ಪುಸ್ತಕದ ಶೀರ್ಷಿಕೆ : ಶ್ರೀನಿಧಿಪುರದ ವಿಸ್ಮಿತ
ಲೇಖಕರು : ಸಾಯಿಸುತೆ
ಪ್ರಕಾಶಕರು : ಸುಧಾ ಎಂಟರ್ ಪ್ರೈಸಸ್
ಪ್ರಥಮ ಮುದ್ರಣ : 2025
ಪುಟಗಳು : 176
ಬೆಲೆ : 220 ರೂ.
ಅಮ್ಮ ವಸುಧಾಳ ತವರನ್ನು ಹುಡುಕಿಕೊಂಡು ಶ್ರೀನಿಧಿಪುರಕ್ಕೆ ಬರುವ ವಿಸ್ಮಿತ ಈ ಕಥೆಯ ನಾಯಕಿ.
ಶ್ರೀನಿಧಿಪುರ ಎನ್ನುವ ಚಂದದ ಊರು ಪುರಾತನತೆಯಿಂದ ಹಾಗೂ ಭೌಗೋಳಿಕವಾಗಿ ತನ್ನದೇ ಅಸ್ತಿತ್ವ ಪಡೆದಿತ್ತು. ಅಂತಹ ಊರಿಗೆ ವಿದೇಶದಲ್ಲಿ ಹುಟ್ಟಿ ಬೆಳೆದ ವಿಸ್ಮಿತ ಮೊದಲ ಬಾರಿಗೆ ಕಾಲಿಡುತ್ತಿದ್ದಳು. ಆಕೆ ಬಂದದ್ದು ಪದ್ಮನಾಭಯ್ಯನವರ ಸಲುವಾಗಿ. ಆದರೆ, ಉಳಿದುಕೊಂಡದ್ದು ಪಯಸ್ವಿನಿ ಹೋಟೆಲ್ ನಲ್ಲಿ.
ಮೊದಲಿಗೆ ಬಂದದ್ದು ಶ್ರೀನಿಧಿಪುರದ ಶ್ರೀನಿಧಿಯ ದೇವಾಲಯಕ್ಕೆ. ಭವ್ಯವಾದ ಶ್ರೀನಿಧಿಯ ಪರಿಚಯ ಆತನ ದಿವ್ಯ ಸಾನಿಧ್ಯದಲ್ಲಿ ಹಾಗೂ ಅಚ್ಚಯ್ಯ ಜೋಯಿಸರಿಂದ ತಿಳಿಯುತ್ತದೆ. ಆದರೆ, ತಾನು ಶ್ರೀನಿಧಿಪುರಕ್ಕೆ ಬಂದದ್ದೇಕೆ ಎನ್ನುವ ವಿಚಾರವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಗೂಗಲ್ ನಲ್ಲಿ ಸರ್ಚ್ ಮಾಡಿ ಹಾಗೂ ಕೆಲವರ ಬಾಯಿಯಿಂದ ತಿಳಿದ ವಿಚಾರಕ್ಕೆ ಇನ್ನಷ್ಟು ವಿಚಾರವನ್ನು ಇಲ್ಲಿ ಸಂಗ್ರಹಿಸಿ ಪುಸ್ತಕ ಬರೆಯಬೇಕೆನಿಸಿದೆ ಎಂದು ತನ್ನ ಬರುವಿಕೆಯ ಕಾರಣ ಕೊಟ್ಟಿದ್ದಳು.
ಮೊದಲಿಗೆ ಸಿಕ್ಕಿದ್ದು ಅಚ್ಚಯ್ಯ ಜೋಯಿಸರು ಹಾಗೂ ಪದ್ದಮ್ಮನವರ ಆತ್ಮೀಯವಾದ ಆಥಿತ್ಯ. ಮುಂದೆ ಸಾಂಬಶಿವಯ್ಯ ಹಾಗೂ ಅವರ ಪತ್ನಿ ಪಾರ್ವತಮ್ಮ ಆಪ್ತರಾಗುತ್ತಾರೆ.
