ಪುಸ್ತಕದ ಶೀರ್ಷಿಕೆ : ಮಿಂಚು ಮತ್ತು ಮಳೆ
ಲೇಖಕರು ಮತ್ತು ಪ್ರಕಾಶಕರು : ದಿವ್ಯಾ ಕಾರಂತ್
ಪ್ರಥಮ ಮುದ್ರಣ : 2021
ಪುಟಗಳು : 108
ಬೆಲೆ : 120 ರೂ.
ಲೇಖಕಿ ದಿವ್ಯಾ ಕಾರಂತ್ ಅವರು ಮೂಲತಃ ಚಿಕ್ಕಮಗಳೂರು ಕೊಪ್ಪದ ಹತ್ತಿರದ ಬಸರೀಕಟ್ಟೆಯವರು. 'ಮಲೆನಾಡ ಗರ್ಭ ಹಾಗಾಗಿ ಮಿಂಚು ಮತ್ತು ಮಳೆ ಸ್ವಾಭಾವಿಕ' ಎನ್ನುತ್ತಾರೆ ಪ್ರೀತಿಯಿಂದ ಮುನ್ನುಡಿ ಬರೆದಿರುವ ಸೇತುರಾಮ್ ಅವರು. ಲೇಖಕಿಯವರ ಮಲೆನಾಡಿನ ಪರಿಸರವನ್ನು ಇಲ್ಲಿನ ಕಥೆಗಳುದ್ದಕ್ಕೂ ನಾವು ಕಾಣಬಹುದಾಗಿದೆ.
ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.
ವಿಜಯಲಕ್ಷ್ಮಿಯ ಜಡೆ : ಮಲೆನಾಡಿನ ಮಳೆಯ ಚಿತ್ರಣದ ದೃಶ್ಯಾವಳಿ ಕಾಣುತ್ತದೆ. ಆರು ದಿನಗಳ ನಿರಂತರ ಮಳೆಯಿಂದ ಅಸ್ತವ್ಯಸ್ತವಾದ ಅವರ ಬದುಕು, ಹಳ್ಳ-ಕೊಳ್ಳಗಳೆಲ್ಲ ತುಂಬಿ ಅವುಗಳನ್ನು ದಾಟಲು ಹಾಕಿರುವ ಸಂಕಗಳು ಮುಚ್ಚಿ ಹೋಗುವಂತೆ ಹರಿಯುತ್ತಿದ್ದ ಮಳೆ ನೀರು. ಇಂತಹ ದಿನಗಳಲ್ಲಿ ಮಳೆಯಲ್ಲಿಯೇ ಶಾಲೆಗೆ ಹೋಗುವ ಮಕ್ಕಳು. ಇಲ್ಲಿ ಮುಖ್ಯವಾಗಿ ಇಬ್ಬರು ಅಣ್ಣ-ತಂಗಿಯರ ಬಾಂಧವ್ಯ, ಕಿತ್ತಾಟ, ಕೋಳಿ ಜಗಳ ಎಲ್ಲವೂ ಆಪ್ತವಾಗುತ್ತದೆ. ಅಣ್ಣನ ತರಗತಿಯವಳೇ ಆದ ವಿಜಯಲಕ್ಷ್ಮಿಯಿಂದ ಅಣ್ಣನ ಕುರಿತು ತಿಳಿದುಕೊಳ್ಳುತ್ತಿದ್ದವಳಿಗೆ ವಿಜಯಲಕ್ಷ್ಮಿಯ ಜಡೆಯೂ ಅಷ್ಟೇ ಕಣ್ಣಿಗೆ ಕಟ್ಟಿದಂತಿತ್ತು. ಕಥೆಯ ಕೊನೆಯಲ್ಲಿ ಬರುವ ವಿಜಯಲಕ್ಷ್ಮಿಯ ಜಡೆ ಮಳೆಯ ಅಬ್ಬರದಲ್ಲಿ ಮರೆಯಲು ಆಗದಂತೆ ಮಾಡುವುದೇಕೆ ಓದಿ ನೋಡಿ.
