ಕವಿ ರವೀಂದ್ರನಾಥ ಠಾಕೂರರು 'ವಿಶ್ವಾತ್ಮಕತೆ'ಯನ್ನು ಪ್ರತಿಪಾದಿಸಿ ವಿಶ್ವಕವಿ ಎಂದು ಕರೆಸಿಕೊಳ್ಳುತ್ತಾರೆ.
ನಾನು ಆಯ್ಕೆ ಮಾಡಿಕೊಂಡಿರುವ ಅವರ ಕವನ ಸಂಕಲನ ವನಮಾಲಿ. ಇದು ಸಂಭಾಷಣಾ ರೂಪದ ಕಾವ್ಯಗುಚ್ಛ. ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಸ್ವಾತಂತ್ರ್ಯವನ್ನು ಬಯಸುವ, ಸುಂದರ, ಮುಕ್ತ ಜೀವನವನ್ನು ನಡೆಸಲು ತನ್ನ ಸಂಗಾತಿಗೆ ಆಹ್ವಾನ ನೀಡುವ ವ್ಯಕ್ತಿ ಒಂದೆಡೆಯಾದರೆ.. ಹೊಸ ಜೀವನವನ್ನು ಸಂಶಯದಿಂದ ನೋಡುವ ವ್ಯಕ್ತಿ ಮತ್ತೊಂದು ಕಡೆ.
ಮೂಲ ಪುಸ್ತಕ The Gardener ಅನ್ನು 1913 ರಲ್ಲಿ Macmillan Co, London ಅವರು ಪ್ರಕಟಿಸಿದ್ದಾರೆ. ಅದರಲ್ಲಿ ಚಿಕ್ಕದಾಗಿ ಕಂಡ 84 ಪದ್ಯಗಳನ್ನು ಆರಿಸಿಕೊಂಡು ಬಾಗೇಪಲ್ಲಿ ಕೃಷ್ಣಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲದಲ್ಲಿ ಇರುವಂತೆ ಇಲ್ಲಿಯೂ ಪ್ರತ್ಯೇಕ ಶೀರ್ಷಿಕೆಗಳಿಲ್ಲ ಬದಲಾಗಿ ವನಮಾಲಿಗೆ ಸಂಖ್ಯೆಗಳನ್ನು ಕೊಡುತ್ತಾ ಹೋಗಿದ್ದಾರೆ ಅಷ್ಟೇ.
ನನ್ನ ಆಯ್ಕೆಯ ಕವಿತೆ : ವನಮಾಲಿ - 15
ಕಸ್ತೂರೀ ಮೃಗ ತನ್ನ ಸುಗಂಧಕೆ ತಾನೇ ಹುಚ್ಚೆದ್ದು ಓಡಿದಂತೆ
ಆ ಕಾಡ ನೆಳಲಲ್ಲಿ ಓಡಿದೆನು ನಾನು
ಆ ಇರುಳು ನಡು ಬೇಸಿಗೆಯ ಇರುಳು
ಬೀಸುತಿದ್ದ ತಂಗಾಳಿ ದಕ್ಷಿಣ ದಿಕ್ಕಿನದು
ನಾನು ದಾರಿ ತಪ್ಪಿ ಅಲೆದೆ
ಪಡೆಯಲಾಗದ್ದನ್ನು ಬಯಸಿದೆ
ಬಯಸದ್ದನ್ನು ಪಡೆದೆ
ನನ್ನ ಆಕಾಂಕ್ಷೆಗಳ ಬಿಂಬ
ನನ್ನೆದೆಯಿಂದ ಹೊರಬಂದು
ಕುಣಿಯುತ್ತದೆ
ಹೊಳೆದ ದೃಷ್ಟಿ ಅತ್ತ ಹೊರಳುತ್ತದೆ
ನಾನದನು ಬಿಗಿಯಾಗಿ ಹಿಡಿಯಲೆತ್ನಿಸುತ್ತೇನೆ
ಅದು ನನಗೆ ಅಗ್ರಾಹ್ಯವಾಗಿ
ನನಗೆ ಕಣ್ತಪ್ಪಿಸಿ ಪಕ್ಕಕೊಯ್ಯುತ್ತದೆ
ನಾನು ಪಡೆಯಲಾಗದ್ದನ್ನು ಬಯಸಿದೆ
ಬಯಸದ್ದನು ಪಡೆದೆ
ಮನುಷ್ಯ ತನಗೆ ಬೇಕಾದ ಶಾಂತಿ, ನೆಮ್ಮದಿಗಳನ್ನು ಹೊರಗೆ ಅರಸುತ್ತಾ.. ಲೌಕಿಕ ಸುಖಗಳ ಹಿಂದೆ ಬೀಳುತ್ತಾನೆ. ಆದರೆ, ಅವು ನಿಜಕ್ಕೂ ಮನುಷ್ಯನ ದೈನಂದಿನ ಬದುಕಿನಲ್ಲಿ ಹಾಗೂ ಆತ್ಮಜ್ಞಾನದಲ್ಲಿ ಆತನಿಗೆ ಅರಿವಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ.
