ಸೋಮವಾರ, ಏಪ್ರಿಲ್ 6, 2026

ಆಘಾತ (ಪುಸ್ತಕ ಯಾನ - 13)


ಪುಸ್ತಕದ ಶೀರ್ಷಿಕೆ : ಆಘಾತ

ಲೇಖಕರು : ಎ.ಪಿ ಮಾಲತಿ

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ :1976

ದ್ವಿತೀಯ ಮುದ್ರಣ :  2010

ಪುಟಗಳು : 144

ಬೆಲೆ :75 ರೂ.

ಲೇಖಕಿ ಎ.ಪಿ ಮಾಲತಿಯವರ ಹುಟ್ಟೂರು ಉತ್ತರ ಕರ್ನಾಟಕದ ಭಟ್ಕಳ. ಮದುವೆಯ ನಂತರ ದಕ್ಷಿಣ ಕನ್ನಡದಲ್ಲಿ ವಾಸ. ಕೃಷಿ ಜೀವನ ಹಾಗೂ ಸಾಹಿತ್ಯ ಜೀವನ ಎರಡನ್ನೂ ಹೊಂದಿಸಿಕೊಂಡು ಅರ್ಧಾಂಗಿ, ಆಘಾತ, ಅನಿಶ್ಚಯ, ಅತೃಪ್ತೆ, ದೇವ, ತಿರುಗಿದ ಚಕ್ರ, ಮಂದಾರ, ಹಸಿರು ಚಿಗುರು, ಬದಲಾಗದವರು, ಕಾಡು ಕರೆಯಿತು, ವಕ್ರರೇಖೆ, ಅಲೋಕ ಮುಂತಾದ- ಇಪ್ಪತ್ತು ಕಾದಂಬರಿಗಳನ್ನು

ಸಂಜೆಬಿಸಿಲು ಮತ್ತು ವಸಂತದ ಹೂವುಗಳು - ಸಣ್ಣ ಕಥಾಸಂಕಲನಗಳು. ಸುಖದಹಾದಿ, ದಿವ್ಯಪಥ, ಸಂತೋಷದ ಹುಡುಕಾಟ, ಮಹಿಳೆ-ಪರಿವರ್ತನೆಯ ಹಾದಿಯಲ್ಲಿ, ಮಕ್ಕಳ ಪಾಲನೆ ಮುಂತಾದ - ಒಂಬತ್ತು ಲೇಖನ ಪುಸ್ತಕಗಳು, ಕಾರುಣ್ಯನಿಧಿ ಶ್ರೀಮಾತಾ ಶ್ರೀ ಶಾರದಾ ದೇವಿ, ಅನನ್ಯ ಅನುವಾದಕ ಅಹೋಬಲ ಶಂಕರ ಜೀವನಚರಿತ್ರೆಗಳಾದರೆ.. “ಕಾದಂಬರಿ ರಚನೆಯಲ್ಲಿ ಸ್ಟ್ರಕ್ಚರಲ್ ಮೆಥೆಡ್”-ಡಿಪ್ಲೋಮಾ ಪ್ರಬಂಧ, ಅಂಜನ ಕಾದಂಬರಿ-ಸಂಸ್ಕೃತಕ್ಕೆ ಅನುವಾದ, ಸ್ಮೃತಿಯಾನ ಆತ್ಮಚರಿತ್ರೆ ಇವರ ಪ್ರಮುಖ ಕೃತಿಗಳು. ಮಂದಾರ ಈ.ಟಿ.ವಿ ಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿವೆ. ಹಲವಾರು ಸಣ್ಣ ಕಥೆಗಳು ಮಲೆಯಾಳಂ ಹಾಗೂ ತೆಲುಗಿಗೆ ಅನುವಾದಗೊಂಡು.. ರೇಡಿಯೋ ನಾಟಕವಾಗಿ ಪ್ರಸಾರವಾಗಿವೆ.


