ಪುಸ್ತಕದ ಶೀರ್ಷಿಕೆ : ಚದುರಿದ ಕತೆಗಳು
ಲೇಖಕರು : ಕೊಡಗು ಗಣೇಶ್
ಪ್ರಕಾಶಕರು : ಗಾಯತ್ರೀ ಪ್ರಕಾಶನ
ಪರಿಷ್ಕೃತ ಮರು ಮುದ್ರಣ : 2022
ಪುಟಗಳು : 96
ಬೆಲೆ : 100 ರೂ.
ಕೊಡಗು ಗಣೇಶ್ (ಎ. ಕೆ ಗಣೇಶ್) ಅವರು ಒಂದು ಕುಟುಂಬದ ಕಥೆ, ಒಡಹುಟ್ಟಿದವಳು, ಶೋಷಿತ ಹೆಣ್ಣು ಎಂಬ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಕೊಡಗು ಭಾಷೆಯಲ್ಲಿ ಮಳೆ ನಿಕ್ಕಣೆ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ನಾ ಕಂಡ ಅಮೆರಿಕಾ ಎಂಬ ಪ್ರವಾಸ ಕಥನ ಬರೆದಿದ್ದಾರೆ. ಮಿನುಗುತಾರೆ ಇವರ ಮೊದಲ ಕಥಾ ಸಂಕಲನ. 1998ರಲ್ಲಿ ಪ್ರಥಮ ಮುದ್ರಣವಾಗಿತ್ತು. ಅದೇ ಕಥಾ ಸಂಕಲನ ಈಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಮರುಮುದ್ರಣಗೊಂಡು ನಮ್ಮ ಓದಿಗೆ ಚದುರಿದ ಕತೆಗಳು ಎಂಬ ಹೆಸರಿನಿಂದ ಲಭ್ಯವಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು 6 ಕತೆಗಳಿವೆ.
ಬಿಟ್ಟಿ ಕೂಳು : ಶೇಷಗಿರಿ ರಾವ್ ಅವರು ಖಾಸಗಿ ಶಾಲೆಯ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಅವರ ತಂದೆ ಇಂಗ್ಲೀಷರ ಕಾಲದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು. ಇಂಗ್ಲಿಷ್ ಅಧಿಕಾರಿಗಳು ಸಹ ಗೌರವ ನೀಡುತ್ತಿದ್ದವರು. ಅಂತಹವರ ಮಗನಾಗಿ ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ಶೇಷಗಿರಿರಾಯರು ನ ಸಾಹಿತಿಗಳು ಆಗಿದ್ದವರು ನಾಲ್ಕೈದು ಕಥಾ ಸಂಕಲನ ಬರೆದು ಜನಪ್ರಿಯರೂ ಆಗಿದ್ದರು. ಕನ್ನಡದ ಮೇಲಿನ ಅಭಿಮಾನದಿಂದ ಮನೆಯೆಲ್ಲವೂ ಕನ್ನಡಮಯವಾಗಿಯೇ ಬೆಳಗಿತ್ತು. ಮಕ್ಕಳಿಗೂ ಇದೆ ಸ್ವಭಾವ ಬಂದಿತ್ತು. ಇಬ್ಬರು ಗಂಡು ಮಕ್ಕಳಿಗೆ ಶಿವರಾಜ್, ರಾಘವೇಂದ್ರ ಎಂದು ಹೆಸರಿಟ್ಟರು. ಹೆಣ್ಣು ಮಗುವಿಗೆ ಪಾರ್ವತಿ ಎಂದು ಹೆಸರಿಟ್ಟರು. ಇದೆಲ್ಲದಕ್ಕೂ ಮುಖ್ಯ ಕಾರಣ ಡಾ. ರಾಜ್‌ಕುಮಾರ್ ಅವರ ಮೇಲಿರುವ ಅಭಿಮಾನ. ಕಥೆಯುದ್ದಕ್ಕೂ ಇದು ಕಾಣುತ್ತದೆ. ಈ ಕಾಲಕ್ಕೆ ಸರಿಹೊಂದುವ ಕೆಲಸಕ್ಕೆ ಇಂಗ್ಲಿಷ್ ನ ಅಗತ್ಯವಿತ್ತು. ಆದರೆ, ಗಂಡು ಮಕ್ಕಳಿಬ್ಬರೂ ಕನ್ನಡದಲ್ಲಿಯೇ ಬಿ.ಎ ಹಾಗೂ ಎಂ .ಎ ಮಾಡಿದ್ದವರು. ಕೆಲಸ ಸಿಗದ ಕಾರಣಕ್ಕೆ ಅವರನ್ನು 'ಬಿಟ್ಟಿಕೂಳು' ಎಂದು ಹಂಗಿಸುತ್ತಿದ್ದ ಶೇಷಗಿರಿ ರಾವ್ ಅವರ ಮಕ್ಕಳ ಭವಿಷ್ಯ ಬದಲಾಗುವ ಸಂದರ್ಭ ಬರುತ್ತದೆ. ಅವರು ಹಂಗಿಸುತ್ತಿದ್ದ ಪದವೇ ಮುಂದೆ ಅವರನ್ನು ದೈತ್ಯಾಕಾರವಾಗಿ ಕಾಡುವ ಕಥೆ ಇಲ್ಲಿದೆ. ಮೂವರು ಮಕ್ಕಳ ಮೂರು ಭವಿಷ್ಯದ ಚಿತ್ರಣ ಇಲ್ಲಿದೆ.