ಭಾಗೀರಥಿ : ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯೊಡನೆ ಜಗಳವಾಡಿ, ಅಪ್ಪ-ಅಮ್ಮನಿಂದ ಬಯ್ಯಿಸಿಕೊಳ್ಳದಿದ್ದರೆ ಬೇಸಿಗೆ ರಜೆ ಪರಿಪೂರ್ಣವಾಗುತ್ತಿರಲಿಲ್ಲವಂತೆ. ಹೀಗಿದ್ದ ಅಜ್ಜಿಯ ಹೆಸರು ಭಾಗೀರಥಿ. ಅಜ್ಜಿಗೆ ಗಂಡು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಅದನ್ನು ಪ್ರಶ್ನಿಸಿ ಅವರಿಗೆ ಕೋಪ ತರಿಸಿ ಜಗಳವಾಡುತ್ತಿದ್ದರ ಜೊತೆಗೆ ಅಜ್ಜಿಯ ರಾಜ್ಯಭಾರ ಹಾಗೂ ಆ ರಾಜ್ಯಭಾರದಲ್ಲಿ ಇಡೀ ಮನೆಯ ಚಿತ್ರಣ ಕಾಣುತ್ತದೆ.
'ಗಟ್ಟಿ ಇರಬೇಕು, ಒಳಗೂ ಹೊರಗೂ, ಯಾರೇ ಬಂದ್ರೂ, ಬಾರಿಸಿ ವಾಪಸ್ ಕಳಿಸೋ ಹಂಗಿರ್ಬೇಕ್' ಎನ್ನುವ ಅಜ್ಜಿಯ ಮಾತಿನ ಹಿಂದಿದ್ದ ಮರ್ಮವೇನು..?
'ಇಷ್ಟೊತ್ತು ದೇವಿಯಾಗಿದ್ದ ಅಜ್ಜಿ, ಮತ್ತೆ ಮಾಮೂಲಿನಂತೆ ಚೌಡಿಯಾಗುವ ಲಕ್ಷಣಗಳು ಕಾಣಿಸತೊಡಗಿದವು' ಎಂಬ ಈ ಮಾತುಗಳೇ ಕಥೆಯ ಸಾರವನ್ನು ಹಿಡಿದಿಟ್ಟಿವೆ.
ಭೋಜರಾಜ : ಪ್ರೀತಿಯ ಕರು ಭೋಜರಾಜನ ಲೀಲೆಗಳು ಮಾತ್ರ ಸಾಲದು ಎಂಬಂತೆ... ಅದು ಕಲಾತ್ಮಕವಾಗಿ ಕಟ್ಟಿಸಿದ 12 ಅಡಿ ಆಳದ ಟ್ಯಾಂಕಿನ ಒಳಗೆ ಬಿದ್ದು ನೀರಿನಲ್ಲಿ ತೇಲುತ್ತಿರುವಾಗ ಭೋಜನನ್ನು ಎತ್ತಲು ಬಂದ ನಾಗೇಂದ್ರನ ಕಥೆ, ಅಲ್ಲಲ್ಲ ಅವರಿಬ್ಬರ ದೊಂಬರಾಟದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ.
ಗಣಿತ ಸುಲಭ! : ಮೇರಿ ಟೀಚರ್ ಬಹಳ ಶಿಸ್ತಿನ, ಬಹಳ ಕೋಪದ ಟೀಚರ್. ಎಂತಹ ದಡ್ಡರ ತಲೆಗೂ ಪಾಠ ತೂರಿಸುತ್ತಾರೆಂದು ಪ್ರಸಿದ್ಧಿ ಪಡೆದಿದ್ದವರು. ಗಣಿತದ ಟೀಚರ್ ಆಗಿದ್ದವರ ಕುರಿತು ಅಣ್ಣ ಹೇಳಿದ ಮೇಲಂತೂ ಇನ್ನೂ ಭಯ ಆವರಿಸಿತ್ತು. ಹೀಗಾಗಿ ಗಣಿತದ ಪಲಾಯನ ಆರಂಭವಾಗಿತ್ತು. ಪ್ರೀತಿಯಿಂದ ಹೇಳಿಕೊಟ್ಟಾಗ ಏನನ್ನು ಬೇಕಾದರೂ ವಿದ್ಯಾರ್ಥಿಗಳು ಕಲಿಯುತ್ತಾರೆ. ಹಾಗೆ ಮೇರಿ ಟೀಚರ್ ಹೇಳಿಕೊಟ್ಟ ಮಂತ್ರ ಒಂದು ಗಣಿತವನ್ನು ಸುಲಭವಾಗಿಸಿತೇ..? ಮಂತ್ರಕ್ಕೆ ಧನ್ಯವಾದ ಅರ್ಪಿಸಲು ಹೋದವಳಿಗೆ ಮೇರಿ ಟೀಚರ್ ಏನೆಂದರು..?