ಕತೆ ಮೊದಲಿಗೆ ಶುರುವಾಗುವುದು ಚೆಂದದ ಪರಿಸರದ ಚಿತ್ರಣವನ್ನು ತೆರೆದಿಡುತ್ತಾ.. ಕುಂದಾಪುರದ ಹತ್ತಿರದ ವಂಡ್ಸೆ ಎಂಬ ಊರಿನಲ್ಲಿ ಪರಿಸರದ ಮಡಿಲಲ್ಲಿ ಹರೀನ್ ಗುಡ್ಡ ಹಾಗೂ ಚಕ್ರತೀರ್ಥ ಹೊಳೆಗಳು ಆಶಾಳ ಒಂಟಿತನದ ಭಾವವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನಿಸಿವೆ. ಒಂದು ದಿನ ಹೀಗೆಯೇ ಹೊಳೆ ದಂಡೆಯಲ್ಲಿ ಕುಳಿತಿರುವಾಗ ಯಾರೋ ಕಿರುಚಾಡುತ್ತಿರುವ ಶಬ್ಧ ಕೇಳಿ ಹೋದರೆ ಅಲ್ಲಿ ಒಬ್ಬನನ್ನು ಹೆಜ್ಜೇನು ಮುತ್ತಿತ್ತು. ಮನೆಯ ಆಳು ಜಬ್ಬಣ್ಣ, ಮಾವ ತಮ್ಮಯ್ಯನವರ ಸಹಾಯದಿಂದ ಕಾಪಾಡುತ್ತಾಳೆ. ಅವನೇ ಲೋಹಿತಾಕ್ಷ. ಆ ಊರಿನ ಬ್ಯಾಂಕ್ ಅಧಿಕಾರಿ. ಅಲ್ಲಿಯೇ ಹೊಳೆಯ ಹತ್ತಿರದ ಹರೀನ್ ಗುಡ್ಡದ ಪಾಳು ಮನೆಯಲ್ಲಿ ವಾಸ.


ಆಶಾಳಿಗೆ ಒಬ್ಬಂಟಿತನವೆಂದರೆ ಮನೆಯಲ್ಲಿನ ಯಾರ ಜೊತೆಯೂ  ಅಷ್ಟು ಹೊಂದಿಕೊಂಡಿಲ್ಲ. ಆಶಾಳಿಗೆ ಜಗನ್ನಾಥನ ಜೊತೆಗೆ ಎರಡನೇ ಮದುವೆಯಾಗಿದೆ. ಆತನಿಗೆ ಪೃಥ್ವಿ ಎಂಬ ಪುಟ್ಟ ಮಗನೂ ಇದ್ದಾನೆ. ಆತ ಈಗ ಲೆಕ್ಚರರ್ ಆಗಿ ಕುಮಟೆಯಲ್ಲಿ ಕೆಲಸ ಮಾಡುತ್ತಿದ್ದು ವಾರಕ್ಕೆ ಎರಡು ದಿನ ಮಾತ್ರ ವಂಡ್ಸೆಗೆ ಬಂದು ಹೋಗುತ್ತಾನೆ. ಮನೆಯಲ್ಲಿ ಅಡುಗೆಗೆ ಚೆನ್ನಕ್ಕ ಎಂಬ ಆಳು ಇದ್ದಾಳೆ. ಶ್ರೀಮಂತ ಮನೆತನವಾದ್ದರಿಂದ ಮಾವ ತಮ್ಮಯ್ಯನವರಿಗೆ ಹೊರಗಿನ ಕೆಲಸ ಹೆಚ್ಚು. ಅತ್ತೆ ರಂಗಮ್ಮನವರಿಗೆ ಕಣ್ಣು ಕಾಣದು. ಚೆನ್ನಕ್ಕನ ಒರಟು ಮಾತು, ಸ್ವಭಾವ ಇನ್ನೂ ಆಶಾಳಿಗೆ ಹೊಂದಿಕೆಯಾಗಿಲ್ಲ. ಕಣ್ಣು ಕಾಣದ ಅತ್ತೆಯದ್ದು ಯಾವಾಗಲೂ ಒಂದೇ ಘಟನೆಯನ್ನು ಪದೇ ಪದೇ ಹೇಳುವುದು. ನಾದಿನಿ ಈಶ್ವರಿ ಇದ್ದಾಗ ಆಶಾಳಿಗೆ ಒಂಟಿತನ ಕಾಡದು. ಅವಳು ಸ್ನೇಹಮಯಿ. ಅವಳು ಹೆಚ್ಚಿನ ಸಮಯ ಕಳೆಯುವುದು ತನ್ನ ಗಂಡನ ಊರು ಸುರತ್ಕಲ್ ನಲ್ಲಿ. ಜಬ್ಬಣ್ಣನ ಹೆಂಡತಿ ನೀಲಿಯ ಜೊತೆಗೆ ಕೊಂಚ ಮಟ್ಟಿನ ಮಾತುಕತೆ ಇದೆ. ಅವಳ ಮನೆಯ ಕಷ್ಟ-ಸುಖ ವಿಚಾರಿಸಿಕೊಳ್ಳುತ್ತಾಳೆ.


