ಪುಸ್ತಕದ ಶೀರ್ಷಿಕೆ : ಗಾಳಿ ಗೂಡು
ಲೇಖಕರು : 'ಶ್ರೀ' ತಲಗೇರಿ
ಪ್ರಕಾಶಕರು : ಸಸಿ ಪ್ರಕಾಶನ
ಪ್ರಥಮ ಮುದ್ರಣ : 2026
ಪುಟಗಳು : 80
ಬೆಲೆ : 120 ರೂ.
'ಶ್ರೀ' ತಲಗೇರಿ ಅವರ ಮೊದಲ ಪುಸ್ತಕ ಒಂಟಿ ಟೊಂಗೆಯ ಲಾಂದ್ರ ಎಂಬ ಕವನ ಸಂಕಲನ ಇ-ಪುಸ್ತಕವಾಗಿ ಲಭ್ಯವಿದೆ. ಇದು ಅವರ ಮೊದಲ ಫಿಸಿಕಲ್ ಹೊತ್ತಿಗೆ ಹಾಗೂ ಕಥಾ ಸಂಕಲನ. ಛಾಯಾಚಿತ್ರಗಳೊಂದಿಗೆ ಚೆಂದದ ಸಾಲುಗಳೊಂದಿಗೆ ಸೆಳೆಯುತ್ತಿದ್ದ ಇವರ ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.
ನೆರಳು : ವಿಳಂಬನ ಪ್ರತಿದಿನದ ದಿನಚರಿಯ ಜೊತೆಗೆ ಅವನು ಸೂಕ್ಷ್ಮವಾಗಿ ಗಮನಿಸುತ್ತಲೇ.. ಏಕಾಂತವನ್ನು ಅನುಭವಿಸುವ, ತನ್ನೊಡನೆ ತಾನು ಕಳೆಯುವ ಕ್ಷಣಗಳನ್ನು ತೆರೆದಿಡುತ್ತಾ.. ಅವನ ಬಾಲ್ಯದ ಘಟನೆಯ ಜೊತೆಗೆ, ಈಗ ಅವನ ಕಣ್ಣಿಗೆ ಕಾಣುವ ಆದರೆ ಮಾತುಕತೆಯೇ ಇಲ್ಲದ ನೆರಳುಗಳ ಜೊತೆಗಿನ ಒಡನಾಟ ಇಲ್ಲಿದೆ. ವಿಳಂಬನ ಬದುಕಿನ ಆಸಕ್ತಿದಾಯಕ ಕಥೆಯನ್ನು ಇಲ್ಲಿ ಕಾಣಬಹುದು.
ಸೀತಾಳೆ ಹೂವು : ಅಮ್ಮನಿಗೆ ಸೀತಾಳೆ ಹೂವು ಎಂದರೆ ಭಯಂಕರ ಇಷ್ಟ ಎನ್ನುತ್ತಾ ಮಳೆಗಾಲದ ನೆನಪಿನೊಂದಿಗೆ ಪರ ಸೀತಾಳೆ ಹೂವಿನ ಪರಿಯನ್ನು ಕಟ್ಟಿಕೊಡುತ್ತಾನೆ. ಈ ಸೀತೆ ಹೂವಿನ ಜೊತೆಗೆ ಅಮ್ಮನ ಹಾಗೂ ಅಪ್ಪನ ಜೊತೆಗೆ ಅಪ್ಪನ ಮತ್ತೊಂದು ಸಂಸಾರದ ಚಿತ್ರಣ ತೆರೆದುಕೊಳ್ಳುತ್ತದೆ. ಚಿಕ್ಕಮ್ಮನ ಮಗ ಅಪರ ಅಂತ್ಯಸಂಸ್ಕಾರ ಮಾಡಿದನೋ ಅಥವಾ ಪರನೋ..? ಹೀಗೆ ಸಾಗುವ ಕಥನ ಮುಂದೆ ಪರ ಹಾಗೂ ಅಪರರಲ್ಲಿ ಅಮ್ಮ ಆಸೆಪಡುತ್ತಿದ್ದ ಸೀತಾಳೆ ಹೂವಿಗಾಗಿಯೇ ಜಗಳ ಶುರುವಾಗಿತ್ತು. ಹೀಗೆ ಶುರುವಾದ ಜಗಳ ಮತ್ತೊಂದು ಸತ್ಯವನ್ನು ಓದುಗರಿಗೆ ತೆರೆದಿಡುತ್ತದೆ
ಸತ್ತೆ : ಸಾಹಿತಿಯಾದವರು ಎಲ್ಲದಕ್ಕೂ ಅಭಿಪ್ರಾಯ ಹೇಳಲೇ ಬೇಕಾ..? ಇಂತಹದೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಅಭಿಸಾರ, ಅಷ್ಟೇ ಅಲ್ಲದೆ ಪತ್ರಕರ್ತ ಗೆಳೆಯ ವಾರಂಗ ಯಾವುದಾದರೊಂದು ಸ್ಟೇಟ್ಮೆಂಟ್ ಕೊಡುವಂತೆ ಗೆಳೆಯನಿಗೆ ತಿಳಿ ಹೇಳಿ ಅವನ ಹೇಳಿಕೆಗಾಗಿ ಕಾಯುತ್ತಿದ್ದ. ಆದರೆ, ಅಭಿಸಾರನ ಗಮನವೆಲ್ಲವೂ ಇದ್ದದ್ದು ಬೇರೆಡೆಗೆ. ಸಾಮಾಜಿಕ ತಲ್ಲಣಕ್ಕೆ ಸಾಹಿತಿಗಳು ಸ್ಪಂದಿಸುವ ಬಗೆ ಹೇಗಿರುತ್ತದೆ..? ಅವರ ಬದುಕಿನ ನೈಜ ರೀತಿ ಹೇಗಿರುತ್ತದೆ ಎರಡಕ್ಕೂ ಉತ್ತರ ಇಲ್ಲಿದೆ. ಹಾಗೆಂದು ಮಾನವೀಯತೆಯನ್ನು ಬದಿಗಿಟ್ಟು ಬದುಕುವ ಮನುಷ್ಯನಲ್ಲ ಅಭಿಸಾರ, ಆತನ ಮಿಡಿತ ಯಾವ ಕಡೆಗಿತ್ತು ಓದಿ ನೋಡಿ.
ಮೀನ್ ಗೌರಿಯ ದಂಡಯಾತ್ರೆ : ದಿನಾ ಮೀನು ಮಾರುವ ಗೌರಕ್ಕ ಕಾಣೆಯಾಗಿದ್ದರ ಹಿಂದೆಯೇ ಆಕೆಯ ಕುರಿತಾಗಿ ಹಲವಾರು ಸುದ್ದಿಗಳು ಊರಿನಲ್ಲಿ ಹಬ್ಬಿದ್ದವು. ಒಂದು ವಾರ ಕಳೆದು ಒಂದು ದಿನ ಗೌರಕ್ಕ ಬಂದಾಗ ಮೀನು ಬುಟ್ಟಿ ಇರಲಿಲ್ಲ. ಬದಲಾಗಿ ಇದ್ದದ್ದು ಕೋವಿ, ಗೌಡರ ಮನೆಯ ಕಳೆದು ಹೋಗಿದ್ದ ಕೋವಿ ಗೌರಕ್ಕನ ಕೈಗೆ ಬಂದದ್ದು ಹೇಗೆ..? ಗೌರಕ್ಕನ ದಂಡೆಯಾತ್ರೆಯ ಕಥೆ ಇಲ್ಲಿದೆ.
