ಪುಸ್ತಕದ ಶೀರ್ಷಿಕೆ : ಕೂಡುಮನೆ
ಲೇಖಕರು : ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು : ಗಾಯತ್ರೀ ಪ್ರಕಾಶನ
ಪ್ರಥಮ ಮುದ್ರಣ : 1994
ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 70
ಬೆಲೆ : 70 ರೂ.
ಕೂಡುಮನೆ ಕಿರು ಕಾದಂಬರಿ ರಾಧಾಕೃಷ್ಣ ಕಲ್ಚಾರ್ ಅವರ ಪ್ರಾರಂಭಿಕ ಕೃತಿ. 28 ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ. ಮೂರು ದಶಕಗಳ ಹಿಂದಿನ ಕಾದಂಬರಿ ಎಂಬ ವಿಚಾರವನ್ನು ಮನದಲ್ಲಿಟ್ಟುಕೊಂಡು ಓದಿದರೂ ಇಂದಿನ ಕಾಲಕ್ಕೂ ಪ್ರಸ್ತುತವಾದ ಕಾದಂಬರಿ ಇದು. ಹಣಕಾಸಿನ ವಿಚಾರಗಳಲ್ಲಿ ಮಾತ್ರ ಅಂದಿನ ದಿನಗಳಿಗೆ ಹೋಲಿಸಿಕೊಳ್ಳಬಹುದಷ್ಟೇ.!
ಕೃಷಿ ಕಾಲೇಜಿನಲ್ಲಿ ಅಭ್ಯಾಸ ಮುಗಿಸಿ ಮೂರು ವರ್ಷಗಳ ನಂತರ ಮತ್ತೆ ತನ್ನ ಅಜ್ಜನ ಮಡಿಲು ಸೇರಲು ಹೊರಟಿದ್ದ ಶ್ರೀಧರನಿಗೆ ಅವಿಭಜಿತ ಕೂಡು ಕುಟುಂಬ, ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಜೊತೆಗೆ ಅಜ್ಜ ಬೆವರು ಸುರಿಸಿ ಮಾಡಿದ ಆಸ್ತಿಯಿತ್ತು. ಪರೋಪಕಾರಿಯಾಗಿ ಬೆಳೆದ ಅಜ್ಜನೇ ಅವನ ಸ್ಪೂರ್ತಿ.
"ನೋಡು ಮಗು, ಪ್ರಕೃತಿ ತಾಯಿ ಎನ್ನುತ್ತಾರೆ. ಆದರೆ ಈ ತಾಯಿ ಎಲ್ಲ ತಾಯಂದಿರ ಹಾಗಲ್ಲ, ತಾಯಿ ಬಂದು ಹಾಲು ಕುಡಿಸಲಿ ಎಂದು ಕೈ ಕಾಲು ಚಾಚಿ ಮಲಗಿದ ಮಗುವನ್ನು ಅವಳು ಮೆಚ್ಚುವುದಿಲ್ಲ. ಮಗು ತಾನಾಗಿ ಏಳಬೇಕು. ಪರಿಶ್ರಮದಿಂದ ಈ ತಾಯಿ ಇದ್ದಲ್ಲಿಗೆ ಹೋಗಬೇಕು. ಆಡಿ, ಕುಣಿದು, ಹಾಡಿ ಅವಳನ್ನು ಒಲಿಸಿಕೊಳ್ಳಬೇಕು. ಆಗ ನೋಡು ಸಮೃದ್ಧ ಹಾಲು ಆ ಮಗುವಿನ ಪಾಲಿಗೆ" ಎಂದು ಶ್ರೀಧರನಿಗೆ ಅಜ್ಜ ಎಷ್ಟೋ ಬಾರಿ ಪ್ರಕೃತಿಯ ಪಾಠ ಮಾಡಿದ್ದಾರೆ. ಆದರ್ಶವೇ ಆದ ತನ್ನ ಅಜ್ಜ ಹಾಗೂ ಕೃಷಿಯ ಆದರ್ಶ ಅವನನ್ನು ಪ್ರಬುದ್ಧ ಹಾಗೂ ಪ್ರಾಮಾಣಿಕ ಮನುಷ್ಯನನ್ನಾಗಿ ರೂಪಿಸಿತು. ಕೃಷಿ ಮಾಡಿ ಮಾದರಿಯಾಗಬೇಕು ಎನ್ನುವ ಕನಸಿತ್ತು.
