ಸೋಮವಾರ, ಏಪ್ರಿಲ್ 6, 2026

ಭಾರತೀಯ ಜನಪದ ಕತೆಗಳು (ಪುಸ್ತಕ ಯಾನ - 20)


ಪುಸ್ತಕದ ಹೆಸರು : ಭಾರತೀಯ ಜನಪದ ಕತೆಗಳು

ಸಂಗ್ರಹ ಮತ್ತು ಸಂಪಾದನೆ : ಎ.ಕೆ. ರಾಮಾನುಜನ್

ಅನುವಾದ : ಮಹಾಬಲೇಶ್ವರ ರಾವ್

ಮೊದಲ ಮುದ್ರಣ : 2000

ಮೂರನೆಯ ಮುದ್ರಣ : 2015

ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ , ಇಂಡಿಯಾ

ಬೆಲೆ : 145 ರೂಪಾಯಿಗಳು


ಇದು ಇಪ್ಪತ್ತೆರಡು ಭಾಷೆಗಳಿಂದ ಆಯ್ದ ಬಾಯ್ಮಾತಿನ ಕತೆಗಳನ್ನು ಹೊಂದಿರುವ ಕಥಾ ಸಂಕಲನ. ಇದರಲ್ಲಿ ಒಟ್ಟು 106 ಕತೆಗಳಿವೆ. ಲೇಖಕರು ಇದನ್ನು ಭಾರತೀಯ ಜನಪದ ಕತೆಗಳು ಎಂದಿದ್ದಾರೆಯೋ ಹೊರತು ಭಾರತದ ಜನಪದ ಕತೆಗಳು ಎಂದಿಲ್ಲ. ಎರಡಕ್ಕೂ ವ್ಯತ್ಯಾಸವಿದೆ. ಇಲ್ಲಿ ಭಾರತದಲ್ಲಿ ಇರುವ ಭಾಷೆಗಳಿವೆ. ಆದರೆ, ಭಾರತೀಯ ಕತೆಗಳು ಎಂದಿರುವುದಕ್ಕೆ ಕಾರಣ.. ಇಲ್ಲಿ ಭಾರತದ ಎಲ್ಲಾ ಭಾಗದ ಕತೆಗಳೂ ಇಲ್ಲ. ಅಲ್ಲದೇ, ಇಲ್ಲಿನ ಕತೆಗಳು ಒಂದೊಂದು ಪ್ರಾಂತ್ಯದಿಂದ ಆಯ್ದದ್ದು. ಅಷ್ಟೇ ಅಲ್ಲ, ಈ ಕತೆಗಳು ಕೊಂಚ ವಿಭಿನ್ನ ರೂಪ ತಳೆದು ಮತ್ತಾರದ್ದೋ ಬಾಯಲ್ಲಿ ಮತ್ತಾವುದೋ ಪ್ರಾಂತ್ಯದಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕೆ ನಿದರ್ಶನ ಎಂಬಂತೆ ಈ ಪುಸ್ತಕದಲ್ಲಿ ಕೊಟ್ಟಿರುವ ಕೆಲವು ಕತೆಗಳೇ ಒಂದಕ್ಕೊಂದು ಹೋಲಿಕೆ ಇರುವಂತೆ ಕಾಣುತ್ತವೆ.


ಇಲ್ಲಿರುವ ಕೆಲವು ಕತೆಗಳನ್ನು ಓದುತ್ತಾ ಹೋದಾಗ ಒಂದಲ್ಲಾ ಒಂದು ಸಂದೇಶ, ನೀತಿ ದೊರೆಯುತ್ತಾ ಹೋಗುತ್ತದೆ. ಇದಕ್ಕೇ ಅಲ್ಲವೇ ಜನಪದರು ಜಾಣತನದಿಂದ ಕತೆಗಳನ್ನು ಹೆಣೆದದ್ದು. ಇಲ್ಲಿನ ಮುಕ್ಕಾಲಾಂಶ ಕತೆಗಳನ್ನು ನಾನು ಓದಿದ್ದೆ. ಹೆಚ್ಚಿನ ಕತೆಗಳನ್ನು ನನಗೆ ನೆನಪಿದ್ದ ಹಾಗೆ ತುಂತುರು ಹಾಗೂ ಚಂದಾಮಾಮಗಳಲ್ಲಿ ಓದಿದ್ದೆ. ಇನ್ನು ಕೆಲವು ಕತೆಗಳನ್ನು ಓದುತ್ತಾ ಹೋದಂತೆ ಅಮ್ಮ, ಅಜ್ಜಿ ಹೇಳಿದ ಕತೆಗಳ ಹೋಲಿಕೆ ಕಂಡು ಬಂದವು. ಅಕ್ಬರ್, ಬೀರಬಲ್, ತೆನಾಲಿ ರಾಮಕೃಷ್ಣ ಕತೆಗಳು, ಪಂಚತಂತ್ರದ ಕತೆಗಳು ಸಹಾ ಇದರಲ್ಲಿವೆ. 


