ಪುಸ್ತಕದ ಶೀರ್ಷಿಕೆ : ಮಿಲನ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್
ಮರು ಮುದ್ರಣ : 2025
ಪುಟಗಳು : 170
ಬೆಲೆ : 210 ರೂ.
ಎಷ್ಟೋ ಬಾರಿ ಮತ್ತೊಬ್ಬರ ಬದುಕನ್ನು ನೋಡಿ "ನಾವು ಆ ಬದುಕನ್ನು ಅನುಭವಿಸಬೇಕು." "ಆ ಬದುಕು ಎಷ್ಟು ಚಂದವಲ್ಲವೇ..?!" ಎನ್ನುವ ಭಾವನೆ ಹುಟ್ಟಿರುತ್ತದೆ. ನಾವು ಬದುಕುತ್ತಿರುವ ಬದುಕು ಸಹ ಬೇರೊಬ್ಬರ ಕನಸಾಗಿರಬಹುದು. ಮತ್ತೊಬ್ಬರ ಬದುಕು ಚೆಂದ ಎಂದುಕೊಳ್ಳುವ ನಮ್ಮ ಬದುಕು ಸಹ ಮತ್ತೊಬ್ಬರ ಕಣ್ಣಿಗೆ ಚೆಂದವೇ..!
ದುಡಿಯುವ ಹೆಣ್ಣಲ್ಲಿ.. ತಾನು ಮನೆಯಲ್ಲಿದ್ದು ಸುಂದರ ಕುಟುಂಬ, ಉತ್ತಮ ಗೃಹಿಣಿಯಾಗಿ ಬಾಳುವ ಕನಸು ಹುಟ್ಟಿಸಿದರೆ.. ಮನೆಯಲ್ಲಿರುವ ಗೃಹಿಣಿಗೆ ಮನೆಯ ಬಂಧನದಿಂದ ಹೊರಬಂದು ತನ್ನ ಖರ್ಚಿಗೆ ಬೇಕಾಗುವಷ್ಟು ಹಣವನ್ನು ತಾನೇ ದುಡಿದು, ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಬಯಕೆ. ಇಂತಹ ಇಬ್ಬರು ಹೆಣ್ಣು ಮಕ್ಕಳು ಈ ಕಾದಂಬರಿಯಲ್ಲಿ ಕಾಣುತ್ತಾರೆ. ಅವರೇ ಕ್ಷಮ ಮತ್ತು ವಿಶಾಲಿ.
ಈ ಕಾದಂಬರಿಯ ಶೀರ್ಷಿಕೆಗೆ ಇದು ಪೂರಕವಾಗಿ ಸಾಗುವ ಕಥೆ. ಪ್ರಣಯ, ಪ್ರೀತಿಯ ಶೀರ್ಷಿಕೆಯನ್ನು ಹೊಂದಿರುವ ಈ ಕಥೆಯಲ್ಲಿ ಪ್ರೇಮವೂ ಇದೆ ಹಾಗೂ ಸಮಾಜದಲ್ಲಿ ಕಾಣುವ ಮುಖವಾಡದ ವಂಚಕ ಪ್ರೇಮಿಗಳ ಬದುಕು ಸಹ ಇದೆ. ಈ ಕಾದಂಬರಿ 1970-80ರ ದಶಕದಲ್ಲಿಯೇ ಎರಡು ಮುದ್ರಣವನ್ನು ಕಂಡು ಈಗ ಸಾಹಿತ್ಯಲೋಕ ಪಬ್ಲಿಕೇಷನ್ ನಿಂದ ಮರುಮುದ್ರಣಗೊಂಡಿದೆ.
