ಪುಸ್ತಕದ ಶೀರ್ಷಿಕೆ : ಅಜ್ಜಿ ಕರೆದ ಹಾಗಾಯಿತು
ಲೇಖಕರು : ಸವಿತಾ ನಾಗಭೂಷಣ
ಪ್ರಕಾಶಕರು : ಅಕ್ಷರ ಪ್ರಕಾಶನ
ಪ್ರಥಮ ಮುದ್ರಣ : 2022
ಪುಟಗಳು : 56
ಬೆಲೆ : 75 ರೂ.
ನಾನು ಸವಿತಾ ನಾಗಭೂಷಣ ಅವರ ಕವಿತೆಗಳನ್ನು ಮಾತ್ರ ಓದಿದ್ದೆ. ಇದು ಅವರ ಮೊದಲ ಕಥಾ ಸಂಕಲನ. ಇಲ್ಲಿನ ಕೆಲವು ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಉದಯವಾಣಿ, ತುಷಾರ, ಹೊಸ ಮನುಷ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು 30 ಕಿರು ಕಥೆಗಳ ಸಂಕಲನ. ನನಗೆ ಇಷ್ಟವಾದ ಕೆಲವು ಕಥೆಗಳ ಕುರಿತು ಪ್ರಸ್ತಾಪಿಸುವೆ.
ಬರವಣಿಗೆ : ಕಥಾ ಸಂಕಲನದ ಮೊದಲ ಕಥೆ ಹಾಗೂ ಚುಟುಕಾಗಿ ಚುರುಕು ಮುಟ್ಟಿಸುವ ಕಥೆಯೂ ಹೌದು. ಗಂಗಣ್ಣ ತನ್ನ ತಂದೆ ನಿಂಗಣ್ಣನಿಗೆ ಆಚೆ ಮನೆ ಚಿಕ್ಕಣ್ಣನ ಫೋಟೋ ಪೇಪರ್ ನಲ್ಲಿ ಬಂದಿರುವುದಾಗಿ ಹೇಳುತ್ತಾ.. ಅವನ ಪರಿಚಯವನ್ನು ಮಾಡುತ್ತಾನೆ. 'ಭಾಳ ಭಾಳ ಓದಿ ಬಾಳ ಬಾಳ ಬರೆದವನಂತೆ' ಎಂದು ಇನ್ನಷ್ಟು ಅವನ ಕೀರ್ತಿಯನ್ನು ಹೇಳುತ್ತಿರುವಾಗ ನಿಂಗಣ್ಣ 'ಅದೇನು ಭಾಳಾ ಭಾಳ ಅಂದ್ರೆ ರಾಮಾಯ್ಣ ಮಹಾಭಾರತಕ್ಕಿoತ ದೊಡ್ದ್ ಬರದಾನಾ?' ಎಂದು ಬೆರಗಿನಿಂದ ಹೇಳುವ ಕಥೆಯಲ್ಲಿ ಅಹಂಕಾರವನ್ನು ಮುಕ್ಕಾಗಿಸುವುದನ್ನು ಕಾಣಬಹುದು. ಹಳ್ಳಿಯ ಆಡು ಭಾಷೆಯ ಸಂಭಾಷಣೆಗಳು ಇಲ್ಲಿವೆ.
ರಾಜ ಮತ್ತು ಮುದುಕಿ : ದಾರಿ ತಪ್ಪಿ ಬಂದ ರಾಜ ಮುದುಕಿಯ ಸಾಮ್ರಾಜ್ಯಕ್ಕೆ ಬಂದಿದ್ದ. ಹಣ್ಣಿನ ಮರಗಳು ಹರಿಯುವ ಹಳ್ಳ-ಕೊಳ್ಳ, ಸಣ್ಣ ಗುಡಿಸಲು ಇಷ್ಟರಲ್ಲೇ ಬದುಕು ಸಾಗಿಸುತ್ತಿದ್ದ ಮುದುಕಿಗೆ ರಾಜನ ಠೀವಿ ಹಾಗೂ ಅವನ ಅಗಾಧ ಸಾಮ್ರಾಜ್ಯದ ಪರಿವೆಯೇ ಇರಲಿಲ್ಲ. ಅದು ಅವಳಿಗೆ ಬೆರಗು ಜೊತೆಗೆ ನಿರ್ಲಕ್ಷ್ಯವೂ... ರಾಜನ ಪರಿವಾರ ಮತ್ತೆ ಅವನನ್ನು ಸೇರಲು ಬಂದಿತಾದರೂ ಮುದುಕಿಗೆ ಉಪಯೋಗವಾಗಬಹುದಾದ ಯಾವ ವಸ್ತುವೂ ಅವನ ಬಳಿಯಲ್ಲಿರಲಿಲ್ಲ. ಮತ್ತೆ ಬರುತ್ತೇನೆ ಎಂದ ರಾಜನಿಗೆ ಮುದುಕಿ "ದಾರಿ ತಪ್ಪಬೇಡ, ಬರುವುದೂ ಬೇಡ" ಎಂದಿದ್ದೇಕೆ ಓದಿ ನೋಡಿ.