ಸ್ತ್ರೀ ವೇಷ : ಸ್ತ್ರೀವೇಷ ಹಾಕುತ್ತಾ ಬಂದಿದ್ದ ಜಟ್ಟನಿಗೆ ಈ ಸಲ ಸ್ತ್ರೀ ವೇಷ ಹಾಕಬೇಡ ಎಂದದ್ದು "ಅದೆಷ್ಟೋ ವರ್ಷಗಳ ನೆರಳೊಂದು ಬಿಟ್ಟು ಹೋದಂತೆ, ಅದೆಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಕನ್ನಡಿಯೊಂದು ಫಟಾರನೆ ಒಡೆದು ಹೋದಂತೆ" ಅನಿಸಿತು. ಮಾತ್ರವಲ್ಲದೇ ಅವನು ಕಳೆದುಕೊಂಡದ್ದು ಏನೆಂದು ಅವನ ಬಾಯಿಯಲ್ಲಿಯೇ ಕೇಳಬೇಕು. ವೇಷದ ಗುಂಗು ಶುರುವಾಗುವ ಮುನ್ನ ಜಟ್ಟ ನ ಚಿತ್ರಣವನ್ನು ಬಿಚ್ಚಿಡುತ್ತಾರೆ. ಹಿರಿ ಸುಗ್ಗಿ ಹಾಗೂ ಕಿರಿ ಸುಗ್ಗಿಯ ಸಂಭ್ರಮಗಳನ್ನು ತೋರುತ್ತಾ ಕಳೆದು ಹೋದ ದೇವರ ಬದಲಿಗೆ ಪೂಜಿಸಲು ಗುಡಿಭಟ್ಟರು ಕೊಟ್ಟ ಸಲಹೆ ಏನು..? ಇದಕ್ಕೂ ಜಟ್ಟನಿಗೂ ಇರುವ ಕೊಂಡಿ ಏನು..?
ಗುಲಾಬಿ ಬೊಂಬಾಯಿ ಮಿಠಾಯಿ : ಗೋಳಿಯ ಮಗ ಬೀರ ವಾಲಿಬಾಲ್ ಆಡಿ ಹೊರಟ ನಂತರ ಗಿಬ್ಬೆಲ್ಲ ಅವನ ಜೊತೆಯಾಗಿದ್ದ. ಬೀರನಿಗಿಂತ 15-16 ವರ್ಷ ದೊಡ್ಡವನಾಗಿದ್ದವನು. ಮಕ್ಕಳ ದೃಷ್ಟಿಯಲ್ಲಿ ಒಂದು ರೀತಿಯ ಹೀರೋ ಎಂದರೂ ತಪ್ಪಾಗಲಾರದು. ಬೀರ ಗಿಬ್ಬೆಲ್ಲನ ಕುರಿತು ಹೇಳಿದ ಒಂದು ಸತ್ಯದಿಂದ ಗೋಳಿ ಮರುದಿನ ಬಂದು ಕೂಗಾಡಿದ ಪರಿಣಾಮ ಎಲ್ಲರೆದುರು ಗಿಬ್ಬೆಲ್ಲನನ್ನು ಯಾವ ರೀತಿಯಲ್ಲಿ ತೋರಿತು..? ಇದರ ಸತ್ಯಾಸತ್ಯತೆ ಏನು? ಗಿಬ್ಬೆಲ್ಲನ ಮನದ ತಳಮಳಗಳ ಜೊತೆಗೆ ವಾಸ್ತವ ಇಲ್ಲಿದೆ.
ಬನ್ನಿ : ಮರವೆಂದರೆ ಆತ್ಮಬಂಧುವಂತೆ ಅವನ ಪಾಲಿಗೆ. ಕಷ್ಟಪಟ್ಟು ಬೆಳೆಸಿದ ಆ ಮರ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನಾದರೂ ಮಾಡದಿದ್ದರೆ ಅಲ್ಲಿರುತ್ತಿರಲಿಲ್ಲ. ತುರಿಕೆಯ ಮಸಲತ್ತಿನಿಂದ ಆ ಮರ ಕಡಿಯಲ್ಪಡುತ್ತಿತ್ತು. ಅಂಚೆ ಕಛೇರಿಗೂ ಆ ಮರಕ್ಕೂ ಅವಿನಾಭಾವ ನಂಟು ಎಂಬಂತಿದ್ದ ಆ ಮರದ ಜೊತೆಗಿನ ಒಡನಾಟ, ಇವೆಲ್ಲದರ ಜೊತೆಗೆ ಪೂರ್ವಜರು ಮರಗಳಿಗಾಗಿ ಮಾಡಿದ ತ್ಯಾಗ ಎಲ್ಲವನ್ನು ತೆರೆದಿಟ್ಟಿದ್ದಾರೆ. ಶಮಿ ವೃಕ್ಷ ಏನಾಯ್ತು ತಿಳಿಯಲು ಕಥೆ ಓದಬೇಕು.
