ್ಳೋ, ಯಾವಾಗ್ಲೂ ಓದ್ತಾ ಇರ್ತಾನೆ. ನೀನೂ ಇದ್ದೀಯಾ ಬರೀ ದಂಡಕ್ಕೆ..

ಕಿಟ್ಟಿ: ಹೋಗಿ ಹೋಗಿ ಆ ಸೋಡಾಬುಡ್ಡಿ ತರಾ ಆಗು ಅಂತಾ ಹೇಳ್ತಾ ಇದ್ದೀಯಲ್ಲಮ್ಮ. ನಿಂಗೇನು ಬುದ್ದಿ ಇಲ್ವಾ..?

ಕಿಟ್ಟಿಯ ಅಮ್ಮ: ಬುದ್ದಿ ಇರೋದಕ್ಕೆ ಕಣೋ, ಹಂಗೆ ಹೇಳ್ತಾ ಇರೋದು. ಅವ್ನು ಯಾವಾಗ್ಲೂ ಫಸ್ಟ್ ರ್ಯಾಂಕ್. ನೀನೂ ಇದ್ದೀಯಾ..

ಕಿಟ್ಟಿ: ನಾನೂ ಫಸ್ಟ್ ಬರ್ತೀನಲ್ಲಮ್ಮಾ. ಅದ್ಯಾಕೆ ನಿನ್ನ ಕಣ್ಣಿಗೆ ಕಾಣಿಸೋಲ್ಲ..?

ಕಿಟ್ಟಿಯ ಅಮ್ಮ: (ವ್ಯಂಗ್ಯವಾಗಿ) ನೀನೂ ಫಸ್ಟ್ ಬರ್ತೀಯಾಪ್ಪಾ, ಆದರೆ ಫಸ್ಟ್ ಇಂದ ಅಲ್ಲ ಲಾಸ್ಟ್ ಇಂದ ಅಲ್ವಾ..?

ಕಿಟ್ಟಿ: ಬರೀ ಓದೋ ವಿಷಯಾನೇ ಹೇಳ್ತೀಯಲ್ಲಮ್ಮಾ.. ನಾನು ಎಲ್ಲಾ ಗೇಮ್ಸ್ ಅಲ್ಲೂ ಫಸ್ಟ್, ಡ್ರಾಯಿಂಗ್ ಅಲ್ಲೂ ಫಸ್ಟ್, ಜನರಲ್ ನಾಲೆಡ್ಜ್ ಅಲ್ಲೂ ಫಸ್ಟ್

ಕಿಟ್ಟಿಯ ಅಮ್ಮ: ಆದ್ರೇನಪ್ಪಾ ಬಂತು ಪ್ರಯೋಜನ? ನಿಂಗೆ ಮಾರ್ಕ್ಸ್ ಏ ಬರಲ್ವಲ್ಲೋ.. ನಮ್ಮ ಕಾಲದಲ್ಲಿ ನಿಮ್ಮಷ್ಟು ಓದ್ಸಿದ್ರೆ ನಾವು ಎಲ್ಲೋ ಇರ್ತಿದ್ವಿ.

ಕಿಟ್ಟಿ: (ವ್ಯಂಗ್ಯವಾಗಿ) ಅದ್ಕೆ ಓದ್ಸಿಲ್ಲ ಬಿಡು
(ಗಂಭೀರವಾಗಿ) ಅಮ್ಮಾ ಯಾವಾಗ್ಲೂ ಯಾಕೆ ಕಂಪೇರ್ ಮಾಡ್ಕೋತೀಯಾ? ಅವರಿಗೆ ಎಷ್ಟು ಸಾಧ್ಯಾನೋ ಅಷ್ಟು ಓದ್ಸಿದ್ದಾರೆ.
ಸರಿ,ಸರಿ ನಂಗೆ ಆಟ ಆಡೋಕೆ ಟೈಮ್ ಆಯ್ತು. ನಾನು ಆಟಕ್ಕೆ ಹೋಗ್ತೀನಿ. ಬಾಯ್
[ಕಿಟ್ಟಿ ಓಡುವನು, ಅಮ್ಮನೂ ಇತ್ತ ಬರುವಳು]

ದೃಶ್ಯ -2 
-------------
[ರಾಜುವಿನ ಅಪ್ಪ, ರಾಜುವಿನ ಅಮ್ಮ, ರಾಜು]
(ರಾಜುವಿನ ಮನೆ)

ರಾಜುವಿನ ಅಮ್ಮ: ರಾಜು,ರಾಜು. ಏನ್ ಮಾಡ್ತಾ ಇದ್ದೀಯೋ?

ರಾಜುವಿನ ಅಪ್ಪ: ಏನೇ ನಿಂದು..? ಅವ್ನು ಓದಿಕೊಳ್ತಾ ಇದ್ದಾನೆ.  ಏನಾಗ್ಬೇಕು ನಿಂಗೆ?

ರಾಜುವಿನ ಅಮ್ಮ: ಅಯ್ಯೋ, ಮಾರ್ಕೆಟ್ ಗೆ ಹೋಗಬೇಕಿತ್ತು ಕಣ್ರೀ. ಅದಕ್ಕೇ ಕೂಗಿದೆ. ಪೂಜೆಗೆ ಹೂವು ಹಣ್ಣು ಎಲ್ಲಾ ತರಬೇಕಿತ್ತು.

