"ಆ ಬನ್ನಿ ಮರ ಹೋಗಿದ್ದೇ ಹೋಗಿದ್ದು, ನನ್ನ ದೃಷ್ಟಿ ಕೂಡಾ ಹಿಂಗಿ ಹೋಯಿತು. ಹೇಳಿದೆ ನಿಮಗೆ ಆ ಬನ್ನಿ ಮರ ಕಡಿಸಿದರೆ ಒಳ್ಳೆಯದಾಗಲ್ಲಾ ಅಂತಾ. ನೀವು ನನ್ನ ಮಾತನ್ನು ಕೇಳಲೇ ಇಲ್ಲ. ಈಗ, ನಮ್ಮ ಪಾಪದ ಫಲ ನಾವು ಅನುಭವಿಸಬೇಕಾಗಿದೆ. " ಎನ್ನುತ್ತಾ ಗತವನ್ನು ನೆನಪಿಸಿಕೊಂಡರು ತಾರಿಣಿ.
" ಎಲ್ಲಿಂದ ಎಲ್ಲಿಗೋ ವಿಷಯ ತೆಗೆದುಕೊಂಡು ಹೋಗಬೇಡ ಕಣೇ. ಅವತ್ತು ಅಪಘಾತದಲ್ಲಿ ನಿನ್ನ ಕಣ್ಣು ಹೋಯ್ತು.. ಅದಕ್ಕೆ, ಬನ್ನಿ ಮರ ಕಡಿದದ್ದನ್ನು ನೆಪ ಮಾಡಿಕೊಂಡು ದೂರಬೇಡ.
ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸಮನಾಯ್ತು. ಅಂತಾರಲ್ಲಾ.. ಹಾಗಾಯ್ತು ಇದು. ಅದಕ್ಕೂ, ಇದಕ್ಕೂ ಸಂಬಂಧವೇನು ಹೇಳು" ಎಂದರು ಪ್ರಕಾಶ್.
"ಅದು ದೇವರ ಮರ ಕಣ್ರೀ, ಅದನ್ನು ಕಡಿದದ್ದು ಅಪಶಕುನ. ಅದರ ಪಾಪದ ಫಲ ಇವತ್ತು ನಾವು ಅನುಭವಿಸುತ್ತಾ ಇಲ್ಲವಾ..?? " ಎಂದರು ತಾರಿಣಿ.
"ಸದ್ಯಕ್ಕೆ ನಿನಗೀಗ ಕಣ್ಣು ಕಾಣೋದಿಲ್ಲ. ಹಾಗಂತ ಕಣ್ಣು ಬರೋದೇ ಇಲ್ಲ ಅಂತಲೂ ಇಲ್ಲವಲ್ಲ. ಸರಿಯಾದ ದಾನಿಗಳು ಸಿಗಬೇಕಷ್ಟೇ.. ಕಣ್ಣು ಹೋದ ಅತ್ತೆಯನ್ನು ನೋಡಿಕೊಳ್ಳುವ ಇಚ್ಛೆಯಿಲ್ಲದ ಸೊಸೆ ಮದುವೆಯಾಗುವುದಕ್ಕೂ ಮುನ್ನವೇ ದೂರವಾಗಿದ್ದು ಒಳ್ಳೆಯದೇ ಆಯ್ತು.
ನಿನ್ನ ಸಹಾಯಕ್ಕೆ ಅಂತಾನೇ ಈ ಹಳ್ಳಿ ಮನೆಯಲ್ಲಿಯೂ ನನ್ನ ತಂಗಿ ನೆಲೆಯಾದಳು. ಕಣ್ಣು ಚೆನ್ನಾಗೇ ಇದ್ದಿದ್ರೆ ಕತ್ತೆ ಚಾಕರಿ ಮಾಡಿ ನಿನ್ನ ಸೊಂಟ ಬಿದ್ದು ಹೋಗ್ತಾ ಇತ್ತು ಅಷ್ಟೇ.. ಈಗ , ಇನ್ನೂ ಸುಖವಾಗೇ ಇದ್ದೀಯ ಅಂದುಕೋ. ಯಾವತ್ತೂ ನಾವಂದುಕೊಂಡದ್ದೇ ಸುಖ. ಪ್ರತಿ ಕಷ್ಟದಲ್ಲಿಯೂ ಸಕಾರಾತ್ಮಕತೆ ಕಾಣಬೇಕು. ಒಳ್ಳೆಯದನ್ನೇ ಆಲೋಚಿಸಬೇಕು. ತಿಳಿಯಿತಾ..?" ಎಂದು ಹೇಳಿದರು ಪ್ರಕಾಶ್.