ಆಶಾಳ ತಂದೆ ತೀರಿ ಹೋದ ನಂತರ ಆಕೆ ಬೆಳೆದದ್ದು ಅಮ್ಮ ರುಕ್ಮಿಣಿಯ ಅಣ್ಣನ ಮನೆಯಲ್ಲಿ. ಆ ಅತ್ತೆ-ಮಾವ ಮಗಳಂತೆ ಕಂಡು ಪ್ರೀತಿಯಲ್ಲಿ ಬೆಳೆಸಿದ್ದರು. ರುಕ್ಮಿಣಿ ಯಾರ ಜೊತೆಗೋ ಹೋದವಳು ತನ್ನ ಜೀವನವನ್ನು ತಾನು ರೂಪಿಸಿಕೊಂಡಿದ್ದಳು. ಆ ಮನೆಯಲ್ಲಿ ಅವಳ ಪಾಲಿಗೆ ಮಾವನ ಮಗ ಜಗನ್ನಾಥ ಒಳ್ಳೆಯ ಸ್ನೇಹಿತ. ಆತನಿಗೆ ಆಕಾಶವಾಣಿಯಲ್ಲಿ ಕೆಲಸವಾಗಿತ್ತು. ಈಗಲೂ ಪತ್ರದ ಮುಖಾಂತರ ಅವಳನ್ನು ವಿಚಾರಿಸಿಕೊಳ್ಳುವ ಹಿತೈಷಿ. 


ಕಾಲ ಕ್ರಮೇಣ ಆಶಾ ತೀರಾ ಒಬ್ಬಂಟಿತನ ಅನುಭವಿಸಲು ಸಾಧ್ಯವಾಗದೇ ತನ್ನ ಭಾವನೆಗಳನ್ನು ಸ್ನೇಹದ ಹೆಸರಿನಲ್ಲಿ ಲೋಹಿತಾಕ್ಷನ ಬಳಿ ಹಂಚಿಕೊಳ್ಳಲು ತೊಡಗುತ್ತಾಳೆ. ಇದಕ್ಕೆ ಕಾರಣವಿಲ್ಲದೇ ಇಲ್ಲ. 

ಆ ಮನೆಯಲ್ಲಿ ಯಾರೂ ಶಿವಮೂರ್ತಿಯ ಮೊದಲ ಹೆಂಡತಿ ಕಾಂತಿಯನ್ನು ಮರೆತಿಲ್ಲ. ಅವಳು ಅವಳ ಒಳ್ಳೆಯತನದಿಂದ ಎಲ್ಲರ ಮನಸ್ಸಿನಲ್ಲಿಯೂ ಮನೆ ಮಾಡಿ ಕುಳಿತಿದ್ದಾಳೆ. ಕೆಲಸದ ಚೆನ್ನಕ್ಕನಿಂದ ಹಿಡಿದು ಗಂಡನವರೆಗೂ. ಎಲ್ಲದರಲ್ಲೂ ಎಲ್ಲರೂ ಆಶಾ ಹಾಗೂ ಕಾಂತಿಯನ್ನು ತುಲನೆ ಮಾಡುತ್ತಿರುತ್ತಾರೆ. ಅವಳ ಮಾತುಕತೆ, ನಡತೆ, ಆಸೆಗಳು, ಊಟ-ತಿಂಡಿ ಎಲ್ಲದರಲ್ಲಿಯೂ ಕಾಂತಿಯ ಹೋಲಿಕೆ ಇದೆ ಎಂದೋ ಅಥವಾ ಕಾಂತಿಯ ವಿರುದ್ಧವೆಂದೋ ಹೇಳತೊಡಗುತ್ತಾರೆ. ಒಮ್ಮೆ ಆಸೆಯಿಂದ ಗಂಡನ ಜೊತೆಗೆ ಸಿನಿಮಾಗೆ ಹೋಗಲು ಹೊರತವಳು ಹೂದಾನಿಯಲ್ಲಿ ಕೆಂಪು ತಾಜಾ ಗುಲಾಬಿಯನ್ನಿಟ್ಟು, ಕೆಂಪು ಸೀರೆ ಉಟ್ಟು ತಯಾರಾಗುತ್ತಾಳೆ. ಆದರೆ, ಅದನ್ನು ನೋಡಿದ ಶಿವಮೂರ್ತಿ ಹುಚ್ಚನಂತೆ ಆಡುತ್ತಾ ಎಲ್ಲವನ್ನೂ ಹೊಸಕಿ ಹಾಕುತ್ತಾನೆ. ಅವಳ ಮನಸ್ಸನ್ನು ಸಹಾ.