ರಾಜುವಿನ ಅಪ್ಪ: ಓದೋ ಹುಡುಗನಿಗ್ಯಾಕೆ ಹೇಳ್ತಿಯಾ ಅದನ್ನೆಲ್ಲಾ. ಅವನು 5 ನೇ ಕ್ಲಾಸು. ಅವ್ನಿಗೆಲ್ಲಿದೆಯೋ ಟೈಮು?
ಬೆಳಿಗ್ಗೆ ಎದ್ದ್ರೆ ಯೋಗಾಸನ, ಆಮೇಲೆ ಮ್ಯಾಥ್ಸ್ ಟ್ಯೂಷನ್, ಆಮೇಲೆ ಸ್ಕೂಲು, ಸಂಜೆ ಸ್ವಿಮ್ಮಿಂಗು ಆಮೇಲೆ ಅಬ್ಯಾಕಸ್  ಕ್ಲಾಸ್ ಕೊನೆಗೆ ಸೈನ್ಸ್ ಟ್ಯೂಷನ್.. ಅವ್ನು ಓದ್ಕೊಳ್ಳಿ ಬಿಡು. ನಾನೇ ತರ್ತೀನಿ ಬ್ಯಾಸ್ಕೆಟ್ ಕೊಡು.

ರಾಜುವಿನ ಅಮ್ಮ: ನೀವು ಹೀಗಂದು ಅಂದು ಅವನನ್ನು ಹಾಳು ಮಾಡಿದ್ದೀರ. ಅವನಿಗೆ ಸಕ್ಕರೆ ಯಾವುದು ಉಪ್ಪು ಯಾವುದು ಅಂತಾ ವ್ಯತ್ಯಾಸಾನೇ ಗೊತ್ತಿಲ್ಲ. ಮೊನ್ನೆ ಏನಾಯ್ತು ಗೊತ್ತಾ?

ರಾಜುವಿನ ಅಪ್ಪ: ಗೊತ್ತಿಲ್ಲ ಕಣೇ. ಹೇಳಿದ್ರೆ ತಾನೇ ಗೊತ್ತಾಗೋದು..

ರಾಜುವಿನ ಅಮ್ಮ: ಹೇಳ್ತೀನಿ ಕೇಳಿ.. ಮೊನ್ನೆ ಏನೋ ಕೆಲಸ ಮಾಡ್ತಾ ಇದ್ದೆ. ಸಾರಿಗೆ ಒಂದು ಸೌಟು ಉಪ್ಪು ಹಾಕು ಅಂದರೆ ಸಕ್ಕರೆ ಹಾಕಿ ಪಾಯಸ ಮಾಡಿ ಇಟ್ಟಿದಾನೆ.

ರಾಜುವಿನ ಅಪ್ಪ: ಹೌದೇನೋ ರಾಜು?

ರಾಜು: (ಮುಗ್ದವಾಗಿ) ಎರಡೂ ವೈಟ್ ಕಲರ್ ಇತ್ತು ಪಪ್ಪಾ, ನಂಗೆ ಗೊತ್ತಾಗಲೇ ಇಲ್ಲ. ಅಮ್ಮ ಆ ಡಬ್ಬಿಗಳ ಮೇಲೆ ಚೀಟೀನೇ ಅಂಟಿಸಿರಲಿಲ್ಲಾ

ರಾಜುವಿನ ಅಮ್ಮ:(ತಲೆ ಚಚ್ಚಿಕೊಳ್ಳುವಳು)

ರಾಜುವಿನ ಅಪ್ಪ: ಹೋಗ್ಲಿ ಬಿಡೆ ಮುಂದೆ ಸರಿಯಾಗ್ತಾನೆ

ರಾಜುವಿನ ಅಮ್ಮ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತಾರಲ್ಲ ಹಾಗೇ. ಇವಾಗ ಕಲಿಯದೇ ಇರೋನು ಮುಂದೆ ಕಲೀತಾನಾ.. ಎಲ್ಲಾ ಈಗಿನ ಇಂಗ್ಲೀಷ್ ಸ್ಕೂಲ್ ಗಳ ಪ್ರಭಾವ.

ರಾಜುವಿನ ಅಪ್ಪ: ಇವಾಗ ಏನು ಮಾಡ್ಬೇಕು ಅಂತೀಯೇ ?

ರಾಜುವಿನ ಅಮ್ಮ: ಅವನನ್ನು ಟ್ಯೂಷನ್, ಅಬ್ಯಾಕಸ್ ಎಲ್ಲಾ ಬಿಡಿಸಿ, ಎಲ್ಲಾ ಮಕ್ಕಳ ತರ ಅವನೂ ಆಟ ಆಡಿಕೊಂಡು ಇರಲಿ.

ರಾಜುವಿನ ಅಪ್ಪ: ಅವನೂ ದಿನಾ ಆಟ ಆಡ್ತಾನಲ್ಲೇ..!?

ರಾಜುವಿನ ಅಮ್ಮ: ಯಾವಾಗ ಆಡ್ತಾನೆ? ಅವನು ರೂಂ ಬಿಟ್ಟು ಹೊರಗಡೆ ಹೋಗೋದನ್ನೇ ನಾನು ನೋಡಿಲ್ಲ.

ರಾಜು: ದಿನಾ ಕ್ರಿಕೆಟ್, ಫುಟ್ ಬಾಲ್ ಆಡ್ತೀನಲ್ಲಮ್ಮಾ..