ಅನಾಥ ಹೆಣ್ಣು : ವಸುಂಧರಾಳಿಗೆ ಬುದ್ಧಿ ಬಂದಾಗಿನಿಂದಲೂ ಪ್ರಪಂಚದಲ್ಲಿ ತನಗೆ ಯಾರೂ ಇಲ್ಲವೆಂಬುದು ಗೊತ್ತಿತ್ತು. ಹೇಗೆ ಬೆಳೆದೆ ? ಹೇಗೆ ದೊಡ್ಡವಳಾದೆ ? ಎಂಬ ಆಲೋಚನೆ ಮೂಡುವ ಹೊತ್ತಿಗೆ ಮನೆಯೂ ಇಲ್ಲದೆ, ತನ್ನವರೆನ್ನುವವರಿಲ್ಲದೆ ಬದುಕಿದ್ದಳು. ಈಗ ಅವಳ ಯೌವ್ವನದ ದಿನಗಳಲ್ಲಿ ತನ್ನ ಮಾನ ರಕ್ಷಿಸಿಕೊಳ್ಳಬೇಕು ಎಂಬುವ ಕನಿಷ್ಟ ಪ್ರಜ್ಞೆ ಮೂಡಿತ್ತು. ನಗರಕ್ಕೆ ಬಂದ ವಸುಂಧರಾಳ ಭವಿಷ್ಯ ಯಾವ ರೀತಿ ರೂಪುಗೊಂಡಿತು..? ಯಾರೂ ಇಲ್ಲದ ಅನಾಥ ಹೆಣ್ಣೊಬ್ಬಳು ಯಾವ ಹಾದಿ ಹಿಡಿದಳು..? ಅವಳ ಮಗಳು ಈಗ ದೊಡ್ಡವಳಾಗಿ ಅನಾಥೆಯಾಗಿ ಮತ್ತೆ ಅದೇ ಜಾಗದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದ್ದೇಕೆ ಓದಿ ನೋಡಿ.
ಮಿನುಗು ತಾರೆ : ಹೆಸರಿಗೆ ತಕ್ಕ ಚೆಲುವೆಯಾಗಿದ್ದ ಶ್ವೇತ ಊರಿನ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಜಗಪತಿರಾಯರ ಒಬ್ಬಳೇ ಮುದ್ದಿನ ಮಗಳು. ಕಾಲೇಜಿನಲ್ಲಿ ಎಲ್ಲರ ಕನಸಿನ ಕನ್ಯೆ. ಹಾಗೆಂದು ದರ್ಪ ತೋರಿದವಳಲ್ಲ. ಸರಳ ನಡೆ, ಸ್ನೇಹ ಮನೋಭಾವದಿಂದ ಎಲ್ಲರ ಮನೆಗೆದ್ದವಳು. ಕರ್ನಾಟಕದ ಸೌಂದರ್ಯ ಸ್ಪರ್ಧೆ ಮಿನುಗು ತಾರೆ ಸ್ಪರ್ಧೆಗೆ ಕಾಲೇಜಿನಿಂದಲೇ ಆಯ್ಕೆಯಾಗಿದ್ದಳು. ತಂದೆ-ತಾಯಿಯರ ಸಂಭ್ರಮ ಮುಗಿಲ ಮುಟ್ಟಿತ್ತು. ಶ್ವೇತ ಆ ಸ್ಪರ್ಧೆಯಲ್ಲಿ ಗೆದ್ದ ಮೇಲಂತೂ ಅವರ ಸಂಭ್ರಮ ಹೇಳತೀರದು. ಅದಾದ ನಂತರ ಪರಿಸ್ಥಿತಿ ಬದಲಾಗಿತ್ತು. ಶ್ವೇತ ಕಾಲೇಜಿಗೆ ಹೋಗದೆ ಅವಳದೇ ನೋವಿನಲ್ಲಿ ಉಳಿದಾಗ ಅವಳ ಪಾಲಿನ ಪ್ರೇಮವಾಗಿ ಸಿಕ್ಕಿದ್ದು ಆಕಾಶ್. ಆಕಾಶ್ ವಿವಾಹದ ನಂತರ ಶ್ವೇತಳ ಪರಿಸ್ಥಿತಿ ಗೊತ್ತಾಯಿತಾದರೂ.. ಆಕಾಶ್ ಅವಳ ಹೃದಯವಂತಿಕೆಗೆ ಬೆಲೆ ಕೊಡುತ್ತಾನೆ. ಮುಂದೆ ಶ್ವೇತಳ ಮನಸ್ಥಿತಿ ಮಾತ್ರವಲ್ಲ ಅವಳ ಬದುಕು ಬದಲಾಗುತ್ತದೆ. ಶ್ವೇತಳ ಬದುಕು ಬದಲಾಗಿದ್ದಾದರೂ ಹೇಗೆ..? ಆಕಾಶನ ಬದುಕು ಏನಾಯ್ತು ಓದಿ ನೋಡಿ.
