ಪುಸ್ತಕದ ಶೀರ್ಷಿಕೆ : ನಕ್ಷತ್ರ ಮಲ್ಲಿಗೆ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 1999
ಮರು ಮುದ್ರಣ: 2020
'ನಕ್ಷತ್ರ ಮಲ್ಲಿಗೆ' ಎಂಬ ಕಾದಂಬರಿಯ ಶೀರ್ಷಿಕೆ ಕುತೂಹಲ ಮೂಡಿಸಿತು. ನಿತ್ಯ ಮಲ್ಲಿಗೆ, ದುಂಡು ಮಲ್ಲಿಗೆಗಿಂತ ಸೊಬಗು ಜೊತೆಗೆ ಸುವಾಸನೆಯೂ ಅವಕ್ಕಿಂತ ಮಾದಕ. ಜೊತೆಗೆ ನಕ್ಷತ್ರಗಳಂತೆ ಎಂಟು ದಳ ಚಾಚಿದ್ದ ನಕ್ಷತ್ರ ಮಲ್ಲಿಗೆಯ ಕುರಿತು ಮೊದಲಿಗೆ ಪರಿಚಯ ಮಾಡಿಸುತ್ತಾರೆ.
ರಂಗಣ್ಣನವರ ಮನೆಯಲ್ಲಿಯೇ ನಕ್ಷತ್ರ ಮಲ್ಲಿಗೆ ಗಿಡ ಬೆಳೆದಿದ್ದರೂ.. ಹೂಗಳು ಹಾರಿ ಪಕ್ಕದ ಮನೆಯ ಭೀಮರಾಯರ ಕಾಂಪೌಂಡ್ ನಲ್ಲಿ ಬೀಳುತ್ತಿತ್ತು. ಗಿಡ ಹಾಕಿ, ಪಾತಿ ಮಾಡಿ, ಗೊಬ್ಬರ ಹಾಕಿ, ಆರೈಕೆ ಮಾಡಿದವರಿಗಿಂತ ಹೆಚ್ಚಿನ ಹೂಗಳ ರಾಶಿ ಅವರಿಗೆ ಶ್ರಮವಿಲ್ಲದೆ ಸಿಗುತ್ತಿತ್ತು. ಇದಕ್ಕೆ ರಂಗಣ್ಣನವರದ್ದು ನಿರ್ಲಿಪ್ತತೆಯ ಉತ್ತರ. "ಯಾರ್ಯಾರಿಗೆ ಎಷ್ಟು ಪ್ರಾಪ್ತಿಯೋ ಅಷ್ಟೇ ಪ್ರಾಪ್ತಿ, ಪಾರಿಜಾತ ಆದರೆ ಗಿಡದ ಕೆಳಗೆ ಉದುರುತ್ತೆ. ಗಿಡ ಹಾಕಿದವರ ಮನೆಗೆ ಸಿಗುತ್ತೆ. ಈ ಹೂವು ಹಾಗಲ್ಲ ಹಾರಿ ಹಾರಿ ದೂರ ಬೀಳುತ್ತೆ" ಎನ್ನುವ ಮಾತು ಹೇಳುತ್ತಿದ್ದರು. ಹೀಗೆ ರಾಮಬಾಣ ಮಲ್ಲಿಗೆ, ಆಕಾಶ ಮಲ್ಲಿಗೆ, ನಕ್ಷತ್ರ ಮಲ್ಲಿಗೆ ಎಂಬ ಹೂವಿನ ಪರಿಚಯ ಮಾಡಿಸುತ್ತಲೇ ರಂಗಣ್ಣನವರ ಮನೆಯ ಪರಿಸ್ಥಿತಿಯನ್ನು ಪರಿಚಯಿಸುತ್ತಾರೆ.