ಇದಕ್ಕೆ ಕಾರಣವನ್ನು ಈಶ್ವರಿ ಹೇಳುತ್ತಾಳೆ. ಮನೆಯ ಎಲ್ಲರೂ ಪ್ರವಾಸ ಹೊರಟಿದ್ದಾಗ ಆದ ಅಪಘಾತದಲ್ಲಿ ಈಶ್ವರಿಯ ಗಂಡ ಹಾಗೂ ಕಾಂತಿ ಸತ್ತರೆ ರಂಗಮ್ಮನವರ ಕಣ್ಣಿಗೆ ಗಾಜು ಚುಚ್ಚಿ ಕುರುಡರಾಗುತ್ತಾರೆ. ರಂಗಮ್ಮನವರು ಯಾವಾಗಲೂ ಪದೇ ಪದೇ ನೆನಪಿಸಿಕೊಂಡು ಹೇಳುವ ಕತೆ ಇದೊಂದೇ.. ಉಳಿದವರು ಸಣ್ಣ ಪುಟ್ಟ ಗಾಯಗಳಿಂದ ಬಚಾವಾಗುತ್ತಾರೆ. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಾಂತಿಯನ್ನು ಕಂಡಂದಿನಿಂದ ಅವನಿಗೆ ಕೆಂಪು ಎಂದರೆ ದಿಗಿಲು. ಅವನ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. 

ಈಶ್ವರಿಯದ್ದು ಹಾಗೂ ಶಿವಮೂರ್ತಿಯದ್ದು ಒಂದೇ ಪರಿಸ್ಥಿತಿ. ತಮ್ಮ ತಮ್ಮ ಸಂಗಾತಿಗಳನ್ನು ಕಳೆದುಕೊಂಡಿದ್ದಾರೆ. ಆದರೆ, ಈಶ್ವರಿಯ ಗಟ್ಟಿತನ ಹಾಗೂ ಅವಳ ಜೀವನಪ್ರೀತಿ ಅವಳನ್ನು ಬದುಕಿಸಿದ್ದರೆ, ಶಿವಮೂರ್ತಿಯ ಅತಿ ಪ್ರೀತಿ, ಹಚ್ಚಿಕೊಂಡಿರುವುದು ಆತನನ್ನು ಕಾಂತಿಯಲ್ಲೇ ಬಂಧಿಯಾಗಿಸಿ ನರಳಿಸುತ್ತಿದೆ. ಎಲ್ಲದಕ್ಕೂ ಮನಸ್ಸೇ ಮೂಲ ಅಲ್ಲವಾ..??


ಇದರ ನಡುವೆ ಒಂದೆರಡು ಘಟನೆಗಳು ನಡೆದು ಆಶಾಳ ತಪ್ಪಿಲ್ಲದಿದ್ದರೂ ಆಕೆಯನ್ನು ಮಲತಾಯಿಯ ಪಟ್ಟಕ್ಕೆ ಸೀಮಿತವಾಗುವಂತೆ ಮಾಡಿತ್ತು.


