ಕವಿತೆಯ ಶೀರ್ಷಿಕೆ : ಯೋಧ ಮತ್ತು ಹೆಂಗಸು
ರಚನೆ : ಸು. ರಂ. ಎಕ್ಕುಂಡಿ
ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.
ಉರಿಬಿಸಿಲು ಕೆಂಪುಹುಡಿ, ಮೈತುಂಬ ಧೂಳಿಡಿಗಿ ಕುದುರೆಯಿಳಿದನು ಯೋಧ ಜನರ ಕಂಡು
"ನೀರು ಹಣಿಸುವಿರ ತುಸು" ಅಂದಿರಲು ಹೆಂಗಸು
ಬೇಗ ಬಂದಳು ಮಡಕೆ ತುಂಬಿಕೊಂಡು
"ಬಳಲಿದಿರಿ, ಪಾಪ, ಬನ್ನಿರಿ ಒಳಗೆ ವಿಶ್ರಮಿಸಿ."
ಚಾಪೆಯನು ಹಾಸಿದಳು ಕೂತುಕೊಳಲು
"ಇರಲಿ ಬಿಡಿ. ಈ ಮರದ ನೆರಳಲ್ಲೆ ಕೂಡುವೆನು
ತಂಪಾಗಿ ತಬ್ಬಿರುವವಿದರ ಹೆಳಲು”
"ಬಟ್ಟಲಿನ ತುಂಬ ಇದೆ ಜೇನು, ಈ ಚೊಂಬಿನಲಿ
ತಣ್ಣಗಿನ ನೀರು ಇದೆ, ತೆಗೆದುಕೊಳ್ಳಿ
ಇಲ್ಲಿಹುದು ಬೀಸಣಿಕೆ, ಬಹಳ ಸೆಕೆ ಅಲ್ಲವೆ?
ಇದರಿಂದ ಗಾಳಿಯನು ಬೀಸಿಕೊಳ್ಳಿ
ಆಗ ಒಮ್ಮೆಲೆ ಬೀಸಿ ಬಂತು ತೆಂಕಣ ಗಾಳಿ
ದೂರವೆಲ್ಲೊ ಕೇಳಿಬಂತು ಹಾಡು
ಮಾವಿನೆಳಚಿಗುರಿನಲಿ ಚಿಮ್ಮಿ, ಪಯಣಿಗನೆಂದ
"ಇದಕೆ ಜೋಳದ ಪಾಳಿಯಿಲ್ಲ ನೋಡು"
ಜೇನು ಸವಿದನು ನೀರು ಕುಡಿದು ಮೈಯೊಡ್ಡಿದನು.
ತುಸು ಹೊತ್ತು ತಂಬೆಲರ ನೆರಳಿಗೆಂದು
ಎದ್ದು ಕುದುರೆಗೆ ಥಡಿಯ ಹಾಕಿ ಅಣಿಗೊಳಿಸಿದನು
ಮತ್ತೆ ದೂರದ ತನ್ನ ಪಯಣಕೆಂದು
"ಹೋಗಿ ಬರುವೆನು ತಾಯಿ" ಎಂದು ಕವಚವ ತೊಟ್ಟು ಖಡ್ಗವನು ಬಿಗಿದಿಟ್ಟ ಟೊಂಕದಲ್ಲಿ
ಹೆಂಗಸೆಂದಳು, "ಆಯ್ತು ಹೋಗಿ ಬನ್ನಿರಿ ಮತ್ತೆ
ಬಂದಾಗ ಬರಬೇಕು ನೀವು ಇಲ್ಲಿ"
“ಮರೆತುಬಿಟ್ಟೆನು ನಿಮ್ಮ ಹೆಸರು ಕೇಳಲು, ನೀವು
ನಡೆದ ದಾರಿಗೆ ಇರಲಿ ಶುಭದ ನೆರಳು
ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ ತುಂಬಿಬಂದಿತ್ತೇಕೆ ಕಣ್ಣು, ಕೊರಳು ?"
ಯೋಧ ನುಡಿದನು "ತಾಯಿ ಮತ್ತೆ ನೆನಪಿಗೆ ಬಂತು
ನನ್ನೂರು ಬನವಾಸಿ ನನಗೆ ಇಂದು
ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡ.
