ಸೋಮವಾರ, ಏಪ್ರಿಲ್ 6, 2026

ಲೆಟ್ಸ್ ಬ್ರೇಕಪ್ (ಪುಸ್ತಕ ಯಾನ - 32)


 ಪುಸ್ತಕದ ಶೀರ್ಷಿಕೆ : ಲೆಟ್ಸ್ ಬ್ರೇಕಪ್

ಲೇಖಕರು : ಸಂಪತ್ ಸಿರಿಮನೆ

ಪ್ರಕಾಶಕರು : ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಶರ್

ಮೊದಲ ಮುದ್ರಣ : 2022

ಪುಟಗಳು : 124

ಬೆಲೆ : 120


ಇದು ಪ್ರೇಮ ಕತೆಗಳ ಅಥವಾ ಮುರಿದು ಬಿದ್ದ ಸಂಬಂಧಗಳ ಕುರಿತಾದ ಕಥಾ ಸಂಕಲನ ಇರಬಹುದಾ ಎಂಬ ಸಂದೇಹದಲ್ಲಿಯೇ ಪುಸ್ತಕ ತೆರೆದಾಗ ಇವು ಬೇರೆಯದ್ದೇ ರೀತಿಯ ಕಥೆಗಳು ಎಂದರಿವಾಯಿತು. 12 ಚೊಕ್ಕ ಕಥೆಗಳ ಸಂಕಲನದಲ್ಲಿ ಸರಳವಾಗಿ ಹೇಳಿದ ಸುಂದರ ಕಥೆಗಳು ಕಂಡವು. 'ಬ್ರೇಕಪ್' ಕೂಡಾ ಇಷ್ಟು ಸುಂದರ ಅನುಭೂತಿ ನೀಡಬಹುದಾ ಎಂದೆನಿಸಿತು.


'ಎರಡನೇ ಬ್ರಹ್ಮಚರ್ಯ' ಎಂಬ ಶೀರ್ಷಿಕೆ ಕಂಡಾಗ ಬ್ರಹ್ಮಚರ್ಯಕ್ಕೂ ಒಂದನೇ ಬಾರಿ ಎರಡನೇ ಬಾರಿ ಎನ್ನುವುದಿದೆಯಾ ಎಂದೆನಿಸಿದರೂ ಕಥೆ ಓದಿದಾಗ ಇದೂ ಒಂದು ರೀತಿ ಬ್ರಹ್ಮಚರ್ಯವೇ ಅಲ್ಲವಾ ? ಎಂಬುದು ಹೊಳೆಯಿತು. ಆದರೂ ಮದುವೆಯ ನಂತರದ ಬ್ರಹ್ಮಚರ್ಯ ಒಂದು ರೀತಿಯ ಸ್ವಾತಂತ್ರ್ಯ ನೀಡುತ್ತದೆ ಎನ್ನಿಸಿದರೂ ಆ ವಿವಾಹದ ಜವಾಬ್ದಾರಿಗಳು ಕೂಡಾ ಚೆಂದವೇ ಎನ್ನಿಸುತ್ತದೆ. ವಿವಾಹಿತ ಗಂಡಿನ ಯತ್ತಾವತ್ತು ಬದುಕನ್ನು ತೆರೆದಿಟ್ಟಂತಿದೆ.


ಯಾರ ಬಟ್ಟೆಯನ್ನಾದರೂ ಅಂದರೆ ಕಸಿನ್ ಗಳ ಅಥವಾ ಅಣ್ಣ-ತಮ್ಮ, ಅಕ್ಕ-ತಂಗಿಯರ ಬಟ್ಟೆಗಳನ್ನು ನಾವು ಒಮ್ಮೆ ತೊಟ್ಟದ್ದು ಬದುಕಲ್ಲಿ ಇದ್ದೇ ಇರುತ್ತದೆ. ಆದರೆ, ಸಂಬಂಧಗಳ ಆಪ್ತತೆ ಇರುವವರೆಗೂ ಅದು ಹಳತು ಎಂದೋ ನಮಗನ್ನಿಸಿರುವುದೇ ಇಲ್ಲ. 'ಸೆಕೆಂಡ್ ಹ್ಯಾಂಡ್' ಎಂದೂ ಅನ್ನಿಸಿರುವುದಿಲ್ಲ. ಆದರೆ, ಯಾವಾತ್ತಾದರೂ ಹಾಗನ್ನಿಸಿದರೆ.. ಅಥವಾ ಮತ್ತೊಬ್ಬರ ಎದುರಲ್ಲಿ ಆ ವಿಚಾರಕ್ಕೆ ಅವಮಾನ ಎನ್ನಿಸಿದರೆ..? 'ಸೆಕೆಂಡ್ ಹ್ಯಾಂಡ್' ಕತೆಯನ್ನೊಮ್ಮೆ ಓದಿ ನೋಡಿ.