ಚಿತ್ರಲೇಖ ಮೇಡಂ ಈ ಕಥೆ ಹುಟ್ಟಿದ ಹಿನ್ನೆಲೆಯನ್ನು ಹೀಗೆ ಹೇಳುತ್ತಾರೆ. ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ 23 ದಿನಗಳ ಆಸ್ಪತ್ರೆ ವಾಸದಲ್ಲಿ ರೂಪುಗೊಂಡ ಏಕೈಕ ಕಾದಂಬರಿ ಇದು. ಆಗ ಅಲ್ಲಿ ಭೇಟಿಯಾದ ತರುಣಿಯೊಬ್ಬಳು ಅಳುತ್ತಿರುವುದನ್ನು ಕಂಡಿದ್ದರು. ಕುತೂಹಲದಿಂದ ವಿಚಾರಿಸಿದಾಗ ಆ ತರುಣಿಯ ಹಿಂದಿನ ಪ್ರೇಮಿ ಅಪಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದನು. ಹೌದು, ಹಿಂದಿನ ಪ್ರೇಮಿಯೇ.. ಈಗಾಗಲೇ ಆತನಿಗೆ ಮದುವೆಯಾಗಿತ್ತು. ಈಕೆಗೆ ಮೋಸ ಮಾಡಿ ಮದುವೆಯಾದವನನ್ನು ಕುರಿತು ಆಕೆಗೆ ಕಾಳಜಿ. ಆ ಯುವತಿಯ ಮನಸ್ಥಿತಿ ಲೇಖಕಿಯಲ್ಲಿ ಕೋಪ, ಮರುಕ ಅಸಹ್ಯದ ತಾಕಲಾಟ ಹುಟ್ಟಿಸಿತ್ತು. ಆಗ ರೂಪುಗೊಂಡು ಕಾದಂಬರಿ ಇದು ಎನ್ನುತ್ತಾರೆ.
ಮೊದಲಿಗೆ ಕ್ಷಮಳ ಆಫೀಸಿನಲ್ಲಿ ಸಾವಿತ್ರಿಯ ಸಂಸಾರದ ಚಿತ್ರಣ ಕಾಣುತ್ತದೆ. ಸಂಪಾದಿಸಿದ ಹೆಣ್ಣು ಬೇಕು ಎಂದು ಮದುವೆಯಾಗಿದ್ದ ಸಾವಿತ್ರಿಯ ಗಂಡ ಆಕೆಯ ಕಾಳಜಿ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಗರ್ಭಿಣಿಯಾಗಿದ್ದ ಅವಳ ಆರೋಗ್ಯದ ಸ್ಥಿತಿಯನ್ನು ಅವಳೇ ನೋಡಿಕೊಳ್ಳಬೇಕಿತ್ತು. ಆಗ ಕ್ಷಮಳ ಬಳಿಯಲ್ಲಿ ಹಣದ ಸಹಾಯ ತೆಗೆದುಕೊಂಡಿದ್ದಳು. ವಿಪರ್ಯಾಸವೆಂದರೆ, ಸಾವಿತ್ರಿ ಉಳಿಯಲಿಲ್ಲ. ಹಾಗೆಂದು ಕ್ಷಮಳ ಹಣವನ್ನು ಋಣವನ್ನು ಆಕೆ ಇಟ್ಟುಕೊಳ್ಳಲಿಲ್ಲ. ಆದರೆ, ಅಸಹ್ಯ ತರಿಸಿದೆಂದರೆ ಸಾವಿತ್ರಿಯ ಸಾವಿನ ಕಂಬನಿ ಆರುವ ಮುನ್ನವೇ ಆಕೆಯ ಗಂಡ ಆಕೆಯ ಇನ್ಸೂರೆನ್ಸ್ ಹಣದ ಕುರಿತಾಗಿ ವಿಚಾರಿಸಿದ್ದು. ಕ್ಷಮಳ ಮನಸ್ಸಿನಲ್ಲಿ ವಿವಾಹಿತರ ಕುರಿತು ಹಾಗೂ ಅವಿವಾಹಿತೆಯಾದ ತನ್ನ ಕುರಿತು ಹುಟ್ಟುವ ಆಲೋಚನೆಗಳ ಕುರಿತು ಓದಿ ನೋಡಿ.