ಅಜ್ಜಿ ಕರೆದ ಹಾಗಾಯಿತು : ಕಥಾ ಸಂಕಲನದ ಶೀರ್ಷಿಕೆಯ ಕಥೆ. ಎಂದೋ ಮಾರಿಕೊಂಡ ತಮ್ಮ ಹಿರಿಯರಿದ್ದ ಮನೆಗೆ ಮತ್ತೆ ಬಂದಿದ್ದ ತಮ್ಮಣ್ಣನವರಿಗೆ ಈಗ ಹತ್ತಿರ 70 ವರ್ಷ. ಹಳೆ ಮನೆಯ ಬಾಗಿಲನ್ನು ತಟ್ಟಿದ್ದು ಸಹ ಅಜ್ಜಿ ಅಜ್ಜಿ ಎಂದೇ. ತಮ್ಮಣ್ಣನವರನ್ನು ಆ ಮನೆಯೊಡತಿ ಹೇಗೆ ಕಂಡಳು..? ತಮ್ಮಣ್ಣನವರು ಅಲ್ಲಿಗೆ ಬಂದಿದ್ದಾದರೂ ಏಕೆ..? ಅಜ್ಜಿಯ ಬಾಂಧವ್ಯ ಹಾಗೂ ನೆನಪುಗಳ ಜೊತೆಗೆ ಮತ್ತೊಂದು ಕಥೆಯನ್ನೂ ತೋರುತ್ತದೆ ಇದು.
ಸಂಬಂಧಗಳು : ಸಂಕೀರ್ಣವಾಗುತ್ತಿರುವ ಮನಸ್ಥಿತಿಗಳು ಹಾಗೂ ಕಡಿಮೆಯಾಗುತ್ತಿರುವ ತಾಳ್ಮೆಯ ಮನಸ್ಥಿತಿಯ ಯುವಜನಾಂಗ, ಅವರನ್ನು ನಿಭಾಯಿಸಬೇಕಾದ ಹೊಣೆ ಅಲ್ಲಲ್ಲ ಅನಿವಾರ್ಯತೆ ಇರುವ ಅವರ ತಂದೆ-ತಾಯಿ. ಸತೀಶ ಮತ್ತು ಸಂಜನಾರ ವಿವಾಹ ಸಂಬಂಧ, ಮನಸ್ಥಿತಿ, ಅವರ ಪೋಷಕರ ವರ್ತನೆ ಎಲ್ಲವೂ ಇಲ್ಲಿದೆ.
ಉಸಿರಿನ ಪರಿಮಳ : ಬೇರು, ಕಾಂಡ, ಎಲೆ, ದಳ, ಕೇಸರ ಎಂದು ಹೂವಿನ ಒಂದೊಂದೇ ಭಾಗಗಳನ್ನು ಬೇರೆ-ಬೇರೆಯಾಗಿ ಇಟ್ಟು ಮಕ್ಕಳಿಗೆ ತೋರಿಸುತ್ತಿದ್ದ ಟೀಚರ್ ಅನ್ನು ಒಬ್ಬಳು ವಿದ್ಯಾರ್ಥಿನಿ ಕುತೂಹಲದಿಂದ ಪರಿಮಳ ಎಂದು ಪ್ರಶ್ನಿಸಿದ್ದಳು. ಇಡಿಯಾಗಿ ಗಿಡ, ಹೂವು ನೋಡಿದವಳು ಬಿಡಿಬಿಡಿಯಾಗಿ ಕಂಡ ಹೂವಿಗೆ ನೀಡಿದ ಪ್ರತಿಕ್ರಿಯೆ ಏನು..? ಪರಿಸರದ ಕಾಳಜಿ, ಭಾವನಾತ್ಮಕತೆ, ವಿಜ್ಞಾನ ಇಷ್ಟರಲ್ಲಿ ಅವಳ ಮೇಲೆ ಹೆಚ್ಚಿನ ಪರಿಣಾಮ ಯಾವುದರದ್ದಿತ್ತು..?