"ಈ ಹಾಳಾದ ಕಣ್ಣಿನ ಬದಲಿಗೆ ಜೀವ ಹೋಗಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು. ಇನ್ನೊಬ್ಬರು ನನ್ನ ಸಹಾಯ ಮಾಡುತ್ತಾ ಇದ್ದರೆ, ಅವರು ಸ್ನಾನ ಮಾಡಿಸಿ ಬಟ್ಟೆ ಹಾಕುವಾಗೆಲ್ಲಾ ಜೀವ ಹಿಡಿಯಷ್ಟಾಗುತ್ತೆ. ಮಗಳಾದರೂ ಇರಬಾರದಿತ್ತಾ ಅನ್ನಿಸುತ್ತೆ. ಈ ಸೂಕ್ಷ್ಮಗಳು ಇವರಿಗೆಲ್ಲಿ ಅರ್ಥವಾಗುತ್ತೆ..?" ಎನ್ನುತ್ತಾ ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುವಾಗ ಅವಳ ಸಹಾಯಕ್ಕಿದ್ದ ನಾದಿನಿ "ಹಾಗ್ಯಾಕೆ ಮಾತಾಡ್ತೀರಿ ಅತ್ತಿಗೆ. ನಾನೇನೂ ಬೇರೆಯವಳಾ ಹೇಳಿ. ಈ ಮನೆ ಮಹಾಲಕ್ಷ್ಮಿ ನೀವು. ನಿಮಗೆ ಮತ್ತೆ ಕಣ್ಣು ಬಂದೇ ಬರುತ್ತೆ. ನೀವು ಮನೆ ತುಂಬಾ ಗಲಗಲ ಅಂತಾ ಓಡಾಡುತ್ತೀರಿ. ನೋಡ್ತಿರಿ" ಎಂದಳು.
ನಾಲಿಗೆ ಕಚ್ಚಿ, ಪೇಲವ ನಗು ನಕ್ಕು "ಕನಸು ಚೆನ್ನಾಗೇ ಕಾಣುತ್ತೀಯ ಬಿಡೇ ಸುಧಾ. ನನಗೆ ಕಣ್ಣು ಬರಬೇಕು ಅಂದರೆ ನನಗೆ ಹೊಂದಿಕೆಯಾಗುವ ಕಣ್ಣು ಸಿಗಬೇಕು.
ಕಣ್ಣು ಸಿಗೋ ವಿಷಯ ಹಾಗಿರಲಿ. ಕರ್ಮ ಕಳಿಬೇಕು ಕಣೇ, ಈ ಜನ್ಮಕ್ಕೆ ಅಂಟಿರುವ ಕರ್ಮ ಕಳೆಯಬೇಕು. ಎಲ್ಲಾ ಬನ್ನಿ ಮರ ಕಡಿದಿದ್ದರ ಫಲ ಕಣೇ" ಎಂದಳು ತಾರಿಣಿ.
"ಸುಮಾರು ಸಾರಿ ನೀವು ಈ ಬನ್ನಿ ಮರದ ಬಗ್ಗೆ ಹೇಳ್ತಾ ಇರುತ್ತೀರಿ.. ಕೇಳಿದ್ರೂ ಪೂರ್ತಿ ನೆನಪಿಲ್ಲ." ಎಂದವಳಿಗೆ ನೆನಪಿದ್ದರೂ.. ಅತ್ತಿಗೆಯ ಮನಸ್ಸನ್ನು ಮಾತಿನತ್ತ ತಿರುಗಿಸಲೆತ್ನಿಸಿದಳು.