"ನೀನ್ ಹೇಳ್ತಿದಿದ್ದೇ ಕರೆಕ್ಟು. ಒಂದೋ ಆ ಕಡೆ ಇರ್ಬೇಕು ಇಲ್ಲಾ ಈ ಕಡೆ ಇರ್ಬೇಕು. ಜಗತ್ತು ಸರಿ ಇಲ್ಲ. ಮಧ್ಯದಲ್ಲಿ ಇರ್ತೀನಿ ಅಂದ್ರೆ ಹೊಡ್ದು ಹಾಕ್ತಾರೆ. ಬದುಕ್ಬೇಕು ಅಂದ್ರೆ ನಾವ್ ಯಾವ್ ಕಡೆ ಅಂತ ಡಿಸೈಡ್ ಮಾಡ್ಬೇಕು" 

ಇದು 'ಬೂದು ಬಣ್ಣದ ಮಾನವ' ಕತೆಯಲ್ಲಿ ಬರುವ ಒಂದು ಮಾತು. ಹಾಗಂತಾ ಈ ಕಥೆ ಹೀಗೆಯೇ ಅನ್ನೋ ನಿರ್ಧಾರಕ್ಕೆ ಬಂದು ಬಿಡಬೇಡಿ. ಬೇಕು, ಬೇಡ, ಹಾಗಿರಬೇಕು, ಹೀಗಿರಬಾರದು.. ಎಲ್ಲವನ್ನೂ ಒಳಗೊಂಡ ಕಥೆ ಇದು.


ಒಂದು ನಂಬರ್ ಆಚೀಚೆ ಆಗಿ ಯಾರದ್ದೋ ಅಕೌಂಟ್ ಗೆ ದುಡ್ಡು ಹೋದರೆ..?? ಹಾಗೆ, 'ಜಮಾ' ಆದ ಮುಂಚಿನ ಹಾಗೂ ಮುಂದಿನ ಕಥೆ ಇದು. ಆದರೆ, ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತನ್ನಿಸಿತು.


ಇನ್ನೇನು ಬ್ರೇಕ್ ಅಪ್ ಆಗಿಯೇ ಹೋಗುವ ಮಟ್ಟಕ್ಕೆ ಹೋದಾಗ ಅಥವಾ ಬ್ರೇಕಪ್ ಆಗ ಆಗುತ್ತದೆ, ಈಗ ಆಗುತ್ತದೆ ಎನ್ನುವ ಭಯದಲ್ಲಿ ಬದುಕಿದಾಗ.. ಅಥವಾ ಅನಿರೀಕ್ಷಿತವಾಗಿ ಬ್ರೇಕಪ್ ಆದಾಗ..! ಬ್ರೇಕಪ್ ಎನ್ನುವ ಪದವೇ ಎಷ್ಟು ಹಾರ್ಟ್ ಬ್ರೇಕಿಂಗ್ ಅಲ್ಲವಾ..? ಸಾಮಾನ್ಯವೆನ್ನಿಸುವ.. ಆದರೆ , ಸಾಮಾನ್ಯವಲ್ಲದ ಒಂದು ಬ್ರೇಕಪ್ ಕಥೆ "ಲೆಟ್ಸ್ ಬ್ರೇಕಪ್".


ನನಗೆ ಕೆಲವೊಮ್ಮೆ ಹಿಗನ್ನಿಸುವುದಿದೆ. ಬದುಕಲ್ಲಿ ಕೆಲವು ಸತ್ಯಗಳನ್ನು ಹುಡುಕಿಕೊಂಡು ಹೋಗಬಾರದು.. ಸತ್ಯ ಯಾವತ್ತಿದ್ದರೂ ತಿಳಿಯುವುದೇ ಆದರೆ ಅದನ್ನು ನಾವಾಗಿಯೇ ಪತ್ತೆ ಹಚ್ಚಲು ಹೋದರೆ ನಮ್ಮ ನೆಮ್ಮದಿಯೇ ಹಾಳು. ಹೀಗೆಯೇ ತನ್ನ ಪರ್ಸ್ ಕದ್ದವರು ಯಾರು ಎಂದು ತಿಳಿಯಲು ಹೊರಟವನಿಗೆ  ಸತ್ಯ ತಿಳಿಯಿತೇ..? ಅಥವಾ ತಿಳಿಯಲಿಲ್ಲವೇ..? ಒಂದು ಪತ್ತೇದಾರಿಕೆಯ ಕಥೆ "ಪತ್ತೆ".