ಕತೆಗಳ ಅನುವಾದ ಸರಳವಾಗಿದ್ದು.. ತೀರಾ ನಾಟಕೀಯತೆಯಂತೆ ಕಾಣದೆ ಸರಳ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. "ಕಾದಂಬರಿಗಳನ್ನು ಬರೆದಷ್ಟು ಸುಲಭವಲ್ಲ ಮಕ್ಕಳ ಸಾಹಿತ್ಯವನ್ನು ಬರೆಯುವುದು" ಎನ್ನುವ ಮಾತನ್ನು ಎಲ್ಲೋ ಕೇಳಿದ್ದೇನೆ. ಅದು ಸತ್ಯ ಸಹಾ.. ಇಲ್ಲಿನ ಒಂದೈದಾರು ಕತೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಮಕ್ಕಳಿಗೆ ಸರಾಗವಾಗಿ ಅರ್ಥವಾಗುವಂತೆ ಹೇಳಬಹುದು. ಉತ್ತಮ ಅನುವಾದವಿದ್ದರೂ ಆ ಐದಾರು ಕತೆಗಳು ನನಗನಿಸಿದಂತೆ ಮಕ್ಕಳಿಗೆ ನಿಲುಕುವಂತಹದ್ದಲ್ಲ ಎನ್ನಿಸಿತು. ಹಾಗೆಂದು ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ.


"ನಾವು ಓದದ ಪುಸ್ತಕವನ್ನು ನಮ್ಮ ಮಕ್ಕಳಿಗೆ ಕೊಡಬಾರದು" ಎನ್ನುವ ಮಾತನ್ನು ಪಾಲಿಸುವುದಕ್ಕಾಗಿ ಮೊದಲಿಗೆ ನಾವೂ ಓದಬೇಕು. ಅಲ್ಲದೇ, ಎಷ್ಟೇ ಓದಿದರೂ, ಎಷ್ಟೇ ಕೇಳಿದರೂ, ಎಷ್ಟೇ ತಿಳಿದುಕೊಂಡರೂ ಇನ್ನಷ್ಟು , ಮತ್ತಷ್ಟು ಕತೆಗಳು ಗೊತ್ತೇ ಇಲ್ಲದಂತೆ ಅಡಗಿರುತ್ತವೆ. ಅಂತಹಾ ಹೆಚ್ಚಿನ ಕತೆಗಳನ್ನು ಅನಾವರಣ ಮಾಡಿದೆ ಈ ಕಥಾ ಸಂಕಲನ..


ಇಲ್ಲಿನ ಕೆಲವು ಕತೆಗಳಲ್ಲಿ ಅಲ್ಲಿನ ಪ್ರಾದೇಶಿಕ ಗಾದೆಯ ಕತೆಗಳು, ನೀತಿ, ತತ್ವ ಅಡಗಿಕೊಂಡಿದೆ. ಇಲ್ಲಿ ಪುರುಷ ಕೇಂದ್ರಿತ, ಸ್ತ್ರೀ ಕೇಂದ್ರಿತ, ಕುಟುಂಬದ ಕತೆಗಳು, ದೇವರು, ದೆವ್ವ, ಮಾಂತ್ರಿಕ, ವಿಧಿ, ಹಾಸ್ಯ, ಜಾಣತನ, ಪ್ರಾಣಿಗಳು,ಕತೆಗಳನ್ನು ಕುರಿತ ಕತೆಗಳಿವೆ. ಇಲ್ಲಿನ ಕತೆಗಳನ್ನು ವಿಮರ್ಶಿಸಲು ಬಹಳ ಕಷ್ಟ. ಈ ಜನಪದ ಕತೆಗಳು ಹುಟ್ಟಿರುವ ರೀತಿ ಮಕ್ಕಳಿಗೆ ಸಮಯ ಕಳೆಯಲು, ಬುದ್ಧಿ ಹೇಳಲು, ಊಟ ಮಾಡಿಸಲು, ನೀತಿ ಹೇಳಲು ಹೀಗೆ ವಿಭಿನ್ನವಾಗಿ ಬಳಕೆಯಾಗಿರಬಹುದು. ಇಲ್ಲಿ ಮಾಯಾಜಾಲವಿದೆ, ವಾಸ್ತವಕ್ಕೆ ದೂರವಿದೆ, ಸತ್ತವರನ್ನು ಬದುಕಿಸಲು ಸಾಧ್ಯವಾ.. ಏಳು ಸಮುದ್ರವನ್ನು ಕುದುರೆಯ ಮೇಲೆ ಏರಿ ದಾಟಲು ಸಾಧ್ಯವಾ.. ಎಂದು ಒಂದೊಂದನ್ನೂ ಹೇಳುತ್ತಾ ಕುಳಿತರೆ ಈ ಕತೆಗಳ ರಮ್ಯತೆ ಓದಿಗೆ, ಅರಿವಿಗೆ ನಿಲುಕದು. ಸುಮ್ಮನೆ ಈ ಜನಪದ ಕತೆಗಳನ್ನು ಆಸ್ವಾದಿಸಬೇಕಷ್ಟೇ.. 