ವಿಶಾಲಿಯ ವಿವಾಹವಾಗಿತ್ತು. ದೊಡ್ಡ ಮನೆ, ಸೌಕರ್ಯವಾದ ಬಾಳು. ಆದರೂ ಅವಳಿಗೆ ಬದುಕು ಶೂನ್ಯವೆನಿಸುತ್ತಿತ್ತು. ತಾನು ಬಾಡಿಗೆಗಿದ್ದ ಎದುರು ಮನೆಯಿಂದ ಕೆಲಸಕ್ಕೆ ಹೋಗುವ ಹುಡುಗಿಯನ್ನು ವೀಕ್ಷಿಸುತ್ತಿದ್ದಳು ಅವಳು. ಆ ಹುಡುಗಿಯೇ ಕ್ಷಮ. ಶೀಘ್ರ ಲಿಪಿಕಾರಳಾಗಿ ಆಫೀಸಿನಲ್ಲಿ ದುಡಿಯುತ್ತಿದ್ದ ಹೆಣ್ಣು. ತಂಗಿ ಕ್ಷೀರ, ಅಮ್ಮ ಹಾಗೂ ತಮ್ಮನನ್ನು ತನ್ನ ಹಣದಿಂದ ಸಾಕುತ್ತಿದ್ದಳು. ಪುಟ್ಟ ತಮ್ಮ ಹೊಟ್ಟೆಯಲ್ಲಿದ್ದಾಗಲೇ ತೀರಿಹೋಗಿದ್ದ ಅವಳ ಅಪ್ಪನ ಜಾಗದಲ್ಲಿ ನಿಂತು ಅವಳು ಕರ್ತವ್ಯ ನಿರ್ವಹಿಸುತ್ತಿದ್ದಳು. ಹೀಗಾಗಿ ಸೋದರತ್ತೆಯ ಮಗ ಗೋಪುವಿನ ಜೊತೆಗೆ ಆಗಬೇಕಾಗಿದ್ದ ವಿವಾಹವೂ ಆಗಲಿಲ್ಲ. ಕ್ಷಮ ತನ್ನ ಮನೆಯನ್ನು ನಡುನೀರಿನ ಪರಿಸ್ಥಿತಿಯಲ್ಲಿ ಬಿಟ್ಟು ಹೊರಡಲು ಸಿದ್ದಳಿರಲಿಲ್ಲ. ದುಡಿಯುವ ಹೆಣ್ಣು ತವರಿಗೆ ಸಹಾಯ ಮಾಡುವುದನ್ನು ಗಂಡಿನ ಮನೆಯವರು ಒಪ್ಪಲು ಸಿದ್ಧವಿರಲಿಲ್ಲ. ಇದು ಗೋಪು ಒಬ್ಬನ ಕಥೆಯಲ್ಲ. ಹೆಚ್ಚಿನವರ ಕಥೆ ಹಾಗೆಯೇ ಇತ್ತು. ಆದರೆ, ಇದಾವುದಕ್ಕೂ ಕುಗ್ಗದೆ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ ಕೇವಲ ಆಫೀಸಿನಲ್ಲಿ ಮಾತ್ರವಲ್ಲದೆ ಸಂಜೆ ಪಾರ್ಟ್ ಟೈಮ್ ಕೆಲಸವನ್ನೂ ಮಾಡಿ ಸಂಸಾರವನ್ನು ಪೋಷಿಸುತ್ತಿದ್ದ ದಿಟ್ಟ ಹುಡುಗಿ ಕ್ಷಮ.
ವಿಶಾಲಿಯದ್ದು ಮತ್ತೊಂದು ತರಹದ ಕಥೆ. ವಿಶಾಲಿಯ ತಾಯಿ ಅವಳು ಚಿಕ್ಕಂದಿನಿಂದಾಗಲೇ ತೀರಿಹೋಗಿದ್ದರು. ಅವಳ ತಂದೆ ಎರಡನೇ ಮದುವೆಯಾಗಿದ್ದರು. ಹಾಗೆಂದು ಚಿಕ್ಕಮ್ಮ ಆಕೆಯನ್ನು ಕಡೆಗಣಿಸಿರಲಿಲ್ಲ. ಗಂಡು ಮಕ್ಕಳಿದ್ದ ಆಕೆಗೆ ಮಗಳಾಗಿ ವಿಶಾಲಿ ಇದ್ದಳು. ವಿಶಾಲಿಯ ಸ್ವಂತ ತಾಯಿಯ ತಮ್ಮನ ಮಗ ಭಾಸ್ಕರನಿಗೆ ವಿಶಾಲಿ ಎಂದು ಯಾವಾಗಲೋ ತೀರ್ಮಾನವಾಗಿದ್ದ ಮಾತನ್ನು ತಂಗಿ ಸತ್ತಳೆಂದು ಅವರು ಕಳೆದುಕೊಂಡಿರಲಿಲ್ಲ. ಭಾಸ್ಕರ ಹಾಗೂ ವಿಶಾಲಿಯರ ವಿವಾಹವಾಗಿತ್ತು. ಭಾಸ್ಕರ ಪೂರ್ಣಸಮ್ಮತಿಯಿಂದೇನೂ ಈ ವಿವಾಹಕ್ಕೆ ಒಪ್ಪದಿದ್ದರೂ.. ವಿವಾಹದ ನಂತರ ವಿಶಾಲಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ.