ಹೊಸತೇನೋ ಆಗಬೇಕೆಂದರೆ ಹಳೆಯದ್ದು ಮಾಯವಾಗುತ್ತದಂತೆ. ಹಾಗಾಗಲೇ ಬೇಕಲ್ಲವಾ..? ಹಾಗಾಗದಿದ್ದರೆ..! ಅಥವಾ ಹಾಗಾಗಿಯೇ ಬಿಟ್ಟರೆ..! ಎರಡರಲ್ಲೂ ಇರಿಸುಮುರಿಸು. ಬದಲಾವಣೆ ಜಗದ ನಿಯಮವೋ ಅಥವಾ ಹೊಂದಾಣಿಕೆ ಬದುಕಿನ ನಿಯಮವೋ ಎಂದೆನಿಸುವಂತೆ ಮಾಡಿದ ಕಥೆ 'ಕಣ್ಮರೆ'. ಸುರೇಶ ಕೇಳಿದ ಆ ಪ್ರಶ್ನೆಗೆ ಮ್ಯಾನೇಜರ್ ಗೆ ಮೈ ಕಂಪಿಸಿದಂತೆ ನನಗೂ ಒಮ್ಮೆ ನನ್ನ ಆಲೋಚನೆಯನ್ನೇ ಅಲುಗಾಡಿಸಿದಂತಾಯಿತು. 


'ರಂಪ' ಕತೆ ಇಲ್ಲೇ ಎಲ್ಲೋ ಹತ್ತಿರದ ವಠಾರದಲ್ಲಿ ಕಂಡ ಚಿತ್ರಣವನ್ನು ಮತ್ತೊಮ್ಮೆ ಬಿಡಿಸಿಟ್ಟ ಹಾಗಾಯಿತು. ಎಷ್ಟೋ ಬಾರಿ ಹಾದಿ- ಬೀದಿ ರಂಪ ಮಾಡಿದವರೂ ಒಬ್ಬರು ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕಿ ನಡೆದು ಹೋಗುವುದುಂಟು. ಇನ್ನು ಕೆಲವೊಮ್ಮೆ ಸಣ್ಣ ಮಾತಿಗೆ ಸಾಯುವವರೆಗೂ ಮುಖವನ್ನೇ ನೋಡದೇ ಉಳಿದವರುಂಟು. ಈ 'ರಂಪ' ಯಾವ ರೀತಿಯದ್ದು ? ಯಾವ ಕಾರಣಕ್ಕೆ ? ಶುರುವಾದದ್ದು ಎಲ್ಲಿಂದ ? ಇದಕ್ಕೆ ಕೊನೆ ಇತ್ತೇ ? ತಿಳಿಯಲು ಈ ಕತೆ ಓದಿ.


ಈ ಕಥಾ ಸಂಕಲನದಲ್ಲಿ ನನಗೆ ಇಷ್ಟವಾದ ಕಥೆ 'ಸರಳು'. ಸೂಕ್ಷ್ಮ ಮನಸ್ಸಿಗೆ ಕನ್ನಡಿ ಹಿಡಿದು ಹೆಣೆದಂತಹಾ ಕಥೆ ಇದು. ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವೂ ನಮ್ಮ ಬದುಕಲ್ಲಿ ಯಾರಿಗಾದರೂ ಹೀಗೆಯೇ ಮಾಡಿರುತ್ತೇವೆಯಾ ಎಂದೂ ಅನ್ನಿಸಿತು. ಹೆಚ್ಚೇನೂ ಹೇಳಲಾರೆ ಈ ಕುರಿತು. ಓದಿ ನೋಡಿ.


ಮಕ್ಕಳ ಮನಸ್ಸು ಅದೆಷ್ಟು ಸೂಕ್ಷ್ಮ. ಹಾಗಾಗಿಯೇ.. ಮಕ್ಕಳ ಮುಂದೆ ಆದಷ್ಟು ಅವರ ಮನಸ್ಸಿಗೆ ಘಾಸಿಯಾಗದಂತೆ ನಡೆದುಕೊಳ್ಳಬೇಕು. ಆದರೆ, ಅನಿರೀಕ್ಷಿತವಾಗಿ ಮಕ್ಕಳು ಏನನ್ನೋ ನೋಡಿ ಹೇಗೆ ಹೇಗೋ ಅರ್ಥೈಸಿಕೊಂಡರೆ..?? ಅಬ್ಬಾ.. ಗೋಪಿಯ ಬಾಯಿಯಿಂದ ಬಂದ ಮಾತು ಅದೆಷ್ಟು ಘಾಸಿಗೊಳಿಸುವಂತಿತ್ತು. ಇಲ್ಲಿ 'ಛೇದನ'ವಾಗಿದ್ದು ಏನೆಂದು ತಿಳಿಯಬೇಕಾದಲ್ಲಿ ಈ ಕಥೆ ಓದಿ.