ರಾಜುವಿನ ಅಮ್ಮ: (ಆಶ್ಚರ್ಯದಿಂದ) ಯಾವಾಗ್ಲೋ..? ಟ್ಯೂಷನ್ ಗೆ ಹೋದಾಗ ಅಲ್ಲಿ ಮಕ್ಕಳ ಜೊತೆಗೆ ಆಟ ಆಡ್ತೀಯೇನೋ? ಯಾವ,ಯಾವ ಆಟ ಆಡ್ತೀರೋ..?
ನಂಗೆ ಹೇಳ್ಲೇ ಇಲ್ವಲ್ಲೋ ಇದನ್ನ

ರಾಜು: ಅಯ್ಯೋ ಅಮ್ಮ.. ಅಲ್ಲಿ ಎಲ್ಲಿ ಆಟ ಆಡೋಕಾಗುತ್ತೆ? ದೊಡ್ಡ ದೊಡ್ಡ ಬಿಲ್ಡಿಂಗ್ ಮಾತ್ರ ಇರೋದು. ಫೀಲ್ಡ್ ಏ ಇಲ್ಲ, ರೋಡಲ್ಲಿ ಆಡ್ಬೇಕಾಗುತ್ತೆ ಅಷ್ಟೇ.

ರಾಜುವಿನ ಅಪ್ಪ: ನಾವಾದ್ರೇ ರೋಡಲ್ಲೂ ಆಡ್ತಾ ಇದ್ವಿ. ಆ ವೆಹಿಕಲ್ ಗಳ ಮಧ್ಯೆ ರೋಡಲ್ಲಿ ಆಡೋಕೂ ಆಗಲ್ಲ ಈಗ.
ಅದಿಕ್ಕೆ ಕಣೇ ಅವನು ದಿನಾ ಕ್ರಿಕೆಟ್, ಪುಟ್ ಬಾಲ್, ಚೆಸ್ ಎಲ್ಲಾನೂ ನನ್ನ ಮೊಬೈಲ್ ಅಲ್ಲೇ ಆಡ್ತಾನೆ.

ರಾಜುವಿನ ಅಮ್ಮ: ನಿಮ್ಮ ಕಥೆ ಕಟ್ಟಿಕೊಂಡು ಹೋದ್ರೆ ಆಯ್ತು.
ಏ ರಾಜು.. ಹೋಗೋ ಹೋಗಿ ಮಾರ್ಕೆಟ್ ಅಲ್ಲಿ ಹೂ,ಹಣ್ಣು, ಕಾಯಿ ತಗೊಂಡು ಬಾ
(ರಾಜು ಪೆನ್ಸಿಲ್ ನಿಂದ ಪೇಪರ್ ನಲ್ಲಿ ಹೂ,ಹಣ್ಣು, ಕಾಯಿ ಎಂದು ಬರೆದುಕೊಳ್ಳುವನು)

ರಾಜು: ಸರಿ ಅಮ್ಮ

ರಾಜುವಿನ ಅಮ್ಮ: ಹೋದ ಸಾರಿ ದುಡ್ಡು ಮರೆತು ಹೋದ್ಯಲ್ಲ ಹಾಗೆ ಹೋಗ್ಬೇಡ. ಅಲ್ಲೇ, ಅಕ್ಕಿ ಡಬ್ಬದ ಕೆಳಗಡೆ ದುಡ್ಡು ಇಟ್ಟಿದ್ದೀನಿ ತಗೊಂಡು ಹೋಗು.

ರಾಜು: ಆಯ್ತು ಅಮ್ಮ

ದೃಶ್ಯ-3 
-------------
(ಮಾರ್ಕೆಟ್ ನಲ್ಲಿ)
(ಅಜ್ಜಿ, ರಾಜು, ಕಿಟ್ಟಿ, ಕಿಟ್ಟಿಯ ಅಮ್ಮ)

ಅಜ್ಜಿ: ಏನು ಬೇಕಿತ್ತಪ್ಪಾ?

ರಾಜು: (ಜೋರು ಧ್ವನಿಯಲ್ಲಿ) ಹೂ, ಹಣ್ಣು, ಕಾಯಿ ಎಲ್ಲಾ ಬೇಕಿತ್ತಪ್ಪಾ.
(ಸ್ವಲ್ಪ ನಿಧಾನವಾಗಿ) ಆದರೆ ಎಷ್ಟು ಬೇಕಿತ್ತು ಅಂತಾ ಅಮ್ಮ ಹೇಳ್ಲೇ ಇಲ್ಲ. ಎಲ್ಲಾನು ಒಂದು ಒಂದೇ ಅನ್ಸುತ್ತೆ, ಜಾಸ್ತಿ ಬೇಕಿದ್ರೆ ಅಮ್ಮ ಹೇಳ್ತಿದ್ರು.

ಅಜ್ಜಿ: ಎಷ್ಟೆಷ್ಟು ಬೇಕು?

ರಾಜು: ಒಂದು ಹೂ, ಆಮೇಲೆ ಒಂದು ಕಾಯಿ, ಒಂದು ಹಣ್ಣು ಕೊಡಿ.

ಅಜ್ಜಿ: (ಜೋರಾಗಿ ನಗುತ್ತಾ) ಏನು? ಒಂದು ಹೂ, ಒಂದು ಹಣ್ಣಾ..?