ರಂಗಣ್ಣನವರು ತಾವು ಕಷ್ಟಪಟ್ಟು ಬೆಳೆಸಿ, ಉನ್ನತ ವಿದ್ಯಾಭ್ಯಾಸ ಮಾಡಿಸಿದ ಮಗ ಒಳ್ಳೆ ಸಂಬಳ ತೆಗೆಯುವ ಅಧಿಕಾರಿಯಾದಾಗ ಶ್ರೀಮಂತ ಯುವತಿಯನ್ನು ವಿವಾಹವಾದ ನಂತರ ಹೆತ್ತ ತಂದೆ-ತಾಯಿಯ ಋಣ ತೀರಿಸುವ ಬದಲು ಮಾವನ ಮನೆಗೆ ನಿಷ್ಠೆಯಿಂದಿರುವ ಚಿತ್ರಣವಿದೆ.
ನಕ್ಷತ್ರ ಮಲ್ಲಿಗೆಯ ಹಾಗಿದ್ದ ಮಗನನ್ನು ಸಹಿಸುತ್ತಿದ್ದ ರಂಗಣ್ಣನವರಿಗೆ ನಕ್ಷತ್ರ ಮಲ್ಲಿಗೆಯನ್ನು ಸಹಿಸುವುದರಲ್ಲೇನೂ ವಿಪರೀತವಿರಲಿಲ್ಲವೆಂದು ಅನ್ನಿಸುತ್ತದಾದರೂ ಆ ಮನಸ್ಥಿತಿ ಅಷ್ಟು ಸುಲಭವಾಗಿ ಬರಲಾರದು. ರಂಗಣ್ಣನವರು ಗಿಡಗಳಿಗೆ ಆರೈಕೆ ಮಾಡಲು ಎಂದಿಗೂ ಹಿಂದೇಟು ಹಾಕದೆ, ಅಷ್ಟೇ ಶ್ರಮಪಟ್ಟು ಅದನ್ನು ಬೆಳೆಸುತ್ತಿದ್ದರು. ಒಂದೆರಡು ಹಿಡಿ ಹೂ ಮಾತ್ರ ತಮಗೆ ಸಿಕ್ಕರೂ ಅಷ್ಟರಲ್ಲಿಯೇ ತೃಪ್ತಿ ಪಡುತ್ತಿದ್ದ ರಂಗಣ್ಣನವರಿಗೆ ಮಗನ ಕುರಿತು ಅಷ್ಟೇ ತೃಪ್ತಿಯಿತ್ತೇ..?
ರಂಗಣ್ಣ ಹಾಗೂ ಪಾರ್ವತಮ್ಮ ದಂಪತಿಗಳಿಗೆ ರಾಜೇಂದ್ರ ಮಗನಾದರೆ.. ಅವನ ನಂತರ ಮೂವರು ಹೆಣ್ಣುಮಕ್ಕಳಿದ್ದರು. ಮಗನನ್ನು ಚೆನ್ನಾಗಿಯೇ ಓದಿಸಿದರಾದರೂ.. ಅದೃಷ್ಟ ಇರದೇ ಸರಿಯಾದ ಕೆಲಸ ಸಿಕ್ಕಿರದ ಸಂದರ್ಭದಲ್ಲಿ ಇಂಜಿನಿಯರ್ ಶ್ರೀಪಾದರಾಯರ ಒಬ್ಬಳೇ ಪುತ್ರಿ ಮಾಲಿನಿ ಆತನನ್ನು ಪ್ರೀತಿಸಿದಳು. ಮಗಳನ್ನು ಕಷ್ಟಕ್ಕೆ ದೂಡಲು ಇಚ್ಛಿಸಿದ ತಂದೆ ರಾಜೇಂದ್ರನಿಗೆ ಹಲವಾರು ಶರತ್ತುಗಳನ್ನು ವಿಧಿಸಿ ತಮ್ಮ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪಿದರು.