"ನೀನು ಎಷ್ಟು ಸಾರಿ ಕೇಳಿದ್ರೂ ಹೇಳೋಕೆ ನನಗೆ ಬೇಸರ ಇಲ್ಲ ಬಿಡು. ಏನೂ ನೋಡೋಕಾಗದೆ ಸುಮ್ಮನೆ ಕತ್ತಲೆಯಲ್ಲೇ ಕೂರುವುದರ ಬದಲಿಗೆ ಅದನ್ನಾದರೂ ಹೇಳುತ್ತೇನೆ." ಎನ್ನುತ್ತಾ ಅಂದಿನ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಿಷ್ಟು.
"ಯಾವಾಗಲೋ.. ಯಾರದ್ದೋ ಸಾಲಕ್ಕೆ ಶ್ಯೂರಿಟಿ ಕೊಟ್ಟು ನಂಬಿಕೆಯೇ ಉರುಳಾಗಿ, ಅನಿವಾರ್ಯವಾಗಿ ಊರಾಚೆಯಿದ್ದ ಹಳೆಯ ತೋಟದ ಮನೆ, ತೋಟ ಮತ್ತು ಹೊಲ ಮಾರಿಯಾಗಿತ್ತು. ಆದರೆ, ಅಲ್ಲಿದ್ದ ಸಮಾಧಿ ಮತ್ತು ಹಳೆಯ ಬನ್ನಿ ಮರವನ್ನು ಮುಟ್ಟುವ ಧೈರ್ಯ ತೆಗೆದುಕೊಂಡವರಿಗೆ ಇರಲಿಲ್ಲ. ತೋಟದಲ್ಲಿದ್ದ ಮರಗಳನ್ನೆಲ್ಲಾ ಕಡಿಸಿ ಅದಾಗಲೇ ಅಲ್ಲಿ ಫ್ಯಾಕ್ಟರಿ ಕಟ್ಟುವುದಕ್ಕೆ ಅಡಿಪಾಯ ಹಾಕಿದ್ದರು. ಆದರೆ, ಅಲ್ಲಿದ್ದ ಸಮಾಧಿ ಹಾಗೂ ಬನ್ನಿ ಮರವನ್ನು ಕಡಿದರೆ ಏನಾದರೂ ಅಪಾಯ ಆಗುತ್ತೆ ಅಂತಾ ಯಾರೋ ಹೇಳಿದ್ದರು ಅಂತಾ ಆ ಕುಟುಂಬದವರನ್ನೇ ಕರೆಸಿ ಶಾಂತಿ ಪೂಜೆ ಮಾಡಿಸಿ ತೆಗೆದುಬಿಡಿ ಎಂದಿದ್ದಕ್ಕೆ ಇವರು ನನ್ನನ್ನು, ಇರುವ ಒಬ್ಬ ಮಗ ಉದಯ್ ನನ್ನು ಕರೆದುಕೊಂಡು ಹೊರಟಿದ್ದರು.
ಅದಾಗಲೇ ನೆಲಸಮವಾಗಿದ್ದ ತೋಟ ನೋಡಿಯೇ ನನಗೆ ಕರುಳು ಕಿವುಚಿದಂತಾಗಿತ್ತು. ಅದು ಎಷ್ಟೋ ಕಾಲದ ಪೂರ್ವಿಕರ ಸಮಾಧಿ ಅದನ್ನು ಇವರು ಸ್ಥಳಾಂತರ ಮಾಡುತ್ತೇನೆ ಅಂತಾ ಒಪ್ಪಿಕೊಂಡು ಅದರ ಕಾರ್ಯವನ್ನು ಮಾಡಲು ವ್ಯವಸ್ಥೆ ಮಾಡಿದರು. ಆದರೆ, ಆ ಬನ್ನಿ ಮರದ ಬಗ್ಗೆ ಇವರಿಗೆ ಕಾಳಜಿಯೇ ಇರಲಿಲ್ಲ. ಎಲ್ಲಾ ಮರಗಳಂತೆ ಅದೂ ಒಂದು ಮರ ಅಂತಾ ಉಡಾಫೆ ಮಾಡಿ ಪೂಜೆ ಮುಗಿದ ನಂತರ, ಆ ಸಮಾಧಿ ಸ್ಥಳಾಂತರಿಸುವ ಕಡೆ ಹೊರಟರು.