ವಿಶಾಲಿ ಹಾಗೂ ಕ್ಷಮ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆದರೂ ಪರಸ್ಪರ ರ ನೋಟ ಇಬ್ಬರಿಗೂ ಪರಿಚಯ. ಎಷ್ಟಾದರೂ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ..?
ಭಾಸ್ಕರನ ಕೋಪ, ಸಿಡುಕನ್ನು ಸಹಿಸಿಕೊಂಡು ವಿಶಾಲಿ ಆತನನ್ನು ದಿನೇ ದಿನೇ ಹೆಚ್ಚಾಗಿ ಪ್ರೇಮಿಸುತ್ತಲೇ ಹೋಗುತ್ತಿದ್ದಳು. ಆತನಿಗೆ ಪತ್ನಿ ತಗ್ಗಿ-ಬಗ್ಗಿ ನಡೆದಾಗ, ಸೋತಾಗ ಹೆಚ್ಚು ಖುಷಿ. ಅಂತೆಯೇ ಸಾಗುತ್ತಿದ್ದ ಬದುಕಿನಲ್ಲಿ ವಿಶಾಲಿಗೆ ತಾನು ಕಂಡ ವಿಚಾರಗಳನ್ನು ಬಣ್ಣಿಸುತ್ತಿದ್ದಳು. ಕ್ಷಮಳ ಕುರಿತು ಆತನಿಗೆ ತನ್ನ ಮನದ ಮಾತುಗಳನ್ನು ಹೇಳುತ್ತಿದ್ದಳು. 'ಹುಲ್ಲೆ ಮರಿ' ಎಂದು ಕರೆಯುತ್ತಿದ್ದ ಆತ ಕ್ಷಮಾಳ ವಿಚಾರವನ್ನು ಕೇಳಿಸಿಕೊಳ್ಳಲು ಮನಸ್ಸಿಲ್ಲವೆಂಬಂತೆ ನಟಿಸಿದರೂ.. ಆತನಿಗೂ ಅದು ಇಷ್ಟವೇ ಆಗುತ್ತಿತ್ತು. ಆದರೆ, ಹಾಗೆಂದು ಬಾಯಿಬಿಟ್ಟು ಹೇಳುತ್ತಿರಲಿಲ್ಲ.
ಭಾಸ್ಕರ ಹಾಗೂ ವಿಶಾಲಿಯರ ಬದುಕಿನ ವಸಂತದ ಸೂಚನೆಯಲ್ಲಿಯೂ ವಿಶಾಲಿ ತವರಿಗೆ ಹೋಗುವ ತವಕ ತೋರಲಿಲ್ಲ. ಅವಳಿಗೆ ಭಾಸ್ಕರನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆಂಬಂತೆ ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು.
ಇತ್ತ ಕ್ಷಮ ಬದುಕಲ್ಲಿ ಗೋಪುವಿನ ಮದುವೆಯಾದ ನಂತರ ಒಂದು ರೀತಿಯಲ್ಲಿ ತನ್ನ ಮನೆಗಾಗಿಯೇ ಎಂಬಂತೆ ದುಡಿಯುತ್ತಿದ್ದಳು. ತೀರಾ ಪ್ರೀತಿ-ಪ್ರೇಮ ಎಂದು ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ.. ಗೋಪುವಿನ ವಿವಾಹದಲ್ಲಿ ಮನೆಯವಳಂತೆ ಓಡಾಡಿದಳು. ಗೋಪು ಹಾಗೂ ಅವಳ ಒಡನಾಟ ಹೇಗಿತ್ತು ಓದಿ ನೋಡಿ.