ರಾಜೇಂದ್ರನ ಮನೆಯ ಪರಿಸ್ಥಿತಿಯನ್ನೆಲ್ಲ ಅವನಿಂದಲೇ ತಿಳಿದುಕೊಂಡವರು ಪಾಟ್ನಾದಲ್ಲಿ ಇಂಜಿನಿಯರ್ ಕೆಲಸ ಕೊಡಿಸಿ, ಮುಂದೆ ಕಾಂಟ್ರಾಕ್ಟರ್ ಆಗಿರುವ ತಮ್ಮನ ಜೊತೆಗೆ ವ್ಯವಹಾರ ಮಾಡಲು, ಅಂಗಡಿ ಮಾಲೀಕನಾಗಲು, ತಮ್ಮ ಹೊಸಮನೆಯ ರೂಪು-ರೇಷೆಗಳನ್ನೆಲ್ಲ ತಿಳಿಸಿ ಮಗಳ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಿದರು.
ಸೋದರತ್ತೆಯ ಕುರೂಪಿ ಹಾಗೂ ಓದದ ಮಗಳನ್ನು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವಿವಾಹವಾಗುವ ಒತ್ತಡ ಮನೆಯಿಂದ ಬಂದಾಗ ರಾಜೇಂದ್ರ ಅದನ್ನು ನಿರಾಕರಿಸಿ ಮಾಲಿನಿಯನ್ನು ಮದುವೆಯಾಗುವ ವಿಚಾರ ತಿಳಿಸುತ್ತಾನೆ. ಪಾರ್ವತಮ್ಮನವರು ಒಪ್ಪಿದರೂ.. ರಂಗಣ್ಣನವರು ಬೀಗರ ಕಪಟ ನಾಟಕವನ್ನು ಕಂಡು ತಳಮಳಿಸುತ್ತಾರೆ. ಆದರೆ ಆ ಕಪಟ ನಾಟಕದ ಸಂಚಿನಲ್ಲಿ ಮಗನದ್ದೂ ಪಾಲಿದೆ ಎಂದು ಅವರಿಗೆ ಅರ್ಥವಾಗಿರಲಿಲ್ಲ. ಆ ಸಂಚೇನು..?
ಮಾಲಿನಿ ಈ ಮನೆಗೆ ಹೊಂದಿಕೊಳ್ಳಲಿಲ್ಲ ಜೊತೆಗೆ ರಾಜೇಂದ್ರ ತನ್ನ ತಂದೆ ತಾಯಿಗೆ ಮನೆಯ ರಿಪೇರಿಗಾಗಿ ಹಣ ಕಳುಹಿಸಲಿಲ್ಲ. ಜೊತೆಗೆ, ತಂದೆ ಹಣ ಕೇಳಿದಾಗಲೆಲ್ಲ ಅದನ್ನು ನೇರವಾಗಿ ನಿರಾಕರಿಸುತ್ತಿದ್ದ. ಮನೆಯಲ್ಲಿ ಹೆಣ್ಣುಮಕ್ಕಳ ವಿವಾಹವಾಗಿದ್ದು ಇಬ್ಬರ ಖರ್ಚಿಗೆ ಅಷ್ಟು ಅವಶ್ಯಕತೆ ಇಲ್ಲವೆಂದು ನಿಷ್ಕರುಣೆಯಿಂದಲೇ ಹೇಳುತ್ತಿದ್ದ. ಮಾಲಿನಿಯ ತವರಿಗೆ ಬಂದು ಹೋದದ್ದು ಮತ್ತೊಬ್ಬರ ಕಡೆಯಿಂದ ಗೊತ್ತಾಗುತ್ತಿತ್ತು. ಮಗ ಚಿಂಟು ಹುಟ್ಟಿದನ್ನು ಪತ್ರ ಬರೆದು ತಿಳಿಸಿದ್ದನಷ್ಟೇ.. ಆದರೆ, ಕೆಲವೊಮ್ಮೆ ರಂಗಣ್ಣನವರ ಹಣದ ಹಪಾಹಪಿ ವಿಪರೀತವೆಂದೂ ಭಾಸವಾಗುವಂತಹ ಸಂಧರ್ಭಗಳೂ ಇಲ್ಲದಿಲ್ಲ.