ಶ್ರೀಧರನು ಕನಸಿನಲ್ಲೂ ಯೋಚಿಸಿದ ವಿಷಯವೆಂದರೆ ಮನೆ ಪಾಲಾಗುವುದು. ಆತನ ನೆಚ್ಚಿನ ಅಧ್ಯಾಪಕರೇ ಕೃಷಿ ಇಲಾಖೆಯಲ್ಲಿಯೇ ಆಫೀಸರ್ ಪೋಸ್ಟ್ ಕೊಡಿಸುತ್ತೇನೆಂದಾಗ ನಿರಾಕರಿಸಿ ಹಳ್ಳಿಯ ಕಡೆ ಮುಖ ಮಾಡಿದ್ದ. ತಪ್ಪಿಯೂ ಪಾಲಾವವ ಸಂದರ್ಭ ಬರಲಾರದು ಎಂದು ಗಟ್ಟಿಯಾಗಿಯೇ ಹೇಳಿದ್ದೇಕೆ..?
ಕೂಡುಮನೆಗೆ ಬೆಂಗಳೂರಿನಿಂದ ಹೊರಟು ಬಂದವನಿಗೆ ಅಚ್ಚರಿ ಕಾದಿತ್ತು. ಶ್ರೀಧರನ ಅಜ್ಜ ಶಂಭಟ್ಟರು. ಅವರ ಹಿಂದಿನ ತಲೆಮಾರುಗಳಲ್ಲಿ ಪಾಲು ನಡೆದು ಅಡ್ಕ, ಕುಮೇರಿ, ಪೂಂಬೆಮನೆ ಎಂದು ಹಂಚಿಹೋಗಿತ್ತು. ಈಗ ಮೂಲ ಮನೆಯಾಗಿ ಕೂಡುಮನೆ ರೂಪ ತಾಳಿತ್ತು . ಶಂಭಟ್ಟರು ಕೃಷಿಭೂಮಿಯ ವಿಸ್ತರಣೆಗೆ ಶ್ರಮಿಸಿದ ಹಾಗೂ ಅವರ ಮಣ್ಣಿನ ಕಾಯಕದ ಕುರಿತು ಓದಿನೋಡಿ.
ಶಂಭಟ್ಟರಿಗೆ ಮೂವರು ಗಂಡುಮಕ್ಕಳು 6 ಮಂದಿ ಹೆಣ್ಣು ಮಕ್ಕಳು.
ನಾರಾಯಣ, ಶಂಕರ ಹಾಗೂ ರಾಜರಾಮ ಅವರ ಹೆಂಡತಿ ಮಕ್ಕಳೊಡನೆ ಒಟ್ಟಾಗಿ ನೆಲೆಸಿದ್ದರು. ಹೆಣ್ಣುಮಕ್ಕಳಲ್ಲಿ ಗೌರಿಗೆ ಮದುವೆಯಾಗಿ ಮಗ ರಾಮಕೃಷ್ಣ ನಾಲ್ಕು ವರ್ಷವಿದ್ದಾಗ ಪತಿ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಈಗ ಗೌರಿ ಕೂಡುಮನೆಯಲ್ಲಿಯೇ ಮಗನೊಂದಿಗೆ ನೆಲೆಸಿದ್ದಳು.
ಶ್ರೀಧರನ ತಂದೆ ನಾರಾಯಣ. ಶ್ರೀಧರನ ತಾಯಿ ತೀರಿ ಹೋಗಿ ತಂದೆ ಎರಡನೆಯ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳು. ನಾರಾಯಣನಿಗೆ ಶ್ರೀಧರ ಕೃಷಿ ಕಾಲೇಜಿಗೆ ಸೇರುವುದು ಇಷ್ಟವಿರಲಿಲ್ಲ. ಮಗ ಲೆಕ್ಚರರ್ ಆಗುವ ಆಸೆ ಇಟ್ಟುಕೊಂಡಿದ್ದರಾದರೂ ಮಗ ಅದಕ್ಕೆ ಮನ ಕೊಟ್ಟಿರಲಿಲ್ಲ. ಮತ್ತೊಬ್ಬ ಮಗ ಶ್ರೀಹರಿ ಕುರಿತು ಅವರಿಗೆ ಭರವಸೆಯಿತ್ತು. ನಾರಾಯಣರ ಎರಡನೇ ಪತ್ನಿ ಶಾರದೆಯ ಅಣ್ಣ ಈಶ್ವರ ಭಟ್ಟರ ಕುಮಕ್ಕು ನಾರಾಯಣರಿಗೆ ಹೆಚ್ಚೇ ಇತ್ತು.