ಕಸ್ತೂರಿ ಮೃಗಕ್ಕೆ ಕಸ್ತೂರಿಯ ಸುವಾಸನೆ ತನ್ನ ನಾಭಿಯಿಂದಲೇ ಬರುತ್ತಿದೆ ಎಂಬ ಅರಿವಿಲ್ಲದೆಯೇ.. ಸುವಾಸನೆಯನ್ನು ಹುಡುಕುತ್ತಾ ಎಲ್ಲೆಡೆ ಸುತ್ತುತ್ತದೆ. ಹಾಗೆಯೇ ಮನುಷ್ಯನು ತನ್ನ ಅಂತಃಸತ್ವದ ಅರಿವಿಲ್ಲದೆಯೇ, ತನ್ನ ಶಕ್ತಿ-ಸಾಮರ್ಥ್ಯದ ಅರಿವಿಲ್ಲದೆಯೇ ಅದನ್ನು ಮತ್ತೆ ಹುಡುಕುತ್ತಾ ಅಲೆಯುತ್ತಿರುತ್ತಾನೆ.
ನಡು ಬೇಸಿಗೆಯ ಇರುಳಿಗೆ ನಿಜಕ್ಕೂ ಬೇಕಿರುವುದು ತಂಪಾದ ತಂಗಾಳಿ. ಅಂತಹ ತಂಗಾಳಿ ಸುಳಿದಾಗ ಅದರತ್ತ ಆಕರ್ಷಿತನಾಗುತ್ತಾ ನಿದ್ದೆ ಮರೆತು ತಂಗಾಳಿಯನ್ನರಸಿ ಎಲ್ಲೆಲ್ಲಿಯೋ ಅಲೆಯುವಂತೆ, ಬದುಕಿನಲ್ಲಿ ಮೂಲ ಗುರಿಯನ್ನು ಮರೆತು ಕ್ಷಣಿಕ ಸೆಳೆತಕ್ಕೆ ಮೈಮರೆತು ಅದರ ಹಿಂದೆ ಬಿದ್ದಾಗ.. ಬದುಕಿನಲ್ಲಿ ಬಯಸಿದ್ದು ಸಿಗದ ಹಾಗೂ ಬಯಸದೆಯೂ ಸಿಗುವ ವಿಚಾರವನ್ನು ಪ್ರಸ್ತಾಪಿಸುತ್ತಾರೆ.
ತೊಳಲಿ, ಬಳಲಿರುವ ಮನುಷ್ಯನು ತಂಪಾದ ಸುಖಕ್ಕೆ ಹಾತರೆಯುತ್ತಾ.. ಸುಖವನ್ನರಸಿ ಹೊರಡುತ್ತಾನಾದರೂ ಆತ ಬಯಸಿದ ಸುಖ ಸಿಗದೇ ಕೆಲವೊಮ್ಮೆ ಆತ ಬಯಸದೆಯೂ ಇರುವ ಜೀವನ ಪಾಠವೂ ಸಿಗಬಹುದು. ಅದು ವಿಧಿಲಿಖಿತವೂ ಹೌದಲ್ಲವೇ..!