ಈ ಎಲ್ಲಾ ಸಮಯದಲ್ಲಿಯೂ ಲೋಹಿತಾಕ್ಷ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡಿಯೋ ಅಥವಾ ಸಹಕಾರ ನೀಡುತ್ತಿದ್ದುದರಿಂದಲೋ.. ಅವರ ಸ್ನೇಹ ಬೇರೆಯದ್ದೇ ಸ್ವರೂಪ ಪಡೆಯಿತು. ಅವರಿಬ್ಬರ ಬಂಧ ಅನೈತಿಕ ಸಂಬಂಧಕ್ಕೂ ತಿರುಗಿದ್ದು ವಿಪರ್ಯಾಸ. ಮೊದಮೊದಲು ಆಶಾಳಿಗೆ ಇದು ತಪ್ಪು ಎನ್ನಿಸಿದರೂ ಕ್ರಮೇಣ ಮನೆಯವರೆಲ್ಲರ ಕಾಂತಿಯ ಪ್ರೀತಿಯಿಂದ  ತಪ್ಪು ಕೆಲಸದಲ್ಲಿ ತೊಡಗಿ ಬಿಡುತ್ತಾಳೆ. ನಂತರ ಇಚ್ಚೆತ್ತುಕೊಂಡು ದೂರವೂ ಉಳಿಯುತ್ತಾಳೆ.


ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಬಂದ ಮೇಲೆ ಅಲ್ಲಿ ನಡೆದ ಮಾತುಕತೆಗಳಿಂದ ಕಾಂತಿಯ ಆತ್ಮ ಇಲ್ಲೇ ಎಲ್ಲೋ ಇದೆ ಎನ್ನುತ್ತಾ ಭ್ರಮೆಗೊಳಗಾಗುತ್ತಾಳೆ. ಕ್ರಮೇಣ ಕಿವಿ ನೋವು ಎನ್ನುತ್ತಾ ನರಳುತ್ತಾಳೆ.


ಈ ಎಲ್ಲದರ ನಡುವಲ್ಲಿ ಆಕೆ ಗರ್ಭಿಣಿಯಾಗುತ್ತಾಳೆ. ಲೋಹಿತಾಕ್ಷನ ಜೊತೆಗೆ ಜೀವನ ನಡೆಸುವ ಆಸೆಯಿಂದ ಅವನೊಡನೆ ಹೊರಡುವ ತೀರ್ಮಾನ ಮಾಡುತ್ತಾಳೆ. ಆದರೆ, ಆತ ಬಣ್ಣದ ಚಿಟ್ಟೆ. ಆತನಿಗೆ ಸಂಸಾರ ಬೇಕಿರಲಿಲ್ಲ. ಈ ಸಂದರ್ಭದಲ್ಲಿ ಅಚಾನಕ್ಕಾಗಿ ಬರುವ ಶಿವಮೂರ್ತಿಗೆ ಜಬ್ಬಣ್ಣ ತನ್ನ ಹೆಂಡತಿಯ ಮೇಲಿನ ಸಿಟ್ಟಿನಿಂದ ಇವರಿಬ್ಬರ ಸಂಬಂಧವನ್ನು ಅರಿವಿಲ್ಲದೆಯೇ ಬಾಯ್ಬಿಡುತ್ತಾನೆ. ಆಶಾ ಜಬ್ಬಣ್ಣ ಹಾಗೂ ನೀಲಿಯ ಸಂಸಾರದ ಕತೆ ಕೇಳಿ ನಮಗಿಂತ ಅವರೇ ಸುಖಿಗಳು ಎಂದು ಭಾವಿಸಿಕೊಂಡು ಬಿಡುವುದು.. ಪದೇ ಪದೇ ಅವಳ ಬದುಕಿನ ಕತೆಯನ್ನು ತನ್ನದರೊಡನೆ ತುಲನೆ ಮಾಡಿಕೊಳ್ಳುವುದು ಅವಳನ್ನು ಮತ್ತಷ್ಟು ಖಿನ್ನತೆಗೆ ದೂಡುತ್ತದೆ.


ಶಿವಮೂರ್ತಿ ಆ ಮಗು ತನ್ನದಲ್ಲ ಎನ್ನುತ್ತಾನೆ. ಆಶಾಳ ಪಾಲಿಗೆ ಆ ದಿನಗಳು ನರಕವೇ ಸರಿ. ಮಾವ ತಮ್ಮಯ್ಯ ಹಾಗೂ ಈಶ್ವರಿಯನ್ನು ಹೊರತುಪಡಿಸಿ ಎಲ್ಲರಿಗೂ ಇವಳನ್ನು ಕಂಡರೆ ತಾತ್ಸಾರ. ಕೃಶವಾಗುತ್ತಾಳೆ. ಕಿವಿ ನೋವು ಹೆಚ್ಚುತ್ತಲೇ ಹೋಗಿ ಹುಚ್ಚಿಯಂತೆ ಒಬ್ಬೊಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ. ಅದು ದೈಹಿಕ ನೋವು ಎಂದೇ ಎಲ್ಲರೂ ಕಡೆಗಣಿಸಿದರೂ ಕಡೆಗೆ ಜಗನ್ನಾಥ ಇದರ ಕಾರಣ ಅರಿಯುತ್ತಾನೆ.