ಒಂದು ತುಂಡು ಭೂಮಿಗಾಗಿ : ಒಂದು ತುಂಡು ಭೂಮಿಗಾಗಿ ಹುಟ್ಟಿದ ಜಗಳ ಅದು. ಅಣ್ಣ-ತಮ್ಮಂದಿರ ನಡುವೆ ಮೊದಲು ಹುಟ್ಟಿದ ಜಗಳ. ತಮ್ಮ ಕೋಪಗೊಂಡದ್ದಕ್ಕೆ ಅಣ್ಣನಿಗೆ ಕೋಪ. ಅಣ್ಣ ಹೊಡೆದ ಎಂದು ತಮ್ಮನಿಗೆ ಮತ್ತಷ್ಟು ತಾಪ. ಹೀಗೆ ಶುರುವಾದ ಜಗಳ ಮುಂದೆ ಏನಾಯಿತು ..?
ಗೀಳು : ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಯ್ಯನವರು ಕೆಲಸದಿಂದ ನಿವೃತ್ತರಾಗಿ ಕೆಲವೇ ತಿಂಗಳುಗಳು ಕಳೆದಿತ್ತು. ಹದಿಹರೆಯದ ಒಬ್ಬಳೇ ಮಗಳು ನೀಲಾ ಚಿಕಿತ್ಸೆ ಫಲಕಾರಿಯಾಗದೆ, ಜ್ವರದಿಂದ ತೀರಿಕೊಂಡಾಗಿನಿಂದ ಗರಬಡಿದವರಂತಾಗಿದ್ದರು. ಅಷ್ಟೇ ಅಲ್ಲದೆ.. ಅವರಿಗೊಂದು ವಿಚಿತ್ರ ಗೀಳು ಶುರುವಾಗಿತ್ತು. ಅದು ಸಾವಿನ ಸುದ್ದಿ ಓದುವುದು, ಸಾವಿನ ಸುದ್ದಿ ಕಲೆ ಹಾಕಿಕೊಳ್ಳುವುದು ಜೊತೆಗೆ ಭಯಪಡುವುದು. ಹೀಗೆ ಶುರುವಾದ ಗೀಳು ಅತಿರೇಕಕ್ಕೆ ಸಾಗುತ್ತಾ ಹೋಯಿತು. ಮುಂದೆ ಏನಾಯಿತು ..? ಓದಿ ನೋಡಿ.
ಒಂದು ಹಳೆಯ ಕೊಡ : ಮುತ್ತಜ್ಜಿಯ, ಅಜ್ಜಿಯ, ಅಮ್ಮನ ಕೈಬದಲಾಯಿಸಿ ಬಂದ ಕಬ್ಬಿಣ, ಹಿತ್ತಾಳೆ, ತಾಮ್ರದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡಿದ್ದವಳು ನೆನಪಿನ ತಿಜೋರಿಯಿಂದ ನೆಗ್ಗಿದ ಪುಟ್ಟ ಕೊಡದತ್ತ ಕೈದೋರಿ ಅವಳು ಆ ಕುರಿತು ನೆನಪಿಸಿಕೊಂಡಳು. ಸಾಬಣ್ಣ ಎಲ್ಲವನ್ನು ಗುಡ್ಡೆಯಾಗಿಸಿ ಬೆಲೆ ಕಟ್ಟಿದನಾದರೂ.. ಕೊಡದ ಕಥೆ ಬೇರೆಯೇ ಇತ್ತು. ತಲೆಮಾರುಗಳಿಂದ ಬಂದ ಬಾಂಧವ್ಯ, ನಂಟು ಅಷ್ಟು ಬೇಗ ಬೇರೆಯಾಗಲು ಸಾಧ್ಯವೇ..?