ಶಂಕರನ ಪತ್ನಿ ಪಾರ್ವತಿ. ಇವರಿಗೆ ಮೂವರು ಮಕ್ಕಳು ಕಾದಂಬರಿಯಲ್ಲಿ ಇವರಿಗೆ ಹೆಚ್ಚೇನೂ ಮಹತ್ವವಿಲ್ಲ. ಕೆಲವು ಬಾರಿ ಪ್ರಸ್ತಾಪ ಬಂದು ಹೋಗುತ್ತದೆ.
ಮತ್ತೊಬ್ಬ ಮಗ ರಾಜಾರಾಮ ಹಾಗೂ ಜಾನಕಿ ಇಬ್ಬರು ಹಸುವಿನಂತಹ ಸ್ವಭಾವದವರು. ಪರೋಪಕಾರದಲ್ಲಿ ಎತ್ತಿದ ಕೈ ಎಂದರೂ ತಪ್ಪಾಗಲಾರದು. ತಾಯಿಯನ್ನು ಕಳೆದುಕೊಂಡಿದ್ದ ಶ್ರೀಧರನಿಗೆ ಜಾನಕಿ ಬಂದ ನಂತರ ತಾಯಿ ದೊರೆತಿದ್ದಳೆಂಬುದರಲ್ಲಿ ಅತಿಶಯೋಕ್ತಿಯಿಲ್ಲ.
ಶಂಭಟ್ಟರ ಉಳಿದ ಹೆಣ್ಣು ಮಕ್ಕಳ ಪ್ರಸ್ತಾಪ ಸಾಂದರ್ಭಿಕವಾಗಿ ಆಗುತ್ತದೆಯಾದರೂ.. ಮೂರು ಗಂಡು ಮಕ್ಕಳಿಗಿಂತ ಹೆಚ್ಚೇನೂ ಮಹತ್ವ ನೀಡುವುದಿಲ್ಲ.
ಶಂಭಟ್ಟರ ಪತ್ನಿ ಲಕ್ಷ್ಮಿ ತೀರಿಕೊಂಡ ನಂತರ ಪ್ರತಿ ವರ್ಷವೂ ಅವರ ವರ್ಷದ ಕಾರ್ಯಕ್ಕೆ ಸಂಬಂಧಿಕರು ಹಾಗೂ ಮಕ್ಕಳ ಸಂಸಾರವೆಲ್ಲವೂ ಒಟ್ಟಾಗುತ್ತಿತ್ತು. ಕುಮೇರಿ ಕೃಷ್ಣಯ್ಯನವರು ಶಂಭಟ್ಟರ ಆಪ್ತರು. ಮೊಮ್ಮಕ್ಕಳ ಬಾಲ್ಯದ ಆಟಗಳನ್ನು ನೋಡುತ್ತಾ ಸಂತೃಪ್ತಿಯಿಂದ ಇದ್ದವರಿಗೆ ಹೆಚ್ಚೇನೂ ಆಸೆಗಳಿರಲಿಲ್ಲ. ಆದರೆ, ಮನಸ್ಸು ಬೇರೇನನ್ನೋ ಶಂಕಿಸುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕ-ಪುಟ್ಟ ಘಟನೆಗಳಿಗೆ ಅಂತಹ ಮಹತ್ವ ಕೊಡದಿದ್ದರೂ ಒಡಕು ಕಾಣುತ್ತಿತ್ತು.
ಶಂಭಟ್ಟರ ಪತ್ನಿ ಲಕ್ಷ್ಮಿಯವರ ವರ್ಷದ ಕಾರ್ಯದ ದಿನ ನಿರ್ದಾಕ್ಷಿಣ್ಯವಾಗಿ ಹಿರಿಯ ಮಗ ನಾರಾಯಣ ಹಾಗೂ ಎರಡನೇ ಮಗ ಶಂಕರ ಇಬ್ಬರೂ ಪಾಲು ಕೇಳಿದಾಗ ಇಂದಲ್ಲಾ ನಾಳೆ ಇವರು ಪಾಲಾಗುವವರೇ ಎಂದು ಗೊತ್ತಾಗಿದ್ದರಿಂದ, ಸ್ವಲ್ಪ ದಿನ ತಡೆಯುವವರೇ ಎಂದು ಕೇಳಿ ಮಳೆಗಾಲದ ಬಳಿಕ ಪಾಲಿಗೆ ಒಂದು ದಿನ ನಿಶ್ಚಯಿಸಿ, ಅಲ್ಲಿಯವರೆಗೂ ಹೇಗಾದರೂ ನಿಭಾಯಿಸಿ ಎಂದಿದ್ದರು. ಶ್ರೀಧರ ತನ್ನ ಪರೀಕ್ಷೆಯ ಕಾರಣ ಅಂದು ಅಲ್ಲಿ ಹಾಜರಿರಲಿಲ್ಲ.
