ಭಾನುವಾರ, ಜೂನ್ 28, 2026

ಬೇಲಿಯ ಮೇಲಿನ ನೀಲಿಯ ಹೂಗಳು



ಕವಿತೆಯ ಶೀರ್ಷಿಕೆ : ಬೇಲಿಯ ಮೇಲಿನ ನೀಲಿಯ ಹೂಗಳು

ರಚನೆ : ಚೆನ್ನವೀರ ಕಣವಿ

ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ 

ಮುಂಜಾವದಲಿ ಬೇಲಿ ತುಂಬ ನೀಲಿಯ ಹೂ 

ಜೀವನೋತ್ಸಾಹದಲ್ಲಿ ಎದೆ ತುಂಬಿಸುವ ರೂಹೂ!

ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ

ಎಲ್ಲಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ

ತೆರೆದಿಹುದು ನೂರು ಸಾವಿರ ನೀಲ ಬಗೆಗಣ್ಣು!

(ನೇಸರನಿಗೂ ಜಗಕೂ ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ - ತೋಟ ಬೇಲಿಯಕಳ್ಳಿ

ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ

ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ

ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ

ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್ಧನ್ಯ!

ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ

ಅದೊ ಅಲ್ಲಿ, ಇದೊ ಇಲ್ಲಿ ಪ್ರತ್ಯಕ್ಷ ಸುಮ ಸಾಕ್ಷಿ!


ಇಲ್ಲಿ ಬೇಲಿಯ ಮೇಲಿನ ನೀಲಿ ಹೂಗಳ ಸೌಂದರ್ಯದ ಸೊಗಸನ್ನು ಮೊದಲಿಗೆ ಸವಿಯೋಣ.


ಮುಂಜಾನೆಯೇ ಅರಳುವ ಹೂವುಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲಿಯೂ ಬೇಲಿಯ ತುಂಬಾ ಹಬ್ಬಿರುವ ನೀಲಿಯ ಹೂಗಳಂತೂ ಜೀವನೋತ್ಸಾಹದಲ್ಲಿ ಮನದುಂಬುವ (ರೂಹು)ಆತ್ಮದಂತೆ ಎನ್ನುತ್ತಾರೆ. ಜೊತೆಗೆ ಸಾಲಾಗಿ ನವಿಲುಗಳು ಗರಿಗಿದರೆ ನರ್ತಿಸಿದಾಗ ನೋಡಲು ಕಣ್ಣಿಗೆ ಎಷ್ಟು ಹಬ್ಬವೋ ಇವೂ ಅಂತೆಯೇ ಕಣ್ಣಿಗೆ ಹಬ್ಬ. ಬಣ್ಣದಲ್ಲಿ ಮಾತ್ರವಲ್ಲದೇ ಅರಳಿ ನಿಂತ ದಳಗಳ ಸೌಂದರ್ಯವೂ ನವಿಲನ್ನೇ ನೆನಪಿಸುತ್ತದೆ.


ಬೇಲಿಯ ಮೇಲಿನ ಹೂಗಳನ್ನು ಯಾರೂ ಬೆಳೆದಿಲ್ಲ. ಭೂಮಿಯೇ ಭಾವ ತುಂಬಿ ತನ್ನ ಚೈತನ್ಯವನ್ನೆಲ್ಲ ಹೊರ ಹಾಕಿದಂತೆ ಮನಸೋ ಇಚ್ಛೆ ಬೆಳೆದ ಬಳ್ಳಿಗಳು.. ಅದರಲ್ಲಿ ಹರಡಿರುವ ಈ ಹೂವುಗಳು ನೂರು ಸಾವಿರ ನೀಲಿಯ ಕಣ್ಣುಗಳಂತೆ ಎಂದು ಹೂಗಳನ್ನು ಹರಡಿ ನಿಂತಿರುವ ಪರಿಯನ್ನು ಹೇಳುತ್ತಾರೆ.


ಸೂರ್ಯನಿಗೂ.. ಜಗತ್ತಿಗೂ ಇನ್ನೂ ನಿದ್ದೆಗಣ್ಣಿರುವಾಗಲೇ ಅರಳುವ ಹೂವುಗಳು ಬಿಸಿಲು ಬಲಿಯುತ್ತಾ ಹೋದಂತೆ ತಮ್ಮ ಮೃದುತ್ವವನ್ನು ಕಡಿಮೆ ಮಾಡಿಕೊಳ್ಳುತ್ತಾ.. ಮುಖ ಸಣ್ಣದು ಮಾಡಿ, ಮುದುಡಿಕೊಳ್ಳುತ್ತಾ ಹೋಗುತ್ತವೆ. ಬಿಸಿಲು ಮೇಲೇರಿದಂತೆ ದಂಟಿಗೆ ಅಂಟಿದ ಹೂಗಳ ಕುರುಹುಗಳನ್ನಷ್ಟೇ ನಾವು ಕಾಣಬಹುದು. ಆದರೆ, ಇಲ್ಲಿಗೆ ಆ ಸೌಂದರ್ಯ ಮುಗಿಯುವುದಿಲ್ಲ. ಏಕೆಂದರೆ, ಅವುಗಳ ಪಕ್ಕದಲ್ಲಿ ನಾಳೆ ಅರಳುವ ಮೊಗ್ಗುಗಳು ಅದಾಗಲೇ ಜೀವ ತಳೆದಿರುತ್ತವೆ. ಕೋಮಲತೆ, ಕಾಂತಿ ಚೈತನ್ಯದ ಕಣ್ಣುಗಳಂತೆ ಎನ್ನುತ್ತಾರೆ.


ಈ ಬೇಲಿ ಮೇಲಿನ ನೀಲಿಯ ಹೂಗಳು ನಮಗೆ ಕೇವಲ ಸೌಂದರ್ಯವನ್ನು ಮಾತ್ರ ತೋರದೆ.. ಬದುಕಿನ ಪಾಠವನ್ನು ತೋರುತ್ತವೆ. ಕೆಲವೇ ಕಾಲ ಬದುಕಿದ್ದರೂ ವೈಭವದಿಂದ ಬದುಕುತ್ತವೆ. ಅಷ್ಟೇ ಅಲ್ಲದೆ.. ನೋಡುಗರ ಕಣ್ಣಿಗೆ, ಮನಸ್ಸಿಗೆ ಚೈತನ್ಯವನ್ನು ತುಂಬುತ್ತವೆ. ಅವುಗಳ ಜೀವಿತಾವಧಿ ಹೆಚ್ಚಲ್ಲವಾದರೂ ತಾವು ಅರಳಿರುವ ಸಂದರ್ಭದಲ್ಲಿ ತೋರುವ ಸೌಂದರ್ಯ ಹಾಗೂ ಉತ್ಸಾಹ ಶಾಶ್ವತವಾದದ್ದು. ಆ ಹೂಗಳು ತಮ್ಮ ಬದುಕನ್ನು ಮುಗಿಸುತ್ತವಾದರೂ ಹಾಗೂ ಹೇಳುವ ಪಾಠ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ, ಮೊಗ್ಗುಗಳು ಮರುದಿನಕ್ಕೆ ನಮಗೆ ಮತ್ತಷ್ಟು ಚೈತನ್ಯವನ್ನು ಹಾಗೂ ಮತ್ತದೇ ಸೌಂದರ್ಯವನ್ನು ತೋರುತ್ತವೆ. ಪ್ರಕೃತಿ ಕಲಿಸುವ ಪಾಠವೆಷ್ಟು ಸುಂದರ ಅಲ್ಲವೇ..?! 


ದೃಶ್ಯ ವೈಭವವನ್ನು ಕವಿತೆಯ ಶುರುವಿನಲ್ಲಿ ತೋರುವ ಕವಿ ಬದುಕಿನ ಬಹು ದೊಡ್ಡ ಪಾಠವನ್ನು ತಾವಾಗಿಯೇ ಬೆಳೆಸದ.. ಆದರೆ ನೈಸರ್ಗಿಕವಾಗಿ ಅರಳುವ ಹೂಗಳ ಮೂಲಕ ತೋರಿದ್ದಾರೆ. ಯಾರು ಗುರುತಿಸಲಿ, ಬಿಡಲಿ ತಮ್ಮ ಬದುಕನ್ನು ಸಾರ್ಥಕವಾಗಿಯೇ ಬದುಕಿಯೇ ಹೋಗುವ ಈ ಹೂಗಳು ಶಾಶ್ವತವಾಗಿ ಕವಿತೆಯ ಮೂಲಕ ಚೈತನ್ಯದಾಯಕವಾಗಿವೆ. 


ಚೆನ್ನವೀರ ಕಣವಿ ಅವರ ಈ ಕವಿತೆ ನನಗೆ ಚೈತನ್ಯದಾಯಕವಾಗಿಯೂ, ಪದಲಾಲಿತ್ಯದಿಂದಲೂ ಸೆಳೆಯಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