ನನ್ನನ್ನು ಕರೆಯುವರು ಪಂಪನೆಂದು”
ಇಲ್ಲಿ ಕವಿ ಹಿಂದಿನ ಕಾಲದಲ್ಲಿ ಜನರಿಗೆ ಯೋಧರ ಬಗೆಗಿದ್ದ ಗೌರವಗಳು ಹಾಗೂ ಅವರಿಗೆ ನೀಡುತ್ತಿದ್ದ ಆತಿಥ್ಯದ ಕುರಿತು ಬೆಳಕು ಚೆಲ್ಲಿದ್ದಾರೆ. ಇದು ಕೇವಲ ಯೋಧರಿಗೆ ಸಿಗುತ್ತಿದ್ದ ಗೌರವ ಮಾತ್ರವಲ್ಲ. ಯಾರೇ ಅಪರಿಚಿತರು ಬಂದರೂ ಅವರನ್ನು ಅತಿಥಿಗಳಾಗಿ ಕಾಣುವ ಬಗೆ ಹೀಗಿತ್ತು. ಆದರೆ, ಯೋಧರಿಗೆ ಈ ಆತಿಥ್ಯ ತುಸು ಹೆಚ್ಚೇ ಇತ್ತು ಎಂಬುದನ್ನು ಅರಿಯಬಹುದು.
ಉರಿ ಬಿಸಿಲಿನಲ್ಲಿ, ಧೂಳಿನ ದಾರಿಯಲ್ಲಿ ಬಾಯಾರಿಕೆಯಿಂದ ಬಳಲಿದ್ದ ಯೋಧ ಜನರಿದ್ದುದನ್ನು ಕಂಡು ತನ್ನ ಬಾಯಾರಿಕೆ ತಣಿಸಿಕೊಳ್ಳಲು ಬಂದಾಗ ಹೆಣ್ಣು ಮಗಳು ನೀರು ಕೊಟ್ಟದ್ದು ಮಾತ್ರವಲ್ಲದೆ.. ವಿಶ್ರಮಿಸಲು ಚಾಪೆ ಹಾಸುತ್ತಾಳೆ. ಆದರೆ, ಮರದ ನೆರಳಿನ ನೈಸರ್ಗಿಕ ತಂಗಾಳಿಯನ್ನು ಸವಿಯವ ನೆಪ ಹೇಳಿ ಆತ ಮರವನ್ನು ಬಣ್ಣಿಸುವ ಪರಿ ಯೋಧನ ಕವಿ ಮನವನ್ನು ತೋರುತ್ತದೆ.
ನೀರು, ವಿಶ್ರಾಂತಿಯ ಜೊತೆಗೆ ಸೆಕೆಗಾಲಕ್ಕೆ ಬೀಸಣಿಗೆ ಹಾಗೂ ಜೇನನ್ನು ಸವಿಯಲು ಅತಿಥಿಗೆ ಹೇಳುವ ಹೆಣ್ಣು ಮಗಳನ್ನು ಕಾಣಬಹುದು. ಆಗ ಯೋಧ ದೂರದಿಂದ ಕೇಳಿ ಬಂದ ಹಾಡು ಹಾಗೂ ತೆಂಕಣ ದಿಕ್ಕಿನಿಂದ ಬೀಸಿ ಬಂದ ಗಾಳಿಯನ್ನು ಆಸ್ವಾದಿಸುತ್ತಾ.. "ಇದಕ್ಕೆ ಜೋಳದ ಪಾಳಿ ಇಲ್ಲ ನೋಡು" ಎನ್ನುತ್ತಾರೆ. ಸಾಮಾನ್ಯವಾಗಿ ಜೋಳಗಳನ್ನು ಬೆಳೆಯುವ ಹೊಲಗಳ ಸಾಲುಗಳು ಮಾನವ ನಿರ್ಮಿತವಾಗಿರುತ್ತವೆ. ಆದರೆ, ಇಲ್ಲಿ ಅಂತಹ ಸುಖವು ನೈಸರ್ಗಿಕವಾಗಿಯೇ ರೂಪುಗೊಂಡಿದೆ ಎಂಬರ್ಥ.
ನೆರಳಲ್ಲಿ ಕ್ಷಣ ಕಾಲ ವಿಶ್ರಮಿಸಿ, ಜೇನು ಸವಿದು, ನೀರು ಕುಡಿದು, ಕುದುರೆಗೆ ಜೀನು ಹಾಕಿ ತನ್ನ ದೂರದ ಪ್ರಯಾಣಕ್ಕೆ ತಯಾರು ಮಾಡಿ.. ಕವಚ ತೊಟ್ಟು, ಸೊಂಟಕ್ಕೆ ಖಡ್ಗ ಬಿಗಿದು "ಹೋಗಿ ಬರುವೆನು ತಾಯಿ" ಎಂದು ಆಕೆಗೆ ಗೌರವದಿಂದ ಹೇಳುತ್ತಾನೆ.