ಅಂತ್ಯ : ಇಡೀ ಸೀಮೆಯೇ ನೆತ್ತರಿನಿಂದ ತೊಳೆದು ಹೋಗಿದ್ದ ಸಂದರ್ಭದಲ್ಲಿ ರಾಜ ತನ್ನ ಅರಮನೆಗೆ ಬರುತ್ತಾನೆ ಅವನು ಅರಮನೆಗೆ ಬಂದದ್ದೇಗೆ ಅವನ ಕಣ್ಣಿಗೆ ಅವನ ವೈಭೋಗವಲ್ಲ ಕಂಡದ್ದೇಕೆ ಹಾಗೂ ವಾಸ್ತವದ ಪರಿಸ್ಥಿತಿ ಏನಿತ್ತು ..? ಬದುಕಿನ ನಶ್ವರತೆಯ ಕಥೆ ಇಲ್ಲಿದೆ
ಬೆವರು : ಇದು ಕರೋನಾ ಕಾಲಘಟ್ಟದ ಕಥೆ. ಈ ಕಥಾ ಸಂಕಲನದಲ್ಲಿ ಕರೋನಾ ಸಂದರ್ಭದ ಇನ್ನೂ ಕೆಲ ಕಥೆಗಳಿವೆ. ಮನೆ ಮುಂದೆ ರಸ್ತೆ ಮಾಡುವವರು ಅಗೆದು, ಲಾಕ್ಡೌನ್ ಆಗಿ ಅದನ್ನು ಮಣ್ಣು ಮುಚ್ಚದೆ, ಮಟ್ಟ ಮಾಡದೆ ಹಾಗೆಯೇ ಬಿಟ್ಟಿದ್ದರು. ಯಾರಿಗೆ ಫೋನ್ ಮಾಡಿದರೂ ಕರೋನಾ ಎಂಬ ನೆಪ ಹೇಳಿ ಬರುತ್ತಿರಲಿಲ್ಲ. ತಾವೇ ಗುಂಡಿಗೆ ಮಣ್ಣು ತುಂಬಿ ಓಡಾಡಲು ಸಣ್ಣ ದಾರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸಿಕ್ಕ ವ್ಯಕ್ತಿ ಹಾಗೂ ಬೆವರಿನ ಕಥೆ ಇದು.
ಮಹಿಳಾ ದಿನಾಚರಣೆ ಮನೆಮನೆ ಕತೆ : ಮಹಿಳಾ ದಿನಾಚರಣೆಯಂದು ಪೇಪರ್ ಓದಲು ಹೊರಟವರಿಗೆ ಪೇಪರ್ ತುಂಬಾ ಮಹಿಳೆಯರ ವಿಶೇಷ ಹಾಗೂ ಚೆಂದ ಚೆಂದದ ಲೇಖನ. ಆದರೆ, ಒಂದೊಂದಾಗಿ ಕಣ್ಣು ಹಾಯಿಸುವಷ್ಟರಲ್ಲಿಯೇ ಯಾವ್ಯಾವ ಅಡೆತಡೆಗಳು ಹಾಗೂ ಯಾರು ಯಾರು ಭೇಟಿಯಾದರು..? ನಾವು ವಿಶೇಷ ವ್ಯಕ್ತಿಗಳನ್ನು ಎಲ್ಲೆಲ್ಲೋ ಹುಡುಕಿ ಅಭಿಮಾನ ಪಡುತ್ತೇವೆ. ಆದರೆ, ನಮ್ಮ ಸುತ್ತಮುತ್ತಲೇ ಎಷ್ಟೋ ಜನ ಸಾಧಕಿಯರು ತಣ್ಣಗೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುತ್ತಾರಲ್ಲಾ...! ಎಂಬ ಅರಿವು ಮಾಡಿಸುವ ಕಥೆ ಇದು.
ಇಲ್ಲಿನ ಕಥೆಗಳು ಅರ್ಧ, ಒಂದು, ಎರಡು ಪುಟಗಳಲ್ಲೆಲ್ಲ ಮುಗಿದು ಹೋಗುತ್ತವೆ. ಹಿರಿದರ್ಥವಿರುವ ಈ ಕಿರು ಕಥೆಗಳು ಆಲೋಚನೆ ಮೂಡಿಸುವ ಚೆಂದದ ಕಥೆಗಳು. ನಾನು ಪರಿಚಯಿಸಿರುವುದು ಕೆಲವನ್ನಷ್ಟೇ. ಸಂಪೂರ್ಣ ಓದಿನ ಸವಿಗೆ ಪುಸ್ತಕ ಓದಿ.
~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