ಎಷ್ಟೋ ಜನ ಮುತ್ತೈದೆಯರು ಪೂಜೆ ಮಾಡಿದ್ದ ಮರ ಅದು. ಚಪ್ಪಲಿ ಹಾಕಿಕೊಂಡು ಹತ್ತಿರ ಹೋಗುವುದಾಗಲಿ ಮಾಡದೆ, ಮಡಿಯಲ್ಲಿಯೇ ಹತ್ತಿರಕ್ಕೆ ಹೋಗುತ್ತಿದ್ದ ಮರ ಅದು. ಅದನ್ನು ಪೂಜೆ ಮಾಡಿದ ಎಷ್ಟೋ ಮಕ್ಕಳಿಲ್ಲದ ಹೆಣ್ಣು ಮಕ್ಕಳಿಗೆ ಮಕ್ಕಳಾಗಿತ್ತು. ಎಷ್ಟೋ ಜನರ ಬೇಡಿಕೆ ನೆರವೇರಿತ್ತು ಅನ್ನುವ ಪ್ರತೀತಿ ಇತ್ತು. ಹಿಂಜರಿಯುತ್ತಾ.. ಭಯದಿಂದಲೇ ಪೂಜೆಗೆ ಮಾಡಿದ್ದೆ. ಆ ಬನ್ನಿ ಮರ ಕಡಿದರೂ ಅದರ ಬದಲಿಗೆ ಮತ್ತೆ ಐದು ಬನ್ನಿ ಮರ ನೆಡುವ ಸಂಕಲ್ಪ ಮಾಡಿದೆ. ಅವತ್ತು ವಾಪಾಸ್ ಬರುವಾಗ ನಾನು ಮತ್ತು ಉದಯ್ ಮಾತ್ರ ಇದ್ದದ್ದು. ಡ್ರೈವರ್, ಇವರು ಸಮಾಧಿ ಸ್ಥಳಾಂತರಿಸುವ ಕೆಲಸಕ್ಕೆ ಹೋಗಿದ್ದರು. ಅವತ್ತು ಪೂಜೆ ಎಲ್ಲಾ ಮುಗಿದು ನಾವು ಮನೆಗೆ ಬರುವಾಗ ಮನಸ್ಸಲ್ಲಿ ಯಾಕೋ ಆ ಪೂಜ್ಯವಾದ ಮರ ಕಡಿದದ್ದೇ ಭಯ. ಮನಸ್ಸು ಕೇಡನ್ನು ಶಂಕಿಸುತ್ತಲೇ ಇತ್ತು. ಅಪಘಾತವೂ ಆಯಿತು. ಮದುವೆ ನಿಶ್ಚಯವಾಗಿದ್ದ ಉದಯ್ ಪ್ರೀತಿಸಿದವಳು ದೂರವಾದರೆ.. ನನ್ನ ಕಣ್ಣಿನ ದೃಷ್ಟಿ ಹೋಯಿತು.
ನಾನು ಎಷ್ಟೋ ತಾಯಂದಿರ ಭಾಗ್ಯವಾದ ಬನ್ನಿ ಮರವನ್ನು ದೂರ ಮಾಡಿದ್ದರ ಪಾಪದ ಫಲ ಮಗನಿಗೆ ಕಾಡಬಾರದೆಂದು ಉದಯ್ ನನ್ನು ಕೆಲಸಕ್ಕೆ ಬೆಂಗಳೂರಿಗೆ ಕಳುಹಿಸಿದೆ. ಪ್ರೀತಿ ಕಳೆದುಕೊಂಡ ನೋವನ್ನು ಅಲ್ಲಿಯಾದರೂ ಮರೆಯಬಹುದೇನೋ ಎಂದು." ಎಂದು ನಿಟ್ಟುಸಿರಿಟ್ಟರು ತಾರಿಣಿ. ಆಗಷ್ಟೇ ಬಂದಿದ್ದ ಉದಯ್ ಗೆ ಅಮ್ಮನ ಮನದ ತುಮುಲ ಅರ್ಥವಾಗಿತ್ತು.