ಈ ಜನಪದ ಕತೆಗಳಲ್ಲಿ ನನಗೆ ಇಷ್ಟವಾದ.. ನನಗೆ ವಿಭಿನ್ನ ಎನ್ನಿಸಿದ ಕೆಲ ಕತೆಗಳನ್ನು ಉದಾಹರಣೆ ನೀಡುತ್ತಾ ಹೋಗುತ್ತೇನೆ.


ಕತೆಗಳನ್ನು ಮುಚ್ಚಿಟ್ಟುಕೊಂಡಷ್ಟೂ ಅಪಾಯ ಎನ್ನುವುದಕ್ಕೆ, ಗುಟ್ಟುಗಳನ್ನು ಒಳಗಡೆ ಇಟ್ಟುಕೊಂಡಷ್ಟೂ ನಮಗೇ ಮೂಲ ಎನ್ನುವುದಕ್ಕೆ ಇಲ್ಲಿ ತಮಿಳಿನಿಂದ ಅನುವಾದಿಸಿರುವ 'ಗೋಡೆಗಳಿಗೆ ಹೇಳಿ' ಎನ್ನುವ ಕತೆ ಇಷ್ಟವಾಯಿತು. ಅಜ್ಜಿಯೊಬ್ಬಳು ತನ್ನ ಸೊಸೆಯರು ಕೊಡುವ ನೋವು, ದುಃಖಗಳನ್ನು ಯಾರಿಗೂ ಹೇಳದೆ ಮುಚ್ಚಿಟ್ಟುಕೊಂಡು ಸುಮ್ಮನಾಗುತ್ತಿದ್ದಾಗ ಅವಳು ದಿನೇ ದಿನೇ ದಪ್ಪವಾಗುತ್ತಾ ಹೋಗುತ್ತಾಳೆ. ಒಮ್ಮೆ ಪಾಳು ಗೋಡೆಗಳಿಗೆ ಹೇಳಿದಾಗ ಅವಳು ಹಗುರಾಗುತ್ತಾಳೆ ಹಾಗೂ ಗೋಡೆಗಳು ಬಿದ್ದು ಹೋಗುತ್ತವೆ. 'ಗೋಡೆಗಳಿಗೂ ಕಿವಿಯಿದೆ' ಎನ್ನುವ ಮಾತು ಅಪ್ರಯತ್ನವಾಗಿ ನೆನಪಾಯಿತು.


ಹೇಳದೆ ಉಳಿಸಿಕೊಂಡ ಕತೆಯಿಂದ ಅಪಾಯ ತಂದುಕೊಂಡ ಗೊಂಡನ ಕಥೆಯಿದೆ. ಹೀಗೆಯೇ ಮಾಡಿದ ರಾಜಕುಮಾರನ ಕತೆ ಇದೆ. 