ಕ್ಷಮ ಒಂದು ದಿನ ಅಪಘಾತಕ್ಕೆ ಒಳಗಾದಾಗ ಪರಿಚಯವಾದ ಮಹೇಂದ್ರ ಅವಳ ಬಾಳಲ್ಲಿ ಯಾವೆಲ್ಲ ರಾಗರಂಜಿತ ಕನಸುಗಳನ್ನು ತುಂಬುತ್ತಾನೆ..? ಕ್ಷಮಳ ಮನಸ್ಸು ಜಾರಿ ಪ್ರೀತಿಯಲ್ಲಿ ಬಿದ್ದ ದಿನಗಳು, ಅವಳ ನಡೆ, ಅಲಂಕಾರ ಎಲ್ಲವೂ ಹೇಗಿತ್ತು..? ಅನಾಥನಾಗಿದ್ದ ಮಹೇಂದ್ರ ತನ್ನ ತಾಯಿಗೆ ಕರೆತಂದು ಪರಿಚಯ ಮಾಡಿಸುವುದಕ್ಕೂ ಮುನ್ನವೇ ಕ್ಷಮ ಆತನನ್ನು ತನ್ನವನೆಂದು ಸ್ವೀಕರಿಸಿಯಾಗಿತ್ತು. ಕ್ಷಮ ಅದೊಂದು ನಡೆಯಲ್ಲಿ ಎಡವಿದಳೇ..?
ಇಲ್ಲಿ ಕ್ಷಮ ಅಥವಾ ವಿಶಾಲಿ ಇಬ್ಬರೂ ತನ್ನ ಸಂಗಾತಿ ತನ್ನನ್ನು ಮಾತ್ರ ಪ್ರೀತಿಸಬೇಕು ಜೊತೆಗೆ ಏಕಪತ್ನಿ ವ್ರತಸ್ಥನಾಗಿರಬೇಕು ಎಂಬ ಬಯಕೆಯನ್ನೇ ಇಟ್ಟುಕೊಂಡಿರುವುದು ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನ ಮಾತಿನಂತಿದೆ.
ಕ್ಷಮಳ ಪ್ರೀತಿಗೆ ಮಹೇಂದ್ರ ಸರಿಯಾದ ವ್ಯಕ್ತಿಯಾಗಿದ್ದ ನೇ..? ಭಾಸ್ಕರ ಯಾವೆಲ್ಲಾ ನಡೆಗಳನ್ನು ಬದಲಿಸಿಕೊಂಡಿದ್ದರೆ ವಿಶಾಲುವಿನ ಪ್ರೀತಿಗೆ ಅರ್ಹ ವ್ಯಕ್ತಿಯಾಗುತ್ತಿದ್ದ..?
ಕ್ಷಮ ಹಾಗೂ ವಿಶಾಲಿ ಇಬ್ಬರ ಬದುಕು ಒಂದು ಘಟ್ಟದಲ್ಲಿ ಮಿಳಿತವಾಗುವ ಸಂದರ್ಭ ಬರುತ್ತದೆ. ಆ ಸಂದರ್ಭ ಯಾವುದು..? ಓದಿ ನೋಡಿ.
ಕಥೆಯ ಶೀರ್ಷಿಕೆ ಹಾಗೂ ನಿರೂಪಣೆ ಕಥೆಯನ್ನು ಎಲ್ಲಿಯೂ ಬಿಟ್ಟುಕೊಡದಂತೆ ಸಾಗುತ್ತದೆ. ಅಂತ್ಯದಲ್ಲಿ ಬರುವ ಟ್ವಿಸ್ಟ್ ವಿಶಾಲು ಹಾಗೂ ಕ್ಷಮ ಇಬ್ಬರ ಬದುಕನ್ನು ಬದಲಿಸುವ ಬಗೆ ಹೇಗೆ..? ತಿಳಿಯಲು ಓದಿ ಚಿತ್ರಲೇಖ ಮೇಡಂ ಅವರ ಕಾದಂಬರಿ ಮಿಲನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