ಮುಂದೆ ಗೌರಿ ಹಾಗೂ ರಾಮನ ಪರಿಸ್ಥಿತಿ ಏನು ಎಂಬುದನ್ನು ಅವರು ಮುಂದಾಲೋಚಿಸಿದ್ದರು. ರಾಜಾರಾಮ ಹಾಗೂ ಜಾನಕಿಯ ಮನಸ್ಸು ಎಷ್ಟು ನಿಷ್ಕಲ್ಮಶವೆಂದರೆ ತಮ್ಮೊಡನೆ ಅವರನ್ನು ಸಾಕಲು ತಮ್ಮಲ್ಲಿಯೇ ನಿಶ್ಚಯಿಸಿಕೊಂಡಿದ್ದರು. ಹೇಗೂ ನಾರಾಯಣ, ಶಂಕರರು ಅವರ ಕುರಿತು ಆಲೋಚಿಸಿರಲಾರರು ಎಂದುಕೊಂಡು..
ಕೂಡುಮನೆ ಪಾಲಾಗುವ ಗ ನಾರಾಯಣನಿಗೆ ಅವನ ಭಾವ ಈಶ್ವರ ಭಟ್ಟನ ಸಹಾಯ ಸಿಕ್ಕಿತು. ಶಂಕರ ಹಾಗೂ ನಾರಾಯಣರಿಗೆ ಅವರವರು ಬೇಕಾದದ್ದೇ ಸಿಕ್ಕಿತು. ರಾಜಾರಾಮನಿಗೆ ಇಷ್ಟವಿಲ್ಲದಿದ್ದರೂ ತನ್ನ ಪಾಲು ಪಡೆದುಕೊಳ್ಳಲೇ ಬೇಕಿತ್ತು.
ಶ್ರೀಧರ ತನ್ನ ತಂದೆಯ ಬಳಿ ತನ್ನ ಪಾಲು ಕೇಳಿದ್ದು ನಾರಾಯಣನಿಗೆ ಸಿಟ್ಟು ತರಿಸಿತ್ತು. ತಾತನ ಜೊತೆ ಉಳಿಯುವ ನಿರ್ಧಾರ ತೆಗೆದುಕೊಂಡಾಗ.. ಆ ಆಸ್ತಿಯನ್ನು ಒಳಹಾಕಿಕೊಳ್ಳಲು ಉಳಿಯುತ್ತಿದ್ದಾನೆಂಬ ಚಿಕ್ಕಪ್ಪನ ಅನುಮಾನದ ಕಟು ಮಾತುಗಳನ್ನು ಕೇಳಬೇಕಾಯಿತು. ಕೂಡುಮನೆಯಲ್ಲಿ ಶಂಭಟ್ಟರು, ಶ್ರೀಧರ, ಗೌರಿ ಹಾಗೂ ರಾಮರು ಉಳಿದರು. ಸ್ವಯಾರ್ಜಿತ ಆಸ್ತಿ ಕೈಹಿಡಿಡಿತ್ತು.
ಮುಂದೆ ಶಂಕರ, ನಾರಾಯಣ ಹಾಗೂ ರಾಜಾರಾಮರ ಬದುಕು ಹೇಗೆ ಸಾಗಿತು..?
ಒಡೆದು ಹೋದ ಕೂಡುಮನೆಯಲ್ಲಿ ಹೆಣ್ಣುಮಕ್ಕಳು ಮುಂದೆ ಸಂಬಂಧವಿಟ್ಟುಕೊಂಡಾದರೂ ಹೇಗೆ..?