ನನ್ನ ಮದುವೆ : ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ತಂದೆಗೆ ಒಬ್ಬನೇ ಮಗನಾಗಿದ್ದವನಿಗೆ.. ಹಲವಾರು ಸಂಬಂಧಗಳು ಬರುತ್ತಿದ್ದಾದರೂ .. ಅವನಿಷ್ಟ ಪಟ್ಟ ರೂಪವಂತೆಯೇ ಒಪ್ಪಿದ್ದರ ಜೊತೆಗೆ ಮಗಳನ್ನೂ ಕೊಟ್ಟು ಪ್ರೈವೇಟ್ ಕಂಪನಿಯಲ್ಲಿ ಕೆಲಸವನ್ನು ಕೊಡಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಮಗಳ ಐಬನ್ನು ಗಂಡಿನ ತಂದೆ-ತಾಯಿಯ ಬಳಿ ಹೇಳಿದ್ದರಾದರೂ ಹುಡುಗನಿಗೆ ಆ ವಿಚಾರ ತಿಳಿದದ್ದು ವಿವಾಹದ ನಂತರವೇ.. ಹಾಗೆಂದು, ಅವಳ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಅವರ ವಿವಾಹದಿಂದ ಶುರುವಾದ ಕಥೆ ಅವಳಿ ಹೆಣ್ಣು ಮಕ್ಕಳ ವಿವಾಹದ ಆಲೋಚನೆಯವರೆಗೂ ಹೋದ ಸಂದರ್ಭವನ್ನು ಇಲ್ಲಿ ಕಾಣಬಹುದು.
ಮಾಲತಿ : ಇದು ಮಾಲತಿ ಎಂಬ ಹೆಣ್ಣಿನ ಬದುಕಿನ ಜೀವನಗಾಥೆ. ಸುಂದರಿಯಾಗಿದ್ದ ಮಾಲತಿ ಹಾಗೂ ಅವಳ ಚಾರಿತ್ರ್ಯದ ಕುರಿತ ವಿಚಾರಗಳನ್ನು ಕಥೆಯ ಶುರುವಿನಲ್ಲಿ ತೆರೆದಿಡುತ್ತಾರೆ. ಮುಂದೆ ಮಾಲತಿಗೆ ಮನೆಯ ಪರಿಸ್ಥಿತಿಯಿಂದ ಓದಲಾಗದೆ, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ಸ್ ಕೆಲಸಕ್ಕೆ ಸೇರುವ ಅನಿವಾರ್ಯತೆ ಬರುತ್ತದೆ. ಕಾಲೇಜಿನ ಗೆಳೆಯನಾಗಿದ್ದ ಪ್ರಕಾಶ್ ನಿಂದ ಅವಳ ಬದುಕಿನ ಗತಿಯೇ ಬದಲಾಗುತ್ತದೆ. ತಂದೆ ತಾಯಿ ವಿವಾಹಕ್ಕೆ ವಯಸ್ಸಾಗಿದ್ದ ವರನನ್ನು ಗೊತ್ತು ಮಾಡಿದಾಗ ಪ್ರಕಾಶನ ಸಹಾಯದಿಂದ ಮದ್ರಾಸಿಗೆ ಹೊರಡುತ್ತಾಳಾದರೂ.. ಅಲ್ಲಿ ಪ್ರಕಾಶ ಹೇಳಿದಂತೆ ಕೇಳಲು ಒಪ್ಪುವುದಿಲ್ಲ. ಚಿತ್ರರಂಗಕ್ಕೆ ಸೇರಲು ಹೊರಟವಳಿಗೆ ಎದುರಾದ ತಪ್ಪು ದಾರಿ ಹಿಡಿಯುವ ಅನಿವಾರ್ಯತೆಯನ್ನು ನಿರಾಕರಿಸಿ ತನ್ನದೇ ಬದುಕು ಕಟ್ಟಿಕೊಳ್ಳುವ ಮಾಲತಿಯ ಕಥೆ ಇಲ್ಲಿದೆ. ಅಷ್ಟೆಲ್ಲಾ ಬವಣೆ ಅನುಭವಿಸಿದ ಮಾಲತಿಯ ಬದುಕಿನ ಅಂತ್ಯವನ್ನು ಬೇರೆ ರೀತಿಯಲ್ಲಿ ಮಾಡಿದರೆ ಈ ಕಥೆ ಸ್ಪೂರ್ತಿದಾಯಕವಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ.
ಹೃದಯದ ಕಣ್ಗಳಿಂದ : ಬೀದಿ ಬದಿಯಲ್ಲಿ ವಾಸಿಸುತ್ತಿದ್ದವನು ಆದಾಯಕ್ಕಾಗಿ ನೆಚ್ಚಿದ್ದು ತನ್ನ ಹಾರ್ಮೋನಿಯಂ ಅನ್ನು. ರೈಲಿನಲ್ಲಿ ಪ್ರತಿದಿನ ಹಾಡುತ್ತಾ ಕಾಸು ಸಂಪಾದಿಸುತ್ತಿದ್ದನು. ದಷ್ಟಪುಷ್ಟವಾದ ದೇಹ, ಒಳ್ಳೆಯ ಕಂಠವಿದ್ದರೂ... ಚರ್ಮ ಕಾಣಿಸದಷ್ಟು ದೊಡ್ಡ ಗುಳ್ಳೆಯ ಗಂಟುಗಳಿದ್ದ ಮುಖ. ಆದರೆ, ಮಾನವೀಯತೆ ಎಲ್ಲರಿಗಿಂತಲೂ ಹೆಚ್ಚೇ ಇದ್ದಿತು. ಈಗ ಅವನಿಗೊಂದು ಸಂಸಾರವಿತ್ತು. ಗೂನು ಬೆನ್ನಿನ, ಮೂಕ ಹಾಗೂ ಕಿವುಡು ಹೆಣ್ಣೊಬ್ಬಳು ಮನೆಯ ಯಜಮಾನಿಯಂತೆ ಮನೆಯನ್ನು ನಿರ್ವಹಿಸುತ್ತಿದ್ದಳು. ಜ್ಯೋತಿ ಎಂಬ ಕಣ್ಣು ಕಾಣದ ಹುಡುಗಿಯ ದುರಂತಗಾಥೆ ಕೇಳಿ ಆಕೆಗೆ ಬೆಳಕಾಗಲು ಶ್ರಮಿಸುತ್ತಾನೆ. ಮಗಳಂತೆ ಸಲಹುತ್ತಾನೆ. ಈ ಮೂವರ ಬಾಂಧವ್ಯದ ಕಥೆಯನ್ನು ನಾವೂ ಹೃದಯದ ಕಣ್ಣುಗಳಿಂದ ನೋಡಿದಾಗ ಹೆಚ್ಚೇ ತಾಕುತ್ತದೆ.
ಕಥೆಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣಗಳು ವಾಸ್ತವವನ್ನು ಕಣ್ಮುಂದೆ ತರುತ್ತವೆ. ಎಲ್ಲಾ ಕಥೆಗಳಲ್ಲಿಯೂ ದುರಂತದ ಪ್ರಮಾಣ ಹೆಚ್ಚೇ ಇದೆ ಎನಿಸಿತು. ಕಥೆಗೆ ತಕ್ಕ ಭಾಷೆ, ಸಂಭಾಷಣೆ, ನಿರೂಪಣೆ ಆಸಕ್ತಿಯಿಂದ ಓದಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