*******
ಪುಣ್ಯಕ್ಕೆ ಸುಧಾ ಸಮಯಕ್ಕೊದಗಿದ್ದಳು. ಇವರ ಚಿಕ್ಕಪ್ಪನ ಮಗಳೇ ಆದರೂ ಸ್ವಂತ ತಂಗಿಯಂತಿದ್ದವಳು. ಪುಟ್ಟ ಮಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು, ಗಂಡನನ್ನು ಕಳೆದುಕೊಂಡಾಗ ಮಾಡಿದ ಸಹಾಯವನ್ನು ನೆನೆಸಿಕೊಂಡು, ಊರಿನ ಗೊಡವೆಯೇ ಬೇಡವೆಂದು ಸಿಟಿಯಲ್ಲಿದ್ದವಳು ಇಲ್ಲಿ ನಿಂತಳು. ಅಷ್ಟು ಓದಿದ ಮಗಳನ್ನು ಒಪ್ಪಿಸಿ ನಮ್ಮ ಚಾಕರಿ ಮಾಡಿಕೊಂಡಿದ್ದಾಳೆ. ಇದೆಲ್ಲವೂ ದಿನವೂ ಕಾಡುತ್ತೆ.
********
"ಅಮ್ಮ ಇನ್ನು ಗುಣವಾಗುತ್ತಾರೆ. ಅವರಿಗೆ ಬೇಕಾದ ವ್ಯವಸ್ಥೆ ನಾನು ಮಾಡಿಸುತ್ತೇನೆ" ಎಂದುಕೊಂಡ ಉದಯ್ ಸುಧಾ ಅತ್ತೆಯ ಮಗಳು ಕಿರಣಳನ್ನು ಕಾಣಬೇಕೆಂದುಕೊಂಡ.
ಉದಯ್ ಗೆ ಅಮ್ಮನ ಮಾನಸಿಕ ನೋವು ಅರಿವಾಗಿತ್ತು. ಮನೋವೈದ್ಯೆ ಕಿರಣ ತಾರಿಣಿಯವರಿಗೆ ಅರಿವಾಗದಂತೆ ಕೌನ್ಸೆಲಿಂಗ್ ಮಾಡುತ್ತಾ ಬಂದಳು. ಲೆಕ್ಚರರ್ ಉದಯ್ ಈಗ ಊರಲ್ಲೇ ನೆಲೆ ನಿಂತು, ಮನೆಯಿಂದಲೇ ಹೋಗಿ ಬರುವಂತೆ ಕೆಲಸಕ್ಕೆ ಸೇರಿಕೊಂಡು ಅಮ್ಮನ ಜೊತೆ ಹೆಚ್ಚಿನ ಸಮಯ ಕಳೆಯುತ್ತಾನಲ್ಲದೆ, ಮನೆಯ ಸುತ್ತಮುತ್ತಲೂ ಗಿಡಗಳನ್ನು ನೆಡಿಸಿ, ಹಸಿರನ್ನು ಸೃಷ್ಟಿಸಿದ. ಆಕೆ ಅಂದುಕೊಂಡಿದ್ದಂತೆಯೇ ಅವಳ ಕೈಯಿಂದ ಬನ್ನಿ ಮರಗಳನ್ನು ಸಹ ನೆಡಿಸಿದ.
ತಾರಿಣಿ ಸಂತೃಪ್ತಿಯಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಸಂಗತಿ ನಡೆಯಿತು. ತಾರಿಣಿಯವರಿಗೆ ಹೊಂದಿಕೆಯಾಗುವ ಕಣ್ಣಿನ ದಾನಿಗಳ ಹಠಾತ್ ಮರಣ ಅವಳ ದೃಷ್ಟಿಯ ಭರವಸೆ ತಂದಿತ್ತು.