ಯಾವುದಾದರೂ ಒಂದು ಹವ್ಯಾಸ ಕೈ ಹಿಡಿದು ಬಿಟ್ಟರೆ.. ಸದಾ ನಾವೂ, ನಮ್ಮ ಮನಸ್ಸೂ ಅದರತ್ತಲೇ ತುಡಿಯುತ್ತಿರುತ್ತದೆ. ಅಂತಹದ್ದೇ 'ಪದಬಂಧ'ದ ಕಥೆ ಇಲ್ಲಿದೆ. ನನಗೆ ಬಹಳ ಅಪ್ಯಾಯಮಾನವಾದ ಕಥೆ ಇದು. ಪದಬಂಧ ಮಾತ್ರವಲ್ಲ ಬಾಂಧವ್ಯಗಳು ಬೆಸೆದುಕೊಂಡ, ಅನ್ಯೋನ್ಯತೆ ಹೆಣೆದುಕೊಂಡ ಪರಿ ಇಲ್ಲಿದೆ. ಇದು ಸಂಬಂಧಗಳ ನಡುವಿನ ಅಕ್ಷರಗಳ ಬಾಂಧವ್ಯ. 


'ಚುಚ್ಚುಮದ್ದು' ಇಲ್ಲಿ ಬರೀ ಇಂಜೆಕ್ಷನ್ ನಂತೆ ಕಾಣಲಿಲ್ಲ. ಒಂದು ನೋವು , ಅದನ್ನು ದಾಟುವ ಪರಿ, ಅಲ್ಲೆಲ್ಲೋ ದೂರದಲ್ಲಿ ನಿಂತು ನೋಡುವುದಕ್ಕೂ.. ಹತ್ತಿರದಿಂದ ಅನುಭವಿಸುವುದಕ್ಕೂ ಇರುವ ವ್ಯತ್ಯಾಸ. ಹೀಗೆ.. ಎಲ್ಲದ್ದೂ ಶುರುವಾದದ್ದು ಚುಚ್ಚುಮದ್ದಿನಿಂದಲೇ.. ಮತ್ತು ಮುಗಿದದ್ದು ಸಹಾ..


"ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಪುಸ್ತಕದ ಶೀರ್ಷಿಕೆ ಒಳಾರ್ಥ" ಎಂದು ಒಮ್ಮೆ ಹೇಳುತ್ತಾರೆ. 


ಇಲ್ಲಿನ ಕಥೆಗಳು ಸರಳವಾದ ನಿರೂಪಣೆಯಿಂದ, ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ನನಗನ್ನಿಸಿದಂತೆ ಇವು ಸರಳತೆಯಲ್ಲಿ ಸೂಕ್ಷ್ಮತೆಯನ್ನು ತುಂಬಿಕೊಂಡ ಕತೆಗಳು. ಹಾಗಾಗಿ.. ತೀರಾ ಆಡಂಬರ, ಅಬ್ಬರಗಳನ್ನು ಇಷ್ಟಪಡದ ಓದುಗನಿಗೆ ಇಷ್ಟವಾಗುವಂತೆ ಕಥೆಯಲ್ಲಿ ಏನಾದರೂ ವಿಭಿನ್ನತೆ ಇರಬೇಕು ಎಂದು ಬಯಸುವ ಓದುಗನಿಗೂ ಇಷ್ಟವಾಗುತ್ತದೆ. ಸುಮ್ಮನೆ ಓದಿಸಿಕೊಂಡು ಹೋಗುವ ಕತೆಗಳು ಸಮುದ್ರ ತೀರದಲ್ಲಿ ನಿಂತಾಗ ಸುಮ್ಮನೆ ಬಂದು ಕಾಲು ನೇವರಿಸಿ ತಮ್ಮ ಇರುವಿಕೆಯ ಆಹ್ಲಾದತೆ ನೀಡುವ ಅಲೆಗಳಂತೆ ಭಾಸವಾದವು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