ಒಳ್ಳೆಯ ಎಜುಕೇಶನ್, ವಿವಾಹಕ್ಕೆ ಸಂಬಂಧ ಬೆಳೆಸಲು ಬಹಳ ಸ್ಟೇಟಸ್ ಇರುವ ಫ್ಯಾಮಿಲಿಗಳು ಬರುವ ಸಂದರ್ಭದಲ್ಲಿಯೇ ವಿಸ್ಮಿತ ಅಲ್ಲಿಂದ ಕಾಲು ಕಿತ್ತದ್ದು ಅಲ್ಲಿ ಎಲ್ಲರ ಕಣ್ಣು ಕೆಂಪಾಗಿಸಿತ್ತು. ವಸುಧಾ ತನ್ನ ತಾತ ಅತ್ಯಂತ ನಿಷ್ಟುರ ನುಡಿಗಳಿಂದ ಶ್ರೀನಿಧಿಪುರಕ್ಕೆ ಕಾಲಿಡಬಾರದೆಂದು ಶಪಿಸಿದ್ದನ್ನು ಹೇಳಿದ್ದರು. ವಿಸ್ಮಿತ ಹಿಂತೆಗೆದಿರಲಿಲ್ಲ. ವಸುಧ ಹಾಗೂ ವಿಲಿಯಂ ಇಬ್ಬರೂ ಪ್ರೇಮಿಸಿ ವಿವಾಹವಾಗಿದ್ದರೂ.. ವಿವಾಹಕ್ಕೆ ವಸುಧಳ ಸಂಪ್ರದಾಯಸ್ಥ ಮನೆತನದವರು ಒಪ್ಪಿರಲಿಲ್ಲ. ಇಂದಿಗೂ ವಸುಧಳ ತವರಿನ ಕೊಂಡಿ ಬೆಸೆದಿರಲಿಲ್ಲ. ಇಬ್ಬರು ಮಕ್ಕಳಲ್ಲಿ ಮಗ ವಿನ್ಸೆಂಟ್, ವಿಲಿಯಂ ತಾಯಿಯ ಸುಪರ್ದಿಯಲ್ಲಿ ಬೆಳೆದಿದ್ದು. ವಿಸ್ಮಿತ ಬಹಳ ವಿಭಿನ್ನವಾಗಿ ವಸುಧಾಳ ತೆಕ್ಕೆಯಲ್ಲಿ ಬೆಳೆದಳು. ಅದಕ್ಕೆ ಕಾರಣವೇನು..?
ಪಯಸ್ವಿನಿ ವಿಶ್ವನಾಥರ ಕನಸು. ಶ್ರೀಮಂತ ಮನೆತವನದವರಿಗೆ, ಪ್ರಭಾವಿಗಳಿಗೆ ಅದು ವಾಸ್ತವ್ಯದ ತಾಣ. ವಿದೇಶಿ ಸಂಜಾತೆಯಾಗಿದ್ದರೂ ವಿಸ್ಮಿತ ಅವರನ್ನು ವಿಭಿನ್ನವಾಗಿ ಸೆಳೆದಿದ್ದಳು. ಆಕೆಯ ಹಿನ್ನೆಲೆಯನ್ನು ವಿಚಾರಿಸಿದ್ದರಲ್ಲದೆ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು.
ವಿಶ್ವನಾಥ್ ಅವರ ಏಕೈಕ ಮಗ ಪ್ರತಾಪ್ ಸ ಓದಿನಲ್ಲಿ ಬುದ್ಧಿವಂತ. ಪೂರ್ಣ ಸ್ವಾತಂತ್ರ್ಯ ನೀಡಿ ಬೆಳೆಸಿದ್ದರು. ಪಯಸ್ವಿನಿಯವರ ಆಕಸ್ಮಿಕ ಮರಣದ ನಂತರ ವಿಶ್ವನಾಥರ ಜಗತ್ತೇ ಅವನಾಗಿದ್ದ. ಹಾಗಾಗಿ ಮಗ ಕೇಳಿದ್ದಕ್ಕೆ ಬೇಡವೆನ್ನುತ್ತಿರಲಿಲ್ಲ. ಗೆಳೆಯರ ದಂಡು ಯಾವಾಗಲೂ ಅವನ ಜೊತೆಗಿರುತ್ತಿತ್ತು. ಮೊದಮೊದಲು ಇದು ದೊಡ್ಡ ಸಮಸ್ಯೆಯಾಗಿ ಕಂಡಿರಲಿಲ್ಲ. ಆದರೆ, ಈಗ ಜವಾಬ್ದಾರಿ ಹೊರಲು ಸಿದ್ಧವಿರದ ಪ್ರತಾಪ್ ಅವರ ಪಾಲಿಗೆ ಪ್ರಶ್ನೆಯಾಗಿದ್ದ. ಜೀವದ ಗೆಳೆಯರಾಗಿದ್ದ ರಾಜಗೋಪಾಲ್ ಅವರ ಸಲಹೆ ಹೆಚ್ಚು ಮನಸ್ಸಿಗೆ ಬಂದಿತ್ತು. ಅದು ಅವನಿಗೆ ವಿವಾಹ ಮಾಡುವುದು.