ಅತ್ತೆ-ಮಾವನ ಮನೆಯ ಗೃಹಪ್ರವೇಶಕ್ಕೆಂದು ಕರೆಯಲು ರಾಜೇಂದ್ರ ಅವರಿಗೆ ತಕ್ಕದಾದ ಉಡುಗೊರೆಯನ್ನು ತಂದೆ-ತಾಯಿಗೆ ತಂದು ತಾವೇ ತಂದಂತೆ ಅವರಿಗೆ ಕೊಡಲು ಸೂಚಿಸಿದ್ದ. ಅಷ್ಟೇ ಅಲ್ಲದೆ ತಾವು ಇದೇ ಊರಿನಲ್ಲಿ ನೆಲೆಸಲು ಬಂದದ್ದನ್ನು ಆಗ ಹೇಳಿದನಷ್ಟೇ,.
ಬೀಗರ ಶ್ರೀಮಂತಿಕೆ, ಮಗನ ನಿರ್ಲಕ್ಷದ ನಡುವೆಯೂ ಮೊಮ್ಮಗನಿಗಾಗಿ ಹೋಗಿದ್ದರು. ಆಗ ಸಿಕ್ಕದ್ದು ರಾಜೇಂದ್ರನ ಗೆಳೆಯ ವಿಶ್ವನಾಥ. ವಿಶ್ವನಾಥನಿಂದ ರಾಜೇಂದ್ರನ ಪ್ರತಿಯೊಂದು ವಿಚಾರವೂ ಕೂಲಂಕಶವಾಗಿ ರಂಗಣ್ಣ ಹಾಗೂ ಪಾರ್ವತಮ್ಮನವರಿಗೆ ತಿಳಿದಿತ್ತು. ಮತ್ತೊಬ್ಬ ಮಗನಂತೆಯೇ ನಡೆದುಕೊಂಡು ರಾಜೇಂದ್ರನ ಹಣದಿಂದಲೇ ಅವನಿಗೆ ತಿಳಿಯದಂತೆ ಈ ದಂಪತಿಗಳಿಗೆ ಸಹಾಯ ಮಾಡಿದ್ದ ವಿಶ್ವನಾಥ. ಅಷ್ಟಕ್ಕೂ ವಿಶ್ವನಾಥ ಹಾಗೂ ರಂಗಣ್ಣ-ಪಾರ್ವತಮ್ಮ ದಂಪತಿಗಳಿಗೆ ಅಷ್ಟು ವಿಶ್ವಾಸ ಬೆಳೆದದ್ದು ಹೇಗೆ..?
ಈಗ ರಂಗಣ್ಣನವರು ಮಗನಿಗೆ ಕಟುವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವಷ್ಟು ಸಿದ್ದರಾದರು. ಅದರಿಂದ ರಾಜೇಂದ್ರನಿಗೆ ರೋಷ, ಅಪಮಾನಗಳಾದರೂ ಸಹಿಸಿಕೊಳ್ಳಬೇಕಿತ್ತು. ಆದರೆ, ಅದು ವಿಶ್ವನಾಥನ ಕುಮ್ಮಕ್ಕು ಎಂದು ತಿಳಿಯದೆ ಆತ ತಪ್ಪು ತಿಳಿದನಾದರೂ.. ಅದು ಯಾರ ಮೇಲೆ..?
ರಂಗಣ್ಣನವರಿಗೆ ಸಹಾಯ ಮಾಡಿದ ವಿಶ್ವನಾಥ ಅವರಿಂದ ಪ್ರತಿಯಾಗಿ ಯಾವ ಸಹಾಯದ ನಿರೀಕ್ಷೆ ಇಟ್ಟಿದ್ದ..? ಅದು ಆತನಿಗೆ ದಕ್ಕಿತೇ..?