ಮುರುಕು ಸ್ವಪ್ನ ಬಿಂಬ : ಏಕನಾಥರು ಇಲ್ಲವಾಗುವ ಸಂದರ್ಭದಲ್ಲಿ ಪತ್ನಿ ಗಾರ್ಗಿ ಹಾಗೂ ಕೆಲಸದ ಭ್ರಮರಿಗೆ ಅವರು ಹಾಗೆ ಇಲ್ಲವಾಗುತ್ತಾರೆ ಎನ್ನುವ ಸೂಚನೆಯೂ ಕೊಟ್ಟಿರಲಿಲ್ಲ. ಮಗನ ಕುರಿತ ಅವರ ಕನವರಿಕೆ ಅವರ ಕೊನೆಯ ಕ್ಷಣಗಳು ಗಾರ್ಗಿಯಲ್ಲಿಯೂ ತಲ್ಲಣ ಹುಟ್ಟಿಸಿದ್ದವು. ಆದರೆ ಮಗ..? ಅಪ್ಪನ ಹೆಣ ನೋಡಲು ಬರಲು ಸಿದ್ಧವಿಲ್ಲದ ಅವನನ್ನು ಅಕ್ಕನ ಮಾವ ಕರೆಸಿದರು ಎಂದರೆ ಎಷ್ಟು ನಿಜವಾಗಬಹುದು " ಅಥವಾ ಎಷ್ಟು ಸುಳ್ಳಾಗಬಹುದು..? ಸಿದ್ದಾರ್ಥ ಬಂದಾಗ ಯಾವ ಭಾವದಲ್ಲಿದ್ದ..? ಅಷ್ಟಕ್ಕೂ ಆತನ ನಿರಾಕರಣೆಯ ಹಿಂದಿದ್ದ ಕಾರಣ ಎಷ್ಟು ಸರಿ..? ಸಿದ್ದಾರ್ಥ ಎಂಬ ಹೆಸರೇ ಇಲ್ಲಿ ಸಾಕಷ್ಟು ಹೇಳುತ್ತದೆ. ಸಿದ್ಧಾರ್ಥನನ್ನು ಕಟ್ಟಿ ಹಾಕಲು ಯಾರು ಯಾವೆಲ್ಲ ಪ್ರಯತ್ನಗಳನ್ನು ಮಾಡಿದರು ಹಾಗೂ ಯಾರು ಸಫಲರಾದರು..?
ಒಂದು ಹೆಲ್ಮೆಟ್ಟಿನ ಕತೆ : "ಹತಾಶೆಯಲ್ಲಿ ತೊಳಸು ಹೆಲ್ಮೆಟ್ ತೆಗೆದು ಬಿಸಾಡಿದ, ಅದು ಉರುಳುರುಳಿ ಸೊಣಕಿಗಿಂತಲೂ ಮುಂದೆ ಹೋಗಿ ರಸ್ತೆಗೆ ಬಂದು ಬಿದ್ದಿತ್ತು, ಹೆಲ್ಮೆಟ್ಟಿನ ತುಂಬಾ ಗೀರುಗಳು, ಮುಂದಿನ ಗಾಜು ಒಡೆದಿತ್ತು" ಈ ಸಾಲುಗಳ ಆಚೆಗೆ ಕಥೆಗೆ ಬಹಳಷ್ಟು ವಿಸ್ತಾರವಿದೆ ಹಾಗೂ ಮತ್ತೊಂದು ಆಯಾಮವೇ ಇದೆ. ಸೂಕ್ಷ್ಮವಾಗಿ ತೆರೆದುಕೊಳ್ಳುವ ತೊಳಸು ಹಾಗೂ ಸೊಣಕಿಯರ ಸಂಬಂಧವೂ ಇಲ್ಲಿದೆ.