ರಾವಣಾಯಣ : ಅಪ್ಪನ ಹಳೆಯ ವಿದ್ಯಾರ್ಥಿಗಳು ಖುದ್ದಾಗಿ ಬಂದು, ತಾವೇ ರಾಮಾಯಣ ಪ್ರದರ್ಶಿಸುತ್ತಿರುವುದರಿಂದ ಜೊತೆಗೆ ಬಹಳ ತಾಲೀಮು ಮಾಡಿಕೊಂಡಿರುವುದರಿಂದ ತಪ್ಪದೇ ಬರಬೇಕೆಂದು ಕೇಳಿಕೊಂಡಿದ್ದಕ್ಕೆ ಮನೆಯವರೆಲ್ಲರೂ ದೇವಸ್ಥಾನದ ರಂಗಮಂದಿರಕ್ಕೆ ಹೋದರು. ರಾಮಾಯಣವನ್ನು ತಲೆಕೆಳಕು ಮಾಡಿದವರ ಆಟಕ್ಕೆ ಯಾರ್ಯಾರ ಪ್ರತಿಕ್ರಿಯೆ ಹೇಗಿತ್ತು..? ಅಮ್ಮಿಗೆ ರಾವಣ ಗೆದ್ದಿದ್ದರಲ್ಲಿ ಯಾವ ತಪ್ಪೂ ಕಾಣಲಿಲ್ಲವೇಕೆ..? ರಾಮಾಯಣ ಹೋಗಿ ರಾವಣಾಯಣ ಆದದ್ದನ್ನು ಓದಿ ನೋಡಿ.
ಕೆರೆಯ ನೀರನು ಕೆರೆಗೆ ಚೆಲ್ಲಿ : ಅಮ್ಮನ ಪ್ರಾಣಿ ಪ್ರೀತಿಯ ಜೊತೆಗೆ ಪ್ರತಿಯೊಂದಕ್ಕೂ ಪ್ರೀತಿಯಿಂದ ಹೆಸರಿಟ್ಟು ಮನೆಯವರಂತೆಯೇ ಅವುಗಳನ್ನು ಮಾತನಾಡಿಸುವ ಅಮ್ಮನ ಪರಿ ಹಾಗೂ ಕೆರೆ ಹಾವು ಬಂದಾಗ ಅಮ್ಮನ ಶಾಂತತೆ ಜೊತೆಗೆ ಇವರಿಗೆ ಹಾವಿನ ಭಯ.. ರಸವತ್ತಾಗಿ ಸಾಗುವ ಪ್ರಸಂಗವಿದು. ಅಣ್ಣ-ತಂಗಿಯ ಮಾತುಕತೆಗಳು ನೈಜವಾಗಿವೆ.
ಪೊರಕೆ ಪ್ರೀತಿ : ಪೊರಕೆ ಪ್ರೀತಿ ಎಂದ ಕ್ಷಣ ಕಸಗುಡಿಸುವ ಪೊರಕೆಯ ಕುರಿತ ಪ್ರೀತಿ ಇದಿರಬಹುದೇ ಎಂದೆನಿಸಿದರೂ ಇದು ಹಾಗಲ್ಲ. ಇದ್ದ ಬೆರಳೆಣಿಕೆಯ ಗೆಳತಿಯರ ನಡುವಲ್ಲಿ ಆಪ್ತವಾಗಿದ್ದ, ಪ್ರೀತಿಯ ಮನೆಗೆ ಹೋದ ಪ್ರಸಂಗ ಜೊತೆಗೆ ಅಲ್ಲಿ ಎಲ್ಲರೊಡನೆ ಬೆರೆತಾಗ ಪ್ರೀತಿಯನ್ನು ಛೇಡಿಸುವ ಪರಿ.. ಹಾಸ್ಯದಿಂದ ಗಂಭೀರತೆಗೆ ಹೊರಳುವ ಪ್ರಸಂಗಕ್ಕೆ ಪ್ರೀತಿಯ ತಂದೆಯಿಂದ ಸಿಕ್ಕ ಉತ್ತರವೇನು..? ಅಷ್ಟಕ್ಕೂ ಪ್ರೀತಿ ಪೊರಕೆ ಪ್ರೀತಿ ಆದದ್ದು ಏಕೆ..?