ರಾಜು: (ಕೋಪದಿಂದ) ಯಾಕಜ್ಜಿ ನಗ್ತಾ ಇದ್ದೀಯಾ?

ಅಜ್ಜಿ: ಇನ್ನೇನಪ್ಪಾ ಮಾಡ್ಲಿ..? ಯಾರಾದ್ರೂ ಒಂದು ಹೂವು, ಒಂದು ಹಣ್ಣು ತಗೋತಾರಾ? ಒಂದು ಮಾರು ಹೂವು, ಒಂದು ಚಿಪ್ಪು ಹಣ್ಣು ಕೊಡ್ತೀನಿ ತಗೊಂಡು ಹೋಗು.

ರಾಜು: (ತಲೆ ಕೆರೆದುಕೊಳ್ಳುತ್ತಾ) ಸರಿ ಕೊಡಿ. ಮೊದಲು ಹೂ ಕೊಡಿ ಆಮೇಲೆ ಹಣ್ಣು ಆಮೇಲೆ ಕಾಯಿ ಕೊಡಿ

ಅಜ್ಜಿ: ಯಾಕಪ್ಪಾ?

ರಾಜು: ಅಮ್ಮ ತರೋಕೆ ಹೇಳಿರೋದೇ ಹಾಗೆ..

ಅಜ್ಜಿ: ಸರಿ, ಸರಿ. ಸೇವಂತಿಗೆ ಬೇಕೋ? ಕಾಕಡ ಬೇಕೋ? ಮಲ್ಲಿಗೆ ಬೇಕೋ? ಕನಕಾಂಬರ ಬೇಕೋ?

ರಾಜು: (ಆಶ್ಚರ್ಯದಿಂದ) ಅಷ್ಟೊಂದು ತರಹದ ಹೂಗಳು ಇದಿಯಾ? ಯಾವುದೋ ಒಂದು ಕೊಡಿ.

ಅಜ್ಜಿ: ಯಾಕಪ್ಪಾ ನಿಂಗೆ ಇವೆಲ್ಲಾ ಗೊತ್ತಿಲ್ವಾ? ಇನ್ನೂ ತುಂಬಾ ತರಹದ ಹೂಗಳು ಇದ್ದಾವೆ. ಸದ್ಯಕ್ಕೆ ಇಷ್ಟೇ ನನ್ನ ಹತ್ರ ಇರೋದು..
ಸರಿ ಸರಿ, ತೊಂಬತ್ತು ರೂಪಾಯಿ ಆಯ್ತು ಕೊಡಪ್ಪಾ
(ರಾಜು ನೂರು ರೂಪಾಯಿ ಕೊಟ್ಟು ಬುಟ್ಟಿಯಲ್ಲಿ ಮೊದಲು ಹೂ ನಂತರ ಹಣ್ಣು ಆಮೇಲೆ ಕಾಯಿ ಇಟ್ಟುಕೊಂಡು ವಾಪಾಸ್ ಹೊರಡುವನು)

ಅಜ್ಜಿ: ಚಿಲ್ಲರೆ ತಗಳಪ್ಪಾ.. ದಿನಾ ನಿಮ್ಮಂತಹವರು ಸಿಕ್ಕರೆ ನಾವು ಅಂಗಡಿ ಮೇಲೆ ಅಂಗಡಿ ಕಟ್ಟಿಸಬಹುದು. 
(ರಾಜು ಚಿಲ್ಲರೆ ತೆಗೆದುಕೊಂಡು ವಾಪಾಸ್ ಹೊರಡುವಾಗ ಕಿಟ್ಟಿ ಮತ್ತು ಅವರ ಅಮ್ಮ ಎದುರಾಗುತ್ತಾರೆ.)
(ಕಿಟ್ಟಿ ಅವನ ಕೈಯ್ಯಲ್ಲಿದ್ದ ಬ್ಯಾಸ್ಕೆಟ್ ನೋಡಿ ಜೋರಾಗಿ ನಗಲು ಶುರುಮಾಡುತ್ತಾನೆ)

ಕಿಟ್ಟಿಯ ಅಮ್ಮ: (ಗದರಿಸುವ ಧ್ವನಿಯಲ್ಲಿ) ಸುಮ್ನಿರೋ ಕಿಟ್ಟಿ, ಪಾಪ ಅವ್ನಿಗೆ ಗೊತ್ತಾಗಲ್ಲ..
(ರಾಜುವಿಗೆ) ಯಾಕಪ್ಪಾ ರಾಜು? ಬುಟ್ಟಿಯಲ್ಲಿ ಈ ತರಾ ಸಾಮಾನು ಜೋಡಿಸಿಕೊಂಡಿದ್ದೀಯಾ?

ರಾಜು: (ತೊದಲಿಸುತ್ತಾ) ಅದು.. ಅದು.. ಆಂಟಿ.., ಅಮ್ಮ ಹೂವು,ಹಣ್ಣು, ಕಾಯಿ ತಗೊಂಡು ಬಾ ಅಂದ್ರು. ನಾನೂ ಹಾಗೇ ಬರೆದ್ಕೊಂಡಿದ್ದೆ. ಅದಕ್ಕೇ ಈ ತರಾ ಜೋಡಿಸಿಕೊಂಡಿದ್ದೀನಿ.

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..