ರಂಗಣ್ಣನವರ ಮೂವರು ಹೆಣ್ಣುಮಕ್ಕಳಲ್ಲಿ ಯಾರು ಯಾರ ಸಂಸಾರ ಹೇಗಿದ್ದಿತ್ತು..? ಅದರಲ್ಲಿ ಸ್ವಲ್ಪ ಅತಿಯಾಸೆಯವಳು ಎನ್ನಬಹುದಾದ ಗಾಯತ್ರಿಯನ್ನು ಕೊಂಚ ಒಳಗೆ ಬಿಟ್ಟುಕೊಂಡರು. ಯಾವ ಮನಸ್ಥಿತಿ ಹಾಗೂ ಪರಿಸ್ಥಿತಿಯಿಂದ ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಸಲಹಲು ಒಪ್ಪಿದರು ರಂಗಣ್ಣ ದಂಪತಿಗಳು..?
ನಕ್ಷತ್ರ ಮಲ್ಲಿಗೆಯಂತಿದ್ದ ಮಗ ರಾಜೇಂದ್ರ ಸಂಪೂರ್ಣವಾಗಿ ಅಲ್ಲದಿದ್ದರೂ.. ಒಂದು ಸಹಾಯ ಕೋರಿ ತಂದೆ-ತಾಯಿಯ ಬಳಿಗೆ ಬರುವ ಸಂದರ್ಭ ಬಂದಾಗ ಆತನ ಮನಸ್ಥಿತಿ ಹೇಗಿತ್ತು..? ಮಾಲಿನಿ ಅದನ್ನು ಒಪ್ಪಿದಳೇ...? ತಂದೆ - ತಾಯಿ ಹೇಗೆ ನಡೆದುಕೊಂಡರು..?
ಮಕ್ಕಳೆದುರಿಗೆ ಪರಾಧೀನರಾಗದ ಜೊತೆಗೆ, ಮಕ್ಕಳೆದುರು ಅನ್ನಕ್ಕೆ ಅಂಗಲಾಚದಂತೆ ಬಾಳಿದ ದಂಪತಿಗಳ ಬದುಕು ತಹಬದಿಕೆ ಬಂದದ್ದಕ್ಕೆ ನಿಜವಾಗಿಯೂ ಕಾರಣವೇನು..?
ಏನೇ ಆದರೂ.. ಮಕ್ಕಳು ಎಷ್ಟೇ ಚೆನ್ನಾಗಿದ್ದರೂ ತಮ್ಮ ವೃದ್ಧಾಪ್ಯದ ದಿನಗಳಿಗೆ ಯಾರನ್ನೂ ಅಂಗಲಾಚುವ ಪರಿಸ್ಥಿತಿ ಬರಬಾರದೆಂದರೆ ತಮ್ಮದಾದ ಆಸ್ತಿ, ಹಣ ಹಾಗೂ ಸ್ವಾಭಿಮಾನ, ಧೈರ್ಯ ಎಷ್ಟು ಮುಖ್ಯ ಎಂಬುದನ್ನು ತೋರುವ ಕಥಾಹಂದರ ಇಲ್ಲಿದೆ. ಅಕಸ್ಮಾತ್ ವಿಶ್ವನಾಥ ಅವರ ಸಹಾಯಕ್ಕೆ ಬರದಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನೂ ಯೋಚಿಸಬೇಕಿದೆ.
ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಹಾಗೂ ಪರೋಪಕಾರದಿಂದ ಎಂದಿಗೂ ಕೇಡಾಗುವುದಿಲ್ಲ ಎಂಬ ಸಂದೇಶವನ್ನೂ ನೀಡುವ ಕಾದಂಬರಿಯ ಸುಲಲಿತ ಓದು.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