ಆಪರೇಷನ್ ಯಶಸ್ವಿಯಾಗಿ ಮನೆಯ ಸುತ್ತಮುತ್ತಲಿನ ಹಸಿರನ್ನು ಮತ್ತೆ ಕಾಣುತ್ತಿದ್ದರು ತಾರಿಣಿ. ಸತ್ತರೂ ತನ್ನ ಜೀವದ ಒಂದು ಭಾಗವೇ ಆಗಿದ್ದ ಕಂಗಳನ್ನು ಜೀವಂತವಾಗಿರಿಸಿ ಸಂತೃಪ್ತಳಾಗಿದ್ದರು ಅಜ್ಞಾತ ದಾನಿ. ತಾರಿಣಿಯವರ ಮುಖ ಹಸಿರಿನ ಸೊಬಗಿನ ಮಡಿಲಲ್ಲಿ ಮತ್ತಷ್ಟು ಸಂತೃಪ್ತಿಯಿಂದ ಹೊಳೆಯುತ್ತಿದ್ದವು. ಅದಕ್ಕೆ ಕಾರಣ ಉದಯ್ ಹಾಗೂ ಕಿರಣರಲ್ಲಿ ಚಿಗುರಿದ್ದ ಪ್ರೀತಿಗೆ ಇನ್ನೇನು ವಿವಾಹದ ಮುದ್ರೆ ಬೀಳುವ ದಿನ ಹತ್ತಿರದಲ್ಲಿತ್ತು.
ಉದಯ-ಕಿರಣರ ವಿವಾಹದ ನಂತರ ಸುಧಾ ಅಲ್ಲಿಯೇ ನೆಲೆಸುವುದು ತಾರಿಣಿ-ಪ್ರಕಾಶ್ ರಿಗೆ ಹೇಳಲಾರದಷ್ಟು ಸಂಭ್ರಮ ತಂದಿತ್ತು. ಅಂದು ಮನೆಯವರೆಲ್ಲರೂ ನೇತ್ರದಾನದ ಸಂಕಲ್ಪವನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿ ಮತ್ತೊಬ್ಬರ/ ಇಬ್ಬರ ಬಾಳು ಬೆಳಗುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ವಿವಾಹದಿಂದ ಮರಳುವಾಗ ಎಲ್ಲರ ಕೈಯಲ್ಲಿಯೂ ರಿಟರ್ನ್ ಗಿಫ್ಟ್ ಆಗಿ ಗಿಡಗಳು ನಳನಳಿಸುತ್ತಿದ್ದವು.
ಕಿರಣಳ ಕೈಹಿಡಿದು, ಅಮ್ಮನ ಸಂತಸವನ್ನು ಕಣ್ತುಂಬಿಕೊಂಡ ಉದಯ್ ಕಣ್ಣುಗಳು ಮತ್ತಷ್ಟು ಸಂತೃಪ್ತವಾಗಿದ್ದವು. ಮಗಳಿಲ್ಲವೆಂಬ ಚಿಂತೆ ಈಗ ತಾರಿಣಿಯವರಿಂದ ದೂರವಾಗಿತ್ತು. ಚಿಕ್ಕಂದಿನಲ್ಲಿ ದೊರೆಯದ ಅಪ್ಪನ ಪ್ರೀತಿ ಪ್ರಕಾಶ್ ರಿಂದ ಕಿರಣಳಿಗೆ ದೊರೆತರೆ.. ಅಜ್ಜಿಯಾಗಿ ಮುಂದಿನ ಹೊಣೆ ಹೊರಲು ತಯಾರಾಗುತ್ತಿದ್ದರು ಸುಧಾ. ಎಲ್ಲರ ಬಾಳು ಬೆಳಗುವ ಮತ್ತೊಂದು ಪುಟ್ಟ ಜೀವದ ಆಗಮನದ ಮುನ್ಸೂಚನೆ ಮನೆಗೆ ಹೊಸ ಬೆಳಕನ್ನೇ ತರುತ್ತಿತ್ತು.
~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