ಕಿಟ್ಟಿಯ ಅಮ್ಮ: ಸುಮ್ನಿರೋ ಕಿಟ್ಟಿ(ಜೋರಾಗಿ ಗದರುವರು)
(ಕಿಟ್ಟಿಗೆ) ಅವರು ಹೇಳುವಾಗ ಹಾಗೆ  ಹೇಳಿರ್ತಾರೆ ಅಷ್ಟೇ. ನೀನು ಇಟ್ಟಿರೋ ತರಾ ಇಟ್ಕೊಂಡು ಹೋದ್ರೆ ಹೂ, ಹಣ್ಣು ಎಲ್ಲಾ ಹಾಳಾಗತ್ತೆ ಅಷ್ಟೇ..
ಕೆಳಗಡೆ ಕಾಯಿ ಇಟ್ಟು ಆಮೇಲೆ ಹಣ್ಣು ಆಮೇಲೆ ಹೂವು ಇಡಬೇಕು ಆಯ್ತಾ..?

ರಾಜು: ಸರಿ ಆಂಟಿ ಹಾಗೇ ಮಾಡ್ತೀನಿ
(ರಾಜು ಹೊರಡುವನು)

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..ನಾನೂ ರಾಜೂ ತರಹಾನೇ ಆಗ್ಬೇಕಾ? ಯಾವಾಗ್ಲೂ ರಾಜೂನಾ ನೋಡಿ ಕಲಿ ಅಂತಾ ಹೇಳ್ತಾ ಇರ್ತೀಯಲ್ಲಾ.. ನಾನೂ ಹೇಳಬಹುದು ಅಲ್ವಾ, ನೀನೂ ಅವರ ಅಮ್ಮನ ನೋಡಿ ಕಲಿ ಅಂತಾ..

ಕಿಟ್ಟಿಯ ಅಮ್ಮ: ಬಿಡೋ ಹೋಗ್ಲಿ, ಇನ್ಮೇಲೆ ನಿನ್ನನ್ನ ಬೇರೆಯವರಿಗೆ ಕಂಪೇರ್ ಮಾಡಲ್ಲ ಆಯ್ತಾ..?
(ಎಲ್ಲರೂ ನಿರ್ಗಮಿಸುವರು)

ದೃಶ್ಯ-4
-----------
(ರಾಜುವಿನ ಅಮ್ಮ, ಕಿಟ್ಟಿಯ ಅಮ್ಮ)

ಕಿಟ್ಟಿಯ ಅಮ್ಮ: ಆಯ್ತೇನ್ರೀ ಎಲ್ಲಾ ಕೆಲಸ? ನಿಮ್ಮದೇ ಒಂತರಾ ಸುಖ ಬಿಡ್ರೀ.. ಫಸ್ಟ್ ರ್ಯಾಂಕ್ ಬರೋ ಮಗ, ನನ್ಮಗಾನು ಇದ್ದಾನೆ.. ದಂಡಕ್ಕೆ..

ರಾಜುವಿನ ಅಮ್ಮ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ, ಏನು ಸುಖಾನೋ ಏನೋ .. ನಿಮ್ಮದೇ ಪುಣ್ಯ ಬಿಡ್ರಿ, ನಿಮ್ಮ ಮಗ ನಿಮಗೆ ಎಲ್ಲಾದ್ರಲ್ಲೂ ಸಹಾಯ ಮಾಡ್ತಾನೆ. ಆಟ ಆಡೋದ್ರಲ್ಲಿ ಚಾಂಪಿಯನ್, ವ್ಯವಹಾರ ಜ್ಞಾನಾನೂ ತುಂಬಾ ಚೆನ್ನಾಗಿದೆ. ತುಂಬಾ ಬುದ್ದಿವಂತ.

ಕಿಟ್ಟಿಯ ಅಮ್ಮ: ಏನು ಬುದ್ದಿವಂತ ಆದ್ರೆ ಏನ್ರೀ..? ಮಾರ್ಕ್ಸ್ ಏ ಬರಲ್ಲ.. ಮುಂದೆ ಹೇಗೋ ಏನೋ ಅಂತಾ ಚಿಂತೆಯಾಗೋಗಿದೆ, ಇವನು ಓದಲಿ ಅಂತಾ ಕೇಬಲ್ ಕನೆಕ್ಷನ್ ತೆಗೆಸಿದ್ವಿ, ನಮ್ಮನೆಯವ್ರ ಆಫೀಸ್ ಗೆ ದೂರ ಆದ್ರೂ ಇಲ್ಲಿ ಮನೆ ಮಾಡಿದ್ವಿ, ಆದ್ರೆ ಇವನು ಹೀಗಾದ.. 
   
ರಾಜುವಿನ ಅಮ್ಮ: ಎಲ್ಲರೂ ವಿಶ್ವೇಶ್ವರಯ್ಯ ಆಗೋಕಾಗಲ್ಲ
ಐದು ಬೆರಳೂ ಒಂದೇ ಸಮ ಇರಲ್ಲ ನೊಡ್ಡಿ.ಓದು, ಮಾರ್ಕ್ಸ್ ಬೇಕು ಆದರೆ ಆರೋಗ್ಯ, ಚಟುವಟಿಕೆ,ವ್ಯವಹಾರ ಜ್ಞಾನ ತುಂಬಾನೇ ಮುಖ್ಯ.
ಮೀನು ಮರ ಹತ್ತೋಕಾಗಲ್ಲಾ, ಹಕ್ಕಿ ಈಜೋಕಾಗಲ್ಲ, ಅವರವರ ರೀತಿ ಅವರವರಿಗೆ ಕಣ್ರೀ.. ಇತ್ತೀಚಿನ ಎಜುಕೇಶನ್ ಸಿಸ್ಟಂ ಹೀಗಾಗೋಗಿದೆ, ಆದ್ರೆ ಇದಕೆಲ್ಲಾ ಅಪವಾದ ಅನ್ನೋ ಹಾಗೇ ಒಂದು ಸ್ಕೂಲ್ ಇದೆ ಕಣ್ರೀ..