ಮಗು ಹುಟ್ಟುತ್ತದೆ. ಮಗುವಿನ ಮೇಲೆ ಮಮತೆ ತೋರದೆ ಹೋದಾಗ ಈಶ್ವರಿಯೂ ನಿಸ್ಸಹಾಯಕಳು. ಅದೇ ಸಮಯಕ್ಕೆ ರುಕ್ಮಿಣಿಯ ಎರಡನೇ ಗಂಡ ತೀರಿ ಹೋಗಿ ಮಗಳನ್ನು ನೋಡಲು ಬರುತ್ತಾಳೆ. ಆಕೆ ಅನಾಥಾಶ್ರಮ ನಡೆಸುತ್ತಿರುತ್ತಾಳೆ. 


ಆಶಾ ತನ್ನ ತಾಯಿಯನ್ನು ಒಪ್ಪಿಕೊಳ್ಳುತ್ತಾಳಾ..?? ಆ ಮಗುವಿನ ಕತೆಯೇನು ? ಕಾಂತಿಯ ಮೇಲೆ ದ್ವೇಷ ಸಾಧಿಸುತ್ತಿದ್ದ ಆಶಾಳ ಹಿಂದಿನ ನೋವು ಯಾರಿಗಾದರೂ ಅರಿವಾಯಿತಾ ? ಗಂಡು ಅನೈತಿಕ ಸಂಬಂಧ ಹೊಂದಿದಾಗ ಕ್ಷಮಿಸಿ ಬಾಳುವ ಸಮಾಜ ಹೆಣ್ಣಿಗೆ ಅಷ್ಟು ಬೇಗ ಕ್ಷಮೆ ನೀಡಿ ಮತ್ತೊಂದು ಅವಕಾಶ ನೀಡದೇಕೆ ? ಶಿವಮೂರ್ತಿ ಮತ್ತೆ ಆಶಾಳನ್ನು ಒಪ್ಪಿಕೊಳ್ಳುತ್ತಾನಾ ? ಆಶಾಳ ಮನಸ್ಥಿತಿ ಸರಿಯಾಗುತ್ತದಾ ? ಲೋಹಿತಾಕ್ಷ ಸಿಕ್ಕ ನಂತರ ಆಶಾ ತಾಳುವ ನಿಲುವೇನು ? ಆಶಾ ಮತ್ತು ಶಿವಮೂರ್ತಿಯನ್ನು ಒಂದಾಗಿಸುವ ಜಗನ್ನಾಥನ ಪ್ರಯತ್ನ ಏನಾಯಿತು ? ಮನೋರೋಗ ತಜ್ಞರ ನೇರಾನೇರ ಮಾತಿನ ಪರಿಣಾಮಗಳೇನಾದವು ?


ಎಲ್ಲವನ್ನೂ ತಿಳಿಯಲು 'ಆಘಾತ' ಓದಿ ನೋಡಿ.


ಇಲ್ಲಿ ತಮ್ಮಯ್ಯನವರದ್ದು ಉದಾತ್ತ ಮನೋಭಾವ. ಸೊಸೆಯನ್ನು ಕ್ಷಮಿಸಿ ಮತ್ತೊಂದು ಅವಕಾಶ ನೀಡಲು ಮಗನಿಗೆ ಹೇಳುವ ಅವರು ಮಗಳಂತೆಯೇ ಕಾಣುತ್ತಾರೆ. 


ಈಶ್ವರಿ ಹಾಗೂ ಶಿವಮೂರ್ತಿ ಬೆಳೆದದ್ದು ಒಂದೇ ಪರಿಸರ. ಎದುರಿಸಿದ್ದು ಒಂದೇ ಪರಿಸ್ಥಿತಿ. ಹಾಗೆ ನೋಡಿದರೆ ಈಶ್ವರಿಗೆ ಮರು ಮದುವೆಯ ಕನಸು ಸಹಾ ಇಲ್ಲ. ಆಕೆ ಜೀವನಪೂರ್ತಿ ಒಂಟಿಯೇ.. ಎಲ್ಲದಕ್ಕೂ ಮನಸ್ಸೇ ಮೂಲವಾ ? 