ಮನದ ಆಸೆ, ಆಕಾಂಕ್ಷೆಗಳು ಇನ್ನೂ ತೀರದೆ ಅವುಗಳದೇ ನೆನಪಿನಲ್ಲಿರುವ ಮನುಷ್ಯನಿಗೆ ಸಾಧನೆಯ ಬೆನ್ನು ಹತ್ತಿದ ಸಮಯದಲ್ಲಿಯೇ ದೃಷ್ಟಿ ಇತ್ತ ಹೊರಳುತ್ತದೆ. ಆಸೆಗಳನ್ನು, ಸುಖವನ್ನು ಕಟ್ಟಿಡಲು ಬಯಸಿದರೂ ಅದು ಅಷ್ಟು ಸುಲಭವಲ್ಲ. ಅದಕ್ಕೆ ಸಾಧನೆ ಬೇಕು. ಅಂತಹ ಸಾಧನೆಗೆ ಬಹಳಷ್ಟು ಶ್ರಮಿಸಬೇಕು. ಅದಕ್ಕೆ ಮನುಷ್ಯನ ತಾಳ್ಮೆ, ನಿರಂತರತೆ, ಪ್ರಯತ್ನ, ಅನುಭವ ಎಲ್ಲವೂ ಜೊತೆಯಾಗಬೇಕು.
ಪಡೆಯಲಾಗದ್ದನ್ನು ಬಯಸಿದೆ
ಬಯಸದ್ದನು ಪಡೆದೆ
ಎಂಬ ಈ ಎರಡು ಸಾಲುಗಳು ಹಿರಿದರ್ಥವನ್ನು ಹೇಳುತ್ತವೆ. ಮನುಷ್ಯ ಬಯಸಿದ್ದೆಲ್ಲವೂ ಕೈಗೆ ಸಿಗದು. ಯಾವುದು ಸಿಗಬೇಕೆಂದಿದೆಯೋ ಅದನ್ನು ಯಾರೂ ತಪ್ಪಿಸಲಾರರು ಎನ್ನುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎಷ್ಟೋ ಬಾರಿ ಪಡೆಯಲಾಗದನ್ನು ಬಯಸಿ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡು, ದುಃಖವನ್ನು ತಂದುಕೊಂಡಿರುತ್ತೇವೆ. ಆದರೆ ಅದು ನಮ್ಮ ಬದುಕಿಗೆ ಒಳ್ಳೆಯದೇ ಆಗಿರುತ್ತದೆ. ಅದಕ್ಕಿಂತ ಚೆಂದದ ಹಾಗೂ ಸಮರ್ಪಕವಾದ ವಿಷಯವೇ ನಮ್ಮ ಬದುಕಿನಲ್ಲಿ ನಡೆದಿರುತ್ತದೆ. ಪಡೆಯಲಾಗದ್ದನ್ನು ಬಿಟ್ಟು, ಪಡೆದಿರುವುದನ್ನು ಉಳಿಸಿಕೊಂಡು ಹೋಗುವುದು ಅವಶ್ಯಕವಾಗಿದೆ.
ನನ್ನ ಅರಿವಿಗೆ ದಕ್ಕಿದಂತೆ ಕವಿತೆಯ ಕುರಿತು ಅರ್ಥೈಸಿದ್ದೇನೆ. ವಿಶಿಷ್ಟ ಅಭಿಯಾನದ ಮೂಲಕ ರವೀಂದ್ರರ ಕಾವ್ಯಗಳ ಓದಿಗೆ ಕಾರಣರಾದವರೆಲ್ಲರಿಗೂ ಧನ್ಯವಾದಗಳು
~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