ವಾಂಛೆ! : ಆ ಮನೆ ಬಗ್ಗೆ ಇದ್ದ ವಾಂಛೆಯ ಜೊತೆಗೆ ಆ ಹೆಂಗಸಿನ ಬಗ್ಗೆಯೂ ಕುತೂಹಲ. ಯಾರೆಂಬುದೇ ಗೊತ್ತಿಲ್ಲದಿದ್ದರೂ.. ಶಾಲೆಯಲ್ಲಿ ಸ್ನೇಹಿತರು, ನೆಂಟರು ಮಾತಾಡಿದ್ದನ್ನು ಕೇಳಿ ಕುತೂಹಲವಂತೂ ಇತ್ತು. ಕುತೂಹಲಗಳೇನು ಎಂಬುದನ್ನು ಆಕೆಯನ್ನು ವರ್ಣಿಸುವುದರ ಜೊತೆಗೆ ಆ ಮನೆಯನ್ನು ವರ್ಣಿಸುತ್ತಾ ಸಾಗುತ್ತಾರೆ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ. ಹಾಗೆ ಆ ಮನೆಯ ಆಕರ್ಷಣೆಯೂ ಬದಲಾಗಿತ್ತು. ಬಾಲ್ಯ ಕರಗಿತಲ್ಲ ಅನ್ನೋ ಸಾಕ್ಷಾತ್ಕಾರ ಆದ ಘಳಿಗೆಗಳ ಚಿತ್ರಣವಿಲ್ಲಿದೆ.
ಆಶಾ : ಮೂವರು ಗೆಳತಿಯರ ಆಪ್ತತೆಯ ಚಿತ್ರಣದಲ್ಲಿ ಇವರು ಝೀಮಾ ಮತ್ತು ಆಶಾ ಕಾಣಿಸಿತ್ತಾರೆ. ಅಂಗನವಾಡಿಯಿಂದ ಗೆಳತಿಯರಾಗಿದ್ದವರ ಸ್ನೇಹ ಗಾಢವಾದ ಬಗೆ, ಮೂವರ ವಿಭಿನ್ನ ಸ್ವಭಾವಗಳು ಹೊಂದಿಕೊಂಡು ಒಬ್ಬರಿಗೊಬ್ಬರು ಹೆಗಲಾಗುವ ಪರಿ ಕಾಣುತ್ತದೆ. ಇವರಿಬ್ಬರ ಕುರಿತಾಗಿ ಆಶಾ ತೋರಿಸುತ್ತಿದ್ದ ಅವ್ಯಕ್ತವಾದ ಒಲವು.. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ದಿನಗಳು, ಕಾಲೇಜಿನ ಸಂದರ್ಭದಲ್ಲಿ ಮೂವರು ಮೂರು ದಿಕ್ಕಾದ ನಂತರ ಆಶಾಳ ಮನೆಯಲ್ಲಿ ದೂರವಾಣಿ ವ್ಯವಸ್ಥೆ ಇಲ್ಲದ್ದರಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದ್ದು... ಆಶಾ ಕಾಲೇಜಿಗೆ ಹೋಗದೆ ಕೆಲಸಕ್ಕೆ ಸೇರಿದ್ದು, ಇದೆಲ್ಲವೂ ಮಾಮೂಲು ಎಂದುಕೊಳ್ಳುವಷ್ಟರಲ್ಲಿ ಆಶಾಳ ಕುರಿತು ತಿಳಿಯುವ ಸತ್ಯ ಬೆಚ್ಚಿ ಬೀಳಿಸಿ, ನಮ್ಮಲ್ಲೂ ಆಶಾಳನ್ನು ಪಡಿಮೂಡಿಸುತ್ತದೆ.