ಮಲ್ಲಿಗೆ ನಗೆಯ ದೊರೆ ಎನ್ನುವ ತಮಿಳಿನ ಅನುವಾದಿತ ಕತೆಯಲ್ಲಿ ರಾಜಕುಮಾರ ನಕ್ಕರೆ ಮಲ್ಲಿಗೆಯ ಪರಿಮಳ ಹರಡುತ್ತದೆ. ಆದರೆ, ಅದು ಸ್ವಾಭಾವಿಕವಾಗಿ ಮೂಡುವ ನಗೆಯಾಗಿರಬೇಕು. ಒಮ್ಮೆ ಹಾಗೆ ನಕ್ಕವನಿಗೆ ಕಂಡದ್ದು ರಾಣಿ ಹಾಗೂ ಅರಮನೆಯ ಎದುರಿಗಿದ್ದ ಕುಂಟನ ಅನೈತಿಕ ಸಂಬಂಧ. ಆಗ ಅಮೃತಮತಿ ಹಾಗೂ ಅಷ್ಟಾವಕ್ರರ ನೆನಪಾಯಿತು. 


ದೇವರನ್ನು ನುಂಗಿದ ಬ್ರಾಹ್ಮಣ ಎನ್ನುವ ಕತೆಯಲ್ಲಿ ದೇವರಿಂದಲೇ ತನ್ನ ವಿಧಿ ಬರಹವನ್ನು ಬದಲಾಯಿಸಿಕೊಂಡ ಕತೆ ಇದೆ. 'ಹಣೆಬರಹ' ಎನ್ನುವ ಮತ್ತೊಂದು ಕತೆಯಲ್ಲಿಯೂ ತನ್ನ ದುರಂತ ಹಣೆಬರಹವನ್ನು ಬುದ್ಧಿವಂತಿಕೆಯಿಂದ ಸುಖವಾಗಿಸಿದ ದೃಷ್ಟಾಂತವಿದೆ. 


'ಘಾಟಿ ಸೊಸೆ' ಎನ್ನುವ ಕತೆಯಲ್ಲಿ ಅತ್ತೆಯ ಕಷ್ಟವನ್ನು ನುಂಗಿ ತನಗಿಷ್ಟವಾದ ತಿನಿಸನ್ನು ಕಾಳಿ ದೇವಿಯ ದೇವಾಲಯದಲ್ಲಿ ಕದ್ದು ತಿನ್ನುವಾಗ ಕಾಳಿ ದೇವಿ ಅದನ್ನು ನೋಡಿ ಮೂಗಿನ ಮೇಲೆ ಬೆರಳೇರಿಸುತ್ತಾಳೆ. ಅದನ್ನು ಮತ್ತೆ ಆ ಸೊಸೆಯೇ ಬೈದು ಕೆಳಗಿಳಿಸುತ್ತಾಳೆ. ಈ ರೀತಿಯ ಕತೆಯನ್ನು ಕಾಳಿಯ ಬದಲಾಗಿ ಹನುಮಂತ ಇರುವಂತೆ ಕೇಳಿದ್ದೇನೆ. 


ತೆಲುಗಿನ 'ಹಂದಿಬಾಳು' ಎನ್ನುವ ಕತೆ ಯಾವ ಪ್ರಾಣಿಯ/ ಜೀವಿಯ ಬದುಕು ಸಹಾ ನಿಕೃಷ್ಟವಲ್ಲ ಎಂದು ಹೇಳುತ್ತದೆ.


ಒಂದೇ ರೀತಿ ಇರುವ ಕತೆಗಳು ಎನ್ನಿಸಿದರೂ ಎಲ್ಲವೂ ವಿಭಿನ್ನವೇ.. ಇಲ್ಲಿಂದ ಸ್ಫೂರ್ತಿ ಪಡೆದಿರಬಹುದೇ ಎನ್ನುವುದಕ್ಕೆ ಭಾಷೆಗಳು ಬೇರೆಯೇ.. 


ಮಗಳನ್ನು ಮದುವೆಯಾಗಬಯಸಿದ ತಂದೆ , ಮಗನನ್ನು ಮದುವೆಯಾದ ತಾಯಿ, ಸಹೋದರಿಯರನ್ನು ಮದುವೆಯಾಗಬಯಸಿದ ರಾಜಕುಮಾರ ಇಂತಹಾ ಕತೆಗಳೂ ಇವೆ. 


ಉರ್ದುವಿನ 'ಒಂದು ಉತ್ಪ್ರೇಕ್ಷೆಯ ಕತೆ'ಯಲ್ಲಿ ಕತೆ ಹೀಗೆ ಶುರುವಾಗುತ್ತದೆ. 

ಒಂದು ಮುಳ್ಳಿನ ಮೊನೆಯ ಮೊನೆಯ ಮೇಲೆ ಮೂರು ಕೆರೆಗಳಿದ್ದವು. ಎರಡು ಕೆರಗಳು ಒಣಗಿ ಹೋಗಿದ್ದವು. ಮೂರನೆಯದರಲ್ಲಿ ನೀರಿರಲಿಲ್ಲ. ನೀರಿಲ್ಲದ ಕೆರೆಯ ಮೇಲೆ ಕುಂಬಾರರು ವಾಸ ಮಾಡಿಕೊಂಡಿದ್ದರು...