ನಾಯಿ ಪಾಡು : ಮನುಷ್ಯರು ನಾಯಿ ಪಾಡು ಎಂಬುದನ್ನು ಯಾವೆಲ್ಲ ರೀತಿಯಲ್ಲಿ ಬಳಸುತ್ತಾರಲ್ಲವಾ..?! ಇಲ್ಲಿ ನಾಯಿಯೇ ತನ್ನ ಪಾಡನ್ನು ತೆರೆದಿಡುತ್ತಾ ಹೋಗುತ್ತದೆ. ನಿಯತ್ತಿಗೆ ಮತ್ತೊಂದು ಹೆಸರಾದ ನಾಯಿ ಸಾಕಿದವರ ಕುರಿತಾಗಿ ಬೆಳೆಸಿಕೊಳ್ಳುವ ನಿಷ್ಠೆ, ಅನ್ನ ತಿಂದ ಮನೆಯವರ ಕಡೆಗೆ ಸಹನೆಯಿಂದ ನೋಡುವ ಪರಿ ಅದರ ಪ್ರೀತಿಯ ಆಳವನ್ನು ತೋರುತ್ತದೆ. ಕೊನೆಯ ದಿನಗಳಲ್ಲಿ ಏನೂ ಇಲ್ಲದ ಮನುಷ್ಯನ ಪಾಡು ಇದಕ್ಕಿಂತ ವಿಭಿನ್ನವಾಗಿರಲಾರದೇನೋ ಎನ್ನಿಸಿತು.
ಕಥೆಗಳಲ್ಲಿ ವಿಭಿನ್ನ ಹಾಗೂ ವಿಚಿತ್ರವೆನಿಸುವ ಹೆಸರುಗಳು ಸಿಕ್ಕವು. ವಿಳಂಬ, ತೊಳಸು, ಸುಷುಮ್ನಾ, ಪರ - ಅಪರ, ಸಗಮಾ, ತುರಿಕೆ ಇತ್ಯಾದಿ.
ಈ ಕಥಾ ಸಂಕಲನದಲ್ಲಿ ಒಂದು ಹೆಲ್ಮೆಟ್ಟಿನ ಕಥೆ ಹಾಗೂ ಗುಲಾಬಿ ಬೊಂಬಾಯಿ ಮಿಠಾಯಿಗಳಲ್ಲಿ ಸೂಕ್ಷ್ಮವಾದ ಕಥಾವಸ್ತುವನ್ನು ಸೂಕ್ಷ್ಮವಾಗಿ ತೆರೆದಿಟಿದ್ದಾರೆ.
ಒಂಟಿತನ, ಅನಾಥ ಭಾವದ ಕಥೆಗಳನ್ನು ಅಷ್ಟೇ ವಿವರವಾಗಿ ಅಂತೆಯೇ ತೀರಾ ನೇರಾನೇರವಲ್ಲದ ರೀತಿಯಲ್ಲಿ ಹೇಳುತ್ತಲೇ ನಮ್ಮೊಳಗೆ ಆ ಭಾವಗಳನ್ನು ಕಟ್ಟಿಕೊಡುತ್ತಾರೆ. ಸ್ತ್ರೀವೇಷ, ನೆರಳು, ಮುರುಕು ಸ್ವಪ್ನ ಬಿಂಬ, ಸೀತಾಳೆ ಹಾವು, ನಾಯಿ ಪಾಡು ಈ ಕಥೆಗಳಲ್ಲಿ ಈ ಭಾವಗಳನ್ನು ಕಾಣಬಹುದು.
ಸತ್ತೆ, ಬನ್ನಿ, ಮೀನ್ ಗೌರಿಯ ದಂಡಯಾತ್ರೆ ಕಥೆಗಳಲ್ಲಿ ಅಭಿವ್ಯಕ್ತಿಯ ಜೊತೆಗೆ ಸೂಕ್ಷ್ಮ ಸಂದೇಶಗಳನ್ನು ಕಟ್ಟಿಕೊಟ್ಟಿದ್ದಾರೆ.
ಕಾವ್ಯಾತ್ಮಕ ಭಾಷೆಯ ಈ ಕಥೆಗಳು ಸೆಳೆಯುತ್ತವೆ. ಜೊತೆಗೆ ಇಷ್ಟು ಬೇಗ ಮುಗಿದು ಹೋದವಾ ಎನ್ನಿಸುತ್ತವೆ. ಸೊಗಸಾದ ಕತೆಗಳ ಚೆಂದದ ಓದು.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