ಕಿಟ್ಟಿಯ ಅಮ್ಮ: ಹೌದಾ? ಯಾವುದ್ರೀ ಅದು?

ರಾಜುವಿನ ಅಮ್ಮ: ಮೈತ್ರಿ ಕಾನ್ವೆಂಟ್ ಅಂತಾ ಕಣ್ರೀ, ಅಲ್ಲಿ ಓದೋದರ ಜೊತೆಜೊತೆಗೆ ಆಟಕ್ಕೂ ಪ್ರಾಮುಖ್ಯತೆ ಇದೆ. ಸ್ಮಾರ್ಟ್ ಕ್ಲಾಸ್, ಯೋಗ, ಕರಾಟೆ, ಸಂಗೀತ, ಡ್ರಾಯಿಂಗ್ ಎಲ್ಲಾ ಇದೆ, ಜೊತೆಗೆ ಥಿಯೇಟರ್ ಎಜುಕೇಶನ್ ಅಂದರೆ ರಂಗ ಶಿಕ್ಷಣದ ಅನುಕೂಲ ಸಹಾ ಇದೆ.
ಮಕ್ಕಳಿಗೆ ವ್ಯವಹಾರ ಜ್ಞಾನ ಕಲಿಸೋದಕ್ಕೆ ಕ್ಯಾಂಟೀನ್ ಡೇ ಮಾಡ್ತಾರೆ.ಅಲ್ಲಿ ಮಕ್ಕಳ ಮೊದಲ ಅಭ್ಯಾಸವನ್ನು ಅಕ್ಕಿ ಮೇಲೆ ಅಕ್ಷರ ಬರೆಸೋದ್ರಿಂದ ಅವರ ಅಪ್ಪ-ಅಮ್ಮನೇ ಶುರು ಮಾಡ್ತಾರೆ. ತಂದೆ-ತಾಯಿ ಪಾದ ಪೂಜೆ ಮಾಡಿಸ್ತಾರೆ. ಗ್ರಾಮೀಣ ಕ್ರೀಡೆಗಳು, ಸಂಸ್ಕೃತಿಯ ಮೌಲ್ಯ ಎಲ್ಲವನ್ನೂ ಅಲ್ಲಿ ಕಲಿಸಿಕೊಡುತ್ತಾರೆ.

ಕಿಟ್ಟಿಯ ಅಮ್ಮ: ಹೌದೇನ್ರೀ ಗೊತ್ತೇ ಇರ್ಲಿಲ್ಲ. ಎಲ್ಲಿದೆ ಅದು? ಯಾರು ಅದನ್ನು ನಡೆಸುತ್ತಾ ಇರೋದು?

ರಾಜುವಿನ ಅಮ್ಮ: ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಮೈತ್ರಿ ಕಾನ್ವೆಂಟ್ ಇರೋದು. ಎಲೆಮರೆ ಕಾಯಿಯ ತರ ಆ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಇದೆ. ಧರ್ಮರಾಜ್ ಕಡಗ ಸರ್ ಆ ಶಿಕ್ಷಣ ಸಂಸ್ಥೆಯನ್ನು ಶುರು ಮಾಡಿದವರು ಹಾಗು ನಡೆಸುತ್ತಾ ಇರುವವರು
ನಾನೂ ಈ ಸಾರಿ ರಾಜೂನಾ ಅಲ್ಲಿಗೇ ಸೇರಿಸ್ತಾ ಇದ್ದೀನಿ.

ಕಿಟ್ಟಿಯ ಅಮ್ಮ: ನನಗೂ ನೀವೇಳಿದ  ಮೇಲೆ ಜ್ಞಾನೋದಯ ಆಯ್ತು. ನಾನೂ ಕಿಟ್ಟೀನಾ ಅಲ್ಲಿಗೇ ಸೇರಿಸ್ತೀನಿ.
[ಇಬ್ಬರೂ ಒಟ್ಟಿಗೆ]
ನಾವಂತೂ ಮೈತ್ರಿ ಕಾನ್ವೆಂಟ್ ಜೊತೆ ಕೈ ಜೋಡಿಸಿದ್ದೇವೆ. ನೀವೂ ನಮ್ಮೊಟ್ಟಿಗೆ ಕೈ ಜೋಡಿಸಿ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಕ್ಷಿಯಾಗಿ.

~ವಿಭಾ ವಿಶ್ವನಾಥ್ 

ಭಾನುವಾರ, ಜನವರಿ 13, 2019

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ಭಯ ಜೀವನದಲ್ಲಿ ಮುಖ್ಯವಾದ ಒಂದು ಭಾವನೆಯೇ. ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ಸಹಾ ಅಷ್ಟೇ ಮುಖ್ಯ. ಒಂದರೆಕ್ಷಣ ಅನ್ನಿಸುವುದೂ ಉಂಟು ಭಯವೇ ಇಲ್ಲದಿದ್ದರೆ..!? 