ಇದನ್ನು ಓದಿದಾಗ ನನಗೆ ನೆನಪಾಗಿದ್ದು.. ಪುರಂದರದಾಸರು ರಚಿಸಿರುವ 'ಮುಳ್ಳು ಕೊನೆಯ ಮೇಲೆ' ಎನ್ನುವ ದಾಸರ ಪದ. ಇದಕ್ಕೆ ಆಧ್ಯಾತ್ಮಿಕ ಅರ್ಥವೂ ಇದೆ. ಈ ಉರ್ದು ಕತೆಗಿಂತ ಹೆಚ್ಚಿನದ್ದನ್ನು ಈ ದಾಸರ ಪದ ಹೊಂದಿದೆ. ಅಲ್ಲದೆ, ಹೆಚ್ಚಿನ ಸಾಮ್ಯತೆ ಕಾಣುತ್ತದೆ. 

ಜನಪದ ಕತೆಗಳಲ್ಲಿ ನಾವು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಅರ್ಥಬ ಇರಬಹುದಲ್ಲವಾ ಎನ್ನಿಸಿತು. 


ವಿಕ್ರಮ ಹಾಗೂ ಬೇತಾಳನ ಕತೆ ಕೇಳಿದ್ದೆ. ಆದರೆ, ವಿಕ್ರಮ ಹಾಗೂ ಚೀನಾದ ರಾಜಕುಮಾರಿಯ ಕತೆ ಓದಿದೆ. ಹಿಂದಿ ಮೂಲದ್ದು. ವಿಭಿನ್ನ ಎನ್ನಿಸಿತು. 


ಇಲ್ಲಿ ಹೇಳಿದ್ದು ಕೆಲವನ್ನಷ್ಟೇ.. 

ತಮಿಳು, ಗೊಂಡಿ, ಬಂಗಾಳಿ, ಪಂಜಾಬಿ, ಕನ್ನಡ, ಹಿಂದಿ, ಮಾಲ್ವಿ, ರಾಜಸ್ಥಾನಿ, ಒರಿಯಾ, ತೆಲುಗು, ಸಂತಾಲಿ, ಕಾಶ್ಮೀರಿ, ಉರ್ದು, ಗುಜರಾತಿ, ತುಳು, ಕೊಂಕಣಿ, ಮರಾಠಿ, ಅಸ್ಸಾಮಿ, ಮಲೆಯಾಳಂ, ಕುಮಾವ್ನಿ, ಕೋಟ, ಸಿಂಧಿ ಭಾಷೆಯ ಕತೆಗಳಿವೆ. 


ಸಾಮ್ಯತೆ ಕಂಡರೂ ಭಾಷೆ ಹಾಗೂ ಪ್ರಾಂತ್ಯ ಬೇರೆ ಬೇರೆ. ಬಹುಶಃ ಯೋಚನಾಲಹರಿ ಒಂದೇ ರೀತಿ ಇರಬಹುದು. ಅಥವಾ ಭಾಷೆ ಬೆಳೆಯುದಕ್ಕೂ ಮುನ್ನ ಆ ಕತೆಗಳು ಪ್ರಚಲಿತದಲ್ಲಿ ಇದ್ದಿರಬಹುದು. ಬರೀ ಬಾಯ್ಮಾತಿನ ಮೂಲಕವೇ ಉಳಿದಿರುವ ಈ ಕಥೆಗಳು ಈಗ ಪುಸ್ತಕದಲ್ಲಿಯೂ ಲಭ್ಯವಿವೆ. ಓದಿನ ಹರವನ್ನು ಹೆಚ್ಚಿಸುವ ಕತೆಗಳಿವು. 


ಜನಪದ ಸಾಹಿತ್ಯ ಉಳಿದು ಬೆಳೆಯಬೇಕು ಎಂದರೆ ನಾವೂ ಈ ಕತೆಗಳನ್ನು ಇನ್ನೊಬ್ಬರಿಗೆ ತಲುಪಿಸಬೇಕು. ಕತೆ ಓದಿ, ಕತೆ ಹೇಳಿ ಜನಪದ ಸಾಹಿತ್ಯವನ್ನು ಮತ್ತಷ್ಟು ಪಸರಿಸೋಣ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