ಇವರ ಇಂಡಸ್ಟ್ರಿಗಳ ಹಲವು ಆಯಾಮಗಳನ್ನು ಅರ್ಥ ಮಾಡಿಕೊಂಡಿದ್ದ ಹಾಗೂ ಎಲ್ಲ ರೀತಿಯಲ್ಲೂ ಅಪ್ಡೇಟೆಡ್ ಆಗಿದ್ದ ಕಾಮಿನಿ ಪ್ರತಾಪ್ ನನ್ನು ವಿವಾಹವಾಗಲು ಮುಂದಾದಾಗ ವಿಶ್ವನಾಥರಿಗೆ ಆತಂಕವಾಗಿತ್ತು. ಅದೇಕೆ..? ಆ ಆತಂಕ ಕರಗಿದ್ದು ಪ್ರತಾಪ್ ನಿಂದಲೇ. ಅದು ಹೇಗೆ..?
ಪ್ರತಾಪ್ ಅವರಂದುಕೊಂಡಷ್ಟು ಮುಗ್ಧನಾಗಿರಲಿಲ್ಲ. ಆದರೆ, ಇನ್ನಷ್ಟು ಅನುಭವ ಬೇಕಿತ್ತು. ಅದಕ್ಕಾಗಿ ರಾಜಗೋಪಾಲ್ ಅವರ ಬಳಿ ಬೇರೆ ಸಲಹೆ ಇತ್ತು. ಆದರೆ, ಇಬ್ಬರೂ ಅದನ್ನು ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನವೂ ಇತ್ತು
ಪಾರ್ವತಮ್ಮನವರಿಗೆ ವಿಸ್ಮಿತಳ ಬಳಿ ಮಾತನಾಡಲು ಕೇಳಲು ಸಾಕಷ್ಟು ವಿಚಾರಗಳಿದ್ದವು. ಅಮೆರಿಕದಲ್ಲಿರುವ ತನ್ನ ಮಗ ವೇಣುವಿಗೆ ಹೆಣ್ಣು ಹುಡುಕುವ, ಅವನ ವಿವಾಹ ಮಾಡುವ ಕನಸಿಗೆ ಈಗ ರೆಕ್ಕೆ ಬಂದಿತ್ತು. ಅದಕ್ಕಾಗಿ ವಿಸ್ಮಿತಳನ್ನು ಅವಲಂಬಿಸಿದರು. ಸತ್ಯ ಗೊತ್ತಿದ್ದ ಸಾಂಬಶಿವಯ್ಯನವರು ಇದಕ್ಕೆ ಹೆಚ್ಚು ಆಸಕ್ತಿ ತೋರಲಿಲ್ಲ. ಒಂದು ಸಮಯದಲ್ಲಿ ವಿಸ್ಮಿತಳಿಗೂ ನಿಜ ಗೊತ್ತಾಗಿತ್ತಾದರೂ ಪಾರ್ವತಮ್ಮನವರಿಗೆ ಹೇಳುವಂತಿರಲಿಲ್ಲ. ಅವರೆಂದರೆ ಅಪರಿಮಿತ ಪ್ರೀತಿ ಹಾಗೂ ಗೌರವ. ಇಲ್ಲಿ ಸಾಂಬಶಿವಯ್ಯನವರ ಉನ್ನತ ವ್ಯಕ್ತಿತ್ವ ಸೆಳೆಯುತ್ತದೆ.
ಸಾಂಬಶಿವಯ್ಯನವರ ಸಲಹೆಯಂತೆ ಸಂಭಾವಿತ ಡ್ರೈವರ್ ನ ಅಗತ್ಯ ಅವಳಿಗೂ ಕಂಡಿತ್ತು. ಅವರ ಗಾಬರಿ, ಕಾಳಜಿ ಅರ್ಥವಾಗಿತ್ತು
ಶ್ರೀನಿಧಿಪುರಕ್ಕೆ ಬಂದಿದ್ದ ವಿಸ್ಮಿತಾಳಿಗೆ ವಸುಧಳ ಹಳೆಯ ಮನೆಯ ಸಂಪೂರ್ಣ ಪರಿಚಯವಾಗಿತ್ತು. ಅದು ಯಾವಾಗ..? ಅದೂ ಮನೆಯೊಡೆಯರ ಅನುಪಸ್ಥಿತಿಯಲ್ಲಿ ಅದು ಹೇಗೆ..?