ಹಿರಿಯರ ಭಯವಿಲ್ಲದಿದ್ದರೆ ಗೌರವ ಕೊಡಬೇಕೆನ್ನುವ ಪಾಠ ತಪ್ಪಿಹೋಗುತ್ತಿತ್ತು. ಗುರುಗಳ, ತಾಯಿ-ತಂದೆಯರ ಭಯವಿರದಿದ್ದರೆ ಒಳ್ಳೆಯ ಸಂಸ್ಕಾರ ಕಲಿಯುವುದು ತಪ್ಪಿಹೋಗುತ್ತಿತ್ತು. ಪರೀಕ್ಷೆಯ ಭಯವಿಲ್ಲದಿದ್ದರೆ ಓದುವ, ಅಭ್ಯಾಸ ಮಾಡುವುದೇ ತಪ್ಪಿ ಹೋಗುತ್ತಿತ್ತು, ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಾಗಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ದೇವರ ಮತ್ತು ಅವನು ನೀಡುವ ಶಿಕ್ಷೆಗಳ ಕುರಿತ ಭಯವಿಲ್ಲದಿದ್ದರೆ ಒಳ್ಳೆಯ ನಡತೆಗಳೇ ಕಡಿಮೆಯಾಗುತ್ತಿದ್ದವೇನೋ ಆದರೆ ಭಯ ಈ ರೀತಿಯಲ್ಲಿ ಇರುವುದು ಒಳ್ಳೆಯದು ಆದರೆ ಕೆಲವು ಅವ್ಯಕ್ತ ಭಯಗಳೂ ಇವೆ ಹೇಗೆಂದರೆ ಅವುಗಳು ಬದುಕಿನಲ್ಲಿ ಭವಿಷ್ಯಕ್ಕೇ ಮಾರಕವಾಗಿಬಿಡುತ್ತವೆ. ಆದರಿಂದ ಇಂಗ್ಲೀಷ್ ನಲ್ಲಿರುವ ಒಂದು ಮಾತು "ಲೈಫ್ ಬಿಗಿನ್ಸ್ ವ್ಹೇರ್ ಫಿಯರ್ ಎಂಡ್ಸ್" ಎಂಬ ಮಾತನ್ನು ನಂಬಲಾರದೇ ನಂಬುತ್ತೇನೆ.

ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಧೈರ್ಯವನ್ನು ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿಬಿಡುತ್ತಾರೆ.

"ಆಟ ಆದುವಾಗ ಹುಷಾರು, ಬಿದ್ದು ಬಿಟ್ಟೀಯಾ" ಎನ್ನುತ್ತಾರೆ, ಬೀಳದೆ, ಏಳದೆ ಆಟ ಆಡುವುದುಂಟೇ..? ತಾಯಿಯ ಮಮತೆಯ ಮನಸ್ಸಿನಲ್ಲಿ ಅಮ್ಮನ ಪ್ರೀತಿ ತುಂಬಿಕೊಂಡೇ ಈ ಮಾತನ್ನು ಆಡಿಸಿರುತ್ತದೆ ಆದರೆ ಹುಷಾರು ಎನ್ನುವ ಆ ಪದ ಮಕ್ಕಳ ಮನದ ಮೂಲೆಯಲ್ಲಿ ಅಲ್ಲೆಲ್ಲೋ ಅವಿತು ಕುಳಿತು ಮತ್ತೆಲ್ಲೋ ಪರಿಣಾಮ ಬೀರಬಹುದು.

"ಅಮ್ಮಾ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿದ್ದವನು ಕಾಪಿ ಚೀಟಿ ನೋಡಿಕೊಂಡು ಬರೆಯುತ್ತಿದ್ದ ಅದಕ್ಕೆ ನಾನು ಮಿಸ್ ಗೆ ಹೇಳಿದಕ್ಕೆ ಅವನನ್ನು ಹೊಡದು ನನ್ನ ಧೈರ್ಯವನ್ನು ಹೊಗಳಿದರು ಗೊತ್ತಾ?" ಎಂದು ಮನೆಯಲ್ಲಿ ಬಂದು ಹೇಳಿದ ಮರುಕ್ಷಣವೇ ಅವನ ಧೈರ್ಯದ ಬಲೂನು ಠುಸ್ ಎಂದು ಹೊಡೆದಿರುತ್ತದೆ ಕಾರಣ ಇಷ್ಟೇ.. "ಯಾಕೋ ಹಾಗೆ ಮಾಡಿದೆ? ಅವನು ಸೇಡು ಇಟ್ಟುಕೊಂಡು ನಾಳೆ ನಿನಗೆ ಏನಾದರೂ ಮಾಡಿದರೆ..? ನಿನಗೆ ಯಾಕೆ ಬೇಕಿತ್ತು ಊರಿನವರೆಲ್ಲರ ಉಸಾಬರಿ..? ಯಾರಾದರೂ ಏನಾದರೂ ಮಾಡಿಕೊಳ್ಳಲಿ ನಿನಗೇನು..? ಇನ್ನೊಂದು ಸಲ ಹಾಗೆಲ್ಲಾ ಮಾಡೋದಕ್ಕೆ ಹೋಗಬೇಡ". ಅದರಲ್ಲೂ ಹೆಣ್ಣು ಮಕ್ಕಳು ಏನಾದರೂ ಹೇಳಿದರು ಅಂದರೆ ಅವರು ಮಾಡಿ ಬಂದದ್ದು ದೊಡ್ಡ ತಪ್ಪೇನೋ ಎಂಬಂತೆ ಬಿಂಬಿಸಲಾಗಿತ್ತಿರುತ್ತದೆ. ಇದರ ಪರಿಣಾಮವೇ ಇಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಏನಾದರೂ ಸಂಭವಿಸದೆ ಇದ್ದರೆ ಇತರರ ಸಮಸ್ಯೆಗಳಿಗೆ ಪ್ರತಿಕ್ರಿಯಿಸದೇ ಇರುವುದು.. ಅರ್ಥಾತ್ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆಕ್ಸಿಡೆಂಟ್ ಇವೆಲ್ಲವುಗಳಿಗೂ ಮೂಕ ಪ್ರೇಕ್ಷಕರಾಗಿರುವುದು.