ಒಂಟಿತನ, ಸರಿಯಾಗಿ ಸಿಗದ ಮಾರ್ಗದರ್ಶನವೇ ಆಶಾಳ ಸ್ಥಿತಿಗೆ ಕಾರಣವಾ..??

ಈ ಪುಸ್ತಕ ಓದಿದ ನಂತರ ಅನ್ನಿಸಿದ್ದು ಮತ್ತೊಬ್ಬರ ಮೇಲೆ ದ್ವೇಷ ಹುಟ್ಟಲು ನೇರಾನೇರ ಭೇಟಿಯೇ ಬೇಕಿಲ್ಲ. ಮಕ್ಕಳಿಗೆ ಅವರನ್ನು ನೋಡಿ ಕಲಿ ಎಂದಾಗ ಒಂದು ರೀತಿಯ ದ್ವೇಷ ಬೆಳೆಸಿಕೊಳ್ಳುತ್ತಾರಲ್ಲಾ ಅಷ್ಟು ಸಾಕು ದ್ವೇಷದ ಭಾವನೆ ಮೂಡಲು.  ಪದೇ ಪದೇ ಒಂದು ವಸ್ತು/ ಗೋಲ್ ಅಥವಾ ವ್ಯಕ್ತಿಯ ಕುರಿತು ಮಾತನಾಡತೊಡಗಿದರೆ ದ್ವೇಷ ಬೆಳೆದುಬಿಡುತ್ತದೆ. ಅಲ್ಲವಾ ?


ಒಂದು ಕ್ಷಣದ ದುರ್ಬಲತೆ ಹೇಗೆಲ್ಲಾ ವ್ಯತ್ಯಾಸಗಳನ್ನು ರೂಪಿಸಿಬಿಡುತ್ತದಲ್ಲಾ.. ಜಬ್ಬಣ್ಣ, ಆಶಾ, ಲೋಹಿತಾಕ್ಷ, ಶಿವಮೂರ್ತಿ ಎಲ್ಲರಲ್ಲಿಯೂ ಇದನ್ನು ಕಾಣಬಹುದು. 


ಮನಸ್ಸಿನ ರೋಗಗಳೇ ಹಾಗಾ..?? ಯಾವುದಾದರೂ ರೂಪದಲ್ಲಿ ದೈಹಿಕವಾಗಿ ಹಿಂಸಿಸುತ್ತವಲ್ಲವಾ. ಆಶಾಳ ಕಿವಿನೋವು, ಕಿವಿಯಲ್ಲಿ ಯಾರೋ ಮಾತನಾಡಿದಂತೆ ಆಗುವುದು ಇವೆಲ್ಲವೂ ಭ್ರಮೆಯಾ..? ಬರೀ ಭ್ರಮೆಗೆ ಇಷ್ಟೆಲ್ಲಾ ಶಕ್ತಿಯಿದೆಯೇ ಎನ್ನಿಸಬಹುದು. ಶಕ್ತಿ ಇರುವುದು ಭ್ರಮೆಗಲ್ಲ. ಮನಸ್ಸಿಗೆ. ಮನಸ್ಸಿನ ಶಕ್ತಿಯ ಎದುರು ಎಲ್ಲವೂ ಸುಲಭ ಅಥವಾ ಎಲ್ಲವೂ ಕಠಿಣ. ನಮ್ಮ ದುರ್ಬಲತೆ ಹಾಗೂ ಸಬಲತೆ ನಮ್ಮ ಮೇಲೆಯೇ ಇದೆ.


ಒಂದೊಳ್ಳೆ ಮನೋವೈಜ್ಞಾನಿಕ ಕಾದಂಬರಿ ಮುಗಿದ ಮೇಲೂ ಕಾಡುತ್ತಿದೆ. ಓದು ಸರಾಗವಾದರೂ ಮುಗಿದ ಮೇಲೆ ಚಿಂತಿಸುವಂತೆ ಮಾಡುವ ಕಥಾವಸ್ತು ಇದು.

ಈ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿ ಪಿ.ಡಿ.ಎಫ್ ಆಗಿ ಉಚಿತವಾಗಿ ಲಭ್ಯವಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