"ಹೋಗಿ ಬನ್ನಿ" ಎಂದು ಹಾರೈಸುತ್ತಲೇ "ಮತ್ತೆ ಬಂದಾಗ ಬನ್ನಿ" ಎಂಬ ಆತ್ಮೀಯ ಕರೆಯೋಲೆಯನ್ನು ನೀಡುತ್ತಾಳೆ. ಅದರ ಜೊತೆಗೆ ಸೌಜನ್ಯದಿಂದ ನಿಮ್ಮ ಹೆಸರು ಕೇಳಲು ಮರೆತೆನೆಂದೂ ಜೊತೆಗೆ ನಿಮ್ಮ ಹಾದಿಯಲ್ಲಿ ಶುಭದ ನೆರಳಿರಲಿ ಎಂದು ಹಾರೈಸುತ್ತಾಳೆ.
ಹಾಗೂ ಅರಳಿರುವ ಮಲ್ಲಿಗೆ ಹಾಗೂ ಕೋಗಿಲೆಯ ದನಿ ಕೇಳಿ ಭಾವುಕನಾಗಿದ್ದನು ಗಮನಿಸಿದ ಹೆಣ್ಣು ಮಗಳು ಅದೇಕೆ ಎಂದು ಕೇಳುತ್ತಾಳೆ. ಹೆಣ್ಣು ಮಗಳ ಗಮನಿಸುವಿಕೆ ಎಷ್ಟು ಸೂಕ್ಷ್ಮ ಎಂಬುದನ್ನು ಇಲ್ಲಿ ಕಾಣಬಹುದು.
ಕೊನೆಯ ನಾಲ್ಕು ಸಾಲುಗಳಲ್ಲಿ ಎಲ್ಲದಕ್ಕೂ ಉತ್ತರ ಕಾಣುತ್ತದೆ. ಆ ಯೋಧ ಮತ್ತಾರೂ ಅಲ್ಲ.. ಕವಿ ಪಂಪ. ಆತ ಕೇವಲ ಕವಿಯಲ್ಲ. ಯೋಧನೂ ಆಗಿದ್ದವನು. ರಾಜ್ಯದ ರಾಜಕೀಯದಲ್ಲಿ, ಯುದ್ಧ ತಂತ್ರದಲ್ಲಿ ಪರಿಣಿತಿ ಹೊಂದಿದ್ದವನು.
"ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ"
ಎಂಬ ಮಾತು ಅದೆಷ್ಟೋ ಹಿರಿದರ್ಥವನ್ನು ಮೂಡಿಸಿದೆ.
ಕವಿ ಮನದಿಂದ ಅದೆಲ್ಲವನ್ನು ನೋಡಿದ್ದು ಮಾತ್ರವಲ್ಲದೆ ತನ್ನ ಹುಟ್ಟೂರು ಬನವಾಸಿಯನ್ನು ನೆನೆದು ಭಾವುಕನಾಗಿದ್ದನ್ನು ಹಂಚಿಕೊಳ್ಳುತ್ತಾನೆ. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಪಂಪನ ಸಾಲು ಅಕಾರಣವಾಗಿ ನೆನಪಾಯಿತು ನನಗೆ.
ಮನುಷ್ಯನ ಸೂಕ್ಷ್ಮ ದೃಷ್ಟಿ, ಪ್ರಕೃತಿಯ ವರ್ಣನೆ, ಕವಿ ಮನ, ಹೆಣ್ಣು ಮಗಳ ಆತಿಥ್ಯ, ಸೌಜನ್ಯ, ಕಾಳಜಿ ಹಾಗೂ ಮಾನವೀಯ ದೃಷ್ಟಿ, ಪಂಪನ ಹಿರಿಮೆ ಎಲ್ಲವನ್ನು ಬಹಳ ಸೊಗಸಾಗಿ ಈ ಕವಿತೆಯಲ್ಲಿ ಸು. ರಂ ಎಕ್ಕುಂಡಿಯವರು ಕಟ್ಟಿಕೊಟ್ಟಿದ್ದಾರೆ.
~ ವಿಭಾ ವಿಶ್ವನಾಥ್


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