ಇದು ಮನೆಯಲ್ಲಿ ಸಂಭವಿಸುವ ಒಂದೆರಡು ಅವ್ಯಕ್ತ ಭಯಗಳಿಂದ ಉಂಟಾಗುವ ಪರಿಣಾಮವಾದರೆ ಶಾಲೆಗಳ, ಕಾಲೇಜುಗಳ ಕಥೆ ಕೇಳಿ..

ಅಂಕಗಳ ವಿಚಾರದಲ್ಲಿ ಪಕ್ಷಪಾತ ಮಾಡುವ ಶಿಕ್ಷಕರ ವಿಷಯವನ್ನು ಖಂಡಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷಕರ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆ ಆಗಿರುತ್ತದೆ. ಮನೆಯಲ್ಲಿ ಬಂದು ಹೇಳಿದರೆ ನಮ್ಮ ಧೈರ್ಯದ ವರ್ತನೆಯೇ ಇದಕ್ಕೆಲ್ಲಾ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸರಿ, ಮೇಲಿನ ಮಟ್ಟದ ಶಿಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದರೂ ಇದಕ್ಕೆಲ್ಲಾ ತಡೆಗೋಡೆ.

ಅವ್ಯಕ್ತ ಭಯವನ್ನು ನಮ್ಮಲ್ಲಿ ತುಂಬುವ ಕೆಲಸ ಎಲ್ಲೆಡೆಯಿಂದಲೂ ಸಾಗುತ್ತಲೇ ಇರುತ್ತದೆ. ಈ ರೀತಿಯ ಭಯದ ಮೂಸೆಯಲ್ಲಿ ನಮ್ಮನ್ನು ಅದ್ದದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಅಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಅಲ್ಲದೇ ಗರ್ಭದಲ್ಲಿರುವಾಗ ಮಗುವಿಗೆ ಧೈರ್ಯ ತುಂಬಲು ಗರ್ಭಿಣಿಯರಿಗೆ ಅಭಿಮನ್ಯುವಿನ ಪೌರುಷದ ಕಥೆ ಹೇಳುತ್ತಾರೆಯೇ ಹೊರತು ಉತ್ತರಕುಮಾರ ಹೆದರಿ ಯುದ್ದರಂಗದಿಂದ ಓಡಿದ ಕಥೆಯನ್ನು ಹೇಳುವುದಿಲ್ಲ. ಆದರೆ ಬೆಳೆಯುತ್ತಾ ಎಲ್ಲರೂ ಅವ್ಯಕ್ತ ಭಯವನ್ನು ಬಿತ್ತಿ ಬೆಳೆಸಿಬಿಡುತ್ತಾರೆ. "ಭಗತ್ ಸಿಂಗ್ ಅಂತಹವರು ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಎನ್ನುವ ಮನಸ್ಥಿತಿಯನ್ನು ತಲುಪಿರುವುದು ವಿಪರ್ಯಾಸ.

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿದರೂ ಆ ಭಾವನೆಯನ್ನು ಹೀರದೆ ಬದುಕಬಹುದು. ಅಂಟಿಯೂ ಅಂಟದಂತಹಾ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ, ಇದರಿಂದ ಬೇರೆಯವರೂ ಹೀಗೆ ಬದಲಾಗಬಹುದೇನೋ..
ಬರಹದಿಂದ ಬದುಕು ಬದಲಾಗುತ್ತದಾ? ಗೊತ್ತಿಲ್ಲ..??! ಆದರೆ ಪ್ರೇರಣೆಯಾಗಬಹುದು ಎಂಬ ನಂಬುಗೆಯಂತೂ ಇದೆ. ಅದೇ ಧೈರ್ಯದಿಂದ ಬರೆದಿದ್ದೇನೆ. ನೀನೇನು ಬರೀತೀಯಾ? ನಿಜವಾಗಲೂ ಇದನ್ನು ಓದ್ತಾರಾ? ಎಂಬೆಲ್ಲಾ ಅವ್ಯಕ್ತ ಭಯ ಬಿತ್ತಲು ಹವಣಿಸಿದ ಪ್ರಶ್ನೆಗಳನ್ನು ಒತ್ತರಿಸಿ ಬರೆದಿದ್ದೇನೆ.
ಓದಿ ಸಾಧ್ಯವಾದರೆ ಮರುತ್ತರ ನೀಡಿ ಪ್ರತಿಕ್ರಿಯಿಸಿ.

~ವಿಭಾ ವಿಶ್ವನಾಥ್