ಶಂಭಟ್ಟರು ದೀರ್ಘಕಾಲ ಉಳಿಯಲಿಲ್ಲ. ಶ್ರೀಧರನೇ ಯಜಮಾನನಾಗಿ ನಿಂತು ನಿಭಾಯಿಸುತ್ತಿದ್ದ. ಶಂಕರನಿಂದ ಆಗಾಗ ತೊಂದರೆಗಳು ಒದಗಿ ಬಂದಾಗ ಪರಿಹಾರ ಕಂಡುಕೊಂಡಿದ್ದೇಗೆ..? ಹಿತೈಷಿಯಂತೆ ಕುಮೇರಿ ಕೃಷ್ಣಪ್ಪನವರಿದ್ದರು. ಶಂಕರ ಆ ಜಾಗವನ್ನು ಮಾಡಿ ಬೇರೆಡೆಗೆ ಹೋದ ಸಂದರ್ಭದಲ್ಲಿ ಕೆದಿಲಾಯರು ಬಂದರು. ಅವರ ಒಡನಾಟ ಹೇಗಿತ್ತು..?
ಅತ್ತೆ ಹಾಗೂ ರಾಮನನ್ನು ಜೊತೆಗೆ ಅಜ್ಜನ ಕೃಷಿ ಭೂಮಿಯನ್ನು ಕಾಪಾಡುತ್ತಾ ಶ್ರೀಧರ ಬದುಕಿದ ಬದುಕು ನಿಜಕ್ಕೂ ಆದರ್ಶನೀಯ. ರಾಜಾರಾಮನಿಂದ ಸಿಗುತ್ತಿದ್ದ ಬೆಂಬಲವೂ ಇಲ್ಲಿ ನೆನಪಿರಬೇಕಾದಂತದ್ದು. ಶ್ರೀಹರಿಯ ಯಾವ ಕೆಲಸದಿಂದ ನಾರಾಯಣ ಮನಸ್ಸು ಕೆಡಿಸಿಕೊಂಡ..? ನಾರಾಯಣ ಹಾಗೂ ಶ್ರೀಧರನ ಸಂಬಂಧ ಹಲಸಲು ಶಾರದೆ ಎಷ್ಟರಮಟ್ಟಿಗೆ ಕಾರಣವಾಗುತ್ತಾಳೆ..? ಶ್ರೀಧರನ ವಿವಾಹಾನಂತರದ ಬದಲಾವಣೆಗಳು ಹೇಗಿದ್ದವು..? ಶ್ರೀಧರನ ಓದಿನ ಜ್ಞಾನ ಎಷ್ಟು ಸಹಕಾರಿಯಾಯಿತು..?
ಕಾಲ ಎಲ್ಲವನ್ನು ಬದಲಿಸುತ್ತದೆ ಅನ್ನುವ ಮಾತು ಕೆಲವು ಬಾರಿ ನಿಜವಾದರೂ.. ಒಂದು ತಲೆಮಾರಿನ ಬಳಿಕ ಮತ್ತೆ ಮನಸ್ಸುಗಳು ಕೂಡಿಕೊಂಡು ಮನೆ ಒಂದಾಗುತ್ತದೆಯೇ..? ಈ ಕಲ್ಪನೆ ಎಷ್ಟು ರಮ್ಯವಲ್ಲವೇ..!? ಅದು ನಿಜವಾಗಿಯೂ ಆದರೆ..? ಕೂಡುಮನೆ ಇಂತಹ ದಿನಗಳನ್ನು ಕಾಣುವುದರಲ್ಲಿತ್ತು. ಅದರ ಹಾದಿ ಹೇಗಿತ್ತು ಓದಿ ನೋಡಿ.
ಕಾದಂಬರಿಯ ಕೊನೆಯ ಮಾತಂತೂ ಶ್ರೀಧರ ಭವಿಷ್ಯದ ಕುರಿತು ಆಲೋಚಿಸಿರುವುದನ್ನು ಹಾಗೂ ಮನುಷ್ಯರ ಜೊತೆಗೆ ಕಾಲದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಮತ್ತೊಂದು ಬದಲಾವಣೆಗೆ ನಾಂದಿಯೇ..? ಆ ಮಾತುಗಳೇನು ಓದಿ ನೋಡಿ.
ಆಪ್ತವಾದ ಓದು. ಒಳ್ಳೆಯ ಭರವಸೆಗಳು, ನಡೆಗಳು ಕಾದಂಬರಿಯಾಚೆಗೂ ಮನಸ್ಸಲ್ಲುಳಿಯುತ್ತವೆ. ಕಡಬ, ಪಂಜ, ಪುತ್ತೂರಿನ ಪರಿಸರ ಓದನ್ನು ಇನ್ನಷ್ಟು ಆಪ್ತವಾಗಿಸಿತು.
~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