ರಾಜಗೋಪಾಲ್ ಅವರು ಸಾಮಾನ್ಯ ಮನುಷ್ಯರಂತೆ ಕಂಡರೂ.. ಅಂತಹವರು ಲಕ್ಷಕೊಬ್ಬರು. ಅಂತಹ ಶ್ರೀಮಂತ ಗೆಳೆತನವನ್ನು ಎಂದಿಗೂ ದುರುಪಯೋಗ ಪಡಿಸಿಕೊಂಡವರಲ್ಲ. ಸಹಾಯಹಸ್ತವನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದರು. ಅಪ್ಪಟ ಸ್ನೇಹವಷ್ಟೇ ಇಬ್ಬರಲ್ಲಿಯೂ.. ಅಂತಹ ರಾಜಗೋಪಾಲ್ ಪ್ರತಾಪ್ ನಿಗೆ ನಿಶ್ಚಯಿಸಿದ ಕೆಲಸ ಶ್ರೀನಿಧಿಪುರದ ಅಧ್ಯಯನಕ್ಕೆ ಬಂದಿರುವ ವಿಸ್ಮಿತಳಿಗೆ ಬೇಕಾಗಿದ್ದ ಡ್ರೈವರ್ ಕಮ್ ಸೆಕ್ಯೂರಿಟಿಯನ್ನು.
ಪಯಸ್ವಿನಿ ಎಂಬ ಪಂಚತಾರಾ ಹೋಟೆಲ್ ಓನರ್ ಮಗ, ಹಲವು ಉದ್ಯಮಗಳ ಪಾರ್ಟ್ನರ್ ನ ಮಗ ಅದರ ಭಾವಿ ಮಾಲೀಕ ಡ್ರೈವರ್ ಆಗಲು ಒಪ್ಪಿದ್ದು ಹೇಗೆ..?
ಆತ ಪಯಸ್ವಿನಿಯ ಭಾವಿ ಯಜಮಾನ ಎಂಬುದನ್ನು ತಿಳಿಯದಂತೆ ನೋಡಿಕೊಳ್ಳುವುದು ಹೋಟೆಲ್ ಮ್ಯಾನೇಜ್ಮೆಂಟ್ ನ ಅನಿವಾರ್ಯವೂ ಆಗಿತ್ತು. ವಿಸ್ಮಿತಾಳ ಡ್ರೈವರ್ ಆಗಿದ್ದ ವಿಶ್ವನಾಥನ ನಂಬಿಕಸ್ತ ಡ್ರೈವರ್ ರಾಜೇಂದ್ರನ್ ಬದಲಾಗಿ ಪ್ರತಾಪ್ ಬಂದಿದ್ದ.
ವಸುಧಾರ ತಂದೆ ಪದ್ಮನಾಭನಯ್ಯನವರ ತಂದೆ ಅನಂತರಾಮಯ್ಯನವರು. ಅವರು ಅವರ ಕೊನೆಯ ದಿನಗಳಲ್ಲಿ ವಸುಧಾಳನ್ನು ಕ್ಷಮಿಸಿದ್ದರೇ.? ಈಗ ವಸುಧಾಳ ತಂದೆ-ತಾಯಿ ಅವಳ ಕುರಿತಾಗಿ ಯಾವ ಮನಸ್ಥಿತಿಯಲ್ಲಿದ್ದರು..?
ವಸುಧಾಳ ತಂದೆಯ ತಾಯಿ ಫಿಲೋಮಿನಾ ಮಾತು ಆ ಫ್ಯಾಮಿಲಿಗೆ ಶಾಸನದಂತೆ. ಅದನ್ನು ದಾಟಿದವರು ಯಾರೂ ಇರಲಿಲ್ಲ. ಈಗ ಅದನ್ನು ವಿಸ್ಮಿತ ದಾಟಿದ್ದರ ಪರಿಣಾಮವಾಗಿ ಮೊದಲಿಗೆ ಅವಳನ್ನು ಕರೆಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆದರೂ ಬಗ್ಗದಿದ್ದಾಗ ಏನಾಯ್ತು ..? ಕೊನೆಯ ಪ್ರಯತ್ನವೆಂಬಂತೆ ಮೈಕಲ್ ಅವಳ ಮೇಲೆ ಅಧಿಕಾರ ಸ್ಥಾಪಿಸಲು ಹೊರಟಾಗ, ಮೈಕಲ್ ಸಂಬಂಧವನ್ನು ವಿಸ್ಮಿತ ಒಪ್ಪುತ್ತಾಳೆಯೇ ..? ತನ್ನ ತಂದೆಯ ಕಡೆಯಿಂದ ಬರುತ್ತಿದ್ದ ಎಲ್ಲಾ ಹಣದ ಮೂಲವೂ ನಿಂತಾಗ ವಿಸ್ಮಿತ ವಾಪಸ್ ಹೋಗುತ್ತಾಳೆಯೇ ..?