ಮಿಂಚು ಮತ್ತು ಮಳೆ : ಮನವನ್ನು ಹಚ್ಚ ಹಸುರಾಗಿಸುವ ಪ್ರೇಮ ಕಥೆಯೊಂದು ಇಲ್ಲಿದೆ. ಮೌನವೇ ಪ್ರೇಮವೇ ಅಥವಾ ಪ್ರೇಮವೇ ಅಷ್ಟು ಮೌನವಾಗಿತ್ತೇ...? ಹೇಳದೆಯೇ ಕೇವಲ ಮನದ ಮಾತುಗಳ ವಿನಿಮಯವಾಗಿ ಪ್ರೇಮ ಇಷ್ಟು ಗಾಢವಾಗಬಹುದಾ..? ಮಳೆಯ ಆಪ್ತತೆಯಲ್ಲಿ ಮನಸ್ಸಿನ ಭಾವಗಳು ಹಾಗೂ ಮನಸ್ಸಿನ ಮಾತುಗಳನ್ನು ತೆರೆಯುತ್ತಾ ಹೋಗುವ ಪರಿ ಪ್ರೇಮ ಕಥೆಯೊಂದನ್ನು ನಮ್ಮ ಮನದಲ್ಲಿ ಬಿತ್ತಿ ಹೋಗುತ್ತದೆ. ಮಳೆ ಹಾಗೂ ಮಳೆಯ ಸಂಕೇತಗಳಿಂದಲೇ ಪ್ರೇಮ ಕಥೆಯೊಂದನ್ನು ಹೀಗೂ ಹೆಣೆಯಬಹುದಾ ಎನ್ನಿಸಿತು.
ಈ ಕಥಾ ಸಂಕಲನದ ಅರ್ಪಣೆಯನ್ನು ಬಾಲ್ಯದ ಅವಿನಾಭಾವ ಭಾಗವಾದ ನನ್ನ ಅಣ್ಣ ರಾಕೇಶನಿಗೆ ಎಂದು ಅರ್ಪಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಅಣ್ಣ-ತಂಗಿಯರ ಆಪ್ತತೆ, ಗಾಢ ಬಾಂಧವ್ಯ, ಕೋಳಿ ಜಗಳ, ಒಂದಾಗುವಿಕೆ ಎಲ್ಲವೂ ಬಹಳ ನೈಜವಾಗಿ ಮೂಡಿಬಂದಿದೆ.
ಇಲ್ಲಿ ಬರುವ ಪಾತ್ರ ಮತ್ತು ಸನ್ನಿವೇಶಗಳು ಕಾಲ್ಪನಿಕ ಎಂದಿದ್ದಾರಾದರೂ.. ಮುಖ್ಯ ಪಾತ್ರಗಳಿಗೆ ಹೆಸರನ್ನು ನೀಡಿದೆ ಬಾಂಧವ್ಯಗಳ ಕರೆಯನ್ನು ಬಳಸಿರುವುದು ನೈಜ ಘಟನೆ ಎನ್ನುವಂತೆಯೂ.. ಇದು ನಮ್ಮದೇ ಕತೆ ಎನ್ನುವಂತೆಯೂ ಅನ್ನಿಸುವಂತೆ ಮಾಡುತ್ತದೆ. ಗೆಳೆತನದ, ಬಾಲ್ಯದ, ಮಲೆನಾಡಿನ ಪರಿಸರದ ಚಿತ್ರಣಗಳು ಯಾವುದೋ ಸಹಜವಾದ ಘಟನೆಯ ತುಣುಕನ್ನು ಕಣ್ಮುಚ್ಚಿ ಆಸ್ವಾದಿಸುವಂತೆ ಮಾಡುತ್ತದೆ. ಸಹಜವಾದ ಹಾಗೂ ನೈಜವಾದ ಸನ್ನಿವೇಶಗಳು ಈ ಓದನ್ನು ಬಹಳ ಆಪ್ತವಾಗಿಸಿತು. ವಿಭಿನ್ನ ಓದಿನ ಹುಡುಕಾಟದಲ್ಲಿರುವವರು ಓದಿ ನೋಡಿ.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