ವಿಸ್ಮಿತಾಳ ಕಥೆಯಲ್ಲಿ ಪೆರುಮಾಳ್ ಗೆ ಜಾಗ ಸಿಕ್ಕಿತೇ..?
ವಿಸ್ಮಿತಾಳ ಡ್ರೈವರ್ ಆಗಿ ನೇಮಕವಾಗಿದ್ದ ಪ್ರತಾಪ್ ತನ್ನ ಪ್ರತಿ ನಡವಳಿಕೆಯನ್ನು ಎಚ್ಚರದಿಂದ ನಿಭಾಯಿಸಬೇಕಿತ್ತು . ವಿಸ್ಮಿತ ಎಂದಿಗೂ ಆತನಿಗೆ ಅಗೌರವದಿಂದ ನಡೆಸಿಕೊಳ್ಳಲಿಲ್ಲ. ಅವಳ ಸ್ವಭಾವ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳುವಂತೆಯೇ ಇರಲಿಲ್ಲ. ದಿನೇದಿನೇ ಅವಳ ಕೆಲಸದ ಹಾಗೂ ಅವಳ ನಡೆಯ ಕುರಿತಾಗಿ ತಿಳಿದುಕೊಳ್ಳುತ್ತಾ.. ಗಮನಿಸುತ್ತಾ ಇದ್ದ ಪ್ರತಾಪನ ವರ್ತನೆಯಲ್ಲಿ ಅವನಿಗೇ ಅರಿವಾಗದಂತೆ ಬದಲಾದ ಎಷ್ಟೋ ವಿಷಯಗಳನ್ನು ಕಾಣಬಹುದು.
ಪಯಸ್ವಿನಿಯ ಭವಿಷ್ಯ ಭದ್ರವಾದ ದಿನಗಳು ಓದಿಗೆ ಆಪ್ತತೆಯನ್ನು ನೀಡುತ್ತವೆ.
ಸಂಬಂಧಗಳ ಸ್ಪರ್ಶದಿಂದ ಬೇರೆಯದ್ದೇ ಜಗತ್ತು ಕಂಡವರು ಯಾರು ಯಾರು..?
ವಿಸ್ಮಿತ ಬರೆದ ಶ್ರೀನಿಧಿಪುರದ ವಿಸ್ಮಿತ ಕಾದಂಬರಿಯಲ್ಲಿ ಯಾರು ಯಾರ ಪಾತ್ರ ಹೇಗಿತ್ತು..? ಅದಕ್ಕೆ ಮುನ್ನುಡಿ ಬರೆದವರು ಯಾರು..? ವಿಸ್ಮಿತಾಳ ಪ್ರಯತ್ನ ಎಷ್ಟು ಫಲ ಕೊಟ್ಟಿತು..?
ಮಾನವೀಯತೆಯ ಸ್ಪರ್ಶದ ಜೊತೆಗೆ ನೈತಿಕ ಸಂಸ್ಕಾರಗಳ ಬದುಕನ್ನು ಇಲ್ಲಿ ಕಾಣಬಹುದಾಗಿದೆ. ಸಂಸ್ಕೃತಿ, ಪರಂಪರೆ, ದೈವಿಕತೆ, ಪರಸ್ಪರ ಗೌರವ ಒಬ್ಬರಿಗಿಂತ ಮತ್ತೊಬ್ಬರ ಉನ್ನತವಾದ ವ್ಯಕ್ತಿತ್ವ.. ಹೀಗೆ ಹಲವಾರು ಚಿತ್ರಣಗಳಿಂದ ಕಾದಂಬರಿ ಸೆಳೆಯುತ್ತದೆ. ಆಹ್ಲಾದಕರ ಹಾಗೂ ಉನ್ನತ ಆಲೋಚನೆಗಳ ಜೊತೆಗೆ ಮನಸ್ಸಿಗೆ ಹತ್ತಿರವಾಗುವ ಓದನ್ನು ನಿರೀಕ್ಷಿಸುತ್ತಿದ್ದರೆ ಇದು ಅದಕ್ಕೆ ಹೇಳಿ ಮಾಡಿಸಿದ ಕಾದಂಬರಿ. ಎಂದಿನಂತೆ ಸಾಯಿಸುತೆ ಅಮ್ಮನವರ ಕಾದಂಬರಿಯ ಓದು ಮುದ ನೀಡಿತು.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